ಜಿಎಸ್‌ಟಿ: ನಾಳೆ ಜಾರಿ-ಬಹುಮಂದಿಯ ಸ್ವಾಗತ
Team Udayavani, Jun 30, 2017, 3:45 AM IST
ಸರಕು ಮತ್ತು ಸೇವಾ ತೆರಿಗೆ (ಗೂಡ್ಸ್ ಆ್ಯಂಡ್ ಸರ್ವಿಸ್ ಟ್ಯಾಕ್ಸ್) ಜು. 1ರಿಂದ ಜಾರಿಯಾಗುತ್ತಿದೆ. ದೇಶಾದ್ಯಂತ ಒಂದೇ ತೆರನಾದ ತೆರಿಗೆ ಪದ್ಧತಿ ಇದು. ಇದರ ಬಗೆಗೆ ವ್ಯಾಪಾರಸ್ಥರು, ಜನಸಾಮಾನ್ಯರು, ಅಧಿಕಾರಿಗಳು, ನೌಕರರು, ಲೆಕ್ಕಪರಿಶೋಧಕರು, ತೆರಿಗೆ ವ್ಯವಹಾರಸ್ಥರು ಈಗಾಗಲೇ ಅನೇಕ ಕಾರ್ಯಾಗಾರಗಳನ್ನು ನಡೆಸಿ ಜನಜಾಗೃತಿ ಮೂಡಿಸಲು ಯತ್ನಿಸಿದ್ದಾರೆ.
ಜಿಲ್ಲೆಯ ಕೃಷಿ ವಲಯಕ್ಕೆ ಲಾಭದಾಯಕ?
ಕೇಂದ್ರ ಸರಕಾರವು ಜಾರಿಗೆ ತರುತ್ತಿರುವ ಏಕರೂಪದ ತೆರಿಗೆ ಪದ್ಧತಿ ಜಿಎಸ್‌ಟಿಯಿಂದ ಎಲ್ಲಾ ವ್ಯಾಪಾರ-ಉದ್ಯಮ ಕ್ಷೇತ್ರಗಳಿಗೂ ಪರಿಣಾಮ ಬೀರುತ್ತಿದ್ದು, ಕೃಷಿ ವಲಯದಲ್ಲಿಯೂ ಮೌಲ್ಯ ಬದಲಾವಣೆಯಾಗುವ ಸಾಧ್ಯತೆ ಇರುತ್ತದೆ. ಆದರೆ ದ.ಕ. ಜಿಲ್ಲೆಯ ಕೃಷಿ ವಲಯವನ್ನು ತೆಗೆದುಕೊಂಡರೆ ಕೃಷಿಕರಿಗೆ-ಗ್ರಾಹಕರಿಗೆ ಇದರಿಂದ ಲಾಭವಾಗುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಿಸುತ್ತಾರೆ.
ಕೆಲವೊಂದೆಡೆ ಜಿಎಸ್‌ಟಿಯಿಂದ ಕೃಷಿ ಕ್ಷೇತ್ರಕ್ಕೆ ದೊಡ್ಡ ಹೊಡೆತ ಬೀಳಲಿದೆ, ಕೃಷಿ ಉತ್ಪನ್ನಗಳಿಗೆ ಬೆಲೆ ಕಡಿಮೆಯಾಗಲಿದೆ ಎಂಬ ಸುದ್ದಿ ಕೂಡ ಹಬ್ಬುತ್ತಿದ್ದು, ಇದು ಜನತೆಯನ್ನು ಆತಂಕಕ್ಕೀಡು ಮಾಡಿದೆ. ಆದರೆ ಜಿಎಸ್‌ಟಿಯನ್ನು ಕೂಲಂಕಷವಾಗಿ ಅಧ್ಯಯನ ಮಾಡಿದಾಗ ಕೃಷಿ ಕ್ಷೇತ್ರಕ್ಕೆ ಧನಾತ್ಮಕ ಪರಿಣಾಮ ಇದೆ ಎಂದು ತಜ್ಞರು ಹೇಳುತ್ತಾರೆ.
ದ.ಕ. ಜಿಲ್ಲೆಯ ಪ್ರಮುಖ ಕೃಷಿ ಉತ್ಪನ್ನಗಳಾದ ಅಡಿಕೆ ಹಾಗೂ ತೆಂಗು ಇತರ ರಾಜ್ಯಗಳಿಗೆ ರಫ್ತಾಗುತ್ತಿದೆ. ಮುಖ್ಯವಾಗಿ ಬಹುತೇಕ ಅಡಿಕೆ ಇಲ್ಲಿಂದ ಸೇs…ಗಳ ಮೂಲಕ ಗುಜರಾತ್‌ಗೆ ರಫ್ತಾಗುತ್ತದೆ. ಈ ಸಂದರ್ಭ ಅದು ಬೇರೆ ಬೇರೆ ರಾಜ್ಯಗಳನ್ನು ಹಾದು ಹೋಗುವಾಗ ಅಲ್ಲಿ ಎಂಟ್ರಿ ಟ್ಯಾಕ್ಸ್, ಸರ್ವಿಸ್ ಟ್ಯಾಕ್ಸ್‌ಗಳು ಸೇರಿ ಕೃಷಿಕರಿಗೆ ಬೆಲೆ ಕಡಿಮೆ ಸಿಗುತ್ತಿತ್ತು.
ಆದರೆ ಮುಂದೆ ದೇಶಾದ್ಯಂತ ಏಕಮಾತ್ರ ಟ್ಯಾಕ್ಸ್ ಜಾರಿಗೆ ಬರುವುದರಿಂದ ಟ್ಯಾಕ್ಸ್‌ಗಾಗಿ ಕಡಿತವಾಗುವ ಹೆಚ್ಚುವರಿ ಮೊತ್ತ ಕೃಷಿಕರನ್ನು ಸೇರುವುದರಿಂದ ಹೆಚ್ಚು ಬೆಲೆ ಸಿಗಲಿದೆ. ಜತೆಗೆ ತೆರಿಗೆಯ ನೆಪದಲ್ಲಿ ಕೃಷಿಕರಿಗೆ ಬೆಲೆ ಕಡಿಮೆ ಮಾಡುವ ಪ್ರಮೇಯವೂ ತಪ್ಪಲಿದೆ. ಇದರ ಜತೆಗೆ ಜಿಲ್ಲೆಗೆ ಆಮದಾಗುವ ಕೃಷಿ ಉತ#ನ್ನಗಳ ಬೆಲೆಯೂ ಇಳಿಕೆಯಾಗುವ ಸಾಧ್ಯತೆ ಇದೆ.
ಇನ್ನು ರಸಗೊಬ್ಬರ ಧಾರಣೆಯಲ್ಲಿ ಕೊಂಚ ಹೆಚ್ಚಳವಾಗುವ ಸಾಧ್ಯತೆ ಇದೆ. ಆದರೆ ಅದು ದೊಡ್ಡ ಪರಿಣಾಮ ಬೀರುವುದಿಲ್ಲ. ಅಂದರೆ ಕೆಲವೊಂದು ರಸಗೊಬ್ಬರಗಳು ಸಬ್ಸಿಡಿ ಧಾರಣೆಯಲ್ಲಿ ಸಿಗುವುದರಿಂದ ಕೊಂಚ ಧಾರಣೆ ಹೆಚ್ಚಾದರೆ ಪರಿಣಾಮ ಬೀರದು ಎಂಬ ಅಭಿಪ್ರಾಯಗಳು ಕೂಡ ಕೃಷಿ ವಲಯದಲ್ಲಿ ಕೇಳಿಬರುತ್ತಿವೆ. ತಾವು ಬೆಳೆದ ಉತ್ಪನ್ನಗಳಿಗೆ ಧಾರಣೆ ಹೆಚ್ಚು ಸಿಕ್ಕಾಗ ರಸಗೊಬ್ಬರಗಳ ಕುರಿತು ಕೃಷಿಕರು ತಲೆ ಕೆಡಿಸಿ ಕೊಳ್ಳುವುದಿಲ್ಲ ಎಂಬ ಅಭಿಪ್ರಾಯವೂ ಇದೆ.
ಧಾರಣೆ ಹೆಚ್ಚು
ಸಿಗುವ ಸಾಧ್ಯತೆ
ಕೃಷಿ ಮಾರುಕಟ್ಟೆಯನ್ನು ಅಧ್ಯಯನ ನಡೆಸಿದಾಗ ಜಿಎಸ್‌ಟಿಯಿಂದ ಜಿಲ್ಲೆಯ ಕೃಷಿ ಉತ್ಪನ್ನಗಳಿಗೆ ಧಾರಣೆ ಹೆಚ್ಚು ಸಿಗುವ ಸಾಧ್ಯತೆ ಇದೆ. ಬೇರೆ ಬೇರೆ ತೆರಿಗೆಯ ನೆಪದಲ್ಲಿ ಬೆಲೆ ಕಡಿತ ತಪ್ಪಲಿದೆ. ಜತೆಗೆ ಗ್ರಾಹಕರಿಗೂ ಕೃಷಿ ಉತ್ಪನ್ನಗಳು ಕಡಿಮೆಯಲ್ಲಿ ಸಿಗಲಿದೆ. ಸಾಮಾನ್ಯವಾಗಿ ತೆರಿಗೆಗಳು ಬದಲಾಗುವಾಗ ಆತಂಕ, ಗುಮಾನಿಗಳು ಇದ್ದೇ ಇರುತ್ತವೆ. ವ್ಯಾಟ್ ಬಂದಾಗಲೂ ಇದೇ ಆತಂಕವಿತ್ತು. ಆದರೆ ಕೆಲವು ತಿಂಗಳು ಕಳೆದರೆ ಅದು ಸಹಜ ಸ್ಥಿತಿಗೆ ಬರುತ್ತದೆ.
-ಡಾ| ವಿಘ್ನೇಶ್ವರ ವರ್ಮುಡಿ
ಕೃಷಿ ಮಾರುಕಟ್ಟೆ ತಜ್ಞರು
ಸ್ಪಷ್ಟವಾದ
ಮಾಹಿತಿ ತಿಳಿದಿಲ್ಲ
ಜಿಎಸ್‌ಟಿ ಕುರಿತು
ಸ್ಪಷ್ಟವಾದ ಮಾಹಿತಿ ಇನ್ನೂ ತಿಳಿದಿಲ್ಲ. ಆದರೆ ಕಳೆದ ಕೆಲವು ದಿನಗಳಲ್ಲಿ ಜಿಎಸ್‌ಟಿ ನೆಪದಲ್ಲಿ ಅಡಿಕೆ ಧಾರಣೆಯನ್ನು ಇಳಿಸಿದ್ದಾರೆ. ರಸಗೊಬ್ಬರ ಧಾರಣೆ ಜಾಸ್ತಿಯಾಗುವ ಸಾಧ್ಯತೆ ಇದೆ. ಗ್ರಾಹಕರಿಗೆ ಅಕ್ಕಿಯ ಬೆಲೆಯೂ ಜಾಸ್ತಿ ಯಾಗುತ್ತದೆ ಎನ್ನುತ್ತಾರೆ. ಅದರ ಕುರಿತು ಪೂರ್ಣ ಅಧ್ಯಯನ ಮಾಡದ ಕಾರಣ ಹೆಚ್ಚು ಮಾಹಿತಿ ಇಲ್ಲ.
-ರವಿಕಿರಣ್ ಪುಣಚ
ದ.ಕ.ಜಿಲ್ಲಾಧ್ಯಕ್ಷರು
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ
ಅವಿಭಜಿತ ದ.ಕ.
ರಾಜ್ಯದಲ್ಲೇ ಮುಂದು
ಕೇಂದ್ರ ಸರಕಾರ ಮುಂದಿನ ತಿಂಗಳಿಂದ ದೇಶವ್ಯಾಪಿ ಅನುಷ್ಠಾನಗೊಳಿಸುತ್ತಿರುವ ಏಕರೂಪದ ತೆರಿಗೆ ವ್ಯವಸ್ಥೆಯಾದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಗೆ ನೋಂದಣಿ ಮಾಡಿಸಿಕೊಳ್ಳುತ್ತಿ ರುವ ಜಿಲ್ಲೆಗಳ ಪೈಕಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆ ಇಡೀ ರಾಜ್ಯದಲ್ಲೇ ಮುಂಚೂಣಿಯಲ್ಲಿದೆ.
ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳ ಪ್ರಕಾರ, “ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಶೇ.80ರಷ್ಟು ತೆರಿಗೆ ಪಾವತಿ ದಾರರು ಈ ಹಿಂದೆ ಇದ್ದ ತೆರಿಗೆ ವ್ಯವಸ್ಥೆ ಯಿಂದ ಜಿಎಸ್‌ಟಿಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಅದೇರೀತಿ, ಉಡುಪಿ ಜಿಲ್ಲೆಯಲ್ಲಿಯೂ ಜಿಎಸ್‌ಟಿಗೆ ನೋಂದಣಿ ಮಾಡಿಸಿಕೊಳ್ಳುತ್ತಿರುವ ತೆರಿಗೆದಾರರ ಸಂಖ್ಯೆ ಜಾಸ್ತಿಯಿದೆ. ಜಿಎಸ್‌ಟಿ ಪ್ರಕಾರ, 20 ಲಕ್ಷ ರೂ. ಒಳಗೆ ವ್ಯಾಪಾರ-ವಹಿವಾಟು ಮಾಡುತ್ತಿರುವವರು ತೆರಿಗೆ ಪಾವತಿಸುವ ಅಗತ್ಯವಿಲ್ಲ. ಒಂದುವೇಳೆ, ವಹಿವಾಟು 20 ಲಕ್ಷದ ಒಳಗಿದ್ದು, ಅಂತಾರಾಜ್ಯ ವ್ಯಾಪಾರ ಮಾಡುವವರು ಜಿಎಸ್‌ಟಿ ನೋಂದಣಿ ಮಾಡಿಸಿಕೊಳ್ಳಲೇಬೇಕು. ಆದರೆ, ಜಿಲ್ಲೆಯಲ್ಲಿ ಜಿಎಸ್‌ಟಿಗೆ ನಿರೀಕ್ಷೆಗೂ ಮೀರಿದ ಬೆಂಬಲ ಮತ್ತು ಉತ್ತೇಜನ ದೊರೆಯುತ್ತಿರುವುದು ಸ್ವಾಗತಾರ್ಹ’ ಎಂದು ಇಲಾಖೆ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಜಿಎಸ್‌ಟಿ ತೆರಿಗೆ ವ್ಯವಸ್ಥೆ ಬಗ್ಗೆ ಎಲ್ಲೆಡೆ ಸಾಕಷ್ಟು ಜಾಗೃತಿ, ತಿಳಿವಳಿಕೆ ಮೂಡಿಸಲಾಗುತ್ತಿದೆ. ಜುಲೈ 1ರಿಂದ ಜಿಎಸ್‌ಟಿ ತೆರಿಗೆ ವ್ಯವಸ್ಥೆ ಜಾರಿಗೆ ಬರುವ ಹಿನ್ನಲೆಯಲ್ಲಿ ಅದಕ್ಕೆ ಹೊಸದಾಗಿ ಹೆಸರು ನೋಂದಣಿ ಮಾಡಿಸಿಕೊಳ್ಳುವ ಬಗ್ಗೆ ಜನರಲ್ಲಿ ಸಾಕಷ್ಟು ಗೊಂದಲಗಳಿರುವುದು ಸಹಜ. ಆದರೆ, ತೆರಿಗೆದಾರರ ಸಮಸ್ಯೆ- ಸಂಶಯಗಳಿಗೆ ಉತ್ತರಿಸುವುದಕ್ಕೆ ಇಲಾಖಾ ಅಧಿಕಾರಿಗಳು ಕೂಡ ಸಾಕಷ್ಟು ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದಾರೆ. ಮುಂದಿನ ತಿಂಗಳಿನಿಂದ ಹೊಸ ತೆರಿಗೆ ನೋಂದಣಿದಾರರಿಗೂ ಅರ್ಜಿ ಸಲ್ಲಿಸುವುದಕ್ಕೆ ಅವಕಾಶ ಕಲ್ಪಿಸಲಾಗು ವುದು ಎಂದು ಅವರು ತಿಳಿಸಿದ್ದಾರೆ.
ಹೊಟೇಲ್ ಉದ್ಯಮಕ್ಕೆ ನೇರ ಪರಿಣಾಮ
ಜಿಎಸ್‌ಟಿಯ ನೇರ ಪರಿಣಾಮ ಹೊಟೇಲ್‌ಉದ್ಯಮದ ಮೇಲೆ ಆಗಲಿದೆ. ಈಗಿರುವ ತೆರಿಗೆಗಿಂತ ಎರಡು- ಮೂರು ಪಟ್ಟು ಹೆಚ್ಚುವರಿ ತೆರಿಗೆ ಕಟ್ಟಬೇಕಾದ ಅನಿವಾರ್ಯತೆ ಹೊಟೇಲ್ ಮಾಲಕರದ್ದು.
ಸಣ್ಣ ಹೊಟೇಲ್‌ಗಳಿಗೆ ಈಗ ಶೇ. 4ರಷ್ಟು ತೆರಿಗೆ ಇದ್ದರೆ, ಜಿಎಸ್‌ಟಿ ಜಾರಿಗೊಂಡ ಬಳಿಕ ಅದು ಶೇ.5ಕ್ಕೆ ಏರಿಕೆಯಾಗಲಿದೆ. ಸಣ್ಣ ಹೊಟೇಲ್‌ಗಳಿಗೆ ಅಷ್ಟೇನೂ ಪರಿಣಾಮ ಬೀರದಿದ್ದರೂ, ದೊಡ್ಡ ಮಟ್ಟದ ಹೊಟೇಲ್‌ಗಳಲ್ಲಿ ತಿಂಡಿಗಳ ದರವೂ ಹೆಚ್ಚಳವಾಗಲಿದೆ.
ಸಾಧಾರಣ ಮಟ್ಟದ ಹೊಟೇಲ್‌ಗಳು ಇನ್ನು ಮುಂದೆ ಶೇ. 4ರ ಬದಲಾಗಿ ಶೇ. 12ರಷ್ಟು ತೆರಿಗೆ ಪಾವತಿಸಬೇಕಾಗುತ್ತದೆ. ಎಸಿ ಹೊಂದಿರುವ ಹೊಟೇಲ್‌ಗಳು ಶೇ. 10 ರ ಬದಲಾಗಿ ಶೇ. 18 ಮತ್ತು ಸ್ಟಾರ್ ಹೊಟೇಲ್‌ಗಳು ಶೇ. 10 ರ ಬದಲಾಗಿ ಶೇ. 28ರಷ್ಟು ತೆರಿಗೆ ಕಟ್ಟಬೇಕಾಗುತ್ತದೆ. ಇದರಿಂದ ಹೊಟೇಲ್ ಉದ್ಯಮಕ್ಕೆ ತೀರಾ ಪೆಟ್ಟು ಬೀಳುತ್ತದೆ ಎನ್ನು ತ್ತಾರೆ ದ.ಕ. ಜಿಲ್ಲಾ ಹೊಟೇಲ್ ಮಾಲಕರ ಸಂಘದ ಅಧ್ಯಕ್ಷ ಜಗದೀಶ್ ಶೆಣೈ.
ನಂದಿನಿ ಹಾಲು- ಮೊಸರಿನ ಧಾರಣೆ ಬದಲಾವಣೆ ಇಲ್ಲ
ದೇಶಾದ್ಯಂತ ಏಕರೂಪದ ತೆರಿಗೆ ವ್ಯವಸ್ಥೆ ಜಿಎಸ್‌ಟಿ ಜಾರಿಗೆ ಬರುತ್ತಿರುವುದರಿಂದ ಕೆಎಂಎಫ್ ನಂದಿನಿ ಉತ್ಪನ್ನಗಳ ಧಾರಣೆ ಯಲ್ಲಿ ಯಾವುದೇ ಹೆಚ್ಚಿನ ಬದಲಾವಣೆ ಇಲ್ಲ. ಕೆಲವು ಉತ್ಪನ್ನಗಳ ಧಾರಣೆ ಜಾಸ್ತಿಯಾದರೆ, ಇನ್ನು ಕೆಲವಕ್ಕೆ ಕಡಿಮೆಯಾಗಲಿದೆ.
ಆದರೆ ನಂದಿನಿಯ ಪ್ರಮುಖ ಉತ್ಪನ್ನ, ಜನರಿಗೆ ಅತಿ ಅಗತ್ಯವಿರುವ ಹಾಲು-ಮೊಸರಿಗೆ ತೆರಿಗೆ ಇಲ್ಲದೇ ಇರುವುದರಿಂದ ಇವುಗಳ ಧಾರಣೆಯಲ್ಲಿ ಯಾವುದೇ ವ್ಯತ್ಯಾಸ ಇರುವುದಿಲ್ಲ. ತುಪ್ಪ, ಬೆಣ್ಣೆಯ ತೆರಿಗೆ ಇಳಿಕೆಯಾಗುವುದರಿಂದ ಕೊಂಚ ಧಾರಣೆ ಕಡಿಮೆಯಾಗಲಿದೆ. ಬಾದಾಮ್ ಪೌಡರ್, ಜಾಮೂನು ಮಿಕ್ಸ್‌ನ ಧಾರಣೆ ಕೊಂಚ ಏರಿಕೆಯಾಗಲಿದೆ.
ಜಿಎಸ್‌ಟಿಯಿಂದ ಕೆಎಂಎಫ್ ಉತ್ಪನ್ನಗಳಿಗೆ ಯಾವುದೇ ದೊಡ್ಡ ಪರಿಣಾಮ ಬೀರುವುದಿಲ್ಲ. ಕೆಲವೊಂದು ಧಾರಣೆ ವ್ಯತ್ಯಾಸವಾಗಿದೆ. ಆದರೆ 0.5 ಶೇ.ತೆರಿಗೆ ವ್ಯತ್ಯಾಸವಾದ ವಸ್ತುಗಳ ಧಾರಣೆಯನ್ನು ನಾವು ಬದಲಾವಣೆ ಮಾಡುತ್ತಿಲ್ಲ. ಜನರು ಹೆಚ್ಚು ಉಪಯೋಗಿಸುವ ಕೆಎಂಎಫ್ ಉತ್ಪನ್ನಗಳಲ್ಲಿ ಬದಲಾವಣೆಯಾಗಿಲ್ಲ ಎಂದು ದ.ಕ.ಕೆಎಂಎಫ್‌ನ ವ್ಯವಸ್ಥಾಪಕ ನಿರ್ದೇಶಕ ಡಾ| ಬಿ.ವಿ. ಸತ್ಯ ನಾರಾಯಣ ತಿಳಿಸಿದ್ದಾರೆ.
ತರಕಾರಿಗೆ ಅನ್ವಯವಾಗದು
ತರಕಾರಿ, ಹಣ್ಣು ಹಂಪಲುಗಳು ಬೇಗನೆ ಹಾಳಾಗುವ (ಪೆರಿಷಬಲ್) ವಸ್ತುಗಳಾಗಿರುವುದರಿಂದ ಅವುಗಳನ್ನು ಸರಕು ಮತ್ತು ಸೇವಾ ತೆರಿಗೆ (ಜಿ.ಎಸ್.ಟಿ.) ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಆದರೆ 20 ಲಕ್ಷ ರೂ. ಗಳಿಗಿಂತ ಹೆಚುj ವಹಿವಾಟು ನಡೆಸುವ ವ್ಯಾಪಾರಿಗಳಿಗೆ ಜಿ.ಎಸ್.ಟಿ. ಅನ್ವಯವಾಗುತ್ತದೆ.
ವಿಶೇಷವೆಂದರೆ ಜಿ.ಎಸ್.ಟಿ. ಕುರಿತು ಬಹುತೇಕ ತರಕಾರಿ ಮತ್ತು ಹಣ್ಣು ಹಂಪಲು ವ್ಯಾಪಾರಿಗಳಿಗೆ ಮಾಹಿತಿಯೇ ಇಲ್ಲ. ಅವರಿಗೆ ಈ ಕುರಿತು ತಿಳಿವಳಿಕೆ ನೀಡುವ ಕೆಲಸವನ್ನು ಯಾರೂ ಮಾಡಿಲ್ಲ.
ತರಕಾರಿ ಮತ್ತು ಹಣ್ಣು ಹಂಪಲುಗಳಿಗೆ ಜಿ.ಎಸ್.ಟಿ. ಅನ್ವಯವಾಗುವುದಿಲ್ಲ ಎಂದು ಹೇಳಿದ್ದರಿಂದ ಈ ಹೊಸ ತೆರಿಗೆ ವ್ಯವಸ್ಥೆಯ ಕುರಿತಂತೆ ತಿಳಿದುಕೊಳ್ಳುವ ಗೋಜಿಗೂ ವ್ಯಾಪಾರಿಗಳು ಮುಂದಾಗಿಲ್ಲ.
ಮಂಗಳೂರಿನ ಸೆಂಟ್ರಲ್ ಮಾರ್ಕೆಟ್ ಒಳಗಿನ ವ್ಯಾಪಾರಿಗಳ ಪೈಕಿ ಹೆಚ್ಚಿನವರು ತರಕಾರಿ/ ಹಣ್ಣುಗಳನ್ನು ಚಿಲ್ಲರೆಯಾಗಿ ಮಾರಾಟ ಮಾಡುತ್ತಿದ್ದು, ಅವರ ವ್ಯವಹಾರ ದೊಡ್ಡ ಪ್ರಮಾಣದಲ್ಲಿ ಇಲ್ಲ. ಸಗಟು ವ್ಯಾಪಾರಿಗಳಿಂದ ಖರೀದಿಸಿ ಮಾರಾಟ ಮಾಡುವುದರಿಂದ ಸಹಜವಾಗಿಯೇ ಇವರು ಜಿ.ಎಸ್.ಟಿ. ವ್ಯಾಪ್ತಿಗೆ ಬರುವುದಿಲ್ಲ.
ಮಾರ್ಕೆಟ್‌ನ ಹೊರ ಭಾಗದಲ್ಲಿ ಸಗಟು ವ್ಯಾಪಾರಿಗಳಿದ್ದು, ಅವರ ವಹಿವಾಟು ದೊಡ್ಡ ಪ್ರಮಾಣದಲ್ಲಿ ಇರುವುದರಿಂದ ಅವರಲ್ಲಿ ಕೆಲವು ಮಂದಿ ವ್ಯಾಪಾರಿಗಳಾದರೂ ಜಿ.ಎಸ್.ಟಿ. ವ್ಯಾಪ್ತಿಗೆ ಬರುತ್ತಾರೆ. ಆದರೆ ಅವರಿಗೂ ಜಿ.ಎಸ್.ಟಿ. ಬಗೆಗೆ ಮಾಹಿತಿಯ ಕೊರತೆ ಇದೆ.
ಗೊಂದಲದ
ಪರಿಸ್ಥಿತಿ ಇದೆ
ಜಿ.ಎಸ್.ಟಿ. ಬಗ್ಗೆ ನಮಗೆ ಗೊಂದಲವಿದೆ. ಎ.ಪಿ.ಎಂ.ಸಿ. ಗೆ ಅದು ಅನ್ವಯವಾಗುತ್ತದೆಯೇ ಇಲ್ಲವೇ ಎಂದು ತಿಳಿದು ಬಂದಿಲ್ಲ. ನಮ್ಮ ಸಿಬಂದಿಯೊಬ್ಬರನ್ನು ಈ ಕುರಿತು ಅಧ್ಯಯನ ಮಾಡುವುದಕ್ಕಾಗಿ ಕಳುಹಿಸಿಕೊಟ್ಟಿದ್ದೇವೆ ಎನ್ನುತ್ತಾರೆ
-ಪ್ರಮೋದ್ ಕುಮಾರ್,
ಮಂಗಳೂರು
ಎಪಿಎಂಸಿ ಅಧ್ಯಕ್ಷ
ಪರಿಣಾಮಕಾರಿ ಜಾರಿ ಮುಖ್ಯ
ಇದುವರೆಗೆ ವಾಣಿಜ್ಯ ಕ್ಷೇತ್ರಕ್ಕೆ ಸರಿಯಾದ ಒಂದೇ ರೀತಿಯ ನಿರ್ದೇಶನವಿರಲಿಲ್ಲ. ಇನ್ನು ಮುಂದೆ ಇಡೀ ದೇಶಕ್ಕೆ ಒಂದೇ ತೆರನಾದ ಕಾನೂನು ಬರಲಿದೆ. ಇದರಿಂದ ಸರಕಾರಿ ಅಧಿಕಾರಿಗಳ ಕಿರುಕುಳ ತಪ್ಪಬಹುದು. ಮುಂದೆ ಆನ್‌ಲೈನ್ ಪದ್ಧತಿ ಜಾರಿಯಾದರೆ ಉತ್ತಮ. ಇದುವರೆಗೆ ಬೇರೆ ಬೇರೆ ತೆರನಾದ ತೆರಿಗೆ ಪದ್ಧತಿಯಿಂದ ಅನಾರೋಗ್ಯಕರ ಸ್ಪರ್ಧೆ ಇತ್ತು. ಇದು ಮುಂದೆ ನಡೆಯದು, ಒಳವ್ಯವಹಾರಕ್ಕೆ ತಡೆ ಬರಲಿದೆ. ಹೀಗಾಗಿ ನೇರ ವ್ಯಾಪಾರಸ್ಥ ಇದನ್ನು ಸ್ವಾಗತಿಸುತ್ತಾನೆ. ಆದರೆ ಇದು ಸರಿಯಾಗಿ ಜಾರಿಯಾಗುವುದು ಮುಖ್ಯ. ಉತ್ತಮ ಕಾನೂನು ಬಂದು ಜಾರಿಯಾದರೆ ಮಾತ್ರ ಉತ್ತಮ. ಮೊದಲು ಸ್ವಲ್ಪ ಕಷ್ಟವಾದರೂ ಮುಂದೆ ಉತ್ತಮ ಫಲ ಸಿಗಬಹುದು. ಉತ್ತಮ ಕಾನೂನು ಜಾರಿಯಾಗುತ್ತದೆ ಎಂದು ಹಾರೈಸುತ್ತೇವೆ.
– ಶ್ರೀಕೃಷ್ಣರಾವ್ ಕೊಡಂಚ,
ಅಧ್ಯಕ್ಷರು, ಉಡುಪಿ ಚೇಂಬರ್
ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ.
ಬಿಲ್ ವ್ಯವಹಾರ ಉತ್ತಮ
ವ್ಯಾಟ್ ಬಂದಾಗ ಜನರು ಆಕ್ಷೇಪ ಹೇಳಿದರು. ಈಗ ಅದಕ್ಕೆ ಜನರು ಹೊಂದಾಣಿಕೆಯಾದರು. ಜಿಎಸ್‌ಟಿ ಎಂದಾಕ್ಷಣ ಈಗ ಕಷ್ಟವಾಗುತ್ತಿದೆ. ಇದರಲ್ಲಿ ತೆರಿಗೆ ಪ್ರಮಾಣವನ್ನು ಜಾಸ್ತಿ ಮಾಡಿದ್ದಾರೆ. ಸದ್ಯ ಇದು ಕಷ್ಟವಾದರೂ ವ್ಯಾಪಾರಸ್ಥರಿಗಾಗಲೀ, ಜನರಿಗಾಗಲೀ ಮುಂದೆ ಲಾಭ ಇದೆ. ತೆರಿಗೆಯನ್ನು ಜಾಸ್ತಿ ಮಾಡುವುದು ಜನರಿಗಾಗಿ. ಸರಕಾರಕ್ಕೆ ಆದಾಯ ಬಂದರೆ ಮಾತ್ರ ಅದು ಜನರಿಗೆ ಅನುಕೂಲ ಮಾಡಿಕೊಡಲು ಸಾಧ್ಯವಾಗುವುದು. ಮುಂದೆ ಎಲ್ಲವೂ ಬಿಲ್‌ನಲ್ಲಿ ವ್ಯವಹಾರ ಆಗುವುದರಿಂದ ವ್ಯಾಪಾರಸ್ಥರಿಗೆ ಅನುಕೂಲವೇ ಆಗಲಿದೆ. ಇನ್ನು ಮುಂದೆ ಬಿಲ್ ಇಲ್ಲದೆ ವ್ಯವಹಾರ ಸಾಧ್ಯವಾಗುವುದಿಲ್ಲ.
– ಅಲೆವೂರು ನಾಗರಾಜ ಆಚಾರ್ಯ,
ಜಿಲ್ಲಾ ಜುವೆಲರ್ ಅಸೋಸಿಯೇಶನ್, ಉಡುಪಿ
ಕ್ರಾಂತಿಕಾರಿ ಕಾಯಿದೆ
ಇದೊಂದು ಕ್ರಾಂತಿಕಾರಿ ಕಾಯಿದೆಯಾಗಿದೆ. ದೇಶದ ಇತಿಹಾಸದಲ್ಲಿ ಮೊತ್ತ ಮೊದಲ ಬಾರಿ ಜಾರಿಯಾದ ಕ್ರಾಂತಿಕಾರಿ ಕಾಯಿದೆ ಇದು. ಎಲ್ಲಾ ರೀತಿಯ ಚೆಕ್‌ಪೋಸ್ಟ್‌ಗಳು ಮತ್ತು ವಿವಿಧ ಕಾಯಿದೆಗಳನುಸಾರ ಸಲ್ಲಿಸುವ ರಿಟರ್ನ್ಸ್ ಇನ್ನು ಅಗತ್ಯವಿರುವುದಿಲ್ಲ. ಒಂದು ದೇಶ- ಒಂದು ತೆರಿಗೆ ನೀತಿಯಂತೆ ಇದು ಜಾರಿಯಾಗುತ್ತಿದೆ.
– ರೇಖಾ ದೇವಾನಂದ್,
ಸಭಾಪತಿಗಳು, ಭಾರತೀಯ
ಲೆಕ್ಕಪರಿಶೋಧಕರ ಸಂಸ್ಥೆ, ಉಡುಪಿ.
ದೈನಂದಿನ ಸಾಮಗ್ರಿ ಅಗ್ಗ,
ವಿಲಾಸಿ ಸಾಮಗ್ರಿ ದುಬಾರಿ
ಹಿಂದೆ ತೆರಿಗೆ ಪದ್ಧತಿಯಿಂದ ವ್ಯಾಟ್‌ಗೆ ಬರುವಾಗ ಒಪ್ಪಿಕೊಳ್ಳಲು ಸಿದ್ಧರಾಗಲಿಲ್ಲ. ನೋಟು ನಿಷೇಧವಾದಾಗಲೂ “ತೋಳ ಬಂತು ತೋಳ’ ಎಂದು ಹೆದರಿಸಿದರು. ಮತ್ತೆ ಎಲ್ಲವೂ ಸರಿಯಾಯಿತಲ್ಲಾ? ಸರಕಾರ ಮುಂದಿನ ದೃಷ್ಟಿಯಿಂದ ಜಿಎಸ್‌ಟಿ ಪದ್ಧತಿ ಜಾರಿ ಮಾಡಲು ಹೊರಟಿದೆ. ಆಹಾರ ಮೊದಲಾದ ದೈನಂದಿನ ಸಾಮಗ್ರಿಗಳಿಗೆ ರಿಯಾಯಿತಿ ಘೋಷಿಸಿ, ವಿಲಾಸಿ ವಸ್ತುಗಳಿಗೆ ಹೆಚ್ಚಿನ ತೆರಿಗೆ ವಿಧಿಸಿದೆ. ಹೀಗಾಗಿ ಜನಸಾಮಾನ್ಯರಿಗೆ ಏನೂ ತೊಂದರೆ ಆಗುವುದಿಲ್ಲ. ದೇಶವೂ, ಕೈಗಾರಿಕಾ ರಂಗವೂ ಮುಂದೆ ಅಭಿವೃದ್ಧಿ ಹೊಂದುವುದರಿಂದ ಇದು ಉತ್ತಮವೇ. ಜನರು ಸಹಕಾರ ಕೊಡಬೇಕು. ದೇಶಕ್ಕೆ ಇದು ಐದು ವರ್ಷಗಳ ಹಿಂದೆಯೇ ಬಂದಿದ್ದರೂ ಒಳ್ಳೆಯದಿತ್ತು. ಈಗಲಾದರೂ ಬೆಂಬಲ ಕೊಡಬೇಕು.
– ಹೆಬ್ರಿ ಸುಧೀರ್ ನಾಯಕ್,
ಜಿಲ್ಲಾಧ್ಯಕ್ಷರು, ಸಣ್ಣ ಕೈಗಾರಿಕೆಗಳ ಸಂಘ, ಮಣಿಪಾಲ.
ತೆರಿಗೆ ಇಳಿಸಬೇಕು
ಜಿಎಸ್‌ಟಿ ತೆರಿಗೆಯನ್ನು ಶೆ.18ರಿಂದ 12ಕ್ಕೆ ಇಳಿಸಬೇಕು ಎಂದು ನಾವು ಜಿಲ್ಲಾ ಸಂಘದಿಂದ ರಾಜ್ಯ ಸಂಘದ ಮೂಲಕ ಸರಕಾರಕ್ಕೆ ಮನವಿ ಮಾಡಿದ್ದೆವು. ಮಾಡಿದಂತೆ ಇಲ್ಲ. ಇದನ್ನು ಆಗಗೊಡಬೇಕು.
– ತಲ್ಲೂರು ಶಿವರಾಮ ಶೆಟ್ಟಿ,
ಜಿಲ್ಲಾಧ್ಯಕ್ಷರು, ಹೊಟೇಲ್ ಮಾಲಕರ ಸಂಘ, ಉಡುಪಿ
ಸ್ಪಷ್ಟ ಮಾಹಿತಿ ಇಲ್ಲ
ಜಿಎಸ್‌ಟಿ ಕುರಿತು ಸ್ಪಷ್ಟ ಮಾಹಿತಿ ಇಲ್ಲ. ಇಲಾಖೆಯವರಿಗೇ ಪೂರ್ಣ ಮಾಹಿತಿ ಇಲ್ಲ. ಸಣ್ಣ ಮತ್ತು ಮಧ್ಯಮ ವರ್ಗದ ವ್ಯಾಪಾರಸ್ಥರಿಗೆ ಗೊಂದಲ ಇದೆ. ಸಣ್ಣ ವ್ಯಾಪಾರಸ್ಥರು ಕಂಪ್ಯೂಟರೀಕರಣದ ವ್ಯಾಪ್ತಿಗೆ ಬರುವುದು ಕಷ್ಟ. ಇಲಾಖಾಧಿಕಾರಿಗಳೇ ತಾವು ಲೆಕ್ಕದಿಂದ ಹೆಚ್ಚು ದುಡಿಯುತ್ತಿದ್ದೇವೆ ಎನ್ನುತ್ತಿದ್ದಾರೆ. ಅವರೂ ಗಡಿಬಿಡಿಯಲ್ಲಿದ್ದಾರೆ. ಇನ್ನು ಎರಡು ತಿಂಗಳು ವಿಳಂಬ ಮಾಡಿ ಇದನ್ನು ಜಾರಿಗೊಳಿಸುವುದು ಉತ್ತಮ. ಸರಕಾರಕ್ಕೆ ಸುಲಭವಾಗಬಹುದಾದರೂ ಜನರಿಗೆ ಕಷ್ಟವಾಗಿದೆ. ನಿಯಮವೇ ಪೂರ್ತಿ ರೂಪುಗೊಳ್ಳದೆ ಜಾರಿ
ಮಾಡಿದರೆ ಕಷ್ಟ.
– ಪ್ರಸಾದ್ ಉಪಾಧ್ಯಾಯ,
ಟ್ಯಾಕ್ಸ್ ಬಾರ್ ಅಸೋಸಿಯೇಶನ್, ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಎಸ್‌ಟಿಪಿಗಳಲ್ಲಿ ಸಂಸ್ಕರಣೆ ಆಗದೆ ಕೊಳಚೆ ನೀರು ನೇರ ನದಿ, ಕೆರೆಗೆ!
Bajpe ಪ.ಪಂ.ನಿಂದ ಕುಡಿಯುವ ನೀರು ಪೂರೈಕೆಗೆ ಹೊಸ ಚಿಂತನೆ; ಹೊಸ ಬೋರ್‌ವೆಲ್‌ಗೆ ಸೌರ ಪಂಪ್
Mannagudda: ಗಡ್ಡೆ ಗೆಣಸು ಸೊಪ್ಪುಗಳಿಗೆ ರಾಜ ಮರ್ಯಾದೆ!
ಉಮ್ರಾ ಯಾತ್ರೆಗೆ ತೆರಳಿ ವಂಚನೆ : ಸಂತ್ರಸ್ತರನ್ನು ಊರಿಗೆ ಕರೆಸಿಕೊಂಡ ಮೊಯ್ದಿನ್ ಬಾವ
ಜ.6- 9: ಜೋಕಟ್ಟೆ ಲೆವೆಲ್‌ಕ್ರಾಸ್ ಬಂದ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.