ನಿಮ್ಮ ಬದುಕು ಬದಲಿಸಲಿದೆ ನಮ್ಮ ಮೆಟ್ರೋ!
Team Udayavani, Jun 13, 2017, 12:45 PM IST
ಬೆಂಗಳೂರು: ನಗರದ ನಾಲ್ಕು ದಿಕ್ಕುಗಳನ್ನು ಹೃದಯಭಾಗಕ್ಕೆ ಸಂಪರ್ಕಿಸುವ “ನಮ್ಮ ಮೆಟ್ರೋ’ ರೈಲು ಯೋಜನೆ ಮುಂದಿನ ದಿನಗಳಲ್ಲಿ ರಾಜಧಾನಿಯ ಸಾಮಾಜಿಕ-ಆರ್ಥಿಕ ವ್ಯವಸ್ಥೆಯ ಬದಲಾವಣೆಗೆ ಪ್ರಮುಖ ಕಾರಣವಾಗಲಿದೆ.
ಪೂರ್ವ-ಪಶ್ಚಿಮ ಮತ್ತು ಉತ್ತರ-ದಕ್ಷಿಣ ಮೆಟ್ರೋ ಕಾರಿಡಾರ್ ಯೋಜನೆಯಿಂದಾಗಿ ಈ ವ್ಯಾಪ್ತಿಯ ಜನರ ವೃತ್ತಿ ಬದುಕು, ಮನರಂಜನೆ, ವಸತಿ, ವ್ಯಾಪಾರ, ಸಾರಿಗೆ, ರಿಯಲ್ ಎಸ್ಟೇಟ್ ಸೇರಿದಂತೆ ಎಲ್ಲ ಹಂತಗಳ ಜೀವನಶೈಲಿಯಲ್ಲಿ ಸಾಕಷ್ಟು ವ್ಯತ್ಯಾಸಗಳು ಆಗಲಿವೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.
ನಗರದ ಕೋರ್ ಏರಿಯಾದಲ್ಲಿಯೇ ಬೀಡುಬಿಡಲು ಇಚ್ಛಿಸುತ್ತಿದ್ದ ಜನ ಈಗ ಹೊರವಲಯದಲ್ಲಿ ಹರಡಿಕೊಳ್ಳಲಿದ್ದಾರೆ. ಇದರಿಂದ ರಿಯಲ್ ಎಸ್ಟೇಟ್ ಮತ್ತೆ ಗರಿಗೆದರುವ ಸಾಧ್ಯತೆ ಇದೆ. ಹೊರವಲಯಗಳಲ್ಲಿ ಭೂಮಿಗೆ ಮತ್ತಷ್ಟು ಬೇಡಿಕೆ ಬರುತ್ತದೆ. ಇದೇ ವೇಳೆ ನಗರದ ಹೃದಯಭಾಗದಲ್ಲಿ ಗಗನಕ್ಕೇರಿರುವ ಮಳಿಗೆಗಳು, ಮನೆಗಳ ಬಾಡಿಗೆ ದರ ತಕ್ಕಮಟ್ಟಿಗೆ ಕಡಿಮೆ ಆಗಲೂಬಹುದು.
ಕಾರಣವಿಷ್ಟೇ, ಸಾರ್ವಜನಿಕರು ಹೊರವಲಯದತ್ತ ಹೋದರೆ ವ್ಯಾಪಾರ-ವಾಣಿಜ್ಯ ಚಟುವಟಿಕೆಗಳೂ ವಿಸ್ತರಿಸಲಿವೆ. ಆಗ ಹೃದಯಭಾಗದಲ್ಲೂ ಕೈಗೆಟಕುವ ದರದಲ್ಲಿ ಬಾಡಿಗೆ ಮನೆಗಳು ದೊರೆಯಬಹುದು. ಉದ್ದೇಶಿತ ಮಾರ್ಗಗಳುದ್ದಕ್ಕೂ ವಾಹನಗಳ ದಟ್ಟಣೆ ತಗ್ಗಲಿದೆ. ಇದರಿಂದ ವಾಯುಮಾಲಿನ್ಯ ತಗ್ಗಲಿದೆ. ಮನರಂಜನಾ ತಾಣಗಳು, ಶಾಪಿಂಗ್ ಮಾಲ್‌ಗಳ ಆಯ್ಕೆ ಕೂಡ ಬದಲಾಗಲಿದೆ. ಇಂತಹ ಹಲವಾರು ಪರಿವರ್ತನೆಗಳಿಗೆ ಬರುವ ಭಾನುವಾರದಿಂದ ಶುರುವಾಗಲಿರುವ 42.4 ಕಿ.ಮೀ. ಉದ್ದದ ಮೆಟ್ರೋ ಮೊದಲ ಹಂತ ಕಾರಣವಾಗಲಿದೆ.
ಪ್ರಸ್ತುತ ಕೆಂಗೇರಿಯಲ್ಲಿರುವ ವ್ಯಕ್ತಿಗೆ ಎಂ.ಜಿ ರಸ್ತೆಗೆ ಕೆಲಸಕ್ಕೆ ಬರಲು ಈಗ ಕನಿಷ್ಠ ಎರಡು ತಾಸು ಬೇಕಾಗುತ್ತದೆ. ವೈಟ್‌ಫೀಲ್ಡ್‌ನಿಂದ ಮೆಜೆಸ್ಟಿಕ್‌ಗೆ ಬರುವವರೂ ಟ್ರಾಫಿಕ್ ಸಮಸ್ಯೆ ಎದುರಿಸುತ್ತಾರೆ. ಹಾಗಾಗಿ, ಬಹುತೇಕರು ದುಬಾರಿಯಾದರೂ ನಗರದ ಹೃದಯಭಾಗದಲ್ಲೇ ಇರಬೇಕಾದ ಅನಿವಾರ್ಯತೆ ಇದೆ. ಜನ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಮೆಜೆಸ್ಟಿಕ್, ಎಂ.ಜಿ.ರಸ್ತೆ, ಇಂದಿರಾನಗರ, ಶಿವಾಜಿನಗರ ಸೇರಿ ಕೇಂದ್ರಸ್ಥಾನಕ್ಕೇ ವಾಣಿಜ್ಯ ಚಟುವಟಿಕೆಗಳು ಸೀಮಿತಗೊಂಡಿವೆ. ಆದರೆ, ಇನ್ಮುಂದೆ ವ್ಯವಸ್ಥೆ ಬದಲಾಗಲಿದೆ.
ಸಕಾರಾತ್ಮಕ ಬದಲಾವಣೆ: “ಮೊದಲ ಹಂತದ “ನಮ್ಮ ಮೆಟ್ರೋ’ ಯೋಜನೆ ನಗರದ ಸಾಮಾಜಿಕ-ಆರ್ಥಿಕ ವ್ಯವಸ್ಥೆಯಲ್ಲಿ ಸಾಕಷ್ಟು ಸಕಾರಾತ್ಮಕ ಬದಲಾವಣೆಗಳಿಗೆ ಕಾರಣವಾಗಲಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಮೆಟ್ರೋ ಸಂಪೂರ್ಣ ಸೇವೆ ಆರಂಭಗೊಂಡ ನಂತರ ರಿಯಲ್ ಎಸ್ಟೇಟ್ ಗರಿಗೆದರಲಿದೆ. ಹೊರವಲಯಗಳಲ್ಲಿ ಭೂಮಿಯ ಬೆಲೆ ಏರಿಕೆಯಾಗಲಿದೆ. ಈಗಾಗಲೇ ಜನ ಅಲ್ಲೆಲ್ಲಾ ಭೂಮಿ ಖರೀದಿ, ಮನೆ ನಿರ್ಮಾಣದಲ್ಲಿ ತೊಡಗಿದ್ದಾರೆ,’ ಎಂಬುದು ಭಾರತೀಯ ವಿಜ್ಞಾನ ಸಂಸ್ಥೆಯ ಮೂಲಸೌಕರ್ಯ, ಸುಸ್ಥಿರ ಸಾರಿಗೆ, ನಗರ ಯೋಜನಾ ಸಂಸ್ಥೆ (ಸಿಐಸಿಎಸ್‌ಟಿಯುಪಿ) ಅಧ್ಯಕ್ಷ ಪ್ರೊ.ಜೆ.ಎಂ. ಚಂದ್ರ ಕಿಶನ್ ಅವರ ಅಭಿಪ್ರಾಯ.
“ಇನ್ನು ಮೆಟ್ರೋ ಎರಡನೇ ಹಂತದ ಯೋಜನೆ ಕೂಡ ಶುರುವಾಗಿದೆ. ಹಾಗಾಗಿ, ಜನವಸತಿ, ಜನರ ಮನರಂಜನಾ ಆಯ್ಕೆಗಳು, ಸಾರಿಗೆ ವ್ಯವಸ್ಥೆಗಳು ಕೂಡ ಬದಲಾಗಲಿವೆ. ಇದೆಲ್ಲವೂ ಭೂಮಾಫಿಯಾ ಮೇಲೆ ಸಹಜವಾಗಿಯೇ ಪರಿಣಾಮ ಬೀರಲಿದೆ. ಈ ಹಿನ್ನೆಲೆಯಲ್ಲಿ ಮೊದಲ ಹಂತ ಸಂಪೂರ್ಣ ಕಾರ್ಯಾರಂಭಗೊಂಡ ನಂತರ ಸಿಐಸಿಎಸ್‌ಟಿಯುಪಿ ಕೂಡ ಉದ್ದೇಶಿತ ಮೆಟ್ರೋ ಮಾರ್ಗದಲ್ಲಿನ ಸಾಮಾಜಿಕ-ಆರ್ಥಿಕ ಬದಲಾವಣೆ ಬಗ್ಗೆ ಅಧ್ಯಯನ ನಡೆಸಲಿದೆ,’ ಎಂದೂ ಪ್ರೊ.ಚಂದ್ರಕಿಶನ್ ಹೇಳಿದ್ದಾರೆ.
ಭೂಮಿ ಬೆಲೆ ಶೇ.20ರಷ್ಟು ಏರಿಕೆ?: “ನೋಟು ರದ್ದತಿ ನಂತರ ರಿಯಲ್ ಎಸ್ಟೇಟ್ ವ್ಯವಹಾರ ಸ್ತಬ್ಧಗೊಂಡಿದೆ. ಮೆಟ್ರೋ ಮೊದಲ ಹಂತ ಪೂರ್ಣಗೊಂಡ ಬೆನ್ನಲ್ಲೇ ರಿಯಲ್ ಎಸ್ಟೇಟ್ ಚಟುವಟಿಕೆಗಳಿಗೆ ಮರುಚಾಲನೆ ದೊರೆಯಲಿದೆ,’ ಎಂದು ಸೇಂಟ್‌ಮಾರ್ಕ್ ರಸ್ತೆಯಲ್ಲಿರುವ ರಾಯಲ್ ರಿಟ್ರೀಟ್ ಹೋಮ್ಸ್ ಪ್ರೈ.ಲಿ.,ನ ವ್ಯವಸ್ಥಾಪಕ ಸಿ.ಕೆ.ಸುರೇಶ್ ಹೇಳುತ್ತಾರೆ.
“ಮೆಟ್ರೋ ಮೊದಲ ಹಂತ ಸಂಪೂರ್ಣವಾಗಿ ಶುರುವಾದ ನಂತರ ನಗರದ ಯಾವುದೇ ಮೂಲೆಯಿಂದ ಕೇವಲ ಅರ್ಧಗಂಟೆಯಲ್ಲಿ ನಗರದ ಹೃದಯಭಾಗವನ್ನು ತಲುಪಬಹುದು. ಹಾಗಾಗಿ, ಸಹಜವಾಗೇ ಜನ ಮೆಟ್ರೋ ಹಾದುಹೋಗುವ ಮಾರ್ಗಗಳ ಸುತ್ತಮುತ್ತ ನೆಲೆಸಲು ಬಯಸುತ್ತಾರೆ. ಪರಿಣಾಮ ನಗರದ ಹೊರವಲಯಗಳಲ್ಲಿ ಭೂಮಿ ಬೆಲೆ ಶೇ.15ರಿಂದ 20ರಷ್ಟು ಏರಿಕೆ ಆಗಬಹುದು,’ ಎಂಬುದು ಸುರೇಶ್ ಅವರ ಅಭಿಪ್ರಾಯ.
ಅಪಘಾತಗಳೂ ತಗ್ಗಲಿವೆ: ಮೆಟ್ರೋ ನಿಲ್ದಾಣಗಳಿಂದ ವ್ಯವಸ್ಥಿತವಾಗಿ ಬಸ್ ಸಂಪರ್ಕ ಸೇವೆ ದೊರೆತರೆ, ಆಟೋ, ಟ್ಯಾಕ್ಸಿಗಳಿಗೂ ಹೊಡೆತ ಬೀಳಲಿದೆ. ಆಗ, ಜನ ಉದ್ದೇಶಿತ ಮಾರ್ಗಗಳಲ್ಲಿ ಸಂಪೂರ್ಣವಾಗಿ ಸಾರ್ವಜನಿಕ ಸಾರಿಗೆ ಮೊರೆಹೋಗುತ್ತಾರೆ. ಆಗ ವಾಹನ ದಟ್ಟಣೆ ಕಡಿಮೆ ಆಗಲಿದ್ದು, ಅಪಘಾತಗಳ ಸಂಖ್ಯೆ ತಗ್ಗಿಸಲಿಕ್ಕೂ ಕಾರಣವಾಗಲಿದೆ. ಎಂದು ಸಾರಿಗೆ ತಜ್ಞರು ವಿವರಿಸುತ್ತಾರೆ.
“ಮೆಟ್ರೋ ರೀತಿಯ ಸಾರಿಗೆ ವ್ಯವಸ್ಥೆ ಉತ್ತಮವಾಗಿರುವ ಪ್ರದೇಶಗಳಲ್ಲಿ ನೆಲೆಸಲು ಜನ ಬಯಸುತ್ತಾರೆ. ಮೆಟ್ರೋ ವ್ಯವಸ್ಥೆಯಿಂದ ಎಲ್ಲ ವರ್ಗದ ಜನರಿಗೆ ಅನುಕೂಲ ಆಗಲಿದೆ. ಸ್ವಂತ ವಾಹನಗಳಿರುವವರೂ ಇನ್ನುಮುಂದೆ ಸಾರ್ವಜನಿಕ ಸಾರಿಗೆಗೆ ಒಗ್ಗಿಕೊಳ್ಳಲಿದ್ದಾರೆ. ಇದು ನಗರದ ಬೆಳವಣಿಗೆಗೆ ಪೂರಕವಾಗಿದೆ,’ ಎನ್ನುತ್ತಾರೆ ನಗರ ತಜ್ಞ ಹಾಗೂ ನಿವೃತ್ತ ಹೆಚ್ಚುವರಿ ಕಾರ್ಯದರ್ಶಿ ಎ. ರವೀಂದ್ರ.
ಇತರೆ ವರ್ಗಗಳನ್ನೂ ಸೆಳೆಯುತ್ತಿದೆ ಮೆಟ್ರೋ: ಆರಂಭದಲ್ಲಿ “ನಮ್ಮ ಮೆಟ್ರೋ’ ಕೇವಲ ಮೇಲ್ಮಧ್ಯಮ ಮತ್ತು ಮಧ್ಯಮ ವರ್ಗಗಳಿಗೆ ಸೀಮಿತವಾಗಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಬಡವರು, ಚಿಲ್ಲರೆ ವ್ಯಾಪಾರಿಗಳನ್ನೂ ಅದು ಸೆಳೆಯುತ್ತಿದೆ. ಬಸ್‌ಗಳಲ್ಲಿ ತೆರಳುತ್ತಿದ್ದ ಕೂಲಿ ಕಾರ್ಮಿಕರು ಈಗ ಮೆಟ್ರೋ ಏರುತ್ತಿದ್ದಾರೆ. ಅಷ್ಟೇ ಅಲ್ಲದೆ, ವಿವಿಧ ಬಡಾವಣೆಗಳಲ್ಲಿ ಚಿಲ್ಲರೆ ವ್ಯಾಪಾರ ಮಾಡುವವರು ಕೂಡ ಮೆಟ್ರೋ ರೈಲುಗಳಲ್ಲಿ ಸಂಚರಿಸುವುದು ಇತ್ತೀಚೆಗೆ ಸಾಮಾನ್ಯವಾಗಿದೆ.
ಇನ್ನು ಮಂಡ್ಯ, ಮೈಸೂರು ಮತ್ತಿತರ ಕಡೆಗಳಿಂದ ಬರುವವರು ಸ್ವಂತ ವಾಹನಗಳಲ್ಲಿ ನಗರಕ್ಕೆ ಬರುವವರ ಸಂಖ್ಯೆ ಹೆಚ್ಚುತ್ತಿದೆ! ಅಂದರೆ, ಮೈಸೂರು ರಸ್ತೆಯಿಂದ ಬರುವವರು ಈ ಮೊದಲು ನಗರದ ಸಂಚಾರದಟ್ಟಣೆ ಕಾರಣಕ್ಕಾಗಿಯೇ ಸ್ವಂತ ವಾಹನಗಳನ್ನು ಬಿಟ್ಟು, ಬಸ್‌ಗಳಲ್ಲಿ ಬರುತ್ತಿದ್ದರು. ಈಗ ಅವರಲ್ಲಿ ಬಹುತೇಕರು ಕಾರು ಅಥವಾ ಬೈಕ್‌ಗಳಲ್ಲಿ ಬಂದು, ಮೈಸೂರು ರಸ್ತೆಯ ಮೆಟ್ರೋ ನಿಲ್ದಾಣದ ಆವರಣದಲ್ಲಿ ವಾಹನ ನಿಲ್ಲಿಸಿ, ರೈಲು ಏರುತ್ತಿದ್ದಾರೆ.
* ವಿಜಯಕುಮಾರ್ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.