ಅಕ್ಷರ ಎಂಬುದು ಅಕ್ಷಯ ಕಣಾ!
Team Udayavani, Jun 11, 2017, 4:43 PM IST
ವಿವಿಧ ಸಂವಹನ ಮಾಧ್ಯಮಗಳು ಆವಿಷ್ಕಾರಗೊಳ್ಳುತ್ತಿರುವ ಈ ದಿನಗಳಲ್ಲಿ “ಅಕ್ಷರ’ಗಳು ಅಳಿದುಹೋಗಬಹುದು ಎಂದು ಕೆಲವರು ಭಾವಿಸಿದ್ದರು. ಹಾಗಾಗಿಲ್ಲ. ಸೋಶಿಯಲ್ ಮೀಡಿಯಾಗಳಲ್ಲಿ “ಅಕ್ಷರ ಮಾಧ್ಯಮ’ಕ್ಕೆ ಮಹತ್ವ ಹೆಚ್ಚುತ್ತಿದೆ. ಬುಕ್‌ಗಳಿಂದ ಫೇಸ್‌ಬುಕ್‌ಗಳವರೆಗೆ ಬರಹಗಾರರು, ಓದುಗರು ಅಧಿಕವಾಗಿದ್ದಾರೆ !
ಜೂನ್ ಆರಂಭದ ಈ ದಿನಗಳಲ್ಲಿ ಮಕ್ಕಳು ಪುಸ್ತಕಗಳ ಬ್ಯಾಗ್ ಹೊತ್ತು ಶಾಲೆಗೆ ಹೊರಟು ನಿಂತಿರುವುದನ್ನು ಕಂಡಾಗ ಹೀಗೊಂದು “ಅಕ್ಷರ ಚಿಂತನೆ’ ಸಕಾಲಿಕವೆಂಬಂತೆ ಮನದಲ್ಲಿ ತೇಲಿ ಹೋಯಿತು…
ಬಹಳ ಹಿಂದೆ ಸ್ನೇಹಿತರಾಗಿರುವ ಟಿವಿ ಪತ್ರಕರ್ತರೊಬ್ಬರು ಹೇಳಿದ್ದ ಮಾತು. “ನೋಡು, ಈ ಬರವಣಿಗೆ ಅನ್ನೋದು ಇದೆಯಲ್ಲ, ಇಟ್ ಈಸ್ ಮ್ಯಾಜಿಕಲ್. ಯಾಕೆ ಗೊತ್ತಾ? ಕಲೆಯ ಬೇರೆಲ್ಲ ಪ್ರಕಾರಗಳಿಗೂ ವಾದ್ಯ, ಪಕ್ಕವಾದ್ಯಗಳು ಬೇಕು. ಹಾಡಿಗೆ ಸಂಗೀತ ಬೇಕು, ಸಂಗೀತ ನುಡಿಸೋ ಉಪಕರಣಗಳು ಬೇಕು. ಹಾಗೇನೇ ಡ್ಯಾನ್ಸಿಗೆ ಮೇಕಪ್ಪು, ವೇದಿಕೆ, ಲೈಟಿಂಗ್ಸ್ ಬೇಕು. ಚಿತ್ರಕಲೆಗೆ ಬಣ್ಣ, ಕ್ಯಾನ್ವಾಸ್ ಬೇಕು. ಅವಕ್ಕೆಲ್ಲ ಇಲ್ಲದ ಒಂದು ಅದ್ಭುತ ಶಕ್ತಿ ಬರಹಕ್ಕಿದೆ. ಐವತ್ತು ಪೈಸೆಯ ರಿಫಿಲ್ಲು ಮತ್ತು ಬಜ್ಜಿಬೋಂಡ ಕಟ್ಟುವ ಸಣ್ಣದೊಂದು ಕಾಗದ ಸಿಕ್ಕರೂ ಸಾಕು, ಬರಹಗಾರ ಅದರಲ್ಲಿ ಅರಮನೆಯನ್ನೋ ಇಂದ್ರಲೋಕವನ್ನೋ ಸೃಷ್ಟಿಸಬಹುದು. ಬರಹಗಳಲ್ಲಿ ಇರುವುದು, ಹೇಳಿಕೇಳಿ ಅಕ್ಷರಗಳು. ಆದರೆ ಯಾವ ಬಿಂಕ, ಬಿನ್ನಾಣ, ಬೆಡಗು, ಲಾವಣ್ಯ ಇಲ್ಲದ ಆ ಅಕ್ಷರಗಳ ಮೂಲಕವೇ ನಾವು ಏನನ್ನಾದರೂ ಸೃಷ್ಟಿಸಬಹುದಲ್ಲ? ಓದುಗನ ಮನಸ್ಸಿನಲ್ಲಿ ಎಂತೆಂಥ ಭಾವನೆಗಳನ್ನೆಲ್ಲ ಅರಳಿಸಿ ಕೆರಳಿಸಿ ಆತನನ್ನು ಹುಚ್ಚೆಬ್ಬಿಸಬಹುದಲ್ಲ? ಎಂಥ ಅದ್ಭುತ ಶಕ್ತಿ ಅದು! ಅದು ಮ್ಯಾಜಿಕಲ್ ಅಲ್ಲವಾದರೆ ಬೇರಾವುದು?’
ಕೆಲವೊಮ್ಮೆ ಕತೆ-ಕಾದಂಬರಿಗಳನ್ನು ಸಿನೆಮಾ ಮಾಡುತ್ತಾರೆ. ಒಂದು ಸಿನೆಮಾ ಎಂದರೆ ಅದಕ್ಕೆ ದುಡಿಯುವವರು ಸಾವಿರಾರು ಮಂದಿ. ಆದರೆ, ಸಿನೆಮಾ ನೋಡಿದ ಮೇಲೆ ಎಷ್ಟೋ ಸಲ, ಅದಕ್ಕಿಂತ ಮೂಲಕೃತಿಯೇ ಚೆನ್ನಾಗಿತ್ತು ಅನ್ನಿಸಿಬಿಡುತ್ತದೆ. ಹ್ಯಾರಿ ಪಾಟರ್ ಕೃತಿಸರಣಿಯ ವಿಷಯದಲ್ಲಿ ನನ್ನೊಬ್ಬ ಸಹೋದ್ಯೋಗಿ ಹೇಳುತ್ತಿದ್ದರು: ಸಿನೆಮಾ ಎಂಬುದು ಕೃತಿಯ ಅತ್ಯಂತ ಪೇಲವ ನಕಲು. ಸಿನೆಮಾಗಿಂತ ಜೆ.ಕೆ. ರೋಲಿಂಗ್‌ಳ ಬರಹದ ಶಕ್ತಿ ನೂರು ಪಟ್ಟು ಹೆಚ್ಚು ಚೆನ್ನಾಗಿದೆ – ಅಂತ. ಹಿಂದೊಮ್ಮೆ ಗಿರೀಶ ಕಾರ್ನಾಡರ ಹಯವದನ ನಾಟಕವನ್ನು ರಂಗಮಂಚದಲ್ಲಿ ಕಂಡಾಗಲೂ ನನಗೆ ಹಾಗೇ ಅನಿಸಿತ್ತು. ಅದು, ಸಾಹಿತ್ಯಕೃತಿಯಾಗಿ ನನಗೆ ರೋಮಾಂಚನ ಹುಟ್ಟಿಸಿದ್ದ ನಾಟಕ. ಆದರೆ ಅದನ್ನು ವೇದಿಕೆಯಲ್ಲಿ ಪ್ರಸ್ತುತಿಪಡಿಸಿದಾಗ ಅಷ್ಟೇನೂ ಇಷ್ಟವಾಗಲಿಲ್ಲ. ಅವರದ್ದೇ ಇನ್ನೊಂದು- ಅಗ್ನಿ ಮತ್ತು ಮಳೆ ನಾಟಕವನ್ನು ಓದಿ ಹುಚ್ಚನಾಗಿದ್ದ ನನಗೆ ಅದರ ಸಿನೆಮಾ ಅವತರಣಿಕೆ ಅಗ್ನಿವರ್ಷ ನೋಡಿದಾಗ ಭ್ರಮನಿರಸನವಾಗಿತ್ತು. ಸಿನೆಮಾ ಆದಾಗ ಸಾಹಿತ್ಯಕೃತಿಯಲ್ಲಿ ಅಡಕವಾಗಿದ್ದ ಅನೇಕ ವಿವರಗಳು ಮಾಯವಾಗುತ್ತವೆ, ಇಲ್ಲವೇ ಬದಲಾಗುತ್ತವೆ. ಆ ವ್ಯಕ್ತಿಯು ಅದೆಷ್ಟು ಆರಾಮಾಗಿ ನಡೆದುಹೋಗುತ್ತಿದ್ದನೆಂದರೆ ಆತನ ಸೂಟ್‌ಕೇಸ್ ಒಳಗೆ ಮನುಷ್ಯನೊಬ್ಬನ ಅಂಗಾಂಗಗಳಿದ್ದವು ಎಂಬುದನ್ನು ಯಾರೂ ಊಹಿಸುವಂತಿರಲಿಲ್ಲ ಎಂಬ ಸಾಲನ್ನು ಸಿನೆಮಾ ದೃಶ್ಯವಾಗಿ ತರುವುದು ಹೇಗೆ ಎಂಬ ಬಗ್ಗೆ ನಿರ್ದೇಶಕ ತಲೆಕೆಡಿಸಿಕೊಳ್ಳಬೇಕಾಗುತ್ತದೆ. ಅಂಥ ಸವಾಲನ್ನು ಎದುರಿಸಿ ಗೆಲ್ಲುವುದು ಇಲ್ಲವೇ ಭರ್ಜರಿಯಾಗಿ ಸೋಲುವುದು ಪೂರ್ತಿಯಾಗಿ ನಿರ್ದೇಶಕನ ಸಾಮರ್ಥ್ಯಕ್ಕೆ ಬಿಟ್ಟ ವಿಚಾರ. ಪುಟ್ಟಣ್ಣ ಕಣಗಾಲ್ ನಿರ್ದೇಶನದ ನಾಗರಹಾವು ತೆರೆಯ ಮೇಲೆ ಬಂದಾಗ, ಸ್ವತಃ ತರಾಸು ಅವರೇ ಅದನ್ನು “ನಾಗರಹಾವಲ್ಲ, ಕೇರೆ ಹಾವು’ ಎಂದಿದ್ದರಂತೆ. ಹಾಗೆಯೇ ವಂಶವೃಕ್ಷವನ್ನು ಕಾದಂಬರಿಯ ರೂಪದಲ್ಲಿ ಓದಿದವರಿಗೆ ಅದನ್ನು ಆಧರಿಸಿ ತೆಗೆದ ಚಿತ್ರದಲ್ಲಿ ಯಾವೆಲ್ಲ ಭಾಗಗಳು ಪೇಲವವಾಗಿವೆ ಎಂಬುದು ಗೊತ್ತಿರುತ್ತದೆ. ಯಾವ ವೆಚ್ಚವೂ ಇಲ್ಲದೆ ಹಾಳೆಯಲ್ಲಿ ಮೂಡಿದ ಅಕ್ಷರಗಳು ಮೂಡಿಸುವ ಭಾವಾನುಭೂತಿಯನ್ನು ಕೋಟಿ ರುಪಾಯಿ ಖರ್ಚು ಮಾಡಿ ತೆಗೆದ ಸಿನೆಮಾ ಕೂಡ ಕೊಡುವುದಿಲ್ಲ ಎಂಬುದು ಅಚ್ಚರಿಯಾದರೂ ಸತ್ಯ.
ಬರಹ ಸಾಯುವುದಿಲ್ಲ…
ಮನುಷ್ಯನ ನಾಗರಿಕತೆ ಬೆಳೆದಂತೆಲ್ಲ ಬರಹವೆಂಬ ಅಭಿವ್ಯಕ್ತಿಯ ಪ್ರಕಾರವೇ ನಶಿಸಿಹೋಗುತ್ತದೆ, ಜಗತ್ತು ಅದಕ್ಕಿಂತ ಹೆಚ್ಚು ಪ್ರಭಾವಶಾಲಿಯಾದ ಮಾಧ್ಯಮಕ್ಕೆ ಒಗ್ಗಿಕೊಳ್ಳುತ್ತದೆ ಎಂದು ಹಿಂದಿನವರು ಊಹಿಸಿದ್ದರು. ಶ್ರವ್ಯ ಮತ್ತು ದೃಶ್ಯ ಮಾಧ್ಯಮ ಬಂದಾಗ, ಬರಹದ್ದು ಇನ್ನು ಗತೇತಿಹಾಸ ಎಂದು ಅನೇಕರು ಭವಿಷ್ಯ ನುಡಿದಿದ್ದರು. ಪುಸ್ತಕ ಕೊಳ್ಳೋರು ಇನ್ನು ಯಾರಿ¨ªಾರೆ? ಪತ್ರಿಕೆ ಓದೋರು ಯಾರಿ¨ªಾರೆ? ಎಲ್ಲವೂ ಹೆಚ್ಚೆಂದರೆ ಇನ್ನೊಂದೆರಡು ದಶಕ ಅಷ್ಟೇ ಎಂದು ಸ್ವತಃ ಬರವಣಿಗೆಯಲ್ಲಿ ತೊಡಗಿಕೊಂಡವರೇ ನಿಡುಸುಯ್ದಿದ್ದರು. ಆದರೆ, ನಾವೀಗ ಬರೆಯುವ ಜನಾಂಗವಾಗಿದ್ದೇವೆ. 2017ರ ಮಾರ್ಚ್ ತಿಂಗಳ ಅಂಕಿ-ಅಂಶಗಳ ಪ್ರಕಾರ, ಫೇಸ್‌ಬುಕ್ ಎಂಬ ಒಂದೇ ಜಾಲತಾಣದಲ್ಲಿ ಪ್ರತಿ 60 ಸೆಕೆಂಡುಗಳಲ್ಲಿ ಒಂದೂವರೆ ಬಿಲಿಯ (150 ಕೋಟಿ) ಕಾಮೆಂಟ್‌ಗಳನ್ನು ಜನ ಬರೆಯುತ್ತಾರಂತೆ! ಒಂದೊಂದು ಕಾಮೆಂಟಲ್ಲೂ ಸರಾಸರಿ 10 ಪದಗಳಿರುತ್ತವೆ ಎಂದು ಭಾವಿಸಿದರೂ ಈ ಜಗತ್ತಲ್ಲಿ ಜನ ಪ್ರತಿ ನಿಮಿಷಕ್ಕೆ 1500 ಕೋಟಿ ಪದಗಳನ್ನು ಹೊಸೆಯುತ್ತಿ¨ªಾರೆ! ಇಷ್ಟೊಂದು ಅಗಾಧ ಪ್ರಮಾಣದಲ್ಲಿ ಅಕ್ಷರಗಳ ರಾಶಿಯನ್ನು ಈ ಭೂಮಿಯಲ್ಲಿ ಹಿಂದೆ ಯಾವ ನಾಗರಿಕತೆಯೂ ಸೃಷ್ಟಿಸಿದ ದಾಖಲೆಯಿಲ್ಲ. ಬರೆಯುವುದು ಮಾತ್ರವಲ್ಲ; ಆ ಬರವಣಿಗೆಯಲ್ಲಿ ವೈವಿಧ್ಯವೂ ಇದೆ. ಚುನಾವಣೆಯೆಂಬ ಒಂದೇ ವಿಷಯಕ್ಕೆ ನೂರು ಮನಸ್ಸುಗಳು ನೂರು ಬಗೆಯಲ್ಲಿ ಪ್ರತಿಕ್ರಿಯಿಸುತ್ತವೆ, ತಮ್ಮ ಅನಿಸಿಕೆ ದಾಖಲಿಸುತ್ತವೆ. ಯಾವುದಾದರೂ ಘಟನೆ ನಡೆದು ನಿಮಿಷವಾಗುತ್ತಲೇ ಅದನ್ನು ಕುರಿತು 360 ಡಿಗ್ರಿಗಳ ಅಭಿಪ್ರಾಯಗಳು ಅಂತರ್ಜಾಲದಲ್ಲಿ ಸಿಕ್ಕಿಬಿಡುತ್ತವೆ. ದಿನಕ್ಕೆ ಕನಿಷ್ಠ ಲಕ್ಷದಷ್ಟಾದರೂ ಹೊಸ ಜೋಕುಗಳನ್ನು ಜನ ಸೃಷ್ಟಿಸಿ ಜಾಲತಾಣ, ವಾಟ್ಸಾಪ್‌ನಂತಹ ಮಾಧ್ಯಮಗಳಲ್ಲಿ ಹರಿಯಬಿಡುತ್ತಿ¨ªಾರೆ. ಒಂದೇ ವಿಷಯವನ್ನು ರೌದ್ರ, ಗಂಭೀರ, ಹಾಸ್ಯ, ಶಾಂತ ಎನ್ನುತ್ತ ಹಲವು ರಸಗಳನ್ನು ಬೆರೆಸಿ ಜನ ಪ್ರಸ್ತುತಿಪಡಿಸುತ್ತಿ¨ªಾರೆ. ಪ್ರಸಕ್ತ ಜಗತ್ತಿನಲ್ಲಿ ಸ್ನೇಹ, ಪ್ರೀತಿ, ಗೌರವ, ದ್ವೇಷ, ಕಾಲೆಳೆದಾಟ, ಸ್ತುತಿ, ಖಂಡನೆ ಎಲ್ಲವೂ ಅಕ್ಷರಗಳ ಮೂಲಕವೇ ನಡೆಯುತ್ತಿದೆ. ಇವನ್ನೆಲ್ಲ ನೋಡಿದರೆ, ಅಕ್ಷರದ ಆಯುಸ್ಸು ಮುಗಿಯಿತು ಎಂದು ಯಾರಿಗಾದರೂ ಅನಿಸುತ್ತದೆಯೇ?
“ಅವರದ್ದು ಅದ್ಭುತ ಬರವಣಿಗೆ ಮಾರಾಯೆÅ’ ಎಂದು ಜನ ಲೇಖಕರ ಬಗ್ಗೆ ಮೆಚ್ಚುಗೆ ಸೂಚಿಸುವುದುಂಟು. ಬರವಣಿಗೆಯೆಂಬುದು ನೇಯ್ಗೆಯ ಕೆಲಸದಂತೆ. ಮಾಸ್ತಿಯವರ ಕತೆಗಳನ್ನೋ ಹರುಕಿ ಮುರಕಮಿಯ ಕತೆಗಳನ್ನೋ ಓದಿದಾಗ, ಏನೋ ಸಾಧಾರಣ ಬರಹವೆಂಬ ಭಾವನೆ ಹುಟ್ಟಿಸಿ ಪ್ರಾರಂಭವಾದರೂ, ಓದಿ ಮುಗಿಸಿದ ಮೇಲೆ ಮನಸ್ಸನ್ನು ಅಲ್ಲಿನ ಅಕ್ಷರಗಳು ಬಹಳ ಕಾಲ ಆವರಿಸಿರುತ್ತವೆ. ಮಲೆಗಳಲ್ಲಿ ಮದುಮಗಳು ಓದಿ ಮುಗಿಸಿದ ಕನಿಷ್ಠ ಒಂದು ತಿಂಗಳಾದರೂ ಓದುಗನ ಮನಸ್ಸಿನೊಳಗೆ ಮಲೆನಾಡಿನ ಸೌಂದರ್ಯ ಮತ್ತು ಅಗಾಧತೆ ಗರಿ ಬಿಚ್ಚಿರುತ್ತದೆ. ಸಂಸರ ನಾಟಕಗಳನ್ನು ಒಂದೇ ಗುಕ್ಕಿಗೆ ಓದಿ ಮುಗಿಸಿಟ್ಟರೆ ಒಂದೆರಡು ವಾರದ ಮಟ್ಟಿಗೆ ನೂರಿನ್ನೂರು ವರ್ಷಗಳ ಹಿಂದಿನ ಮೈಸೂರೇ ಕಣ್ಣ ಮುಂದೆ ಕುಣಿಯುತ್ತಿರುತ್ತದೆ. ಅದು ನಿಜವಾಗಿಯೂ ಬರವಣಿಗೆಯ, ಬರಹಗಾರನ ಶಕ್ತಿ. ತನ್ನ ಓದುಗನಿಗೆ ಯಾವುದೋ ಕತೆ ಹೇಳುತ್ತ, ಇಲ್ಲದ್ದನ್ನೂ ಇದೆಯೆಂದು ನಂಬಿಸುತ್ತ, ಆತನನ್ನು ನಿಧಾನವಾಗಿ ಆವರಿಸುತ್ತ, ಒಳಗೊಳ್ಳುತ್ತ ಕೊನೆಗೆ ಪೂರ್ತಿಯಾಗಿ ತನ್ನವನನ್ನಾಗಿ ಮಾಡಿಕೊಳ್ಳುವ ಆ ಮಾಯಾವಿದ್ಯೆ ಎಲ್ಲರಿಗೂ ಸಿದ್ಧಿಸುವುದಿಲ್ಲ. ಬರಹಕ್ಕೆ ನಿಷ್ಠರಾದವರೆಲ್ಲ ಒಳ್ಳೆಯ ಬರಹಗಾರರಾಗುತ್ತಾರೆಂದು ಹೇಳುವಂತಿಲ್ಲ. ಬರಹಕ್ಕೆಂತೋ ಹಾಗೆಯೇ ಓದುಗನಿಗೂ ಲೇಖಕ ನಿಷ್ಠೆ ತೋರಬೇಕು. ಎದುರು ಕೂತಿರುವ ವ್ಯಕ್ತಿಗೆ ನನ್ನ ಕತೆಯೊಂದನ್ನು ಹೇಳುತ್ತಿದ್ದೇನೆ ಎಂಬ ಆತ್ಮೀಯ ಭಾವದಿಂದ ಬರೆಯಬೇಕು.
ಮಾಸ್ತಿಯವರ ಪ್ರತಿ ಕತೆಯೂ ಅಂಥದೊಂದು ಆತ್ಮೀಯತೆ, ಪ್ರೀತಿಯನ್ನು ಒಳಗೊಂಡೇ ಪ್ರಾರಂಭವಾಗುತ್ತಿತ್ತು. “ಅದ್ಯಾರೋ ನಾರಾಯಣಸ್ವಾಮಿ ಹೇಳಿದ್ದನ್ನು ರಂಗಪ್ಪ ಕೇಳಿ ಕೃಷ್ಣಯ್ಯನಿಗೆ ಹೇಳಿದ್ದನ್ನು ಆತ ನನಗೆ ಹೇಳಿದ; ಅದನ್ನು ನಿಮಗೆ ಹೇಳುತ್ತಿದ್ದೇನೆ’ – ಎಂದು ಎÇÉೋ ಹುಟ್ಟಿದ ಕತೆಯನ್ನು ನಿಮಗೆ ದಾಟಿಸುವ ಪುಣ್ಯಕಾರ್ಯ ಮಾಡುತ್ತಿದ್ದೇನೆಂಬ ಬಿನ್ನಹ ಮಾಡಿಕೊಂಡೇ ಮಾಸ್ತಿ ಕತೆ ಹೇಳಲು ಕೂರುತ್ತಿದ್ದರು. ಕತೆಗಾರನಿಗೆ ಮಾತ್ರವಲ್ಲ, ವಿಜ್ಞಾನ ಗಣಿತದಂಥ ಒಣವಿಷಯಗಳನ್ನು ಬರೆಯುವವನಿಗೂ ಅಂಥದೊಂದು ಓದುಗನ ಭಾವನಾ ಸಾಹಚರ್ಯ ಅತ್ಯಗತ್ಯವಾಗಿ ಬೇಕು. ಇಲ್ಲವಾದರೆ ಲೇಖಕ ಮತ್ತು ಓದುಗ ಎಂದೂ ತಬ್ಬಿಕೊಳ್ಳದ ಸಮಾಂತರ ರೇಖೆಗಳಾಗಿಯೇ ಉಳಿದುಬಿಡುತ್ತಾರೆ.
ಇನ್ನು, ಲೇಖಕರು ತಮ್ಮ ಬರವಣಿಗೆಗಾಗಿ ಮಾಡಿಕೊಳ್ಳುವ ತಯಾರಿಯದ್ದೇ ಒಂದು ದೊಡ್ಡ ಕತೆ. ಎಸ್. ಎಲ್. ಭೈರಪ್ಪನವರು ತಮ್ಮ ಕಾದಂಬರಿ ಮಂದ್ರವನ್ನು ಬರೆಯಲು ಮಾಡಿಕೊಂಡ ತಯಾರಿಗಳ ಬಗ್ಗೆಯೇ ಒಂದು ಕೃತಿ ಬರೆದಿ¨ªಾರೆ! ಆ ಕಾದಂಬರಿ ಬರೆಯುತ್ತಿ¨ªಾಗ ಅವರು ಉತ್ತರಭಾರತದ ಹಲವು ಹೆಸರು-ಗುರುತಿಲ್ಲದ ಗಲ್ಲಿಕೇರಿಗಳÇÉೆಲ್ಲ ಅಲೆದು ಬರಬೇಕಾಯಿತಂತೆ. ಹತ್ತಿಪ್ಪತ್ತು ನಿಮಿಷಗಳ ಮಾತುಕತೆ ಆಡಲು ನೂರಾರು ಮೈಲಿ ಪ್ರಯಾಣ ಮಾಡಬೇಕಾಯಿತಂತೆ. ಮುಂಬಯಿಯ ಒಂದು ಗಜಿಬಿಜಿಗುಟ್ಟುವ ಕಂತ್ರಿ ಬಾರಿನಲ್ಲಿ ಕೂತು ಗಾಯಕನೊಬ್ಬನ ಮಾತುಗಳನ್ನು ನೋಟ್ ಮಾಡಿಕೊಳ್ಳಬೇಕಾಯಿತಂತೆ. ಆದರೆ ಹಾಗೆ ತಾನು ಹಲವು ಕಡೆಗಳಲ್ಲಿ ಕಂಡ, ಅನುಭವಿಸಿದ ಅನುಭವಗಳೆಲ್ಲವನ್ನೂ ಕತೆಗಾರ ತನ್ನ ಕೃತಿಯಲ್ಲಿ ತರಲು ಆಗುವುದಿಲ್ಲ. ಭೈರಪ್ಪನವರು ಬಹುಶಃ ಐದಾರು ಸಾವಿರ ಪುಟಗಳ ನೋಟ್ಸ್ ಮಾಡಿಕೊಂಡ ಮೇಲೆ ಮುನ್ನೂರು ಪುಟಗಳ ಕಾದಂಬರಿಯನ್ನು ಓದುಗನ ಕೈಲಿಟ್ಟಿರಬಹುದು. ಕೆಲವು ಸರತಿ, ಹತ್ತಿಪ್ಪತ್ತು ವರ್ಷಗಳ ಹಿಂದೆ ಮಾಡಿಟ್ಟಿದ್ದ ಗುರುತು, ಕಂಡ ಘಟನೆ, ಅನುಭವಿಸಿದ ಸಂಗತಿ, ಭೇಟಿಯಾದ ವ್ಯಕ್ತಿ ಹೇಳಿದ್ದ ಯಾವುದೋ ಮಾತು ಕೃತಿಯಲ್ಲಿ ಒಡಮೂಡುವುದೂ ಉಂಟು. ಅಮೆರಿಕನ್ ಲೇಖಕ ಅರ್ನೆಸ್ಟ್ ಹೆಮಿಂಗ್ವೇ ತನ್ನ ಓರಗೆಯ ಸಾಹಿತಿ ಸ್ಕಾಟ್ ಫಿಟ್‌ಜೆರಾಲ್ಡ್‌ಗೆ ಬರೆದ ಒಂದು ಪತ್ರದಲ್ಲಿ, ಒಂದು ಪುಟ ಸಾಹಿತ್ಯ ಬರೆಯುವಷ್ಟರಲ್ಲಿ 91 ಪುಟ ಕಸ ಹೊಸೆದಿರುತ್ತೇನೆ ಎಂದಿದ್ದ. ಪ್ರತಿದಿನ 500 ಶಬ್ದಗಳಷ್ಟು ಬರೆಯಲು ಸಾಧ್ಯವಾಯಿತೆಂದರೆ ನಾನು ಸಂತೃಪ್ತ ಎಂದು ಅವನೊಮ್ಮೆ ಹೇಳಿದ್ದುಂಟು. ಹೆಮಿಂಗ್ವೇ ತನ್ನ ಬಹುಪಾಲು ಕಾದಂಬರಿ, ಕತೆಗಳನ್ನು ಬರೆದದ್ದು ನಸುಕಿನಲ್ಲಿ; ಕತ್ತಲೆಯ ಗರ್ಭದಲ್ಲಿನ್ನೂ ಬೆಳಕಿನ ಶಿಶು ಮಲಗಿ ಗಾಢ ನಿ¨ªೆ ತೆಗೆಯುತ್ತಿದ್ದ ಹೊತ್ತಿನಲ್ಲಿ. ಥಾಮಸ್ ವೂಲ್ಫ್ ಎಂಬ ಇಂಗ್ಲೀಷ್ ಲೇಖಕ ತನ್ನ ಪ್ರತಿದಿನದ ಬರವಣಿಗೆಯ ನೇಯ್ಗೆಗೆ ಒಂದು ಮಿತಿ ಹಾಕಿಕೊಂಡಿದ್ದ. ದಿನವೊಂದಕ್ಕೆ 1800 ಪದಗಳಷ್ಟನ್ನು – ಹೆಚ್ಚಾ ಅಲ್ಲ, ಕಡಿಮೆಯೂ ಅಲ್ಲ – ಬರೆಯಬೇಕೆಂಬುದು ಆತ ತನಗೆ ತಾನೇ ಹಾಕಿಕೊಂಡ ಪ್ರತಿಜ್ಞೆ. ಕೆಲವೊಮ್ಮೆ ಕೋಳಿ ಕೂಗುವ ಮೊದಲೇ ಎದ್ದು ಸರಸರನೆ ಬರೆದು ಉಪಾಹಾರದ ಹೊತ್ತಿಗೆ ಆ ಮಿತಿಯನ್ನು ಮುಟ್ಟಿಬಿಟ್ಟನೆಂದರೆ ನಂತರ ಲೇಖನಿಗೆ ಮುಚ್ಚಳ ತೊಡಿಸಿ ಮೀನು ಹಿಡಿಯಲು ಹೋಗಿಬಿಡುತ್ತಿದ್ದನಂತೆ! ರಾತ್ರಿಯಲ್ಲಿ ಅಕ್ಷರಯಜ್ಞ ನಡೆಸುವವರ ಮಾತು ಬಂದಾಗ ಅನಾಯಾಸವಾಗಿ ನೆನಪಾಗುವ ಮತ್ತೂಂದು ಹೆಸರು ನಮ್ಮದೇ ಯಶವಂತ ಚಿತ್ತಾಲರದ್ದು. ಅವರು ಹೆಚ್ಚಾಗಿ ನಸುಕಿನ ಮೂರರ ಜಾವಕ್ಕೆದ್ದು ತನ್ನ ಮನೆಯ ಹಜಾರದಲ್ಲಿ ರುದ್ರ ಗಂಭೀರ ಅರಬ್ಬಿ ಸಮುದ್ರದ ಮೊರೆತಕ್ಕೆದುರಾಗಿ ಕೂತು ತಮ್ಮ ಬರವಣಿಗೆಯನ್ನು ಪ್ರಾರಂಭಿಸುತ್ತಿದ್ದರು. ಅವರ ಬರಹಗಳನ್ನು ಸೂಕ್ಷ್ಮವಾಗಿ ಓದಿದವರಿಗೆ ಆ ಕತ್ತಲೆಯ ವಾಸನೆಯನ್ನು ಗುರುತು ಹಿಡಿಯುವುದಕ್ಕೂ ಪ್ರಾಯಶಃ ಸಾಧ್ಯವಿದೆ.
ಪರ್ವತ ಪ್ರತಿಭೆಗಳ ಬಗ್ಗೆ…
ಕೆಲವರದ್ದು ದೈತ್ಯಪ್ರತಿಭೆ. ಒಂದು ದೊಡ್ಡ ಸಮೂಹ ಅಥವಾ ವಿಶ್ವವಿದ್ಯಾಲಯ ಮಾಡಬಹುದಾದ ಕೆಲಸವನ್ನು ಒಬ್ಬರೇ ನಿರ್ವಹಿಸಿಹೋಗುತ್ತಾರೆ. ಐಸಾಕ್ ಅಸಿಮೋವ್ ಎಂಬ ರಷ್ಯನ್ ಸಂಜಾತ ಅಮೆರಿಕ ಲೇಖಕ ತನ್ನ ಜೀವಮಾನದಲ್ಲಿ ಬರೆದದ್ದು ಬರೋಬ್ಬರಿ 550 ಕೃತಿಗಳಿಗೂ ಹೆಚ್ಚು! ಹೆಚ್ಚು ಬರೆದಷ್ಟೂ ಗುಣಮಟ್ಟ ಕಡಿಮೆ ಎಂಬ ಮಾತಿಗವನೊಂದು ಅಪವಾದ! ಫೌಂಡೇಶನ್, ಐ ರೋಬಾಟ್‌ನಂಥ ಹಲವು ಸ್ಮರಣೀಯ ವೈಜ್ಞಾನಿಕ ಕಾದಂಬರಿಗಳನ್ನು ಕೊಟ್ಟ ಅಸಿಮೋವ್, ಇಂದಿಗೂ ಸಾವಿರಾರು ಜನಸಾಮಾನ್ಯರನ್ನು, ವಿದ್ಯಾರ್ಥಿಗಳನ್ನು, ವಿಜ್ಞಾನಿಗಳನ್ನು ಪ್ರೇರೇಪಿಸುತ್ತಿ¨ªಾನೆ. ಬರವಣಿಗೆಯ ವೇಗ ಮತ್ತು ಅಗಾಧತೆಯ ಉದಾಹರಣೆಗೆ ಅಷ್ಟು ದೂರವೇಕೆ ಹೋಗಬೇಕು, ನಮ್ಮ ಶಿವರಾಮ ಕಾರಂತರೇ ಇಲ್ಲವೆ? ಕೆಲವು ಕಾದಂಬರಿಗಳನ್ನು ಕಾರಂತರು ಬರೆದದ್ದು, ಅಥವಾ ಡಿಕ್ಟೇಶನ್ ಕೊಟ್ಟು ಬರೆಸಿದ್ದು ಕೇವಲ ಐದು ದಿನಗಳಲ್ಲಿ. ಹಾಗೆ ಬರೆಯುವಾಗ ಅಥವಾ ಬರೆಸುವಾಗಲೂ ಅವರದ್ದು ಮಿಲಿಟರಿ ಶಿಸ್ತು. ಇಷ್ಟು ಗಂಟೆಗೆ ಪ್ರಾರಂಭಿಸಬೇಕು ಎಂದು ಸಂಕಲ್ಪಿಸಿದರೆ ಸಾಕು, ಅಕ್ಷರಗಳು ಅವರ ಸೇವಕರಂತೆ ಕುಣಿಕುಣಿಯುತ್ತ ಬಂದು ಸಾಲುಗಳಲ್ಲಿ ಕೂರುತ್ತಿದ್ದವು. ಮಧ್ಯಾಹ್ನ ಹನ್ನೆರಡು ಹೊಡೆಯಿತೋ, “ಪೆನ್ನು ಕೆಳಗಿಡು’ ಎಂಬ ಸೂಚನೆ ಅವರಿಂದ ಲಿಪಿಕಾರರಿಗೆ! ಅದರಾಚೆಗೆ ಸಂಜೆಯವರೆಗೆ ಒಂದಕ್ಷರದ ಬರವಣಿಗೆಯೂ ಇಲ್ಲ! ಕಾರಂತರ ಬರವಣಿಗೆಯೆಂಬ ರಾಕ್ಷಸಶಕ್ತಿಯ ಗುಟ್ಟೇನು ಎಂದು ಪತ್ತೆಹಚ್ಚಹೋದವರಿಗೆ ಕೊನೆಗೆ ಸಿಕ್ಕಿದ್ದು ಆ ಕಾಲದ, ಲೀಟರ್‌ನಷ್ಟು ಹಿಡಿಯಬಲ್ಲ ಕೊಳಗದಂಥ ಲೋಟ. ಅದರಲ್ಲಿ ಕಾರಂತರು ದಿನಾ ಬೆಳಗ್ಗೆ ಭರ್ತಿ ಚಹಾ ತುಂಬಿಸಿ ಹೀರುತ್ತಿದ್ದರಂತೆ! ಹೋನೋ ದೆ ಬಲ್ಜಾಕ್ ಎಂಬ ಫ್ರೆಂಚ್ ಸಾಹಿತಿ ಪ್ರತಿದಿನವೂ 15 ತಾಸುಗಳಷ್ಟು ಎಡೆಬಿಡದೆ ಬರೆಯುತ್ತಿದ್ದವನು, ತನ್ನ ಸಾಮರ್ಥ್ಯದ ಗುಟ್ಟನ್ನು ಹಾಗೆಲ್ಲ ಮುಚ್ಚಿಟ್ಟಿರಲಿಲ್ಲ. ದಿನಕ್ಕೆ 40 ಕಪ್ಪು ಕಾಫಿ ಹೀರುತ್ತೇನೆಂದು ಬಹಿರಂಗವಾಗಿಯೇ ಹೇಳಿಕೊಂಡಿದ್ದ. ಮಾತ್ರವಲ್ಲ, ತನ್ನ ಎಡೆಬಿಡದ ಅಕ್ಷರಯಜ್ಞದ ನಡುವೆ ದ ಪ್ಲೆಷರ್ ಆಂಡ್ ಪೈನ್ ಆಫ್ ಕಾಫಿ (ಕಾಫಿ ಜೊತೆಗಿನ ನೋವು-ನಲಿವು) ಎಂಬ ಪ್ರಬಂಧವನ್ನೂ ಬರೆದು ಕಾಫಿದೇವತೆಗೆ ಋಣ ಸಂದಾಯಿಸಿ¨ªಾನೆ!
ಮಲಗದಂತೆ ಎಚ್ಚರಿರಲು ಚಹಾ-ಕಾಫಿಗಳ ಸಮಾರಾಧನೆ ಮಾಡಿಕೊಂಡು ಬರೆಯುತ್ತಿದ್ದವರು ಒಂದು ಕಡೆಯಾದರೆ ಮಂಚವಿಲ್ಲದೆ ಬರೆಯಲಿಕ್ಕೇ ಆಗುವುದಿಲ್ಲವೆನ್ನುತ್ತಿದ್ದ ವಿಚಿತ್ರ ಮನುಷ್ಯರು ಇನ್ನೊಂದು ಕಡೆ. ಮಾರ್ಕ್ ಟೆÌàನ್, ಜಾರ್ಜ್ ಆರ್ವೆಲ್, ಎಡಿತ್ ವಾರ್ಟನ್, ವೂಡಿ ಅಲೆನ್ ಮುಂತಾದವರು ಮಂಚದಲ್ಲಿ ಕೂತೋ ಮಲಗಿಯೋ ಕೈಗೆ ಪೆನ್ನೆತ್ತಿಕೊಳ್ಳುತ್ತಿದ್ದವರು. ಮಾರ್ಕ್ ಟೆÌàನ್ ಅಂತೂ ಕುರ್ಚಿಯಲ್ಲಿ ಕೂತಾಗೆಲ್ಲ ಮಿದುಳು ಹೆಪ್ಪುಗಟ್ಟಿದಂತಾಗಿ ಮತ್ತೆ ಮಂಚಕ್ಕೊರಗಿದಾಗ ಚಿಂತನೆ ಒಡ್ಡು ತೆರೆದ ಪ್ರವಾಹದಂತೆ ಹರಿದುಬರುವ ವಿಚಿತ್ರವನ್ನು ಪ್ರತಿಸಲವೂ ಅನುಭವಿಸಿದವನು. ಯೂಲಿಸಿಸ್‌ನಂಥ ಪ್ರಸಿದ್ಧ ಕೃತಿ ಕೊಟ್ಟ ಐರಿಷ್ ಕಾದಂಬರಿಕಾರ ಜೇಮ್ಸ್ ಜಾಯ್ಸನಿಗೆ ಮಂಚವಿದ್ದರಷ್ಟೇ ಸಾಲದು, ಬಣ್ಣದ ಪೆನ್ಸಿಲುಗಳೂ ಬೇಕು. ಕತೆ, ಕಾದಂಬರಿ, ಕವಿತೆ ಏನೇ ಇರಲಿ, ಅವೆಲ್ಲವನ್ನೂ ಮಂಚದಲ್ಲಿ ಬೋರಲು ಮಲಗಿ ದೊಡ್ಡ ಕಾಗದ ಹರಡಿ ಬಣ್ಣಬಣ್ಣದ ಪೆನ್ಸಿಲುಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬರೆದು ಮುಗಿಸಿದವನು ಜೇಮ್ಸ್. ಹಾಗೆ ಮಾಡುವುದಕ್ಕೆ ಒಂದು ಕಾರಣ, ಅವನಿಗೆ ಸಮೀಪದೃಷ್ಟಿದೋಷ ಮತ್ತು ಐರಿಟಿಸ್ ಸಮಸ್ಯೆ ಇತ್ತು ಎನ್ನುವುದು. ಕುರ್ಚಿಯಲ್ಲಿ ಕೂತು, ಮಂಚದಲ್ಲಿ ಆರಾಮಾಗಿ ಮಲಗಿ, ಮಾತ್ರವಲ್ಲ ಓಡಾಡುತ್ತ ಬರೆದವರು ಇರುವಂತೆಯೇ ಒಂಟಿಕಾಲ ಕೊಕ್ಕರೆಯಂತೆ ನಿಂತÇÉೇ ತಾಸುಗಟ್ಟಲೆ ನಿಂತು ಬರೆವವರೂ ಇದ್ದರು! ಹೆಮಿಂಗ್ವೇ, ಚಾರ್ಲ್ಸ್ ಡಿಕನ್ಸ್, ಲೂಯಿಸ್ ಕ್ಯಾರಲ್, ಫಿಲಿಪ್ ರಾತ್ ಮುಂತಾದವರೆಲ್ಲ ಈ ಲಂಬಚಿಂತಕರು. ವರ್ಜೀನಿಯಾ ವೂಲ್ಫ್ ಎಂಬ ಲೇಖಕಿ, ಪ್ರತಿದಿನ ಮುಂಜಾನೆ ನಿಖರವಾಗಿ ಎರಡೂವರೆ ತಾಸುಗಳ ಕಾಲ ಮೂರೂವರೆ ಅಡಿ ಎತ್ತರದ ಮೇಜಿನೆದುರು ನಿಂತು ತನ್ನ ಬರಹಗಳನ್ನು ಹೊಸೆಯುತ್ತಿದ್ದಳಂತೆ. ಬಹಳ ಕಾಲದ ಮೇಲೆ, ನಿಂತು ಬರೆಯುವಂತೆಯೇ ಕೂತೂ ಬರೆಯಬಹುದು ಎಂಬ ತಿಳಿವಳಿಕೆ ಅವಳಿಗೆ ಮೂಡಿತು! ಕೂರುವುದು ಎಂದಾಗ ನಾವೆಲ್ಲ ಒಂದೆರಡು ಗಂಟೆಯ ಮಿತಿ ಹಾಕಿಕೊಂಡರೆ ಅದೇ ದೊಡ್ಡದು, ಆದರೆ ಹಲವು ತಿಂಗಳುಗಳುದ್ದಕ್ಕೂ ಕೂತುಬರೆಯುವುದೆಂದರೆ ಅದಕ್ಕೆ ಸಂನ್ಯಾಸಿಯ ತಪಸ್ಸು, ವಿಜ್ಞಾನಿಯ ಸಂಶೋಧನೆ ಅಥವಾ ಸೈನಿಕನ ಕಾವಲುಗಾರಿಕೆಗೆ ಬೇಕಾದ ಉಗ್ರನಿಷ್ಠೆ ಬೇಕು. ಲೇಖಕ ವಿಕ್ಟರ್ ಹ್ಯೂಗೋ ತನ್ನ ಹಂಚ್‌ಬ್ಯಾಕ್ ಆಫ್ ನಾತ್ರೆì ದಾಮ್ ಕಾದಂಬರಿಯನ್ನು ಆರು ತಿಂಗಳಲ್ಲಿ ಬರೆದು ಮುಗಿಸಬೇಕೆಂದು ಶಪಥ ಹಾಕಿಕೊಂಡು, ಹೊರಗೆಲ್ಲೂ ಹೋಗಲು ಸಾಧ್ಯವಾಗದಂತೆ ತನ್ನ ಬಟ್ಟೆಗಳನ್ನೆಲ್ಲ ಅಟ್ಟಕ್ಕೊಗೆದು ಕೇವಲ ಒಂದು ಬೈರಾಸನ್ನು ಸೊಂಟಕ್ಕೆ ಸುತ್ತಿಕೊಂಡು ಮನೆಯೊಳಗೆ ಕೂತಿದ್ದನಂತೆ! ಕಾದಂಬರಿ ಬರೆಯುವುದಕ್ಕೆ ಪ್ರಾರಂಭಿಸುವ ಮೊದಲು ಒಂದು ದೊಡ್ಡ ಪೀಪಾಯಿಯ ತುಂಬ ಶಾಯಿಯನ್ನೂ ಒಂದು ದೊಡ್ಡ ಚೀಲದ ತುಂಬ ಪೇಪರುಗಳನ್ನೂ ತಂದು ತಯಾರಾಗಿಟ್ಟು ನಂತರ ಬರೆಯತೊಡಗಿದನೆಂದು ಕತೆ. ಹಾಗೆ ಸ್ವನಿಯಂತ್ರಣ, ಸ್ವಗೃಹಬಂಧನ ಹಾಕಿಕೊಂಡದ್ದರಿಂದ ಆತನಿಗೆ ತನಗೆ ತಾನೇ ಹಾಕಿಕೊಂಡ ಗಡುವು ಮುಗಿಯುವ ಮೊದಲೇ ಕಾದಂಬರಿಯನ್ನು ಬರೆದು ಮುಗಿಸಲು ಸಾಧ್ಯವಾಯಿತು.
ಬರೆದು ಪ್ರಕಟಿಸಿಕೊಳ್ಳುವ ಪ್ರತಿಯೊಬ್ಬ ಲೇಖಕನೂ, ತನ್ನ ಬರಹ ಆತ್ಮಸಂತೋಷಕ್ಕೆಂದು ಹೇಳಿದರೂ, ಅದನ್ನು ನಾಲ್ಕು ಓದುಗರು ಓದಿ ಮೆಚ್ಚಬೇಕೆಂಬ ಸುಪ್ತ ಆಸೆ, ಗುಪ್ತ ಬಯಕೆಯನ್ನಿಟ್ಟೇ ಬರೆಯುತ್ತಾನೆಂಬುದು ವಾಸ್ತವ. ಹಾಗಾಗಿಯೇ ಬರವಣಿಗೆ ಏಕಕಾಲಕ್ಕೆ ಏಕಾಂತವೂ ಹೌದು ಲೋಕಾಂತವೂ ಹೌದು.
ಬರಹವನ್ನು ಕೃತಕವಾಗಿ ಒಂದಷ್ಟು ಅಲಂಕಾರ, ರೈಲುದ್ದದ ಸಂಕೀರ್ಣ ಶಬ್ದಜಾಲ ತುಂಬಿಸಿ ವೈಭವೀಕರಿಸಿದರೆ, ಕೃತಕ ನಗು ಹೇರಿಕೊಂಡ ಸಮ್ಮಿಶ್ರ ಸರಕಾರದ ನಾಯಕರ ಗ್ರೂಪ್ ಫೋಟೋದಂತೆ, ಅದರ ನಾಟಕೀಯತೆ ಮತ್ತು ಕೃತಕತೆ ಎದ್ದುಕಂಡು ಆಭಾಸವಾಗಬಹುದು. ನವ್ಯದ ಅಬ್ಬರ ಜೋರಾಗಿದ್ದ ಕಾಲದಲ್ಲಿ ಅಂಥ ನಾಟಕೀಯತೆ ವಿಜೃಂಭಿಸಿದ್ದನ್ನು ಮತ್ತು ಅದೇ ಕಾರಣಕ್ಕೆ ಅದು ಅಮೋಘವಾಗಿ ಸೋತದ್ದನ್ನು ನಾವು ಕಂಡಿದ್ದೇವೆ. ಕೆಎಸ್‌ನ ಮತ್ತು ಬೇಂದ್ರೆ ಅತ್ಯಂತ ಸಹಜವಾಗಿ ಬರೆಯುತ್ತಿದ್ದರು. ಅಕ್ಕಿ ಆರಿಸುವಾಗ ಚಿಕ್ಕ ನುಚ್ಚಿನ ನಡುವೆ ಬಂಗಾರವಿಲ್ಲದ ಬೆರಳು ಎನ್ನುವಾಗಾಗಲೀ, ಬಿಸಿ ನೀರಿದೆಯೇ ಮೀನಾ ಮಗುವಿನ ಹಾಲಿನ ಪುಡಿಗೆ? ಬೇಕಾದಷ್ಟಿದೆಯಮ್ಮ, ಕಣ್ಣಲ್ಲೂ ಜೊತೆಗೆ ಎಂಬÇÉಾಗಲೀ, ಕೆಎಸ್‌ನ ಅವರಿಗೆ ಜಗತ್ತಿನ ಯಾರೂ ಕಾಣದ ಬ್ರಹ್ಮಸತ್ಯವನ್ನು ತಾನು ಕಾಣಿಸಬೇಕು, ಅಥವಾ ಕಾಣಿಸುತ್ತಿದ್ದೇನೆ ಎಂಬ ಅಹಂ ಇರಲಿಲ್ಲ. ಒಡಲ ನೂಲಿನಿಂದ ಜೇಡ ಜಾಲ ನೇಯುವಂತೆ ಅವರು ಕವಿತೆ ಕಟ್ಟುತ್ತ ಹೋದರು. ಶ್ರೇಷ್ಠ ಲೇಖಕರ ಶ್ರೇಷ್ಠತೆ ಎಲ್ಲಿದೆ ಎಂದರೆ, ಹೀಗೆ, ಸಾಮಾನ್ಯ ಶಬ್ದಗಳಲ್ಲಿ ಅಸಾಮಾನ್ಯತೆಯನ್ನು ಸೃಷ್ಟಿಸುವುದರÇÉೇ ಇದೆ. ಸುಮಕೆ ಸೌರಭ ಬಂದ ಗಳಿಗೆಯನ್ನು ನಾವು ಹೇಗೆ ಹೇಳಲಾರೆವೋ ಹಾಗೆಯೇ, ಸಾಮಾನ್ಯವೆನ್ನಿಸುವ ಅಕ್ಷರಗಳ ಗುತ್ಛವೊಂದು ಅಸಾಮಾನ್ಯ ಅರ್ಥ-ಭಾವಗಳನ್ನು ಹೇಗೆ ಸು#ರಿಸೀತು, ಆ ಅಸಾಮಾನ್ಯತೆ ಎಲ್ಲಿ ಹೇಗೆ ಅಕ್ಷರಗಳೊಳಗೆ ಸೇರಿಕೊಂಡೀತು ಹೇಳಲಾಗದು. ಅದುವೇ ಅಕ್ಷರದ ಅದ್ಭುತ.
ರೋಹಿತ್ ಚಕ್ರತೀರ್ಥ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.