ನೂತನ ಆಧಾರ್ ಕಾರ್ಡ್ ಪಡೆಯುವುದೇ ಕಷ್ಟ !
Team Udayavani, Jul 18, 2017, 2:50 AM IST
ವಿಟ್ಲ: ಆಧಾರ್ ಕಾರ್ಡ್ ಇಂದು ಎಲ್ಲದಕ್ಕೂ ಆಧಾರವಾಗಿದೆ. ಆದರೆ ನೂತನವಾಗಿ ಆಧಾರ್ ಕಾರ್ಡ್ ಪಡೆಯುವುದು ಹೇಗೆ? ಆಧಾರ್ ಕಾರ್ಡ್ ಪಡೆಯುವ ಕೇಂದ್ರಗಳಲ್ಲೆಲ್ಲ ಆಗುತ್ತಿರುವ ಸಮಸ್ಯೆಗಳನ್ನು ಪರಿಹರಿಸುವವರಾರು? ಎಂಬುದಕ್ಕೆ ಸಾರ್ವಜನಿಕರಿಗೆ ಉತ್ತರ ಸಿಗುತ್ತಿಲ್ಲ.
ಆಧಾರವೇ ಬೇಕು
ಇತ್ತೀಚಿನ ದಿನಗಳಲ್ಲಿ ಆಧಾರ್ ಕಾರ್ಡ್ ಅನ್ನು ಪಾನ್ ಕಾರ್ಡ್, ಬ್ಯಾಂಕ್ ಖಾತೆ, ಮೊಬೈಲ್ ಸಿಮ್, ಪಡಿತರ ಚೀಟಿ, ಗ್ಯಾಸ್, ಮಕ್ಕಳ ಶಾಲೆ ಪ್ರವೇಶಾತಿ, ಪಾಸ್‌ಪೋರ್ಟ್, ಗುರುತಿನ ಚೀಟಿಗಳಿಗೆಲ್ಲ ಜೋಡಿಸಬೇಕಿದೆ. ಅಂದರೆ ಆಧಾರ್ ಕಾರ್ಡ್ ಆಧಾರದಲ್ಲೇ ಎಲ್ಲ ವ್ಯವಹಾರ ನಡೆಯುತ್ತದೆ. ಇಷ್ಟೆಲ್ಲ ಅತ್ಯಮೂಲ್ಯವಾದ ಆಧಾರ್ ಕಾರ್ಡ್ ಪಡೆಯಲು ಸಾರ್ವಜನಿಕರು ಭಾರೀ ಸಂಕಷ್ಟ ಅನುಭವಿಸುತ್ತಿದ್ದಾರೆ.
ಆಧಾರ್ ಕಾರ್ಡ್ ಪಡೆಯಲು ಆಧಾರ ಕೇಂದ್ರಗಳನ್ನು ತಾಲೂಕು ಮತ್ತು ಹೋಬಳಿಗಳಲ್ಲಿ ತೆರೆಯಲಾಗಿದೆ. ಅಲ್ಲಿ ಇತರ ದಾಖಲೆಗಳ ಜೆರಾಕ್ಸ್ ಪ್ರತಿಗಳನ್ನು ನೀಡಿ ಅರ್ಜಿ ನೀಡಬೇಕು. ಇಂಟರ್‌ನೆಟ್ ಮೂಲಕ ವೈಯಕ್ತಿಕವಾಗಿ ಅಥವಾ ಅಂಚೆ ಕಚೇರಿ, ಸೈಬರ್ ಸೆಂಟರ್‌ಗಳಲ್ಲಿ ಆಧಾರ್ ಕಾರ್ಡ್‌ಗಳ ಸ್ಥಿತಿಗತಿ ಗಳನ್ನು ಪರಿಶೀಲಿಸಲಾಗುತ್ತದೆ. ಇದಾಗದ ಹೊರತು ಹೊಸ ಕಾರ್ಡ್ ಪಡೆಯುವುದಕ್ಕೆ ಆಗುವುದಿಲ್ಲ. ದಾಖಲೆಗಳೆಲ್ಲವನ್ನೂ ಪಡೆದ ಕೇಂದ್ರಗಳು ಮುಂದಿನ ಹಂತಕ್ಕೆ ಕಳುಹಿಸಿದ ಒಂದು ತಿಂಗಳ ಬಳಿಕ ಆಧಾರ್ ಕಾರ್ಡ್ ಸಿಗುತ್ತದೆ ಎಂಬ ಆಶಯವಿರುತ್ತದೆ. ಬೇರೆ ಬೇರೆ ಕಾರಣಗಳಿಂದ ತಿರಸ್ಕೃತಗೊಂಡವರು ಮತ್ತೆ ಆಧಾರ ಕೇಂದ್ರಕ್ಕೇ ತೆರಳಿ ಹೊಸ ಅರ್ಜಿ ಸಲ್ಲಿಸುವುದೇ ಪರಿಹಾರ. ಆಮೇಲೆ ಅಲ್ಲಿ ಕಂಪ್ಯೂಟರ್ ಸರಿಯಿರಬೇಕು, ಸಿಬಂದಿ ಇರಬೇಕು, ಸರ್ವರ್ ಸರಿಯಿರಬೇಕು, ಆಗ ಅರ್ಜಿ ಸಲ್ಲಿಸಿದವರ ಕಾರ್ಯ ಪ್ರಗತಿ ಲಭ್ಯವಾಗಲಿದೆ.
ಈ ಸಮಸ್ಯೆ ಪರಿಹರಿಸಲೇ ಇಲ್ಲ
ವಿಟ್ಲ ಮತ್ತು ಎಲ್ಲ ಆಧಾರ ಕೇಂದ್ರಗಳಲ್ಲಿ ಈ ಸಮಸ್ಯೆ ಮಾಮೂಲಿ. ಇಲಾಖೆಯು ಇತ್ತ ಗಮನಿಸುತ್ತಲೂ ಇಲ್ಲ. ವಿಟ್ಲದಲ್ಲಿ ನೆಮ್ಮದಿ ಕೇಂದ್ರವನ್ನು ಅಟಲ್ ಕೇಂದ್ರವೆಂದು ಹೆಸರು ಬದಲಾಯಿಸಲಾಗಿದೆ. ಆದರೆ ಸೇವೆ ಆರಂಭವಾದಂದಿನಿಂದ ನಾಗರಿಕರು ತೊಂದರೆ ಅನುಭವಿಸುತ್ತಲೇ ಇದ್ದಾರೆ. ಇಲ್ಲಿನ ಸೇವೆಯನ್ನು ಸರಿಪಡಿಸಲು ಇಲಾಖೆಯ ಮೇಲಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ನಾಗರಿಕರ ಟೀಕೆ.
ಸೌಲಭ್ಯ ಒದಗಿಸಲಿ
‘ಆಧಾರ್ ಕಾರ್ಡ್ ಎಲ್ಲದಕ್ಕೂ ಆಧಾರ ಎಂದು ಎಲ್ಲೆಡೆ ಘೋಷಿಸಲಾಗಿದೆ. ಆದರೆ ಆಧಾರ್ ಕಾರ್ಡ್ ಪಡೆಯುವುದಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿಲ್ಲ. ನನ್ನ ಭಾವ ಆಧಾರ್ ಕಾರ್ಡ್‌ಗೆ ಅರ್ಜಿ ಸಲ್ಲಿಸಿದ್ದರು. ಬಂದಿರಲಿಲ್ಲ : ಮತ್ತೆ ವಿಚಾರಿಸಿದೆ. ಸಿಗಲಿಲ್ಲ. ಈಗ ಒಂದು ವಾರದಿಂದ ವಿಟ್ಲ, ಪುತ್ತೂರು, ಬಿ.ಸಿ.ರೋಡ್‌ಗಳಿಗೆ ಅಲೆದಾಡಿದೆ. ಸೈಬರ್ ಸೆಂಟರ್, ಅಂಚೆ ಕಚೇರಿಗಳಿಗೆ ಅಡ್ಡಾಡಿದೆ. ಕಾರ್ಡ್ ಸಿಗಲಿಲ್ಲ. ಮತ್ತೆ ವಿಟ್ಲದಲ್ಲಿ ಪುನಃ ಹೊಸ ಅರ್ಜಿ ಸಲ್ಲಿಸುವುದಕ್ಕಾಗಿ ಸರದಿ ಸಾಲಲ್ಲಿ ನಿಂತೆ. ಟೋಕನ್ ನಂಬ್ರ 10 ಸಿಕ್ಕಿದೆ. ಮಧ್ಯಾಹ್ನ ವರೆಗೆ ನಾನೂ ಭಾವನೂ ಸರದಿ ಸಾಲಲ್ಲಿ ನಿಂತೆವು. ಆಗ ಕಂಪ್ಯೂಟರ್ ಸರಿಯಿಲ್ಲ ಎನ್ನಲಾಯಿತು’ ಎಂದು ಕಾರ್ಡ್ ಪಡೆಯುವ ತಮ್ಮ ಕಷ್ಟವನ್ನು ವಿವರಿಸಿದ್ದಾರೆ ಕುಕ್ಕೆ ಮನೆ ಶ್ರೀಧರ ಭಟ್.
‘ತಹಶೀಲ್ದಾರ್, ಆರ್‌ಐ ಅವರಿಗೆಲ್ಲ ಕರೆ ಮಾಡಿದೆ. ಎಲ್ಲರೂ ಗೊಣಗಲು ಆರಂಭಿಸಿದರು. ಕಂಪ್ಯೂಟರ್ ಸರಿಯಿಲ್ಲವೆಂದಾದಲ್ಲಿ ಏನು ಮಾಡಲು ಸಾಧ್ಯ? ಎಂಬ ಉತ್ತರ ಸಿಕ್ಕಿದೆ. ನಾಳೆ ಮತ್ತೆ ಸರದಿ ಸಾಲಲ್ಲಿ ನಿಲ್ಲಬೇಕು. ಮತ್ತೆ ಹೊಸ ಟೋಕನ್ ಪಡೆಯಬೇಕು. ಅಲ್ಲದೇ ಇಡೀ ದಿನ ಕಳೆಯಬೇಕು. ನನ್ನಂತೆ ನೂರಾರು ಜನ ಹಲವಾರು ದಿನಗಳಿಂದ ಆಧಾರ್ ಕಾರ್ಡ್‌ಗಾಗಿ ಹೀಗೆ ದಿನಗಟ್ಟಲೆ ಪರದಾಡುತ್ತಿದ್ದಾರೆ. ಈ ನಷ್ಟಗಳಿಗೆ ಯಾರು ಪರಿಹಾರ ಕೊಡುತ್ತಾರೆ ?’ ಎಂದು ಕೇಳುತ್ತಾರೆ ಅವರು. ಇದು ಒಬ್ಬರ ಕಷ್ಟವಲ್ಲ: ಹಲವರದ್ದು. ಇಲಾಖೆಯ ಕಚೇರಿಯಲ್ಲೂ ಸರಿಯಾದ ವ್ಯವಸ್ಥೆ ಇಲ್ಲದ ಕಾರಣ, ಸಮಸ್ಯೆ ಬಿಗಡಾ ಯಿಸಿದೆ. ಕೂಡಲೇ ಸಂಬಂಧಪಟ್ಟ ಇಲಾಖೆ ವ್ಯವಸ್ಥೆಯನ್ನು ಸರಿಪಡಿಸಿ ಸೌಲಭ್ಯ ಒದಗಿಸಬೇಕೆಂಬುದು ಸಾರ್ವಜನಿಕರ ಆಗ್ರಹ.
ಟೋಕನ್ ಸಮಸ್ಯೆ
ಆಧಾರ್ ಕೇಂದ್ರಗಳಲ್ಲಿ ಪ್ರಜೆಗಳ ಪಾಡು ಹೇಳತೀರದು. ವಿಟ್ಲದಲ್ಲಿ ಪ್ರತಿದಿನ 30 ಆಧಾರ್ ಕಾರ್ಡ್ ಅರ್ಜಿದಾರರನ್ನು ದಾಖಲಿಸಿಕೊಳ್ಳಲು ಸಾಧ್ಯವಾಗುತ್ತದೆ. ಆದುದರಿಂದ 30 ಮಂದಿಗೆ ಮಾತ್ರ ಟೋಕನ್ ನೀಡಲಾಗುತ್ತದೆ. 10 ಗಂಟೆಗೆ ಕಚೇರಿ ತೆರೆಯುವುದಾದರೆ ಬೆಳಗ್ಗೆ 6.30ಕ್ಕೇ ನಾಗರಿಕರು ಸರದಿ ಸಾಲಲ್ಲಿ ನಿಲ್ಲುತ್ತಾರೆ. ಸರದಿ ಸಾಲಲ್ಲಿ ನಿಂತವರಲ್ಲಿ 30 ಮಂದಿ ಟೋಕನ್ ಪಡೆಯುತ್ತಾರೆ. ಆ ದಿನ ಕಾರಣಾಂತರದಿಂದ ಅವರ ಅರ್ಜಿ ಸ್ವೀಕರಿಸಲಾಗದೇ ಇದ್ದಲ್ಲಿ ಮರುದಿನ ಮತ್ತೆ ಸರದಿ ಸಾಲಲ್ಲಿ ನಿಂತು ಹೊಸ ಟೋಕನ್ ಪಡೆದುಕೊಳ್ಳಬೇಕು.
ಅಧಿಕಾರಿಗಳ ಹೇಳಿಕೆ ಪ್ರಕಾರ ನಾಗರಿಕರು 10 ಗಂಟೆ ಬಳಿಕವೇ ಸರದಿ ಸಾಲಲ್ಲಿ ನಿಂತು ಟೋಕನ್ ಪಡೆದುಕೊಳ್ಳಬೇಕು. ಆದರೆ ಸಿಗುವ ಸಂಖ್ಯೆ ಕಡಿಮೆಯಿರುವುದರಿಂದ ಜನರು ಮುಗಿಬೀಳುವುದು ಕೂಡಾ ಅನಿವಾರ್ಯವಾಗಿದೆ. ಇದೆಲ್ಲ ಕಾರಣಗಳಿಂದ ಬಳಲಿ ಬೆಂಡಾಗಿರುವ ನಾಗರಿಕರು ಆಧಾರ್ ಕಾರ್ಡ್ ಒದಗಿಸಲು ಸರಕಾರ ಗಂಭೀರ ಕ್ರಮಕೈಗೊಳ್ಳದೇ ಇದ್ದಲ್ಲಿ ಅನೇಕ ಮಂದಿ ಜತೆಗೂಡಿ ಪ್ರತಿಭಟನೆಗೆ ಸಿದ್ಧ ಎಂದು ಉದಯವಾಣಿಗೆ ತಿಳಿಸಿದ್ದಾರೆ.
ಸರ್ವರ್ ಸಮಸ್ಯೆ
ಸೋಮವಾರ ಸರ್ವರ್ ಸಮಸ್ಯೆ ಆರಂಭವಾಯಿತು. ಇತ್ತೀಚೆಗೆ ಇದನ್ನೆಲ್ಲ ಸರಿಪಡಿಸಲಾಗಿದೆ. ಮತ್ತೆ ಸಮಸ್ಯೆ ಆರಂಭವಾಗಿದೆ. ಸರ್ವರ್ ಸಮಸ್ಯೆ ಪರಿಹಾರವಾದ ತತ್‌ಕ್ಷಣ ನಾಗರಿಕರಿಗೆ ಅವಶ್ಯವಾದ ಕ್ರಮಕೈಗೊಳ್ಳಲಾಗುತ್ತದೆ.
– ದಿವಾಕರ ರೆವಿನ್ಯೂ ಅಧಿಕಾರಿ
– ಉದಯಶಂಕರ್ ನೀರ್ಪಾಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kollywood: ಬಹಿರಂಗ ಪತ್ರ ಬರೆದು ಧನುಷ್ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.