ತಲಕಾವೇರಿ ಸೂಕ್ಷ್ಮ ಪರಿಸರ ವಲಯ, ಭಾಗಮಂಡಲ ಗ್ರಾಮಸ್ಥರ ತೀವ್ರ ವಿರೋಧ
Team Udayavani, Jun 7, 2017, 3:15 PM IST
ಮಡಿಕೇರಿ: ತಲಕಾವೇರಿ ವನ್ಯಧಾಮವನ್ನು ಸೂಕ್ಷ್ಮ ಪರಿಸರ ವಲಯವನ್ನಾಗಿ ಘೋಷಿಸಿ ರುವ ಕ್ರಮದ ಹಿಂದೆ ಡೋಂಗಿ ಪರಿಸರವಾದಿಗಳ ಕೈವಾಡವಿದೆ ಎಂದು ಆರೋಪಿಸಿರುವ ಬಿಜೆಪಿ ಯುವ ಮೋರ್ಚಾದ ಜಿಲ್ಲಾಧ್ಯಕ್ಷರಾದ ಕಾಳನ ರವಿ ಹಾಗೂ ಭಾಗಮಂಡಲ ಗ್ರಾ.ಪಂ ಸದಸ್ಯರು, ಕೇಂದ್ರಕ್ಕೆ ಸಮರ್ಪಕ ವರದಿಯನ್ನು ಸಲ್ಲಿಸದ ರಾಜ್ಯ ಸರಕಾರದ ನಿರ್ಲಕ್ಷ್ಯ ಧೋರಣೆಯೂ ಇದಕ್ಕೆ ಕಾರಣವೆಂದು ಟೀಕಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಳನ ರವಿ, ಗ್ರಾ.ಪಂ. ಸದಸ್ಯರಾದ ಕೆ.ಸಿ. ಪುರುಷೋತ್ತಮ, ದೇವಂಗೋಡಿ ಭಾಸ್ಕರ ಹಾಗೂ ರಾಜು ರೈ ಯುನೆಸ್ಕೋ ನಿರ್ಧಾರದ ವಿರುದ್ಧ ಹೋರಾಟವನ್ನು ರೂಪಿಸುವುದಾಗಿ ಎಚ್ಚರಿಕೆ ನೀಡಿದರು.
ಜಿಲ್ಲೆಯಲ್ಲಿ ಪುಷ್ಪಗಿರಿ, ಬ್ರಹ್ಮಗಿರಿ ವನ್ಯಧಾಮಗಳಿದ್ದರೂ, ಅವುಗಳನ್ನು ಪರಿಸರ ಸೂಕ್ಷ್ಮ ವಲಯವನ್ನಾಗಿ ಘೋಷಿಸದೆ ಕೇವಲ ತಲಕಾವೇರಿ ವನ್ಯಧಾಮವನ್ನು ಮಾತ್ರ ಪರಿಸರ ಸೂಕ್ಷ್ಮ ವಲಯವನ್ನಾಗಿ ಘೋಷಿಸಲಾಗಿದೆ. ಇದರ ಹಿಂದೆ ಮಡಿಕೇರಿ-ಪಾಣತ್ತೂರು ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ತಡೆಯೊಡ್ಡುವ ಷಡ್ಯಂತ್ರ ಅಡಗಿದೆ ಎಂದು ಆರೋಪಿಸಿದರು.
ರಾಷ್ಟ್ರೀಯ ಹೆದ್ದಾರಿ ಯೋಜನೆಗೆ ನಮ್ಮ ಬೆಂಬಲ ವಿದೆ ಎಂದು ಸ್ಪಷ್ಟಪಡಿಸಿದ ಅವರು ಹೆದ್ದಾರಿಯಿಂದ ಕೊಡಗಿನ ಪರಿಸರಕ್ಕೆ ಯಾವುದೇ ಹಾನಿ ಇಲ್ಲವೆಂದು ಅಭಿಪ್ರಾಯಪಟ್ಟರು.
ತಲಕಾವೇರಿ ವನ್ಯಧಾಮವನ್ನು ಪರಿಸರ ಸೂಕ್ಷ್ಮ ವಲಯವೆಂದು ಘೋಷಿಸಿರುವುದರಿಂದ ಅದರ ಸುತ್ತಮುತ್ತಲ ಗ್ರಾಮಗಳಲ್ಲಿ ಯಾವುದೇ ವಾಣಿಜ್ಯ ಕೈಗಾರಿಕೆಗಳು, ಯಾಂತ್ರಿಕ ಕೃಷಿ ಚಟುವಟಿಕೆಗಳು ನಡೆಯುವಂತಿಲ್ಲ. ಕೋಳಿ ಸಾಕಾಣಿಕೆ, ಹೈನುಗಾರಿಕೆ ನಡೆಸುವಂತಿಲ್ಲ. ಇದರಿಂದ ಕೃಷಿಯನ್ನೇ ನಂಬಿ ಬದುಕುತ್ತಿರುವ ಅದರಲ್ಲೂ ಕೊಡಗಿನ ಜಮ್ಮಾ ಹಿಡುವಳಿದಾರರ ಜೀವನವೇ ಸಂಕಷ್ಟಕ್ಕೆ ಸಿಲುಕಲಿದ್ದು, ಗ್ರಾಮೀಣ ಜನರನ್ನು ಸಾಯಿಸಿ ಪಟ್ಟಣದ ಜನತೆಗೆ ಅನುಕೂಲ ಮಾಡಿಕೊಡುವ ಹುನ್ನಾರ ಇದರಲ್ಲಿ ಅಡಗಿದೆ ಎಂದು ಟೀಕಿಸಿದರು.
ಕೊಡಗಿನ ಎಲ್ಲ ಮೂಲ ನಿವಾಸಿಗಳು ಈ ಹಿಂದೆ ತಮ್ಮತಮ್ಮ ಗ್ರಾಮ ಪಂಚಾಯತ್‌ಗಳಲ್ಲಿ ಗ್ರಾಮ ಸಭೆಗಳನ್ನು ನಡೆಸಿ ಪರಿಸರ ಸೂಕ್ಷ್ಮ ವಲಯ ಹಾಗೂ ಕಸ್ತೂರಿ ರಂಗನ್ ವರದಿಗೆ ಆಕ್ಷೇಪಗಳನ್ನು ರಾಜ್ಯ ಸರಕಾರಕ್ಕೆ ಸಲ್ಲಿಸಿದ್ದರು. ಅಲ್ಲದೆ 2015ರಲ್ಲಿ ಕೊಡಗು ಬಂದ್ ನಡೆಸುವ ಮೂಲಕವೂ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದರು. 2017ರಲ್ಲಿ ಜಿಲ್ಲಾಡಳಿತದ ಆದೇಶದ ಮೇರೆಗೆ ಪ್ರತೀ ಗ್ರಾಮ ಪಂಚಾಯತ್‌ಗಳಲ್ಲಿ ವಿಶೇಷ ಗ್ರಾಮ ಸಭೆಗಳನ್ನು ನಡೆಸಿ ಈ ಯೋಜನೆಗಳಿಗೆ ವಿರೋಧ ವ್ಯಕ್ತಪಡಿಸಿ ನಿರ್ಣಯಗಳನ್ನು ರಾಜ್ಯ ಸರಕಾರಕ್ಕೆ ಕಳುಹಿಸಲಾಗಿತ್ತು.
ಆದರೆ ಈ ಎಲ್ಲ ವರದಿ, ನಿರ್ಣಯಗಳನ್ನು ಗಾಳಿಗೆ ತೂರಿದ ರಾಜ್ಯ ಸರಕಾರ, ಕೇಂದ್ರಕ್ಕೆ ತನ್ನ ಯಾವುದೇ ಆಕ್ಷೇಪಣೆಯನ್ನು ಸಲ್ಲಿಸದ ಪರಿಣಾಮ ಇಂದಿನ ಈ ದುಸ್ಥಿತಿಗೆ ಕಾರಣವಾಗಿದೆ ಎಂದು ಆರೋಪಿಸಿದರು.
ಪರಿಸರ ಸೂಕ್ಷ್ಮ ವಲಯ ಹಾಗೂ ಕಸ್ತೂರಿ ರಂಗನ್ ವರದಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರವು ಅಂತಿಮವಾಗಿ ರಾಜ್ಯ ಸರಕಾರದ ವರದಿಯನ್ನು ಕೇಳಿದ್ದರೂ, ರಾಜ್ಯ ಸರಕಾರ ಆ ವರದಿಯನ್ನು ನೀಡುವಲ್ಲಿ ವಿಫಲವಾಗಿದೆ. ಗ್ರಾಮ ಸಭೆಗಳಲ್ಲಿ ಕೈಗೊಳ್ಳುವ ನಿರ್ಣಯಗಳಿಗೆ ಬೆಲೆ ಇಲ್ಲ ಎಂದಾದ ಮೇಲೆ ಇನ್ನು ಮುಂದೆ ಕೊಡಗಿನ ಎಲ್ಲ ಗ್ರಾಮ ಪಂಚಾಯತ್‌ಗಳಲ್ಲಿ ನಡೆಸಲಾಗುವ ಗ್ರಾಮಸಭೆಗಳನ್ನು ಬಹಿಷ್ಕರಿಸುವ ಮೂಲಕ ಗ್ರಾಮ ಸ್ಥರು ತಮ್ಮ ಪ್ರತಿಭಟನೆಯನ್ನು ಸಲ್ಲಿಸಬೇಕಿದೆ ಎಂದರು.
ಭಾಗಮಂಡಲ ವಲಯದ ಜನರಿಗೆ ಮಾರಕವಾಗಿರುವ ಪರಿಸರ ಸೂಕ್ಷ್ಮ ವಲಯ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಈ ಭಾಗದ ಜನತೆ ಬೆತ್ತಲೆ ಮೆರವಣಿಗೆ ಮೂಲಕ ಸರಕಾರದ ಮಟ್ಟಕ್ಕೆ ಹೋಗಲು ಸಿದ್ಧರಿದ್ದೇವೆ ಎಂದು ತಿಳಿಸಿದರು.
ಕೊಡಗಿನ ಜನತೆ ಪರಿಸರ ವಿರೋಧಿಗಳಲ್ಲ. ಜಿಲ್ಲೆಯಲ್ಲಿ ಬೆಳೆಗಾರರು ತಮ್ಮ ಕಾಫಿ ತೋಟಗಳಲ್ಲಿ ಮರಗಳನ್ನು ಬೆಳೆಸಿರುವುದರಿಂದಲೇ ಇಂದು ಕೊಡಗಿನಲ್ಲಿ ಪರಿಸರ ಉಳಿದಿದೆ. ಅರಣ್ಯ ಇಲಾಖೆಯ ಅಧೀನದಲ್ಲಿರುವ ಕಾಡುಗಳು ಸಂಪೂರ್ಣವಾಗಿ ನಾಶವಾಗಿದ್ದು, ಅಲ್ಲಿ ವನ್ಯಜೀವಿಗಳಿಗೆ ಅಗತ್ಯ ವಿರುವ ಆಹಾರ ಲಭ್ಯವಾಗದೆ ಅವುಗಳು ನಾಡಿಗೆ ಪ್ರವೇಶಿಸುತ್ತಿವೆ. ಅರಣ್ಯ ಇಲಾಖೆ ಪ್ರಾಣಿಗಳಿಗೆ ಆಹಾರವಾಗುವ ಗಿಡಗಳನ್ನಾದರೂ ಅರಣ್ಯದಲ್ಲಿ ಬೆಳೆಸಲು ಮುಂದಾಗಬೇಕು ಎಂದು ಅವರು ಸಲಹೆ ಮಾಡಿದರಲ್ಲದೆ, ಪರಿಸರ ಸೂಕ್ಷ್ಮ ವಲಯವನ್ನು ಕೇವಲ ಅರಣ್ಯಕ್ಕೆ ಮಾತ್ರ ಸೀಮಿತಗೊಳಿಸಿ, ಜನರ ದೈನಂದಿನ ಜೀವನಕ್ಕೆ ಅಡ್ಡಿಯಾಗದಂತೆ ನಿಯಮಗಳಲ್ಲಿ ಸಡಿಲಿಕೆ ಮಾಡಬೇಕು ಎಂದೂ ಅವರು ಒತ್ತಾಯಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Food Department Operation: ಬಿಪಿಎಲ್ ಚೀಟಿದಾರರಿಗೆ ಎಪಿಎಲ್ ಕಾವು!
Shakti scheme; ಪುರುಷರಿಗೆ ಉಚಿತ ಪ್ರಯಾಣ ಸೌಲಭ್ಯ ಇಲ್ಲ: ರಾಮಲಿಂಗಾರೆಡ್ಡಿ
MUST WATCH
ಹೊಸ ಸೇರ್ಪಡೆ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.