ಇನ್ನೇನು ಕುಸಿದೇ ಬಿಡುವ ಸ್ಥಿತಿಯಲ್ಲಿ ಬೆಂಗಳೂರು ಫುಟ್ಬಾಲ್ ಗ್ರೌಂಡ್
Team Udayavani, Jul 19, 2017, 5:05 AM IST
ಬೆಂಗಳೂರು: ಒಂದು ಕಡೆ ರಾಜ್ಯ ಫುಟ್‌ಬಾಲ್ ಆಟಗಾರರು ಕ್ರೀಡಾಂಗಣವಿಲ್ಲದೆ ಹೆಣಗಾಟ ನಡೆಸುತ್ತಿದ್ದಾರೆ. ಕಂಠೀರವದಲ್ಲಿ ಅಭ್ಯಾಸ ನಡೆಸಲು ಅಥ್ಲೀಟ್ಸ್ ಹಾಗೂ ಫುಟ್ಬಾಲಿಗರ ನಡುವಿನ ಜಿದ್ದಾಟ ತಾರಕಕ್ಕೇರಿದೆ. ಇಂತಹ ದುಸ್ಥಿತಿಯಿದ್ದರೂ ಬೆಂಗಳೂರಿನ ಮೆಗ್ರಾಥ್ ರಸ್ತೆಯಲ್ಲಿರುವ ಫುಟ್‌ಬಾಲ್ ಕ್ರೀಡಾಂಗಣವನ್ನು ನವೀಕರಣ ಮಾಡುವ ಕೆಲಸವೇ ಆಗುತ್ತಿಲ್ಲ. ಪ್ರೇಕ್ಷಕರ ಗ್ಯಾಲರಿಗಳು ಬಹಳ ಹಳೆಯದ್ದಾಗಿದ್ದು ಇಂದೋ ನಾಳೆಯೋ ಕುಸಿಯುವ ಭೀತಿಯಲ್ಲಿವೆ. ಫುಟ್‌ಬಾಲ್ ಕ್ರೀಡಾಂಗಣ ನಿರ್ಮಾಣವಾಗಿ 40 ವರ್ಷ ಕಳೆದಿದೆ. ಇದು ಅಂತಾರಾಷ್ಟ್ರೀಯ ದರ್ಜೆಗೆ ತಕ್ಕಂತೆ ಇಲ್ಲವೆಂದು ಕಿರಿಯರ ವಿಶ್ವಕಪ್ ಫುಟ್‌ಬಾಲ್ ಪಂದ್ಯಗಳನ್ನೂ ಇಲ್ಲಿ ನಡೆಸಲಿಲ್ಲ. ಮೈದಾನದ ಸ್ವಚ್ಛತೆ ಹಾಳಾಗಿ, ಅಲ್ಲಲ್ಲಿ ಬಿರುಕುಗಳು ಕಾಣಿಸಿಕೊಂಡು ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದರೂ ಸರಿಪಡಿಸುವ ಕೆಲಸಕ್ಕೆ ಯಾರೂ ಮುಂದಾಗಿಲ್ಲ.
ಬಳಕೆಯಲ್ಲಿಲ್ಲ 2 ಗ್ಯಾಲರಿ: ಬೆಂಗಳೂರು ಫುಟ್ಬಾಲ್ ಕ್ರೀಡಾಂಗಣದ ಆಸನಗಳ ಸಂಖ್ಯೆ 15 ಸಾವಿರದಿಂದ 40 ಸಾವಿರದವರೆಗೆ ಇದೆ. ಇದು ಒಟ್ಟಾರೆ ಮೂರು ಗ್ಯಾಲರಿಯನ್ನು ಒಳಗೊಂಡಿದೆ. ಸದ್ಯಕ್ಕೆ ಇದರಲ್ಲಿ ಮುಖ್ಯ ದ್ವಾರದ ಸಮೀಪದ ಒಂದು ಗ್ಯಾಲರಿಯಲ್ಲಿ ಮಾತ್ರ ಅಭಿಮಾನಿಗಳು ಕುಳಿತು ಪಂದ್ಯ ವೀಕ್ಷಿಸಬಹುದು. ಆದರೆ ಇದು ಕೂಡ ಅವಸಾನದತ್ತ ಸಾಗಿದ್ದು ಕುಸಿತದ ಆತಂಕದಲ್ಲಿದೆ. ಮುಖ್ಯ ದ್ವಾರದಿಂದ ಸರಿ ಎದುರು ಇರುವ ಗ್ಯಾಲರಿ ಉಪಯೋಗಿಸದೇ ಹಲವಾರು ವರ್ಷಗಳೇ ಕಳೆದಿವೆ. ಗಿಡಗಂಟಿಗಳು ಬೆಳೆದಿದ್ದು ಯಾರೂ ನೋಡುವವರೆ ಇಲ್ಲ. ಮತ್ತೂಂದು ಗ್ಯಾಲರಿಯ ಕಥೆಯೂ ಇದೆ. ಕೊನೆಯ ಬಾರಿಗೆ ಐಲೀಗ್ ಪಂದ್ಯ ನಡೆದಿದ್ದಾಗ ಜನರು ತುಂಬಿದ್ದರು. ಆನಂತರ ಗೇಟ್ ಬಂದ್ ಆಗಿದೆ. ಸದ್ಯ ಯಾರಿಗೂ ಪ್ರವೇಶವಿಲ್ಲ.
ಬಳಕೆಯಲ್ಲಿರುವ ಗ್ಯಾಲರಿಯಲ್ಲಿ ಬಿರುಕುಗಳು: ಕ್ರೀಡಾಂಗಣದ ಸುತ್ತ ಒಮ್ಮೆ ನೋಟ ಹರಿಸಿದರೆ ಅಲ್ಲಲ್ಲಿ ಬಿರುಕು ಬಿದ್ದಿರುವ ದೃಶ್ಯ ಕಂಡು ಬರುತ್ತದೆ. ಕೆಲವು ದೊಡ್ಡ ಪ್ರಮಾಣದಲ್ಲಿದ್ದರೆ ಇನ್ನೂ ಕೆಲವು ಸಣ್ಣ ಪ್ರಮಾಣದಲ್ಲಿದೆ. ಉಪಯೋಗದಲ್ಲಿರುವ ಗ್ಯಾಲರಿಯಲ್ಲಿ ಅಲ್ಲಲ್ಲಿ ಬಿರುಕುಗಳು ಕಂಡು ಬಂದಿವೆ.
ಭರ್ತಿ ಜನ ಬಂದರೆ ಕುಸಿಯುವ ಆತಂಕ: ಪ್ರಮುಖ ಪಂದ್ಯದ ವೇಳೆ ಮೈದಾನದ ಸಾಮರ್ಥ್ಯದಷ್ಟು ಜನ ಬಂದಿದ್ದೇ ಆದರೆ ಸದ್ಯ ಉಪಯೋಗಿಸುತ್ತಿರುವ ಗ್ಯಾಲರಿಯೂ ಕುಸಿಯುವ ಆತಂಕದಲ್ಲಿದೆ. ಆದರೆ ಎಷ್ಟೇ ಜನ ಸೇರಿದರೂ ಗ್ಯಾಲರಿಗೆ ಏನೂ ಆಗುವುದಿಲ್ಲ ಎನ್ನುವುದು ರಾಜ್ಯ ಫುಟ್‌ಬಾಲ್ ಸಂಸ್ಥೆ (ಕೆಎಸ್‌ಎಫ್ಎ) ಖಜಾಂಚಿ ನಾಗೇಂದ್ರ ಅವರ ಮಾತು.
25 ವರ್ಷದಿಂದ ಸುಣ್ಣಬಣ್ಣವಿಲ್ಲ: ಈ ಕ್ರೀಡಾಂಗಣ ನಿರ್ಮಾಣವಾಗಿದ್ದರು ಇದರ ನಿರ್ವಹಣೆಯನ್ನು ಸರಿಯಾಗಿ ಮಾಡುತ್ತಿಲ್ಲ ಎನ್ನುವುದು ಫುಟ್‌ಬಾಲ್ ವಲಯದಿಂದ ಕೇಳಿ ಬರುತ್ತಿರುವ ದೂರು. ಕಳೆದ 25 ವರ್ಷದಿಂದ ಇದಕ್ಕೆ ಸುಣ್ಣಬಣ್ಣವೇ ಹೊಡೆಯದೆ ಕ್ರೀಡಾಂಗಣ ಸೊರಗುತ್ತಿದೆ ಎನ್ನಲಾಗಿದೆ.
41 ವರ್ಷದ ಹಿಂದೆ ಕೆರೆಯಾಗಿದ್ದ ಮೈದಾನ
ಸದ್ಯ ಮೆಗ್ರಾಥ್ ರಸ್ತೆಯಲ್ಲಿರುವ ಫುಟ್‌ಬಾಲ್ ಕ್ರೀಡಾಂಗಣ 41 ವರ್ಷದ ಹಿಂದೆ ನಿರ್ಮಾಣವಾಗಿದೆ. 1971ರಲ್ಲಿ ಈ ಕ್ರೀಡಾಂಗಣ ನಿರ್ಮಾಣ ಮಾಡಲಾಗಿತ್ತಾದರೂ ಕ್ರೀಡಾಂಗಣವನ್ನು ದೊಡ್ಡ ಮಟ್ಟದಲ್ಲಿ ನಿರ್ಮಿಸಿದ್ದು 1976ರಲ್ಲಿ. 1970ರಲ್ಲಿ ಈಗ ಕ್ರೀಡಾಂಗಣ ನಿರ್ಮಾಣವಾಗಿರುವ ಜಾಗದಲ್ಲಿ ದೊಡ್ಡ ಕೆರೆ ಇತ್ತು. ಪಕ್ಕದಲ್ಲಿದ್ದ ಚರಂಡಿ ನೀರು ಕೂಡ ಕೆರೆ ನೀರಿಗೆ ಸೇರಿಕೊಂಡಿದ್ದರಿಂದ ದುರ್ನಾತ ಹೆಚ್ಚಾಗಿತ್ತು. ಇದಾದ ಬಳಿಕ ಸ್ಥಳೀಯ ಕೆಲ ಯುವಕರ ತಂಡ ಆಗಿನ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿ ನೀರನ್ನು ತೆಗೆದು ಫುಟ್‌ಬಾಲ್ ಕ್ರೀಡಾಂಗಣ ನಿರ್ಮಾಣ ಮಾಡುವಂತೆ ಮನವಿ ಮಾಡಿದ್ದರು. ಇದಕ್ಕೆ ಸರ್ಕಾರ ಸಮ್ಮತಿ ಸೂಚಿಸಿ ಫುಟ್‌ಬಾಲ್ ಆಟಗಾರರಿಗಾಗಿ ಕ್ರೀಡಾಂಗಣ ನಿರ್ಮಿಸಲು ಅವಕಾಶ ನೀಡಿತ್ತು. ಬಳಿಕ ಬೆಂಗಳೂರು ಫುಟ್‌ಬಾಲ್ ಸಂಸ್ಥೆ ಅಲ್ಲಿ ತಲೆ ಎತ್ತಿತ್ತು.
ಕ್ರೀಡಾಂಗಣ ನಿರ್ಮಾಣ ವೇಳೆ ಅವ್ಯವಹಾರ?
1975-76ರಲ್ಲಿ ಕ್ರೀಡಾಂಗಣದ ಗ್ಯಾಲರಿ ಕಟ್ಟುವ ಸಮಯ. ಅಂದಿನ ಕಾಲಕ್ಕೆ ಸುಮಾರು 80 ಲಕ್ಷ ರೂ. ಖರ್ಚಾಗಿದೆ. ರಾಜ್ಯ ಫುಟ್ಬಾಲ್ ಸಂಸ್ಥೆಯ ಕೆಲ ಅಧಿಕಾರಿಗಳು ದೊಡ್ಡ ಮಟ್ಟದಲ್ಲಿ ಹಣವನ್ನು ನುಂಗಿದ್ದಾರೆಂದು ಎಂದು ರಾಜ್ಯ ಫುಟ್ಬಾಲ್ ಸಂಸ್ಥೆಯ ಹೆಸರು ಹೇಳಲಿಚ್ಛಿಸದ ವ್ಯಕ್ತಿಯೊಬ್ಬರು ಹೇಳಿದ್ದಾರೆ. ಅವರು ಹೇಳಿದಿಷ್ಟು: ಅಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣವನ್ನು ಕೇವಲ 35 ಲಕ್ಷ ರೂ.ಗಳಿಗೆ ನಿರ್ಮಾಣ ಮಾಡಲಾಗಿತ್ತು. ಆದರೆ ಈ ಸಣ್ಣ ಫುಟ್‌ಬಾಲ್ ಕ್ರೀಡಾಂಗಣಕ್ಕೆ ಅಂದು 80 ಲಕ್ಷ ರೂ. ಖರ್ಚಾಗಿದೆ. ಇಲ್ಲಿ ಹಣದ ದುರುಪಯೋಗ ವ್ಯಾಪಕವಾಗಿ ನಡೆದಿದೆ ಎಂದು ಅವರು ಆರೋಪಿಸಿದ್ದಾರೆ.
ಕಂಠೀರವಕ್ಕಾಗಿ ಅಥ್ಲೀಟ್ಸ್, ಫುಟ್ಬಾಲಿಗರ ನಡುವೆ ಕಿತ್ತಾಟ
ಭಾರತದಲ್ಲಿ ಈ ವರ್ಷಾಂತ್ಯಕ್ಕೆ ನಡೆಯುವ ಕಿರಿಯರ ವಿಶ್ವಕಪ್ ಹಿನ್ನೆಲೆಯಲ್ಲಿ ಈ ಮೈದಾನವನ್ನು ಪುನರ್ನಿರ್ಮಾಣ ಮಾಡಲು ಡಿ.5, 2013ರಲ್ಲಿ ಫಿಫಾ ಶಿಫಾರಸು ಮಾಡಿತ್ತು. ಆಗ ಮೈದಾನವನ್ನು ವಿಶ್ವದರ್ಜೆಗೇರಿಸಲು ಯತ್ನ ಶುರುವಾಗಿತ್ತು. ಇದಾದ ಬಳಿಕ ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಹಿರಿಯರ ವಿಭಾಗದ ಪಂದ್ಯಗಳು, ಐ ಲೀಗ್ ಪಂದ್ಯಗಳು ಆಯೋಜನೆಗೊಂಡಿಲ್ಲ.
ಈ ವೇಳೆ ಜಿಂದಾಲ್ ತನ್ನ ಒಡೆತನದಲ್ಲಿರುವ ಬೆಂಗಳೂರು ಎಫ್ಸಿ ಪಂದ್ಯಗಳನ್ನು ಸರ್ಕಾರದ ಅನುಮೋದನೆ ಪಡೆದು ಕಂಠೀರವ ಕ್ರೀಡಾಂಗಣಕ್ಕೆ ವರ್ಗಾಯಿಸಿತು. ಇದರಿಂದ ನಮ್ಮ ಅಭ್ಯಾಸಕ್ಕೆ ತೊಂದರೆಯಾಗುತ್ತಿದೆ ಎಂದು ಅಥ್ಲೀಟ್‌ಗಳು ವ್ಯಾಪಕ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ನಡುವೆಯೂ ಇಲಾಖೆ ಫುಟ್‌ಬಾಲ್‌ಗೆ ಅನುಮತಿ ನೀಡಿತು. ಸದ್ಯ ಒಪ್ಪಂದ ಅವಧಿ ಮುಗಿದರೂ ಜಿಂದಾಲ್ ಪಂದ್ಯ ನಡೆಸಲು ನಿರ್ಧರಿಸಿದೆ ಎನ್ನುವ ದೂರುಗಳು ಕೇಳಿ ಬಂದಿವೆ. ಇದಕ್ಕೆ ಅಥ್ಲೀಟ್‌ಗಳಿಂದ ಪ್ರಬಲ ವಿರೋಧ ವ್ಯಕ್ತವಾಗಿದೆ. ಈ ಬಗ್ಗೆ ಜೂನ್ ತಿಂಗಳಲ್ಲಿ ಉದಯವಾಣಿ ವರದಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಇನ್ನೂ ವಿಶ್ವದರ್ಜೆಗೇರಿಲ್ಲ ಫುಟ್‌ಬಾಲ್ ಕ್ರೀಡಾಂಗಣ: ಬೆಂಗಳೂರು ಫುಟ್ಬಾಲ್ ಕ್ರೀಡಾಂಗಣವನ್ನು ಸಂಪೂರ್ಣ ಒಡೆದು ಹೊಸ ಕ್ರೀಡಾಂಗಣ ಕಟ್ಟಲು ಟೆಂಡರ್ ಕರೆಯಲಾಗಿದೆ. ಆದರೆ ರಾಜ್ಯ ಸರ್ಕಾರ ಇದಕ್ಕೆ ಇನ್ನೂ ಮನಸ್ಸು ಮಾಡಿಲ್ಲ. ಹೀಗಾಗಿ ಕಾಮಗಾರಿ ಇನ್ನೂ ಆರಂಭವಾಗಿಲ್ಲ. ಇದರಿಂದಾಗಿ ಫುಟ್‌ಬಾಲ್ ಆಟಗಾರರು, ಕೋಚ್‌ಗಳು ಈಗ ಭಾರೀ ತೊಂದರೆಗೆ ಸಿಲುಕಿದ್ದಾರೆ.
– ಹೇಮಂತ್ ಸಂಪಾಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
C.T. Ravi ಅವರನ್ನು ತತ್ ಕ್ಷಣ ಬಿಡುಗಡೆ ಮಾಡಿ: ಹೈಕೋರ್ಟ್ ಆದೇಶ
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
Mandya: ಹಲವು ಪವಾಡಗಳ ಕ್ಷೇತ್ರ ಶ್ರೀಕಾಲಭೈರವೇಶ್ವರ; ಚಿಕ್ಕರಸಿಕೆರೆ ನಡೆದಾಡುವ ದೈವ
NIA; ಪ್ರವೀಣ್ ನೆಟ್ಟಾರು ಹ*ತ್ಯೆ ಪ್ರಕರಣದ ಆರೋಪಿ ವಿಮಾನ ನಿಲ್ದಾಣದಲ್ಲೇ ಬಂಧನ
Mandya: ಮನಸೂರೆಗೊಳ್ಳುವ ಶ್ರೀ ಆತ್ಮಲಿಂಗೇಶ್ವ ರ-ಧಾರ್ಮಿಕ ಚರ್ಚೆ, ಸಂವಾದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.