ಆ್ಯಂಬುಲೆನ್ಸ್ ವಾಹನವಾಗಿ ಮಾರುತಿ ಆಮ್ನಿ ಬಳಕೆ ನಿಷೇಧ
Team Udayavani, Jun 3, 2017, 2:44 PM IST
ಮಂಗಳೂರು: ರಾಜ್ಯದಲ್ಲಿ ಮಾರುತಿ ಆಮ್ನಿ ವಾಹನವನ್ನು ಆ್ಯಂಬುಲೆನ್ಸ್ ಆಗಿ ಬಳಕೆ ಮಾಡುವುದನ್ನು ನಿಷೇಧಿಸಿ ಸರಕಾರ ಆದೇಶ ಹೊರಡಿಸಿದೆ. ಆದರೆ ಸದ್ಯಕ್ಕೆ ಚಾಲ್ತಿಯಲ್ಲಿರುವ ಆಮ್ನಿ ಮಾದರಿಯ ಆ್ಯಂಬುಲೆನ್ಸ್‌ಗಳ ಸೇವೆ ಯಥಾ ಸ್ಥಿತಿ ಮುಂದುವರಿಯಲಿದೆ.
ಈ ಹಿನ್ನೆಲೆಯಲ್ಲಿ ಆ್ಯಂಬುಲೆನ್ಸ್ ಆಗಿ ಆಮ್ನಿ ವಾಹನಗಳನ್ನು ಬಳಸುತ್ತಿರುವುದರ ವಿರುದ್ಧ ಇದೀಗ ರಾಜ್ಯದೆಲ್ಲೆಡೆ ಸಾರಿಗೆ ಇಲಾಖೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಈ ಕಾರಣಕ್ಕೆ ಇನ್ನು ಮುಂದೆ ರಾಜ್ಯದಲ್ಲಿ ಯಾವುದೇ ಹೊಸ ಆಮ್ನಿ ವಾಹನವನ್ನು ಆ್ಯಂಬುಲೆನ್ಸ್ ಸೇವೆಗೆ ಬಳಸಿಕೊಳ್ಳಲು ನೋಂದಣಿ ಮಾಡದಿರಲು ಸಾರಿಗೆ ಇಲಾಖೆ ನಿರ್ಧರಿಸಿದೆ.
ಹೀಗಾಗಿ ಇದೀಗ ದ. ಕ. ಜಿಲ್ಲೆಯ ಮಂಗಳೂರು ಮತ್ತು ಪುತ್ತೂರಿನ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ಆ್ಯಂಬುಲೆನ್ಸ್ ಬಳಕೆ ಉದ್ದೇಶಕ್ಕಾಗಿ ನೋಂದಣಿಯಾಗಿರುವ ಸುಮಾರು 180ರಷ್ಟು ಮಾರುತಿ ಆಮ್ನಿ ವಾಹನಗಳ ಮಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮಾರುತಿ ಆಮ್ನಿ ಹೊಸ ಆ್ಯಂಬುಲೆನ್ಸ್ ವಾಹನದ ನೋಂದಣಿಯನ್ನು ಮತ್ತು ಈಗಾಗಲೇ ಇರುವ ಮಾರುತಿ ಆಮ್ನಿ ಆ್ಯಂಬುಲೆನ್ಸ್‌ಗಳ ನವೀಕರಣ ಮಾಡದಿರುವಂತೆ ಕಳೆದ ಮೇ 10ರಂದೇ ರಾಜ್ಯ ಸರಕಾರ ಆದೇಶ ಹೊರಡಿಸಿದ್ದು, ಈ ಆದೇಶ ಮಂಗಳೂರಿನ ಪ್ರಾದೇಶಿಕ ಸಾರಿಗೆ ಕಚೇರಿಗೆ ಇತ್ತೀಚೆಗೆ ತಲುಪಿದೆ. ಜೂನ್ 1ರಂದು ಆಮ್ನಿ ಆ್ಯಂಬುಲೆನ್ಸ್‌ನ ಮಾಲಕರೊಬ್ಬರು ನೋಂದಣಿಗಾಗಿ ಸಾರಿಗೆ ಕಚೇರಿಗೆ ತೆರಳಿದಾಗ ಈ ವಿಷಯ ಬೆಳಕಿಗೆ ಬಂದಿದೆ.
ಬೆಂಗಳೂರಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಆಯುಷ್ ಸೇವಾ ಇಲಾಖೆ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ತಾಂತ್ರಿಕ ಸ್ಥಾಯೀ ಸಮಿತಿ, ಕೇಂದ್ರ ಸರಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಇಲಾಖೆಯ ಶಿಫಾರಸಿನಂತೆ ರಾಜ್ಯ ಸರಕಾರ ಈ ಆದೇಶ ಹೊರಡಿಸಿದೆ.
ಕಾರಣವೇನು?
ಮಾರುತಿ ಆಮ್ನಿ ವಾಹನ ಪದೇ ಪದೇ ಅಪಘಾತಕ್ಕೆ ಒಳಗಾಗುವುದರಿಂದ ಹಾಗೂ ಈ ವಾಹನದಲ್ಲಿ ರೋಗಿಗಳ ಸಾಗಾಟಕ್ಕೆ ಬೇಕಾದ ಸಲಕರಣೆಗಳನ್ನು ಇರಿಸಲು ಮತ್ತು ರೋಗಿಗಳ ಸಂಬಂಧಿಕರಿಗೆ ಕುಳಿತುಕೊಳ್ಳಲು ಸಾಕಷ್ಟು ಸ್ಥಳಾ ವಕಾಶ ಇಲ್ಲದಿರುವುದರಿಂದ ಇದು ಆ್ಯಂಬುಲೆನ್ಸ್ ಆಗಿ ಬಳಸಲು ಯೋಗ್ಯವಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಮಹಾರಾಷ್ಟ್ರದ ಪೂನಾದಲ್ಲಿ ಇತ್ತೀಚೆಗೆ ಸಂಭವಿಸಿದ ರಸ್ತೆ ಅಪಘಾತವೊಂದರಲ್ಲಿ ಮಾರುತಿ ಆಮ್ನಿ ಆ್ಯಂಬುಲೆನ್ಸ್‌ನಲ್ಲಿ ಸಾಗಿಸುತ್ತಿದ್ದ ರೋಗಿ ಮತ್ತು ಕುಟುಂಬಿಕರು ಸೇರಿದಂತೆ ಅದರಲ್ಲಿದ್ದ ಎಲ್ಲರೂ ಸಾವನ್ನಪ್ಪಿದ ಘಟನೆ ಹಿನ್ನೆಲೆಯಲ್ಲಿ ಮಾರುತಿ ಆಮ್ನಿ ಆ್ಯಂಬುಲೆನ್ಸ್ ಆಗಿ ಉಪಯೋಗಿಸಲು ಸುರಕ್ಷಿತ ವಾಹನ ಅಲ್ಲ ಎಂಬ ತೀರ್ಮಾನಕ್ಕೆ ಬಂದು ಕೇಂದ್ರ ಸರಕಾರ ಈ ಆದೇಶ ಹೊರಡಿಸಿದೆ.
ಮಾರುತಿ ಆಮ್ನಿ ಆ್ಯಂಬುಲೆನ್ಸ್ ಅಗಲ ಕಿರಿದಾದ ರಸ್ತೆಗಳಲ್ಲಿ ಮತ್ತು ಸಾಮಾನ್ಯ ಓಣಿಗಳಲ್ಲಿ ಸಂಚರಿಸಬಲ್ಲುದು. ಹೆಚ್ಚು ದುಬಾರಿಯೂ ಅಲ್ಲ, 3.5 ಲಕ್ಷ ರೂ.ಗಳಿಗೆ ಸಿಗುತ್ತದೆ. ಹಾಗಾಗಿ ಹಲವು ಜನ ಬಡವರು ಸಾಲ ಮಾಡಿ ಆಮ್ನಿ ಆ್ಯಂಬುಲೆನ್ಸ್ ಖರೀದಿಸಿದವರಿದ್ದಾರೆ. ಬಾಡಿಗೆ ಕೂಡ ಕಡಿಮೆ ಇದ್ದು, ಬಡವರಿಗೆ ರೋಗಿಗಳನ್ನು ಸಾಗಿಸಲು ಅನುಕೂಲವಾಗಿತ್ತು. ಕೆಲವು ಆಸ್ಪತ್ರೆಗಳು ಕೂಡ ಇಂತಹ ಆ್ಯಂಬುಲೆನ್ಸ್‌ಗಳನ್ನು ಹೊಂದಿವೆ. ಸಂಘ ಸಂಸ್ಥೆಗಳು/ಸೇವಾ ಸಂಸ್ಥೆಗಳು ದೇಣಿಗೆಯಾಗಿ ಪಡೆದ ಆ್ಯಂಬುಲೆನ್ಸ್‌ಗಳೂ ಇದ್ದು, ಇವುಗಳು ಬಡವರಿಗೆ ಉಚಿತ ಸೇವೆ ಒದಗಿಸುತ್ತಿವೆ. ಮಂಗಳೂರಿನ ವೆನಾÉಕ್ ಆಸ್ಪತ್ರೆಗೆ ಸಚಿವ ಯು.ಟಿ. ಖಾದರ್ ಅವರೂ ಮಾರುತಿ ಆ್ಯಮ್ನಿ ಆ್ಯಂಬುಲೆನ್ಸ್‌ನು°
ಕೊಡುಗೆಯಾಗಿ ನೀಡಿದ್ದರು.
ಸರಕಾರದ ಆದೇಶದ ಹಿನ್ನೆಲೆಯಲ್ಲಿ ಈಗ ಮಾರುತಿ ಆಮ್ನಿ ಆ್ಯಂಬುಲೆನ್ಸ್‌ನು°ನೋಂದಣಿ ಮಾಡುತ್ತಿಲ್ಲ. ವಾರ್ಷಿಕ ಫಿಟ್‌ನೆಸ್ ಸರ್ಟಿಫಿಕೆಟ್‌ಗೆ ಬರುವ ಆಮ್ನಿ ಆ್ಯಂಬುಲೆನ್ಸ್‌ಗಳ ನೋಂದಣಿ ನವೀಕರಣ ಮಾಡುವುದನ್ನು ಕೂಡ ನಿಲ್ಲಿಸಲಾಗಿದೆ.
– ಜಿ.ಎಸ್. ಹೆಗಡೆ
ಪ್ರಾದೇಶಿಕ ಸಾರಿಗೆ ಅಧಿಕಾರಿ, ಮಂಗಳೂರು.
ನಾವು ದೊಡ್ಡ ಸಮಸ್ಯೆಗೆ ಸಿಲುಕಿದ್ದೇವೆ. ಸಾಲ ಪಡೆದು ಆಮ್ನಿ ಆ್ಯಂಬುಲೆನ್ಸ್ ಖರೀದಿಸಿದವರಿದ್ದಾರೆ. ಸಾಲ ಮರು ಪಾವತಿಸುವುದು ಹೇಗೆ ಎಂದು ಚಿಂತಿತರಾಗಿದ್ದೇವೆ. ಈ ಆಮ್ನಿ ವಾಹನವನ್ನು ಇನ್ನೇನು ಮಾಡುವುದೆಂದು ತಿಳಿಯದಾಗಿದೆ. ಈಗಾಗಲೇ ಇರುವ ಆ್ಯಂಬುಲೆನ್ಸ್‌ಗಳಿಗೆ ಈ ಆದೇಶದಿಂದ ವಿನಾಯಿತಿ ನೀಡುವಂತೆ ಸರಕಾರವನ್ನು ಕೋರಲು ಜಿಲ್ಲೆಯ ಎಲ್ಲ ಆಮ್ನಿ ಆ್ಯಂಬುಲೆನ್ಸ್ ಮಾಲಕರನ್ನು ಸಂಘಟಿಸಿ ಸಾರಿಗೆ ಪ್ರಾಧಿಕಾರದ ಅಧ್ಯಕ್ಷ ಹಾಗೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲು ತೀರ್ಮಾನಿಸಿದ್ದೇವೆ.
– ಗಣೇಶ್, ಮಾರುತಿ ಆಮ್ನಿ ಆ್ಯಂಬುಲೆನ್ಸ್ ಮಾಲಕರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.