ನಗೆಯು ಬರುತಿದೆ ಗಣಪನ ಮುಗುಳು ನಗೆ ಮತ್ತು ಭಟ್ಟರ ರಾಕ್ಷಸ ತೃಪ್ತಿ
Team Udayavani, Jun 23, 2017, 3:04 PM IST
ರಾಕ್ಷಸ ತೃಪ್ತಿ ಸಿಕ್ಕಿದೆಯಂತೆ ಯೋಗರಾಜ್ ಭಟ್‌ಗೆ. ಅದಕ್ಕೆ ಎರಡು ಕಾರಣಗಳು. “ಮುಗುಳು ನಗೆ’ ಮೂಡಿಬಂದ ರೀತಿ
ಮತ್ತು ಚಿತ್ರದಲ್ಲಿನ ಗಣೇಶ್ ಅಭಿನಯ. “10 ವರ್ಷಗಳ ನಂತರ ನಾವಿಬ್ಬರೂ ಒಟ್ಟಿಗೆ ಚಿತ್ರ ಮಾಡಿದ್ದೀವಿ. ಈ ಹಿಂದೆ ಮಾಡಿದ್ದನ್ನು ಮೀರಿ ಏನಾದರೂ ಮಾಡಬೇಕಿತ್ತು. ಹಾಗಾಗಿ ಹೊಸ ಪರಿಚಯ ಅಂತಲೇ ಕೆಲಸ ಶುರು ಮಾಡಿದೀವಿ. ಚಿತ್ರೀಕರಣ ಮಾಡ್ತಾ ಮಾಡ್ತಾ, ಗಣೇಶ್ ಬಹಳ ಸರಳವಾಗಿ ನಟಿಸೋದನ್ನ ನೋಡಿ ಆಶ್ಚರ್ಯ ಆಯಿತು. ನಟನೇನ
ಗ್ಲೋಬಲ್ ಲೆವೆಲ್‌ಗೆ ಬಡಿದು ಬಾಯಿಗೆ ಹಾಕಿಕೊಂಡಿದ್ದನ್ನ ನೋಡಿ ಖುಷಿಯಾಯಿತು.
ಅದು ಅಚ್ಚ ಕನ್ನಡದ ಅಭಿನಯ. ಅಲ್ಲೆಲ್ಲೋ ಇಡ್ಲಿ ತಿಂತಿದ್ದ, ಇನ್ನೇನೋ ಮಾಡ್ತಿದ್ದ, ಅವನು ರೆಡಿ ಆಗಿದ್ದಾನಾ … ಅಂತ
ಸಂಶಯ ಆಗೋದು. ಆದರೆ, ಆ್ಯಕ್ಷನ್ ಅಂತ ಅನ್ನುತ್ತಿದ್ದಂತೆ ಫುಲ್ ರೆಡಿಯಾಗಿ ನಿಂತಿರೋನು. ಎಷ್ಟೋ ಸರಿ, ಅವನಿಗೆ ಬರೆದಿದ್ದೇ ಸಾಲದು, ಇನ್ನೂ ಏನಾದರೂ ಬರೀಬೇಕಿತ್ತು ಅನ್ನಿಸೋದು. ಅಷ್ಟು ಚೆನ್ನಾಗಿ ಒಂದು ಸಂಕೀರ್ಣವಾದ ಪಾತ್ರವನ್ನ ಸರಳವಾಗಿ ಮಾಡಿಬಿಟ್ಟ. ನೋಡಿದವರೆಲ್ಲಾ ಅವನನ್ನ ಒಳ್ಳೆಯ ನಟ ಅಂತಿದ್ದಾರೆ. ಅದನ್ನು
ನೋಡಿ ರಾಕ್ಷಸ ತೃಪ್ತಿ ಸಿಗು¤ …’
ಹೀಗೆ ಒಂದೇ ಉಸಿರನಲ್ಲಿ ಹೇಳಿ ಮುಗಿಸಿದರು ಯೋಗರಾಜ್ ಭಟ್. ಅದೆಷ್ಟು ದಿನದಿಂದ ಗಣೇಶ್ ಬಗ್ಗೆ ಹೇಳಬೇಕು ಎಂದು ಕಾಯುತ್ತಿದ್ದರೋ ಗೊತ್ತಿಲ್ಲ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಬೇಸಿಗೆಯಲ್ಲೇ ಪತ್ರಕರ್ತರ ಜೊತೆಗೆ “ಮುಗುಳು ನಗೆ’ ಬಗ್ಗೆ ಮಾತನಾಡಬೇಕಿತ್ತಂತೆ ಅವರು. ಆದರೆ, ಸೆಕೆ ಜಾಸ್ತಿ ಇದ್ದುದರಿಂದ, ಸ್ವಲ್ಪ ಮಳೆ ಬರಲಿ ಎಂದು ಕಾದು, ಅಷ್ಟರಲ್ಲಿ ಚಿತ್ರೀಕರಣ ಮುಗಿಸಿ, ಈಗ ಮಳೆಗಾಲದಲ್ಲೇ ತಮ್ಮ ತಂಡದೊಂದಿಗೆ ಮಾತನಾಡುವುದಕ್ಕೆ ಬಂದಿದ್ದರು ಅವರು.
ಇತ್ತೀಚೆಗೆ ಭಟ್ಟರು, ಒಂದಿಷ್ಟು ಜನರಿಗೆ ಚಿತ್ರವನ್ನ ತೋರಿಸಿದರಂತೆ. ಆ ಪೈಕಿ ಪ್ರಮುಖರು ಎಂದರೆ ನಿರ್ದೇಶಕ ಸೂರಿ. ಚಿತ್ರ ನೋಡಿ ಖುಷಿಯಾದ ಸೂರಿ, ರಾತ್ರಿ ಮೂರರವರೆಗೂ ಮೀಟಿಂಗ್ ಮಾಡಿದರಂತೆ. “ಈ ಚಿತ್ರದಲ್ಲಿ ಆರೇಳು ಕಥೆಗಳನ್ನು ಹೇಳುವುದಕ್ಕೆ ಹೊರಟಿದ್ದೇವೆ. ಅವೆಲ್ಲಾ ಸೇರಿ ಒಂದು ಚಿತ್ರವಾಗಿದೆ. ಎಂದೂ ಅಳದ ಮಗನೊಬ್ಬ ಅಳುವ ಕಥೆ ಇದು. ಯಾವಾಗಲೂ ಮುಗುಳ್ನಗುವ ಹುಡುಗನೊಬ್ಬ, ಚಿತ್ರದ ಕೊನೆಗೆ ಅಳುತ್ತಾನೆ. ಅವನ ಕಣ್ಣಿಂದ ಒಂದು ಹನಿ ನೀರು ಬೀಳುತ್ತೆ. ಅದಕ್ಕೆ ಏನೆಲ್ಲಾ ಕಾರಣವಾಗುತ್ತದೆ ಎನ್ನುವುದೇ ಚಿತ್ರದ ಕಥೆ’ ಎನ್ನುತ್ತಾರೆ ಯೋಗರಾಜ್ ಭಟ್.
ಭಟ್ಟರೇನೋ ಪದೇಪದೇ, ಗಣಪ ಸುಲಭವಾಗಿ ಮಾಡಿದ ಎನ್ನುತ್ತಿದ್ದರು. ಆದರೆ, ಅಷ್ಟು ಸುಲಭವಾಗಿರಲಿಲ್ಲ
ಎನ್ನುತ್ತಾರೆ ಗಣೇಶ್. “ಸರಳವಾಗಿ ಮಾಡಿದ್ದು ನಿಜ. ಆದರೆ, ಬಹಳ ಕಷ್ಟವಾಯ್ತು. ಈ ಸಿನಿಮಾದಲ್ಲಿ ಅಭಿನಯವಾಗಲೀ, ಸಂಭಾಷಣೆಗಳಾಗಲೀ ರಿಪೀಟ್ ಆಗಬಾರದು.
ಸರಳವಾಗಿದ್ದರೂ ಹೊಸದಾಗಿರಬೇಕು. ಬಹಳ ಸುಸ್ತಾಗೋದು. ಬರೀ ಮಾನಸಿಕವಾಗಿಯಷ್ಟೇ ಅಲ್ಲ, ದೈಹಿಕವಾಗಿಯೂ ಬಹಳ ಸುಸ್ತಾಗೋದು. ಅದಕ್ಕೆ ಭಟ್ಟರಿಗೆ ಹೇಳಿದ್ದೀನಿ, ಮುಂದಿನ ಚಿತ್ರವನ್ನ ಸ್ವಲ್ಪ ಸರಳವಾಗಿ ಮಾಡ್ರಿ ಅಂತ. ಅದು ಬಿಟ್ಟರೆ, ಒಂದೊಳ್ಳೆಯ ತಂಡದ ಜೊತೆಗೆ ಒಂದೊಳ್ಳೆಯ ಚಿತ್ರ ಮಾಡಿದ ಖುಷಿ ಇದೆ. ಚಿತ್ರ ನೋಡಿದವರೆಲ್ಲರಿಗೂ ಖುಷಿಯಾಗಿದೆ. ಚಿತ್ರ ನೋಡಿದ ಪ್ರೇಕ್ಷಕರಿಗೂ ಖುಷಿಯಾಗುತ್ತದೆ ಎಂಬ ನಂಬಿಕೆ ಇದೆ’ ಎಂದರು ಗಣೇಶ್. ಅಂದು ಗಣೇಶ್ ಮತ್ತು ಯೋಗರಾಜ್ ಭಟ್ಟರ ಅಕ್ಕ-ಪಕ್ಕ ಮತ್ತು ಹಿಂದೆ ಹಲವರು ಕುಳಿತಿದ್ದರು. ನಿರ್ಮಾಪಕ ಸಯ್ಯದ್ ಸಲಾಂ, ಸಂಗೀತ ನಿರ್ದೇಶಕ ವಿ. ಹರಿಕೃಷ್ಣ, ನಾಯಕಿಯರಾದ ಆಶಿಕಾ ಮತ್ತು ನಿಖೀತಾ ನಾರಾಯಣ್, ವಿತರಕ ಜಾಕ್ ಮಂಜು, ಛಾಯಾಗ್ರಾಹಕ ಸುಜ್ಞಾನ್ ಸೇರಿದಂತೆ ಇನ್ನಷ್ಟು ಮಂದಿ ಮಾತಾಡುವುದಕ್ಕೆ ಬಂದಿದ್ದರು. ನಾಯಕಿಯರಿಬ್ಬರೂ ಗಣೇಶ್ ಮತ್ತು ಭಟ್ಟರ ಜೊತೆಗೆ ಕೆಲಸ ಮಾಡಿದ್ದು ಡ್ರೀಮ್ ಕಂ ಟ್ರೂ ಆಯಿತು ಎಂದರು. ಇನ್ನು, ವಿ. ಹರಿಕೃಷ್ಣ ಈ ಚಿತ್ರಕ್ಕೆ ಎಂಟು ಹಾಡುಗಳನ್ನು ಮಾಡಿದ್ದು, ಪ್ರತಿ ಹಾಡು ಸಹ ಚಿತ್ರದ ಜೊತೆಗೆ ಟ್ರಾವಲ್ ಆಗುತ್ತದೆ ಎಂದರು.
“ಲೈಫು ಇಷ್ಟೇನೇ’ ನಂತರ ಚಿತ್ರ ನಿರ್ಮಿಸಿರುವ ನಿರ್ಮಾಪಕ ಸಯ್ಯದ್ ಸಲಾಂ, “ತುಂಬಾ ಜನ ಕಥೆ ಹೇಳಿದ್ದರು. ಜಾಕ್ ಮಂಜು ಜೊತೆಗಿದ್ದರೆ ಮಾತ್ರ ಸಿನಿಮಾ ಮಾಡುತ್ತೀನಿ ಅಂತ ನಿರ್ಧಾರ ಮಾಡಿದ್ದೆ. ಅದೊಂದು ದಿನ ಜಾಕ್ ಮಂಜು ಬಂದು, ಈ ಚಿತ್ರದ ಬಗ್ಗೆ ಹೇಳಿದರು. ಭಟ್ರಾ ಮತ್ತು ಗಣೇಶ್ ಒಟ್ಟಿಗೆ ಸಿನಿಮಾ ಮಾಡೋದಾದರೆ ಖಂಡಿತಾ ಮಾಡ್ತೀನಿ ಅಂತ ಬಂದೆ. ಚಿತ್ರ ಅದ್ಭುತವಾಗಿ ಬಂದಿದೆ, ಆಗಸ್ಟ್‌ನಲ್ಲಿ ಬಿಡುಗಡೆ’ಎಂದರು.
– ಚೇತನ್ ನಾಡಿಗೇರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.