ರಹಸ್ಯ ಭೇಟಿಯಿಂದ ತಪ್ಪು ಸಂದೇಶ ಪಕ್ಷದ ಇಮೇಜ್‌ಗೂ ಹಾನಿಕರ
Team Udayavani, Jul 11, 2017, 7:32 AM IST
ದೇಶಕ್ಕೆ ಅಪಾಯ ಬಂದಿರುವಾಗ ದೇಶದ ಹಿತಾಸಕ್ತಿಯ ನೆಲೆಯಲ್ಲಿ ಚಿಂತಿಸಬೇಕೇ ಹೊರತು ಆ ಪರಿಸ್ಥಿತಿಯನ್ನು ಸರಕಾರವನ್ನು ಹಣಿಯಲು ಬಳಸಿಕೊಳ್ಳುವುದು ಸರಿಯಲ್ಲ.
ಚೀನದ ಭಾರತೀಯ ದೂತವಾಸದ ವೆಬ್‌ಸೈಟಿನಲ್ಲಿ ಸೋಮವಾರ ಚಿಕ್ಕದೊಂದು ಸುದ್ದಿ ಪ್ರಕಟವಾಗಿತ್ತು. ಅದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಚೀನದ ರಾಯಭಾರಿ ಲಾವೊ ಝೋಹುಯಿಯನ್ನು ಭೇಟಿಯಾದ ವಿಷಯಕ್ಕೆ ಸಂಬಂಧಿಸಿದ ಸುದ್ದಿ. ಚೀನ ದೂತವಾಸದ ಪ್ರಕಾರ ರಾಹುಲ್ ಗಾಂಧಿ ಕಳೆದ ಶನಿವಾರ ರಾಯಭಾರಿಯನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಒಂದು ರಾಷ್ಟ್ರೀಯ ಪಕ್ಷದ ಪ್ರಮುಖ ನಾಯಕ ಎಂಬ ನೆಲೆಯಲ್ಲಿ ರಾಹುಲ್ ಗಾಂಧಿ ಚೀನದ ರಾಯಭಾರಿಯನ್ನು ಭೇಟಿ ಮಾಡಿವುದರಲ್ಲಿ ತಪ್ಪೇನೂ ಇಲ್ಲ. ಆದರೆ ಈ ಭೇಟಿ ವಿವಾದಕ್ಕೊಳಗಾಗುತ್ತಿದ್ದಂತೆಯೇ ದೂತಾವಾಸದ ವೆಬ್‌ಸೈಟಿನಿಂದ ಸುದ್ದಿ ಮಾಯವಾಯಿತು. ಕಾಂಗ್ರೆಸ್ ಮಧ್ಯಾಹ್ನದ ತನಕ ಸುದ್ದಿಯನ್ನು ಖಡಾಖಂಡಿತವಾಗಿ ನಿರಾಕರಿಸಿತು. ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ ಸುದ್ದಿಯನ್ನು ನಿರಾಕರಿಸಿ ಸರಣಿ ಪ್ರಕಾರ ಟ್ವೀಟ್ ಮಾಡಿದರು. ಇದೆಲ್ಲ ವಿದೇಶಾಂಗ ಕಾರ್ಯಾಲಯ ಮತ್ತು ಗುಪ್ತಚರ ಪಡೆಯ ಷಡ್ಯಂತ್ರ, ಅವುಗಳು ನೀಡಿದ ಸುಳ್ಳು ಸುದ್ದಿಯನ್ನು ಮೋದಿ ಭಕ್ತ ಚಾನೆಲ್‌ಗಳು ಪ್ರಸಾರ ಮಾಡಿವೆ ಎನ್ನುವ ಮೂಲಕ ಸರಕಾರದ ಮೇಲೆಯೇ ಆಪಾದನೆ ಹೊರಿಸಿದರು ಸುರ್ಜೆವಾಲಾ. ಇತ್ತೀಚೆಗೆ ಕಾಂಗ್ರೆಸ್‌ನ ಸೋಷಿಯಲ್ ಮೀಡಿಯಾ ಮುಖ್ಯಸ್ಥೆಯಾಗಿ ಆಯ್ಕೆಯಾಗಿರುವ ಕನ್ನಡ ನಟಿ ರಮ್ಯಾ ಕೂಡ ಸುದ್ದಿಯನ್ನು ನಿರಾಕರಿಸುವ ನೆಪದಲ್ಲಿ ಪ್ರಧಾನಿ ಮೋದಿಯನ್ನು ಒಂದಷ್ಟು ಟೀಕಿಸಿದರು. ಕಾಂಗ್ರೆಸ್ ರಾಹುಲ್ ಭೇಟಿಯನ್ನು ಮುಚ್ಚಿ ಹಾಕಲು ಇಷ್ಟೆಲ್ಲ ಹೆಣಗಾಡುತ್ತಿರುವಾಗಲೇ ಚೀನದ ರಾಯಭಾರಿ ಕಚೇರಿಯಿಂದ ರಾಹುಲ್ ಮತ್ತು ಲಾವೊ ಝೋಹುಯಿ ಭೇಟಿಯಾದ ಫೊಟೊ ಬಹಿರಂಗವಾಗಿದೆ.
ಹೀಗೆ ಸಾಕ್ಷ್ಯಾಧಾರ ಸಮೇತ ಭೇಟಿಯಾಗಿರುವುದು ನಿಜ ಎಂದು ಸಾಬೀತಾಗುತ್ತಿದ್ದಂತೆ ಕಾಂಗ್ರೆಸ್ ವರಸೆ ಬದಲಾಯಿತು. ಇದೇ ಸುರ್ಜೆವಾಲಾ ಪತ್ರಿಕಾಗೋಷ್ಠಿ ಕರೆದು ಸಮಜಾಯಿಸಿ ನೀಡತೊಡಗಿದರು. ಇದೊಂದು ಸೌಹಾರ್ದ ಭೇಟಿ ಮಾತ್ರ. ರಾಹುಲ್ ಬರೀ ಚೀನದ ರಾಯಭಾರಿಯನ್ನು ಮಾತ್ರವಲ್ಲ ಜತೆಗೆ ಭೂತಾನ್ ರಾಯಭಾರಿ ವೆಟೊÕಪ್ ನಮ್‌ಗಿಲ್ ಮತ್ತು ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಶಿವಶಂಕರ್ ಮೆನನ್ ಅವರನ್ನೂ ಭೇಟಿಯಾಗಿದ್ದಾರೆ. ಚೀನ, ಬ್ರಜಿಲ್, ಮೆಕ್ಸಿಕೊ, ದಕ್ಷಿಣ ಆಫ್ರಿಕ ಮತ್ತು ಭಾರತವನ್ನೊಳಗೊಂಡಿರುವ ಜಿ5 ರಾಷ್ಟ್ರಗಳ ರಾಯಭಾರಿಗಳು, ರಾಜತಾಂತ್ರಿಕರು ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್‌ರನ್ನು ಭೇಟಿಯಾಗುವುದು ಸಾಮಾನ್ಯ ವಿಷಯ. ಇದನ್ನೆಲ್ಲ ವಿವಾದ ಮಾಡಬೇಡಿ ಎಂದೆಲ್ಲ ತಿಪ್ಪೆ ಸಾರಿಸಲು ಪ್ರಯತ್ನಿಸಿದ್ದಾರೆ ಸುರ್ಜೆವಾಲಾ. ಒಂದೆಡೆ ಸರಕಾರ ಪದೇ ಪದೇ ಕಾಲುಕೆದರಿ ಜಗಳಕ್ಕೆ ಬರುತ್ತಿರುವ ನೆರೆ ರಾಷ್ಟ್ರದ ಯಾವ ಬೆದರಿಕೆಗೆ ಸೊಪ್ಪು ಹಾಕದೆ ಸಡ್ಡು ಹೊಡೆದು ನಿಂತಿರುವಾಗ ವಿಪಕ್ಷ ಪಕ್ಷದ ಸ್ಥಾನದಲ್ಲಿರುವ ಪಕ್ಷದ ನಾಯಕ ಹೋಗಿ ರಾಯಭಾರಿಯ ಜತೆಗೆ ಕದ್ದುಮುಚ್ಚಿ ಮಾತುಕತೆ ನಡೆದು ಬಂದರೆ ದೇಶದ ರಾಜಕೀಯದಲ್ಲಿ ಒಮ್ಮತವಿಲ್ಲ ಎಂಬ ಸಂದೇಶ ರವಾನೆಯಾಗುವುದಿಲ್ಲವೆ? ಕನಿಷ್ಠ ಈ ಭೇಟಿಯ ಅಂತಾರಾಷ್ಟ್ರೀಯ ಪರಿಣಾಮವಾದರೂ 60 ವರ್ಷ ದೇಶವಾಳಿರುವ ಕಾಂಗ್ರೆಸ್ ನಾಯಕರಿಗೆ ಗೊತ್ತಾಗಲಿಲ್ಲವೆ? ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಭದ್ರತೆಯ ವಿಚಾರ ಬಂದಾಗ ಎಲ್ಲ ಪಕ್ಷಗಳು ಒಗ್ಗಟ್ಟು ಪ್ರದರ್ಶಿಸಬೇಕಾದ ರಾಜಧರ್ಮ. ದೇಶಕ್ಕೆ ಅಪಾಯ ಬಂದಾಗ ದೇಶದ ಹಿತಾಸಕ್ತಿಯ ನೆಲೆಯಲ್ಲಿ ಚಿಂತಿಸಬೇಕೇ ಹೊರತು ಆ ಪರಿಸ್ಥಿತಿಯನ್ನು ಸರಕಾರವನ್ನು ಹಣಿಯಲು ಬಳಸಿಕೊಳ್ಳುವುದು ಸರಿಯಲ್ಲ. ಸಿಕ್ಕಿಂ ಗಡಿಯಲ್ಲಿ ಒಂದು ತಿಂಗಳಿಂದ ಪ್ರಕ್ಷುಬ್ಧ ಪರಿಸ್ಥಿತಿಯಿದೆ. ಭಾರತ, ಚೀನ ಮತ್ತು ಭೂತಾನ್ ಸಂಗಮಿಸುವ ಡೋಕ್ಲಾಮ್‌ನಲ್ಲಿ ಉಭಯ ದೇಶಗಳ ತಲಾ 3000 ಸೈನಿಕರು ಬಂದೂಕಿನ ಮೊನೆಯನ್ನು ಪರಸ್ಪರರಿಗೆ ಗುರಿಯಿರಿಸಿಕೊಂಡು ಕುಳಿತಿದ್ದಾರೆ. ಇಂದೋ ನಾಳೆಯೋ ಯುದ್ಧವೇ ಆದೀತು ಎಂಬ ವಾತಾವರಣವಿದೆ. ಇಡೀ ದೇಶದಲ್ಲಿ ಚೀನದ ವಿರುದ್ಧ ತಣಿಯಲಾರದ ಸಿಟ್ಟು ಇದೆ. ಚೀನದ ಉತ್ಪನ್ನಗಳನ್ನು ಬಹಿಷ್ಕರಿಸಬೇಕೆಂಬ ಅಭಿಯಾನ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ರಾಹುಲ್ ಚೀನ ರಾಯಭಾರಿಯನ್ನು ಭೇಟಿ ಮಾಡಿರುವುದು ಪಕ್ಷದ ವರ್ಚಸ್ಸಿಗೂ ಜನರಿಗೆ ಅದರ ಕುರಿತು ಇರುವ ವಿಶ್ವಾಸಕ್ಕೂ ಧಕ್ಕೆ ಉಂಟು ಮಾಡಬಲ್ಲುದು. ಉದ್ವಿಗ್ನ ಪರಿಸ್ಥಿತಿ ನೆಲೆಸಿರುವ ಸಂದರ್ಭದಲ್ಲಿ ರಾಹುಲ್ ಕದ್ದುಮುಚ್ಚಿ ಭೇಟಿ ಮಾಡುವ ಉದ್ದೇಶವೇನು? ಯಾವ ವಿಚಾರದ ಕುರಿತು ರಾಯಭಾರಿಯೊಂದಿಗೆ ಚರ್ಚಿಸಿದ್ದಾರೆ? ಭೇಟಿ ಮಾಡಿದ ವಿಷಯವನ್ನು ಚೀನ ರಾಯಭಾರಿ ಕಚೇರಿಯೇ ಬಹಿರಂಗಪಡಿಸಿದರೂ ಕಾಂಗ್ರೆಸ್ ನಿರಾಕರಿಸಿದ್ದೇಕೆ? ಈ ಭೇಟಿಯಲ್ಲಿ ಯಾವ ಅಜೆಂಡಾ ಇದೆ? ಹೀಗೆ ಹಲವು ಪ್ರಶ್ನೆಗಳಿಗೆ ಉತ್ತರಿಸುವ ಬಾಧ್ಯತೆ ಈಗ ಕಾಂಗ್ರೆಸ್‌ಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Thekkatte: ಕುಂಭಾಶಿಯಲ್ಲಿ ಸಿದ್ಧವಾಗಿದೆ ನಂದಿ ದೇಗುಲದ ಬ್ರಹ್ಮರಥ
Lupus Nephritis: ಲೂಪಸ್ ನೆಫ್ರೈಟಿಸ್ ರೋಗಿಗಳಿಗೆ ಒಂದು ಮಾರ್ಗದರ್ಶಿ
Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ
Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ
Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.