ಸ್ಪಷ್ಟವಾಯ್ತು ಮೈತ್ರಿ ಬಿರುಕು: ಸಿಎಂ ಕಾರ್ಯಕ್ರಮದಿಂದ ತೇಜಸ್ವಿ ದೂರ
Team Udayavani, Jul 16, 2017, 4:00 AM IST
ಪಾಟ್ನಾ/ನವದೆಹಲಿ: ಬಿಹಾರದ ಮಹಾಮೈತ್ರಿ ಕೂಟದಲ್ಲಿ ಎಲ್ಲವೂ ಸರಿಯಾಗಿದೆ ಎಂದು ಜೆಡಿಯು-ಆರ್‌ಜೆಡಿ ನಾಯಕರು ಪ್ರತಿಪಾದಿಸುತ್ತಿದ್ದಾರೆ. ಆದರೆ ಶನಿವಾರ ಆಯೋಜಿಸಲಾಗಿದ್ದ ವಿಶ್ವ ಕೌಶಲ್ಯ ದಿನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ನಿತೀಶ್‌ಕುಮಾರ್ ಭಾಗವಹಿಸಿದ್ದರೆ, ಉಪ ಮುಖ್ಯಮಂತ್ರಿ, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಗೈರು ಹಾಜರಾಗಿದ್ದರು. ಆರಂಭದಲ್ಲಿ ಕಾರ್ಯಕ್ರಮದ ಆಯೋಜಕರು ತೇಜಸ್ವಿ ಯಾದವ್ ಕುಳಿತುಕೊಳ್ಳಬೇಕಾಗಿದ್ದ ಆಸನದ ಎದುರಿಗಿದ್ದ ಹೆಸರಿನ ಫಲಕವನ್ನು ಬಟ್ಟೆಯಿಂದ ಮುಚ್ಚಿದರು. ನಂತರ ಅದನ್ನು ತೆಗೆದು ಹಾಕಿದರು.
ಈ ಫೋಟೋ ಮತ್ತು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವೈರಲ್ ಆಯಿತು. ಈ ಬೆಳವಣಿಗೆಯಿಂದಾಗಿ ತೇಜಸ್ವಿ ಯಾದವ್ ವಿರುದ್ಧ ಕೇಂದ್ರ ತನಿಖಾ ಸಂಸ್ಥೆಗಳು ಕೇಸು ದಾಖಲಿಸಿದ್ದರಿಂದ ಉಂಟಾಗಿರುವ ಎರಡೂ ಪಕ್ಷಗಳ ನಡುವಿನ ಭಿನ್ನಾಭಿಪ್ರಾಯ ನಿವಾರಣೆಯಾಗಿಲ್ಲ ಎನ್ನುವುದು ಮತ್ತಷ್ಟು ಸಾಬೀತಾದಂತಾಗಿದೆ.
ಆರ್‌ಜೆಡಿ ಸಚಿವರ ಬಳಿಯಿಂದ ಎದ್ದ ಸಿಎಂ:
ಇವೆಲ್ಲದರ ನಡುವೆ ಮತ್ತೂಂದು ಗಮನಾರ್ಹ ವಿಚಾರವೂ ಕಾರ್ಯಕ್ರಮದಲ್ಲಿ ನಡೆದು ಹೋಯಿತು. ಆರ್‌ಜೆಡಿ ನಾಯಕ ಮತ್ತು ಕಾರ್ಮಿಕ ಸಚಿವ ವಿಜಯ ಪ್ರಕಾಶ್ ಬಳಿ ಸಿಎಂ ನಿತೀಶ್ ಕುಳಿತಿದ್ದರು. ನಂತರದ ಕೆಲಕ್ಷಣಗಳಲ್ಲಿ ಆರ್‌ಜೆಡಿ ನಾಯಕನ ಬಳಿ ಕುಳಿತಿದ್ದ ನಿತೀಶ್, ಜೆಡಿಯು ನಾಯಕ ಮತ್ತು ಸಚಿವ ರಾಜೀವ್ ರಂಜನ್ ಸಿಂಗ್ ಬಳಿ ಕುಳಿತು ಗಹನವಾಗಿ ಚರ್ಚಿಸಿದರು. ಇದರಿಂದ ಆರ್‌ಜೆಡಿ ನಾಯಕರ ಬಳಿಯಿಂದ ಅಂತರ ಕಾಯ್ದುಕೊಳ್ಳಲೂ ಮುಖ್ಯಮಂತ್ರಿ ಮುಂದಾಗಿದ್ದಾರೆ ಎನ್ನುವುದು ಸ್ಪಷ್ಟವಾಗಿ ಗೊತ್ತಾಗುತ್ತಿತ್ತು.
ಕಾರ್ಯಕ್ರಮದ ಬಳಿಕ ಮಾಧ್ಯಮಗಳು ನಿತೀಶ್‌ರನ್ನು ಸುತ್ತುವರಿದು ಕೌಶಲ್ಯ ದಿನ ಕಾರ್ಯಕ್ರಮದಿಂದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ದೂರ ಉಳಿದದ್ದೇಕೆ ಎಂದು ಪ್ರಶ್ನಿಸಿದರು. ಅದಕ್ಕೆ ಯಾವುದೇ ಪ್ರತಿಕ್ರಿಯೆ ನೀಡದ ನಿತೀಶ್, “ಮಾಧ್ಯಮ ಮಿತ್ರರಿಗೆ ವಿಶ್ವ ಕೌಶಲ್ಯ ದಿನದ ಶುಭಾಷಯಗಳು’ ಎಂದಷ್ಟೇ ಹೇಳಿ ಮುಂದಕ್ಕೆ ಸಾಗಿದರು. ಇದಾದ ಬಳಿಕ ವೇದಿಕೆಯಿಂದ ಕೆಳಗಿಳಿದು ಬಂದ ಕಾರ್ಮಿಕ ಸಚಿವ ವಿಜಯ ಪ್ರಕಾಶ್‌ರನ್ನು ಸುತ್ತುವರಿದ ಮಾಧ್ಯಮದವರು ನಿತೀಶ್‌ಗೆ ಕೇಳಿದ ಪ್ರಶ್ನೆಯನ್ನೇ ಕೇಳಿದರು. ಅದಕ್ಕೆ ಉತ್ತರಿಸಿದ ಅವರು “ಉಪಮುಖ್ಯಮಂತ್ರಿ ಯಾವ ಕಾರಣಕ್ಕಾಗಿ ಸಮಾರಂಭದಲ್ಲಿ ಭಾಗವಹಿಸಲಿಲ್ಲ ಎನ್ನುವುದು ಗೊತ್ತಿಲ್ಲ’ ಎಂದರು. ಸಿಎಂ ನಿತೀಶ್ ಅವರ ಬಳಿಯ ಸೀಟ್‌ನಿಂದ ಎದ್ದು ಹೋದ ಬಗ್ಗೆ ಕೇಳಿದಾಗ “ಅವರಿಗೆ ಟಿವಿಯ ದೃಶ್ಯಗಳು ಕಾಣದೇ ಇದ್ದುದರಿಂದ ಪಕ್ಕದ ಸೀಟ್‌ನಲ್ಲಿ ಕುಳಿತರು’ ಎಂದರು ಆರ್‌ಜೆಡಿ ನಾಯಕ.
ಇಂದು ಸಭೆ: ಮೈತ್ರಿಕೂಟದಲ್ಲಿ ಅತೃಪ್ತಿ ಮೂಡಿರುವಂತೆಯೇ ಭಾನುವಾರ ಪಾಟ್ನಾದಲ್ಲಿ ಕಾಂಗ್ರೆಸ್ ಮತ್ತು ಆರ್‌ಜೆಡಿ ಶಾಸಕರ ಮತ್ತು ಮುಖಂಡರ ಸಭೆ ನಡೆಯಲಿದೆ. ರಾಷ್ಟ್ರಪತಿ ಚುನಾವಣೆಗಾಗಿ ಈ ಸಭೆ ಕರೆಯಲಾಗಿದೆಯಾದರೂ, ಅದರಲ್ಲಿ ಹಾಲಿ ಬೆಳವಣಿಗೆ ಪ್ರಮುಖವಾಗಿ ಚರ್ಚೆಯಾಗಲಿದೆ. ಜೆಡಿಯು ಶಾಸಕರ ಮತ್ತು ಮುಖಂಡರ ಸಭೆಯೂ ಪ್ರತ್ಯೇಕವಾಗಿಯೇ ನಡೆಯಲಿದೆ.
ಆರೋಪಗಳ ಬಗ್ಗೆ ವಿವರಣೆ ನೀಡಲಿ
ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಮತ್ತು ಆರ್‌ಜೆಡಿ ನಾಯಕರು ಅವರದ್ದೇ ಪಕ್ಷದ ವಿರುದ್ಧ ಗುರುತರ ಆರೋಪಗಳು ಬಂದಿರುವ ಹಿನ್ನೆಲೆಯಲ್ಲಿ ಸೂಕ್ತ ಸಮರ್ಥನೆಗಳನ್ನು ನೀಡಬೇಕು. ಅದು ಮಹಾಮೈತ್ರಿ ಕೂಟದ ಧರ್ಮವೇ ಆಗಿದೆ ಎಂದು ಜೆಡಿಯು ನಾಯಕ ಪವನ್ ವರ್ಮಾ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tamil Nadu: ಗೋ ಮಾಂಸ ತಿನ್ನೋದು ಸರಿ ಎಂದಾದರೆ ಮೂತ್ರ ಯಾಕೆ ಬೇಡ: ಬಿಜೆಪಿ
Delhi Polls: ದಿಲ್ಲಿ ವಿಧಾನಸಭೆಯ 70 ಸ್ಥಾನಕ್ಕೆ ಬರೋಬ್ಬರಿ 699 ಅಭ್ಯರ್ಥಿಗಳು ಸ್ಪರ್ಧೆ!
Supreme Court: ಟೆಕಿ ಅತುಲ್ ಪುತ್ರನನ್ನು ಅಜ್ಜಿ ಸುಪರ್ದಿಗೆ ನೀಡಲು ಸುಪ್ರೀಂ ನಕಾರ
NRI: ಸಂಸತ್ತಿನಲ್ಲಿ ಎನ್‌ಆರ್‌ಐ ಪ್ರಾತಿನಿಧ್ಯ: ಸ್ಥಾಯಿ ಸಮಿತಿ ಸಭೇಲಿ ಚರ್ಚೆ
Dog’s Revenge: ತನಗೆ ಡಿಕ್ಕಿ ಹೊಡೆದ ಕಾರಿನ ಮೇಲೆ ಸೇಡು ತೀರಿಸಿಕೊಂಡ ಶ್ವಾನ…