ತುಳುನಾಡಿನ ವಿಶಿಷ್ಟ ಆಚರಣೆ: ಮಾರಿ ಓಡಿಸುವ “ಆಟಿಕಳೆಂಜ’
Team Udayavani, Jul 23, 2017, 8:35 AM IST
ಕಾಸರಗೋಡು: ತುಳುನಾಡು ತನ್ನದೇ ಆದ ವೈಶಿಷ್ಟéಗಳನ್ನು ಪಡೆದುಕೊಂಡ ಸಂಪದ್ಭರಿತ ಪ್ರದೇಶ. ವಿಶಿಷ್ಟ ಜಾನಪದ ನಂಬಿಕೆಗಳ ಹಾಗು ಕಲೆಗಳ ತವರುಮನೆ. ತುಳುನಾಡಿನ ಆಚಾರ ವಿಚಾರಗಳು ಬೇರೆಲ್ಲೂ ಸಿಗದು. ತನ್ನದೇ ಆದ ವೈಶಿಷ್ಟéಗಳಿಂದ ತುಳುನಾಡಿಗೆ ಅಗ್ರಸ್ಥಾನ. ಪರಶುರಾಮನ ಸೃಷ್ಟಿಯ ತುಳುನಾಡು ಸಂಸ್ಕೃತಿಯ ತವರೂರು. ತುಳುನಾಡಿನ ಆಚಾರಗಳಲ್ಲಿ ಆಟಿ ತಿಂಗಳೂ ತನ್ನದೇ ಆದ ವೈಶಿಷ್ಟéವನ್ನು ಪಡೆದುಕೊಂಡಿದೆ.
ಆಟಿ ತಿಂಗಳು: ಆಟಿ ಎಂಬುದು ದವಸಧಾನ್ಯ, ಕಾಳು ಕಡ್ಡಿಗಳಿಂದ ಕ್ಷಾಮದ ತಿಂಗಳು. ಕೃಷಿಕರು ಈ ತಿಂಗಳಲ್ಲಿ ಗಿಡ ಗಳನ್ನು ನೆಡಬಾರದೆಂದು ಹೇಳುತ್ತಾರೆ. ನೆಟ್ಟರೆ ಚಿಗುರುವುದು ನಿಧಾನವಂತೆ. ಆಹಾರಧಾನ್ಯಗಳಿಗೆ ಹೇಗೂ ಅಭಾವ ಅಂದ ಮೇಲೆ ಶುಭ ಶೋಭಾನೆಗಳಿಗೂ ಈ ಕಾಲ ವಜ್ಯì. ಅಶುಭ ಎಂದೇ ಹೇಳುತ್ತಾರೆ. ಆದ್ದರಿಂದಲೇ ಆಟಿಯಲ್ಲಿ ಬರುವ ಕಳೆಂಜನನ್ನು ತುಳುನಾಡ ಜನರು ಮಾಯೆಯ ರಾಜಕುಮಾರನೆಂದೇ ನಂಬುತ್ತಾರೆ.
ಲಭ್ಯವಾಗುವ ಪಾಡªನಗಳ ಆಧಾರದಿಂದ ಕಳೆಂಜನು ಪಂಜ ಸೀಮೆಯ ಬಂಗಾಡಿಗಟ್ಟದ ಬಂಗರಸನ ಮಾಯೆಯ ಮಗ. ಈತನ ತಾಯಿ ಕೊಡಗಿನ ಕಾವೇರಮ್ಮ. ಈತನಿಗೆ ಹತ್ತು ವರ್ಷಗಳಲ್ಲಿಯೇ ಮುಖದಲ್ಲಿ ಕೆಂಪು ಮೀಸೆ ಚಿಗುರಿತೆಂದು ಪಾಡªನ ವರ್ಣಿಸುತ್ತದೆ.
ಗಣಪತಿಯ ಹಾಗೆ ದೊಡ್ಡ ಹೊಟ್ಟೆ ಈತನಿಗೆ ಬರುತ್ತದೆ. ಗಣಪತಿಯ ಹಾಗೆ ವಿಘ್ನ ನಿವಾರಕನೋ ಹಾಗೆಯೆ ಈ ಕಳಂಜ ಕೂಡಾ ಸೀಮೆಯ ಜನರ ದುರಿತ ಪರಿಹಾರಕ ಶಕ್ತಿಗಳೆಂಬ ನಂಬಿಕೆ ಜನರಲ್ಲಿದೆ.
ಈ ತಿಂಗಳಲ್ಲಿ ವಿಪರೀತವಾಗಿ ಮಳೆ ಸುರಿಯುವುದರಿಂದ ಕ್ರಿಮಿಕೀಟಗಳ ಬಾಧೆ ಮತ್ತು ಉಷ್ಣ ಸಂಬಂಧವಾದ ಕಾಯಿಲೆ ಗಳು ಈ ತಿಂಗಳುಗಳಲ್ಲಿ ಉಲ್ಬಣಗೊಳ್ಳುತ್ತದೆ. ಅನೇಕ ಸಂಕಷ್ಟ ಗಳನ್ನು ಎದುರಿಸು ಕಷ್ಟದ ತಿಂಗಳು. ಇಂತಹ ದಿನಗಳಲ್ಲಿ ಕಠಿನವಾಗುವ ಜನರ ಸಮಸ್ಯೆಗಳನ್ನು ದೂರ ಮಾಡಿ ಊರ ಮಾರಿಯನ್ನು ಕಳೆಯಲು ಬರುವವನೆ ಆಟಿ ಕಳೆಂಜ. ತುಳು ಜನರಲ್ಲಿ ಮದುವೆ ಮಾಡಿಕೊಟ್ಟ ಹೆಣ್ಣು ಮಕ್ಕಳನ್ನು ಆಟಿ ತಿಂಗಳಿನಲ್ಲಿ ತವರುಮನೆಗೆ ಬರಿಸಿ ಒಂದು ತಿಂಗಳು ಉಪಚಾರ ಮಾಡುವ ಸಂಪ್ರದಾಯಿವಿದೆ. ಇದನ್ನು “ಆಟಿ ಕುಳ್ಳುಪುನೆ'(ಆಟಿ ತಿಂಗಳಿನಲ್ಲಿ ತವರು ಮನೆಯಲ್ಲಿ ಕುಳಿತುಕೊಳ್ಳುವುದು) ಎನ್ನುತ್ತಾರೆ. ಆಟಿಯ ಅಮವಾಸ್ಯೆಯಂದು ತುಳು ಜನರಲ್ಲಿ “ಪಾಲೆತ ಕೆತ್ತೆತ ರಸ ಪರಪ್ಪುನೆ’ (ಹಾಲೆಯ ಮರದ ಕೆತ್ತೆಯನ್ನು ಜಜ್ಜಿ ರಸವನ್ನು ಕುಡಿಯುವುದು) ಎಂಬ ಸಂಪ್ರದಾಯ ಇಂದಿಗೂ ನಡೆದು ಬರುತ್ತಿದೆ.
ವರ್ಷಂಪ್ರತಿ ಆಟಿ ತಿಂಗಳ ಸಂಕ್ರಮಣ ಕಳೆದು ಮೂರರಲ್ಲಿ ಮಾಯೆಯ ಕಳೆಂಜನ ವೇಷವನ್ನು ಹಾಕಿಕೊಂಡು ಊರು ಸಂಚಾರ ಮಾಡಿ ಜನರ ಸುಕ್ಷೇಮಕ್ಕಾಗಿ ಹಾರೈಸಿ ಎಲ್ಲ ಅನಿಷ್ಟಗಳನ್ನು ನಿವಾರಿಸುವುದಾಗಿ ಜನರು ನಂಬಿಕೊಂಡು ಬಂದಿದ್ದಾರೆ.
ಕಳೆಂಜ ವೇಷ : ತೆಂಗಿನ ತಿರಿಯನ್ನು ಸೀಳು ಸೀಳಾಗಿ ಸಿಗಿದು ಅದರ ದಂಡನ್ನೇ ಸೊಂಟದ ಪಟ್ಟಿಯಾಗಿ ಮಾಡಿಕೊಂಡು ಸೊಂಟದಿಂದ ಮೊಣಕಾಲಿನ ವರೆಗೆ ಒತ್ತೂತ್ತಾಗಿ ಸುತ್ತಲೂ ಇಳಿಬಿಟ್ಟು ಕೈಗಳಿಗೆ, ತೋಳುಗಳಿಗೆ ಆಭರಣದ ಬದಲಾಗಿ ಕೇಪಳ ಹೂವಿನಿಂದಲಂಕರಿಸಿ ತೆಂಗಿನ ತಿರಿಯದೇ ಅಲಂಕಾರ ಸಾಮಗ್ರಿಗಳನ್ನು ಧರಿಸಿ, ಆರಸರಿಗೆ ಪಟ್ಟದ ಸಂಕೇತ ಕಿರೀಟ ಹೇಗೋ ಹಾಗೆಯೇ ಕೇಪಳದ ಹೂವನ್ನು ಅಲ್ಲಲ್ಲಿ ಸಿಕ್ಕಿಸಿದ ತೆಂಗಿನ ತಿರಿಯ ಟೊಪ್ಪಿಗೆ (ಕಿರೀಟ) ಧರಿಸಿ ಬಿದಿರಿನ ಓಟೆಯ ಹಿಡಿಯುಳ್ಳ ತಾಳೆಗರಿಯ ಕೊಡೆಯನ್ನು ಹಿಡಿದುಕೊಂಡು ಬಿಳಿಯ “ಅರ್ದಾಲೋ’ ವನ್ನು ನೀರಿನಲ್ಲಿ ಕಲಸಿ ಮುಖಕ್ಕೂ, ಮೈಗೂ ಬಳಿದು, ಕೆಂಚನೆಯ ಮೀಸೆಯನ್ನು ಇಟ್ಟು, ಕಾಲಿಗೆ ಗೆಜ್ಜೆಯನ್ನು ಕಟ್ಟಿ, ನಲ್ಕೆಯವನು ಬಡಿಯುವ ಡೋಲಿನ ತಾಳಕ್ಕೆ ಸರಿಯಾಗಿ ಹೆಜ್ಜೆ ಹಾಕುತ್ತಾ, ಕೊಡೆ ತಿರುಗಿಸಿಕೊಂಡು ಆಟಿಯ ತಿಂಗಳಲ್ಲಿ “ಮಾಯದ ಕಳೆಂಜ’ ಎಲ್ಲರ ಮನೆ ಬಾಗಿಲಿಗೆ ಬಂದು ನಲಿಯುವುದು ಪರಶುರಾಮನ ಸೃಷ್ಟಿಯಲ್ಲಿ ಸರ್ವೇ ಸಾಮಾನ್ಯ. ಈತ ಕ್ರಿಮಿಕೀಟಗಳ ಬಾಧೆ ಹಾಗು ಕೊಳೆರೋಗಗಳ ನಿವಾರಕ ಶಕ್ತಿ ಎಂಬುದು ಜನರ ನಂಬಿಕೆ.
ಕಾಸರಗೋಡು ನಗರದ ಅಡ್ಕತ್ತಬೈಲಿನ ಕುಟುಂಬವೊಂದು ವಂಶಪಾರಂಪರ್ಯವಾಗಿ ಆಟಿ ಕಳೆಂಜನನ್ನು ಧರಿಸಿ ಆಚರಣೆ ನಡೆಸುತ್ತಲೇ ಬಂದಿದೆ. ಈ ಹಿಂದೆ ಕುಟ್ಟಿ ಅವರು ಆಟಿ ಕಳೆಂಜನನ್ನು ಕಟ್ಟುತ್ತಿದ್ದರೆ. ಅವರ ನಿಧನಾನಂತರ ಅವರ ಪುತ್ರ ಅಶೋಕ ಆಟಿ ಕಳೆಂಜನನ್ನು ಕಟ್ಟಿ ಆಡಿಸುತ್ತಿದ್ದಾರೆ. ಇವರಿಗೆ ಸಹೋದರ ರಮೇಶ್ ನೆರವಾಗುತ್ತಿದ್ದಾರೆ. ತಾಯಿ ರಾಧಾ ಅವರೂ ಕೂಡಾ ಆಟಿ ಕಳೆಂಜನ ಸಿದ್ಧತೆಯಲ್ಲಿ ನೆರವಾಗುತ್ತಿದ್ದಾರೆ.
ಈ ಬಾರಿ ಅಡ್ಕತ್ತಬೈಲು ಶಾಲೆಯ ಆರನೇ ತರಗತಿ ವಿದ್ಯಾರ್ಥಿ ಜಿತ್ತು ಆಟಿ ವೇಷವನ್ನು ಧರಿಸಿದ್ದಾರೆ. ಆಟಿ ಕಳೆಂಜನ ಎಲ್ಲ ಆಭರಣಗಳನ್ನು ಇವರೆ ಸ್ವತಃ ಸಿದ್ಧಪಡಿಸುತ್ತಾರೆ.
ಚಿತ್ರ : ಶ್ರೀಕಾಂತ್ ಕಾಸರಗೋಡು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.