ಮತ್ತೆ ಪ್ರತ್ಯೇಕ ಧ್ವಜದ ಚರ್ಚೆ: ತಜ್ಞರ ಸಲಹೆ ಪಡೆದುಕೊಳ್ಳಿ
Team Udayavani, Jul 19, 2017, 7:46 AM IST
ಪ್ರತ್ಯೇಕ ಧ್ವಜದ ವಿಷಯದಲ್ಲಿ ಮುಂದಿನ ಹೆಜ್ಜೆ ಇಡುವುದಕ್ಕೂ ಮುನ್ನ ಸರ್ಕಾರ ಕಾನೂನು ತಜ್ಞರ ಸಲಹೆ ಪಡೆಯುವುದು ಒಳಿತು. ಇನ್ನು, ಈ ವಿಷಯ ರಾಜಕೀಯ ರಂಗು ಪಡೆದುಕೊಳ್ಳದಂತೆ ಎಚ್ಚರಿಕೆ ವಹಿಸಬೇಕಾದ ಜವಾಬ್ದಾರಿಯೂ ಸರ್ಕಾರದ ಮೇಲಿದೆ.
ಕರ್ನಾಟಕಕ್ಕೆ ಪ್ರತ್ಯೇಕವಾದ ಧ್ವಜ ಹೊಂದುವ ಚರ್ಚೆ ಮರಳಿ ಜೀವ ಪಡೆದುಕೊಂಡಿದೆ. ಸರಕಾರ ಧ್ವಜ ವಿನ್ಯಾಸಗೊಳಿಸಲು ಮತ್ತು ಪ್ರತ್ಯೇಕ ಧ್ವಜ ಹೊಂದುವ ವಿಚಾರದ ಸಾಂವಿಧಾನಿಕ ಮತ್ತು ಕಾನೂನು ಆಯಾಮಗಳನ್ನು ಅಧ್ಯಯನ ನಡೆಸುವುದಕ್ಕಾಗಿ ಒಂಬತ್ತು ಮಂದಿಯಿರುವ ಸಮಿತಿಯೊಂದನ್ನು ರಚಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಪ್ರತ್ಯೇಕ ಧ್ವಜ ಬೇಕು ಎಂದು ವಾದಿಸುತ್ತಿರುವುದರಿಂದ ಈ ವಿಚಾರವೀಗ ರಾಜಕೀಯ ಆಯಾಮವನ್ನೂ ಪಡೆದುಕೊಂಡಿದೆ. ರಾಜ್ಯಗಳು ಪ್ರತ್ಯೇಕ ಧ್ವಜ ಹೊಂದುವುದನ್ನು ಸಂವಿಧಾನ ನಿರ್ಬಂಧಿಸಿಲ್ಲ. ಹೀಗಾಗಿ ಕರ್ನಾಟಕ ತನ್ನದೇ ಆದ ಧ್ವಜವನ್ನು ಹೊಂದುವುದು ತಪ್ಪಾಗುವುದಿಲ್ಲ ಎಂದು ಮುಖ್ಯಮಂತ್ರಿ ಪ್ರತಿಪಾದಿಸುತ್ತಿದ್ದಾರೆ. ಒಂದು ವೇಳೆ ಅವರ ವಾದವೇ ಗೆದ್ದು, ಕರ್ನಾಟಕ ಪ್ರತ್ಯೇಕವಾದ ಧ್ವಜವನ್ನು ಹೊಂದಿದರೆ ಪ್ರತ್ಯೇಕ ಧ್ವಜ ಹೊಂದಿದ ಎರಡನೇ ರಾಜ್ಯ ಎಂಬ ಕೀರ್ತಿ ಸಿಗುತ್ತದೆ. ಪ್ರಸ್ತುತ ಜಮ್ಮು-ಕಾಶ್ಮೀರ ಮಾತ್ರ ಪ್ರತ್ಯೇಕವಾದ ಧ್ವಜವನ್ನು ಹೊಂದಿದೆ. ಇದು ಆ ರಾಜ್ಯಕ್ಕೆ ಸಂವಿಧಾನದ 370ನೇ ವಿಧಿಯಡಿ ಸಿಕ್ಕಿರುವ ವಿಶೇಷ ಸ್ಥಾನಮಾನದ ಕೊಡುಗೆಯ ಅಂಗ.
ಕರ್ನಾಟಕಕ್ಕೆ ಪ್ರತ್ಯೇಕ ಧ್ವಜ ಬೇಕೆಂಬ ವಿಚಾರ 2011ರಲ್ಲೊಮ್ಮೆ ವಿಧಾನಸಭೆ ಯಲ್ಲಿ ಪ್ರಸ್ತಾವವಾಗಿತ್ತು. ಬಿಜೆಪಿ ಶಾಸಕ ಎಸ್.ಆರ್. ವಿಶ್ವನಾಥ್ ರಾಜ್ಯಕ್ಕೆ ಪ್ರತ್ಯೇಕ ಧ್ವಜ ರೂಪಿಸಬೇಕೆಂದು ಬೇಡಿಕೆ ಮಂಡಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಅಂದಿನ ಕನ್ನಡ ಮತ್ತು ಸಂಸ್ಕೃತಿ ಸಚಿವ ಗೋವಿಂದ ಕಾರಜೋಳ, ದೇಶದ ರಾಜಕೀಯ ಒಗ್ಗಟ್ಟಿನ ಜತೆಗೆ ಸಾಂಸ್ಕೃತಿಕ ಮತ್ತು ಸಾಮಾಜಿಕ ಒಗ್ಗಟ್ಟನ್ನು ತ್ರಿವರ್ಣ ಧ್ವಜ ಪ್ರತಿನಿಧಿಸುತ್ತದೆ. ಇನ್ನೊಂದು ಧ್ವಜದ ಅಗತ್ಯವಿಲ್ಲ. ಸ್ವಾತಂತ್ರ್ಯ ದಿನಾಚ ರಣೆ, ಗಣರಾಜ್ಯೋತ್ಸವ ಸೇರಿದಂತೆ ಎಲ್ಲ ಪ್ರಮುಖ ದಿನಗಳಲ್ಲಿ ತ್ರಿವರ್ಣ ಧ್ವಜ ಹಾರಿಸುವ ಹಕ್ಕು ದೇಶದ ಜನರಿಗಿದೆ ಎಂದಿದ್ದರು. ಅನಂತರ ಡಿ. ವಿ. ಸದಾನಂದ ಗೌಡ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಈ ವಿಚಾರ ಹೈಕೋರ್ಟ್ ಮೆಟ್ಟಿಲೇರಿದಾಗಲೂ ಪ್ರತ್ಯೇಕ ಧ್ವಜ ಹೊಂದುವ ಬೇಡಿಕೆಯನ್ನು ಸ್ಪಷ್ಟವಾಗಿ ನಿರಾಕರಿಸಲಾಯಿತು. ಪ್ರತ್ಯೇಕ ಧ್ವಜ ಹೊಂದುವುದು ಸಂಕುಚಿತ ಪ್ರಾದೇಶಿಕ ಮನೋಭಾವ ಬೆಳೆಯಲು ಕಾರಣ
ವಾಗಬಹುದು. ಅಲ್ಲದೆ ಇದು ದೇಶದ ಏಕತೆ ಮತ್ತು ಸಾರ್ವಭೌಮತ್ವಕ್ಕೆ ವಿರುದ್ಧವಾದ ನಡೆ ಎಂದು ಅಂದಿನ ಸರಕಾರ ನ್ಯಾಯಾಲಯಕ್ಕೆ ತಿಳಿಸಿದೆ. ಸುಮಾರು ನಾಲ್ಕು ದಶಕಗಳಿಂದ ಹಳದಿ ಮತ್ತು ಕೇಸರಿ ಬಣ್ಣದ ಧ್ವಜವೇ ಕನ್ನಡ ನಾಡಿನ ಧ್ವಜ ಎಂದು ಬಳಕೆಯಾಗುತ್ತಿದೆ. ಇದಕ್ಕೆ ಅಧಿಕೃತ ಮಾನ್ಯತೆ ಇಲ್ಲ. ಆದರೆ ಕನ್ನಡ ನಾಡು ಮತ್ತು ನುಡಿಯ ಹೋರಾಟಗಳಲ್ಲಿ ಈ ಧ್ವಜವೇ ಹಾರುತ್ತಿರುವುದರಿಂದ ಈ ಧ್ವಜವೇ ಕನ್ನಡ ನಾಡಿನ ಧ್ವಜವೆಂಬ ಭಾವನೆ ಕನ್ನಡಿಗರ ಮನಸ್ಸಿನಲ್ಲಿ ಬಲವಾಗಿ ಅಚ್ಚೊತ್ತಿದೆ.
ಪ್ರತ್ಯೇಕ ಧ್ವಜಕ್ಕೆ ಸಂವಿಧಾನದಲ್ಲಿ ಅವಕಾಶವಿಲ್ಲ ಎಂದು ವಿಪಕ್ಷಗಳ ನಾಯಕರು ಹೇಳುತ್ತಿದ್ದಾರೆ. ಆದರೆ ರಾಜ್ಯಗಳಿಗೆ ತಮ್ಮದೇ ಆದ ಧ್ವಜವನ್ನು ಹೊಂದುವ ಅವಕಾಶವಿದೆ ಎಂದು ಸುಪ್ರೀಂ ಕೋರ್ಟ್ 1994ರಲ್ಲೇ ಹೇಳಿದೆ. ಆದಾಗ್ಯೂ ಈ ವಿಷಯದಲ್ಲಿ ರಾಜ್ಯಗಳು ಪಾಲಿಸಲೇಬೇಕಾದ ನಿರ್ದಿಷ್ಟ ಸೂಚನೆಗಳನ್ನು ಅದು ಮುಂದಿಟ್ಟಿದೆೆ. ಹೀಗಾಗಿ ಈ ವಿಷಯದಲ್ಲಿ ಮುಂದಿನ ಹೆಜ್ಜೆ ಇಡುವುದಕ್ಕೂ ಮುನ್ನ ಸರ್ಕಾರ ಕಾನೂನು ತಜ್ಞರ ಸಲಹೆ ಪಡೆಯುವುದು ಒಳಿತು. ಇನ್ನು, ಈ ವಿಷಯ ರಾಜಕೀಯ ರಂಗು ಪಡೆದುಕೊಳ್ಳದಂತೆ ಎಚ್ಚರಿಕೆ ವಹಿಸಬೇಕಾದ ಜವಾಬ್ದಾರಿಯೂ ಸರಕಾರದ ಮೇಲಿದೆ. ಕನ್ನಡದ ಹಿರಿಮೆಗೆ ರಾಷ್ಟ್ರೀಯ ಮಟ್ಟದಲ್ಲಿ ಒಂದಿಷ್ಟೂ ಚ್ಯುತಿಯಾಗದಂತೆ ಈ ವಿಚಾರವನ್ನು ಸಾಮರಸ್ಯದಿಂದ ಬಗೆಹರಿಸಿಕೊಳ್ಳಬೇಕಿರುವುದು ಸರಕಾರದ ಕರ್ತವ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.