ಶಂಕರ್‌ನಾಗ್ ಕನಸಿನ ಕೂಸು “ನಮ್ಮ ಮೆಟ್ರೋ’, 3 ದಶಕದ ನಂತರ ನನಸು
Team Udayavani, Jun 17, 2017, 12:12 PM IST
ನಮ್ಮ ಮೆಟ್ರೋ ಕಡೆಗೂ ಪೂರ್ಣಗೊಂಡಿದೆ. ಆದರೆ, ಬೆಂಗಳೂರಿನ “ನಮ್ಮ ಮೆಟ್ರೋ’ ಕನಸಿಗೆ 35 ವರ್ಷ. ಸುದೀರ್ಘ ಪಯಣದಲ್ಲಿ ಹಲವು ಪರ-ವಿರೋಧಗಳನ್ನು ಎದುರಿಸಿದೆ. 1982ರಲ್ಲಿ ಮೊಳಕೆಯೊಡೆದ ಮೆಟ್ರೋ ಈಗ ನನಸಾಗಿದೆ. ಇದರ ಬೆಳವಣಿಗೆಯ ಕತೆ ಹೀಗಿದೆ.
ಸಂಚಾರದಟ್ಟಣೆ ಹೆಚ್ಚುತ್ತಿರುವ ಬೆಂಗಳೂರಿಗೆ ಮೆಟ್ರೋ ರೈಲು ತರುವ ವಿಚಾರ ಹೊಳೆದದ್ದು 1982ರಲ್ಲಿ. ಆಗ 293 ಕೋಟಿ ರೂ. ವೆಚ್ಚದಲ್ಲಿ 12.20 ಕಿ.ಮೀ.ನಷ್ಟು ರೈಲು ಓಡಿಸುವ ಚಿಂತನೆ ಇತ್ತು. ಅದೇ ವರ್ಷ ಉಪನಗರದ ಪ್ರಯಾಣಿಕರ ಅನುಕೂಲಕ್ಕಾಗಿ ರಾಜಾಜಿನಗರದಿಂದ ಜಯನಗರದವರೆಗೆ 57.9ಕಿ.ಮೀ. ದೂರದ ಮೊದಲನೇ ಹಂತ ಮತ್ತು ಹಡ್ಸನ್ ವೃತ್ತದಿಂದ ಕೃಷ್ಣರಾಜಪುರದವರೆಗೆ 11.2 ಕಿ.ಮೀ. ಎರಡನೇ ಹಂತದ ವರ್ತುಲ ಮಾರ್ಗದ ನೀಲನಕ್ಷೆ ಸಿದ್ಧಪಡಿಸಿತ್ತು.
ನಂತರ 1988ರಲ್ಲಿ ರೈಟ್ಸ್ ಸಂಸ್ಥೆ ಮತ್ತೂಂದು ಅಧ್ಯಯನ ನಡೆಸಿ, ರೈಲಿನ ಜತೆಗೆ ರಸ್ತೆ ಸಾರಿಗೆ ವ್ಯವಸ್ಥೆ ಅಭಿವೃದ್ಧಿಪಡಿಸಬೇಕು ಎಂದು ಪ್ರಸ್ತಾವ ಸಲ್ಲಿಸಿತು. ಈ ಮಧ್ಯೆ ನಟ ಶಂಕರ್‌ನಾಗ್ ಅವರು ಲಂಡನ್‌ಗೆ ಭೇಟಿ ನೀಡಿ, ಅಲ್ಲಿನ ಮೆಟ್ರೋ ಬಗ್ಗೆ ತಿಳಿದು ಬಂದರು. ಇದನ್ನು ಬೆಂಗಳೂರಿಗೆ ತರುವ ಯೋಚನೆಯನ್ನೂ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸ್ವಂತ ಖರ್ಚಿನಲ್ಲೇ ಲಂಡನ್‌ಗೆ ತೆರಳಿ, ಅಧ್ಯಯನ ಮಾಡಿ ಪ್ರಾಜೆಕ್ಟ್ ಕೂಡ ತಯಾರಿಸಿದ್ದರು.
ದುರಾದೃಷ್ಟವಶಾತ್ ಮುಂದುವರಿಯಲಿಲ್ಲ. ನಂತರ ಯೋಜನೆ ಕನಸು ನೆನೆಗುದಿಗೆ ಬಿದ್ದಿತು. 1994ರಲ್ಲಿ ಸಾಮೂಹಿಕ ತ್ವರಿತ ಸಾಗಾಣಿಕೆ ವ್ಯವಸ್ಥೆ ಅನುಷ್ಠಾನಗೊಳಿಸಲು ಅಂದಿನ ಸರ್ಕಾರ ಬೆಂಗಳೂರು ಮಾಸ್ ರ್ಯಾಪಿಡ್ ಟ್ರಾನ್ಸಿಟ್ ಲಿ.ಯನ್ನು ಸ್ಥಾಪಿಸಿತು. ಈ ಸಂಸ್ಥೆ ರಾಜ್ಯದಲ್ಲಿ ಲಘು ರೈಲು ಸಾರಿಗೆ ವ್ಯವಸ್ಥೆ ಅಳವಡಿಸಬಹುದೇ ಎಂಬ ವಿಷಯವಾಗಿ ಅಭ್ಯಸಿಸಲು ಐಎಲ್ ಆಂಡ್ ಎಫ್ಎಸ್ ಎಂಬ ಸಂಸ್ಥೆಗೆ ವಹಿಸಿತು.
ಯೋಜನೆಯನ್ನು ಆಗಲೇ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ರಿಯಾಯ್ತಿ ದರದಲ್ಲಿ ಸೇವೆ ಆರಂಭಿಸಲು ಉದ್ದೇಶಿಸಿತ್ತು. ಆದರೆ, ಖಾಸಗಿ ಪಾಲುದಾರರು ಹಿಂದೇಟು ಹಾಕಿದರು. ಇದರಿಂದ ಯೋಚನೆ ಮತ್ತು ಯೋಜನೆ ಮತ್ತೆ ಕೆಲ ಕಾಲ ಮೂಲೆ ಸೇರಿದವು. 2003ರಲ್ಲಿ ದೆಹಲಿ ಮೆಟ್ರೋ ರೈಲು ನಿಗಮ ಅಂದಿನ ರಾಜ್ಯ ಸರ್ಕಾರದ ಸೂಚನೆ ಮೇರೆಗೆ 33ಕಿ.ಮೀ. ದೂರದ ಬೆಂಗಳೂರು ಮೆಟ್ರೋ ರೈಲಿನ ರೂಪುರೇಷೆ ಸಿದ್ಧಪಡಿಸಿತು.
ಅನಂತರವೂ ಯೋಜನೆ ಆಮೆ ವೇಗದಲ್ಲೇ ಸಾಗಿತ್ತು. 2005, ಮಾರ್ಚ್‌ನಲ್ಲಿ ರಾಜ್ಯ ಸರ್ಕಾರದ ಹಾಗೂ 2006, ಏಪ್ರಿಲ್‌ನಲ್ಲಿ ಕೇಂದ್ರ ಸರ್ಕಾರದ ಅನುಮೋದನೆ ಸಿಕ್ಕಿತು. 6,395ಕೋಟಿ ರೂ.ವೆಚ್ಚದಲ್ಲಿ ಮೊದಲ ಹಂತದ ಕಾಮಗಾರಿಯ ಕ್ರಿಯಾ ಯೋಜನೆ ಮಾಡಲಾಯಿತು. ನಂತರ ಅದು 11,609ಕೋಟಿ ರೂ.ಗಳಿಗೆ ಪರಿಷ್ಕೃತಗೊಂಡಿತು.
2006ರಲ್ಲಿ ಪ್ರಧಾನಿ ಶಂಕುಸ್ಥಾಪನೆ ಮಾಡಿದ ಬೆನ್ನಲ್ಲೇ 2006ರ ಜೂನ್ 24ರಂದು ಪ್ರಧಾನಿ ಡಾ.ಮನಮೋಹನ್‌ಸಿಂಗ್ ಶಂಕುಸ್ಥಾಪನೆಯನ್ನೂ ನೆರವೇರಿಸಿದರು. ಮೊದಲ ಹಂತವಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿ) 2007ರ ಏಪ್ರಿಲ್ 15ರಂದು ಎಂ.ಜಿ. ರಸ್ತೆಯಿಂದ ಬೈಯ್ಯಪ್ಪನಹಳ್ಳಿ ನಡುವೆ ನಮ್ಮ ಮೆಟ್ರೋ ಕಾಮಗಾರಿ ಕೈಗೆತ್ತಿಕೊಂಡರು.
ಕೈಗೊಂಡ ಕಾಮಗಾರಿ ಪೂರ್ಣಗೊಳಿಸುವಂತೆ ಸರ್ಕಾರ 2010ರ ಮಾರ್ಚ್ ನಲ್ಲಿ ಸಂಸ್ಥೆಗೆ ತಾಕೀತು ಮಾಡಿತು. ಆದರೆ ನಿಗದಿತ ವೇಳೆಯಲ್ಲಿ ಪೂರ್ಣಗೊಳ್ಳಲಿಲ್ಲ. ಸರ್ಕಾರದ ಔದಾರ್ಯ ಕಾಮಗಾರಿ ಮುಂದೆ ಹೋಗುತ್ತಲೇ ಇದ್ದರೂ ಸಂಸ್ಥೆ ಕಾಲಾವಕಾಶ ಕೋರಿದಾಗೆಲ್ಲಾ ಸರ್ಕಾರ ಕೊಡುತ್ತಲೇ ಹೋಯಿತು. ನಿಗಮವೇ ತೆಗೆದುಕೊಂಡ ಗಡುವಿನ ಪ್ರಕಾರ 2013ರಲ್ಲಿ ಮುಗಿಯಬೇಕಿದ್ದ ಯೋಜನೆ ಹಲವು ಕಾರಣಗಳಿಂದ ನಾಲ್ಕು ವರ್ಷ ತಡವಾಗಿ ಸಾಕಾರಗೊಳ್ಳುತ್ತಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.