ಕರಾವಳಿ ಭಾಗದ ಅಪರಾಧ ಸುದ್ದಿಗಳು
Team Udayavani, Jul 8, 2017, 2:50 AM IST
ಅಮಾಸೆಬೈಲು ಪ್ರಕರಣ: ಪ್ರಮುಖ ಆರೋಪಿಯ ನಿರೀಕ್ಷಣಾ ಜಾಮೀನು ವಜಾ
ಉಡುಪಿ: ಅಮಾಸೆಬೈಲು ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತ ವಯಸ್ಕ ಯುವತಿಯ ಮೇಲೆ ನಡೆದ ಕಿರುಕುಳ ಮತ್ತು ಆತ್ಮಹತ್ಯೆ ಯತ್ನಕ್ಕೆ ಪ್ರಚೋದನೆ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಪ್ರಸಾದ್ ಹೆಗ್ಡೆ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಜಿಲ್ಲಾ ಮತ್ತು ಸತ್ರ ಹಾಗೂ ಪೋಕ್ಸೋ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಟಿ. ವೆಂಕಟೇಶ್ ನಾಯ್ಕ ಅವರು ಶುಕ್ರವಾರ ವಜಾಗೊಳಿಸಿದ್ದಾರೆ.
ಪ್ರಕರಣದಲ್ಲಿ ಮೂವರು ಆರೋಪಿಗಳಾಗಿದ್ದರು. ಬಂಧನಕ್ಕೊಳಗಾಗಿ ಸಬ್‌ಜೈಲಿನಲ್ಲಿದ್ದ ಆರೋಪಿ ವಿನಯ ಶೆಟ್ಟಿ ಅವರಿಗೆ ಜಾಮೀನು ಮತ್ತು ತಲೆಮರೆಸಿಕೊಂಡು ವಕೀಲರ ಮೂಲಕ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದ ಆರೋಪಿ ಪ್ರಶಾಂತ್ ಹೆಗ್ಡೆ ಅವರಿಗೆ ಕೆಲವು ದಿನಗಳ ಹಿಂದೆಯೇ ಜಾಮೀನು ಲಭಿಸಿತ್ತು. ಆದರೆ ಪ್ರಮುಖ ಆರೋಪಿ ಪ್ರಸಾದ್ ಮಾತ್ರ ತಲೆಮರೆಸಿಕೊಂಡಿದ್ದರು. ಅಭಿಯೋಜನೆಯ ಪರ ವಿಶೇಷ ಸರಕಾರಿ ಅಭಿಯೋಜಕ (ಪೋಕ್ಸೋ) ವಿಜಯ ವಾಸು ಪೂಜಾರಿ ವಾದಿಸಿದ್ದರು.
ಕರಿಮಣಿಸರ ಇದ್ದ ಬ್ಯಾಗ್ ಕಳವು
ಕುಂದಾಪುರ: ಇಲ್ಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಹೆರಿಗೆಗಾಗಿ ಬಂದಿದ್ದ ಮಹಿಳೆಯೊಬ್ಬರ ತಾಯಿಯು ತಮ್ಮ ಬಳಿ ಇಟ್ಟುಕೊಂಡಿದ್ದ ಚಿನ್ನದ ಕರಿಮಣಿ ಸರ ಇದ್ದ ವ್ಯಾನಿಟಿ ಬ್ಯಾಗ್‌ನ್ನು ಅಪರಿಚಿತ ವ್ಯಕ್ತಿಯೋರ್ವ ಕಳವು ಮಾಡಿದ ಬಗ್ಗೆ ಕುಂದಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ. ಪಡುವರಿ ಗ್ರಾಮದ ಸೀತು ಅವರ ಪುತ್ರಿ ಹೆರಿಗೆಗಾಗಿ ಖಾಸಗಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದರು. ಆಕೆಯ ಸುಮಾರು 4 ಪವನ್‌ನ ಚಿನ್ನದ ಕರಿಮಣಿ ಸರವನ್ನು ವ್ಯಾನಿಟಿ ಬ್ಯಾಗ್‌ನಲ್ಲಿ ಹಾಕಿ ಇಟ್ಟು ಬೆಂಚಿನಲ್ಲಿ ಕುಳಿತಿದ್ದಾಗ ಓರ್ವ ಅಪರಿಚಿತನು ಬ್ಯಾಗ್‌ನ್ನು ಕಳವು ಮಾಡಿಕೊಂಡು ಹೋಗಿರುತ್ತಾನೆ ಎಂದು ಸೀತು ಅವರು ದೂರಿನಲ್ಲಿ ತಿಳಿಸಿದ್ದಾರೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರಿಮೆಣಸು ದುರುಪಯೋಗ ಪ್ರಕರಣ: ಆರೋಪಿ ಬಂಧನ
ಮಡಿಕೇರಿ: ಮಾಲ್ದಾರೆ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಡೆದ ಭಾರೀ ಪ್ರಮಾಣದ ಕರಿಮೆಣಸು ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸುವಲ್ಲಿ ಜಿಲ್ಲಾ ಅಪರಾಧ ಪತ್ತೆದಳದ ಪೊಲೀಸರು ಯಶಸ್ವಿಯಾಗಿದ್ದಾರೆ. ಸಂಘದ ನೌಕರ ಮೈಕಲ್ ಬಂಧಿತ ಆರೋಪಿಯಾಗಿದ್ದು, ಸುಮಾರು 48 ಲಕ್ಷ ರೂ. ಮೌಲ್ಯದ 7,345 ಕೆ.ಜಿ. ತೂಕದ 104 ಚೀಲ ಕರಿಮೆಣಸನ್ನು ಆರೋಪಿಯಿಂದ ವಶಪಡಿಸಿಕೊಳ್ಳಲಾಗಿದೆ.
ಸಂಘದ ಅಧ್ಯಕ್ಷ ಚೇರಂಡ ನಂದಾ ಸುಬ್ಬಯ್ಯ ಅವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್ ಅವರ ಮಾರ್ಗದರ್ಶನದಲ್ಲಿ ತನಿಖೆ ಕೈಗೊಂಡ ಜಿಲ್ಲಾ ಅಪರಾಧ ಪತ್ತೆ ದಳದ ಅಧಿಕಾರಿಗಳು ತಲೆಮರೆಸಿಕೊಂಡಿದ್ದ ಮೈಕಲ್‌ನನ್ನು ಪಿರಿಯಾಪಟ್ಟಣದಲ್ಲಿ ವಶಕ್ಕೆ ಪಡೆದಿದ್ದಾರೆ. ದಿಢೀರ್ ಆಗಿ ಶ್ರೀಮಂತನಾಗುವ ಆಸೆಯಿಂದ ಸಂಘದ ದಾಸ್ತಾನಿನಲ್ಲಿದ್ದ ಕರಿಮೆಣಸನ್ನು ಮೈಕಲ್ ದುರುಪಯೋಗಪಡಿಸಿಕೊಂಡು ಸಂಘಕ್ಕೆ 48 ಲಕ್ಷ ರೂ. ನಷ್ಟ ಉಂಟುಮಾಡಿದ್ದ ಎಂದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ.
ಪಿರಿಯಾಪಟ್ಟಣದ ಕಂಟಾಪುರದಲ್ಲಿ ಜಮೀನನ್ನು ಗುತ್ತಿಗೆ ಪಡೆದಿದ್ದ ಮೈಕಲ್ ಶುಂಠಿ ವ್ಯವಸಾಯದಲ್ಲಿ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿದ್ದ. ಕಾರ್ಯಾಚರಣೆಯಲ್ಲಿ ಡಿಸಿಐಬಿ ನಿರೀಕ್ಷಕ ಕರೀಂ ರಾವುತರ್, ಎಎಸ್‌ಐ ಎಚ್.ವೈ. ಹಮೀದ್, ಸಿಬಂದಿ ಎಸ್.ಟಿ. ತಮ್ಮಯ್ಯ, ಬಿ.ಜಿ. ವೆಂಕಟೇಶ್, ಕೆ.ಎಸ್. ಅನಿಲ್ ಕುಮಾರ್, ಎಂ.ಎನ್. ನಿರಂಜನ್, ಜಿ.ಎಲ್. ಯೋಗೇಶ್ ಕುಮಾರ್, ಕೆ.ಆರ್. ವಸಂತ, ಕೆ.ಎಸ್. ಶಶಿಕುಮಾರ್, ಯು.ಎ. ಮಹೇಶ್ ಪಾಲ್ಗೊಂಡಿದ್ದರು. ಈ ವಿಶೇಷ ತಂಡಕ್ಕೆ ಎಸ್.ಪಿ. ರಾಜೇಂದ್ರ ಪ್ರಸಾದ್ 10 ಸಾವಿರ ರೂ. ನಗದು ಬಹುಮಾನ ಘೋಷಿಸಿದ್ದಾರೆ.
ಸರ ಅಪಹರಣ: ಆರೋಪಿ ಬಂಧನ
ಸಾಗರ: ನಗರದ ಪ್ರವಾಸಿ ಮಂದಿರದ ಬಳಿ ನಗರದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಎಸ್.ಕೆ. ಚಂದ್ರು ಕರ್ಕಿಕೊಪ್ಪ ಹಾಗೂ ಅವರ ಪುತ್ರ ವೀರೇಂದ್ರ ಅವರ ಮೇಲೆ ಹಲ್ಲೆ ನಡೆಸಿ, ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದ ಚೆಲುವರಾಜನನ್ನು ಪೇಟೆ ಠಾಣೆ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಮಂಗಳವಾರ ರಾತ್ರಿ ಚಂದ್ರು ಅವರು ಪುತ್ರನೊಂದಿಗೆ ಕಾರಿನಲ್ಲಿ ಬರುತ್ತಿದ್ದಾಗ ಚೆಲುವರಾಜ ಹಾಗೂ ಮತ್ತಿಬ್ಬರು ಅವರನ್ನು ಅಡ್ಡಗಟ್ಟಿ, ಸರಳಿನಿಂದ ಹಲ್ಲೆ ನಡೆಸಿ ಚಿನ್ನದ ಸರವನ್ನು ದೋಚಿದ್ದರು. ಚೆಲುವರಾಜನ ಸಹಚರರು ಪರಾರಿಯಾಗಿದ್ದಾರೆ. ಇವರಿಗಾಗಿ ಪೊಲೀಸರು ಹುಡುಕಾಡುತ್ತಿದ್ದಾರೆ. ಆರೋಪಿ ಚೆಲುವರಾಜನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಡಿವೈಎಸ್‌ಪಿ ಮಂಜುನಾಥ ಕವರಿ ಅವರ ಮಾರ್ಗದರ್ಶನದಲ್ಲಿ ಪೇಟೆ ಠಾಣೆ ಸರ್ಕಲ್ ಇನ್‌ಸ್ಪೆಕ್ಟರ್ ಜನಾರ್ದನ್, ಅಪರಾಧ ವಿಭಾಗದ ಮಂಜುನಾಥ್, ಸಂತೋಷ್ ನಾಯ್ಕ, ಹಜರತ್ ಅಲಿ, ದಿವಾಕರ್, ಕಾಳನಾಯ್ಕ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಲೈಂಗಿಕ ಕಿರುಕುಳಕ್ಕೆ ಯತ್ನ: ಸಜೆ, ದಂಡ
ಕಾಸರಗೋಡು: ಹದಿನಾಲ್ಕರ ಹರೆಯದ ಶಾಲಾ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಅಡೂರು ತಂಬಿನಡ್ಕದ ಶಶೀಂದ್ರನ್ ಎ. (26)ಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಷನ್ಸ್ ಕೋರ್ಟ್ (ಪ್ರಥಮ) ಮೂರು ವರ್ಷ ಕಠಿನ ಸಜೆ ಮತ್ತು 15 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ದಂಡ ಪಾವತಿಸದಿದ್ದಲ್ಲಿ ಮೂರು ತಿಂಗಳು ಹೆಚ್ಚುವರಿಯಾಗಿ ಸಜೆ ಅನುಭವಿಸುವಂತೆ ತೀರ್ಪಿನಲ್ಲಿ ತಿಳಿಸಿದೆ. 2013 ಮಾ. 11ರಂದು 8ನೇ ತರಗತಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳಕ್ಕೆ ಯತ್ನಿಸಿದ್ದಾಗಿ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು.
ಕತ್ತಿ ಬೀಸಿದ ಅಪ್ಪ: ಬೆದರಿ ಬಾವಿಗೆ ಬಿದ್ದ ಮಗಳು ಸಾವು
ಕಾಸರಗೋಡು: ಮದ್ಯದ ಅಮಲಿನಲ್ಲಿ ಮನೆಗೆ ಬಂದ ತಂದೆ ಕತ್ತಿ ಬೀಸಿ ದಾಂಧಲೆ ನಡೆಸಿದಾಗ ಭಯದಿಂದ ಓಡಿದ ಪುತ್ರಿ ಬಾವಿಗೆ ಬಿದ್ದು ಸಾವಿಗೀಡಾದ ದುರಂತ ಘಟನೆ ನಡೆದಿದೆ. ಬೇಡಗಂ ಪೊಲೀಸ್ ಠಾಣೆ ವ್ಯಾಪ್ತಿಯ ಕೊಳತ್ತೂರು ಸರಕಾರಿ ಪ್ರೌಢಶಾಲೆ ಬಳಿಯ ನಿವಾಸಿ ಹರಿದಾಸ್ ಅವರ ಪುತ್ರಿ, ಒಂಬತ್ತನೇ ತರಗತಿ ವಿದ್ಯಾರ್ಥಿನಿ ಹರಿತಾ (14) ಬಾವಿಗೆ ಬಿದ್ದು ಸಾವಿಗೀಡಾದಳು.
ಜು.6ರಂದು ರಾತ್ರಿ 9.15ಕ್ಕೆ ಮದ್ಯದ ಅಮಲಿನಲ್ಲಿ ಬಂದ ಹರಿದಾಸ್ ಕತ್ತಿ ಬೀಸುತ್ತಾ ದಾಂಧಲೆ ನಡೆಸಿದ್ದು, ಇದನ್ನು ಕಂಡು ಭೀತಿಯಿಂದ ಓಡಿದ ಹರಿತಾ ಬಾವಿಗೆ ಬಿದ್ದಳು. ಘಟನೆ ತಿಳಿದು ಸ್ಥಳೀಯರು ಸ್ಥಳಕ್ಕೆ ಧಾವಿಸಿ ಬಾವಿಯಿಂದ ಮೇಲಕ್ಕೆತ್ತುವ ಪ್ರಯತ್ನ ನಡೆಸಿದರೂ ಸಾಧ್ಯವಾಗಲಿಲ್ಲ. ಕುತ್ತಿ ಕೋಲ್‌ನಿಂದ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಹರಿತಾಳನ್ನು ಮೇಲಕ್ಕೆತ್ತಿ ದರೂ ರಕ್ಷಿಸಲು ಸಾಧ್ಯವಾಗಲಿಲ್ಲ.
ಆತ್ಮಹತ್ಯೆ
ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಶಿರಾಡಿ ಗ್ರಾಮದ ಅಡ್ಡೋಳೆ ಎಂಬಲ್ಲಿ ನವೀನ್ (26) ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ಗುರುವಾರ ಸಂಭವಿಸಿದೆ. ನಾರಾಯಣ ಅವರ ಮಗನಾದ ನವೀನ್ ಕೂಲಿ ಕಾರ್ಮಿಕನಾಗಿದ್ದು, ಗುರುವಾರ ತನ್ನ ಮನೆ ಸಮೀಪದಲ್ಲಿ ನಿರ್ಮಾಣ ಹಂತದಲ್ಲಿರುವ ಮನೆಯೊಂದರಲ್ಲಿ ನೇಣು ಬಿಗಿದು ಆತ್ಮಹತ್ಯೆ ಗೈದಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ವಂಚನೆ: ದೂರು
ಉಡುಪಿ: ಹಣ ಪಡೆದು ಮರಳಿಸದೆ ವಂಚಿಸಿರುವ ಕುರಿತು ಕೊಡವೂರು ಮೂಡಬೆಟ್ಟಿನ ಸರ್ಫಾರಾಜ್ ಅವರು ನೀಡಿದ ದೂರಿನಂತೆ ಬಾರ್ಕೂರಿನ ಗೀತಾ ರಾವ್ ಅವರ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 2016ನೇ ಎಪ್ರಿಲ್‌ನಲ್ಲಿ ಗೀತಾ ಅವರು 2 ತಿಂಗಳಲ್ಲಿ ಹಣ ಮರಳಿಸು ವುದಾಗಿ ಹೇಳಿ 6,80,000 ರೂ. ಹಣವನ್ನು ಸಾಲವಾಗಿ ಪಡೆದು ಕೊಂಡಿದ್ದರು. ಪದೇ ಪದೇ ಕೇಳಿದರೂ ಹಿಂದಿರುಗಿಸದೆ ಕಳೆದ ಜು. 1ರಂದು ಚೆಕ್ ನೀಡಿದ್ದರು. ಅದು ಕೂಡ ಬೌನ್ಸ್ ಆಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಹಲ್ಲೆ: ಆರೋಪಿ ಸೆರೆ
ಸಾಗರ: ಗುತ್ತಿಗೆದಾರರ ಸಂಘದ ಅಧ್ಯಕ್ಷ ಎಸ್.ಕೆ. ಚಂದ್ರು ಮೇಲೆ ಹಲ್ಲೆ ನಡೆಸಿ, ಸರ ಅಪಹರಿಸಿದ್ದ ಆರೋಪಿಯನ್ನು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Pushpa 2: ಖಾಕಿಗೆ ಸವಾಲು ಹಾಕುವ ʼಪುಷ್ಪ-2ʼ ಹಾಡು ರಿಲೀಸ್; ವಿವಾದದ ಬೆನ್ನಲ್ಲೇ ಡಿಲೀಟ್
IRCTC Down: ತಾಂತ್ರಿಕ ದೋಷ- ರೈಲು ಟಿಕೆಟ್ ಬುಕ್ಕಿಂಗ್ ಸಮಸ್ಯೆ-ಪ್ರಯಾಣಿಕರ ಆಕ್ರೋಶ
Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…
Belagavi: ಮಹಾತ್ಮ ಗಾಂಧಿ ಪುತ್ಥಳಿ ಅನಾವರಣಗೊಳಿಸಿದ ಸಿಎಂ ಸಿದ್ದರಾಮಯ್ಯ
Bengaluru: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.