ಲೋಕೋಪಯೋಗಿ ಇಲಾಖೆ ರಸ್ತೆ ನಾಮಫಲಕದಲ್ಲೂ ಕನ್ನಡದ ಕಗ್ಗೊಲೆ !
Team Udayavani, Jul 14, 2017, 2:50 AM IST
ಕುಂಬಳೆ: ಕಾಸರಗೋಡು ಜಿಲ್ಲೆಯ ವಿವಿಧೆಡೆಗಳಲ್ಲಿ ಸರ್ವತ್ರ ಕನ್ನಡದ ಕಗ್ಗೊಲೆ ನಡೆಯುತ್ತಿರುವಾಗ ಲೋಕೋಪಯೋಗಿ ಇಲಾಖೆಯೂ ಇದಕ್ಕೆ ತಮ್ಮ ಕೊಡುಗೆಯನ್ನು ನೀಡುತ್ತಿದೆ. ರಸ್ತೆ ಅಭಿವೃದ್ಧಿಗೆ ಕೋಟಿಗಟ್ಟಲೆ ರೂ. ವ್ಯಯಿಸಿದ ಬಳಿಕ ರಸ್ತೆ ಪಕ್ಕದಲ್ಲಿ ಅಳವಡಿಸುವ ನಾಮ ಫಲಕಗಳಲ್ಲಿ ಮಲಯಾಳ ಮತ್ತು ಆಂಗ್ಲ ಭಾಷೆಯಲ್ಲಿ ಮಾತ್ರ ಬರಹವನ್ನು ಪ್ರಕಟಿಸಿ ಕನ್ನಡಿಗರ ಭಾವನೆಯನ್ನು ಕೆದಕುತ್ತಿದೆ.
ಉಪ್ಪಳ – ಬಾಯಾರು – ಕೈಕಂಬ – ಬಾಯಾರು – ಮುಳಿಗದ್ದೆ ರಸ್ತೆಯನ್ನು ಇದೀಗ ಸುಮಾರು 40 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಿದೆ. ಆದರೆ ಗುತ್ತಿಗೆದಾರರಿಗಾಗಿ ಸಿದ್ಧ ಪಡಿಸಿದ ಯೋಜನೆಯಂತೆ ರಸ್ತೆ ಕಾಮಗಾರಿ ನಡೆಸಲಾಗಿದೆ. ರಸ್ತೆ ಫಲಾನುಭವಿಗಳ ಅಪೇಕ್ಷೆ ಯನ್ನು ಪರಿಗಣಿಸದೆ ಕೋಟಿಗಟ್ಟಲೆ ನಿಧಿಯನ್ನು ಪೋಲು ಮಾಡಲಾಗಿದೆ. ರೋಡಿಗಿಂತ ತೋಡಿಗೆ ನಿಧಿಯನ್ನು ಸುರಿಯಲಾಗಿದೆ. ರಸ್ತೆ ಅಗಲಗೊಳಿಸದೆ ಅನಗತ್ಯ ಕಾಮಗಾರಿಯನ್ನು ನಡೆಸಲಾಗಿದೆ. ಇದೀಗ ತರಾತುರಿಯಲ್ಲಿ ಕಾಮಗಾರಿ ಮುಗಿಸಲಾಗಿದೆ. ರಸ್ತೆ ಪಕ್ಕದಲ್ಲಿ ಅನಗತ್ಯವಾಗಿ ಕಬ್ಬಿಣದ ತಡೆಬೇಲಿ, ಕಂಬಗಳನ್ನು ನಾಟಲಾಗಿದೆ. ರಸ್ತೆ ಅಗಲಗೊಳಿಸದೆ ಈ ನಿರ್ಮಾಣದಿಂದ ರಸ್ತೆ ಮತ್ತಷ್ಟು ಅಗಲ ಕುಂಠಿತವಾಗಿ ಅಪಘಾತಕ್ಕೆ ಅವಕಾಶವಾಗುತ್ತಿದೆ.
ರಸ್ತೆಯ ಅವೈಜ್ಞಾನಿಕ ಕಾಮಗಾರಿಯನ್ನು ಸರಿಪಡಿಸಬೇಕು. ರಸ್ತೆ ತಿರುವುಗಳನ್ನು ನೇರ ಗೊಳಿಸಬೇಕು ಮತ್ತು ಅಗತ್ಯ ಸ್ಥಳಗಳಲ್ಲಿ ಮೋರಿಗಳನ್ನು ನಿರ್ಮಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿರಿಸಿದರೂ ಇಲಾಖೆಯ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಇದನ್ನು ಪರಿಗಣಿಸಿಲ್ಲ. ರಸ್ತೆಯ ಅವ್ಯವಸ್ಥೆಯನ್ನು ಸರಿಪಡಿಸಲು ಕ್ರಿಯಾ ಸಮಿತಿಯನ್ನು ರಚಿಸಿ ಒತ್ತಡ ತಂದರೂ ಯಾವುದೇ ಫಲ ನೀಡಿಲ್ಲ.ಇದರ ಫಲವನ್ನು ಮುಂದೆ ರಸ್ತೆ ಫಲಾನು ಭವಿಗಳು ಅನುಭವಿಸಬೇಕಾಗಿದೆ. ಇದೀಗ ರಸ್ತೆಯುದ್ದಕ್ಕೂ ಸಾಕಷ್ಟು ಅನಗತ್ಯ ಕಬ್ಬಿಣದ ಕಂಭಗಳನ್ನು ಕಾಣಬಹುದಾಗಿದೆ. ರಸ್ತೆ ಪಕ್ಷದಲ್ಲಿ ಅನಗತ್ಯ ಸ್ಥಳಗಳಲ್ಲಿ ಪಾತಾಳದಿಂದ ಕಾಂಕ್ರಿಟ್ ತಡೆಗೋಡೆಗಳನ್ನು ನಿರ್ಮಿಸಲಾಗಿದೆ.
ನೀರು ಹರಿಯದಲ್ಲೂ ಅನಗತ್ಯ ಕಣಿವೆಗಳನ್ನು ನಿರ್ಮಿಸಲಾಗಿದೆ.ಇಷ್ಟೆಲ್ಲಾ ನಿಧಿ ಯನ್ನು ಪೋಲು ಮಾಡುವುದಕ್ಕಿಂತ 5.50 ಮೀಟರ್ ಅಗಲವಿದ್ದ ಈ ರಸ್ತೆಯನ್ನು ಅಲ್ಪ ಅಗಲಗೊಳಿಸಿದಲ್ಲಿ ಪರಮ ಉಪಕಾರವಾಗುತ್ತಿತ್ತು. ಆದರೆ ಚುನಾಯುತರಾಗಲಿ, ಇಲಾಖೆಯ ಅಧಿಕಾರಿಗಳಾಗಲಿ, ಅನ್ಯರಾಜ್ಯದ ಗುತ್ತಿಗೆದಾರರರಾಗಲಿ ಇದ್ಯಾವುದಕ್ಕೂ ಮುಂದಾಗದೆ ಸುಮಾರು ರೂ. 40 ಕೋಟಿಯನ್ನು ನೀರಿನಂತೆ ಹರಿಸಿ ಕಾಮಗಾರಿಯನ್ನು ನಡೆಸಿದ್ದಾರೆ. ಯಾರೂ ಇದನ್ನು ಕೇಳುವವರಿಲ್ಲವೆಂಬತೆ ಅರೆಬರೆಯಾಗಿ ಮುಗಿಸಿದ್ದಾರೆ.ಸಂಭಂಧಪಟ್ಟ ಜನಪ್ರತಿನಿಧಿಗಳೂ ತೆಪ್ಪಗಿದ್ದಾರೆ. ಇಂಥ ಅದೆಷ್ಟೋ ಕಳಪೆ ಕಾಮಗಾರಿಗಳು ನಿರಂತರವಾಗಿ ನಡೆಯುತ್ತಿರುವಾಗ,ಇದನ್ನು ಪ್ರತಿಭಟಿಸಲು ಮುಂದಾಗದವರು ಇಲ್ಲದಾಗ ಇಂಥ ಕಾಮಗಾರಿಗಳು ಮುಂದೆಯೂ ನಡೆಯುತ್ತಲೇ ಇರುತ್ತದೆ. ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು?
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.