ನಿರ್ವಹಣೆ ಇಲ್ಲದೆ ನಿಷ್ಪ್ರಯೋಜಕವಾಗುತ್ತಿರುವ ಸಿಸಿ ಕೆಮರಾಗಳು
Team Udayavani, Jul 15, 2017, 2:40 AM IST
ಮಡಂತ್ಯಾರು: ಕಳ್ಳತನ, ದರೋಡೆ, ಹಲ್ಲೆ ಮೊದಲಾದ ಕಾನೂನು ಬಾಹಿರ ಪ್ರಕರಣಗಳನ್ನು ಪತ್ತೆ ಹಚ್ಚಲು, ತನಿಖೆ ನಡೆಸಲು ಸಿಸಿ ಕೆಮರಾಗಳು ನೆರವಿಗೆ ಬರುತ್ತವೆ ಎಂಬುದು ಪೊಲೀಸರ ಲೆಕ್ಕಾಚಾರ. ಆದರೆ ಅಂತಹ ಕೆಮರಾಗಳನ್ನು ಎಷ್ಟು ಕಡೆಗಳಲ್ಲಿ ಅಳವಡಿಸಲಾಗಿದೆ? ಅಳವಡಿಸಲಾದ ಕೆಮರಾಗಳು ಎಷ್ಟರ ಮಟ್ಟಿಗೆ ಸುಸ್ಥಿತಿಯಲ್ಲಿವೆ? ಎಂದು ನೋಡುವ ಗೋಜಿಗೆ ಯಾರೂ ಹೋಗುತ್ತಿಲ್ಲ. ಇಂತಹ ನಿರ್ಲಕ್ಷ್ಯಗಳು ಕೂಡ ಸಮಾಜಘಾತುಕರಿಗೆ ವರದಾನವಾಗುತ್ತಿವೆ ಎಂಬ ಮಾತು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ. ಕಾನೂನು ಬಾಹಿರ ಚಟುವಟಿಕೆಗಳಿಂದಾಗಿ ಸಾಮಾನ್ಯ ಜನರು ಭಯದಲ್ಲಿ ಜೀವನ ಮಾಡುವಂತಾಗಿದೆ. ಪೊಲೀಸರ ವೈಫಲ್ಯಗಳು ಇಂತಹ ಆತಂಕ ಹೆಚ್ಚಿಸಿವೆ.
ಸಿಸಿ ಕೆಮರಾ ಉಪಯುಕ್ತ
ಸಾಧಾರಣವಾಗಿ ಹೆಚ್ಚಾಗಿ ಎಲ್ಲ ಪ್ರಕರಣಕ್ಕೂ ಅನುಕೂಲವಾಗುವುದು ಸಿಸಿ ಕೆಮರಾ. ನಗರಗಳಲ್ಲಿ ಹೆಚ್ಚಿನ ಕಡೆಗಳಲ್ಲಿ ಖಾಸಗಿ ಕಂಪನಿಗಳು ತಮ್ಮ ಭದ್ರತೆಗೆ ಸಿಸಿ ಕೆಮರಾ ಅಳವಡಿಸಿಕೊಂಡಿರುತ್ತವೆ. ಆ ವ್ಯಾಪ್ತಿಯಲ್ಲಿ ಏನಾದರೂ ಅಹಿತಕರ ಘಟನೆ ಅಥವಾ ಸಮಾಜಘಾತುಕ ಚಟುವಟಿಕೆ ನಡೆದರೆ ತತ್‌ಕ್ಷಣ ಇದರಲ್ಲಿ ಸೆರೆಯಾಗುತ್ತದೆ. ಇದರಿಂದ ಪೊಲೀಸರಿಗೆ ಪ್ರಕರಣವನ್ನು ಭೇದಿಸಲು ಅನುಕೂಲವಾಗುತ್ತದೆ.
ಸೂಕ್ಷ್ಮ ಪ್ರದೇಶ, ಮುಖ್ಯ ಜಂಕ್ಷನ್‌ನಲ್ಲಿ ಅಳವಡಿಸಲಿ
ಗಲಭೆಗಳು ಹೆಚ್ಚು ನಡೆಯುವ ಮತ್ತು ಮುಖ್ಯ ರಸ್ತೆಯ ಎಲ್ಲ ಜಂಕ್ಷನ್‌ನಲ್ಲಿ ಕೆಮರಾ ಅಳವಡಿಕೆಯಾದಲ್ಲಿ ಸಮಾಜಘಾತುಕ ಕೃತ್ಯದಲ್ಲಿ ತೊಡಗಿರುವವರ ಬಣ್ಣ ಬಯಲು ಮಾಡಬಹುದು. ಕಳ್ಳತನ, ದರೋಡೆಗಳನ್ನು ನಿಯಂತ್ರಣ ಮಾಡಬಹುದು. ಅಪರಾಧಿಗಳನ್ನು ಸುಲಭವಾಗಿ ಪತ್ತೆಹಚ್ಚಲು ಹೆಚ್ಚಿನ ಅನುಕೂಲವಾಗಬಹುದು ಎನ್ನುವುದು ಸಾರ್ವಜನಿಕರ ಅಭಿಪ್ರಾಯ.
ಖಾಸಗಿ ಜಾಸ್ತಿ
ಬೆಳ್ತಂಗಡಿ ತಾಲೂಕಿನಲ್ಲಿ ಹೆಚ್ಚಾಗಿ ಖಾಸಗಿ ಕೆಮರಾಗಳು ಮಾತ್ರ ರಸ್ತೆಯನ್ನು ಕವರ್ ಮಾಡುತ್ತಿವೆ. ಅದು ಬಿಟ್ಟರೆ ಸರಕಾರಿ ಕೆಮರಾಗಳು ಎಲ್ಲೂ ಕಾರ್ಯಾಚರಿಸುತ್ತಿಲ್ಲ. ತಾಲೂಕಿನ ಠಾಣೆಗಳಲ್ಲಿಯೇ ಕೆಮರಾಗಳು ಕಾರ್ಯನಿರ್ವಹಿತ್ತಿಲ್ಲ ಎನ್ನುವುದಕ್ಕೆ ಬೆಳ್ತಂಗಡಿ, ವೇಣೂರು, ಪುಂಜಾಲಕಟ್ಟೆr ಠಾಣೆಯ ಕೆಟ್ಟುಹೋದ ಕೆಮರಾಗಳೇ ಸಾಕ್ಷಿ. ಗುಣಮಟ್ಟದ ಕೆಮರಾ ಅಳವಡಿಸಿದರೂ ಅದರ ನಿರ್ವಹಣೆ ಸರಿಯಾಗಿ ನಡೆಯುತ್ತಿಲ್ಲ. ಹೊಸ ಕೆಮರಾ ಅಳವಡಿಕೆಯಾದ ಕೆಲವೇ ತಿಂಗಳು ಮಾತ್ರ ಕಾರ್ಯಾಚರಿಸುತ್ತದೆ. ನಿರ್ವಹಣೆಯ ನಿರ್ಲಕ್ಷ್ಯದಿಂದ ಸಮಸ್ಯೆ ಬಗೆಹರಿಯದೆ ಹಾಗೆಯೇ ಉಳಿದಿದೆ ಎನ್ನುವುದು ಸ್ಪಷ್ಟವಾಗಿ ಕಾಣುತ್ತದೆ.
ಮಡಂತ್ಯಾರು ಜಂಕ್ಷನ್‌ನಲ್ಲಿ…
ಮಡಂತ್ಯಾರು ಪೇಟೆಯ ಸಾರ್ವಜನಿಕರು ಅಪಾರಾಧ, ಕಳ್ಳತನ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸಿಸಿ ಕೆಮರಾ ಅಳವಡಿಸಲು ನಿರ್ಧರಿಸಿದ್ದರು. ಕಾರಣಾಂತರದಿಂದ ಸಾಧ್ಯವಾಗಿರಲಿಲ್ಲ. ಅನಂತರ ಸರಕಾರದ ವತಿಯಿಂದ ಅಳವಡಿಸಲಾಗಿದೆ. ಆದರೆ ಅದು ಸರಿಯಾದ ನಿರ್ವಹಣೆ ಇಲ್ಲದೆ ಕೆಟ್ಟುಹೋಗಿದೆ. ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಮುಂಭಾಗದ ಮುಖ್ಯರಸ್ತೆಯ ಕಟ್ಟಡವೊಂದರಲ್ಲಿಯೂ ಉತ್ತಮ ಗುಣಮಟ್ಟದ ಕೆಮರಾ ಅಳವಡಿಸಿದ್ದು ಅದು ಕೂಡ ಕಾರ್ಯಾಚರಿಸುತ್ತಿಲ್ಲ.
ದರೋಡೆ ಪ್ರಕರಣಗಳು
ಪುಂಜಾಲಕಟ್ಟೆ ಠಾಣೆಯಲ್ಲಿ ಹಲವಾರು ಪ್ರಕರಣಗಳು ದಾಖಲಾಗಿದ್ದು 2016ರಲ್ಲಿ ಒಟ್ಟು 7 ದರೋಡೆ ಪ್ರಕರಣ, 2017ರಲ್ಲಿ ಇದುವರೆಗೆ 5 ಪ್ರಕರಣಗಳು ದಾಖಲಾಗಿದೆ. ಎರಡು ವರ್ಷಗಳ ಹಿಂದೆ ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನ, ಬಸವನಗುಡಿ ದೇವಸ್ಥಾನ ಇನ್ನೂ ಅನೇಕ ದೇವಸ್ಥಾನಗಳಲ್ಲಿ ದರೋಡೆ ನಡೆದಿದ್ದು ಘಟನೆಯ ಬಳಿಕ ಪೊಲೀಸ್ ಇಲಾಖೆಯ ಆದೇಶದ ಮೇರೆಗೆ ಸಿಸಿ ಕೆಮರಾ ಅಳವಡಿಸಲಾಯಿತು.
ಸ್ಪಷ್ಟ ಚಿತ್ರಣ ಸಿಗೋದಿಲ್ಲ
ಕೆಲವೆಡೆ ಅಳವಡಿಸಿರುವ ಕೆಮರಾಗಳು ಗುಣಮಟ್ಟದ್ದಾಗಿವೆ. ಆದರೆ ಅವುಗಳ ನಿರ್ವಹಣೆ ಆಗದೆ ಕೆಟ್ಟುಹೋಗುತ್ತಿವೆ. ಕೆಲವೊಂದು ಜಂಕ್ಷನ್‌ನಲ್ಲಿ ಹಾಕಿದ ಕೆಮರಾಗಳು ಗುಣಮಟ್ಟದಾಗಿಲ್ಲ. ಹಾಗಾಗಿ ಅವು ಗಾಳಿ, ಗುಡುಗಿಗೆ ಬೇಗನೆ ಕೆಡುತ್ತವೆ. ಪ್ರಕರಣಗಳು ನಡೆದಾಗ ಪೊಲೀಸರು ಸ್ಥಳೀಯ ಖಾಸಗಿ ಕೆಮರಾಗಳ ಮೊರೆ ಹೋಗಬೇಕಾಗುತ್ತದೆ. ಅದು ಸಾಧಾರಣ ಗುಣಮಟ್ಟದಾಗಿದ್ದು ಸ್ಪಷ್ಟ ಚಿತ್ರಣ ಸಿಗುವುದಿಲ್ಲ. ಇದರಿಂದ ತನಿಖೆ ವೇಳೆ ಗೊಂದಲಕ್ಕೆ ಕಾರಣವಾಗುತ್ತದೆ.
– ಪೊಲೀಸ್ ಪೇದೆ, ಪುಂಜಾಲಕಟ್ಟೆ
– ಪ್ರಮೋದ್ ಬಳ್ಳಮಂಜ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.