ಎಲ್ಲ ತೊರೆದು ಬಂದಾಕೆಗೆ ಪತಿಯಿಂದ ದ್ರೋಹ
Team Udayavani, Jun 14, 2017, 12:43 PM IST
ಬೆಂಗಳೂರು: ವಧು-ವರರ ಅನ್ವೇಷಣೆ ಜಾಹೀರಾತಿನ ಮೂಲಕ ಪರಿಚಯವಾದ ಆ ಯುವಕ ಮತ್ತು ಯುವತಿ, ಎಲ್ಲರ ವಿರೋಧವನ್ನೂ ಮೆಟ್ಟಿ ನಿಂತು ವಿವಾಹವಾಗಿದ್ದರು. ಬೆಂಗಳೂರಿನ ನಂದಿನಿ ಲೇಔಟ್‌ನಲ್ಲಿ ಇಬ್ಬರೂ ಬದುಕು ಕಟ್ಟಿಕೊಂಡಿದ್ದರು. ಪತ್ನಿ ಗರ್ಭವತಿಯೂ ಆಗಿದ್ದಳು. ಈ ನಡುವೆ ಪತಿರಾಯ ತನ್ನೂರಿಗೆ ಹೋಗಿ ಬರುವುದಾಗಿ ಹೇಳಿ ಹೋದವ ಈ ವರೆಗೆ ಪತ್ತೆ ಇಲ್ಲ.
ಅತ್ತ ಅತ್ತೆ ಮನೆ ಕಡೆಯಿಂದಲೂ ತಿರಸ್ಕೃತಳಾಗಿ, ಇತ್ತ ತಾಯಿ ಮನೆಯಿಂದ ನಿರ್ಲಕ್ಷ್ಯಕ್ಕೋಳಗಾಗಿರುವ ಆ ಮಹಿಳೆ ಪತಿಯನ್ನು ಹುಡುಕಿಕೊಡಿರೆಂದು ವನಿತಾ ಸಹಾಯವಾಣಿ ಮೊರೆ ಹೋಗಿದ್ದಾಳೆ. ಪತಿಯಿಂದಲೇ ವಂಚನೆಗೊಳಗಾಗಿರುವ ಯುವತಿ ನಾಲ್ಕು ತಿಂಗಳಿನಿಂದ ಹೊಟ್ಟೆ ಪಾಡಿಗಾಗಿ ಉದ್ಯಾನದಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾಳೆ.
ಆಗಿದ್ದೇನು?: ನಂದಿನಿಲೇ ಔಟ್‌ನ ವ್ಯಕ್ತಿಯೊಬ್ಬರು ತಮ್ಮ ಪುತ್ರಿಗಾಗಿ ವರನ ಹುಡುಕಾಟದಲ್ಲಿದ್ದರು. ಈ ನಡುವೆ ಜಾಹೀರಾತೊಂದರಲ್ಲಿ ಮಂಗಳೂರಿನ ಬಜ್ಪೆ ಮೂಲದ ಯುವಕನ ಫೋಟೋ ಸಹಿತ ಮಾಹಿತಿ ಸಿಕ್ಕಿತ್ತು. ಇದನ್ನು ಗಮನಿಸಿದ ಯುವತಿಯ ತಂದೆ ಜಾಹೀರಾತಿನಲ್ಲಿದ್ದ ಸಂಖ್ಯೆಗೆ ಕರೆ ಮಾಡಿ, ತಮ್ಮ ಪುತ್ರಿಯನ್ನು ಒಂದು ಬಾರಿ ಬಂದು ನೋಡುವಂತೆ ಕೋರಿದ್ದರು. ಅದರಂತೆ ಯುವಕ ಮತ್ತು ಆತನ ಪೋಷಕರು ಬಂದು ಯುವತಿಯನ್ನು ನೋಡಿ ಮಾತುಕತೆ ನಡೆಸಿದ್ದರು.
ಆದರೆ, ಯುವಕನ ಪೋಷಕರಿಗೆ ಯುವತಿ ಇಷ್ಟವಾಗಿರಲಿಲ್ಲ. ಅದರಂತೆ ಯುವತಿಯ ಪೋಷಕರಿಗೆ ಈ ಕುರಿತು ಸಂದೇಶ ರವಾನಿಸಿದ್ದರು. ಆದರೆ, ಯುವತಿ ಮತ್ತು ಯುವಕ ಪರಸ್ಪರ ಇಷ್ಟಪಟ್ಟಿದ್ದರು. ಇಬ್ಬರೂ ಮೊಬೈಲ್ ಸಂಖ್ಯೆ ಪಡೆದು ಮಾತುಕತೆ ಆರಂಭಿಸಿದ್ದರು. ಈ ವೇಳೆ ಇಬ್ಬರಲ್ಲೂ ಪ್ರೇಮಾಂಕುರವಾಗಿದ್ದು, ನಾಲ್ಕು ವರ್ಷ ಪ್ರೀತಿಸಿದ್ದರು. ಅಷ್ಟೇ ಅಲ್ಲ, ಪೋಷಕರ ವಿರೋಧದ ನಡುವೆ ಎರಡು ವರ್ಷ ಹಿಂದೆ ಇಬ್ಬರೂ ಮದುವೆಯಾಗಿದ್ದರು.
ಬಳಿಕ ನಂದಿನಿಲೇಔಟ್‌ನಲ್ಲೇ ಇಬ್ಬರೂ ಪ್ರತ್ಯೇಕ ಮನೆ ಮಾಡಿ ಸಂಸಾರ ಆರಂಭಿಸಿದ್ದರು. ಗಾರ್ಮೆಂಟ್ಸ್‌ವೊಂದರಲ್ಲಿ ಯುವಕ ಕೆಲಸಕ್ಕೆ ಹೋಗುತ್ತಿದ್ದ. ಆಕೆ ಮನೆಯಲ್ಲೇ ಇರುತ್ತಿದ್ದಳು. ವರ್ಷದ ಹಿಂದೆ ಯುವತಿ ಗರ್ಭ ಧರಿಸಿದ್ದಳು. ಈ ನಡುವೆ ಊರಿಗೆ ಹೋಗಿ ಬರುವುದಾಗಿ ಹೇಳಿ ಹೋದ ಯುವಕ ಮತ್ತೆ ವಾಪಸ್ ಬಂದಿಲ್ಲ. ದೂರವಾಣಿ ಕರೆ ಮಾಡಿದರೂ ಸ್ವೀಕರಿಸುತ್ತಿಲ್ಲ. ಆತನ ಪೋಷಕರನ್ನು ವಿಚಾರಿಸಿದರೆ ನಿರ್ಲಕ್ಷ್ಯದ ಉತ್ತರ ಸಿಗುತ್ತಿದೆಯೇ ಹೊರತು ಪತಿಯ ಬಗ್ಗೆ ಮಾಹಿತಿ ಇಲ್ಲ.
ಹೀಗಾಗಿ, ವನಿತಾ ಸಹಾಯವಾಣಿ ಅಧಿಕಾರಿಗಳನ್ನು ಭೇಟಿಯಾಗಿರುವ ಆಕೆ, ಪತಿಯನ್ನು ಹುಡುಕಿಕೊಡಿ ಎಂದು ಮೊರೆಯಿಟ್ಟಿದ್ದಾಳೆ. “ನನ್ನ ಪೋಷಕರು ವೃದ್ಧರು. ಹೀಗಾಗಿ ನನ್ನ ಆರೋಗ್ಯ ನೋಡಿಕೊಳ್ಳಲು ಅವರಿಂದ ಸಾಧ್ಯವಾಗುತ್ತಿಲ್ಲ. ಹೀಗಾಗಿ ಪತಿ ಪತ್ತೆಹಚ್ಚಲು ನೀವೇ ನೆರವಾಗಬೇಕು,’ ಎಂದು ಸಹಾಯವಾಣಿಗೆ ಮನವಿ ಮಾಡಿದ್ದಾಳೆ. ವನಿತಾ ಸಹಾಯವಾಣಿ ಕೇಂದ್ರದ ಅಧಿಕಾರಿಗಳು ಆರ್ಥಿಕವಾಗಿ ಸಹಾಯ ಮಾಡಿದ್ದಾರೆ.
ಲಕ್ಕಸಂದ್ರದಲ್ಲಿರುವ ಸರ್ಕಾರದ ಸ್ವೀಕೃತಿ ಕೇಂದ್ರಕ್ಕೆ ಕಳುಹಿಸಲು ನಿರ್ಧರಿಸಿದ್ದಾರೆ. ಆಕೆಯ ಪತಿಯ ಪತ್ತೆಗಾಗಿ ಬಜ್ಪೆ ಠಾಣೆಗೆ ಮಾಹಿತಿ ಮತ್ತು ದೂರು ನೀಡಿದ್ದಾರೆ. ಜತೆಗೆ ಯುವಕನ ಮನೆ ವಿಳಾಸಕ್ಕೆ ನೋಟಿಸ್ ಜಾರಿ ಮಾಡಿದ್ದಾರೆ. ಆತನ ಪೋಷಕರು ಮಾತ್ರ ಮಗ ಮನೆಯಲ್ಲಿ ಇಲ್ಲ, ಎಲ್ಲಿದ್ದಾನೆ ಎಂಬುದು ಗೊತ್ತಿಲ್ಲ ಎನ್ನುತ್ತಿದ್ದಾರೆ. “ಪತಿಯನ್ನು ಆತನ ಪೋಷಕರೇ ಮುಂಬೈಗೆ ಕಳುಹಿಸಿದ್ದಾರೆ. ಬೇರೆ ಮದುವೆ ಮಾಡಲು ನಿರ್ಧರಿಸಿದ್ದಾರೆ,’ ವಂಚನೆಗೊಳಗಾದ ಯುವತಿ ಆರೋಪಿಸಿದ್ದಾರೆ.
ಮಂಗಳೂರು ಮೂಲದ ಯುವಕನಿಂದ ವಂಚನೆಗೊಳಗಾಗಿರುವ ಬಗ್ಗೆ ಮಹಿಳೆಯೊಬ್ಬರು ದೂರು ನೀಡಿದ್ದಾರೆ. ಈ ಬಗ್ಗೆ ಬಜ್ಪೆ ಠಾಣೆಗೆ ಮಾಹಿತಿ ನೀಡಲಾಗಿದೆ. ಆಕೆ ತುಂಬು ಗರ್ಭಿಣಿಯಾಗಿದ್ದು, ಆಕೆಯ ಆರೈಕೆಗಾಗಿ ಸ್ವೀಕೃತಿ ಕೇಂದ್ರಕ್ಕೆ ಕಳುಹಿಸಲು ವ್ಯವಸ್ಥೆ ಮಾಡಲಾಗಿದೆ.
-ರಾಣಿ ಶೆಟ್ಟಿ, ವನಿತಾ ಸಹಾಯವಾಣಿಯ ಮುಖ್ಯಸ್ಥೆ
* ಮೋಹನ್ ಭದ್ರಾವತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.