ಜನಪ್ರಿಯ ಕಾರ್ಯಕ್ರಮ, ಸಬ್ಸಿಡಿಯಿಂದ ಆರ್ಥಿಕ ಅವ್ಯವಸ್ಥೆ
Team Udayavani, Jun 15, 2017, 11:48 AM IST
ವಿಧಾನಸಭೆ: ಈಗಾಗಲೇ ರಾಜ್ಯ ಸಾಲದ ಸುಳಿಗೆ ಸಿಲುಕಿರುವುದರಿಂದ ಚುನಾವಣೆ ವೇಳೆ ಜನಪ್ರಿಯ ಕಾರ್ಯಕ್ರಮಗಳನ್ನು ಘೋಷಣೆ ಮಾಡಿದರೆ ಮತ್ತು ಸಬ್ಸಿಡಿ ಪ್ರಮಾಣ ಹೆಚ್ಚಿಸಿದರೆ ಆರ್ಥಿಕ ಅವ್ಯವಸ್ಥೆ ಉಂಟಾಗಲಿದೆ ಎಂದು ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್ ಸರ್ಕಾರವನ್ನು ಎಚ್ಚರಿಸಿದ್ದಾರೆ.
ಸಾಲ ಸಿಗುತ್ತದೆ ಎಂಬ ಕಾರಣಕ್ಕೆ ಸಾಲ ಮಾಡಬೇಡಿ ಎಂದು ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಸಲಹೆ ನೀಡು
ತ್ತಿದ್ದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ಬಳಿಕ ದಾಖಲೆ ಪ್ರಮಾಣದಲ್ಲಿ ಸಾಲ ಮಾಡಿ ಪ್ರತಿಯೊಬ್ಬರ
ತಲೆ ಮೇಲೆ ಈಗಾಗಲೇ 32 ರಿಂದ 35 ಸಾವಿರ ಸಾಲದ ಹೊರೆ ಹೊರಿಸಿದ್ದಾರೆ. ಜತೆಗೆ ಎಲ್ಲೆಡೆ ಭ್ರಷ್ಟಾಚಾರ ತಾಂಡವವಾಡುತ್ತಿರುವುದರಿಂದ ಆರ್ಥಿಕ ಸುಧಾರಣೆ ಸಾಧ್ಯವಿಲ್ಲ ಎನ್ನುವ ಪರಿಸ್ಥಿತಿ ಇದೆ. ಇನ್ನೇನು ಚುನಾವಣೆ ಹತ್ತಿರ ಬರುತ್ತಿದ್ದು, ಮತ್ತೆ ಅಧಿಕಾರಕ್ಕೆ ಬರಬೇಕು ಎಂಬ ಕನಸಿನೊಂದಿಗೆ ಆಡಳಿತಾರೂಢ ಪಕ್ಷ ಇನ್ನಷ್ಟು ಜನಪ್ರಿಯ ಘೋಷಣೆ, ಸಬ್ಸಿಡಿಗಳನ್ನು ನೀಡುವ ಸಾಧ್ಯತೆ ಇದೆ. ಹೀಗಾದರೆ ರಾಜ್ಯದ ಆರ್ಥಿಕ ಪರಿಸ್ಥಿತಿ ಅಸ್ತವ್ಯಸ್ತಗೊಳ್ಳಲಿದೆ ಎಂದು ಹೇಳಿದರು.
ಆರ್ಥಿಕ ನಿರ್ವಹಣೆಯಲ್ಲಿ ವಿಫಲ: ಇಲಾಖಾ ಅನುದಾನಗಳ ಬೇಡಿಕೆ ಮೇಲಿನ ಚರ್ಚೆಯಲ್ಲಿ ಬುಧವಾರ ಪಾಲ್ಗೊಂಡು ಮಾತನಾಡಿದ ಅವರು, 2013ರ ವೇಳೆಗೆ 1.12 ಲಕ್ಷ ಕೋಟಿ ಇದ್ದ ರಾಜ್ಯದ ಸಾಲವನ್ನು ಸಿಎಂ ಸಿದ್ದರಾಮಯ್ಯ ಅವರು 2.42 ಲಕ್ಷ ಕೋಟಿಗೆ ಹೆಚ್ಚಿಸಿದ್ದಾರೆ.
ಆರ್ಥಿಕ ನಿರ್ವಹಣೆಯಲ್ಲಿ ಅವರು ವಿಫಲರಾಗಿದ್ದರಿಂದ ಈ ಪರಿಸ್ಥಿತಿ ಬಂದಿದೆ. ಮುಂದೆ ಅಧಿಕಾರಕ್ಕೆ ಬರುವ ಸರ್ಕಾರ
ಇದರ ತೊಂದರೆ ಎದುರಿಸಬೇಕಾಗುತ್ತದೆ ಎಂದರು.
ಯೋಜನೆ ಶ್ವೇತಪತ್ರ ಹೊರಡಿಸಿ: ಜಲ ಸಂಪನ್ಮೂಲ ಇಲಾಖೆ ಕುರಿತಂತೆ ಪ್ರಸ್ತಾಪಿಸಿದ ಅವರು, ಹೇಳಿಕೆ ಮತ್ತು
ಜಾಹೀರಾತುಗಳಿಂದ ನೀರಾವರಿ ಯೋಜನೆಗಳು ಪೂರ್ಣಗೊಳ್ಳುವುದಿಲ್ಲ. ಆದರೆ, ಜಲ ಸಂಪನ್ಮೂಲ ಇಲಾಖೆ ಈ ಕೆಲಸದಲ್ಲೇ ನಿರತವಾಗಿದ್ದು, ಯಾವುದೇ ಯೋಜನೆಗಳನ್ನು ಪೂರ್ಣಗೊಳಿಸಲು ಗಮನಹರಿಸಿಲ್ಲ. ಆದ್ದರಿಂದ ಕಳೆದ 4 ವರ್ಷಗಳಲ್ಲಿ ಎಷ್ಟು ಯೋಜನೆಗಳು ಪೂರ್ಣಗೊಂಡಿವೆ? ಎಷ್ಟು ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ? ಎಷ್ಟು ಕಾಮಗಾರಿಗಳು ಬಾಕಿ ಇವೆ ಎಂಬ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಎಂದು ಆಗ್ರಹಿಸಿದರು.
ಜಿವಿಕೆ ಸಂಸ್ಥೆ ಕಪ್ಪು ಪಟ್ಟಿಗೆ ಸೇರಿಸಲು ಆಗ್ರಹ
ವಿಧಾನಸಭೆ: ಆರೋಗ್ಯ ಇಲಾಖೆ ಆಯುಕ್ತರು ಆದೇಶಿಸಿದ್ದರೂ ಆರೋಗ್ಯ ಸೇವೆ 108 ಆ್ಯಂಬುಲೆನ್ಸ್ ಚಾಲಕರನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳದ ಜಿವಿಕೆ ಸಂಸ್ಥೆ ವಿರುದ್ಧ ಕ್ರಮ ಕೈಗೊಂಡು ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಜಗದೀಶ ಶೆಟ್ಟರ್ ಆಗ್ರಹಿಸಿದ್ದಾರೆ.
ಈ ಹಿಂದೆ ವೇತನ ಹೆಚ್ಚಳ ಮತ್ತಿತರ ಸೌಲಭ್ಯಗಳಿಗೆ ಒತ್ತಾಯಿಸಿ ಮುಷ್ಕರ ನಡೆಸಿದ 674 ಆ್ಯಂಬುಲೆನ್ಸ್ ಚಾಲಕರನ್ನು ಜಿವಿಕೆ ಸಂಸ್ಥೆ ಕೆಲಸದಿಂದ ತೆಗೆದುಹಾಕಿತ್ತು. ಈ ಕುರಿತು ವಿಚಾರಣೆ ನಡೆಸಿದ್ದ ಆಯೋಗ್ಯ ಇಲಾಖೆ ಆಯುಕ್ತ ಸುಭೋದ್ ಯಾದವ್, ಪ್ರಕರಣದಲ್ಲಿ ಚಾಲಕರ ತಪ್ಪು ಇಲ್ಲ. ಆದ್ದರಿಂದ ಅವರನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಬೇಕು ಎಂದು ಆದೇಶಿಸಿದ್ದರು. ಆದರೆ, ಜಿವಿಕೆ ಸಂಸ್ಥೆ ಈ ಆದೇಶವನ್ನು ಪಾಲಿಸುತ್ತಿಲ್ಲ ಎಂದು ಕಿಡಿ ಕಾರಿದರು. ಈ ಕುರಿತು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಆರ್.ವಿ.ದೇಶಪಾಂಡೆ ಭರವಸೆ ನೀಡಿದರು.
ಶೆಟ್ಟರ್-ವಿನಯ್ ಕುಲಕರ್ಣಿ ಜಗಳ
ನೀರಾವರಿ ಇಲಾಖೆ ಬೇಡಿಕೆ ಕುರಿತ ಚರ್ಚೆ ವೇಳೆ ಕಳಸಾ-ಬಂಡೂರಿ ವಿಚಾರ ಪ್ರಸ್ತಾಪವಾಗಿ ಜಗದೀಶ ಶೆಟ್ಟರ್ ಮತ್ತು ಸಚಿವ ವಿನಯ್ ಕುಲಕರ್ಣಿ ಪರಸ್ಪರ ಮಾತಿನ ಚಕಮಕಿಗೆ ಇಳಿದರು. ಚರ್ಚೆ ವೇಳೆ ಕಳಸಾ-ಬಂಡೂರಿ ವಿಚಾರ ಪ್ರಸ್ತಾಪಿಸಿದ ವಿನಯ್ ಕುಲಕರ್ಣಿ, ಪ್ರಧಾನಿ ಮೋದಿ ಮಧ್ಯಪ್ರವೇಶ ಮಾಡಿದ್ದರೆ ಸಮಸ್ಯೆ ಬಗೆಹರಿಯುತ್ತಿತ್ತು. ಆದ್ದರಿಂದ ಸಮಸ್ಯೆಗೆ ಬಿಜೆಪಿ ಕಾರಣ ಎಂದಾಗ, ಸಮಸ್ಯೆಗೆ ಮೂಲ ಕಾರಣವೇ ಕಾಂಗ್ರೆಸ್. ಈ ಹಿಂದೆ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಸಮಸ್ಯೆ ಏಕೆ ಬಗೆಹರಿಸಲಿಲ್ಲ ಎಂದು ಶೆಟ್ಟರ್ ಪ್ರಶ್ನಿಸಿದರು.
ಈ ವಿಚಾರದಲ್ಲಿ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಮಧ್ಯಪ್ರವೇಶಿಸಿದ ಸಿ.ಟಿ.ರವಿ, ಮುಂದಿನ ವರ್ಷ ಕರ್ನಾಟಕದಲ್ಲೂ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಆಗ ನಾವು ಸಮಸ್ಯೆ ಬಗೆಹರಿಸುತ್ತೇವೆ ಎಂದರು .
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.