ತ್ರಿಭಾಷಾ ಸೂತ್ರವೆಂಬ ಮಗ್ಗುಲ ಮುಳ್ಳು
Team Udayavani, Jun 28, 2017, 3:35 AM IST
ಇಂಗ್ಲಿಷ್ ಕಲಿತು ನಾವೆಲ್ಲಾ ಹೇಗೆ ಇಂಗ್ಲಿಷ್ ದೇಶಗಳ ಸೇವೆ ಮಾಡುತ್ತಿದ್ದೇವೋ ಹಾಗೆಯೇ ನಮಗೆ ಕಡ್ಡಾಯ ಹಿಂದಿ ಕಲಿಸಿ ಹಿಂದಿ ಜನರ ಸೇವೆ ಮಾಡಲು ತಯಾರು ಮಾಡಲಾಗುತ್ತಿದೆ. ಈ ಮೊದಲು ನಮ್ಮನ್ನು ಮೊಘಲರು ಆಳಿದರು, ಆಮೇಲೆ ಬ್ರಿಟೀಷರು, ಇದೀಗ ಹಿಂದಿ ಜನರು ನಮ್ಮನ್ನು ಆಳುತ್ತಿದ್ದಾರೆ. ನಮ್ಮ ಭಾಷೆಯಲ್ಲಿಯೇ ನಮಗೆ ಆಡಳಿತ ಮತ್ತು ಶಿಕ್ಷಣ ಸರಿಯಾಗಿ ದೊರೆಯದ ಇದೆಂತಹ ಸ್ವಾತಂತ್ರ್ಯ?
ಲೋಕಸಭೆಯಲ್ಲಿ ಭಾಷಾ ನೀತಿಯ ಬಗ್ಗೆ 19-ಜುಲೈ-1967ರಂದು ಅಂದಿನ ಕೇಂದ್ರ ಶಿಕ್ಷಣ ಸಚಿವ ಡಾ. ತ್ರಿಗುಣ ಸೇನ್‌ರವರು ಹೇಳಿಕೆ ಕೊಡುತ್ತಾ ಎಲ್ಲ ಮಟ್ಟದಲ್ಲೂ ಮಾತೃಭಾಷೆಯೇ ಶಿಕ್ಷಣ ಮಾಧ್ಯಮವಾಗಿರಬೇಕೆಂಬುದು ತಮ್ಮ ನಂಬಿಕೆ ಎಂದು ಹೇಳಿದರು. ಮಾತೃಭಾಷೆಯ ಮೂಲಕ ಮಾತ್ರ ಪೂರ್ಣವಾಗಿ ಮಗುವಿನ ವ್ಯಕ್ತಿತ್ವದ ವಿಕಸನ ಸಾಧ್ಯವೆಂಬ ಅಭಿಪ್ರಾಯವನ್ನೂ ಅವರು ವ್ಯಕ್ತಪಡಿಸಿದರು. ಮುಂದುವರಿದ ಎಲ್ಲ ರಾಷ್ಟ್ರಗಳಲ್ಲೂ ಮಾತೃಭಾಷೆ ಶಿಕ್ಷಣ ಮಾಧ್ಯಮವಾಗಿದೆಯೆಂದು ನುಡಿದ ಅವರು ನಮ್ಮ ದೇಶದಲ್ಲಿ ಹೆಚ್ಚು ಸಂಖ್ಯೆಯಲ್ಲಿ ಭಾಷೆಗಳಿದ್ದರೂ ಈ ತತ್ವ ಜಾರಿಗೆ ಅದು ಅಡ್ಡಿಯೆಂದು ನಾನು ಭಾವಿಸುವುದಿಲ್ಲ ಎಂದು ಹೇಳಿದ್ದರು. ಆದರೆ ಕೆಲವೇ ದಿನಗಳಲ್ಲಿ ಹಿಂದಿ ಭಾಷಿಕ ನಾಯಕರ ಒತ್ತಡಕ್ಕೆ ಒಳಗಾಗಿ ತ್ರಿಭಾಷ ಸೂತ್ರ ರ¨ªಾಗದೆ ಇನ್ನಷ್ಟು ಬಲಿಷ್ಠ ರೂಪದಲ್ಲಿ ಲೋಕಸಭೆಯಲ್ಲಿ ತಿದ್ದುಪಡಿಯೊಂದಿಗೆ ಜಾರಿಯಾಯಿತು.
ಇಂದು ಜಗತ್ತಿನ ಯಾವುದೇ ದೇಶದಲ್ಲಿ ಎರಡಕ್ಕಿಂತ ಹೆಚ್ಚು ಭಾಷೆಗಳನ್ನು ಶಾಲೆಯಲ್ಲಿ ಕಲಿಸಲಾಗುವುದಿಲ್ಲ. ಉದಾಹರಣೆಗೆ ಇಂಗ್ಲೆಂಡಿನ ಶಾಲೆಗಳಲ್ಲಿ ಶಿಕ್ಷಣ ಮಾಧ್ಯಮ ಅವರ ಮಾತೃಭಾಷೆ ಇಂಗ್ಲಿಷ್‌ನಲ್ಲಿ ಇದ್ದು, 9ನೇ ತರಗತಿಯ ಮೇಲಷ್ಟೇ ಎರಡನೆ ಭಾಷೆಯಾಗಿ ಜರ್ಮನ್, ಸ್ಪಾನಿಷ್ ಅಥವಾ ಇನ್ನಾವುದೇ ಭಾಷೆಯನ್ನು ಕಲಿಸಲಾಗುತ್ತದೆ. ಭಾರತದಿಂದ ಇಂಗ್ಲೆಂಡಿಗೆ ವಲಸೆ ಹೋದ ಕೆಲ ಗೆಳೆಯರು ನನ್ನೊಂದಿಗೆ ಕೆಲವು ಮಹತ್ವದ ವಿಚಾರಗಳನ್ನು ಹಂಚಿಕೊಂಡರು. ಭಾರತೀಯರಾಗಲಿ ಅಥವಾ ಬೇರೆ ದೇಶದ ನಾಗರಿಕರಾಗಲಿ ಅವರ ಮಕ್ಕಳು ಇಂಗ್ಲೆಂಡಿನ ಶಾಲೆಗಳಲ್ಲಿ ಕಲಿಯುವಾಗ, ಮಕ್ಕಳ ಜೊತೆ ಮನೆಯಲ್ಲಿ ಇಂಗ್ಲಿಷ್‌ನಲ್ಲಿಯೇ ಮಾತನಾಡಲು ಸಲಹೆ ಕೊಡುತ್ತಾರೆ. ಇನ್ನೊಂದು ಭಾಷೆಯಲ್ಲಿ ಮಾತನಾಡಿಸಿದರೆ ಮಕ್ಕಳಿಗೆ ಅನಾವಶ್ಯಕ ಗೊಂದಲ ಆಗಿ ಪಾಠ ತಲೆಗೆ ಹತ್ತುವುದಿಲ್ಲ ಎಂದು ಪೋಷಕರಿಗೆ ತಿಳಿ ಹೇಳುತ್ತಾರೆ. ಹೀಗಾಗಿ ಬಹುತೇಕ ವಲಸಿಗರ ಮಕ್ಕಳು ಅಲ್ಲಿ ಹೋದ ತಕ್ಷಣ ಅಲ್ಪಸ್ವಲ್ಪ ಬರುತ್ತಿದ್ದ ತಮ್ಮ ಮಾತೃಭಾಷೆಯನ್ನು ಬೇಗನೇ ಮರೆತುಬಿಡುತ್ತಾರೆ. ಇಲ್ಲಿ ಗಮನಿಸಬೇಕಾದ ಸಂಗತಿಯೇನೆಂದರೆ ಜಗತ್ತಿನೆÇÉೆಡೆ ಮಕ್ಕಳಿಗೆ ಎರಡನೇ ಭಾಷೆ ಹೊರೆಯೆಂದು ಪರಿಗಣಿಸಲಾಗುತ್ತದೆ. ಆದರೆ ನಮ್ಮ ದೇಶದಲ್ಲಿ ಮಾತ್ರ ಮಕ್ಕಳಿಗೆ ಮೂರು ಭಾಷೆಗಳನ್ನು ಕಲಿಸಬೇಕೆಂಬ ನಿಯಮ ಮಾಡುವುದು ಎಷ್ಟು ಸರಿ? ವಿಶ್ವಸಂಸ್ಥೆಯ ಅಂಗ ಸಂಸ್ಥೆಯಾದ ಯುನೆಸ್ಕೋ ಕೂಡ ಎರಡನೇ ಭಾಷೆಯನ್ನು 5 ಅಥವಾ 6ನೇ ತರಗತಿಯಿಂದ ಕಲಿಸಲು ಸಲಹೆ ಕೊಡುತ್ತದೆ. 1970ರ ದಶಕದಲ್ಲಿ ನಾವು ಕಲಿತಿದ್ದೂ ಕೂಡ ಹೀಗೆಯೇ. ನಾವು 5ನೇ ತರಗತಿಯಿಂದ ಇಂಗ್ಲಿಷನ್ನು ಕಲಿತಿದ್ದು ಯಾವುದೇ ತೊಂದರೆ ಆಗಲಿಲ್ಲ. ಹಿಂದಿ ಭಾಷೆ ಆಗ 8 ರಿಂದ 10ನೆ ತರಗತಿವರೆಗೆ ಇದ್ದು ಅದಕ್ಕೆ ಕೇವಲ 50 ಅಂಕದ ಪರೀಕ್ಷೆಯಿತ್ತು. ಈಗ 6ನೇ ತರಗತಿಗೆ ಶುರು ಮಾಡಿ 10ನೇ ತರಗತಿವರೆಗೆ ಪರೀಕ್ಷೆಯ ಅಂಕಗಳನ್ನು 100ಕ್ಕೆ ಏರಿಸಲಾಗಿದೆ. ಆಗಿನಿಂದ ಈಗಿನವರೆಗೆ ಮೂರನೇ ಭಾಷೆಯಾಗಿ ಹಿಂದಿಯನ್ನು ಕಡ್ಡಾಯವಾಗಿ ಕಲಿಸಲಾಗುತ್ತಿರುವುದರಿಂದ ಮಕ್ಕಳಿಗೆ ಹೊರೆಯಾಗಿ ಅತ್ತ ಇಂಗ್ಲಿಷನ್ನೂ ಸರಿಯಾಗಿ ಕಲಿಯಲು ಆಗತ್ತಿಲ್ಲ. ಸರ್ಕಾರಿ ಶಾಲೆಗಳಲ್ಲಿ ಮೂರನೇ ಭಾಷೆಯಾಗಿ ಹಿಂದಿ ಕಡ್ಡಾಯ ಇದ್ದರೆ, ಕೆಲವೇ ಖಾಸಗಿ ಶಾಲೆಗಳು ಸಂಸ್ಕೃತವನ್ನೋ ಅಥವಾ ಮತ್ತೂಂದು ಭಾಷೆಯನ್ನೋ ಮೂರನೇ ಭಾಷೆಯಾಗಿ ಕಲಿಸುತ್ತಿವೆ. ಹಿಂದಿಯಾಗಲಿ ಅಥವಾ ಇನ್ನೊಂದು ಭಾಷೆಯಾಗಲಿ, ಅವುಗಳನ್ನು ಕಲಿಯಲು ಇಷ್ಟಪಡುವವರು ಅಥವಾ ಆವಶ್ಯಕತೆ ಇರುವವರು ಶಾಲೆಯ ಹೊರಗಡೆ ಕಲಿಯುವುದು ಉತ್ತಮ. ತಮಿಳುನಾಡಿನ ಶಾಲೆಗಳಲ್ಲಿ ಹಿಂದಿಯನ್ನು ಯಾವ ಹಂತದಲ್ಲೂ ಕಲಿಸಲಾಗುತ್ತಿಲ್ಲ. ಅಲ್ಲಿ ಐಸಿಎಸ್‌ಇಯಲ್ಲಿ ಮೂರನೇ ಭಾಷೆ ಇಲ್ಲ, ಸಿಬಿಎಸ್‌ಇಯಲ್ಲಿ ಕೂಡ ಮೂರನೇ ಭಾಷೆ ಕೇವಲ 6,7,8ನೇ ತರಗತಿಗಳಿಗೆ ಮಾತ್ರ ಸೀಮಿತವಾಗಿದೆ. ಸಿಬಿಎಸ್‌ಇಯಲ್ಲಿ ಇದುವರೆಗೆ 9 ಮತ್ತು 10ನೇ ತರಗತಿಗಳಿಗೆ ಕೇವಲ 5 ವಿಷಯಗಳು ಇದ್ದವು. ಆದರೆ ಇನ್ನು ಮುಂದೆ 2017 -18ನೇ ಶೈಕ್ಷಣಿಕ ವರ್ಷದಿಂದ ರಾಷ್ಟ್ರೀಯ ಕೌಶಲ ಅರ್ಹತಾ ಚೌಕಟ್ಟು ಯೋಜನೆಯಡಿ 6ನೇ ವಿಷಯವಾಗಿ ಯಾವುದಾದರೊಂದು ವೃತ್ತಿಶಿಕ್ಷಣ ವಿಷಯ ಕಡ್ಡಾಯ ಮಾಡಲು ನಿರ್ಧರಿಸಲಾಗಿದೆ. ಆದರೆ ಈ ವಿಷಯದ ಪರೀಕ್ಷೆಯ ಅಂಕಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ. ಆ ವೃತ್ತಿಶಿಕ್ಷಣ ವಿಷಯಗಳು ಈ ರೀತಿ ಇವೆ: ಚಿಲ್ಲರೆ ವ್ಯಾಪಾರ, ಮಾಹಿತಿ ತಂತ್ರಜ್ಞಾನ, ಭದ್ರತೆ, ಅಟೊಮೊಬೈಲ…, ಹಣಕಾಸು ವಹಿವಾಟು, ಪ್ರವಾಸೋದ್ಯಮ, ಸೌಂದರ್ಯ ಮತ್ತು ನೆಮ್ಮದಿ, ಮೂಲಭೂತ ಕೃಷಿ, ಆಹಾರ ಉತ್ಪಾದನೆ, ಕಚೇರಿ ನಿರ್ವಹಣೆ, ಬ್ಯಾಂಕಿಂಗ್ ಮತ್ತು ಇನುÏರನ್ಸ್, ಮಾರುಕಟ್ಟೆ ಮಾರಾಟ ಹಾಗೂ ಅರೋಗ್ಯ ಸೇವೆ.
ದೇಶದೆಲ್ಲೆಡೆ ಹಿಂದಿ ಹೇರಿಕೆ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ನಮ್ಮ ಕೆಲ ವರ್ಗದ ಜನರು ಹಿಂದಿ ಕಲಿತ ಮಾತ್ರಕ್ಕೆ ಹಿಂದಿ ಹೇರಿಕೆಯನ್ನು ಇಂದು ವಿರೋಧಿಸುತ್ತಿಲ್ಲ. ಹಿಂದಿ ಅವರ ಹೃದಯವನ್ನು ಆಕ್ರಮಿಸಿಕೊಂಡಿದೆ! ಎಲ್ಲ ರಾಜ್ಯಗಳ ಭಾಷೆ ಮತ್ತು ಸಂಸ್ಕೃತಿಯ ಮೇಲೆ ಹಿಂದಿ ಭಾಷೆ ಮತ್ತು ಸಂಸ್ಕೃತಿಯ ದಬ್ಟಾಳಿಕೆ ಎದ್ದು ಕಾಣುತ್ತಿದೆ. ಬ್ರಿಟಿಷ್‌ರಾಜ್ ಹೋಗಿ ಹಿಂದಿರಾಜ್ ಪ್ರತಿಷ್ಠಾನವಾಗಿದೆ. ಇಂಗ್ಲಿಷ್ ಕಲಿತು ನಾವೆಲ್ಲಾ ಹೇಗೆ ಇಂಗ್ಲಿಷ್ ದೇಶಗಳ ಸೇವೆ ಮಾಡುತ್ತಿದ್ದೇವೋ ಹಾಗೆಯೇ ನಮಗೆ ಕಡ್ಡಾಯ ಹಿಂದಿ ಕಲಿಸಿ ಹಿಂದಿ ಜನರ ಸೇವೆ ಮಾಡಲು ತಯಾರು ಮಾಡಲಾಗುತ್ತಿದೆ. ಈ ಮೊದಲು ನಮ್ಮನ್ನು ಮೊಘಲರು ಆಳಿದರು, ಆಮೇಲೆ ಬ್ರಿಟೀಷರು, ಇದೀಗ ಹಿಂದಿ ಜನರು ನಮ್ಮನ್ನು ಆಳುತ್ತಿದ್ದಾರೆ. ನಮ್ಮ ಭಾಷೆಯಲ್ಲಿಯೇ ನಮಗೆ ಆಡಳಿತ ಮತ್ತು ಶಿಕ್ಷಣ ಸರಿಯಾಗಿ ದೊರೆಯದ ಇದೆಂತಹ ಸ್ವಾತಂತ್ರ್ಯ? ಕಾಂಗ್ರೆಸ್ ನಂತರ ಈಗ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರವಂತೂ ಹಿಂದಿ ಹೇರಿಕೆಯನ್ನು ತೀವ್ರಗೊಳಿಸಿದೆ. ಭಾರತ ಒಕ್ಕೂಟ ವ್ಯವಸ್ಥೆಯಲ್ಲಿ ರಾಷ್ಟ್ರೀಯ ಪಕ್ಷಗಳು ಬೇಡ, ಕೇವಲ ಪ್ರಾದೇಶಿಕ ಪಕ್ಷಗಳು ಇರಬೇಕು ಎನ್ನುವ ಅನೇಕ ವಿಚಾರ ಸಂಕೀರ್ಣಗಳು ಎಲ್ಲೆಡೆ ಇಂದು ನಡೆಯುತ್ತಿವೆ. ರಾಷ್ಟ್ರೀಯ ಪಕ್ಷಗಳ ರಾಜ್ಯ ನಾಯಕರು ರಾಜ್ಯದ ಭವಿಷ್ಯದ ಬಗ್ಗೆ ಚಿಂತಿಸಬೇಕು. ರಾಜ್ಯಗಳಿಂದ ದೇಶವೇ ಹೊರತು ದೇಶದಿಂದ ರಾಜ್ಯಗಳಲ್ಲ. ಒಂದು ಭಾಷೆ ಸತ್ತರೆ ಆ ಭಾಷೆಯ ಜನಾಂಗವೇ ಸತ್ತು ಹೋದಂತೆ. ಅಂದರೆ ಗುಲಾಮಗಿರಿಗೆ ತಳ್ಳಿದಂತೆ.
ತ್ರಿಭಾಷ ಸೂತ್ರವು ಮಕ್ಕಳಿಗೆ ಶಾಲೆಯಲ್ಲಿ ಹೊರೆಯಾದರೆ, ದೊಡ್ಡವರಿಗೆ ಸರ್ಕಾರಿ ಕಚೇರಿಗಳ ದೈನಂದಿನ ವ್ಯವಹಾರಗಳಲ್ಲಿ ಹೊರೆಯಾಗಿದೆ. ಸರಕಾರದ ಸೇವೆ ಜನರಿಗೆ ಜನರ ಭಾಷೆಯಲ್ಲಿ ಸಿಗದೇ ಅರ್ಥವಾಗದ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರ ಸಿಗುತ್ತಿದೆ. ಹೀಗಾಗಿ ಅದೆಷ್ಟೋ ಸರಕಾರಿ ಸವಲತ್ತುಗಳನ್ನು ಜನಸಾಮಾನ್ಯರು ಪಡೆಯಲಾಗುತ್ತಿಲ್ಲ. ಆದರೆ ಹಿಂದಿ ಜನರು ಮಾತ್ರ ದೇಶದ ಯಾವುದೇ ಭಾಗದಲ್ಲಿ ಈ ಸವಲತ್ತುಗಳನ್ನು ಪಡೆದು ಸುಖವಾಗಿದ್ದಾರೆ. ಕೇಂದ್ರ ಸರ್ಕಾರದ ಉದ್ಯೋಗಗಳಲ್ಲಿ ಹಿಂದಿ ಜನರಿಗೆ ಸಿಂಹ ಪಾಲು ಸಿಗುವಂತೆ ವ್ಯವಸ್ಥೆ ಮಾಡಲಾಗಿದೆ. ಹಿಂದಿ ಹೇರಿಕೆಗೆ ಪ್ರತಿವರ್ಷ ಕೇಂದ್ರ ಸರ್ಕಾರ ನಮ್ಮ ತೆರಿಗೆ ಹಣದಿಂದ ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡುತ್ತಿದೆ. 50 ವರ್ಷಗಳ ಹಿಂದೆ ಪಾರ್ಲಿಮೆಂಟ್ ಸದಸ್ಯರ ಸಲಹೆಗಳನ್ನು ಅಂದಿನ ಸರ್ಕಾರ ಅನುಷ್ಠಾನಗೊಳಿಸದೇ ಇದ್ದುದುದರಿಂದ ಇವೇ ವಿಷಯಗಳು ಇಂದು ಬೆಳೆದು ನಿಂತು ದೊಡ್ಡ ಜ್ವಲಂತ ಸಮಸ್ಯೆಗಳಾಗಿ ಉಳಿದುಕೊಂಡಿವೆ. ಈಗ ಒಂದು ಕಡೆ ನಿರಂತರ ಹಿಂದಿ ಹೇರಿಕೆಯಿಂದ ಹಿಂದಿಯೇತರರು ನರಳುತ್ತಿದ್ದು ಇನ್ನೊಂದು ಕಡೆ ಇಂಗ್ಲಿಷ್ ಮಾಧ್ಯಮ ಶಿಕ್ಷಣದಿಂದ ಅಸಮಾನತೆ ಸೃಷ್ಟಿಯಾಗಿ ಜನಸಾಮಾನ್ಯರಿಗೆ ಹೊರೆಯಾಗಿ ಯಾರಿಗೂ ಉತ್ತಮ ಶಿಕ್ಷಣ ದೊರೆಯುತ್ತಿಲ್ಲ. ನಮ್ಮ ಮಕ್ಕಳು ಇಂದು ಹುಟ್ಟಿದ ನೆಲಕ್ಕೇ ಪರಕೀಯರಾಗಿ ಬೆಳೆಯುತ್ತಿದ್ದಾರೆ.
ಪ್ರಾದೇಶಿಕ ಭಾಷೆಯಲ್ಲಿ ಅಂದು ಶಿಕ್ಷಣ ಮಾಧ್ಯಮವನ್ನು ಅನುಷ್ಠಾನಗೊಳಿಸಿದ್ದರೆ ಇಂದು ಸಿಬಿಎಸ್‌ಸಿ ಮತ್ತು ಐಸಿಎಸ್‌ಇ ಇವೆರಡೂ ಇರುತ್ತಿರಲಿಲ್ಲ. ಸರ್ಕಾರಿ ಶಾಲೆಗಳೂ ಮುಚ್ಚುತ್ತಿರಲಿಲ್ಲ. ಅಂದಿನ ಸಂಸತ್ ಸಮಿತಿಯು ಎಲ್ಲಾ ಶಿಕ್ಷಣ ಮಾಧ್ಯಮಗಳು ರಾಜ್ಯ ಭಾಷೆಗಳಲ್ಲಿರುವುದು ಸರಿ ಎಂದು ಹೇಳಿದ್ದವು, ತಮಿಳುನಾಡಿನಲ್ಲಿ ಈಗಾಗಲೇ ಕಳೆದ ಐದು ವರ್ಷಗಳಿಂದ ತಮಿಳು ಭಾಷಾ ಮಾಧ್ಯಮದಲ್ಲಿ ಹತ್ತಾರು ಮಹಾವಿದ್ಯಾಲಯಗಳು ಯಶಸ್ವಿಯಾಗಿ ನಡೆಯುತ್ತಿವೆ.
ತ್ರಿಭಾಷಾ ಸೂತ್ರವು ಒಟ್ಟಾರೆ ದೇಶದ ಪ್ರಗತಿಗೆ ದೊಡ್ಡ ತೊಡಕಾಗಿದೆ. ಹಿಂದಿಯೇತರರಿಗೆ ಮಗ್ಗುಲ ಮುಳ್ಳಾಗಿ ಕಾಡುತ್ತಿದೆ. ಹೃದಯ ವೈಶಾಲ್ಯತೆ ಸಾಕು, ನಮ್ಮ ಕಾಲಿನ ಮೇಲೆ ನಾವೇ ಚಪ್ಪಡಿ ಕಲ್ಲು ಹಾಕಿಕೊಳ್ಳುವುದು ಬೇಡ. ನಮ್ಮ ಮುಂದಿನ ಪೀಳಿಗೆಯ ಮಕ್ಕಳಿಗೆ ಒಳ್ಳೆಯ ಶಿಕ್ಷಣ, ಉದ್ಯೋಗ ಮತ್ತು ನೆಮ್ಮದಿಯ ಸ್ವಾಭಿಮಾನದ ಜೀವನ ಒದಗಿಸಿಕೊಡಲು ತ್ರಿಭಾಷಾ ಸೂತ್ರವನ್ನು ರದ್ದು ಪಡಿಸಲೇಬೇಕಾಗಿದೆ. ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ, ತಮಿಳು, ತೆಲುಗು ಮುಂತಾದ ಇತರ ಭಾರತೀಯ ಭಾಷೆಗಳಷ್ಟು ಹಿಂದಿ ಶ್ರೀಮಂತವಾಗಿಲ್ಲ. ದೇಶವೆಂದ ಮೇಲೆ ಒಂದು ರಾಷ್ಟ್ರ ಭಾಷೆ ಇರಬೇಕೆಂದು ಕೆಲವರು ವಾದಿಸುತ್ತಾರೆ. ಭಾರತದಂತಹ ಬಹುಭಾಷ ದೇಶದಲ್ಲಿ ಅನೇಕ ಸಿರಿವಂತ ಭಾಷೆಗಳು ಇದ್ದು ಅವುಗಳನ್ನು ನಿರ್ಲಕ್ಷಿಸಲು ಸಾಧ್ಯವೇ ಇಲ್ಲ. ಭಾಷೆಯ ಆಧಾರದ ಮೇಲೆ ರಾಜ್ಯಗಳನ್ನು ವಿಂಗಡಿಸಲಾಗಿದೆ. ಹಿಂದಿ ಭಾಷೆ ಭಾರತದ ಕೇವಲ ಶೇ 25% ಜನರಿಗೆ ಮಾತ್ರ ಮಾತೃಭಾಷೆ. ವಿಶ್ವದ ಅನೇಕ ದೇಶಗಳಲ್ಲಿ ಒಂದಕ್ಕಿಂತ ಹೆಚ್ಚು ರಾಷ್ಟ್ರಭಾಷೆಗಳು ಬಳಕೆಯಲ್ಲಿವೆ. ಉದಾಹರಣೆಗೆ ಫಿನ್ಲಂಡ್‌ನಲ್ಲಿ ಫಿನ್ನಿಷ್ ಮತ್ತು ಸ್ವೀಡಿಷ್ ರಾಷ್ಟ್ರ ಭಾಷೆಗಳು. ಕೆನಡಾದಲ್ಲಿ ಇಂಗ್ಲಿಷ್ ಮತ್ತು ಫ್ರೆಂಚ್. ಸ್ವಿಜರಲೆಂಡ್‌ನಲ್ಲಿ ಜರ್ಮನ್, ಫ್ರೆಂಚ್, ಇಟಾಲಿಯನ್ ಮತ್ತು ರೋಮನ್. ಬೆಲ್ಜಿಯಂನಲ್ಲಿ ಡಚ್, ಫ್ರೆಂಚ್ ಮತ್ತು ಜರ್ಮನ್.
ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಹಿಂದಿ ಹೇರಿಕೆ ವಿರುದ್ಧ ಮತ್ತು ಕನ್ನಡ ಉಪಯೋಗಿಸುವ ಬಗ್ಗೆ ಅನೇಕ ಕ್ರಮಗಳನ್ನು ತೆಗೆದುಕೊಂಡರೂ ಅವುಗಳೆಲ್ಲ ತಾತ್ಕಾಲಿಕ ಎಂದು ನೋಡಿದ್ದೇವೆ. ದ್ವಿಭಾಷ ಸೂತ್ರದ ಬಗ್ಗೆ ಈಗಿನ ಮತ್ತು ಹಿಂದಿನ ಅಧ್ಯಕ್ಷರು ಒಲವು ವ್ಯಕ್ತಪಡಿಸಿದ್ದು ಮಾಧ್ಯಮಗಳಲ್ಲಿ ನೋಡಿದೆ. ಯಾವುದೇ ಮೂರನೇ ಭಾಷೆಯನ್ನು ಶಾಲೆಯ ಹೊರಗೆ ಕಲಿಯಬಹುದು. ಆದರೆ ಕಡ್ಡಾಯಬೇಡ. ಇದು ರಾಜ್ಯ ಸರಕಾರದ ಕೈಯಲ್ಲಿದೆ.
ಪ್ರಕಾಶ ಹೆಬ್ಬಳ್ಳಿ, ಬೆಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್
Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್’ ರಾಜಕೀಯ!
Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.