ಮಾತಿಲ್ಲದ SIM ಕಾರ್ಡೂ, ಮಾತನಾಡುವ ಮೊಬೈಲೂ…
Team Udayavani, Jul 24, 2017, 7:50 AM IST
ವಾಹನ ಕ್ರಾಂತಿಯಿಂದಾಗಿ ಬೆಂಗಳೂರಿನಲ್ಲಿ ನಿರಂತರ ಟ್ರಾಫಿಕ್ ಜಾಮ್. ಉಳಿದ ನಗರಗಳಲ್ಲಿ ಪಾರ್ಕಿಂಗ್ ಮಾಡಲು ಸ್ಥಳ ಸಿಗುತ್ತಿಲ್ಲ ಎಂಬ ಗೋಳು. ಇದೇ ರೀತಿ ಮೊಬೈಲ್ ಪ್ರಪಂಚದಲ್ಲೂ ಗೊಂದಲಗಳು ಆರಂಭವಾಗಿವೆ. ಭಾರತದ ಮಟ್ಟಿಗೆ ಮೊಬೈಲ್ ನಂಬರ್‌ಗಳ ಸರಣಿಯನ್ನು ರೂಪಿಸುವುದರಲ್ಲಿ ಸಾಕಷ್ಟು ಸಮಸ್ಯೆಗಳು ಕಾಡುತ್ತಿವೆ. ಮುಖ್ಯವಾಗಿ, ಟಾಕ್‌ಟೈಂ ಆಫರ್‌ಗಳನ್ನು ನಗದೀಕರಿಸಿಕೊಳ್ಳಲು ಲಂಗುಲಗಾಮಿಲ್ಲದೆ ಸಿಮ್ ಖರೀದಿ ನಡೆದಿರುವುದೂ ಉಂಟು. ಡ್ಯುಯೆಲ್ ಸಿಮ್ ಮೊಬೈಲ್ ಸೆಟ್ ಸೇರಿದಂತೆ ನಾನಾ ಕಾರಣಗಳಿಗಾಗಿ ಸಿಮ್ ಮೂಲಕ ಯಾವುದೇ ಚಟುವಟಿಕೆ ನಡೆಸದೆ ಹಾಗೇ ಸುಮ್ಮನೆ ಇರಿಸಿದ ಸಿಮ್ ಸಂಖ್ಯೆಯೇ ಹಲವು ಕೋಟಿ.
ವ್ಯಾಲಿಡಿಟಿಯ ಅವಧಿ ಮುಗಿದ ಸಿಮ್‌ಗಳ ವಿಚಾರದಲ್ಲಿ ತೀರಾ ಗೊಂದಲಗಳಿಲ್ಲ. ವ್ಯಾಲಿಡಿಟಿ ಮುಗಿದ ನಂತರವೂ ಮುಂದಿನ 15 ದಿನಗಳಲ್ಲಿ ಆ ಸಿಮ್‌ನ್ನು ಪುನಃ ಚಾಲನೆ ಮಾಡಲು ಮೊಬೈಲ್ ಸೇವಾದಾತರು ಅವಕಾಶ ಕೊಡಬೇಕು. ಸದರಿ ನಂಬರ್ ಅನ್ನು ಆರು ತಿಂಗಳವರೆಗೆ ಕಂಪನಿ ಜತನವಾಗಿ ಕಾಪಾಡಿಕೊಳ್ಳಬೇಕು. ಈ ಅವಧಿಯಲ್ಲಿ ಗ್ರಾಹಕ ಮತ್ತೆ ತನ್ನ ದಾಖಲೆ ಸಹಿತ ಸಿಮ್‌ಗೆ ವಿನಂತಿ ಸಲ್ಲಿಸಿದರೆ ಅದೇ ನಂಬರ್‌ನ ಸಿಮ್ ಅವನಿಗೆ ದಯಪಾಲಿಸಲಾಗುತ್ತದೆ. ಇದು ಈ ಹಿಂದೆ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ರೂಪಿಸಿದ ನಿಯಮ.
ನಿರ್ಜೀವದ ವ್ಯಾಖ್ಯಾನ ಹೇಗೆ?
ಸಮಸ್ಯೆ ಆ ನಿಟ್ಟಿನಲ್ಲಿ ದೊಡ್ಡದಿಲ್ಲ. ಮೊಬೈಲ್ ಕಂಪನಿಗಳು ಲೈಫ್ಟೈಮ್ ಅಥವಾ ಲಾಂಗ್‌ಲೈಫ್ ಹೆಸರಿನಲ್ಲಿ ಹತ್ತಾರು ವರ್ಷಗಳ ವ್ಯಾಲಿಡಿಟಿಯುಳ್ಳ ಸಿಮ್‌ಅನ್ನು ಗ್ರಾಹಕರಿಗೆ ನೀಡಿವೆ. ಆಫರ್‌ಗಳ ಬೆನ್ನತ್ತಿರುವ ನಾವು ಖರೀದಿಸುತ್ತಿರುವ ಸಿಮ್‌ಗಳಿಗೆ ರೇಷನ್ ಮಿತಿ ಇಲ್ಲ. ಅದರಲ್ಲಿರುವ ಉಚಿತ ಟಾಕ್‌ಟೈಮ್ ಬಳಸಿ ಬಿಸಾಕುತ್ತಿದ್ದೇವೆ. ಈ ರೀತಿ ಕಸದ ಬುಟ್ಟಿ ಸೇರುವ ಸಿಮ್‌ಗಳ ಬಗ್ಗೆ ಕಾನೂನು ಏನು ಹೇಳುತ್ತದೆ? ಕಾನೂನನ್ನೇ ನೆಚ್ಚಿಕೊಂಡರೆ ಆ ಸಿಮ್‌ನ ವ್ಯಾಲಿಡಿಟಿ ಮುಗಿಯುವವರೆಗೆ ಮೊಬೈಲ್ ಸೇವಾದಾತ ಏನೂ ಮಾಡುವಂತಿಲ್ಲ. ಈ ಪ್ರಶ್ನೆ 2012ರ ವೇಳೆಗೆ ಟ್ರಾಯ್ ಗಮನಕ್ಕೆ ಬಂದಿತ್ತು.
ಆ ಸಮಯದಲ್ಲಿ ಭಾರತದಲ್ಲಿ 90.7 ಕೋಟಿ ಮೊಬೈಲ್ ಸಿಮ್‌ಗಳು ಮಾರಾಟವಾಗಿದ್ದವು. ಇದರರ್ಥ, ಇಷ್ಟು ಜನರಲ್ಲಿ ಮೊಬೈಲ್‌ಗಳಿವೆ. ಇಷ್ಟು ಪ್ರಮಾಣದ ಮೊಬೈಲ್ ಚಂದಾದಾರರು ಚಾಲ್ತಿಯಲ್ಲಿದ್ದಾರೆ ಎಂಬ ವ್ಯಾಖ್ಯಾನಕ್ಕೆ ಬರುವುದಿಲ್ಲ. ಅದರಲ್ಲೂ ಡ್ಯುಯಲ್ ಸಿಮ್ ಸೆಟ್, ಮೂರು ಸಿಮ್ ಹಾಕುವ ಸೆಟ್ ಬಂದ ನಂತರ ಒಬ್ಬರು ಒಂದಕ್ಕಿಂತ ಹೆಚ್ಚಿನ ಸಿಮ್ ಬಳಸುವುದು ಸಾಮಾನ್ಯವಾಗಿದೆ. ಎಷ್ಟೋ ಬಾರಿ ಒಂದು ಸಿಮ್ ಅನ್ನು ಎಲ್ಲ ರೀತಿಯಿಂದ ಬಳಕೆ ಮಾಡುವ ಚಂದಾದಾರ ಉಳಿದ ಸಿಮ್‌ನ್ನು “ಬದಲಿ’ ವ್ಯವಸ್ಥೆ ಎಂದು, ಹಾಗೇ ಇರಿಸಿಕೊಳ್ಳುತ್ತಾನೆ. ತಿಂಗಳೊಪ್ಪತ್ತು ಕಳೆದರೂ ಒಂದೇ ಒಂದು ಬಾರಿ ಆ ಸಿಮ್ ಬಳಕೆ ಮಾಡಿಕೊಳ್ಳುವುದಿಲ್ಲ. ಸಿಮ್ ಮಾರಾಟ ಹೆಚ್ಚಿದ್ದರೂ ಮೊಬೈಲ್ ಸೇವಾದಾತರ ಆದಾಯ ಏರುವುದಿಲ್ಲ. ಈ ಹಿನ್ನೆಲೆಯಲ್ಲಿಯೇ ಟಿಎಸ್‌ಪಿಗಳ ಗೊಣಗಾಟ ಹೆಚ್ಚಾಯಿತು.
ಯಾಕೆ ಗೊತ್ತೇ?
ಲೆಕ್ಕದಲ್ಲಿ ಮಾತ್ರ 90.7 ಕೋಟಿ ಮೊಬೈಲ್ ಸಿಮ್‌ಗಳು ಮಾರಾಟವಾಗಿದ್ದರೂ, ವಾಸ್ತವವಾಗಿ ಆ ವೇಳೆಗೆ ಸಿಮ್ ಬಳಕೆಯಾಗುತ್ತಿದ್ದುದು ಕೇವಲ 69.9 ಕೋಟಿ ಮಾತ್ರ. ಅಂದರೆ ಮಾರಾಟದ ಶೇ. 77 ಮಾತ್ರ. 2012ರ ಸೆಪ್ಟೆಂಬರ್‌ನ ಒಂದು ಲೆಕ್ಕದಂತೆ ಆ ತಿಂಗಳಿನಲ್ಲಿ 20.8 ಕೋಟಿ ಸಿಮ್‌ಗಳು ಕನಿಷ್ಠ ಒಂದು ಬಾರಿಯೂ ಚಾಲನೆಗೆ ಬಂದಿರಲಿಲ್ಲ. ಇದು ಟಿಎಸ್‌ಪಿಗಳ ಹುಬ್ಬುಗಂಟಿಕ್ಕುವಂತೆ ಮಾಡಿತು. ಭಾರತೀಯ ದೂರವಾಣಿ ನಿಯಂತ್ರಣ ಪ್ರಾಧಿಕಾರ ಟ್ರಾಯ್ ಕೂಡ ಈ ವಿದ್ಯಮಾನವನ್ನು ಗಮನಿಸಿತು. ಏಕಾಏಕಿ ಕನಿಷ್ಠ ಒಂದು ತಿಂಗಳಿನಿಂದ ಚಾಲನೆಯಲ್ಲಿಲ್ಲದ ಸಿಮ್‌ಗಳನ್ನು ಕಂಪನಿಗಳು ವಾಪಸು ಪಡೆದು ಆ ಸಂಖ್ಯೆಯನ್ನು ಮತ್ತೂಬ್ಬರಿಗೆ ಕೊಡಲಿ ಎಂದು ಹೇಳುವಂತಿಲ್ಲ. ಅದರದೇ ಎರಡು ನಿಯಮಗಳು ಈ ಆದೇಶವನ್ನು ಕಾನೂನುಬಾಹಿರ ಮಾಡಿಬಿಡಬಲ್ಲದು.
2006ರ 43ನೇ ಟ್ರಾಯ್ ಟಾರೀಫ್ ತಿದ್ದುಪಡಿಯ ಪ್ರಕಾರ ಜೀವನಪರ್ಯಂತ ಗ್ರಾಹಕ ಯೋಜನೆ ಜಾರಿಗೆ ಬಂದಿದೆ. ಈ ಲೈಫ್ ಟೈಮ್ ಪ್ಲಾನ್ ಪ್ರಕಾರ, ಗ್ರಾಹಕ ಯಾವುದೇ ಮಾದರಿಯ ದೂರವಾಣಿ ವ್ಯವಹಾರ ನಡೆಸದಿದ್ದರೂ ಆತನ ಸಿಮ್ ವ್ಯಾಲಿಡಿಟಿ ಕೊನೆಪಕ್ಷ ಆ ಸೇವಾ ಕಂಪನಿಯ ಪರವಾನಗಿಯ ಅವಧಿಯವರೆಗೆ ಚಾಲನೆಯಲ್ಲಿರುತ್ತದೆ. ಇದನ್ನು ತಾರಿಫ್ ಆರ್ಡರ್‌ನ 48ನೇ ತಿದ್ದುಪಡಿಯಲ್ಲಿ ಮತ್ತೂಮ್ಮೆ ಸ್ಪಷ್ಟಪಡಿಸಲಾಗಿದೆ.
ಅಸಮಾಧಾನಕ್ಕೂ ಕಾರಣವಿದೆ!
ಅಷ್ಟಕ್ಕೂ ತಣ್ಣಗಿರುವ ಸಿಮ್ ಕುರಿತಾಗಿ ಕಂಪನಿಗಳೇಕೆ ಅಸಮಾಧಾನಗೊಂಡಿತು ಎಂಬುದಕ್ಕೆ ಈ ಕೆಳಗಿನ ಅಂಶಗಳನ್ನು ಪರಿಶೀಲಿಸಬೇಕಾಗುತ್ತದೆ. ಟಿಎಸ್‌ಪಿಗಳು ಎರಡು ಮಾದರಿಯ ದಾಖಲೆಗಳನ್ನು ನಿರ್ವಹಿಸಬೇಕಾಗುತ್ತದೆ. ಹೋಮ್ ಲೊಕೇಷನ್ ರಿಜಿಸ್ಟರ್ ಅಂದರೆ ಹೆಚ್‌ಎಲ್‌ಆರ್. ಇದರಲ್ಲಿ ಸಿಮ್‌ನಿಂದ ಹೊರಹೋದ ಕರೆ, ಎಸ್‌ಎಂಎಸ್ ದಾಖಲೆಗಳು ನಮೂದಾಗುತ್ತವೆ. ಇನ್ನೊಂದು ಸಿಟರ್ ಲೊಕೇಷನ್ ರಿಜಿಸ್ಟರ್(ಎಲ್‌ಆರ್), ಇದು ಹೊರಗಿನಿಂದ ಬಂದ ದೂರವಾಣಿ ಮಾಹಿತಿಯನ್ನು ಸಂಗ್ರಹಿಸುತ್ತದೆ. ಮೊಬೈಲ್ ಸೇವಾದಾತ ಸಿಮ್ ಚಾಲನೆಯಲ್ಲಿಲ್ಲದಿದ್ದರೂ ಒಮ್ಮೆ ಮಾರಾಟ ಮಾಡಿದ ಮೊಬೈಲ್ ಸಂಖ್ಯೆಗಳು ಡಿ ಆ್ಯಕ್ಟೀವ್ ಆಗುವವರೆಗೆ ಈ ಸಿಮ್ ಮಾಹಿತಿಗಾಗಿ ಜಾಗ ಮೀಸಲಿಡಲೇಬೇಕು.
ಇನ್ನೊಂದು ಮುಖ್ಯ ಅಂಶವೆಂದರೆ, ಸಿಮ್ ಸಂಖ್ಯೆ ಹೆಚ್ಚಿದಂತೆಲ್ಲ ಹೊಸ ಹೊಸ ಸರಣಿಯನ್ನು ದೇಶದ ದೂರವಾಣಿ ಇಲಾಖೆ ಡಿಓಟಿ ಜಾರಿಗೊಳಿಸಬೇಕಾಗುತ್ತದೆ. ಪ್ರಸ್ತುತ ಮೊಬೈಲ್ ಸಿಮ್ ಬೇಡಿಕೆ ವಿಪರೀತವಾಗುತ್ತಿರುವುದರಿಂದ ಅದರ ಕೈಯಲ್ಲಿರುವ ಸರಣಿಗಳು ಖಾಲಿಯಾಗುತ್ತಿವೆ. ಹಾಗಾಗಿ ಸ್ಥಿರ ದೂರವಾಣಿಗೆ ಮೀಸಲಿರಿಸಿದ ಸರಣಿಯನ್ನು ಇತ್ತ ನೀಡುವ ಚಿಂತನೆಯೂ ಇದೆ. ಹೇಗೂ ಸ್ಥಿರ ದೂರವಾಣಿ ಬೇಡಿಕೆ ಕಳೆದುಕೊಂಡ ಜೀರೋನಂತಾಗಿದೆಯಲ್ಲ! ತಕ್ಷಣ ಈ ಕ್ರಮ ತೆಗೆದುಕೊಳ್ಳುವುದಕ್ಕಿಂತ ಬಳಕೆಯಲ್ಲಿಲ್ಲದ ಸಿಮ್‌ನ್ನು ಪುನರ್ಬಳಕೆಗೆ ಒದಗಿಸಿದರೂ ಸಮಸ್ಯೆಗೆ ಪರಿಹಾರ ಸಿಗಬಲ್ಲದು.
ಸಿಮ್ ಜೀವಂತರಿಸುವ 20 ರೂ.!
ಎಲ್ಲ ಆಸಕ್ತರ ಅಭಿಪ್ರಾಯಗಳನ್ನು ಸಂಗ್ರಹಿಸಿ ಟ್ರಾಯ್ 2013ರಲ್ಲಿ ಗ್ರಾಹಕ ಹಿತರಕ್ಷಣಾ ನಿಯಮ 2013ಕ್ಕೆ 6ನೇ ತಿದ್ದುಪಡಿಯನ್ನು ಜಾರಿಗೊಳಿಸಿ ಬಳಕೆಯಲ್ಲಿಲ್ಲದ ಸಿಮ್‌ಗಳನ್ನು ಕಂಪನಿ ಮರಳಿ ಪಡೆಯುವ ವಿಶೇಷ ಅವಕಾಶವನ್ನು ಒದಗಿಸಿಕೊಟ್ಟಿತು. ಇದೇ ವೇಳೆ ಟಿಎಸ್‌ಪಿಗಳು ರಂಗೋಲಿ ಕೆಳಗೆ ನುಸುಳದಂತೆ ಹತ್ತಾರು ಪ್ರತಿಬಂಧಗಳನ್ನೂ ಸೂಚಿಸಿತು. ಅವುಗಳೆಂದರೆ,
1. ಹೊಸ ಸಿಮ್ ಚಾಲ್ತಿಗೆ ಬಂದ ಮೊದಲ ಆರು ತಿಂಗಳು ಸೇವಾದಾತರು ಪ್ಲಾನ್ ಬದಲಿಸುವ ಹಕ್ಕೇ ಪಡೆದಿಲ್ಲ. ಇನ್ನು ಅನೂರ್ಜಿತಗೊಳಿಸುವುದಂತೂ ಸಾಧ್ಯವೇ ಇಲ್ಲ. ಇದರ ನಂತರ, ಒಂದು ಸಿಮ್ ಬಳಕೆಯಲ್ಲಿಲ್ಲ ಎಂಬುದು 90 ದಿನಗಳ ಅವಧಿಯ “ನೋ ಯೂಸ್’ ಅವಧಿಯನ್ನು ದಾಟಿರಬೇಕು. ಅರ್ಥ ಇಷ್ಟೇ, ಓರ್ವ ಗ್ರಾಹಕ ಸಿಮ್ ಅನ್ನು ಸರಿಸುಮಾರು ಮೂರು ತಿಂಗಳ ನಂತರ ಯಾವುದೇ ರೀತಿಯಲ್ಲಿ ಬಳಸದಿದ್ದರೂ ಅದು ಊರ್ಜಿತ ಅವಸ್ಥೆಯಲ್ಲಿರಬೇಕು.
2. ಸಿಮ್ ಬಳಕೆಯನ್ನು ನಿರ್ಧರಿಸುವ ಅಂಶಗಳನ್ನು ಕೂಡ ಟ್ರಾಯ್ ಅತ್ಯಂತ ಸ್ಪಷ್ಟವಾಗಿ ವಿವರಿಸಿದೆ. ಒಂದು ನಂಬರ್‌ನಿಂದ ಒಳಬರುವ ಕರೆಗಳನ್ನು ಸ್ವೀಕರಿಸಿರುವುದು ಅಥವಾ ಕರೆ ಮಾಡಿರುವುದು ಸಿಮ್ ಚಾಲ್ತಿಯ ಸಂಕೇತ. ಬೇರೆಯವರಿಗೆ ಎಸ್‌ಎಂಎಸ್ ಕಳುಹಿಸಿದ್ದನ್ನೂ ಸಜೀವ ಲಕ್ಷಣದಲ್ಲಿ ಸೇರಿಸಲಾಗಿದೆ. ಡಾಟಾ ಬಳಕೆ ಮಾಡುತ್ತಿದ್ದರೆ, ಮೌಲ್ಯ ವರ್ಧಿತ ಸೇವೆ ವ್ಯಾಸ್ ಚಾಲನೆಯಲ್ಲಿದ್ದರೆ ಸಿಮ್‌ಅನ್ನು ಅನೂರ್ಜಿತಗೊಳಿಸುವಂತಿಲ್ಲ. ಪೋಸ್ಟ್‌ಪೇಯ್ಡನಲ್ಲಿ ಓರ್ವ ಗ್ರಾಹಕ ಈ ಮೇಲಿನ ಯಾವೊಂದು ಕ್ರಮವನ್ನು ತೆಗೆದುಕೊಂಡಿಲ್ಲದಿದ್ದರೂ ಬಾಡಿಗೆಯನ್ನು ನಿಯಮಿತವಾಗಿ ಪಾವತಿಸುತ್ತಿದ್ದರೆ ಆತನ ನಂಬರ್‌ಅನ್ನು ನಿಷ್ಕ್ರಿಯಗೊಳಿಸುವಂತಿಲ್ಲ. ಟ್ರಾಯ್ ಇನ್ನೂ ಮುಂದುವರೆದು, ಈ ನಿಯಮಗಳ ಹೊರತಾಗಿ ಸಿಮ್ ಊರ್ಜಿತದ ಹೊಸ ಮಾನದಂಡಗಳನ್ನು ಕೂಡ ಕೊಡಲು ಸೇವಾದಾತರು ಸ್ವತಂತ್ರರಿದ್ದಾರೆ ಎಂದು ಘೋಷಿಸಿದೆ.
3. ಬಹುಶಃ ಸಿಮ್ ಪಡೆದುಕೊಂಡು, ಆ ನಂಬರ್‌ಅನ್ನು ತಮ್ಮಲ್ಲೇ ಇರಿಸಿಕೊಳ್ಳಲು ಬಯಸುವ ಪ್ರತಿಯೊಬ್ಬ ಗ್ರಾಹಕ ಗಮನಿಸಬೇಕಾದ ಅಂಶ ಮುಂದಿನದು. ಒಂದೊಮ್ಮೆ ಸಿಮ್‌ನಲ್ಲಿ ಟಾಕ್‌ಟೈಮ್ 20 ರೂ. ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತ ಇದ್ದಲ್ಲಿ ವ್ಯಾಲಿಡಿಟಿ ಅವಧಿ ಮುಗಿಯುವುದಕ್ಕೆ ಮುನ್ನ ಸಿಮ್‌ಅನ್ನು ನಿಷ್ಕ್ರಿಯಗೊಳಿಸಲು ಸಾಧ್ಯವಿಲ್ಲ. ಅಂದರೆ ಕನಿಷ್ಟ 20 ರೂ. ನಿರಂತರವಾಗಿ ಬಳಸದ ಸಿಮ್‌ನಲ್ಲೂ ಬಳಕೆದಾರ ಇರಿಸಿಕೊಳ್ಳುವುದು ಕ್ಷೇಮ.
4. ತನ್ನ ನಂಬರ್‌ನ್ನು ಗ್ರಾಹಕನೇ ಮತ್ತೆ ಪಡೆಯಲು ಸಾಧ್ಯವಾಗಬಹುದಾದ ಒಂದು “ಆಟೋಮ್ಯಾಟಿಕ್ ನಂಬರ್ ರಿಟೆನ್ಶನ್ ಸ್ಕೀಮ್’ ಕೂಡ ಟಿಎಸ್‌ಪಿಯಲ್ಲಿ ಇರಬೇಕು. ಇಂತದೊಂದು ಸೌಲಭ್ಯ ಕೊಡಲು ಶುಲ್ಕ ಪಡೆಯುವುದಕ್ಕೆ ಟ್ರಾಯ್ ನಿರ್ಬಂಧವನ್ನೇನೂ ಹೇರಿಲ್ಲ. ಕೆಲ ಕಾಲದ ಮಟ್ಟಿಗೆ ಬೇರೆ ದೇಶಕ್ಕೆ ತೆರಳಿರುವ ಗ್ರಾಹಕರು ಇದರ ಉಪಯೋಗ ಪಡೆಯಬಹುದು. ತನ್ನೆಲ್ಲ ಎಚ್ಚರಿಕೆಗಳನ್ನೂ ಮೀರಿ ಒಂದು ಸಿಮ್ ನಂಬರ್ ಗ್ರಾಹಕನ ಕೈತಪ್ಪಿದರೂ ಅದನ್ನು ಬೇರೆಯವರಿಗೆ ನೀಡಲಾಗಿಲ್ಲದ ಪಕ್ಷದಲ್ಲಿ ಆತನಿಗೆ ಮರಳಿಸುವ ಸಾಧ್ಯತೆಯನ್ನು ಈ ಸೌಲಭ್ಯ ಒದಗಿಸುತ್ತದೆ.
5. ಅಷ್ಟಕ್ಕೂ “ಬಳಕೆ ಇಲ್ಲದ ಅವಧಿ’ ಸಂಬಂಧ ಅನೂರ್ಜಿತಗೊಳಿಸುವ ಮುನ್ನ ಗ್ರಾಹಕರಿಗೆ ಮಾತಿ ಕೊಡುವುದು ಮೊಬೈಲ್ ಸೇವಾದಾತರಿಗೆ ಕಡ್ಡಾಯ. ಗ್ರಾಹಕರಿಗೆ ಈ ಮಾಹಿತಿ ತಲುಪಿಸುವ ವಿಧಾನಗಳ ಬಗ್ಗೆ ಮಾತ್ರ ಟ್ರಾಯ್ ವಿವರಿಸಿಲ್ಲ.
6. ಪೋಸ್ಟ್ ಪೇಯ್ಡ ಗ್ರಾಹಕರಿಗೆ ಇನ್ನೊಂದು ಹೆಚ್ಚಿನ ಸೌಲಭ್ಯವನ್ನು ತಿದ್ದುಪಡಿ ಕಲ್ಪಿಸಿದೆ. ಕೆಲ ಕಾಲದವರೆಗೆ ತನ್ನ ನಂಬರ್‌ಅನ್ನು ಬಳಸಲಾಗದ ಇಂತಹ ಗ್ರಾಹಕ ಟಿಎಸ್‌ಪಿಯ “ಸೇಫ್ ಕಸ್ಟಡಿ ಸ್ಕೀಮ್’ನ್ನು ಆಯ್ಕೆ ಮಾಡಿಕೊಳ್ಳಬಹುದು. ಒಂದು ನಿಶ್ಚಿತ ಅವಧಿಯವರೆಗೆ ಪೋಸ್ಟ್‌ಪೇಯ್ಡ ಸಿಮ್ ಚಾಲ್ತಿಯಲ್ಲಿದ್ದು ಗ್ರಾಹಕ ಬಳಸದಿದ್ದ ಈ ಕಾಲದಲ್ಲಿ ಬಾಡಿಗೆ ಶುಲ್ಕವನ್ನು ಗ್ರಾಹಕ ತೆರಬೇಕಾಗಿಲ್ಲ.
2012ರ ಲೆಕ್ಕದಲ್ಲಿ 180 ದಿನ ಕ್ರಿಯಾಶೀಲವಾಗಿಲ್ಲದ 55 ಮಿಲಿಯನ್ ಸಿಮ್‌ಗಳಿದ್ದವು. 30 ದಿನ ನಿಷ್ಕ್ರಿಯವಾಗಿದ್ದ 20 ಕೋಟಿ ಸಿಮ್ ಇತ್ತು. ಇವುಗಳಲ್ಲಿ 1,289 ಮಿಲಿಯನ್ ರೂ.ಗಳ ಟಾಕ್‌ಟೈಮ್ ಇದ್ದಿತ್ತು. ಇವುಗಳನ್ನು ಟಿಎಸ್‌ಪಿ ಮುಟ್ಟುಗೋಲು ಹಾಕಿಕೊಳ್ಳುತ್ತವೆ ಎಂದರೂ ಅವುಗಳಲ್ಲಿರುವ ಟಾಕ್‌ಟೈಮ್ ಯಾವುದೇ ಸೇವೆ ಕೊಡದ ಮೊಬೈಲ್ ಕಂಪನಿಗಳ ಬೊಕ್ಕಸ ಸೇರಬೇಕೆ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ. ಎಂದಿನಂತೆ ಟಿಎಸ್‌ಪಿಗಳಲ್ಲಿ ಬಹುಸಂಖ್ಯಾತರು ಅದು ನಮಗೆ ಸಿಗಬೇಕು ಎಂದು ವರಾತ ಹಚ್ಚಿದ್ದು ಸಹಜ. ಈ ಹಣವನ್ನು ಗ್ರಾಹಕರಿಗೆ ನೇರವಾಗಿ ತಲುಪಿಸಲಾಗದಿದ್ದರೆ ಟೆಲಿಕಮ್ಯುನಿಕೇಷನ್ ಕನ್ಸೂ$Âಮರ್‌ಗಳ ಎಜುಕೇಷನ್ ಮತ್ತು ಪೊ›ಟೆಕ್ಷನ್ ಫಂಡ್ ಟಿಸಿಇಪಿಎಫ್ಗೆ ವರ್ಗಾಯಿಸಬಹುದಲ್ಲ ಎಂಬ ಪ್ರಸ್ತಾಪ ಗ್ರಾಹಕ ಪರ ಸಂಘಟನೆಗಳಿಂದ ಬಂದಿತ್ತು.
ಮತ್ತೆ ಇವತ್ತಿಗೆ ಬರೋಣ. ಈ ವರ್ಷದ ಮೇ 31ರ ಅಂಕಿಅಂಶದಂತೆ ಭಾರತದಲ್ಲಿರುವ 1,204.98 ಮಿಲಿಯನ್ ದೂರವಾಣಿ ಸಂಪರ್ಕಗಳಲ್ಲಿ 1,180.82 ಮಿಲಿಯನ್ ಸಂಪರ್ಕ ನಿಸ್ತಂತು ಸ್ವರೂಪದ್ದು. ದೇಶದಲ್ಲಿ ಶೇ 93.61ರ ಟೆಲಿ ಸಾಂದ್ರತೆ ಇದೆ ಎನ್ನಬಹುದಾದರೂ ಗ್ರಾಮೀಣ ಭಾಗದಲ್ಲಿ ಟೆಲಿ ಸಾಂದ್ರತೆ ಶೇ. 57.55ನ್ನು ದಾಟಿಲ್ಲ. ನಗರದಲ್ಲಿ 172.28ರಷ್ಟಿದೆ. ಮೊಬೈಲ್‌ಗಳಲ್ಲಿ ಇಂದಿಗೂ 1,019.55 ಮಿಲಿಯನ್ ಮಾತ್ರ ಚಾಲ್ತಿಯಲ್ಲಿವೆ. ಅಂದರೆ 1.61 ಕೋಟಿ ಸಿಮ್ ತಟಸ್ಥವಾಗಿವೆ. 2012ರಲ್ಲಿ ಕಂಡುಕೊಂಡ ಸರಾಸರಿ ಲೆಕ್ಕದಂತೆ ಪ್ರತಿ ಸಿಮ್‌ನಲ್ಲಿ ಕೇವಲ ಆರು ರೂ. ಉಳಿದಿದೆ ಎಂದುಕೊಂಡರೂ ಹತ್ತಿರಹತ್ತಿರ 10 ಕೋಟಿ ರೂ. ಗ್ರಾಹಕರ ಹಣ ಅನಾಯಾಸವಾಗಿ ಮೊಬೈಲ್ ಸೇವಾದಾತರ ಬೊಕ್ಕಸ ಸೇರುವ ಸಾಧ್ಯತೆ ಇದೆ. ಟ್ರಾಯ್ ಈ ಬಗ್ಗೆ ಮಾತನಾಡಿಲ್ಲ ಎಂಬುದು ಈ ಹಣ ಟಿಎಸ್‌ಪಿಗಳ ಲಾಭಕ್ಕೆ ಸೇರಿದ್ದನ್ನು ಹೇಳುತ್ತಿದೆ. ಇದು ಸರಿಯೇ?
-ಮಾ.ವೆಂ.ಸ.ಪ್ರಸಾದ್, ದತ್ತಿ ನಿರ್ದೇಶಕರು, ಬಳಕೆದಾರರ ವೇದಿಕೆ, ಸಾಗರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dandeli: ಅಪರಿಚಿತ ವಾಹನ ಡಿಕ್ಕಿ; ಕರು ಸಾವು
Covid ಗಿಂತ ಬಿಜೆಪಿ ಭ್ರಷ್ಟಾಚಾರದಿಂದ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ: ಖಂಡ್ರೆ
Delhi: ಕ್ಷುಲ್ಲಕ ಕಾರಣಕ್ಕೆ 19ರ ಯುವಕನ ಗುಂಡಿಕ್ಕಿ ಹ*ತ್ಯೆಗೈದ ಅಪ್ರಾಪ್ತರು!!
BBK11: ಬಿಗ್‌ಬಾಸ್ ಆಟ ನಿಲ್ಲಿಸಿದ ಖ್ಯಾತ ಸ್ಪರ್ಧಿ.. ಈ ವಾರ ಆಚೆ ಬರುವುದು ಇವರೇ
Srinagar; ಉಗ್ರ ವಿರೋಧಿ ಕಾರ್ಯಾಚರಣೆ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ ಬಿಸ್ಕೆಟ್‌ಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.