ಉಳ್ಳಾಲ: ಪ್ರವಾಸಿಗರಿಬ್ಬರು ಸಮುದ್ರಪಾಲು
Team Udayavani, Jun 29, 2017, 3:30 AM IST
ಉಳ್ಳಾಲ: ಮೊಗವೀರಪಟ್ಣ ಬೀಚ್‌ಗೆ ಬುಧವಾರ ಬೆಳಗ್ಗೆ ವಿಹಾರ ಬಂದಿದ್ದ ತುಮಕೂರು ಶಿರಾ ಮೂಲದ ಇಬ್ಬರು ಪ್ರವಾಸಿಗರು ಅಲೆಗಳಿಗೆ ಸಿಲುಕಿ ಸಮುದ್ರ ಪಾಲಾಗಿದ್ದಾರೆ. ಮೂವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ರಬ್‌ನಗರ ಮೊಹಲ್ಲಾದ ಮಗೀರ್ ರಸ್ತೆ ನಿವಾಸಿಗಳಾದ ಜಲೀಲ್ ಅವರ ಪುತ್ರ ಶಾರುಖ್ ಖಾನ್ (19) ಮತ್ತು ಸಿದ್ದೀಖ್ ಅವರ ಪುತ್ರ ಚೋಟು ಯಾನೆ ಹಯಾಝ್ (20) ಸಮುದ್ರಪಾಲಾದವರು. ಸಾದಿಕ್ ಹಬೀಬ್, ವಸೀಂ ಉಳ್ಳಾಲದ ಸರೋಜ್ ಆಸ್ಪತ್ರೆಯಲ್ಲಿ ಚೇತರಿಸುತ್ತಿದ್ದಾರೆ.
ಘಟನೆಯ ವಿವರ
ರಬ್‌ನಗರ ಮಗೀರ್ ರಸ್ತೆ ನಿವಾಸಿಗಳಾದ ಶಾರೂಖ್ ಸಹಿತ 10 ಮಂದಿ ಸ್ನೇಹಿತರ ತಂಡ ತುಮಕೂರಿನಿಂದ ಮಂಗಳವಾರ ಹೊರಟು ಉಳ್ಳಾಲ ದರ್ಗಾಕ್ಕೆ ಆಗಮಿಸಿತ್ತು. ಉಳ್ಳಾಲ ದರ್ಗಾ ಸಂದರ್ಶನ ನಡೆಸಿ ಸುಮಾರು 10 ಗಂಟೆಗೆ ಉಳ್ಳಾಲದ ಮೊಗವೀರಪಟ್ಣ ಬೀಚ್‌ಗೆ ಆಗಮಿಸಿದ್ದು, ಎಲ್ಲ 10 ಮಂದಿ ಉಳ್ಳಾಲ ಬೀಚ್‌ನ ಕಲ್ಲಿನ ಮೇಲೆ ನಿಂತು ಸೆಲ್ಫಿ ಫೋಟೋ ತೆಗೆದು ಬಳಿಕ ಸಮುದ್ರದ ಅಲೆಗಳೊಂದಿಗೆ ಆಟವಾಡಲು ಪ್ರಾರಂಭಿಸಿದರು. 10.30ರ ಸುಮಾರಿಗೆ ಶಾಂತವಾಗಿದ್ದ ಕಡಲು ಒಮ್ಮೆಲೇ ರೌದ್ರಾವತಾರ ತಾಳಲಾರಂಭಿಸಿದ್ದು, ದಡಕ್ಕೆ ದೊಡ್ಡ ಅಲೆಗಳು ಅಪ್ಪಳಿಸಲಾರಂಭಿಸಿದವು.
ಉಳ್ಳಾಲದ ಸಮುದ್ರದ ಅಲೆಗಳ ಅರಿವಿಲ್ಲದ ತಂಡ ಸಮುದ್ರದ ಅಲೆಗಳೊಂದಿಗೆ ಫೋಟೋ, ವೀಡಿಯೋ ತೆಗೆದುಕೊಂಡು ಆಟವಾಡುತ್ತಿತ್ತು. ಈ ಸಂದರ್ಭ ಬೃಹತ್ ಅಲೆಯೊಂದು ಬಡಿದಾಗ ಶಾರುಖ್ ಹಾಗೂ ಇನ್ನೊಂದು ಬದಿಯಲ್ಲಿದ್ದ ಹಯಾಝ್ ಸಮುದ್ರ ಪಾಲಾದರು. ಅಲೆಗಳು ಒಂದರ ಹಿಂದೆ ಒಂದು ಬರುತ್ತಿದ್ದಂತೆ ಹಯಾಝ್ ತಡೆಗೋಡೆಯ ಕಲ್ಲಿನೆಡೆ ಸಿಲುಕಿ ಸಾವನ್ನಪ್ಪಿದ್ದು, ಶಾರುಖ್ ಸಮುದ್ರ ಪಾಲಾಗಿದ್ದಾರೆ.
ಉಳ್ಳಾಲಕ್ಕೆ ಆಗಮಿಸಿದ ಕುಟುಂಬ
ಸಮುದ್ರ ಪಾಲಾಗಿರುವ ಶಾರುಖ್ ಮತ್ತು ಹಯಾಝ್ ಅವರ ಕುಟುಂಬಕ್ಕೆ ಸುದ್ದಿ ಮುಟ್ಟಿಸಿದ್ದು, ಉಳ್ಳಾಲಕ್ಕೆ ರಾತ್ರಿ ವೇಳೆಗೆ ತಲುಪಿದ್ದಾರೆ. ಇವರಲ್ಲಿ ಹಯಾಝ್ ಅವರ ಸಹೋದರ ಘಟನೆ ನಡೆದ ಸಂದರ್ಭದಲ್ಲಿ ಒಟ್ಟಿಗಿದ್ದ.
ಮೃತದೇಹ ಎತ್ತಲು ಪ್ರಯತ್ನ
ಸಮುದ್ರ ಪಾಲಾಗಿರುವ ಶಾರುಖ್ ಪತ್ತೆ ಕಾರ್ಯ ಮುಂದುವರಿದಿದ್ದು, ಕಲ್ಲಿನೆಡೆಯಲ್ಲಿ ಸಿಲುಕಿರುವ ಹಯಾಝ್ಮೃ ತದೇಹವನ್ನು ತೆಗೆಯಲು ಅಗ್ನಿಶಾಮಕ ದಳ, ಹೋಮ್‌ಗಾರ್ಡ್ಸ್‌ನ ಮುಳುಗು ತಜ್ಞರೊಂದಿಗೆ ಶಿವಾಜಿ ಜೀವರಕ್ಷಕ ಈಜುಗಾರರ ಸಂಘದ ಸದಸ್ಯರಾದ ಯೋಗೀಶ್ ಅಮೀನ್ ರಾಜೇಶ್ ಪುತ್ರನ್, ಅಶ್ವಿನ್, ರವಿ, ಲತೀಶ್, ಯಶ್‌ಪಾಲ್, ವಾಸುದೇವ್ ಹರೀಶ್ ಪ್ರಸಾದ್ ಸುವರ್ಣ, ಮೋಹನ್, ಹೋಮ್ ಗಾರ್ಡ್ಸ್‌ನ ತಣ್ಣೀರುಬಾವಿ ಜೀವರಕ್ಷಕರಾದ ಮಹಮ್ಮದ್ ವಾಸಿಂ, ಹಸನ್, ಜಾಕೀರ್, ಜಾವೀದ್, ಸಾದಿಕ್, ಮನ್ಸೂರು, ಇಮ್ರಾನ್, ವಿಜಿತ್, ಲಿಂಗಪ್ಪ, ಸನತ್ ಶ್ರಮಿಸುತ್ತಿದ್ದಾರೆ. ಈ ತಂಡ ಅಲೆಗಳ ನಡುವೆ ಮೃತದೇಹದ ಬಳಿ ಹಗ್ಗ ಕಟ್ಟಿ ಬಂದಿದ್ದು, ಬೆಳಗ್ಗೆ ಸಮುದ್ರದ ಅಬ್ಬರ ಕಡಿಮೆಯಾದಾಗ ಮೇಲೆತ್ತುವ ಸಾಧ್ಯತೆ ಇದೆ.
ಪೊಲೀಸ್, ಕಂದಾಯ ಮತ್ತು ಹೋಮ್‌ಗಾರ್ಡ್ಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕ್ರಮ ಕೈಗೊಂಡಿದ್ದಾರೆ. ಉಳ್ಳಾಲ ಪೊಲೀಸರು, ಹೋಮ್‌ಗಾರ್ಡ್ಸ್ ಜನರನ್ನು ಸಮುದ್ರದ ಬಳಿ ತಲುಪದಂತೆ ವ್ಯವಸ್ಥೆಯನ್ನು ಮಾಡಿದ್ದಾರೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉದಯವಾಣಿ ಎಚ್ಚರಿಕೆ ನೀಡಿತ್ತು
ಸುರತ್ಕಲ್ ಸಮೀಪದ ಎನ್‌ಐಟಿಕೆ ಬೀಚ್ ಬಳಿ ಸೋಮವಾರ ಬೆಂಗಳೂರಿನ ಪ್ರವಾಸಿಗರು ಬಂಡೆ ಏರಿ ಸೆಲ್ಫಿ ತೆಗೆಯುವ ಸಂದರ್ಭ ಅಪಾಯಕ್ಕೆ ಸಿಲುಕಿದ್ದಾಗ ಹೋಮ್‌ಗಾರ್ಡ್ಸ್ ತಂಡ ರಕ್ಷಿಸಿತ್ತು. ಈ ಸಂದರ್ಭ ಸಮುದ್ರದಲ್ಲಿನ ಅಪಾಯದ ಕುರಿತಂತೆ ಉದಯವಾಣಿ ಎಚ್ಚರಿಸಿತ್ತು. ಸುರತ್ಕಲ್ ಘಟನೆಯ ಎರಡೇ ದಿನದಲ್ಲಿ ಈ ದುರಂತ ಸಂಭವಿಸಿದೆ.
ಮೂರು ದಿನಗಳ ಪ್ರವಾಸ ಕೈಗೊಂಡಿದ್ದರು
ಒಂದೇ ಮೊಹಲ್ಲಾದ ಈ ಹತ್ತು ಮಂದಿ ಮೂರು ದಿನಗಳ ಪ್ರವಾಸಕ್ಕೆಂದು ಫೋರ್ಸ್ ಟ್ರ್ಯಾಕ್ಸ್ ಜೀಪನ್ನು ಬಾಡಿಗೆಗೆ ಪಡೆದು ಬುಧವಾರ ತುಮಕೂರಿನಿಂದ ಹೊರಟಿದ್ದರು. ಶಿವಮೊಗ್ಗ ಬಳಿಯ ದರ್ಗಾ ಭೇಟಿ ಅನಂತರ ಉಳ್ಳಾಲ ದರ್ಗಾಕ್ಕೆ ಬುಧವಾರ ಬೆಳಗ್ಗೆ ಆಗಮಿಸಿದ್ದರು. ದರ್ಗಾ ವೀಕ್ಷಿಸಿ ಬಳಿಕ ಮೊಗವೀರ ಪಟ್ಣ ಬಳಿ ಇರುವ ಸಮುದ್ರ ತೀರಕ್ಕೆ ಆಗಮಿಸಿದ ಬಳಿಕ ಈ ಅವಘಡ ಸಂಭವಿಸಿತು. ಸಮುದ್ರ ಪಾಲಾದವರಲ್ಲಿ ಶಾರುಖ್ ತುಮಕೂರು ಸಮೀಪ ಮಾಂಸದ ಅಂಗಡಿ ಹೊಂದಿದ್ದರೆ, ಹಯಾಝ್ ಗಾರೆ ಕೆಲಸ ಮಾಡುತ್ತಿದ್ದಾರೆ. ಶಾರೂಖ್ ಅವರು ಮೂವರು ಸಹೋದರ, ಓರ್ವ ಸಹೋದರಿಯನ್ನು ಅಗಲಿದ್ದು, ಹಯಾಝ್ ಮೂವರು ಸಹೋದರರು, ಮೂವರು ಸಹೋದರಿಯರನ್ನು ಅಗಲಿದ್ದಾರೆ.
ಎಚ್ಚರಿಕೆಯನ್ನು ಧಿಕ್ಕರಿಸಿ ನಡೆದರು
ಈದ್ ಹಬ್ಬದ ಆಚರಣೆಯ ಅಂಗವಾಗಿ ಕಳೆದ ಮೂರು ದಿನಗಳಿಂದ ಮೊಗವೀರಪಟ್ಣ ಬೀಚ್‌ಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿದ್ದು, ಸ್ಥಳೀಯವಾಗಿ ಕಾರ್ಯಾಚರಣೆ ನಡೆಸುವ ಜೀವರಕ್ಷಕ ಈಜುಗಾರರ ಸಂಘದ ಸದಸ್ಯರು ಸಮುದ್ರ ತೀರಕ್ಕೆ ಬರುವ ಪ್ರವಾಸಿಗರಿಗೆ ಎಚ್ಚರಿಕೆ ನೀಡುತ್ತಿದ್ದಾರೆ. ಬುಧವಾರವೂ ಸಮುದ್ರ ತೀರಕ್ಕೆ ಆಗಮಿಸಿದ್ದ ಈ ತಂಡಕ್ಕೆ ಸ್ಥಳೀಯ ಶಿವಾಜಿ ಜೀವ ರಕ್ಷಕ ಸಂಘದ ಈಜುಗಾರರಾದ ವಾಸುದೇವ ಬಂಗೇರ ಮತ್ತು ಪ್ರಸಾದ್ ಸುವರ್ಣ ಎಚ್ಚರಿಕೆ ನೀಡಿದ್ದರು. ‘ನಮ್ಮ ರಕ್ಷಣೆಯನ್ನು ನಾವು ನೋಡಿಕೊಳ್ಳುತ್ತೇವೆ’ ಎಂದಿದ್ದ ತಂಡ ಸಮುದ್ರದ ಅಲೆಗಳೊಂದಿಗೆ ಆಟವಾಡಲು ಪ್ರಾರಂಭಿಸಿತ್ತು. ಎಚ್ಚರಿಕೆ ನೀಡಿದ ಹತ್ತೇ ನಿಮಿಷದಲ್ಲಿ ಬೊಬ್ಬೆ ಕೇಳಿ ಇವರು ಓಡಿ ಬಂದಾಗ ಇಬ್ಬರು ಸಮುದ್ರ ಪಾಲಾಗಿದ್ದು, ಅವರಲ್ಲಿ ಹಯಾಝ್ ಅವರ ಮೃತದೇಹ ಕಲ್ಲಿನೆಡೆಯಲ್ಲಿ ಸಿಲುಕಿದ್ದರೂ ಸಮುದ್ರದ ಅಲೆಗಳಿಂದ ಮೃತದೇಹವನ್ನು ಮೇಲೆತ್ತಲು ಸಾಧ್ಯವಾಗಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
MUST WATCH
ಹೊಸ ಸೇರ್ಪಡೆ
BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್
Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್’ ರಾಜಕೀಯ!
Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.