ಮಳೆ ಮಂತ್ರ
Team Udayavani, Jun 25, 2017, 3:45 AM IST
ಮಳೆ ಮಂತ್ರವೆಂದೇ ಪ್ರಸಿದ್ಧವಾದ ಋಷ್ಯಶೃಂಗರ ಸರಳವಾದ ಮಂತ್ರದಲ್ಲಿ (ವಿಭಾಂಡಕಸುತಃ ಶ್ರೀಮಾನ್ ಶಾಂತಾಪತಿಃ ಅಕಲ್ಮಶಃ | ಋಷ್ಯಶೃಂಗ ಇತಿಖ್ಯಾತಃ ಮಹಾವೃಷ್ಟಿಂ ಪ್ರಯತ್ಛತು||) “ಶ್ರೀಮಾನ್’ ಮತ್ತು “ಅಕಲ್ಮಶ’ ಎರಡು ವಿಶೇಷಣಗಳಿವೆ.
ಶ್ರೀಮಾನ್ ಶಬ್ದವನ್ನು ಎಲ್ಲಾ ಆಮಂತ್ರಣ ಪತ್ರಿಕೆಗಳಲ್ಲಿ, ಪ್ರಚಾರ ಫಲಕಗಳಲ್ಲಿ ರಾರಾಜಿಸುತ್ತೇವೆ. ಶ್ರೀಮಾನ್= ಶೋಭೆಯುಳ್ಳವರು. ನಾವು ಪ್ರತಿಯೊಬ್ಬರೂ ಒಳಗೆ ಶ್ರೀಮಾನ್ ಆಗದೆ ಫ್ಲೆಕ್ಸ್, ಬ್ಯಾನರ್, ಮಾಧ್ಯಮಗಳಲ್ಲಿ ಶ್ರೀಮಾನ್ ಆಗುತ್ತಿದ್ದೇವೆ. ಹೀಗೆ ರಾರಾಜಿಸಿದರೆ ಒಳಗೂ, ಹೊರಗೂ ಮತ್ತೆ ಮತ್ತೆ ಕಲ್ಮಶವೇ ದಾಸ್ತಾನು ಆಗುತ್ತದೆ. ನಾವು ಒಳಗೆ ಶ್ರೀಮಾನ್ ಆಗಿ ರೂಪುಗೊಳ್ಳಲು ಸಾಧ್ಯವೆ ಎಂದು ನೋಡಬಹುದು. ಶ್ರೀಮಾನ್ ಆಗಬೇಕಿದ್ದರೆ ಏನು ಮಾನದಂಡ? ಶೋಭೆ ಬರಬೇಕಾದರೆ ಅಲ್ಲೇ ಮುಂದೆ ಬರುವ “ಅಕಲ್ಮಶ’ ಶಬ್ದದವರಾಗಿರಬೇಕೆಂದು ಹೇಳಬಹುದು. ನಾವು ಆಗಾಗ ನಿಷ್ಕಲ್ಮಶ ಶಬ್ದ ಬಳಸುತ್ತೇವೆ. ಅಕಲ್ಮಶ ಶಬ್ದದ ಬಳಕೆ ಬಹಳ ಕಡಿಮೆ. ಎರಡನ್ನೂ ಒಂದೇ ಅರ್ಥದಲ್ಲಿ ಬಳಸುವುದಾ ದರೂ ಸ್ವಲ್ಪ ವ್ಯತ್ಯಾಸವನ್ನು ಹೇಳಬಹುದು. ಕಲ್ಮಶ ಇದ್ದು ಹೋಗಲಾಡಿಸಿದರೆ ನಿಷ್ಕಲ್ಮಶ; ಕಲ್ಮಶದ ಸಂಪರ್ಕವೇ ಇಲ್ಲದಿದ್ದರೆ ಅಕಲ್ಮಶ !
ಪರಿಸರಮಾಲಿನ್ಯದ ಮೂಲ
ಯಾರೋ ಕೆಲವರ ಹಿತ ಕಾಪಾಡಲು ಉದ್ಯೋಗ, ಐಶಾರಾಮ, ದೇಣಿಗೆ, ಅಂತಸ್ತು ಇದೆಲ್ಲದರ ಹಿಂದಿರುವ ಆದಾಯ ಗಳಿಕೆ ಇತ್ಯಾದಿ ಆಕರ್ಷಣೆಗಳನ್ನು ಮುಂದಿಟ್ಟು ಜನರನ್ನು ತಮ್ಮತ್ತ ಸೆಳೆದು ಪರಿಸರ ಮಾಲಿನ್ಯ ಮಾಡುವುದು ನಡೆಯುತ್ತಿಲ್ಲವೆ? ಮನೆ ಒಳಗೂ, ಹೊರಗೂ ಪ್ಲಾಸ್ಟಿಕ್ ಇತ್ಯಾದಿ ಪರಿಸರ ಮಾಲಿನ್ಯ ಘೋರವಾಗಿ ನಡೆಯುತ್ತಿದ್ದರೂ ಮನಸ್ಸಿಗೆ ಏನೂ ಕಿರಿಕಿರಿ ಆಗದಿದ್ದರೆ ಒಳಗೂ ತುಂಬಿದ ಕಲ್ಮಶದ ಪ್ರಮಾಣವನ್ನು ಗಣಿಸಬಹುದು. ಇದೆಲ್ಲದರ ಪರಿಣಾಮದಿಂದ ಕೇವಲ ವಾತಾವರಣ ಕಲ್ಮಶವಾಗುವುದಲ್ಲ, ನೀರೇ ಇಲ್ಲದ ಅನುಭವ ಬೇಸಗೆಯಲ್ಲಿ ಆಗಿದೆ. ಈಗ ಮಳೆ ಬಂದು ನೀರಾಯಿತು ಎಂದು ಸಮಾಧಾನ ಪಟ್ಟುಕೊಳ್ಳುವಂತಿಲ್ಲ, ವರ್ಷದಿಂದ ವರ್ಷಕ್ಕೆ ನೀರಿನ ಸಮಸ್ಯೆ ಜಾಸ್ತಿಯಾಗುತ್ತಲೇ ಇದೆ.
ಭೂಮಿಯಲ್ಲಿ ನೀರಿದ್ದರಲ್ಲವೆ?
“ನೀರು ಕೊಡುವುದು ಸರಕಾರದ ಹೊಣೆ ಎಂದು ಸಂವಿಧಾನವೇ ಹೇಳಿರುವುದರಿಂದ ಸರಕಾರ ನುಣುಚಿಕೊಳ್ಳಲು ಸಾಧ್ಯವಿಲ್ಲ, ಕೊನೇ ಪಕ್ಷ ಮತ ಗಳಿಸಲು ಬೇಕಾದರೂ ರಾಜಕಾರಣಿಗಳು ನೀರು ಕೊಡುತ್ತಾರೆ’ ಎನ್ನಬೇಡಿ. “ಭೂಮಿಯಲ್ಲಿ ನೀರು ಇದ್ದರೆ ಮಾತ್ರ ಕೊಡಲು ಸಾಧ್ಯ, ಮುಂದೊಂದು ದಿನ ಭೂಮಿಯಲ್ಲಿ ನೀರು ಇಲ್ಲದಾಗ ಸರಕಾರವೂ ಕೈಚೆಲ್ಲಬೇಕಾಗುತ್ತದೆ. 2025ರಲ್ಲಿ ಭಾರತದ ಅತಿ ದೊಡ್ಡ ಸಮಸ್ಯೆ ನೀರಿನ ಸಮಸ್ಯೆಯಾಗುತ್ತದೆ’ ಎಂದು ನೇಶನಲ್ ಜಿಯೋಗ್ರಫಿಕಲ್ ಚಾನೆಲ್ ಎಚ್ಚರಿಸುತ್ತಿದೆ.
ಪರ್ಜನ್ಯ, ಋಷ್ಯಶೃಂಗರ ಮಂತ್ರವಲ್ಲದಿದ್ದರೂ ಮನೆಮನೆಗಳಲ್ಲಿ ಗಿಡ ನೆಟ್ಟಾದರೂ ಪರಿಸರಮಂತ್ರ ಜಪಿಸುವುದನ್ನು ಮರೆಯಬಾರದು, ಈ ಮಂತ್ರಕ್ಕೆ ಸರಕಾರ (ಅರಣ್ಯ ಇಲಾಖೆ) ಸಹಕರಿಸುತ್ತಿದೆ. ಕಳೆದ ವರ್ಷದಂತೆ ರಾಜ್ಯದಲ್ಲಿ ಕೋಟಿ ಸಸಿಗಳನ್ನು ನೆಡುವ ಯೋಜನೆ ಈ ವರ್ಷವೂ ಇದೆ. ಅನೇಕ ಸಂಸ್ಥೆಗಳು ಸೀಡ್‌ಬಾಲ್ ತಯಾರಿಸಿ ವಿತರಿಸುತ್ತಿವೆ. ಇವುಗಳಲ್ಲಿ ಹಣ್ಣು ಬಿಡುವ, ಹೂವು ಬಿಡುವ, ಮೋಪು ಇತ್ಯಾದಿಗಳಿಗೆ ಬಳಕೆಯಾಗುವ ತರಹೇವಾರಿ ಜಾತಿ ಗಿಡಗಳಿವೆ. ಒಂದು ಗಿಡ ನೆಟ್ಟು ಮೂರು ವರ್ಷದವರೆಗೆ ಬದುಕಿಸಿದರೆ ನಾಲ್ಕೈದು ವರ್ಷಗಳಿಂದ 45 ರೂ. ಇನಾಮು ಕೊಡುತ್ತಿದ್ದರೆ ಈ ವರ್ಷ 100 ರೂ. ಇನಾಮು ಕೊಡುವ ಯೋಜನೆ ಅರಣ್ಯ ಇಲಾಖೆಯಿಂದ ನಡೆಯುತ್ತಿದೆ. ಇದಕ್ಕಾಗಿ ಸಮೀಪದ ಇಲಾಖೆಯ ವಲಯ ಕಚೇರಿಗಳನ್ನು ಸಂಪರ್ಕಿಸಬೇಕು. ಕೇವಲ ಜಾಗದ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಿದರೆ ಸಾಕು. ಇಂತಹ ಯೋಜನೆಗಳನ್ನು ಸ್ವಾರ್ಥಕ್ಕಾಗಿಯಾದರೂ ಉಪಯೋಗಿಸಬೇಕು.
– ಮಟಪಾಡಿ ಕುಮಾರಸ್ವಾಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.