ಇಲ್ಲದ ದುಡ್ಡಿನ ಜೂಜಾಟ ಡೇ ಟ್ರೇಡಿಂಗ್
Team Udayavani, Jun 12, 2017, 3:28 PM IST
Bulls make money, Bears make money, Pigs get slaughtered…
– An old Wall street saying.
ಗೂಳಿಗಳು ದುಡ್ಡು ಮಾಡುತ್ತಾರೆ, ಕರಡಿಗಳೂ ದುಡ್ಡು ಮಾಡುತ್ತಾರೆ, ಹಂದಿಗಳು ಮಾತ್ರ ಕೊಯ್ಸಿಕೊಳ್ಳುತ್ತವೆ…
– ಒಂದು ಹಳೆಯ ವಾಲ್ ಸ್ಟ್ರೀಟ್ ಮಾತು.
ಮಹಾಭಾರತದಲ್ಲಿ ಧರ್ಮರಾಯ ಜೂಜಿಗೆ ಕೂತು ಸರ್ವಸ್ವನ್ನೂ ಕಳೆದುಕೊಂಡದ್ದು, ಒಂದಲ್ಲ ಎರಡು ಬಾರಿ. ಜೂಜಿನಲ್ಲಿ ತನ್ನ ಎಲ್ಲವನ್ನೂ ಕಳೆದುಕೊಂಡು ಹೆಂಡತಿಯನ್ನೂ ಸೋತಾಗ, ವಸ್ತ್ರಾಪಹರಣ etc, etc.., ನಡೆಯುವುದು ಎರಡನೆಯ ಬಾರಿಯ ಜೂಜಾಟದ ಬಳಿಕ. ಮೊದಲ ಬಾರಿ ಆಟದಲ್ಲಿ ಸೋತ ಧರ್ಮರಾಯನಿಗೆ ಸರ್ವಸ್ವನ್ನೂ ಹಿಂದಿರುಗಿಸಲಾಯಿತು. ಬಳಿಕ, ಸೆಕೆಂಡ್ ಟೈಮ್ ದುರ್ಯೋಧನನು ಜೂಜಿಗೆ ಕರೆದಾಗ ಧರ್ಮರಾಯನಿಗೆ ಇದರಲ್ಲಿ ಮೋಸಹೋಗುವುದು ಖಂಡಿತ ಎಂಬ ವಿಷಯದ ಸುಳಿವಿತ್ತು. ಆದರೂ ಜೂಜಿಗೆ ಕೂತ. ಕೂತು ಸೋತ. The rest is history! ಕೌರವರು ಆತನನ್ನು ಸೋಲಿಸಲು ಆತನ ದೌರ್ಬಲ್ಯವನ್ನು ಚೆನ್ನಾಗಿ ಉಪಯೋಗಿಸಿಕೊಂಡರು. ಧರ್ಮರಾಯ ಜೂಜಿನ ಹುಚ್ಚಿಗೆ ಬಲಿಯಾದ. ಜೂಜಿನ ಆಹ್ವಾನವನ್ನು ತಿರಸ್ಕರಿಸುವುದು ಕ್ಷತ್ರಿಯ ಧರ್ಮವಲ್ಲವಂತೆ! ತನ್ನ ದೌರ್ಬಲ್ಯವನ್ನು ಮರೆಮಾಚಲು ಪ್ರತಿಯೊಬ್ಬ ವ್ಯಕ್ತಿಯೂ ತನ್ನದೇ ಆದ ಸಮರ್ಥನೆಯನ್ನು ಯಾವತ್ತೂ ಕೊಡುತ್ತಲೇ ಇರುತ್ತಾನೆ. ಇದು ಮನುಷ್ಯನ ಸಹಜ ಧರ್ಮ.
ಶೇರು ಮಾರುಕಟ್ಟೆಯೆಂಬ ಆಧುನಿಕ ಜೂಜಿನ ಕಟ್ಟೆಯಲ್ಲೂ ಹೀಗೆಯೇ ಆಗುತ್ತದೆ. ಎಷ್ಟೋ ಜನರಿಗೆ ಅದೊಂದು ವ್ಯಸನ. ದಿನಾ ಬೆಳಗ್ಗೆ ಎದ್ದು ಸ್ನಾನ ಮಾಡಿ, ಟಿಫನ್ ಮಾಡಿ ನಿಷ್ಠೆಯಿಂದ ಹೋಗಿ ಹತ್ತು ಘಂಟೆಯೊಳಗೆಲ್ಲ ಶೇರುಕಟ್ಟೆಯಲ್ಲಿ ಕುಳಿತುಕೊಂಡರೆ ಹೊರ ಬರುವುದು ಮಧ್ಯಾಹ್ನ ಮೂರೂವರೆಗೆ ಮಾರ್ಕೆಟ್ ಬಂದ್ ಆದ ಮೇಲೇನೇ. ಅಲ್ಲಿಯವರೆಗೂ ಸ್ಕ್ರೀನ್ ನೋಡುತ್ತಾ ಶೇರುಗಳ ಏರಿಳತದಲ್ಲಿ ಮೈಮರೆಯುತ್ತಾ ಒಂದು, ಇನ್ನೊಂದೇ ಟ್ರೇಡ್ ಎನ್ನುತ್ತಾ ಅಲ್ಲೇ ಹಿಂಭಾಗವೂರಿ ಕುಳಿತಿರುತ್ತಾರೆ. ಇದೊಂದು ಹುಚ್ಚು. ದುಡ್ಡು ಮಾಡುವುದರಿಂದ ಕಳೆದುಕೊಂಡದ್ದೇ ಜಾಸ್ತಿ. ಆದರೂ ಬಿಡದು ಸ್ಕ್ರೀನ್ ವ್ಯಾಮೋಹ! ಅದಕ್ಕೊಂದು ಅವರದ್ದೇ ಆದ ಸಮರ್ಥನೆ ಇಂತಹ ಪ್ರತಿಯೊಬ್ಬರ ಬಾಯಲ್ಲೂ ಇರುತ್ತದೆ.
ನಾನು ಶೇರು ವಿರೋಧಿಯಲ್ಲ. ಈ ಮಾತನ್ನು ಮೊದಲೂ ಹೇಳಿದ್ದೇನೆ. ಇನ್ನೊಮ್ಮೆ ಈಗ ಹೇಳುತ್ತಿದ್ದೇನೆ. ಕೈಯಲ್ಲಿ ಸ್ವಲ್ಪ ಉಳಿತಾಯದ ಹಣ ಬಂದಂತೆಲ್ಲ ಜಾಗರೂಕತೆಯಿಂದ ಚೆನ್ನಾಗಿ ವಿಶ್ಲೇಷಣೆ ಮಾಡಿಟ್ಟಿದ್ದ ಉತ್ತಮ ಕಂಪೆನಿಯ ಶೇರುಗಳನ್ನು ಕೊಂಡುಕೊಳ್ಳುವುದು ಒಂದು ಸತ್ಕರ್ಮವೇ ಸರಿ. ಉದ್ಯಮವು ಒಂದು ಉತ್ತಮವಾದ ಆರ್ಥಿಕ ಚಟುವಟಿಕೆ ಎಂಬುದರಲ್ಲಿ ಸಂಶಯವೇ ಇಲ್ಲ. ಹಾಗೂ ಶೇರು ಮಾರುಕಟ್ಟೆ ನಮಗೆ ಅದರಲ್ಲಿ ನೇರವಾಗಿ ಭಾಗವಹಿಸುವ ಅವಕಾಶ ಮಾಡಿಕೊಡುತ್ತದೆ. ನಾನು ಭಾಗವಹಿಸುತ್ತೇನೆ ಕೂಡ. ಒಂದು ಉತ್ತಮ ಆರ್ಥಿಕ ವ್ಯವಸ್ಥೆಯಲ್ಲಿ ಪ್ರಬುದ್ಧ ಶೇರು ಮಾರುಕಟ್ಟೆಗೆ ತನ್ನದೇ ಆದಂತಹ ಧನಾತ್ಮಕ ಸ್ಥಾನವಿದೆ. ಅದನ್ನು ನಾನು ಗೌರವಿಸುತ್ತೇನೆ.
ಅಂತೆಯೇ ನಾವುಗಳು ಮಾರುಕಟ್ಟೆಗೆ ಹೋಗಿ ನಮಗೆ ಉತ್ತಮವೆಂದು ಕಂಡ ಶೇರುಗಳನ್ನು ದುಡ್ಡು ಕೊಟ್ಟು ಕೊಂಡುಕೊಳ್ಳುತ್ತೇವೆ. ದುಡ್ಡು ಕೊಟ್ಟ, ಶೇರು ಕೊಂಡ. ಹಾಗೆಯೇ ಬೇಕೆನಿಸಿದಾಗ ಶೇರು ಕೊಟ್ಟ, ದುಡ್ಡು ಕೊಂಡ. ಅಲ್ಲಿಗೆ ಲೆಕ್ಕ ಚುಕ್ತ. ಉಂಡು ಕೈತೊಳೆದಂತೆ. ಇದು ಕ್ಯಾಶ್ ಕೊಟ್ಟು ಶೇರುಗಳನ್ನು ಡೆಲಿವರಿ ತೆಗೆದುಕೊಳ್ಳುವ ಕ್ರಮ. ಇದು ಒಂದು ಹೂಡಿಕೆ ಅಥವ ಇನ್ವೆಸ್ಟ್‌ಮೆಂಟ್. ಆದರೆ ನಾವುಗಳು ಹಾಗೆ ಮಾಡಲು ಹೋದಾಗ ಅಲ್ಲೇ ಪಕ್ಕದಲ್ಲಿ ಇನ್ನೊಂದು ರೀತಿಯ ವ್ಯವಹಾರ ನಡೆಯುವುದು ಕಾಣುತ್ತೇವೆ. ಅದೇನು ಎಂಬ ಕುತೂಹಲ.
ಆ ವ್ಯವಹಾರದಲ್ಲಿ ಶೇರುಗಳ ಡೆಲಿವರಿ ತೆಗೆದುಕೊಳ್ಳುವ ಪ್ರಮೇಯವೇ ಇಲ್ಲ. ಬರೇ ಕೊಡು-ಕೊಳ್ಳುವ ಮಾತುಕತೆ ಮಾತ್ರ ನಡೆಯುತ್ತದೆ. ಆ ದಿನದಲ್ಲಿ ಕೊಂಡದ್ದನ್ನು ಅದೇ ದಿನದಲ್ಲಿ ಮಾರಾಟ ಮಾಡಬೇಕು ಅಷ್ಟೆ. ಅದನ್ನು ಮುಂದಿನ ದಿನಗಳಿಗೆ ಹೊತ್ತುಕೊಂಡು ಹೋಗುವ ಹಾಗಿಲ್ಲ. ಅದೇ ಡೇ ಟ್ರೇಡಿಂಗ್. ಒಂದು ದಿನದ ಒಳಗೆಯೇ ನಡೆಯುವ ವ್ಯವಹಾರ. ಅಲ್ಲದೆ, ಮತ್ತು ಅದಕ್ಕೆ ಪೂರ್ತಿ ಹಣ ಕೊಡುವ ಅಗತ್ಯ ಕೂಡ ಇಲ್ಲ. ಒಟ್ಟು ಮೊತ್ತದ ಸ್ವಲ್ಪ ಭಾಗವನ್ನು ಮಾರ್ಜಿನ್ ಮನಿಯಾಗಿ ಕೊಟ್ಟರೆ ಸಾಕು, ಪೂರ್ಣ ಪ್ರಮಾಣದಲ್ಲೇ ಡೀಲ್ ಮಾಡಬಹುದು.
ಉದಾಹರಣೆಗಾಗಿ, ನಿಮ್ಮಲ್ಲಿ 1000 ರೂ. ಇದೆ ಅಂತ ಇಟ್ಟುಕೊಳ್ಳಿ. ಆಗ ಡೆಲಿವರಿ ಅಥವಾ ಕ್ಯಾಶ್ ಟ್ರೇಡ್‌ನಲ್ಲಿ ನೀವು 1 ರಿಲಾಯನ್ಸ್ ಶೇರನ್ನು ಖರೀದಿಸಬಹುದು, ಯಾಕೆಂದರೆ ಇಂದಿನ ರಿಲಾಯನ್ಸ್ ಮಾರ್ಕೆಟ್ ಬೆಲೆ 1000 ರೂ. ಹಾಗೆ ಮಾಡುವ ಬದಲು, ನೀವು ಸ್ವಲ್ಪ ಅತ್ಲಾಗಿ ಇಣುಕಿ ನೋಡಿದರೆ, ಡೇ ಟ್ರೇಡಿಂಗ್‌ನ ಮಾರ್ಜಿನ್ ಮನಿ ಅದಕ್ಕೆ ಕೇವಲ 20%. ಅಂದರೆ ಕೇವಲ ರೂ. 200ಕ್ಕೆ ನೀವು ಒಂದು ರಿಲಾಯನ್ಸ್ ಖರೀದಿಸಬಹುದು. ಅಥವಾ 1000 ರೂ.ಗಳಲ್ಲಿ 5 ರಿಲಾಯನ್ಸ್ ಖರೀದಿಸಬಹುದು. ಅಂದರೆ ಆ ದಿನ ರಿಲಾಯನ್ಸ್ ಮೇಲೆ ನೀವು 10 ರೂ. ಲಾಭ ಗಳಿಸುವಲ್ಲಿ ಐದು ಪಾಲು ಅಂದರೆ 50 ರೂ. ಲಾಭಗಳಿಸಬಹುದು. ಆಗುವ ಲಾಭದ ಐದು ಪಟ್ಟು ಲಾಭವಾಗುವುದಾದರೆ ಯಾರಿಗೆ ತಾನೇ ಬೇಡ? ಸರಿ, ಟೆಂಪ್ಟೇಷನ್ ಶುರು… ಆದರೆ ಅಪಾಯ ಇರುವುದು ಅಲ್ಲಿಯೇ. ಐದು ಪಟ್ಟು ಲಾಭವಾಗಬಹುದಾದರೆ, ಐದು ಪಟ್ಟು ನಷ್ಟವೂ ಆಗಬಹುದು ಅಲ್ಲವೇ? ಇದನ್ನು ಅರಿಯುವುದು ಬಹಳ ಮುಖ್ಯ. ಲಾಭ – ನಷ್ಟ ಎರಡೂ ಐದು ಪಟ್ಟಾಗಬಹುದು, ಭೂತಗನ್ನಡಿಯ ಅಡಿಯಲ್ಲಿಟ್ಟು ನೋಡಿದಂತೆ. ಈ ರೀತಿಯ ವ್ಯವಹಾರಕ್ಕೆ ವಿತ್ತೀಯ ಗೇರ್ ಇರುವ ವ್ಯವಹಾರ ಅನ್ನುತ್ತಾರೆ.
ಡೆಲಿವರಿ ಆಧಾರಿತ ಕ್ಯಾಶ್ ಟ್ರೇಡ್ ಒಂದು ಟೆಸ್ಟ್ ಮ್ಯಾಚ್ ಆದರೆ ಡೇ ಟ್ರೇಡ್ ಒಂದು ರೀತಿಯ ವನ್ ಡೇ ಇಂಟರ್ನಾಶನಲ್. ವನ್ ಡೇಯ ಎಲ್ಲ ರೋಚಕತೆಯನ್ನೂ ಒಳಗೊಂಡ ಇದು ಬೇಗ ನಮ್ಮನ್ನು ತನ್ನೊಳಗೆ ಸೆಳೆಯುತ್ತದೆ. ಇದು ಅದರ ಆಕರ್ಷಣೆ ಎನ್ನಬಹುದು. ನಮ್ಮ ದೌರ್ಬಲ್ಯ ಎಂದು ಕೂಡ ಹೇಳಬಹುದು. ಅಂತೂ ಇಂತೂ ಇಲ್ಲದ ದುಡ್ಡಿನ ಜೂಜಾಟ ಶುರು. ಅಲ್ಲದೆ, ಅದು ಅಷ್ಟಕ್ಕೇ ನಿಲ್ಲುವುದಿಲ್ಲ. ಇಲ್ಲದ ದುಡ್ಡಿನ ವ್ಯವಹಾರವು ಇಲ್ಲದ ಶೇರಿನಲ್ಲೂ ಮಾಡಬಹುದಾಗಿದೆ.
ವಾಹ್! ಎಂತಹ ಪರಿಕಲ್ಪನೆ! ಇಲ್ಲದ ದುಡ್ಡಿನ, ಇಲ್ಲದ ಶೇರಿನ ವ್ಯವಹಾರ! ಅದು ಹೇಗೆ? ಈಗ ಇನ್ನೊಂದು ಉದಾಹರಣೆ ತಗೊಳ್ಳಿ. ಇವತ್ತು ಬೆಳ್ಳಂಬೆಳಗ್ಗೆ ನಿಮಗೆ ಸ್ವಪ್ನದಲ್ಲಿ ಶ್ರೀಮನ್ನಾರಾಯಯಣ ಬಂದು ‘ಭಕ್ತಾ, ನಿನ್ನ ಭಕ್ತಿಗೆ ಮೆಚ್ಚಿದೆ, ಇಕೋ, ನಿನಗೊಂದು ಆನ್-ದ-ಸ್ಪಾಟ್ ವರ ಸ್ಯಾಂಕ್ಷನ್ ಮಾಡಿದ್ದೇನೆ. ಇವತ್ತು ವಿಪ್ರೋ ಡಮಾರ್… ಅಂತ ಬೀಳುತ್ತೆ. ಸಾಧ್ಯವಾದಷ್ಟು ಹೆಕ್ಕಿಕೋ’ ಎಂದು ನಿಮ್ಮ ಎಡ ಕಿವಿಯಲ್ಲಿ ಊದಿ ಅಂತರ್ಧಾನನಾಗುತ್ತಾನೆ.
ಎಡಗಿವಿಯಲ್ಲಿ ಭಗವಂತ ಊದಿದ್ದು ಸತ್ಯವಾಗಲೇಬೇಕು ತಾನೆ? ಅದು ಶತಮಾನಗಳಿಂದ ನಡೆದುಕೊಂಡು ಬಂದಂತಹ ನಂಬಿಕೆ. ಅದು ಹೇಗೆ ಸುಳ್ಳಾಗಲು ಸಾಧ್ಯ? ನಿಮ್ಮಲ್ಲಿ ವಿಪ್ರೋ ಇಲ್ಲ. ಛೆ, ಛೆ! ಇದ್ದರೆ ಅದು ಬೀಳುವ ಮೊದಲೇ ಮಾರಿಬಿಡಬಹುದಿತ್ತು, ಅಂತ ಅಂದುಕೊಳ್ಳುತ್ತೀರಿ ಅಲ್ವೆ? ಆದರೆ ನಮ್ಮ ಶೇರು ಕಟ್ಟೆಯಲ್ಲಿ ಅದೊಂದು ಪ್ರಾಬ್ಲೆಮೇ ಅಲ್ಲ. ಇಲ್ಲದ ಶೇರನ್ನೂ ಮಾರ್ಜಿನ್ ಮನಿ ಕೊಟ್ಟು ಸೇಲ್ ಮಾಡಬಹುದು. ಸೇಲ್ ಮಾಡಿ ಅದು ಕೆಳಕ್ಕೆ ಇಳಿದ ಮೇಲೆ ಕಡಿಮೆ ಬೆಲೆಗೆ ಖರೀದಿಸಬಹುದು. ಶಾರ್ಟಿಂಗ್ ಅಥವಾ ಶಾರ್ಟ್ ಸೇಲ್ ಅಂದರೆ ಇದೇನೇ. ಕೊಟ್ಟು – ಕೊಂಡ ಅವೆರಡು ಬೆಲೆಗಳ ವ್ಯತ್ಯಾಸವೇ ನಿಮ್ಮ ಲಾಭ. ಅಲ್ಲದೆ ಡೇ ಟ್ರೇಡಿಂಗ್‌ಗೆ ಬ್ರೋಕರೇಜ್ ಕೂಡ ಕನಿಷ್ಟ. ಆಹಾ! ಇದು ಎಂಥ ಲೋಕವಯ್ಯ? ಅದ್ಭುತ! ಇಲ್ಲದ ದುಡ್ಡಿನಲ್ಲಿ ಇಲ್ಲದ ಶೇರನ್ನು ಮಾರಾಟ ಮಾಡಿದರೆ ಲಾಭವೋ ಲಾಭ! ಒಂದು ವೇಳೆ ನಿಮ್ಮ ಕನಸು ನನಸಾಗದೆ ವಿಪ್ರೋ ಮೇಲಕ್ಕೇರಿದರೆ ಮಾತ್ರ ನೀವು ಆ ದಿನ ಕೈ ಸುಟ್ಟುಕೊಳ್ಳುತ್ತೀರಿ. ಹಾಗಾಗಿ, ಯಾವುದೇ ತಾರ್ಕಿಕ ನೆಲೆಯಿಲ್ಲದ, ಆರ್ಥಿಕ ತಳಹದಿಯಿಲ್ಲದ ಶೇರುಗಳ ಎರಾಬಿರ್ರಿಯಾದ ದೈನಂದಿನ ಏರಿಳಿತದ ಮೇಲೆ ಸಮೂಹಸನ್ನಿ ಪೀಡಿತರಾಗಿ ಹಣ ಹೂಡುವುದು ರೇಸ್ ಕುದುರೆಯ ಬಾಲ ಹಿಡಿದೋಡುವುದರಿಂದ ಯಾವ ರೀತಿಯಲ್ಲಿ ಭಿನ್ನ? ಈ ಸಟ್ಟಾ ವ್ಯವಹಾರದ ಹಿಂದೆ ಒಂದು ಭಾರೀ ಸುವ್ಯವಸ್ಥಿತ ಸಿಸ್ಟಮೇ ಇದೆ.
ಎಕ್ಸ್‌ಚೇಂಜುಗಳು, ಬ್ರೋಕರುಗಳು, ಟಿವಿಯಲ್ಲಿ ಅಹರ್ನಿಶಿ ಭವಿಷ್ಯ ನುಡಿಯುವ ಶೇರು ಜೋಯಿಷರು, ಅವರು ತಯಾರಿಸುವ ಟೆಕ್ನಿಕಲ್ ಚಾರ್ಟ್ಸ್ ಎಂಬ ಶೇರು ಕುಂಡಲಿಗಳು… ಇತ್ಯಾದಿ ಇತ್ಯಾದಿ ಭಾರೀ ವ್ಯವಸ್ಥೆಯೇ ಇದರ ಸುತ್ತ ಕೆಲಸ ಮಾಡುತ್ತದೆ. ಇವೆಲ್ಲವೂ ಕಾನೂನಿನ ಚೌಕಟ್ಟಿನೊಳಗೆಯೇ ನಡೆಯುತ್ತದೆ. ಇದೊಂದು ಅಪಾಯಕಾರಿ ಬಿಸಿನೆಸ್. ಆದರೆ ಕಾನೂನುಬಾಹಿರ ಅಲ್ಲ. ಇದು ಟೋಪಿಯಲ್ಲ, ಬೆಂಕಿ! ಅರಿತು ಉಪಯೋಗಿಸಬೇಕು. ಅರಿಯದ ಅಮಾಯಕರು ಅದರ ಬೆಡಗಿಗೆ ಬೆರಗಾಗಿ ಸರಸಕ್ಕಿಳಿದರೆ ಸುಟ್ಟುಹೋಗುವುದು ಗ್ಯಾರಂಟಿ. ಇಲ್ಲಿ, ಗೂಳಿಗಳು ದುಡ್ಡು ಮಾಡುತ್ತಾರೆ, ಕರಡಿಗಳೂ ದುಡ್ಡು ಮಾಡುತ್ತಾರೆ. ಹಂದಿಗಳು ಮಾತ್ರ ಕೊಯ್ಸಿಕೊಳ್ಳುತ್ತಾರೆ! ಆದರೆ, ಬಲ್ಲಿದರು ಹೇಳುತ್ತಾರೆ, ಇದು ಏನೂ ಅಲ್ಲ. ಯಾಕೆಂದರೆ ಬಜಾರಿನಲ್ಲಿ ಇದಕ್ಕಿಂತ ಅತಿಡೇಂಜರಸ್ ಬಿಸಿನೆಸ್ ಇನ್ನೊಂದು ಇದೆ. ಅದೇನೆಂದು ಮುಂದಿನ ವಾರ ನೋಡೋಣ.
– ಜಯದೇವ ಪ್ರಸಾದ ಮೊಳೆಯಾರ ; [email protected]
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.