ನಮ್ಮದೇ ಧ್ವಜ ಯಾಕಿರಬಾರದು?


Team Udayavani, Jul 20, 2017, 8:36 AM IST

20-ANKAKA-2.gif

ಕರ್ನಾಟಕ ರಾಜ್ಯಕ್ಕೆ ಪ್ರತ್ಯೇಕ ನಾಡಧ್ವಜದ ವಿನ್ಯಾಸ ರೂಪಿಸಿ ಕಾನೂನು ಮಾನ್ಯತೆ ನೀಡಬೇಕು, ರಾಜ್ಯದ ಹಾಗೂ ಕನ್ನಡಿಗರ ಮೇಲೆ ಹಿಂದಿ ಹೇರಿಕೆ ತಡೆಗಟ್ಟಬೇಕು. ರಾಜ್ಯದಲ್ಲಿ ಸತತ ಬರ ಇರುವುದರಿಂದ ವಿಶ್ವ ಕನ್ನಡ ಸಮ್ಮೇಳನ ಮಾಡಬೇಕೆ? ಬೇಡವೇ? ಇವಿಷ್ಟು ವಿಚಾರಗಳು ಬಹು ಚರ್ಚೆಯಾಗುತ್ತಿವೆ. ಪ್ರತ್ಯೇಕ ಧ್ವಜದ ವಿಚಾರ ವಿವಾದ ಸ್ವರೂಪ ಪಡೆದಿದ್ದರೆ, ಹಿಂದಿ ಹೇರಿಕೆ ಹೋರಾಟದ ಹಾದಿ ಹಿಡಿದಿದೆ. ವಿಶ್ವ ಕನ್ನಡ ಸಮ್ಮೇಳನ ವರ್ಷಾಂತ್ಯಕ್ಕೆ ನಡೆಸುವುದಾಗಿ ರಾಜ್ಯ ಸರಕಾರ ಘೋಷಣೆ ಮಾಡಿದೆ. ಹೀಗಾಗಿ  ರಾಜ್ಯದಲ್ಲಿ ಕನ್ನಡದ ಸಂವಾದದ ವಾತಾವರಣ ಏರ್ಪಟ್ಟಿದೆ. ಈ ವಿಚಾರಗಳ ಬಗ್ಗೆ ಹಿರಿಯ ಸಾಹಿತಿಗಳು ಹಾಗೂ ಕನ್ನಡಪರ ಹೋರಾಟಗಾರರಾದಪ್ರೊ| ಚಂದ್ರಶೇಖರ ಪಾಟೀಲ ಅವರ ಜತೆ “ನೇರಾ-ನೇರ’ ಮಾತುಕತೆ ನಡೆಸಿದಾಗ.

ಕರ್ನಾಟಕಕ್ಕೆ ಪ್ರತ್ಯೇಕ ಧ್ವಜದ ಅಗತ್ಯವಿದೆಯಾ?
ಯಾಕಿರಬಾರದು? ಕನ್ನಡ ಧ್ವಜದ ಬೇಡಿಕೆ ಇಂದು ನಿನ್ನೆಯದಲ್ಲ, 1967ರಲ್ಲೇ ಆರಂಭಗೊಂಡ ಕನ್ನಡ ಚಳವಳಿ ಸಂದರ್ಭದಲ್ಲಿ ಮ. ರಾಮಮೂರ್ತಿ, ಅ.ನ.ಕೃ, ನಾಡಿಗೇರ ಕೃಷ್ಣರಾಯರು ಧ್ವಜದ ಬೇಡಿಕೆ ಇಟ್ಟಿದ್ದರು. ಕೆಂಪು-ಹಳದಿ ಕನ್ನಡ ಧ್ವಜ ಈಗಾಗಲೇ ಕನ್ನಡಿಗರಲ್ಲಿ ಭಾವನಾತ್ಮಕವಾಗಿ ಇದೆ. ಕನ್ನಡ ಸಾಹಿತ್ಯ ಸಮ್ಮೇಳನ, ರಾಜ್ಯೋತ್ಸವ ಸಂದರ್ಭದಲ್ಲಿ ಕನ್ನಡ ಬಾವುಟ ಬಳಸುತ್ತಿದ್ದೇವೆ. ಶಲ್ಯ ಹಾಕಿ ಗೌರವಿಸುತ್ತೇವೆ. ಅದಕ್ಕೆ ಅವಕಾಶ ಇದ್ದರೆ ಕಾನೂನು ಮಾನ್ಯತೆ ಕೊಡುವುದರಲ್ಲಿ ತಪ್ಪೇನು.

ಪ್ರತ್ಯೇಕ ಧ್ವಜ ವಿಷಯದಲ್ಲಿ ಸಮಿತಿ ರಚಿಸಿದ್ದೇ ತಪ್ಪು ಎಂಬ ವಾದವಿದೆಯಲ್ಲಾ?
ಸಮಿತಿ ರಚನೆ ಯಾಕೆ ವಿರೋಧಿಸಬೇಕು? ಸಮಿತಿ ರಚಿಸಿದ ಮಾತ್ರಕ್ಕೆ ಅದು ಆಗಿಬಿಡುವುದಿಲ್ಲ. ಕಾನೂನಾತ್ಮಕವಾಗಿ, ಸಂವಿಧಾನಾತ್ಮಕವಾಗಿ ಸಾಧಕ-ಬಾಧಕ ಪರಿಶೀಲಿಸಲು ಸಮಿತಿ ರಚಿಸಲಾಗಿದೆ. ಸಮಿತಿ ಎಲ್ಲವನ್ನೂ ಪರಿಶೀಲಿಸಿಯೇ ಶಿಫಾರಸು ನೀಡಲಿದೆ. ಆ ನಂತರ ಸರಕಾರದ ತೀರ್ಮಾನ ಅಥವಾ ಮುಂದಿನದು. ಆದರೆ, ಅದಕ್ಕೆ ಮುಂಚೆ ಬೊಬ್ಬೆ ಹಾಕುವುದು ಯಾಕೆ? ನಾನು ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷನಾಗಿದ್ದಾಗಲೂ ಈ ಬೇಡಿಕೆ ಇತ್ತು. ಒಮ್ಮಿಂದೊಮ್ಮೆಲೇ ಉದ್ಭವವಾಗಿದ್ದಲ್ಲ ಎಂಬುದು ವಿರೋಧ ವ್ಯಕ್ತಪಡಿಸುತ್ತಿರುವವರು ಮನವರಿಕೆ ಮಾಡಿಕೊಳ್ಳಬೇಕು.

ಒಂದೇ ಧ್ವಜ ಒಂದೇ ದೇಶ ಕಲ್ಪನೆಯಡಿ ರಾಷ್ಟ್ರಧ್ವಜ ಅಂತಾರಲ್ಲಾ?
ನಾವೇನೂ ರಾಷ್ಟ್ರಧ್ವಜ ಬೇಡ ಅನ್ನುತ್ತಿಲ್ಲವಲ್ಲ. ರಾಷ್ಟಧ್ವಜವೇ ಮೊದಲು, ಅದಕ್ಕೆ ಮೊದಲ ಆದ್ಯತೆ, ಯಾರ ತಕರಾರೂ ಇಲ್ಲ, ರಾಷ್ಟ್ರಧ್ವಜದ ಕೆಳಗೆ ಕನ್ನಡ ಧ್ವಜ ಯಾಕಿರಬಾರದು? ನಮ್ಮದೇ ಭಾಷೆ, ಸಂಸ್ಕೃತಿ, ನಾಡು, ಸಾವಿರಾರು ವರ್ಷಗಳ ಇತಿಹಾಸ ಪರಂಪರೆ ಇರುವಾಗ ಧ್ವಜ ಯಾಕಿರಬಾರದು?

ಪ್ರತ್ಯೇಕ ಧ್ವಜಕ್ಕೆ ಬೇಡಿಕೆ ಇಡುವುದು ರಾಷ್ಟ್ರದ್ರೋಹಕ್ಕೆ ಸಮಾನ ಎಂಬ ವಾದ ಬಲವಾಗಿ ಕೇಳುತ್ತಿದೆ…
ಇದು ಅತಿರೇಕದ ಪರಮಾವಧಿ. ಸಾಮಾಜಿಕ ಜಾಲತಾಣ ಗಳಲ್ಲಿ ಕೆಲವರು ಎಲ್ಲೆ ಮೀರುತ್ತಾರೆ. ಯಾವುದಕ್ಕೂ ಒಂದು ಮಿತಿ ಇರಬೇಕು. ಒಂದು ರಾಜ್ಯ ಹಾಗೂ ಅಲ್ಲಿನ ಜನರು ತಮಗೆ ಇಂತದ್ದು ಬೇಕು-ಬೇಡ ಎಂದು ಹೇಳುವ ಹಕ್ಕು ಪಡೆದಿರುತ್ತಾರೆ. ನೀವು ಯಾವುದನ್ನೂ ಪ್ರಶ್ನಿಸಲೇಬಾರದು, ಎಲ್ಲವನ್ನೂ ಒಪ್ಪಿಕೊಳ್ಳಬೇಕು ಎಂದರೆ ಹೇಗೆ? ನಾವು ಯಾವ ಕಾಲದಲ್ಲಿದ್ದೇವೆ? ಪ್ರತಿಯೊಂದು ವಿಚಾರ ಚರ್ಚೆಯಾಗಬೇಕು. ಈ ನೆಲದ ಸಂವಿಧಾನ ಮತ್ತು ಕಾನೂನಿಗೆ ಯಾರೂ ದೊಡ್ಡವರಲ್ಲ, ಆದರೆ, ಕನಿಷ್ಠ ಚರ್ಚೆ, ಸಂವಾದ, ಸಮಾಲೋಚನೆ ಆಗೋದರಲ್ಲಿ ತಪ್ಪೇನಿದೆ? 

ಹಾಗಿದ್ದರೆ, ಕನ್ನಡ ಧ್ವಜ ವಿಚಾರ ರಾಜಕೀಯ ಸ್ವರೂಪ ಪಡೆದಿರುವುದು ಏಕೆ?
ಕನ್ನಡದ ವಿಚಾರದಲ್ಲಿ ರಾಜ್ಯದ ಎಲ್ಲ ಪಕ್ಷಗಳು ಒಟ್ಟಾಗಿರಬೇಕಿತ್ತು. ಅದು ನಮ್ಮ ದುರ್ದೈವ. ನೋಡಿ, ಬಿ.ಎಸ್‌. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗಲೇ  ಈ ವಿಚಾರ ಪ್ರಸ್ತಾಪವಾಗಿ, ಡಿ.ವಿ.ಸದಾನಂದಗೌಡರು ಮುಖ್ಯಮಂತ್ರಿಯಾಗಿದ್ದಾಗ ಎಲ್ಲ ಸರ್ಕಾರಿ ಸಮಾರಂಭ, ಕಚೇರಿಗಳಲ್ಲಿ ಕನ್ನಡ ಧ್ವಜ ಹಾರಿಸಬೇಕು ಎಂಬ ಆದೇಶವಾಗಿ ನ್ಯಾಯಾಲಯದ ಅಂಗಳಕ್ಕೆ ಹೋಗಿದ್ದರಿಂದ ಜಗದೀಶ್‌ ಶೆಟ್ಟರ್‌ ಕಾಲದಲ್ಲಿ ಆದೇಶ ವಾಪಸ್‌ ಪಡೆಯಲಾಯಿತು. ಇದೀಗ ಸಿದ್ದರಾಮಯ್ಯ ಸರಕಾರದಲ್ಲಿ ಮತ್ತೆ ಪ್ರಸ್ತಾಪವಾಗುತ್ತಿದೆ.

ಪ್ರತ್ಯೇಕ ಧ್ವಜಕ್ಕೆ ಬಿಜೆಪಿ ವಿರೋಧ ಇದೆಯಲ್ಲಾ?
ಒಂದು ಪಕ್ಷ ಅದರ ಸಿದ್ಧಾಂತ ಇದ್ದೇ ಇರುತ್ತದೆ. ಆದರೆ, ಒಂದು ಸರಕಾರವಾಗಿ ಒಂದು ವಿಚಾರದ ಬಗ್ಗೆ ಬೇಡಿಕೆ ಬಂದಾಗ ಏನು
ಮಾಡಬಹುದೋ ಅದನ್ನು ರಾಜ್ಯ ಸರಕಾರ ಮಾಡಿದೆ.  

ರಾಜ್ಯದಲ್ಲಿ ಹಿಂದಿ ಹೇರಿಕೆ ದೊಡ್ಡ ಮಟ್ಟದ ಸುದ್ದಿಯಾಗಿದೆಯಲ್ಲಾ?
ಹೌದು, ಈ ವಿಚಾರ ಗಂಭೀರವಾದದ್ದು ಸಹ. ನಮ್ಮ ಮೆಟ್ರೋದಲ್ಲಿ ತ್ರಿಭಾಷಾ ಸೂತ್ರ ಎಂದು ಕನ್ನಡ, ಇಂಗ್ಲಿಷ್‌, ಹಿಂದಿ ಬಳಕೆ ಮಾಡಲಾಗುತ್ತಿದೆ. ಕೇಂದ್ರ ಸರಕಾರದ ಆನುದಾನ ಇದೆ. ಹೀಗಾಗಿ, ಬಳಕೆ ಮಾಡುತ್ತೇವೆ ಅಂತಾರೆ. ಆದರೆ, ತಮಿಳುನಾಡು, ಕೇರಳ, ಪಶ್ಚಿಮ ಬಂಗಾಲದಲ್ಲಿ ಮೆಟ್ರೋದಲ್ಲಿ ಹಿಂದಿ ಬಳಸುತ್ತಿಲ್ಲ, ಹೀಗಿದ್ದಾಗ ಕರ್ನಾಟಕದಲ್ಲಿ ಮಾತ್ರ ಯಾಕೆ? ಇಲ್ಲಿ ಕನ್ನಡ ಮತ್ತು ಇಂಗ್ಲಿಷ್‌ ಸಾಕಲ್ಲವೇ.

ರಾಜಧಾನಿ ಬೆಂಗಳೂರಿಗೆ ದೇಶದ ವಿವಿಧೆಡೆಯಿಂದ ಲಕ್ಷಾಂತರ ಜನರು ಬರ್ತಾರೆ, ಬಸ್ಸು, ವಿಮಾನ, ರೈಲು ನಿಲ್ದಾಣಗಳಲ್ಲಿ ಹಿಂದಿ ಇದ್ದರೆ ಅನುಕೂಲ ಎಂಬ ಮಾತಿದೆಯಲ್ಲಾ?
ಬೆಂಗಳೂರಿಗೆ ನೆರೆಯ ತಮಿಳುನಾಡು, ಕೇರಳ, ಆಂಧ್ರ, ಮಹಾರಾಷ್ಟ್ರದಿಂದಲೇ ಸಾವಿರಾರು ಜನ ಬರ್ತಾರೆ. ಹಾಗಾದರೆ ತೆಲುಗು, ತಮಿಳು, ಮಲಯಾಳಂ, ಮರಾಠಿ ಸಹ ಹಾಕಬೇಕು ಅಂದರೆ ಹೇಗೆ? ಬೇರೆ ಬೇರೆ ಕಾರಣಕ್ಕೆ ಭಾಷಾ ನೀತಿ ಮಾಡಲು ಬರುವುದಿಲ್ಲ. ಹಿಂದಿ ರಾಷ್ಟ್ರಭಾಷೆ ಎಂಬ ತಪ್ಪು ಕಲ್ಪನೆ ಇದೆ. ದೇಶದ ನಾನಾ ಭಾಷೆಗಳಂತೆ ಅದೂ ಒಂದು ಭಾಷೆಯಷ್ಟೇ. ಆ ರೀತಿ ಹೇಳುವುದಾದರೆ ಎಲ್ಲ ಭಾಷೆಗಳಿಗೂ ಸಂವಿಧಾನದ ಮಾನ್ಯತೆ ಇದೆ.

ಹಿಂದಿ ವಿಚಾರದಲ್ಲಿ ಕೇಂದ್ರ ಸರಕಾರ ಒತ್ತಡ ಹಾಕುತ್ತಿದೆ ಎಂದೆನಿಸುತ್ತಾ?
ಹೌದು, ಅನುದಾನ ಕೊಟ್ಟ ಮಾತ್ರಕ್ಕೆ ಹಿಂದಿ ಬಳಸಲೇಬೇಕು ಎಂದಾದರೆ ಕರ್ನಾಟಕ ಒಕ್ಕೂಟ ವ್ಯವಸ್ಥೆಯಲ್ಲಿರುವುದರಿಂದ ಹಲವಾರು ಯೋಜನೆಗಳು ಕೇಂದ್ರಪುರಸ್ಕೃತ. ಹಾಗಾದರೆ ಎಲ್ಲ ಯೋಜನೆಗಳ ಜಾರಿಯಲ್ಲೂ ಹಿಂದಿ ಬಳಸಬೇಕಾ? ನೋಡಿ ಇದು ಸದ್ಯಕ್ಕೆ ಮೆಟ್ರೋದಲ್ಲಿ ಬಳಕೆಗೆ ಸೀಮಿತವಾಗಿ ರಬಹುದು.ಆದರೆ, ಮುಂದೆ ಬೇರೆ ಬೇರೆ ಆಯಾಮಕ್ಕೆ ತಿರುಗುತ್ತದೆ. ಅಂತಿಮವಾಗಿ ಅದು ಕನ್ನಡದ ಬೆಳವಣಿಗೆಗೆ ಕಡಿವಾಣ ಹಾಕುವ ಹಂತಕ್ಕೆ ತಲುಪುತ್ತದೆ. ಉದ್ಯೋಗದ ವಿಚಾರಕ್ಕೂ ವ್ಯಾಪಿಸುತ್ತದೆ. ಹೀಗಾಗಿ, ಎಚ್ಚರಿಕೆ ಅಗತ್ಯ.  

ಕನ್ನಡದ ಧ್ವಜ ಅಥವಾ ಹಿಂದಿ ಹೇರಿಕೆ ವಿಚಾರದಲ್ಲಿ ಕೇಂದ್ರ ಸರಕಾರ ಕರ್ನಾಟಕದ ವಿಚಾರದಲ್ಲಿ ಅನುಸರಿಸುತ್ತಿರುವ ಧೋರಣೆ ಸರಿ ಇದೆಯಾ?
ತಾರತಮ್ಯ ರಹಿತ ಧೋರಣೆ ಕೇಂದ್ರ ಸರಕಾರದ್ದು ಇರಬೇಕು ಎಂಬುದು ನಮ್ಮೆಲ್ಲರ ಬಯಕೆ ಹಾಗೂ ನಿರೀಕ್ಷೆ. ಯಾವುದೇ ವಿಚಾರ ಹೇರಿಕೆಯಾಗಬಾರದು, ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲ ರಾಜ್ಯಗಳನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು. ಮನೆಯ ಯಜಮಾನನ ಸ್ಥಾನದಲ್ಲಿ ಕೇಂದ್ರ ಸರಕಾರ ಇದೆ. ಯಜಮಾನನ ಬಗ್ಗೆ ಬೇಸರವಾದರೆ ಮಲತಾಯಿ ಧೋರಣೆ ತೋರಿದರೆ ಸದಸ್ಯರು ಮನೆ ಬಿಟ್ಟು ಹೋಗ್ತೀನೆ ಎಂದು ಹೆದರಿಸಬಹುದು. ಅಂದ ಮಾತ್ರಕ್ಕೆ ಹೋಗಿ ಬಿಡುವುದಿಲ್ಲ. ಆದರೆ, ಅಂತಹ ಪರಿಸ್ಥಿತಿಗೆ ತರಬಾರದು. ತಾರತಮ್ಯ ಎಂದೆನಿಸಿದಾಗಲೇ ಪ್ರತ್ಯೇಕ ರಾಜ್ಯದ ಕೂಗು, ಧ್ವನಿಗೆ ಕಾರಣವಾಗುತ್ತದೆ.

ಹಾಗಾದರೆ, ಇಲ್ಲೂ ಪ್ರತ್ಯೇಕ ರಾಜ್ಯದ ಧ್ವನಿ ಎತ್ತಬೇಕು ಅಂತೀರಾ?
ಇಲ್ಲ. ಆ ಮಾತು ಬೇಡವೇ ಬೇಡ. ನಮ್ಮ ನಾಡಗೀತೆಯಲ್ಲೇ “ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ’ ಅಂತಿದೆ. ನಾವು ಒಕ್ಕೂಟ ವ್ಯವಸ್ಥೆಯಲ್ಲಿದ್ದೇವೆ, ಒಕ್ಕೂಟ ವ್ಯವಸ್ಥೆ ಗೌರವಿಸೋಣ. ನಮಗೆ ಅನ್ಯಾಯ ಆದರೆ ಹೋರಾಟ ಮಾಡಿ ನಮ್ಮ ಹಕ್ಕು ಪಡೆಯೋಣ. ಯಾವುದೇ ಕಾರಣಕ್ಕೂ ಪ್ರತ್ಯೇಕ ರಾಜ್ಯದ ಕೂಗು ಸಲ್ಲ. ಆದರೆ, ಕೇಂದ್ರ ಸರಕಾರ ಕರ್ನಾಟಕದ ಸಮಾಧಾನ, ತಾಳ್ಮೆಯನ್ನು ದೌರ್ಬಲ್ಯ ಎಂದುಕೊಳ್ಳಬಾರದಷ್ಟೆ.

ಕರ್ನಾಟಕ ಸರಕಾರ ಕನ್ನಡದ ವಿಚಾರದಲ್ಲಿ ಸರಿಯಾದ ಹೆಜ್ಜೆ ಇಡುತ್ತಿದೆ ಎಂದೆನಿಸುತ್ತಾ?
ಸರಕಾರದ ಹೊರಗೆ ನಾವು ಮಾತನಾಡುವುದು ಬೇರೆ. ಸರಕಾರ ನಡೆಸುವವರಿಗೆ ಅಲ್ಲಿನ ಸಮಸ್ಯೆ , ಪರಿಸ್ಥಿತಿ ಗೊತ್ತಿರುತ್ತದೆ. ಆದರೆ, ಈಗಿನ ಸರಕಾರ ಆದಷ್ಟೂ ತನ್ನ ಇತಿ ಮಿತಿಯಲ್ಲಿ ಕನ್ನಡ, ನಾಡು-ನುಡಿ, ಸಂಸ್ಕೃತಿ ರಕ್ಷಣೆಗೆ ಕಟಿಬದ್ಧವಾಗಿದೆ. ಆದರೆ, ಕೆಲವೊಂದು ವಿಚಾರಗಳಲ್ಲಿ ದಿಟ್ಟ ನಿಲುವು ತೆಗೆದುಕೊಳ್ಳಬೇಕಿತ್ತು.

ದಿಟ್ಟ ನಿಲುವು ಎಂದರೆ ಏನು?
ಉದಾಹರಣೆಗೆ ಸಾವಿರಾರು ಕನ್ನಡ ಶಾಲೆ ಮುಚ್ಚಲಾಗುತ್ತಿದೆ. ಇದು ನೋವಿನ ಸಂಗತಿಯಲ್ಲವೇ? ಖಾಸಗಿ ಶಾಲೆಗಳಿಗೆ ಅನುಮತಿ ನೀಡಬೇಕಾದರೆ ಪಾಲಿಸಬೇಕಾದ ನಿಯಮ ಪಾಲನೆಯಾಗುತ್ತಿದೆಯೇ? ನಮ್ಮ ಸರಕಾರವೇ ಕನ್ನಡ ಶಾಲೆಗಳ ಬಗ್ಗೆ ಉದಾಸೀನ ಧೋರಣೆ ತಾಳಬಾರದು. ದುರಂತ ಎಂದರೆ ನಮ್ಮ ಮಂತ್ರಿ, ಶಾಸಕರೇ ಖಾಸಗಿ ಶಾಲೆಗಳ ಮಾಲೀಕರು. ಇಡೀ ಶಿಕ್ಷಣ ವ್ಯವಸ್ಥೆ ಖಾಸಗಿಯವರ ಕಪಿಮುಷ್ಠಿಯಲ್ಲಿದೆ. ಹೀಗಾದರೆ ಹೇಗೆ?

ರಾಜ್ಯ ಸರಕಾರ ಏನು ಮಾಡಬಹುದಿತ್ತು?
ಸರ್ಕಾರಿ ಶಾಲೆಗಳ ಗುಣಮಟ್ಟ ಸುಧಾರಣೆಗೆ ಹೆಚ್ಚು ಒತ್ತು ನೀಡಿ ಶಿಕ್ಷಕರ ಹುದ್ದೆ ಭರ್ತಿ ಸೇರಿ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಂತಹ ಸೌಲಭ್ಯ ಕಲ್ಪಿಸಿ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದವರಿಗೆ ಎಲ್ಲ ವಲಯದಲ್ಲೂ ಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕಿತ್ತು.  

ವಿಶ್ವ ಕನ್ನಡ ಸಮ್ಮೇಳನಕ್ಕೆ ನೀವು ವಿರೋಧ ವ್ಯಕ್ತಪಡಿಸಿದ್ರಂತೆ?
ವಿರೋಧವಲ್ಲ. ಅಭಿಪ್ರಾಯ ತಿಳಿಸಿದೆ ಅಷ್ಟೆ. ವಿರೋಧ ಬೇರೆ, ವೈಯಕ್ತಿಕ ಅಭಿಪ್ರಾಯ-ಸಲಹೆ ಕೊಡುವುದು ಬೇರೆ. ಊರು, ಓಣಿ ನೆಮ್ಮದಿ ಇಲ್ಲದಿದ್ದಾಗ ಊರ ಹಬ್ಬ ಮಾಡೋದು ಸರಿಯಾ? ಬರ ಇದೆ, ಹಿಂದಿ ಹೇರಿಕೆ ಆತಂಕ ಎದುರಾಗಿದೆ, ಮಹದಾಯಿ, ಕಾವೇರಿ ಸೇರಿ ನಾನಾ ಸಮಸ್ಯೆಗಳಿವೆ. ಮನೆಯಲ್ಲಿ ಶೋಕಾಚರಣೆ ಇದ್ದಾಗ ಉತ್ಸವ ಬೇಕಾ? ಎಂದು ಹೇಳಿದೆ. ಇದಕ್ಕೆ ಕೆಲವರು ಧ್ವನಿಗೂಡಿಸಿದರು ಸಹ. ಆದರೆ, ಅಂತಿಮವಾಗಿ ಸರಕಾರ ವಿಶ್ವ ಕನ್ನಡ ಸಮ್ಮೇಳನ ಆಚರಿಸಲು ತೀರ್ಮಾನ ಮಾಡಿದೆ. ಅದಕ್ಕೆ ನಮ್ಮ ಸಮ್ಮತಿಯೂ ಇದೆ.  

ಕರ್ನಾಟಕದಲ್ಲೇ ಕನ್ನಡ ಉಳಿಸಲು ಹೋರಾಟ ಮಾಡಬೇಕಾ?
ನಾಡು-ನುಡಿ, ನೆಲ-ಜಲ, ಸಂಸ್ಕೃತಿ ರಕ್ಷಣೆ ವಿಚಾರದಲ್ಲಿ ನಿರಂತರ ಹೋರಾಟ ಅನಿವಾರ್ಯ. ಹೋರಾಟ ಎಂದಾ ಕ್ಷಣ ಅದು ಕೇವಲ ಜನಸೇರಿಸಿ ಘೊಷಣೆ ಕೂಗುವುದಲ್ಲ. ವಿಷಯಾಧಾರಿತ ಚರ್ಚೆ, ಸಂವಾದ, ವಿಚಾರ ಗೋಷ್ಠಿಗಳಾ ಗುತ್ತವೆ. ಆ ಮೂಲಕ ಹೋರಾಟದ ಮೂಲ ಉದ್ದೇಶ ಜನಸಾಮಾನ್ಯರಿಗೆ ಮನವರಿಕೆಯಾಗುತ್ತದೆ. ಹೋರಾಟ ಎಂಬುದು ಒಂದು ರೀತಿಯಲ್ಲಿ ಶಿಕ್ಷಣ ಪಡೆಯುವುದೇ. 

ರಾಜ್ಯದಲ್ಲಿ ಆಡಳಿತ ಭಾಷೆ ಕನ್ನಡ ಆಗಿದೆಯಾ?
ಪೂರ್ಣ ಪ್ರಮಾಣದಲ್ಲಿ ಇನ್ನೂ ಆಗಿಲ್ಲ. ಆದರೆ, ಆಗಲೇ ಬೇಕು. ಆ ನಿಟ್ಟಿನಲ್ಲಿ ಸರಕಾರಗಳು ಬದ್ಧತೆ ಪ್ರದರ್ಶಿಸಬೇಕು. ಇದು ಒಂದು-ಎರಡು ದಿನದಲ್ಲಿ ಆಗುವ ಕೆಲಸವಲ್ಲ ಎಂಬುದು ಗೊತ್ತು. ಆದರೆ, ಪ್ರಯತ್ನ ನಿರಂತರ ಇರಬೇಕು. ಸರಕಾರಕ್ಕೆ ಇಚ್ಛಾಶಕ್ತಿ ಮುಖ್ಯ.

ನಮ್ಮತನ ಬಿಟ್ಟುಕೊಡಬಾರದು
ಹಿಂದಿ ಭಾಷೆಯ ಬಗ್ಗೆ ನಮಗೆ ದ್ವೇಷವಿಲ್ಲ. ಆದರೆ ಹಿಂದಿ ಒಂದೇ ರಾಷ್ಟ್ರ ಭಾಷೆಯೂ ಅಲ್ಲ. ಹೀಗಾಗಿ, ಆ ಭಾಷೆಯ ಹೇರಿಕೆಯನ್ನು ಸಹಿಸಲು ಸಾಧ್ಯವಿಲ್ಲ. ನಮ್ಮ ರಾಜ್ಯ ಸರಕಾರವೂ ಈ ವಿಚಾರದಲ್ಲಿ ನಮ್ಮತನ ಬಿಟ್ಟುಕೊಡಬಾರದು. 

ಸಂದರ್ಶನ ಎಸ್‌.ಲಕ್ಷ್ಮೀನಾರಾಯಣ

ಟಾಪ್ ನ್ಯೂಸ್

Pathanamthitta: 44 people arrested in the case of asault of a Dalit girl

Pathanamthitta: ದಲಿತ ಬಾಲಕಿಯ ಮೇಲೆ ದೌರ್ಜನ್ಯ ಪ್ರಕರಣದಲ್ಲಿ 44 ಜನರ ಬಂಧನ

I will welcome anyone from North Karnataka to become the Chief Minister: S.R. Patil

Hubli: ಉತ್ತರ ಕರ್ನಾಟಕದವರು ಮುಖ್ಯಮಂತ್ರಿಯಾದರೆ ಸ್ವಾಗತಿಸುವೆ: ಎಸ್.ಆರ್.ಪಾಟೀಲ

7-tender-coconut

Tender Coconut: ಚಳಿಗಾಲದಲ್ಲಿ ಎಳನೀರು ಕುಡಿಯುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ….

Sagara-Beluru

Congress: ಪಕ್ಷದ ಶಾಸಕರು ಹೈಕಮಾಂಡ್ ಸೂಚನೆ ಪಾಲಿಸುವ ವಿಶ್ವಾಸವಿದೆ: ಬೇಳೂರು ಗೋಪಾಲಕೃಷ್ಣ

Talk of contesting alone: ​​Sharad Pawar pours fuel into the Aghadi rift

M‌VA: ಏಕಾಂಗಿ ಸ್ಪರ್ಧೆ ಮಾತು: ಅಘಾಡಿ ಬಿರುಕು ವದಂತಿಗೆ ಪುಷ್ಟಿ ನೀಡಿದ ಪವಾರ್

Tulu Films: ʼಜೈʼ ಚಿತ್ರೀಕರಣಕ್ಕಾಗಿ ಮಂಗಳೂರಿಗೆ ಬಂದ ಬಾಲಿವುಡ್‌ ನಟ ಸುನೀಲ್‌ ಶೆಟ್ಟಿ

Tulu Films: ʼಜೈʼ ಚಿತ್ರೀಕರಣಕ್ಕಾಗಿ ಮಂಗಳೂರಿಗೆ ಬಂದ ಬಾಲಿವುಡ್‌ ನಟ ಸುನೀಲ್‌ ಶೆಟ್ಟಿ

Team India: Cannot stay with wife in foreign series: BCCI’s strict rule

Team India: ಪತ್ನಿಯೊಂದಿಗೆ ವಿದೇಶಿ ಸರಣಿಯಲ್ಲಿ ಉಳಿಯುವಂತಿಲ್ಲ: ಬಿಸಿಸಿಐ ಕಠಿಣ ನಿಯಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

EC-Comm-sangreshi1

ಜಿ.ಪಂ.,ತಾ.ಪಂ. ಚುನಾವಣೆ ವಿಳಂಬಕ್ಕೆ ಸರಕಾರವೇ ನೇರ ಹೊಣೆ, ನಾವು ಚುನಾವಣೆಗೆ ಸಿದ್ಧ: ಆಯೋಗ

ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!

ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!

Belagavi: ಅಧಿವೇಶನ ವೇಳೆ 10 ಲಕ್ಷ ಜನರ ಜತೆ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ…

Belagavi:ಅಧಿವೇಶನ ವೇಳೆ 10 ಲಕ್ಷ ಜನರ ಜತೆ ಸುವರ್ಣವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ…

ನಾನೂ ಸೀನಿಯರ್‌ ಲೀಡರ್‌, ರಾಜ್ಯಕ್ಕೆ ದಲಿತ ಸಿಎಂ ಪ್ರಸ್ತಾವ ಬಂದರೆ ಮುಂಚೂಣಿಯಲ್ಲಿರುವೆ

ನಾನೂ ಸೀನಿಯರ್‌ ಲೀಡರ್‌, ರಾಜ್ಯಕ್ಕೆ ದಲಿತ ಸಿಎಂ ಪ್ರಸ್ತಾವ ಬಂದರೆ ಮುಂಚೂಣಿಯಲ್ಲಿರುವೆ

BR-patil

Congress ಸರಕಾರದಲ್ಲಿ ಹಣಕಾಸು ಸಮಸ್ಯೆಯಿಂದ ಶಾಸಕರ ಬೇಡಿಕೆ ಈಡೇರಿಲ್ಲ ಎನ್ನುವುದು ವಾಸ್ತವ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

Pathanamthitta: 44 people arrested in the case of asault of a Dalit girl

Pathanamthitta: ದಲಿತ ಬಾಲಕಿಯ ಮೇಲೆ ದೌರ್ಜನ್ಯ ಪ್ರಕರಣದಲ್ಲಿ 44 ಜನರ ಬಂಧನ

I will welcome anyone from North Karnataka to become the Chief Minister: S.R. Patil

Hubli: ಉತ್ತರ ಕರ್ನಾಟಕದವರು ಮುಖ್ಯಮಂತ್ರಿಯಾದರೆ ಸ್ವಾಗತಿಸುವೆ: ಎಸ್.ಆರ್.ಪಾಟೀಲ

7-tender-coconut

Tender Coconut: ಚಳಿಗಾಲದಲ್ಲಿ ಎಳನೀರು ಕುಡಿಯುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ….

Sagara-Beluru

Congress: ಪಕ್ಷದ ಶಾಸಕರು ಹೈಕಮಾಂಡ್ ಸೂಚನೆ ಪಾಲಿಸುವ ವಿಶ್ವಾಸವಿದೆ: ಬೇಳೂರು ಗೋಪಾಲಕೃಷ್ಣ

Talk of contesting alone: ​​Sharad Pawar pours fuel into the Aghadi rift

M‌VA: ಏಕಾಂಗಿ ಸ್ಪರ್ಧೆ ಮಾತು: ಅಘಾಡಿ ಬಿರುಕು ವದಂತಿಗೆ ಪುಷ್ಟಿ ನೀಡಿದ ಪವಾರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.