ಹಿಂದಿ ಬಳಸಲು ಆದೇಶಿಸಿದ್ದೇ ಕೇಂದ್ರ
Team Udayavani, Jul 4, 2017, 11:51 AM IST
ಬೆಂಗಳೂರು: ಒಂದೆಡೆ “ನಮ್ಮ ಮೆಟ್ರೋ’ ನಿಲ್ದಾಣಗಳಲ್ಲಿ ಹಿಂದಿ ಹೇರಿಕೆ ವಿರುದ್ಧ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಆದರೆ, ಮತ್ತೂಂದೆಡೆ ಸ್ವತಃ ಕೇಂದ್ರ ನಗರಾಭಿವೃದ್ಧಿ ಸಚಿವಾಲಯವು ಮೆಟ್ರೋ ನಿಲ್ದಾಣಗಳಲ್ಲಿ ಹಿಂದಿ ಅಳವಡಿಸುವಂತೆ ಆದೇಶಿಸಿರುವುದು ತಡವಾಗಿ ಬೆಳಕಿಗೆಬಂದಿದೆ.
“ಅಧಿಕೃತ ಭಾಷಾ ನೀತಿ’ ಅನ್ವಯ ಹಿಂದಿಯೇತರ ರಾಜ್ಯಗಳಲ್ಲಿರುವ ಎಲ್ಲ ಮೆಟ್ರೋ ನಿಲ್ದಾಣಗಳಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಸೂಚನಾಫಲಕಗಳು, ಧ್ವನಿ ಆಧಾರಿತ ಪ್ರಕಟಣೆಗಳನ್ನು ನೀಡುವುದು ಅತ್ಯವಶ್ಯಕ’ ಎಂದು ದೆಹಲಿಯ ನಗರಾಭಿವೃದ್ಧಿ ಸಚಿವಾಲಯದ ಅಧೀನ ಕಾರ್ಯದರ್ಶಿಗಳು ಹೊರಡಿಸಿದ ಸೂಚನೆಯಲ್ಲಿ ಹೇಳಲಾಗಿದೆ.
2016ರ ಅಕ್ಟೋಬರ್ 18ರಂದು ಕೊಚ್ಚಿಯಲ್ಲಿ ನಡೆದ ಸಭೆಯಲ್ಲಿ ನಗರಾಭಿವೃದ್ಧಿ ಸಚಿವರೇ ಈ ನಿರ್ದೇಶನ ಹೊರಡಿಸಿದ್ದು, ಅದರಂತೆ ಈ ಮೇಲಿನ ಸೂಚನೆ ಹೊರಡಿಸಲಾಗಿದೆ ಎಂದೂ ಅಧೀನ ಕಾರ್ಯದರ್ಶಿಗಳು ಉಲ್ಲೇಖೀಸಿದ್ದಾರೆ. ಈ ನಿರ್ದೇಶನವನ್ನು ಬಿಎಂಆರ್‌ಸಿ ಸೇರಿದಂತೆ ಎಲ್ಲ ಮೆಟ್ರೋ ರೈಲು ನಿಗಮಗಳ ವ್ಯವಸ್ಥಾಪಕ ನಿರ್ದೇಶಕರಿಗೆ ನೀಡಲಾಗಿದೆ. ಅದರಂತೆ “ನಮ್ಮ ಮೆಟ್ರೋ’ದಲ್ಲಿ ಅಧಿಕೃತವಾಗಿಯೇ ಹಿಂದಿ ಹೇರಿಕೆ ಮಾಡಲಾಗುತ್ತಿದೆ.
ಈಚೆಗೆ ಕನ್ನಡಪರ ಸಂಘಟನೆಗಳು “ನಮ್ಮ ಮೆಟ್ರೋ’ ನಿಲ್ದಾಣಗಳಲ್ಲಿ ಹಿಂದಿ ಹೇರಿಕೆ ವಿರುದ್ಧ ನಡೆಸಿದ ಪ್ರತಿಭಟನೆ ಸಂದರ್ಭದಲ್ಲಿ ಈ ಆದೇಶದ ಪ್ರತಿಯನ್ನು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿ)ದ ಅಧಿಕಾರಿಗಳು ಪ್ರತಿಭಟನಾನಿರತರ ಕೈಗಿಟ್ಟು ಕಳುಹಿಸಿದ್ದಾರೆ. ಈ ಆದೇಶದ ಪ್ರತಿ “ಉದಯವಾಣಿ’ಗೆ ಲಭ್ಯವಾಗಿದೆ.
ಆದರೆ, “ಅಧಿಕೃತ ಭಾಷಾ ನೀತಿ’ ಬಿಎಂಆರ್‌ಸಿಯ “ನಮ್ಮ ಮೆಟ್ರೋ’ಗೆ ಅನ್ವಯ ಆಗುವುದಿಲ್ಲ. ಯಾಕೆಂದರೆ, ಅಧಿಕೃತ ಭಾಷಾ ನೀತಿ ಕಾಯ್ದೆ-1963ರ ಪ್ರಕಾರ ಕೇಂದ್ರ ಸರ್ಕಾರಿ ಸ್ವಾಮ್ಯದ ಕಚೇರಿಗಳು, ಸಚಿವಾಲಯಗಳು, ಆಯೋಗ ಅಥವಾ ಕೇಂದ್ರ ರಚನೆ ಮಾಡಿರುವ ನ್ಯಾಯಾಧೀಕರಣ ಅಥವಾ ಕೇಂದ್ರ ಸ್ವಾಮ್ಯದ ಯಾವುದೇ ನಿಗಮ-ಮಂಡಳಿಗಳು ಮಾತ್ರ ಈ ಕಾಯ್ದೆ ವ್ಯಾಪ್ತಿಗೆ ಒಳಪಡುತ್ತವೆ ಎಂದು ಹೇಳಲಾಗಿದೆ.
ಯಾವುದೋ ಸಭೆಯ ನಿರ್ಧಾರ ಶಾಸನ ಅಲ್ಲ
ಯಾವುದೋ ಒಂದು ಸಭೆಯಲ್ಲಿ ತೆಗೆದುಕೊಂಡ ತೀರ್ಮಾನ ಶಾಸನ ಅಲ್ಲ. ಅದೊಂದು ಏಕವ್ಯಕ್ತಿ ಅಥವಾ ಏಕಪಕ್ಷೀಯ ತೀರ್ಮಾನ ಆಗಿರುತ್ತದೆ. ಅದನ್ನು ಎಲ್ಲ ರಾಜ್ಯಗಳೂ ಒಪ್ಪಿಕೊಳ್ಳಬೇಕು ಎಂದಲ್ಲ. ಹಾಗೊಂದು ವೇಳೆ ಅದು ಸಂಸತ್ತು ಅಥವಾ ಶಾಸಕಾಂಗದಲ್ಲಿ ತೆಗೆದುಕೊಂಡ ನಿರ್ಧಾರವಾದರೆ ಮಾತ್ರ ಶಾಸನ ಆಗುತ್ತದೆ. ಹೀಗಿರುವಾಗ, ಅಧಿಕಾರಿಗಳು ಆ ಸಭೆಯ ಒಂದು ತೀರ್ಮಾನ ಇಟ್ಟುಕೊಂಡು ಹಿಂದಿ ಹೇರುವುದು ತಪ್ಪು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಹೇಳುತ್ತಾರೆ.
ತ್ರಿಭಾಷಾ ಸೂತ್ರ ಅಥವಾ ಅಧಿಕೃತ ಭಾಷಾ ನೀತಿ ಎಲ್ಲದಕ್ಕೂ ಅನ್ವಯ ಆಗುವುದಿಲ್ಲ. ಇನ್ನು ಕೇಂದ್ರ ಸರ್ಕಾರ ಆರ್ಥಿಕ ನೆರವು ನೀಡಿದ ಮಾತ್ರಕ್ಕೆ ಬಿಎಂಆರ್‌ಸಿ ಕೇಂದ್ರದ್ದಾಗುವುದಿಲ್ಲ. ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಗೂ ಕೇಂದ್ರ ಅನುದಾನ ನೀಡುತ್ತದೆ. ಹಾಗಾದರೆ, ಅಲ್ಲಿಯೂ ಹಿಂದಿ ಹೇರುತ್ತಾರಾ ಎಂದು ಕೇಳಿದ ಅವರು, ಬಿಎಂಆರ್‌ಸಿಯು ಹೋರಾಟಗಾರರಿಗೆ ನೀಡಿದ ಕೇಂದ್ರದ ನಿರ್ದೇಶನದ ಪ್ರತಿಯನ್ನು ಪಡೆದು, ಕಾನೂನು ಸಲಹೆಗಾರರೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.
ನೀತಿ ವ್ಯಾಪ್ತಿಗೆ ಬರುವುದೇ ಇಲ್ಲ
ಬಿಎಂಆರ್‌ಸಿ ರಾಜ್ಯ ಸರ್ಕಾರದಡಿ ಬರುತ್ತದೆ. ಮೆಟ್ರೋ ಯೋಜನೆಗೆ ಕೇಂದ್ರ ಸರ್ಕಾರ ಆರ್ಥಿಕ ನೆರವು ನೀಡಿದೆ ಅಷ್ಟೇ. ಆದರೆ, ಅಲ್ಲಿ ಅಧಿಕೃತ ಭಾಷಾ ನೀತಿ ನೆಪದಲ್ಲಿ ಹಿಂದಿ ಹೇರಲಾಗುತ್ತಿದೆ. ಈ ನೀತಿ ಅನ್ವಯ ಆಗುವುದೇ ಇಲ್ಲ. ಹಾಗೊಂದು ವೇಳೆ ಬಿಎಂಆರ್‌ಸಿ ಕೇಂದ್ರ ಸ್ವಾಮ್ಯಕ್ಕೆ ಒಳಪಡುತ್ತದೆ ಎಂದಾದರೆ, ಹಿಂದಿ ಮತ್ತು ಇಂಗ್ಲಿಷ್ ಕಡ್ಡಾಯ ಆಗಲಿದೆ. ಬೆನ್ನಲ್ಲೇ ಕನ್ನಡವನ್ನು ಮೆಟ್ರೋ ನಿಲ್ದಾಣಗಳಲ್ಲಿ ತೆರವುಗೊಳಿಸಬೇಕಾಗುತ್ತದೆ. ಆರ್ಥಿಕ ನೆರವು ನೀಡಿದ ಮಾತ್ರಕ್ಕೆ ಮೆಟ್ರೋ ಕೇಂದ್ರದ್ದಾಗುವುದಿಲ್ಲ ಎಂದು ಕನ್ನಡ ಗ್ರಾಹಕ ಒಕ್ಕೂಟದ ಅರುಣ್ ಜಾವಗಲ್ ಹೇಳುತ್ತಾರೆ.
ನಾಯ್ಡು ಅವರಿಂದ ಸೇಡಿನ ಕ್ರಮ
“ಅಧಿಕೃತ ಭಾಷಾ ನೀತಿ’ ಅಡಿ ಹಿಂದಿ ಅಳವಡಿಸಬಹುದು ಎಂದು ನಿರ್ದೇಶನ ನೀಡಿರುವ ಆದೇಶದ ಪ್ರತಿ ನನಗೂ ಲಭ್ಯವಾಗಿದೆ. ಕೇಂದ್ರ ಸಚಿವ ವೆಂಕಯ್ಯನಾಯ್ಡು ಅವರನ್ನು ಈ ಬಾರಿ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆ ಮಾಡಬಾರದು ಎಂದು ತೀವ್ರ ಪ್ರತಿಭಟನೆ ನಡೆಯಿತು. ಅದನ್ನು ಮನಸ್ಸಿನಲ್ಲಿಟ್ಟುಕೊಂಡು ಸಚಿವ ವೆಂಕಯ್ಯನಾಯ್ಡು ಅವರು, ಸೇಡಿನಿಂದ ಕೊಚ್ಚಿ ಸಭೆಯಲ್ಲಿ ಈ ನಿರ್ದೇಶನ ಹೊರಡಿಸಿದ್ದಾರೆ. ಇದರ ವಿರುದ್ಧ ತೀವ್ರ ಹೋರಾಟ ನಡೆಯಲಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಟಿ.ಎ. ನಾರಾಯಣಗೌಡ ತಿಳಿಸಿದ್ದಾರೆ.
ಅಷ್ಟಕ್ಕೂ 2016ರ ಡಿಸೆಂಬರ್‌ನಲ್ಲಿ ಅಧಿಕೃತ ಭಾಷಾ ನೀತಿ ನೆಪದಲ್ಲಿ ಹಿಂದಿ ಅಳವಡಿಕೆಗೆ ಸೂಚನೆ ನೀಡಲಾಗಿದೆ. ಆದರೆ, ಬಿಎಂಆರ್‌ಸಿಯು 2011ರಿಂದಲೇ ನಿಲ್ದಾಣಗಳಲ್ಲಿ ಹಿಂದಿ ಅಳವಡಿಕೆ ಮಾಡುತ್ತಿದೆ. ಇದೆಷ್ಟು ಸರಿ? ಈ ಬಗ್ಗೆ ಕೇಳಿದಾಗ, ಇದು ಮಂಡಳಿಯ ನಿರ್ಧಾರ ಎಂದು ಅಧಿಕಾರಿಗಳು ಸಮಜಾಯಿಷಿ ನೀಡುತ್ತಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಉಪಾಧ್ಯಕ್ಷ ಸಣ್ಣೀರಪ್ಪ ಆಕ್ರೋಶ ವ್ಯಕ್ತಪಡಿಸುತ್ತಾರೆ.
ಈ ಆದೇಶದ ಪ್ರತಿ ಬಗ್ಗೆ ಸ್ಪಷ್ಟನೆ ಕೇಳಲು ಹಲವು ಬಾರಿ ಬಿಎಂಆರ್‌ಸಿ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ವಸಂತರಾವ್ ಅವರಿಗೆ ಮೊಬೈಲ್ ಕರೆ ಮಾಡಲಾಯಿತು. ಹಾಗೂ ಸಂದೇಶ ಕಳುಹಿಸಿದರೂ ಅವರಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ.
ಮೂರು ನಿಲ್ದಾಣಗಳಲ್ಲಿ ಮಾತ್ರ ಹಿಂದಿಗೆ ಸ್ಟಿಕ್ಕರ್
ಮೆಜೆಸ್ಟಿಕ್, ಚಿಕ್ಕಪೇಟೆ ಸೇರಿದಂತೆ ಮೂರು ಮೆಟ್ರೋ ನಿಲ್ದಾಣಗಳಲ್ಲಿ ಮಾತ್ರ ಹಿಂದಿ ಫಲಕಗಳಿಗೆ ಸ್ಟಿಕರ್ ಅಂಟಿಸಿ ಮರೆ ಮಾಡಲಾಗಿದೆ. ಆದರೆ, ಕೆ.ಆರ್. ಮಾರುಕಟ್ಟೆ, ನ್ಯಾಷನಲ್ ಕಾಲೇಜು ಸೇರಿದಂತೆ ಉಳಿದ ನಿಲ್ದಾಣಗಳಲ್ಲಿ ಹಿಂದಿ ಫಲಕಗಳು ಸೋಮವಾರ ಕೂಡ ಕಂಡುಬಂದವು.
ಹಿಂದಿ ಫಲಕಗಳ ತೆರವಿಗೆ ಸಂಬಂಧಿಸಿದಂತೆ ಬಿಎಂಆರ್‌ಸಿಗೆ ನೀಡಿದ ಗಡುವು ಮುಗಿದಿದೆ. ಆದ್ದರಿಂದ ಗುರುವಾರ ಬೆಳಿಗ್ಗೆ 10.30ಕ್ಕೆ ಏಕಕಾಲದಲ್ಲಿ ಎಲ್ಲ 37 ನಿಲ್ದಾಣಗಳಿಗೆ ಕರವೇ ಕಾರ್ಯಕರ್ತರು ಮುತ್ತಿಗೆ ಹಾಕಿ, ಹಿಂದಿ ಫಲಕಗಳಿಗೆ ಮಸಿ ಬಳಿಯಲಿದ್ದಾರೆ ಎಂದು ವೇದಿಕೆ ಅಧ್ಯಕ್ಷ ಟಿ.ಎ. ನಾರಾಯಣಗೌಡ ಎಚ್ಚರಿಸಿದ್ದಾರೆ.
* ವಿಜಯಕುಮಾರ್ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ಇಸ್ಪೀಟ್ ಅಡ್ಡೆಯ ಮೇಲೆ ಡಿವೈಎಸ್ಪಿ ದಾಳಿ; ಮಾಜಿ ಅಧ್ಯಕ್ಷ-ಹಾಲಿ ಉಪಾಧ್ಯಕ್ಷ ಸೇರಿ 8 ಜನರ ಬಂಧನ
Anthyarambha: ನ.28ರಂದು ಕೊಂಕಣಿ ಚಲನಚಿತ್ರ “ಅಂತ್ಯಾರಂಭ’ ಪ್ರದರ್ಶನ
Belagavi Session: ರಾಜಕೀಯ ಕಿತ್ತಾಟ ಏನಿದ್ದರೂ ಸದನದ ಹೊರಗೆ ನಡೆಸಿ: ಯು.ಟಿ. ಖಾದರ್
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Kiccha Sudeepa: ಕ್ರಿಸ್ಮಸ್ ಗೆ ಬರುತ್ತಿದೆ ʼಮ್ಯಾಕ್ಸ್ʼ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.