ಕರಾವಳಿಯಲ್ಲಿ ಎಚ್1ಎನ್1 ಬಾಧಿತರ ಸಂಖ್ಯೆ ವೃದ್ಧಿ
Team Udayavani, Jul 5, 2017, 3:45 AM IST
ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಎಚ್1ಎನ್1 ಸಾಂಕ್ರಾಮಿಕ ಜ್ವರ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಕಳೆದ ಆರು ತಿಂಗಳಲ್ಲಿ 291 ಪ್ರಕರಣಗಳು ದೃಢಪಟ್ಟಿವೆ. ಈಗಾಗಲೇ ಈ ಜ್ವರಕ್ಕೆ ಉಭಯ ಜಿಲ್ಲೆಗಳಲ್ಲಿ ಒಟ್ಟು ಆರು ಮಂದಿ ಮೃತಪಟ್ಟಿದ್ದಾರೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಎರಡೂ ಜಿಲ್ಲೆಗಳಲ್ಲಿ ಎಚ್1ಎನ್1 ಪ್ರಕರಣಗಳ ಸಂಖ್ಯೆಯಲ್ಲಿ ತೀವ್ರ ಹೆಚ್ಚಳವಾಗಿದೆ. ಅದ ರಲ್ಲಿಯೂ ಮಳೆಗಾಲ ಆರಂಭವಾದ ಬಳಿಕ ಅಂದರೆ ಜೂನ್ ಒಂದೇ ತಿಂಗಳಲ್ಲಿ ಮಂಗಳೂರು ನಗರವೊಂದರಲ್ಲೇ ಒಟ್ಟು 69 ಪ್ರಕರಣಗಳು ಬೆಳಕಿಗೆ ಬಂದಿವೆ. ಕಳೆದ ವರ್ಷ ಉಭಯ ಜಿಲ್ಲೆ ಗಳಲ್ಲಿ ಕೇವಲ 14 ಪ್ರಕರಣಗಳಷ್ಟೇ ಎಚ್1ಎನ್1 ಎಂದು ದೃಢಪಟ್ಟಿದ್ದವು. ಉಭಯ ಜಿಲ್ಲೆಗಳಲ್ಲಿ ಎಚ್1ಎನ್1 ಬಾಧಿತರ ಸಂಖ್ಯೆ ತೀವ್ರಗತಿಯಲ್ಲಿ ಏರಿಕೆಯಾಗುತ್ತಿರುವುದು ಆರೋಗ್ಯ ಇಲಾಖೆಗೆ ಸವಾಲಾಗಿದೆ. ಇಲಾಖೆ ಹಾಗೂ ಜಿಲ್ಲಾಡಳಿತ ಜ್ವರ ವ್ಯಾಪಕವಾಗದಂತೆ ತಡೆಯಲು ಹರಸಾಹಸ ಪಡುತ್ತಿವೆ.
224 ಮಂದಿಗೆ ಎಚ್1ಎನ್1
ಮಂಗಳೂರಿನಲ್ಲಿ ಎಚ್1ಎನ್1 ಜ್ವರದ ಹಿನ್ನೆಲೆ ಯಲ್ಲಿ 295 ಮಂದಿ ಪರೀಕ್ಷೆಗೊಳಪಟ್ಟಿದ್ದು, ಈ ಪೈಕಿ 77 ಮಂದಿಗೆ ಈ ಜ್ವರ ದೃಢಪಟ್ಟಿದೆ. ಆ ಮೂಲಕ ದ.ಕ. ಜಿಲ್ಲೆಯಲ್ಲಿ ಅತೀ ಹೆಚ್ಚು ಎಚ್1ಎನ್1 ಪ್ರಕರಣ ಮಂಗಳೂರಿನಲ್ಲೇ ಕಂಡು ಬಂದಿದೆ. ಜೂನ್‌ನಲ್ಲೇ 69 ಮಂದಿಗೆ ಎಚ್1ಎನ್1 ಬಾಧಿಸಿದೆ!
ಬೆಳ್ತಂಗಡಿಯಲ್ಲಿ 24ರ ಪೈಕಿ 8, ಬಂಟ್ವಾಳದಲ್ಲಿ 32 ಮಂದಿ ಪೈಕಿ 9, ಪುತ್ತೂರಿನಲ್ಲಿ 22 ಮಂದಿ ಪೈಕಿ 7 ಹಾಗೂ ಸುಳ್ಯದಲ್ಲಿ 6 ಮಂದಿಯ ಪೈಕಿ ನಾಲ್ವರಲ್ಲಿ ಎಚ್1ಎನ್1 ಕಾಣಿಸಿಕೊಂಡಿದೆ. ಶಂಕಿತ ಎಚ್1ಎನ್1 ಜ್ವರದಿಂದ ಬಳಲುತ್ತಿದ್ದ ಬಳ್ಪದ ಪ್ರವೀಣ್ ಕುಮಾರ್ ಮೃತಪಟ್ಟಿದ್ದಾರೆ.
ಉಡುಪಿಯಲ್ಲಿ 147, ಕುಂದಾಪುರದಲ್ಲಿ 24, ಕಾರ್ಕಳದಲ್ಲಿ 15 ಮಂದಿಗೆ ಎಚ್1ಎನ್1 ದೃಢ ಪಟ್ಟಿದ್ದು, ಉಡುಪಿಯಲ್ಲಿ ಮೂವರು, ಕುಂದಾ ಪುರ ದಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
2016ರಲ್ಲಿ 14 ಪ್ರಕರಣ; ಒಂದು ಸಾವು
ಕಳೆದ ವರ್ಷ ಮಂಗಳೂರಿನಲ್ಲಿ ಪರೀಕ್ಷೆಗೊಳ ಪಟ್ಟ 228 ಮಂದಿ ಪೈಕಿ 6 ಮಂದಿಗೆ ಮತ್ತು ಪುತ್ತೂರಿ ನಲ್ಲಿ 35 ಮಂದಿಯ ಪೈಕಿ ಓರ್ವ ವ್ಯಕ್ತಿಗೆ ಎಚ್1ಎನ್1 ಬಾಧಿಸಿತ್ತು. ಪುತ್ತೂರಿನ ವ್ಯಕ್ತಿ ಮೃತ ಪಟ್ಟಿ ದ್ದರು. ಉಳಿದಂತೆ ಯಾವುದೇ ತಾಲೂಕಿ ನಲ್ಲಿ ಎಚ್1ಎನ್1 ಪತ್ತೆ ಯಾಗಿರಲಿಲ್ಲ. ಉಡುಪಿ ಜಿಲ್ಲೆಯಲ್ಲಿ ಕಳೆದ ವರ್ಷ 8 ಪ್ರಕರಣ ಪತ್ತೆ ಯಾಗಿದ್ದು, ಈ ಪೈಕಿ ಉಡುಪಿ ತಾಲೂಕಿನಲ್ಲಿ 3, ಕುಂದಾ ಪುರ ದಲ್ಲಿ 1, ಕಾರ್ಕಳದಲ್ಲಿ 4 ಪ್ರಕರಣ ಕಂಡು ಬಂದಿದ್ದು, ಯಾವುದೇ ಸಾವು ಸಂಭವಿಸಿಲ್ಲ.
ಮಾರಣಾಂತಿಕವಲ್ಲ ; ಎಚ್ಚರ ಅಗತ್ಯ
ಕೆಮ್ಮುವಾಗ, ಸೀನುವಾಗ ಗಾಳಿಯ ಮುಖಾಂ ತರ ಜ್ವರದ ವೈರಸ್ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ಆರೋಗ್ಯವಂತ ವ್ಯಕ್ತಿಯಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಯಾಗುವುದರಿಂದ ಈ ಜ್ವರ ಕಾಣಿಸಿಕೊಂಡರೂ ಮಾರಣಾಂತಿಕವಲ್ಲ. ಆದಾಗ್ಯೂ ಜ್ವರವನ್ನು ನಿರ್ಲಕ್ಷಿಸದೇ ತತ್‌ಕ್ಷಣ ಯಾವ ಜ್ವರವೆಂದು ಖಚಿತಪಡಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ಸಣ್ಣ ಮಕ್ಕಳು, 60 ವರ್ಷ ದಾಟಿದವರು, ಕಿಡ್ನಿ, ಹೃದಯ, ರಕ್ತನಾಳ ಸಂಬಂಧಿ ಕಾಯಿಲೆ ಇರುವವರು, ಅಸ್ತಮಾ, ಟಿಬಿಯಿಂದ ಬಳಲುತ್ತಿರುವವರಲ್ಲಿ ರೋಗ ನಿರೋಧಕ ಶಕ್ತಿ ಕುಂಠಿತವಾಗುವುದರಿಂದ ಜಾಗ್ರತೆ ವಹಿಸಬೇಕು ಎಂದು ದ.ಕ. ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ| ರಾಜೇಶ್ ತಿಳಿಸಿದ್ದಾರೆ.
ಜ್ವರದ ಲಕ್ಷಣಗಳು
ತೀವ್ರವಾದ ಜ್ವರ, ಶೀತ, ತಲೆನೋವು, ಕೆಮ್ಮು, ಮೈಮೇಲೆ ಬೊಕ್ಕೆಗಳು ಕಾಣಿಸಿಕೊಳ್ಳುವುದು, ಉಸಿ ರಾಟದ ತೊಂದರೆ, ಎದೆ, ಹೊಟ್ಟೆಯಲ್ಲಿ ನೋವು, ಆಗಾಗ ವಾಂತಿ, ಭೇದಿ, ಎಚ್ಚರ ತಪ್ಪುವಿಕೆಯಂತಹ ಲಕ್ಷಣಗಳು ಕಂಡು ಬಂದರೆ ಅಗತ್ಯವಾಗಿ ವೈದ್ಯರನ್ನು ಸಂಪರ್ಕಿಸಿ ಪರೀಕ್ಷಿಸಿಕೊಳ್ಳಬೇಕು.
ಎಚ್1ಎನ್1 – ಮುನ್ನೆಚ್ಚರಿಕೆಯಿರಲಿ
ಎಚ್1ಎನ್1 ಸೋಂಕು ಬಹುಬೇಗ ಒಬ್ಬರಿಂದ ಮತ್ತೂಬ್ಬರಿಗೆ ಹರಡುತ್ತದೆ. ಈ ಕಾರಣಕ್ಕೆ ನಿಮ್ಮ ಮನೆಯ ಅಕ್ಕಪಕ್ಕ ಅಥವಾ ಹೊರಗಡೆ ಸೋಂಕು ಇರುವ ವ್ಯಕ್ತಿಯಿಂದ ಆದಷ್ಟು ಅಂತರ ಕಾಯ್ದುಕೊಳ್ಳುವ ಮೂಲಕ ರೋಗ ಹರಡದಂತೆ ಮುನ್ನೆಚ್ಚರಿಕೆ ವಹಿಸುವುದು ಉತ್ತಮ. ಸೋಂಕಿತರು ಕೆಮ್ಮುವಾಗ, ಸೀನುವಾಗ ಕರವಸ್ತ್ರ ಅಡ್ಡ ಹಿಡಿದುಕೊಳ್ಳುವ ಮೂಲಕ ಇತರರಿಗೆ ಹರಡದಂತೆ ಎಚ್ಚರ ವಹಿಸಬೇಕು. ಸೋಂಕಿತರು ಮಾಸ್ಕ್ ಧರಿಸಿಕೊಂಡೇ ಓಡಾಡಬೇಕು. ಎಚ್1ಎನ್1 ಕೂಡ ಸೊಳ್ಳೆಗಳಿಂದ ಹರಡುವ ಕಾಯಿಲೆ ಆಗಿರುವ ಕಾರಣ ನಿಮ್ಮ ಮನೆ ಹಾಗೂ ಸುತ್ತಲಿನ ಪರಿಸರವನ್ನು ಆದಷ್ಟು ಸ್ವತ್ಛವಾಗಿಟ್ಟುಕೊಂಡು ಸೊಳ್ಳೆಗಳ ಉತ್ಪತ್ತಿಯಾಗದಂತೆ ನೋಡಿಕೊಳ್ಳಬೇಕು. ಆಗಾಗ ಕೈಗಳನ್ನು ಸಾಬೂನಿನಿಂದ ತೊಳೆಯುವುದರೊಂದಿಗೆ ವೈಯಕ್ತಿಕ ಸ್ವತ್ಛತೆಗೆ ಗಮನ ಹರಿಸಬೇಕು. ಸೋಂಕಿತರು ಚಿಕ್ಕ ಮಕ್ಕಳಿಂದ ಆದಷ್ಟು ದೂರವಿರಬೇಕು. ಸಾಮಾನ್ಯ ಜ್ವರ ಕಾಣಿಸಿಕೊಂಡಲ್ಲಿ ತತ್‌ಕ್ಷಣ ಸಮೀಪದ ವೈದ್ಯರನ್ನು ಸಂಪರ್ಕಿಸಬೇಕು. ಒಂದು ವೇಳೆ ಔಷಧಿ ಸೇವನೆಯ ಬಳಿಕವೂ ಜ್ವರ ಕಡಿಮೆಯಾಗದಿದ್ದರೆ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು.
ಸೋಂಕಿತರು ಏನು ಮಾಡಬೇಕು?
ಎಚ್1ಎನ್1 ಸೋಂಕು ಬಾಧಿಸಿರುವ ಅನುಮಾನ ಬಂದರೆ ತತ್‌ಕ್ಷಣಕ್ಕೆ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಸರಕಾರಿ ಆಸ್ಪತ್ರೆಗಳಿಗೆ ತೆರಳಬೇಕು. ಅಲ್ಲಿ ರೋಗಿಯ ಗಂಟಲು, ಮೂಗಿನ ಸ್ರಾವದ ಸ್ಯಾಂಪಲ್ ಪಡೆದು ಅದನ್ನು ಪರೀಕ್ಷೆ ಮಾಡಿ ಸೋಂಕು ತಗಲಿರುವ ಬಗ್ಗೆ ಖಚಿತಪಡಿಸಿಕೊಳ್ಳಲಾಗುತ್ತದೆ. ಒಂದು ವೇಳೆ ಸೋಂಕು ದೃಢಪಟ್ಟರೆ ಅಂತಹ ರೋಗಿಗಳು ಆತಂಕಪಡುವ ಅಗತ್ಯವಿಲ್ಲ. ಮುಂದಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗುವ ಮೂಲಕ ಸೋಂಕು ನಿಯಂತ್ರಣದ ಬಗ್ಗೆ ಮುಂಜಾಗ್ರತೆ ವಹಿಸಬೇಕು. ಈ ಹಂತದಲ್ಲಿ ಸೋಂಕಿತರು ವಿಶ್ರಾಂತಿಗೆ ಹೆಚ್ಚಿನ ಗಮನ ಹರಿಸಬೇಕು. ಅಲ್ಲದೇ ವಿಟಮಿನ್‌ಯುಕ್ತ ಆಹಾರ ಸೇವನೆ, ದ್ರವಾಹಾರ ಸೇವನೆ, ನೀರು ಕುಡಿಯುವುದಕ್ಕೆ ಆದ್ಯತೆ ನೀಡಬೇಕು. ಜತೆಗೆ ಸೋಂಕು ಬೇರೆಯವರಿಗೆ ಹರಡದಂತೆಯೂ ನೋಡಿಕೊಳ್ಳಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ಹೆಚ್ಚಿನ ಮಾಹಿತಿಗೆ ಜಿಲ್ಲಾ ಸರ್ವೇಕ್ಷಣಾ ಘಟಕ (0824-2420466) ಹಾಗೂ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಂಪರ್ಕಿಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.