ಮಾಯಾಲೋಕದ ಒಳ ಹೊಕ್ಕಾಗ
Team Udayavani, Jul 15, 2017, 2:20 PM IST
ಬಯಸಿ ಬಯಸಿ ಬಂದ ಊರು ಬೆಂಗಳೂರು. ಬದುಕುವ ಬಗೆಯನ್ನು ಬೆಂಗಳೂರು ಕಲಿಸುತ್ತದೆ ಎಂಬುದು ಹಲವರ ಮಾತು. ಹಾಗಾಗಿಯೇ ನನ್ನ ಪದವಿಯ ಇಂಟರ್ನ್ಶಿಪ್ ಮಾಡುವ ಸಲುವಾಗಿ ಬೆಂಗಳೂರಿನ ದೊಡ್ಡ ಕಂಪನಿಯನ್ನು ಆಯ್ಕೆ ಮಾಡಿಕೊಂಡು ಬಂದೆ.
ನಾನು ಬೆಂಗಳೂರಿಗೆ ಹೊಸಬಳಲ್ಲ. ಆದರೂ ಅದೇಕೋ ಈ ಮುಂಚೆ ಕಂಡಿದ್ದ ಬೆಂಗಳೂರು ಈ ಬಾರಿ ಅನೇಕ ವಿಶೇಷ ಅನುಭವಗಳೊಂದಿಗೆ ಕಾಣತೊಡಗಿದೆ. ನನ್ನೂರಿನಲ್ಲಿ ಹೆಣ್ಣು ಗಂಡೆಂಬ ಬೇಧವಿಲ್ಲ. ಉದಾಹರಣೆಗೆ ಬಸ್ಸಿನಲ್ಲಿ ಚಲಿಸುವಾಗ ಹೆಣ್ಣು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದರೂ, ಗಂಡಸರೇ ಹೆಚ್ಚು ಸೀಟಿನಲ್ಲಿ ಕುಳಿತಿರುತ್ತಾರೆ. ಅಲ್ಲಿ ಯಾವುದೇ ಮೀಸಲಾತಿಯಿಲ್ಲ. ಆದರೆ ಇಲ್ಲಿ ಬಸ್ಸಿನಲ್ಲಿ ಮುಂದಿನ ಸೀಟುಗಳು ಮಹಿಳೆಯರಿಗೆ ಮೀಸಲು. ಅಂದರೆ ಹೆಣ್ಣನ್ನು ಗೌರವಿಸುವವರು ಇಲ್ಲಿರುವವರು ಎಂದು ತಿಳಿದು ಸಂತಸಪಟ್ಟಿದ್ದು ನಿಜ.
ನನ್ನೂರಿನಲ್ಲಿ ಒಂದು ಸಂಸಾರದ ಗಲಾಟೆ ಅಥವಾ ಹೆಂಗಸರ ನಡುವೆ ಗಲಾಟೆ ಉಂಟಾಗಿದ್ದರೆ ಊರಿನವರೆಲ್ಲಾ ನಿಂತು ನೋಡುತ್ತಾರೆ. ಜಗಳ ಬಿಡಿಸುವ ಪ್ರಯತ್ನ ಮಾಡುವವರು ಬೆರಳೆಣಿಕೆಯಷ್ಟು ಮಂದಿ ಮಾತ್ರ. ಆದರೆ ಈ ಬೆಂಗಳೂರಿನಲ್ಲಿ ಯಾರಾದರೂ ಗಲಾಟೆ ಮಾಡಿಕೊಂಡರೆ ಜನ ಅಲ್ಲಿ ಸುಳಿಯುವುದಿರಲಿ, ಅತ್ತ ತಿರುಗಿಯೂ ನೋಡುವುದಿಲ್ಲ.
ಒಮ್ಮೆ ಪಾದಚಾರಿಗಳ ರಸ್ತೆಯಲ್ಲಿ ನಾನು ಅಡ್ಡಾದಿಡ್ಡಿಯಾಗಿ ರಸ್ತೆಗೆ ನುಗ್ಗಿಬಿಟ್ಟೆ. ಆಗ ಬೈಕ್ ಸವಾರಳು “ಸಾಯಲು ನನ್ನ ಗಾಡಿಯೇ ಬೇಕಿತ್ತಾ?’ ಅಂದಾಗ ನನ್ನ ಕಣ್ಣುಗಳಲ್ಲಿ ನೀರು ತುಂಬಿದವು. ನನ್ನೂರೇ ಚೆಂದವಿತ್ತು. ನಮ್ಮದೇ ರಸ್ತೆ, ನಮ್ಮದೇ ನಡೆ ಎನ್ನುವ ಭಾವವೇ ಚೆಂದವಿತ್ತು ಎಂದೆನಿಸಿತು.
ವಾರದ ಅಂತ್ಯದ ದಿನ ಪಟ್ಟಣ ಸುತ್ತುವಾ ಅಂತ ಒಬ್ಬಳೇ ಹೊರಗೆ ಬಂದಾಗ ವಿಚಿತ್ರ ಸಂಗತಿಗಳು ಕಾಣತೊಡಗಿದವು. ವಿಚಿತ್ರ ಉಡುಗೆ ತೊಡುಗೆ ಧರಿಸಿದ ಹುಡುಗ, ಹುಡುಗಿಯರು, ಅಜ್ಜ ಅಜ್ಜಿಯರು ಮತ್ತು ಮಕ್ಕಳು, ಅಯ್ಯೋ ಇವರೆಲ್ಲಾ ಟೀವಿಯೊಳಗಿದ್ದವರು, ಇಲ್ಲೇನು ಮಾಡುತ್ತಿದ್ದಾರೆ? ಬಟ್ಟೆಯನ್ನು ಯಾಕೆ ಹೀಗೆಲ್ಲಾ ತೊಟ್ಟಿದ್ದಾರೆ ? ಕೂದಲನ್ನು ನಿಜ ಬದುಕಿನಲ್ಲಿ ಹೀಗೂ ಬಾಚಬಹುದೇ? ಈ ವೇಷ ಧರಿಸುವಂಥ ವ್ಯಕ್ತಿಗಳು ಕೇವಲ ಟೀವಿಯಲ್ಲಿರುತ್ತಾರೆ, ಇಲ್ಲವೇ ವಿದೇಶಿಯರು ಅಂತ ಅಂದುಕೊಂಡಿದ್ದೆ. ಅವರನ್ನು ನಡುರಸ್ತೆಯಲ್ಲಿ ಪ್ರತ್ಯಕ್ಷವಾಗಿ ಕಂಡೊಡನೆ ಇದು ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಬೆಂಗಳೂರೇ? ಎಂದು ಮತ್ತೆ ಮತ್ತೆ ನನ್ನನ್ನು ನಾನೇ ಕೇಳಿಕೊಳ್ಳುತ್ತಿದ್ದೇನೆ.
ನಾವು ಮನುಷ್ಯರು, ಸಾಮಾನ್ಯವಾಗಿ ದಿನವೂ ಒಂದೊಂದು ಆಲೋಚನೆಗಳಲ್ಲಿ ಮುಳುಗಿರುತ್ತೇವೆ. ಆಗ ಮುಖದ ಭಾವವೂ ಬದಲಾಗಿರುತ್ತದೆ. ಆದರೆ ಬೆಂಗಳೂರಿನಲ್ಲಿ ಎಲ್ಲರ ಮುಖದ ಭಾವವೂ ಒಂದೇ ರೀತಿ. ಯಾರು ಬೇಜಾರಿನಲ್ಲಿದ್ದಾರೆ? ಯಾರು ದುಃಖದಲ್ಲಿದ್ದಾರೆ? ಯಾರು ಕಷ್ಟದಲ್ಲಿದ್ದಾರೆ? ಎಂದು ತಿಳಿಯಲು ಸಾಧ್ಯವೇ ಇಲ್ಲ. ಅವರ ಮುಖದ ಭಾವಗಳು ಅದನ್ನು ವ್ಯಕ್ತಪಡಿಸುವಂತಿರುವುದಿಲ್ಲ. ನಾನೊಬ್ಬಳು ಮಾತ್ರ ಆಕಾಶ ತಲೆ ಮೇಲೆ ಬಿದ್ದಂತೆ ಸಪ್ಪಗಿದ್ದೇನೆ ಎಂದು ಮನವರಿಕೆಯಾದದ್ದು ಆಗಲೇ.
ನನ್ನೂರಿನಲ್ಲಿದ್ದಾಗ ದಿನಕ್ಕೆ ಎಷ್ಟು ದುಡ್ಡು ಖರ್ಚು ಮಾಡುತ್ತಿದ್ದೆನೋ ನೆನಪಿಲ್ಲ. ಆದರೆ ಇಲ್ಲಿ ಮಾತ್ರ ಪರ್ಸು ತೆಗೆದರೆ ದುಡ್ಡು ಖಾಲಿಯಾಗಿ ಬಿಡುತ್ತದೆ. ಹಾಗಾಗಿ, ದಿನಕ್ಕೊಮ್ಮೆಯೂ ಪರ್ಸಿನ ಮುಖ ನೋಡಬಾರದೆಂದು ನಿರ್ಧರಿಸಿದ್ದೇನೆ.
ನಾನಿಲ್ಲಿ ಕಲಿಯುವುದು, ತಿಳಿಯುವುದು ಬಹಳಷ್ಟಿದೆ ಅಂತ ಗೊತ್ತಿದೆ. ಹೊಸ ಅನುಭವಗಳಿಗಾಗಿ ಕಾಯುತ್ತಿದ್ದೇನೆ. ನಿಜಕ್ಕೂ ಬೆಂಗಳೂರೆಂಬುದು ಮಾಯಾಲೋಕವೇ ಸರಿ! ಒಳಹೊಕ್ಕಿದ್ದಾಗಿದೆ. ಇನ್ನೇನಿದ್ದರೂ ಇಲ್ಲಿ ಬದುಕಲು ಕಲಿಯಬೇಕು.
– ಕಾವ್ಯ ಸಹ್ಯಾದ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mike Tyson: ವಿದಾಯದ ಸುಳಿವು ನೀಡಿದ ಬಾಕ್ಸಿಂಗ್ ದಿಗ್ಗಜ ಮೈಕ್ ಟೈಸನ್
Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು
Team India: ವಿರಾಟ್ ಕೊಹ್ಲಿ ದಾಖಲೆ ಮುರಿದ ತಿಲಕ್ ವರ್ಮಾ
Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್‌ಗೆ ಗಂಭೀರ ಗಾಯ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.