ಪಾರ್ಕಿಂಗ್ ಸಮಸ್ಯೆಗೆ ಪರಿಹಾರ ಹುಡುಕುವುದು ಸಾಕು!
Team Udayavani, Jul 22, 2017, 7:07 AM IST
ಬೆಂಗಳೂರಿನಲ್ಲಿ ಮಾತ್ರ ವಾಹನ ನಿಲುಗಡೆ ಸಮಸ್ಯೆ ಎಂದುಕೊಳ್ಳುವುದುಂಟು ನಮ್ಮ ಗ್ರಾ.ಪಂ ಗಳು. ಇಲ್ಲಿಯೂ ಸಮಸ್ಯೆ ಬೇರು ಬಿಟ್ಟಾಗಿದೆ. ಮೊಳಕೆಯೊಡೆದು ಹೆಮ್ಮರವಾಗುವ ಮೊದಲು ಎಚ್ಚೆತ್ತುಕೊಂಡರೆ ಬಚಾವು.
ಮೈಸೂರಿನಲ್ಲಿನ ವಾಹನ ನಿಲುಗಡೆ ಪರಿಸ್ಥಿತಿ ಕುರಿತು ಹಿಂದೊಮ್ಮೆ ಬರೆದಿದ್ದೆ. ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ನಿಲ್ಲಿಸಲು ಪಡುವ ಪಡಿಪಾಟಲು ಹೇಳತೀರದು. ಈ ಪರಿಸ್ಥಿತಿ ಕಾರು ಕೊಂಡವರಿಗಷ್ಟೇ ಎಂದು ಕೊಳ್ಳಬೇಡಿ. ದ್ವಿಚಕ್ರ ವಾಹನಗಳಿಗೂ ಇದೇ ಸ್ಥಿತಿ. ಆದರೆ ದ್ವಿಚಕ್ರ ವಾಹನಗಳನ್ನು ಎಲ್ಲಿ ಬೇಕೆಂದರಲ್ಲಿ ಹೊಂದಿಸಬಹುದು ಎಂಬುದೇ ಸಮಾಧಾನದ ಸಂಗತಿಯಾಗಿ ನಗರಗಳಲ್ಲಿ ತೋರುತ್ತಿರುವುದು ಸುಳ್ಳಲ್ಲ. ಇದೇ ಸಂದರ್ಭದಲ್ಲಿ ವಾಹನ ನಿಲುಗಡೆ ಸಮಸ್ಯೆ ಕೇವಲ ಮಹಾನಗರಗಳಿಗೆ ಎಂದೂ ತಿಳಿದುಕೊಳ್ಳಬೇಕಿಲ್ಲ.
ರಾಜ್ಯದ ಹಲವು ಗ್ರಾ.ಪಂ ಗಳ ವ್ಯಾಪ್ತಿಯಲ್ಲಿ ಈ ಸಮಸ್ಯೆಯಿದೆ. ವಿಚಿತ್ರವೆಂದರೆ ಇಂಥ ಕಡೆಯಲ್ಲೂ ವಾಹನ ನಿಲುಗಡೆ ಸಮಸ್ಯೆ ಬೃಹಾದಾಕಾರವಾಗಿ ಕಾಡುತ್ತಿದೆ. ಎಲ್ಲೆಂದರಲ್ಲಿ ನಿಲ್ಲಿಸುವ ವಾಹನ ಗಳು, ಅದರಿಂದ ಉಂಟಾಗುವ ಟ್ರಾಫಿಕ್ ಜಾಮ್- ಒಟ್ಟೂ ಇಡೀ ಸಂಚಾರ ವ್ಯವಸ್ಥೆಯನ್ನೇ ಹಾಳುಗೆಡವುತ್ತಿದೆ ಈ ವಾಹನ ನಿಲುಗಡೆ. ಇದೇ ಸ್ಥಿತಿ ರಾಜ್ಯದ ಹಲವು ಗ್ರಾ.ಪಂ ಗಳಿಗಿದೆ, ಗ್ರಾಮಗಳಲ್ಲಿದೆ.
ಯಾಕೀ ಸಮಸ್ಯೆ?
ಈ ಸಮಸ್ಯೆಯ ಮೂಲ ಎರಡು ನೆಲೆಗಳಲ್ಲಿದೆ. ಮೊದಲನೆಯದು ವಾಹನ ನಿಲುಗಡೆ ಸಂಬಂಧ ಒಂದು ಸಮಗ್ರವಾದ ನೀತಿ ನಮ್ಮಲ್ಲಿ ಅನ್ವಯವಿಲ್ಲ. ಒಂದೊಂದು ಕಡೆ, ರಾಜ್ಯದ ಲೆಕ್ಕದಲ್ಲೂ ಸಮರ್ಪಕವಾದ ನೀತಿ ಅನುಷ್ಠಾನದಲ್ಲಿಲ್ಲ. ಹಾಗಾಗಿಯೇ ಎಲ್ಲೆಡೆ ಒಂದು ನಿಯಮವಿಲ್ಲ. ಒಂದೊಂದು ಕಡೆ, ಒಂದೊಂದು ರೀತಿ. ಬೆಂಗಳೂರಿನಂಥ ಕಡೆ ಹತ್ತು ವರ್ಷಗಳ ಹಿಂದೆ ಕೆಲವು ಕಡೆ ಪಾವತಿ ಮಾಡಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸುವ ವ್ಯವಸ್ಥೆ ಅಸ್ತಿತ್ವಕ್ಕೆ ಬಂದಿತ್ತು. ಆದರೆ, ಅದೂ ಇಂದಿಗೂ ಸಮಗ್ರ ಪರಿಹಾರವಾಗಿ ಕಾಣು ತ್ತಿಲ್ಲ. ಸುಮಾರು 50 ಕ್ಕೂ ಹೆಚ್ಚು ಕಡೆ ಜಾರಿಗೆ ಬಂದ ಆ ಪದ್ಧತಿ ಇವತ್ತು ಕೆಲವೇ ಕಡೆ ಇವೆ. ಅದರಲ್ಲೂ ಸಂಘಟಿತ ರೀತಿಯಲ್ಲಿಲ್ಲ.
ಇದೇ ಸಂದರ್ಭದಲ್ಲಿ ಬಹು ಮಹಡಿ ಪಾರ್ಕಿಂಗ್ ಸಮುತ್ಛಯ ಒಂದು ಪರಿಹಾರವಾಗಿ ಕಂಡಿತ್ತು. ಬೆಂಗಳೂರು ಮಹಾನಗರ ಪಾಲಿಕೆಯಲ್ಲೂ ಸಾಕಷ್ಟು ಚರ್ಚೆಯಾಗಿ ಕೊನೆಗೂ ಕಾಮಗಾರಿ ಆರಂಭವಾಯಿತು. ಅರ್ಧ ನಡೆದು ನಿಂತಿತು, ಮತ್ತೆ ಪೂರ್ಣ ಗೊಂಡಿತು. ಒಟ್ಟೂ ಹಲವಾರು ವರ್ಷಗಳ ಬಳಿಕ ಜನರ ಬಳಕೆಗೆ ಸಿಗುವಷ್ಟರಲ್ಲಿ ಅಲ್ಲಿ ಲಭ್ಯವಿದ್ದ ಜಾಗದಲ್ಲಿ ನಿಲ್ಲಿಸಬಹುದಾದ ವಾಹನ ಗಳ ಸಂಖ್ಯೆಯ ಸಾವಿರ, ಎರಡು ಸಾವಿರ ಪಟ್ಟು ಹೊಸ ವಾಹನಗಳು ಬೆಂಗಳೂರು ರಸ್ತೆಗೆ ಇಳಿದಿದ್ದವು. ಅಂದರೆ ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತೆ ಎಂಬ ಗಾದೆಯನ್ನೂ ಸುಳ್ಳು ಮಾಡಿತು. ವಾಹನ ನಿಲುಗಡೆಯ ಸಮಸ್ಯೆಯ ಹಿನ್ನಲೆಯಲ್ಲೆ ಉಂಟಾಗು ತ್ತಿದ್ದ ಸುಗಮ ಸಂಚಾರದ ಸಮಸ್ಯೆಗಳನ್ನಿ ನಿವಾರಿಸಲು, ಏಕಮುಖ ಸಂಚಾರ ವ್ಯವಸ್ಥೆ ಜಾರಿಗೆ ಬಂದಿತು. ಅದರಿಂದ ಆದ ಪ್ರಯೋಜನ ಎಷ್ಟು ಎಂಬುದಕ್ಕೆ ಒಮ್ಮೆ ಬೆಂಗಳೂರನ್ನು ನೋಡಿ ಬಂದರೆ ತಿಳಿಯುತ್ತದೆ. ಹೀಗೆ ವಾಹನ ದಟ್ಟಣೆ ಕಡಿಮೆಗೊಳಿಸಲು ಮಾಡುವ ಇಂಥ ಪ್ರಯತ್ನಗಳೆಲ್ಲಾ ಸಮಸ್ಯೆಗೆ ಪರಿಹಾರವೆಂದು ನನಗಂತೂ ತೋರು ವುದಿಲ್ಲ. ಬದಲಾಗಿ ಕೇವಲ ಸಮಸ್ಯೆಯನ್ನು ಮುಂದೂಡುತ್ತಿದ್ದೇವೆ ಎಂದೇ ಅನಿಸುತ್ತದೆ. ನಮ್ಮ ದುರಾದೃಷ್ಟವೋ ಏನೋ, ನಮ್ಮ ಪ್ರತಿ ಸಣ್ಣ ಪ್ರಯತ್ನಗಳಿಂದಲೂ ಈ ಸಮಸ್ಯೆಗಳು ಮತ್ತಷ್ಟು ಕೊಬ್ಬಿ ಭೀಕರ ರೂಪ ತಾಳುತ್ತಿವೆಯೇ ಹೊರತು ಬೇರೇನೂ ಆಗುತ್ತಿಲ್ಲ.
ಯಾಕೆ ನಿರ್ಬಂಧವಿಲ್ಲ?
ಈ ಪ್ರಶ್ನೆಯನ್ನು ನಾವೆ ಕೇಳಿಕೊಳ್ಳಬೇಕಿದೆ. ಅದನ್ನೇ ಸುಸ್ಥಿರತೆ ಎಂದು ಹೇಳುವುದು. ಸುಸ್ಥಿರತೆಯೆಂದರೆ, ಇರುವುದನ್ನೆಲ್ಲಾ ಕಳೆದು
ಕೊಂಡು ಮತ್ತೇನನ್ನೋ ಸಾಧಿಸುವ ಪರಿಕಲ್ಪನೆಯಲ್ಲ. ಅದರ ಬದಲಾಗಿ ಕೈಯಲ್ಲಿರುವುದನ್ನು ಉಳಿಸಿಕೊಂಡೂ, ಮತ್ತೇನನ್ನೋ ಗಳಿಸು ವುದು. ಈ ವ್ಯಾಖ್ಯಾನ ಕೊಂಚ ಬಂಡವಾಳಶಾಹಿಯ ಧೋರಣೆ ಯಂತೆ ತೋರಬಹುದು. ಯಾಕೆಂದೆರೆ, ಬಂಡವಾಳಶಾಹಿ ಆದಷ್ಟು ಖರ್ಚು ಮಾಡದೇ ಲಾಭ ಮಾಡಬೇಕೆಂದು ಬಯಸುತ್ತಾನೆಂಬ ವ್ಯಾಖ್ಯಾನ ಸಮಾಜದಲ್ಲಿದೆ. ಆದರೆ ಸುಸ್ಥಿರತೆಯ ಕಲ್ಪನೆ ಆ ಬಗೆಯದ್ದಲ್ಲ. ವರ್ತಮಾನದ ಮೇಲೆ ಕಾಳಜಿಯನ್ನಿಟ್ಟುಕೊಂಡೇ, ನಷ್ಟವನ್ನು ಮಾಡಿಕೊಳ್ಳದೇ ಭವಿಷ್ಯವನ್ನು ಸೃಷ್ಟಿಸಿಕೊಳ್ಳಬೇಕೆಂದು ಬಯಸುವುದು. ಇದು ಬಹಳ ಬೌದ್ಧಿಕ ವ್ಯಾಖ್ಯಾನವೆಂದು ಎನಿಸ ಬಹುದು. ಇದನ್ನೇ ಸರಳವಾಗಿ ಹೇಳುವುದಾದರೆ, ನಮ್ಮ ಹಿರಿಯರು ಬದುಕಿ ಬಾಳುತ್ತಿದ್ದ ರೀತಿ.
ಪ್ರತಿಯೊಂದನ್ನೂ ಖರೀದಿಸುವಾಗಲೂ (ಈ ಮಾತು ಕೇವಲ ವಾಹನಕ್ಕೆ ಅನ್ವಯಿಸುವಂಥದ್ದಲ್ಲ) ಇದರ ಅಗತ್ಯವೆಷ್ಟಿದೆ ಎಂದು ಮೂರ್‍ನಾಲ್ಕು ಬಾರಿ ನಮ್ಮನ್ನು ನಾವೆ ಪ್ರಶ್ನಿಸಿಕೊಳ್ಳಬೇಕು. ನಮ್ಮ ಅಗತ್ಯ ಗಳನ್ನು ಪಟ್ಟಿ ಮಾಡಿಕೊಂಡು, ಎಷ್ಟರಮಟ್ಟಿಗೆ ನಾವು ಕೊಳ್ಳಬಹುದಾದ ಹೊಸತು ಇಲ್ಲದೆಯೂ ಹೊಂದಿಕೆ ಮಾಡಿಕೊಳ್ಳಬಹುದೆಂಬು ದನ್ನು ಲೆಕ್ಕ ಹಾಕಿಕೊಳ್ಳಬೇಕು. ಹೊಸತು ಬಂದ ಮೇಲೆ ಉಂಟಾಗ ಬಹುದಾದ ಹೊರೆ, ಬದುಕಿನಲ್ಲಿ ಮಾಡಬಹುದಾದ ವ್ಯತ್ಯಯ (ಸಮಾಜದ ದೃಷ್ಟಿಯನ್ನೂ ಇಟ್ಟುಕೊಂಡು) ಎಲ್ಲವನ್ನೂ ಲೆಕ್ಕ ಹಾಕ ಬೇಕು. ಅವುಗಳಲ್ಲಿ ಯಾವುದು ಕಡಿಮೆ ನಷ್ಟವೋ, ಪರಿಸರಕ್ಕೆ ಕಡಿಮೆ ಅಪಾಯಕಾರಿಯೋ ಅದನ್ನು ಆಯ್ಕೆ ಮಾಡಿಕೊಳ್ಳಬೇಕು. ಇಲ್ಲಿ ಬೇಕಾದದ್ದು ಪರಿಣತಿಗಿಂತಲೂ ಪಕ್ವತೆ.
ಯಾಕೆ ಈ ವ್ಯಾಖ್ಯಾನವೆಂದರೆ, ಇದರ ಮೂಲ ಇರುವುದೂ ವಾಹನಗಳ ಖರೀದಿಯ ಸಂಗತಿಯಲ್ಲೇ. ಬೆಂಗಳೂರಿನ ಜನ ಸಂಖ್ಯೆಗೂ, ವಾಹನ ಸಂಖ್ಯೆಗೂ ಸರಿಸುಮಾರು ಹತ್ತಿರ ಹತ್ತಿರವಿದೆ. ಸುಮಾರು 67 ಲಕ್ಷ ವಾಹನಗಳೆಂದರೆ ಕೋಟಿಗೆ ಹತ್ತಿರಬದಂತೆಯೇ. ಈಗಿನ ವೇಗ ಕಂಡರೆ, ಐದಾರು ವರ್ಷಗಳಲ್ಲಿ ಕೋಟಿಗೆ ಹತ್ತಿರ ಬಂದು ಕೇಕೆ ಹಾಕಬಹುದು. ಹಾಗಾದರೂ ಅಚ್ಚರಿಪಡುವಂಥದ್ದೇನೂ ಇಲ್ಲ. ಹಾಗಾದರೆ ವಾಹನ ಖರೀದಿಗೆ ನಿರ್ಬಂಧ ಯಾಕೆ ಹಾಕಬಾರದು?
ಗ್ರ್ಯಾಂಗ್ರೀನ್ ನಿಂದ ಬಳಲುತ್ತಿರುವವರು ವೈದ್ಯರ ಬಳಿ ಹೋಗು ತ್ತಾರೆನ್ನಿ. ವೈದ್ಯರು ರೋಗಿಯ ಸ್ಥಿತಿಯನ್ನು ಕಂಡು ಅಗತ್ಯವಿದ್ದರೆ ದೇಹದ ನಿರ್ದಿಷ್ಟ (ರೋಗಕ್ಕೀಡಾದ) ಅಂಗವನ್ನು ಕತ್ತರಿಸಬೇಕೆಂದರೆ, ಅನಿವಾರ್ಯ ಸ್ಥಿತಿಯಲ್ಲಿ ಒಂದು ನಿರ್ಧಾರಕ್ಕೆ ಬರುತ್ತಾನೆ. ಅದು ತೀರಾ ಅನಿವಾರ್ಯದ ಸ್ಥಿತಿ. ಬೇರೆ ಪರಿಹಾರವೂ ಇಲ್ಲ, ಉಪಾಯವೂ ಇಲ್ಲ. ಪ್ರಾಣ ಉಳಿಯಬೇಕೆಂದರೆ ದೇಹದ ಅಂಗವನ್ನು ಕಳೆದುಕೊಳ್ಳಬೇಕು. ಅಂತಿಮವಾಗಿ ಅವನು ಒಪ್ಪಿಕೊಳ್ಳಬಹುದೆನ್ನಿ. ಅಂಥ ಅನಿವಾರ್ಯ ಸ್ಥಿತಿಗೆ ನಮ್ಮ ನಗರಗಳು ತಲುಪಬೇಕೇ ಎಂಬುದನ್ನು ಆಡಳಿತ ವ್ಯವಸ್ಥೆ ಕೇಳಿಕೊಳ್ಳಬೇಕಿದೆ. ಆ ನಿಟ್ಟಿನಲ್ಲೇ ಪರಿಹಾರ ಹುಡುಕಬೇಕಾಗಿದೆ.
ಪಂಚಾಯತ್ ಗಳು ಏನು ಮಾಡಬೇಕು?
ಮತ್ತೆ ಮುಂಬಯಿಯಿಂದ ನಮ್ಮ ಗ್ರಾ.ಪಂ.ಗಳಿಗೆ ಬರೋಣ. ಅಲ್ಲಿ ನಗರಗಳ ಪರಿಸ್ಥಿತಿಯೇ ನಿರ್ಮಾಣವಾಗುತ್ತಿದೆ. ವಾಹನ ನಿಲುಗಡೆ ಸಮಸ್ಯೆ ಭೀಕರಗೊಳ್ಳುತ್ತಿದೆ. ಈ ಸಂದರ್ಭದಲ್ಲಿ ಎಚ್ಚೆತ್ತುಕೊಳ್ಳಬೇಕಾಗಿರುವುದು ಸ್ಥಳೀಯ ಪಂಚಾಯತ್ ವ್ಯವಸ್ಥೆಯೇ ಹೊರತು ರಾಜ್ಯ ಸರಕಾರಕ್ಕಲ್ಲ. ಕೇವಲ ಸರಕಾರಕ್ಕೆ ಒಂದು ಪತ್ರ ಬರೆದು ಕುಳಿತರೆ ಸಮಸ್ಯೆ ಬಗೆಹರಿಯುವುದೇ? ಖಂಡಿತಾ ಇಲ್ಲ ಎಂಬುದೇ ಸ್ಪಷ್ಟ ಮತ್ತು ಸರಿಯಾದ ಉತ್ತರ. ಆದರೆ, ನಮ್ಮ ಕೆಲವು ಗ್ರಾ.ಪಂ ಗಳು ಇಂಥದ್ದೇ ಕೆಲಸವನ್ನು ಮಾಡುತ್ತಾ ಕುಳಿತಿವೆ. ಇದರಿಂದ ವಾಸ್ತವವಾಗಿ ಆಗುತ್ತಿರುವ ಸಮಸ್ಯೆ ಪಾದಚಾರಿಗಳಿಗೆ ಮತ್ತು ಪೊಲೀಸರಿಗೆ.
ವಾಹನ ನಿಲುಗಡೆ ವಾಸ್ತವವಾಗಿ ಪೊಲೀಸರ ಲೆಕ್ಕಕ್ಕೆ ಬರುವುದಿಲ್ಲ. ಆದರೆ ವಾಹನಗಳ ನಿಲುಗಡೆಯಿಂದ ಉಂಟಾಗುವ ಟ್ರಾಫಿಕ್ ಜಾಮ್ ನಿಯಂತ್ರಿಸುವ ವ್ಯಾಪ್ತಿ ಪೊಲೀಸರದ್ದು. ಹಾಗಾಗಿ ಈ ಪಾರ್ಕಿಂಗ್ ಸಮಸ್ಯೆ ಬಗೆಹರಿಸುವುದೂ ಹಲವು ಕಡೆ ಪೊಲೀಸರ ಹೆಗಲೇರಿ ಕುಳಿತಿದೆ. ಸಂಚಾರಿ ಪೊಲೀಸರು ಬಗೆಹರಿಸುತ್ತಾರೆ ಎಂಬುದು ಸ್ಥಳೀಯ ಪಂಚಾಯತ್ ಗಳ ನಂಬಿಕೆ. ಆದರೆ ಪೊಲೀಸರಿಗೆ ಇರುವ ಸಿಬಂದಿ ಲೆಕ್ಕಾಚಾರದಲ್ಲಿ ಇವುಗಳಿಗೆಲ್ಲಾ ಪುರಸೊತ್ತು ಇಲ್ಲ, ಸೌಲಭ್ಯವೂ ಇಲ್ಲ. ಇದರಿಂದ ಪಾದಚಾರಿಗಳಂತೂ ಓಡಾಡುವ ಪರಿಸ್ಥಿತಿ ಇಲ್ಲ.
ಯಾಕೆ ಮೊದಲು ಯೋಚಿಸಬಾರದು?
ಪಂಚಾಯತ್ ಗಳು ತಮ್ಮ ಗ್ರಾಮಗಳು ನಗರಗಳಾಗುವ ಮೊದಲು ಈ ಕುರಿತು ಯೋಚಿಸುವುದೇ ಇಲ್ಲ. ಸಿಕ್ಕ ಸಿಕ್ಕಲ್ಲಿ ಅಂಗಡಿ- ಮುಂಗಟ್ಟುಗಳಿಗೆ ಪರವಾನಗಿ ಕೊಟ್ಟು ಬೆಳೆಯಲು ಬಿಡುತ್ತವೆ. ಇದರಿಂದ ಪೇಟೆ ಬೆಳೆದು ದೊಡ್ಡದಾಗಿ ಇವರ ಕೈಗೆ ಸಿಗದಷ್ಟು ಮೇಲಕ್ಕೆ ಹೋದ ಮೇಲೆ ಕೊಡಲಿ ಹಿಡಿದು ಹೊರಟರೆ ಆಗುವ ಕೆಲಸವೇ? ಇದೇ ಚರ್ಚೆಯಾಗಬೇಕಾದದ್ದು. ನಮ್ಮ ಗ್ರಾಮಗಳೂ ಮಹಾನಗರಗಳಂತೆ ಸಮಸ್ಯೆಗಳ ವರ್ತುಲದಲ್ಲಿ ಸಿಲುಕಬಾರದೆಂದರೆ ಮರವಾಗುವ ಮೊದಲೇ ಬಗ್ಗಿಸಿಕೊಳ್ಳಬೇಕ. ಅದು ಸಾಧ್ಯವೇ ಎಂಬುದೂ ಉತ್ತರ ಸಿಗದ ಪ್ರಶ್ನೆಯಾಗಿಯೇ ತೋರುತ್ತಿದೆ. ಹಾಗಾಗಿ ವಾಹನ ಪಾರ್ಕಿಂಗ್‌ಗೆ ಪರಿಹಾರ ಹುಡುಕುತ್ತಾ ಸಾಗುವುದಕ್ಕಿಂತ ಇರುವುದರಲ್ಲೇ ಉಪಾಯ ಹುಡುಕುವುದು ಲೇಸು.
ಅರವಿಂದ ನಾವಡ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.