ಕಲಾಭವನ್ ಮಣಿ ಸಾವಿನಲ್ಲಿ ದಿಲೀಪ್ ಕೈವಾಡ ?
Team Udayavani, Jul 14, 2017, 2:45 AM IST
ಕೊಚ್ಚಿ : ನಟ ದಿಲೀಪ್ ಪಾಲಿಗೆ ಸಮಸ್ಯೆಗಳ ಸರಮಾಲೆಯೇ ಸೃಷ್ಟಿಯಾಗಿದೆ. ನಟಿಯನ್ನು ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆರೆಯಾಗಿರುವ ನಟನ ಇತರ ಕೆಲವು ಕುಕೃತ್ಯಗಳು ಈಗ ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ನಟ ಕಲಾಭವನ್ ಮಣಿ ಸಾವಿನಲ್ಲೂ ದಿಲೀಪ್ ಕೈವಾಡವಿದೆ ಎನ್ನುವುದು ಈ ಪೈಕಿ ಒಂದು. ನಿರ್ದೇಶಕ ಬೈಜು ಕೊಟ್ಟಾರಕ್ಕರ , ಮಣಿ ಸಾವಿನ ಹಿಂದೆ ದಿಲೀಪ್ ನೆರಳಿದೆ ಎನ್ನುವ ಅನುಮಾನ ವ್ಯಕ್ತಪಡಿಸಿದ್ದಾರೆ. ಮಣಿಯ ಸಹೋದರ ರಾಮಕೃಷ್ಣನ್ ಕೂಡ ಹಿಂದೆಯೇ ಮಣಿ ಸಾವಿನ ಹಿಂದೆ ಸಂಚು ಇದೆ ಎಂದು ಹೇಳಿರುವುದನ್ನು ಇದೇ ವೇಳೆ ನೆನಪಿಸಿದ್ದಾರೆ. ಮಣಿಯ ಸಾವಿನ ಹಿಂದೆ ದಿಲೀಪ್ ಕೈವಾಡ ವಿರುವುದಕ್ಕೆ ನನ್ನ ಬಳಿ ಪುರಾವೆಗಳಿವೆ. ಅಗತ್ಯವಿದ್ದರೆ ಅವುಗಳನ್ನು ಬಹಿರಂಗಪಡಿಸಲು ತಯಾರಿದ್ದೇನೆ ಎಂದು ಸುದ್ದಿವಾಹಿನಿಯೊಂದರಲ್ಲಿ ಬೈಜು ಹೇಳಿ ಕೊಂಡಿದ್ದಾರೆ. ಇದರ ಬೆನ್ನಿಗೆ ಮಣಿ ಸಾವಿನ ತನಿಖೆ ನಡೆಸುತ್ತಿರುವ ಸಿಬಿಐ ಬೈಜು ಹೇಳಿಕೆ ದಾಖಲಿಸಿಕೊಂಡಿದೆ.
ಮಣಿ ಸಾವಿಗೀಡಾದ ಬೆನ್ನಿಗೆ ಕೋಯಿಕ್ಕೋಡ್‌ನ ಮಹಿಳೆಯೊಬ್ಬರು ನನಗೆ ಫೋನು ಮಾಡಿ ಸಾವಿನ ಹಿಂದೆ ಷಡ್ಯಂತ್ರವಿದೆ. ಭೂ ವ್ಯವಹಾರಕ್ಕೆ ಸಂಬಂಧಿಸಿದಂತೆ ದಿಲೀಪ್ ಮತ್ತು ಮಣಿ ನಡುವೆ ಮನಸ್ತಾಪ ವಿತ್ತು ಎಂದು ಈ ಮಹಿಳೆ ಆರೋಪಿಸಿದ್ದಾರೆ. ಈ ಸಂಭಾಷಣೆಯನ್ನು ನಾನು ರೆಕಾರ್ಡ್ ಮಾಡಿಟ್ಟು ಕೊಂಡಿದ್ದೇನೆ ಎಂದಿದ್ದಾರೆ ಬೈಜು. ಇದನ್ನು ಅವರು ಸಿಬಿಐಗೆ ಹಸ್ತಾಂತರಿಸಿದ್ದಾರೆ.
ಸುಪಾರಿ ಅನುಮಾನ
ಮಣಿ ಸಾವಿಗೆ ಕೊಟೇಶನ್ (ಸುಪಾರಿ) ನೀಡಲಾ ಗಿದೆ ಎಂಬ ಅನುಮಾನ ಮೊದಲಿನಿಂದಲೂ ಇತ್ತು. ಈ ಕುರಿತು ನಾನು ಹಲವು ಬಾರಿ ಪ್ರಸ್ತಾವಿಸಿ ದ್ದೇನೆ. ಹಿಂದಿನ ತನಿಖಾ ತಂಡ ಮಣಿಯ ಭೂ ವ್ಯವಹಾರ ಮತ್ತು ಹಣಕಾಸು ವ್ಯವಹಾರಗಳ ಕುರಿತು ನಡೆಸಿದ ತನಿಖೆ ತೃಪ್ತಿಕರವಾಗಿರಲಿಲ್ಲ. ಹೀಗಾಗಿ ಈ ಆಯಾಮಕ್ಕೆ ಹೆಚ್ಚಿನ ಮಹತ್ವ ಸಿಕ್ಕಿರಲಿಲ್ಲ ಎಂದು ರಾಮಕೃಷ್ಣನ್ ಹೇಳಿದ್ದಾರೆ.
ಕಾವ್ಯಾ ಮಾಧವನ್ ವಿಚಾರಣೆ
ಈ ನಡುವೆ ನಟಿಯ ಅಪಹರಣಕ್ಕೆ ಸಂಬಂಧಿಸಿ ದಂತೆ ದಿಲೀಪ್ ಪತ್ನಿ ಕಾವ್ಯಾ ಮಾಧವನ್ ಮತ್ತು ಅತ್ತೆ ಶ್ಯಾಮಲಾ ಮಾಧವನ್ ಅವರನ್ನು ವಿಚಾರಣೆಗೊ ಳಪಡಿಸಲು ಪೊಲೀಸರು ತಯಾರಿ ನಡೆಸುತ್ತಿದ್ದಾರೆ. ಪ್ರಕರಣದಲ್ಲಿ ಕಾವ್ಯಾ ಮತ್ತು ಶ್ಯಾಮಲಾ ನೇರವಾಗಿ ಸಹಭಾಗಿಯಾಗಿಲ್ಲವಾದರೂ ಸಾಕ್ಷ್ಯ ನಾಶ ಮಾಡಲು ಪ್ರಯತ್ನಿಸಿದ ಆರೋಪವಿದೆ. ದಿಲೀಪ್ ಮತ್ತು ಮುಖ್ಯ ಆರೋಪಿ ಪಲ್ಸರ್ ಸುನಿ ರಚಿಸಿದ ಸಂಚಿನ ಕುರಿತು ಕಾವ್ಯಾಗೆ ಮೊದಲೇ ಗೊತ್ತಿತ್ತೇ ಎನ್ನುವುದನ್ನು ತಿಳಿದುಕೊಳ್ಳುವ ಸಲುವಾಗಿ ಅವರನ್ನು ಪ್ರಶ್ನಿಸಲಾಗುವುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇಡೀ ಪ್ರಕರಣದಲ್ಲಿ ಓರ್ವ ಮ್ಯಾಡಮ್ ಮಹತ್ವದ ಪಾತ್ರ ನಿಭಾಯಿಸಿದ್ದಾರೆ ಎಂಬ ಅನುಮಾನವಿದೆ. ಆದರೆ ಆ ಮ್ಯಾಡಮ್ ಯಾರೆನ್ನುವುದು ಇನ್ನೂ ಬಹಿರಂಗವಾಗಿಲ್ಲ. ಅದು ಕಾವ್ಯಾ ಮಾಧವನ್ ಆಗಿರುವ ಸಾಧ್ಯತೆಯಿದೆ ಎಂಬ ಗುಸುಗುಸು ಕೇಳಿ ಬರುತ್ತಿದೆ. ಅಡ್ವೊಕೇಟ್ ಫೆನ್ನಿ ಬಾಲಕೃಷ್ಣನ್ ಮೊದಲ ಬಾರಿ ಪ್ರಕರಣದಲ್ಲಿ ಮಹಿಳೆಯೊಬ್ಬರು ಸಹಭಾಗಿಯಾಗಿರುವ ಕುರಿತು ಹೇಳಿಕೆ ನೀಡಿದ್ದರು. ಪಲ್ಸರ್ ಸುನಿ ಕೂಡ ನಟಿಯ ಮೇಲೆ ಹಲ್ಲೆ ಮಾಡಲು ಕೊಟೇಶನ್ ನೀಡಿರುವುದು ಮ್ಯಾಡಮ್ ಎಂದು ವಿಚಾರಣೆ ವೇಳೆ ತಿಳಿಸಿದ್ದಾನೆ. ಆದರೆ ಈ ಮ್ಯಾಡಮ್ ಯಾರೆಂಬ ನಿಗೂಢ ಮಾತ್ರ ಇನ್ನೂ ಬಗೆಹರಿದಿಲ್ಲ.
ಮ್ಯಾನೇಜರ್ ಅಪ್ಪುಣ್ಣಿ ಭೂಗತ
ಈ ನಡುವೆ ದಿಲೀಪ್ ಮೆನೇಜರ್ ಅಪ್ಪುಣ್ಣಿ ಭೂಗತರಾಗಿದ್ದಾರೆ. ಪ್ರಕರಣದಲ್ಲಿ ಅಪ್ಪುಣ್ಣಿಯ ಹೆಸರು ಹಲವು ಸಲ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಅವರನ್ನು ಪ್ರಶ್ನಿಸಲುದ್ದೇಶಿಸಿದ್ದರು. ಇದೇ ವೇಳೆ ಅವರು ಭೂಗತರಾಗಿದ್ದಾರೆ. ಪಲ್ಸರ್ ಸುನಿ ಅನೇಕ ಬಾರಿ ಅಪ್ಪುಣ್ಣಿಗೆ ಕರೆ ಮಾಡಿದ್ದ. ಕೃತ್ಯಕ್ಕೆ ಸಂಬಂಧಿಸಿದಂತೆ ಅಪ್ಪುಣ್ಣಿಗೆ ಹಲವು ಮಹತ್ವದ ಮಾಹಿತಿಗಳು ಗೊತ್ತಿವೆ ಎನ್ನಲಾಗಿದೆ. 2016, ನ.23ರಿಂದ 2017, ಫೆ. 17ರ ತನಕ ಸುನಿ ಮತ್ತು ಅಪ್ಪುಣ್ಣಿ ಸತತವಾಗಿ ಸಂಪರ್ಕದಲ್ಲಿದ್ದರು ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ನಟಿಯನ್ನು ಅಪಹರಿಸಿದ್ದು ಕೂಡ ಫೆ. 17ರಂದು. ಕಳೆದ ತಿಂಗಳು ಅಪ್ಪುಣ್ಣಿಯನ್ನು ಒಂದು ಸುತ್ತಿನ ವಿಚಾರಣೆಗೊಳಪಡಿಸಲಾಗಿತ್ತು. ಆದರೆ ಈ ಸಂದರ್ಭ ದಲ್ಲಿ ಅವರು ಎಲ್ಲ ವಿಷಯ ಬಾಯಿ ಬಿಟ್ಟಿಲ್ಲ. ಹೀಗಾಗಿ ಇನ್ನೊಮ್ಮೆ ವಿಚಾರಣೆ ನಡೆಸಲಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.
ಮುಕೇಶ್, ಗಣೇಶ್‌ಕುಮಾರ್‌ಗೆ ಸಂಕಷ್ಟ
ಕೊಲ್ಲಂ : ನಟಿ ಅಪಹರಣ ಪ್ರಕರಣದಲ್ಲಿ ಹಿಂದೆಮುಂದೆ ಆಲೋಚಿಸದೆ ದಿಲೀಪ್ ಬೆಂಬಲಕ್ಕೆ ನಿಂತಿರುವುದಕ್ಕೆ ನಟ ಹಾಗೂ ಶಾಸಕರಾದ ಮುಕೇಶ್ ಮತ್ತು ಗಣೇಶ್‌ಕುಮಾರ್ ಈಗ ಪಶ್ಚಾತ್ತಾಪ ಪಡುತ್ತಿದ್ದಾರೆ. ದಿಲೀಪ್ ಸೆರೆಯಾದ ಬಳಿಕ ಪೊಲೀಸರೀಗ ಈ ಇಬ್ಬರು ನಟರು ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ. ಈ ಪೈಕಿ ಸಿಪಿಎಂ ಶಾಸಕರಾಗಿರುವ ಮುಕೇಶ್‌ಗೆ ಸರಕಾರ ಭಾರೀ ಬಂದೋಬಸ್ತಿನ ಏರ್ಪಾಡು ಮಾಡಿದ್ದಾರೆ.
ಮಲಯಾಳ ಸಿನೇಮಾ ಕಲಾವಿದರ ಸಂಘ ಅಮ್ಮದ ಸಭೆಯಲ್ಲಿ ಮುಕೇಶ್ ಮತ್ತು ಗಣೇಶ್‌ಕುಮಾರ್, ದಿಲೀಪ್ ಪರವಾಗಿ ವಾದಿಸಿದ್ದರು. ಇದಲ್ಲದೆ ಪರಕರಣದ ಮುಖ್ಯ ಆರೋಪಿ ಪಲ್ಸರ್ ಕೆಲವು ವರ್ಷದ ಹಿಂದೆ ಮುಕೇಶ್ ಕಾರಿನ ಚಾಲಕನಾಗಿದ್ದ. ಅವನನ್ನು ದಿಲೀಪ್‌ಗೆ ಪರಿಚಯಿಸಿದ್ದು ಕೂಡ ಮುಕೇಶ್. ಹೀಗಾಗಿ ಮುಕೇಶ್ ವಿರುದ್ಧವೂ ಜನರು ಕಿಡಿ ಕಾರುತ್ತಿದ್ದಾರೆ.
ದಿಲೀಪ್ ಮೇಲಿರುವ ಆಕ್ರೋಶ ಮುಕೇಶ್ ವಿರುದ್ಧ ತಿರುಗುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಮುಕೇಶ್‌ಗೆ ದಿನದ 24 ತಾಸು ಬಿಗು ಪೊಲೀಸ್ ಭದ್ರತೆ ಒದಗಿಸಲಾಗಿದೆ. ಇಷ್ಟು ಮಾತ್ರವಲ್ಲದೆ ಅವರ ಮನೆಗೂ ಕಾವಲು ಒದಗಿಸಲಾಗಿದೆ. ಮುಕೇಶ್ ಮತ್ತು ಗಣೇಶ್‌ಕುಮಾರ್ ಮಾತ್ರವಲ್ಲದೆ ಚಿತ್ರರಂಗದ ಹಲವು ಪ್ರಮುಖರ ವಿರುದ್ಧವೂ ಆಕ್ರೋಶ ವ್ಯಕ್ತವಾಗಿದೆ. ಸೋಮವಾರ ದಿಲೀಪ್ ಸೆರೆಯಾಗುವ ತನಕ ಹಲವು ಪ್ರಮುಖ ನಟರು, ನಿರ್ದೇಶಕರು ಮತ್ತು ನಿರ್ಮಾಪಕರು ಅವರನ್ನು ಬೆಂಬಲಿಸುತ್ತಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.