ಕಾಂಗ್ರೆಸ್ ಗರ್ವಭಂಗ : ಸಭಾಪತಿ ಶಂಕರಮೂರ್ತಿ ಸ್ಥಾನ ಅಬಾಧಿತ
Team Udayavani, Jun 16, 2017, 2:35 AM IST
ಬೆಂಗಳೂರು: ವಿಧಾನ ಪರಿಷತ್ ಸಭಾಪತಿ ವಿರುದ್ಧ ಕಾಂಗ್ರೆಸ್ ಸದಸ್ಯರು ಮಂಡಿಸಿದ್ದ ಅವಿಶ್ವಾಸ ನಿರ್ಣಯ ಒಂದು ಮತದಿಂದ ಸೋಲು ಕಂಡಿದ್ದು, ಡಿ.ಎಚ್. ಶಂಕರಮೂರ್ತಿಯವರನ್ನು ಪದಚ್ಯುತಗೊಳಿಸುವ ಪ್ರಯತ್ನದಲ್ಲಿ ಆಡಳಿತಾರೂಢ ಕಾಂಗ್ರೆಸ್ ಭಾರೀ ಮುಖಭಂಗ ಅನುಭವಿಸಿದೆ. ಜೆಡಿಎಸ್ ಅವಿಶ್ವಾಸ ನಿರ್ಣಯದ ಪರ ಮತ ಹಾಕಬಹುದು ಎಂಬ ಕಾಂಗ್ರೆಸ್ ಪಕ್ಷದ ನಂಬಿಕೆ ಕೊನೆ ಕ್ಷಣದಲ್ಲಿ ಹುಸಿಗೊಂಡಿದ್ದು, ಅವರು ನಿರ್ಣಯದ ವಿರುದ್ಧ ಮತ ಹಾಕಿದ್ದರಿಂದ ಸಭಾಪತಿಯವರನ್ನು ಬದಲಾಯಿಸುವ ಕಾಂಗ್ರೆಸ್ ಕನಸು ಭಗ್ನಗೊಂಡಿತು. ಈ ಮೂಲಕ ಪರಿಷತ್‌ನಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಕಾ ಆಗಿ ಡಿ.ಎಚ್. ಶಂಕರಮೂರ್ತಿ ಸಭಾಪತಿಯಾಗಿ ಹಾಗೂ ಜೆಡಿಎಸ್‌ನ ಮರಿತಿಮ್ಮೇಗೌಡ ಉಪ ಸಭಾಪತಿಯಾಗಿ ಮುಂದುವರಿದಿದ್ದಾರೆ. ಅವಿಶ್ವಾಸ ನಿರ್ಣಯ ಪ್ರಹಸನ ರಾಜಕೀಯವಾಗಿ ತಕ್ಷಣಕ್ಕೆ ಬಿಜೆಪಿಗೆ ಗೆಲುವು ತಂದಿದ್ದರೆ, ಜೆಡಿಎಸ್ ಮುಂದೆ ಲಾಭವಾಗುವ ನಿರೀಕ್ಷೆಯಲ್ಲಿದೆ.
ಅವಿಶ್ವಾಸ ನಿರ್ಣಯದ ಮೇಲೆ ನಡೆದ ಮತದಾನದಲ್ಲಿ ನಿರ್ಣಯದ ಪರ 36 ಮತಗಳು ಬಂದರೆ, ನಿರ್ಣಯದ ವಿರುದ್ಧ 37 ಮತಗಳು ಬಿದ್ದವು. ಹೀಗಾಗಿ ಒಂದು ಮತದ ಅಂತರದಿಂದ ಅವಿಶ್ವಾಸ ನಿರ್ಣಯ ತಿರಸ್ಕೃತಗೊಂಡಿತು. ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ವಿಜಯಪುರ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಗೆದ್ದು ಪಕ್ಷೇತರ ಸದಸ್ಯರಾಗಿ ಗುರುತಿಸಿಕೊಂಡಿರುವ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ವಿಧಾನಸಭೆಯಿಂದ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲದೊಂದಿಗೆ ಗೆದ್ದಿದ್ದ ಬಿಜೆಪಿಯ ಡಿ.ಯು. ಮಲ್ಲಿಕಾರ್ಜುನ್ ಅವಿಶ್ವಾಸ ನಿರ್ಣಯದ ಪರ ಮತ ಹಾಕಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಇಬ್ಬರೂ ಅವಿಶ್ವಾಸ ನಿರ್ಣಯದ ವಿರುದ್ಧ ಮತ ಹಾಕಿದರು.
ಕಾಂಗ್ರೆಸಿನ ವಿ.ಎಸ್. ಉಗ್ರಪ್ಪ, ಶರಣಪ್ಪ ಮಟ್ಟೂರು, ಕೆ.ಸಿ. ಕೊಂಡಯ್ಯ, ಕೆ. ಅಬ್ದುಲ್ ಜಬ್ಟಾರ್, ಎಂ.ಎ. ಗೋಪಾಲಸ್ವಾಮಿ, ಆರ್. ಪ್ರಸನ್ನಕುಮಾರ್ ಹಾಗೂ ಎಚ್.ಎಂ. ರೇವಣ್ಣ ಅವರು ಸಭಾಪತಿ ಡಿ.ಎಚ್. ಶಂಕರಮೂರ್ತಿಯವರನ್ನು ಪದಚ್ಯುತಗೊಳಿಸಲು ಮೇ 30ರಂದು ಅವಿಶ್ವಾಸ ನಿರ್ಣಯ ಸೂಚನೆಯನ್ನು ವಿಧಾನಪರಿಷತ್ತಿನ ಕಾರ್ಯದರ್ಶಿಗೆ ಸಲ್ಲಿಸಿದ್ದರು. ಇದಕ್ಕೆ ಜೂ.13ರಂದು ಸದನ ಅನುಮತಿ ನೀಡಿತ್ತು. ಅದರಂತೆ ಗುರುವಾರ ಅವಿಶ್ವಾಸ ನಿರ್ಣಯವನ್ನು ಮತಕ್ಕೆ ಹಾಕಲಾಯಿತು.
ತಲೆ ಎಣಿಕೆ ಮೂಲಕ ಮತದಾನ
ಪ್ರಶ್ನೋತ್ತರ ಕಲಾಪ ಹಾಗೂ ಶೂನ್ಯ ವೇಳೆ ಬಳಿಕ ಸದಸ್ಯರ ತಲೆ ಎಣಿಸುವ ಮೂಲಕ ಅವಿಶ್ವಾಸ ನಿರ್ಣಯಕ್ಕೆ ಮತದಾನ ನಡೆಸಲಾಯಿತು. ಉಪಸಭಾಪತಿ ಮರಿತಿಬ್ಬೇಗೌಡ, ಮಧ್ಯಾಹ್ನ 1.35ಕ್ಕೆ ಮತದಾನ ಪ್ರಕ್ರಿಯೆ ಆರಂಭಿಸಿದರು. ಮೊದಲು ಸದನದ ನಾಲ್ಕು ಬಾಗಿಲುಗಳನ್ನು ತೆರೆಸಿದ ಉಪಸಭಾಪತಿ, ಮೂರು ನಿಮಿಷಗಳ ಕಾಲ ಬೆಲ್ ಹಾಕಲಾಗುವುದು, ಈ ಅವಧಿಯಲ್ಲಿ ಹೊರಗೆ ಹೋಗಬೇಕಾದವರು ಹೋಗಬಹುದು. ಅದೇ ರೀತಿ ಒಳಬರಬೇಕಾದವರು ಬರಬಹುದು ಎಂದು ಪ್ರಕಟಿಸಿದರು.
ಮೂರು ನಿಮಿಷದ ಬಳಿಕ ಬಾಗಿಲುಗಳನ್ನು ಮುಚ್ಚಲಾಯಿತು. ಬಳಿಕ ಮೊದಲು ನಿರ್ಣಯದ ಪರ ಇದ್ದ ಸದಸ್ಯರ ತಲೆ ಎಣಿಕೆ ಮಾಡಲಾಯಿತು. ಅನಂತರ ವಿರುದ್ಧ ಇದ್ದವರ ಎಣಿಕೆ ಮಾಡಲಾಯಿತು. ನಿರ್ಣಯದ ಪರ 36 ಮತ್ತು ವಿರುದ್ಧ 37 ಮತಗಳು ಬಿದ್ದಿರುವುದರಿಂದ ಅವಿಶ್ವಾಸ ನಿರ್ಣಯ ತಿರಸ್ಕೃತಗೊಂಡಿದೆ ಎಂದು ಉಪಸಭಾಪತಿ ಪ್ರಕಟಿಸಿದರು. ಆಗ ಬಿಜೆಪಿ ಸದಸ್ಯರು ಸದನದಲ್ಲೇ ಸಂಭ್ರಮಿಸಿದರು.
ಎರಡನೇ ಸಾಲಿನಲ್ಲಿ ಶಂಕರಮೂರ್ತಿ
ಸಭಾಪತಿ ಡಿ.ಎಚ್. ಶಂಕರಮೂರ್ತಿ ಅವರ ವಿರುದ್ಧ ಸದನದಲ್ಲಿ ಅವಿಶ್ವಾಸ ನಿರ್ಣಯ ಮಂಡನೆ ಆಗಿದ್ದರಿಂದ ಅವರಿಗೆ ಸದನದ ವಿಪಕ್ಷಗಳ ಕಡೆಯ ಎರಡನೇ ಸಾಲಿನಲ್ಲಿ ಮುಖ್ಯ ಸಚೇತಕ ಕ್ಯಾ. ಗಣೇಶ್ ಕಾರ್ಣಿಕ ಅವರ ಪಕ್ಕದಲ್ಲಿ ಆಸನ ವ್ಯವಸ್ಥೆ ಮಾಡಿಕೊಡಲಾಗಿತ್ತು. ಶೂನ್ಯ ವೇಳೆಯಲ್ಲಿ ವಿಪಕ್ಷಗಳ ಗ್ಯಾಲರಿಯ ಕಡೆ ಇರುವ ಬಾಗಿಲಿನಿಂದ ನೀಲಿ ಬಣ್ಣದ ಸೂಟಿನಲ್ಲಿ ಸದನಕ್ಕೆ ಪ್ರವೇಶಿಸಿದ ಶಂಕರಮೂರ್ತಿ ತಮಗೆ ನಿಗದಿಪಡಿಸಿದ ಜಾಗದಲ್ಲಿ ಆಸೀನರಾದರು. ಸಾಮಾನ್ಯವಾಗಿ ಆ ಆಸನದಲ್ಲಿ ಕುಳಿತುಕೊಳ್ಳುತ್ತಿದ್ದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಕೊನೆಯ ಸಾಲಿನಲ್ಲಿ ತಾತ್ಕಾಲಿಕ ಆಸನದ ವ್ಯವಸ್ಥೆ ಮಾಡಿಕೊಡಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Irrigation Development: ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದಿಂದ ಅನುದಾನ: ವಿ.ಸೋಮಣ್ಣ
Power Prayers: ಡಿಸಿಎಂ ಟೆಂಪಲ್ ರನ್ ವಿಚಾರ; ಎಚ್‌ಡಿಕೆ ವ್ಯಂಗ್ಯ, ಡಿಕೆಶಿ ಪ್ರತ್ಯುತ್ತರ
Name Road Row: ಮೈಸೂರಿನ ರಸ್ತೆಗೆ ನಾಮಕರಣ ವಿಚಾರ; ಗೊಂದಲಗಳಿಗೆ ತೆರೆ ಎಳೆದ ಸಿಎಂ
Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ
SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.