ಸಿಹಿಗೆಣಸು; ಉಪಬೆಳೆಯಾಗಿ ಉತ್ತಮ ಆದಾಯ
Team Udayavani, Jul 3, 2017, 3:45 AM IST
ಉಷ್ಣ ವಲಯದ ಪ್ರಮುಖ ತರಕಾರಿಗಳಲ್ಲಿ ಸಿಹಿಗೆಣಸು ಕೂಡ ಒಂದು. ಉಪಬೆಳೆಯಾಗಿ ಇದರಲ್ಲಿ ಉತ್ತಮ ಆದಾಯ ಗಳಿಸಬಹುದು. ಇದು ಒಂದು ಗೆಡ್ಡೆ ತರಕಾರಿಯಾಗಿದ್ದು, ಬಳ್ಳಿಯಂತೆ ಹಬ್ಬಿ ಬೆಳೆಯುವ ಸಸಿ. ದಕ್ಷಿಣ ಅಮೆರಿಕ ಮೂಲದ ಸಿಹಿಗೆಣಸು “Convolvulaceae’ ‘ ಎಂಬ ಕುಟುಂಬ ವರ್ಗಕ್ಕೆ ಸೇರಿದೆ. ಇದರ ಸಸ್ಯಶಾಸ್ತ್ರೀಯ ಹೆಸರು
“ಐಪೋಮಿಯಾ ಬಟಾಟಸ್’. ಹಲವಾರು ಬಣ್ಣಗಳ ಗೆಣಸುಗಳನ್ನು ಕಾಣಬಹುದು. ಮುಖ್ಯವಾಗಿ ಬಿಳಿ, ಹೊಂಬಣ್ಣ, ಕಿತ್ತಳೆ, ಕೆಂಪು ಮಿಶ್ರಿತ ಕಂದು ಬಣ್ಣ ಇತ್ಯಾದಿ.
ತಳಿಗಳು
ತೈವಾನ್ ಮೂಲದ ಪುಸಾ ಸಫೇದ್ ಬಿಳಿಯ ಬಣ್ಣದ ಗೆಡ್ಡೆಗಳನ್ನು ಉತ್ಪಾದಿಸುತ್ತದೆ. ಅಧಿಕ ಇಳುವರಿ ಉತ್ತಮ ಗುಣಮಟ್ಟದ ಗೆಡ್ಡೆಗಳನ್ನು ನೀಡುತ್ತದೆ.
ಜಪಾನ್ ಮೂಲದ ಗೆಣಸಿನಿಂದ ಕಸಿ ಕಟ್ಟಿ ಪುಸಾ ಲಾಲ… ತಳಿಯನ್ನು ಸಿದ್ಧಪಡಿಸಲಾಗಿದೆ. ಇದು ಕೆಂಪು ಬಣ್ಣದ ಗೆಡ್ಡೆ ನೀಡುತ್ತದೆ. ಅಲ್ಲದೆ ಬಹುಕಾಲ ಸಂಗ್ರಹ ಯೋಗ್ಯವಾಗಿವೆ. ಅಧಿಕ ಪ್ರಮಾಣದ ಕ್ಯಾರೊಟೀನ್ ಹೊಂದಿರುವ ಪುಸಾ ಸುನೇರಿ ತಳಿ ನಸುಕಿತ್ತಳೆ ಬಣ್ಣದ ಗೆಡ್ಡೆಗಳನ್ನು ಬಿಡುತ್ತದೆ.
ಇವುಗಳಲ್ಲದೆ ಭಾರತದ ವಿವಿಧ ರಾಜ್ಯಗಳಲ್ಲಿ ಇನ್ನೂ ಹಲವು ರೀತಿಯ ಗೆಣಸುಗಳಿವೆ. ಬಿಹಾರದಲ್ಲಿ V3, V9, SP ಲಲ್ಕಾಗಳೂ ಕರ್ನಾಟಕದಲ್ಲಿ V12 ಹೊಸೂರು ಕೆಂಪು ಮತ್ತು ಹೊಸೂರು ಹಸುರುಗಳೂ ಪಂಜಾಬಿನಲ್ಲಿ V2, V6, VSಗಳೂ ಕೊಯಮತ್ತೂರಿನಲ್ಲಿ ಭದ್ರಕಾಳಿ, ವೆಲ್ಮನ್, V12, V6ಗಳೂ, ಪಶ್ಚಿಮ ಬಂಗಾಳದಲ್ಲಿ ರೇಂಜರ್, ವರ್ಷಾ, ಶ್ರೀನಂದಿನಿ, ಶ್ರೀವರ್ಧಿನಿ, ಶ್ರೀರತ್ನಾ, ಕ್ರಾಸ್ 4, ಕಲಾಮೇಘ, ಶ್ರೀವರುಣ, ಶ್ರೀ ಅರುಣ, ಆಶ್ವಿನಿ ಮೊದಲಾದವುಗಳಿವೆ.
ಬೇರೆ ದೇಶಗಳಲ್ಲಿ ಬೆಳೆಯುವ ಮುಖ್ಯ ಗೆಣಸಿನ ತಳಿಗಳೆಂದರೆ ಹವಾಯ…: HS 107, ಅಮೆರಿಕ ಸಂಯುಕ್ತ ಸಂಸ್ಥಾನ: ರೆಡ್ ನ್ಯಾನ್ಸಿ, ಆರ್ಲಿಸ್, ನೆಮಗೋಲ್ಡ್, ಆಲ್ಗೊàಲ್ಡ್, ಗೋಲ್ಡ್‌ರಷ್ ಮತ್ತು ಸೆಂಟಿನಿಯಲ…, ವೆಸ್ಟ್ ಇಂಡೀಸ್: ಬ್ಲ್ಯಾಕ್ ರಾಕ್ ಮತ್ತು ರೆಡ್ ನಟ್.
ಕೃಷಿ ಹೇಗೆ ?
ಗೆಣಸು ಗೆಡ್ಡೆಗಳಲ್ಲಿ ಬರುವ ಮೊಳಕೆಗಳನ್ನು ನೆಡುವ ಮೂಲಕ ಅಥವಾ ಬಳ್ಳಿಯ ಕಾಂಡ (ಹಂಬು) ತುಂಡು ಮಾಡಿ ನಾಟಿ ಮಾಡುವ ಮೂಲಕ ಕೃಷಿ ಮಾಡಲಾಗುತ್ತದೆ. ಉತ್ತಮ ಇಳುವರಿಗೆ ಆಯ್ದ ಗೆಣಸಿನ ಮೊಳಕೆಗಳನ್ನು ನಾಟಿ ಮಾಡುವುದು ಉತ್ತಮ. ಆದರೆ ಹೆಚ್ಚಿನ ಕಡೆ ಸುಲಭ ವಿಧಾನವಾದ ಕಾಂಡ ತುಂಡರಿಸಿ ನಾಟಿ ಮಾಡುವದನ್ನು ಅನುಸರಿಸಲಾಗುತ್ತೆ.
ಸುಮಾರು ಎರಡು ಅಡಿ ಅಗಲಕ್ಕೆ ಒಂದು ಅಡಿ ಆಳ ಮಣ್ಣನ್ನು ಅಗೆದು ಅದಕ್ಕೆ ಸ್ವಲ್ಪ ಸುಡು ಮಣ್ಣು, ಒಣಗಿದ ಹಟ್ಟಿಗೊಬ್ಬರ ಸೇರಿ ಮಡಿ ತಯಾರಿಸಿ ಅದರಲ್ಲಿ ಮೂರು ಅಡಿ ದೂರಕ್ಕೆ ಗೆಣಸಿನ ಮೊಳಕೆ ಅಥವಾ 2ರಿಂದ 3 ಅಡಿ ಉದ್ದದ ಗೆಣಸಿನ ಬಳ್ಳಿಯ ಕಾಂಡ (ಹಂಬು)ಗಳನ್ನು ತುಂಡರಿಸಿ ನಾಟಿ ಮಾಡಬೇಕು. ಬಳಿಕ ಅದಕ್ಕೆ ಬೇರೆಡೆಯಿಂದ ಸ್ವಲ್ಪ ಮಣ್ಣು ಸೇರಿಸಿ ನೆಲದಿಂದ ಒಂದು ಅಡಿ ಎತ್ತರಿಸಬೇಕು. ಮಡಿಗಳು ಸುಮಾರು ಐದು ಅಡಿ ದೂರ ಇದ್ದರೆ ಬಳ್ಳಿ ಹಬ್ಬಿ ಬೆಳೆಯಲು ಸಹಕಾರಿ.
ಕಾಂಡ ತುಂಡುಗಳನ್ನು ನೆಟ್ಟ ಸುಮಾರು 10ರಿಂದ 15 ದಿನಗಳಲ್ಲಿ ಅವುಗಳು ಬೇರು ಬಿಟ್ಟು 3 ವಾರಗಳೊಳಗಾಗಿ ಹುಲುಸಾಗಿ ಬೆಳೆಯಲಾರಂಭಿಸುತ್ತವೆ. ಆಗ ಗೊಬ್ಬರ, ಸೊಪ್ಪು ನೀಡಿ ಅದರ ಮೇಲೆ ಮಣ್ಣು ಹಾಕಿ ಮುಚ್ಚಬೇಕು. ಮಡಿಯ ಮೇಲೆ ಹುಟ್ಟುವ ಕಳೆ ಕೀಳುವುದು ಬಳ್ಳಿ ಚೆನ್ನಾಗಿ ಬೆಳೆಯಲು ಸಹಕಾರಿ. ಪ್ರತಿ ದಿನ ಸ್ವಲ್ಪ ನೀರು ಹಾಕಬೇಕು. ನಾಟಿ ಮಾಡಿ 4ರಿಂದ 6 ತಿಂಗಳುಗಳಲ್ಲಿ ಗೆಣಸು ಕೊಯ್ಲಿಗೆ ಬರುತ್ತವೆ. ಗೆಣಸಿನ ಎಲೆಗಳು ಹಣ್ಣಾಗಲಾರಂಭಿಸುವುದೇ ಗೆಡ್ಡೆ ಕೊಯ್ಲಿಲಿಗೆ ಸಿದ್ಧವಾಗಿದೆ ಎಂಬುದರ ಸೂಚನೆ.
ರೋಗ, ಪ್ರಾಣಿಗಳ ಕಾಟ
ಸಿಹಿಗೆಣಸಿಗೆ ವಿವಿಧ ರೀತಿಯ ಶಿಲೀಂಧ್ರ ರೋಗಗಳು, ಕಪ್ಪುಕೊಳೆ ರೋಗ, ಕಾಂಡದ ಕೊಳೆಯುವಿಕೆ, ಕೀಟಗಳು, ಕಂಬಳಿ ಹುಳ, ಗೆದ್ದಲುಗಳ ಕಾಟ ಬಹಳಷ್ಟಿರುತ್ತದೆ ಮತ್ತು ಪ್ರಾಣಿಗಳ ಉಪಟಳದ ಬಗ್ಗೆಯೂ ಕೃಷಿಕರು ಎಚ್ಚರ ವಹಿಸಬೇಕಾಗುತ್ತದೆ.
ಹವಾಗುಣ ಮತ್ತು ಮಣ್ಣು
ವಿಪರೀತ ಮಳೆ ಬೀಳುವ, ಚಳಿ ಪ್ರದೇಶ ಸಿಹಿಗೆಣಸಿ ಕೃಷಿಗೆ ಅಷ್ಟು ಸೂಕ್ತವಲ್ಲ. ಇದು ಮುಖ್ಯವಾಗಿ ಉಷ್ಣ ವಲಯದ ಬೆಳೆ. 21-26 ಡಿಗ್ರಿ ಸೆ. ಉಷ್ಣಾಂಶ ಇರುವ ಪ್ರದೇಶವಾದರೆ ಉತ್ತಮ. ಅವಿಭಜಿತ ದಕ್ಷಿಣ ಕನ್ನಡದಂತಹ ಪ್ರದೇಶದಲ್ಲಿ ಜೂನ್ -ಜುಲೈ ಅಥವಾ ಡಿಸೆಂಬರ್ -ಜನವರಿ ಇದರ ನಾಟಿಗೆ ಸೂಕ್ತ ಸಮಯ.
ಗೆಣಸು ಎಲ್ಲ ರೀತಿಯ ಮಣ್ಣುಗಳಲ್ಲಿ ಬೆಳೆಯಬಹುದಾದರೂ ಮರಳು ಮಿಶ್ರಿತ ಗೋಡು ಮಣ್ಣು ಅತ್ಯುತ್ತಮ. ಮಣ್ಣು ಸರಾಗವಾಗಿ ನೀರು ಬಸಿದು ಹೋಗುವಂತೆ ಇದ್ದರೆ ಇಳುವರಿ ಹೆಚ್ಚು. ಈ ಕೃಷಿಗೆ ಸಮತಟ್ಟಾದ ಬಿಸಿಲು ಬೀಳುವ ಬಯಲು ಪ್ರದೇಶ ಅಗತ್ಯ.
– ಗಣೇಶ ಕುಳಮರ್ವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.