ಜಲಕ್ಷಾಮದ ಅಳು ಹಾಗೂ ಮಳೆಗಾಲದ ನಿದ್ದೆ
Team Udayavani, Jul 24, 2017, 7:00 AM IST
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು “ರೈತರು ಇನ್ನು ಮಳೆ ನಂಬಿ ಬೇಸಾಯ ಮಾಡುವುದನ್ನು ಬಿಡಬೇಕು’ ಎಂದು ಇತ್ತೀಚೆಗೆ ಮಾರ್ಮಿಕವಾಗಿ ಹೇಳಿದ್ದಾರೆ. ಮುಂಗಾರು, ಹಿಂಗಾರು ಕಾಲಕ್ಕೆ ತಕ್ಕಂತೆ ಸುರಿಯುತ್ತದೆಂದು ನಂಬುವಂತಿಲ್ಲ. ಹವಾಮಾನ ಬದಲಾವಣೆಯಿಂದ ಅಕಾಲಿಕ ಮಳೆ ಬರುತ್ತಿದೆ. ಮಳೆ ಬಂದಿಲ್ಲ ಎಂಬುದಕ್ಕಿಂತ ಬಂದ ಮಳೆಯಲ್ಲಿ ಎಷ್ಟು ನೀರನ್ನು ತಮ್ಮ ಭೂಮಿಗೆ ಹಿಡಿದೆವೆಂಬುದು ಪ್ರತಿ ರೈತನ ಕೃಷಿ ಭವಿಷ್ಯದ ಸೂತ್ರವಾಗಬೇಕು.
ತೋಟದ ಹಳ್ಳ, ಕೆರೆ ಬತ್ತಿದವು. ಮನೆಯ ಕುಡಿಯುವ ನೀರಿನ ಬಾವಿಯೂ ಒಣಗಿತು. ಸುಮಾರು 50 ಅಡಿ ಆಳದ ಬಾವಿಯಲ್ಲಿ ದಿನಕ್ಕೆ ನಾಲ್ಕು ಬಿಂದಿಗೆ ನೀರು ಮಾತ್ರ ದೊರೆಯುತ್ತಿತ್ತು. ನೀರೆತ್ತಲು ವಿದ್ಯುತ್ ಪಂಪು ಪ್ರಯೋಜನವಿಲ್ಲ. ನಿಧಾನಕ್ಕೆ ಹಗ್ಗದಿಂದ ಎತ್ತಬೇಕು. ಬಿಂದಿಗೆಯ ನೀರನ್ನು ದೊಡ್ಡ ಪಾತ್ರೆಗೆ ಸುರುವಿ ಒಂದೆರಡು ತಾಸು ಬಳಿಕ ಕೆಸರು ಕೆಳಗಡೆ ಕುಳಿತ ನಂತರ ಸ್ನಾನ, ಪಾತ್ರೆ ತೊಳೆಯಲು ಬಳಸುತ್ತಿದ್ದರು. ದೊಡ್ಡಿಯ ಮೂರು ನಾಲ್ಕು ದನಕರುಗಳಿಗೆ ಕುಡಿಯಲು ನೀರು ಒದಗಿಸುವುದು ಕಷ್ಟವಾಯ್ತು. ಮನೆಮಂದಿಗೆ ನಿತ್ಯ ಒಂದು ಬಿಂದಿಗೆ ಕುಡಿಯುವ ನೀರನ್ನು ಕಿಲೋ ಮೀಟರ್ ದೂರದಿಂದ ತರುತ್ತಿದ್ದರು. ಬಾವಿಯ ನೀರು ಒಣಗಿತು ಎನ್ನುವಾಗ ಆಳವನ್ನು ಒಂದೆರಡು ಅಡಿಗೆ ಹೆಚ್ಚಿಸಿದರೂ ಪ್ರಯೋಜನವಾಗಲಿಲ್ಲ. ನಿಧಾನಕ್ಕೆ ಅಸರುವ ನೀರು ನಂಬಿದರು. ಒಂದು ಬಾವಿ, ನಾಲ್ಕು ಬಿಂದಿಗೆ ನೀರು ನಂಬಿ ಮಲೆನಾಡಿನ ಎರಡು ಕುಟುಂಬಗಳು ಎರಡು ತಿಂಗಳು ಬದುಕಿದವು.
ಎರಡೇ ಎರಡು ಬಿಂದಿಗೆ ನೀರಲ್ಲಿ ಹೇಗೆ ಬದುಕಿದಿರಿ? ಎಂದು ಸ್ನಾನಕ್ಕೆ ಐದು ಬಿಂದಿಗೆ ನೀರು ಖರ್ಚುಮಾಡುವ ಮಲೆನಾಡಿನ ಮನೆಯಲ್ಲಿ ವಿಚಾರಿಸಿದೆ. ಬಟ್ಟೆ ತೊಳೆಯುತ್ತಿರಲಿಲ್ಲ, ನೆಂಟರ ಮನೆಗೆ ಹೋಗಿ ಬಂದ ಬಳಿಕ ಒಮ್ಮೆ ಬಿಸಿಲಿಗೆ ಹಾಕಿ ಕೊಡ ಇಡುತ್ತಿದ್ದರು. ಶೌಚಾಲಯಕ್ಕೆ ಹೋದರೆ ಬಿಂದಿಗೆ ನೀರು ಬೇಕು. ಇರುವ ಎರಡು ಬಿಂದಿಗೆಯಲ್ಲಿ ಕಾಲ ಕಳೆಯಲು ತಂಬಿಗೆ ಹಿಡಿದು ಕಾಡಿಗೆ ಹೋಗಲು ಆರಂಭಿಸಿದರು. 80 ವರ್ಷದ ಆ ಮನೆಯ ಹಿರಿಯರು ತಮ್ಮ ಜೀವಮಾನದಲ್ಲಿ ನೀರಿಗಾಗಿ ಇಂಥ ಸಂಕಷ್ಟ ಕಂಡಿಲ್ಲವೆಂದರು. ಕೊಳವೆ ಬಾವಿ ಕೊರೆಸಲು ಹಣವಿಲ್ಲ. ದಿನ ಬೆಳಗಾದರೆ ನೀರಿನ ಚಿಂತೆ ಕಾಡುತ್ತಿತ್ತೆಂದು ವಿವರಿಸಿದರು. ಮನೆಯ ಸುತ್ತ ಎರಡು ಎಕರೆ ಜಾಗವಿದೆ. ಅಂಗಳ, ಹಿತ್ತಲು, ತೆಂಗಿನ ತೋಟವಿದೆ. ಆವರಣಕ್ಕೆ ದನಕರು ಬರದಂತೆ ಭರ್ಜರಿ ಅಗಳ ತೆಗೆಸಿದ್ದಾರೆ. ಅದನ್ನು ದನಕರು ಹೋಗಲಿ, ಮನುಷ್ಯರೂ ಜಿಗಿದು ದಾಟುವುದು ಕಷ್ಟವಿದೆ. ಕಾಡು ಗುಡ್ಡದ ಅಂಚಿನ ಮನೆಯ ಹಿತ್ತಲ ಅಗಳದಲ್ಲಿ ಮಳೆ ಸುರಿದಾಗೆಲ್ಲ ಪ್ರವಾಹದಂತೆ ನೀರು ಓಡುತ್ತದೆ. ನೀರು ಹರಿಯುವ ರಭಸಕ್ಕೆ ಮಣ್ಣು ಕೊಚ್ಚಿಹೋಗಿ ಹತ್ತಾರು ಅಡಿಯ ಹಳ್ಳ ಬಿದ್ದಿದೆ. ಅಗಳಕ್ಕೆ ಅಲ್ಲಲ್ಲಿ ತಡೆ ನಿರ್ಮಿಸಿದರೆ ಹರಿಯುವ ಮಳೆ ನೀರು ನಿಂತು ಇಂಗುತ್ತದೆ.
ಗುಡ್ಡದಲ್ಲಿ ಅಲ್ಲಲ್ಲಿ ಮಳೆ ನೀರು ಇಂಗಿಸಲು ಕೆಲವು ಇಂಗುಗುಂಡಿ ನಿರ್ಮಿಸಿದರೆ ಮುಂದಿನ ವರ್ಷಕ್ಕೆ ನೀರಿನ ಸಮಸ್ಯೆಯಾಗುವುದಿಲ್ಲವೆಂದು ಕ್ಷೇತ್ರ ಸುತ್ತಾಡಿ ಸಲಹೆ ನೀಡಿದೆ. ಮೇ ತಿಂಗಳಲ್ಲಿ ಮಳೆ ಬರುವ ಮುಂಚೆ ಈ ಕಾರ್ಯ ಮುಗಿಸಬೇಕೆಂದು ಸೂಚಿಸಿದೆ, ನಾಲ್ಕೈದು ಸಾವಿರ ಖರ್ಚು ಮಾಡಿದರೆ ನೀರಿನ ಸಮಸ್ಯೆ ಪರಿಹಾರವಾಗುತ್ತದೆಂದು ಹತ್ತಾರು ಸಾರಿ ವಿವರಿಸಿದೆ. ಎರಡು ಬಿಂದಿಗೆಯಲ್ಲಿ ಬದುಕಿದ ಆ ಕುಟುಂಬ ಈಗ ಮಳೆ ಸುರಿಯುತ್ತಿರುವುದರಿಂದ ನೀರಿನ ಸಮಸ್ಯೆಯನ್ನು ಸಂಪೂರ್ಣ ಮರೆತಿದೆ. ಮಳೆ ಸುರಿಯುತ್ತದೆ, ನೀರಾಗುತ್ತದೆಂದು ನಂಬಿದೆ. 3000 ಮಿಲಿ ಮೀಟರ್ ಮಳೆ ಸುರಿಯುತ್ತಿದ್ದ ಮಲೆನಾಡಿನ ಪ್ರದೇಶದಲ್ಲಿ ಇಂದು 1500 ಮಿಲಿ ಮೀಟರ್ ಬರುತ್ತಿಲ್ಲ. ಬಿದ್ದ ಹನಿಯನ್ನು ಇಂಗಿಸಿದರೆ ಮಾತ್ರ ಅಂತರ್ಜಲ ಹೆಚ್ಚಿಸಬಹುದು. ಆದರೆ ನೀರಿನ ನೋವುಂಡವರು ಮಳೆ ಶುರುವಾದರೆ ಬೇಸಿಗೆ ಜಲಕ್ಷಾಮದ ಸಂಕಷ್ಟ ಮರೆಯುವುದು ವಿಚಿತ್ರವಾಗಿದೆ.
ಮಳೆ ನೀರನ್ನು ಹಿಂದೆಲ್ಲ ಯಾರೂ ಇಂಗಿಸುತ್ತಿರಲಿಲ್ಲ. ನಿಸರ್ಗದ ಸಹಜ ಕ್ರಿಯೆಯಲ್ಲಿ ಬಾವಿ, ನದಿ, ಕೆರೆಗಳಲ್ಲಿ ನೀರಾಗುತ್ತದೆ. ಇಂಗುಗುಂಡಿಗೆ ಹಣ ಖರ್ಚುಮಾಡುವುದು ವ್ಯರ್ಥವೆಂದು ಲೆಕ್ಕ ಹಾಕುವವರು ಇನ್ನೂ ಇದ್ದಾರೆ. ಜಲ ಜಾಗೃತಿ, ಮಾದರಿ ನಿರ್ಮಾಣ ಎಷ್ಟು ಕಷ್ಟವೆಂದು ಇಂಥವರ ಮನಸ್ಸು ಹೊಕ್ಕು ನೋಡಿದರೆ ಅರ್ಥವಾಗುತ್ತದೆ. ಸರಕಾರ ಈ ವರ್ಷ ಕೊಳವೆ ಬಾವಿ ಕೊರೆಯಲು ಪರವಾನಗಿ ಪಡೆಯಬೇಕೆಂದು ಆದೇಶಿಸಿದ್ದು ನೆನಪಿರಬಹುದು. ಕುಡಿಯುವ ನೀರಿಗೆ ಬಾವಿ ತೆಗೆಯಲು ಅನುಕೂಲವಾಗಲೆಂದು ಆದೇಶವನ್ನು ಕೆಲವು ದಿನದ ಮಟ್ಟಿಗೆ ಸಡಿಲಿಸಲಾಯ್ತು. ಸರಕಾರ ಒಮ್ಮೆ ಆದೇಶ ಹೊರಡಿಸಿದ್ದರಿಂದ ಜನ ಜಾಗೃತರಾದರು. ಮುಂದಿನ ದಿನಗಳಲ್ಲಿ ಕೊಳವೆ ಬಾವಿ ತೆಗೆಯಲು ಜಿಲ್ಲಾಧಿಕಾರಿಗಳಿಂದ ಪರವಾನಗಿ ಪಡೆಯಬೇಕಾಗುತ್ತದೆ. ಹೀಗಾಗಿ ಈಗಲೇ ಬಾವಿ ಕೊರೆಯುವುದು ಒಳ್ಳೆಯದೆಂದು ಹಳ್ಳಿ ಹಳ್ಳಿಗಳಲ್ಲಿ ಬಾವಿ ಕೊರೆಸಿದ್ದಾರೆ. ಬಯಲುಸೀಮೆ, ಅರೆಮಲೆನಾಡಿನಲ್ಲಿ ಮಾತ್ರ ಕಾಣಿಸುತ್ತಿದ್ದ ಕೊಳವೆ ಬಾವಿ ಕೊರೆತದ ಆರ್ಭಟ ಈ ವರ್ಷ ಕರಾವಳಿ, ಮಲೆನಾಡಿನಲ್ಲಿ ಜೋರಾಗಿತ್ತು. ಸದಾ ಕಾಡಿನ ಝರಿ ನೀರು ನಂಬಿ ಬದುಕಿದ ಹಳ್ಳಿಗಳಲ್ಲಿಯೂ ಬಾವಿ ಕೊರೆಸಲಾಗಿದೆ. ರಾಜ್ಯದಲ್ಲಿ ಪ್ರಸ್ತುತ ಬೇಸಿಗೆಯಲ್ಲಿ 15,000 ಕೊಳವೆ ಬಾವಿ ಕೊರೆಯುವ ಯಂತ್ರಗಳು ಕಾರ್ಯವೆಸಗಿವೆ. ಇವುಗಳಲ್ಲಿ ಅರ್ಧಕ್ಕಿಂತ ಜಾಸ್ತಿ ಯಂತ್ರಗಳು ಮಲೆನಾಡಿಗೆ ನುಗ್ಗಿವೆ.
ಬಯಲುಸೀಮೆಯಲ್ಲಿ ಎಷ್ಟು ಕೊರೆದರೂ ನೀರು ಬರುತ್ತಿಲ್ಲವೆಂದು ರೈತರು ತೆಪ್ಪಗಾದಾಗ ಹೊಸನೆಲೆಯಲ್ಲಿ ಕೊರೆಯುವ ಯಂತ್ರಕ್ಕೆ ಮಾರುಕಟ್ಟೆ ವಿಸ್ತರಿಸಿದೆ.
ಮಳೆ ನೀರು ಇಂಗಿಸಲು 5-10 ಸಾವಿರ ವ್ಯಯಿಸಲು ಹಿಂದೆಮುಂದೆ ನೋಡುವವರು ಆಳದ ಕೊಳವೆ ಬಾವಿಗೆ ಲಕ್ಷಾಂತರ ಹಣ ಸುರಿಯುವುದು ಏಕೆ? ಪ್ರಶ್ನೆ ಕಾಡುತ್ತದೆ. ಭೂಮಿಯ ಆಳದಲ್ಲಿ ಹೇರಳವಾದ ನೀರಿದೆ. ಅದು ಎಂದೂ ಖರ್ಚಾಗುವುದಿಲ್ಲವೆಂಬ ತಿಳುವಳಿಕೆ ಇದೆ. ಕಣ್ಣಿಗೆ ಕಾಣುವ ಕೆರೆ, ಬಾವಿ, ಹಳ್ಳ, ಮಳೆ ನೀರಿಗಿಂತ ಆಳದ ನೀರಿನತ್ತ ಚಿತ್ರ ವಿಶ್ವಾಸ ಮೂಡಿದೆ. ನೀರಿನ ಒಂದು ವ್ಯವಸ್ಥೆಯನ್ನು ಮಾರುಕಟ್ಟೆಯ ಮಗ್ಗುಲಿಗೆ ತಿರುಗಿಸಿದ ಪರಿಣಾಮವಿದು. ಶ್ರೀಮಂತ ಕೃಷಿಕರು ಒಂದಾದ ನಂತರ ಒಂದು ಬಾವಿ ಕೊರೆಯುವುದು, ತೋಟ ವಿಸ್ತರಿಸಿಸುವುದು ಒಂದು ಆದರ್ಶವಾಗಿ ಎಲ್ಲರಿಗೂ ಕಾಣಿಸುತ್ತದೆ. ಅಡಿಕೆ, ಬಾಳೆ, ಶುಂಠಿ, ಪಪ್ಪಾಯ ಮುಂತಾದ ವಾಣಿಜ್ಯ ಬೆಳೆಗಳ ವಿಸ್ತರಣೆ ನೀರಿನ ಬಳಕೆಯನ್ನು ಹಿಗ್ಗಿಸಿದೆ. ಇಂಥ ಕೃಷಿ ಸಾಧನೆಗಳೆಲ್ಲ ಕೊಳವೆ ಬಾವಿ ತೆರೆಯುವುದರಿಂದ ಆರಂಭವಾಗುತ್ತದೆಂದು ಬಹುಸಂಖ್ಯಾತರು ನಂಬಿದ್ದಾರೆ. ಬಾವಿ ತೋಡುವವರು, ಕೆರೆ ರೂಪಿಸುವವರು, ಇಂಗುಗುಂಡಿ ನಿರ್ಮಿಸುವ ಕೂಲಿಗಳನ್ನು ಹುಡುಕುವುದಕ್ಕಿಂತ ಒಂದು ದೂರವಾಣಿ ಕರೆಯಲ್ಲಿ ಮನೆಯಂಗಳಕ್ಕೆ ಕೊಳವೆ ಬಾವಿಯಂತ್ರ ತರಿಸುವುದು ಸುಲಭವಾಗಿದೆ. ನೀರಿನ ಸಮಸ್ಯೆ ಹೆಚ್ಚುತ್ತಿರುವಂತೆ ನಮ್ಮ ಜನ ಕೂಲಿಗಳಿಗಿಂತ ಯಂತ್ರಗಳ ಜೊತೆ ಮಾತಾಡಲು ಕಲಿತಿದ್ದಾರೆ.
ಸುಗ್ಗಿಯಲ್ಲಿ ದೊರಕಿದ ಹಣವನ್ನು ಠೇವಣಿ ಇಡದೇ ನಾವು ಬರದ ಆಪತ್ತಿನಲ್ಲಿ ಬ್ಯಾಂಕಿನ ಹಣ ಪಡೆದು ಬಚಾವಾಗಲು ಸಾಧ್ಯವೇ? ಇಂದು ನಿಸರ್ಗದ ಕೊಡುಗೆಯಾದ ಮಳೆ ನೀರು ನಮ್ಮ ಮನೆಯ ಸುತ್ತಲಿನ ಗುಡ್ಡಬೆಟ್ಟಗಳಿಂದ ಇಳಿದು ಓಡುವಾಗ ತಡೆದು ನಿಲ್ಲಿಸದ ನಾವು, ಆಳದ ನೀರಿಗೆ ಕೊಳವೆ ಬಾವಿಯ ಮೂಲಕ ಕನ್ನ ಹಾಕುತ್ತಿದ್ದೇವೆ. ನಮ್ಮ ಕೃಷಿ ಬದುಕಿನ ವಿದ್ಯೆಗಳಲ್ಲಿ ನೀರು ಹಿಡಿದು ಗೆಲ್ಲುವುದನ್ನು ನಾವು ಕಲಿಯುತ್ತಿಲ್ಲ. ಇತ್ತೀಚೆಗೆ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರು “ರೈತರು ಇನ್ನು ಮಳೆ ನಂಬಿ ಬೇಸಾಯ ಮಾಡುವುದನ್ನು ಬಿಡಬೇಕು’ ಎಂದು ಮಾರ್ಮಿಕವಾಗಿ ಹೇಳಿದ್ದಾರೆ. ಮುಂಗಾರು, ಹಿಂಗಾರು ಕಾಲಕ್ಕೆ ತಕ್ಕಂತೆ ಸುರಿಯುತ್ತದೆಂದು ನಂಬುವಂತಿಲ್ಲ. ಹವಾಮಾನ ಬದಲಾವಣೆಯಿಂದ ಅಕಾಲಿಕ ಮಳೆ ಬರುತ್ತಿದೆ. ಮಳೆ ಬಂದಿಲ್ಲ ಎಂಬುದಕ್ಕಿಂತ ಬಂದ ಮಳೆಯಲ್ಲಿ ಎಷ್ಟು ನೀರು ಹಿಡಿದೆವೆಂಬುದು ಪ್ರತಿ ರೈತನ ಕೃಷಿ ಭವಿಷ್ಯದ ಸೂತ್ರವಾಗಬೇಕು. ನಮ್ಮ ಭೂಮಿಯನ್ನು ಅರ್ಥಮಾಡಿಕೊಂಡಂತೆ ನಮ್ಮ ಅಂತರ್ಜಲ, ಮಳೆ ನೀರನ್ನೂ ಅರಿಯುವುದು ಅಗತ್ಯವಾಗಿದೆ. ಮಳೆ ಬರುತ್ತದೆ, ನೀರಾಗುತ್ತದೆ. ಆಳದ ಕೊಳವೆ ಬಾವಿಯಲ್ಲಿ ಹೇರಳ ನೀರು ಸಿಗುತ್ತದೆಂಬ ಕುರುಡು ನಂಬಿಕೆ ಮರೆತು ಮಳೆ ಹಿಡಿದು ಗೆಲ್ಲುವುದು ಕಲಿಯಬೇಕು.
ಚಿಕ್ಕವರಿದ್ದಾಗ ನಮ್ಮ ಮಲೆನಾಡಿನ ಹಿರಿಯರು ಒಂದು ಕತೆ ಹೇಳುತ್ತಿದ್ದರು. ಅಬ್ಬರದ ಮಳೆ ಸುರಿದು ಮೈಯೆಲ್ಲ ಒದ್ದೆಯಾಗಿ ಮರದಲ್ಲಿ ಕುಳಿತ ಮಂಗಗಳು ಚಳಿಯಲ್ಲಿ ನಡುಗುತ್ತವೆ.
ರಾತ್ರಿ ಎಲ್ಲ ಮಂಗಗಳೂ ಸೇರಿ ನಾಳೆ ಮಳೆಯಿಂದ ಬಚಾವಾಗಿ ಬೆಚ್ಚಗೆ ಬದುಕಲು ಮನೆ ಕಟ್ಟಬೇಕೆಂದು ಚರ್ಚಿಸಿ ನಿರ್ಧರಿಸುತ್ತವಂತೆ ! ಮರು ದಿನ ಬೆಳಗಾಗುತ್ತಿದ್ದಂತೆ ಹಸಿದ ಮಂಗಗಳು ಹಣ್ಣಿನ ಮರ ಹುಡುಕಿ ಓಡುತ್ತವೆ, ಯಾವುದಕ್ಕೂ ಮನೆ ಕಟ್ಟಲು ಬಿಡುವಿಲ್ಲದಂತೆ ವರ್ತಿಸುತ್ತವೆ. ಮತ್ತೆ ಸಂಜೆ ಸೇರಿದಾಗ ಮನೆ ಕಟ್ಟುವ ಮಾತು ಪುನರಾವರ್ತನೆಯಾಗುತ್ತದೆ. ಹೀಗಾಗಿ “ಮಂಗ ಮನೆ ಕಟ್ಟಿದಂತೆ !’ ಮಾತು ಮಲೆನಾಡಿನಲ್ಲಿ ಜನಜನಿತವಾಗಿದೆ. ಬರದ ಸಂಕಷ್ಟದಲ್ಲಿ ಬಳಲಿದವರು, ಜಲಕ್ಷಾಮದಿಂದ ಕಂಗಾಲಾದ ರೈತರು ಈ ವರ್ಷದ ಮಳೆಗಾಲದಲ್ಲಿ ಕಡ್ಡಾಯವಾಗಿ ನೀರಿಂಗಿಸುವ ಮಾತಾಡುತ್ತಾರೆ. ಅಭ್ಯಾಸ ಬಲದಲ್ಲಿ ಮರೆಯುತ್ತಾರೆ.
ಜಲಸಂಕಷ್ಟ ಸಂರಕ್ಷಣೆಯ ಪಾಠವಾಗಬೇಕು. ನಮ್ಮ ನೀರಿನ ದುಃಖ ಪರಿಹರಿಸಲು ಯಾರೋ ಅವತರಿಸಿ ಸಹಾಯಮಾಡುತ್ತಾರೆಂದು ಯೋಚಿಸಿ ಆಲಸಿಗಳಾಗುವುದು ರೈತರ ಮೂರ್ಖತನ. ನಿದ್ದೆ ಮಾಡಿದವರನ್ನು ಎಬ್ಬಿಸಬಹುದು. ಆದರೆ ನಿದ್ದೆ ಮಾಡಿದಂತೆ ನಟಿಸುವವರನ್ನು ಎಚ್ಚರಿಸುವುದು ಕಷ್ಟದ ಕೆಲಸ. ಜಲಕ್ಷಾಮದ ಕಷ್ಟ ಇನ್ನೂ ಅರ್ಥವಾಗದಿದ್ದರೆ, ಮಳೆ ನೀರಿನ ಸಂರಕ್ಷಣೆಯ ಮಹತ್ವ ಅರಿವಾಗದಿದ್ದರೆ ಹತ್ತಾರು ವರ್ಷಗಳಿಂದ ಸರಿಯಾದ ಮಳೆ ಕಾಣದ ಚಿತ್ರದುರ್ಗದ ಚಳ್ಳಕೆರೆ, ಹಾಸನದ ಜಾವಗಲ್ ಪ್ರದೇಶ ಸುತ್ತಬಹುದು. ನೀರಿಲ್ಲದೇ ಗುಳೇ ಹೋದ ರೈತರ ಬದುಕು ಅರಿಯಲು ಬೆಂಗಳೂರು, ಗೋವಾ, ಮುಂಬೈ ನೋಡಬಹುದು. ಬಿದ್ದ ಮಳೆ ಗಮನಿಸಿದೇ ಇದ್ದಲ್ಲೇ ನಿದ್ದೆ ಹೋದರೆ ನಮ್ಮನ್ನು ಎಬ್ಬಿಸಿ ಓಡಿಸಲಿಕ್ಕೆ ಕೊಳವೆ ಬಾವಿ ಕೊರೆಯುವವರು, ಸಾಲ ಕೊಟ್ಟವರು ಬರಬಹುದು.
– ಶಿವಾನಂದ ಕಳವೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.