ಕಾಸರಗೋಡಿನ ಸಾಹಿತ್ಯ ಲೋಕ – 209 ದಿ| ತಲೆಂಗಳ ಶಂಭಟ್ಟ ಭಾಗವತರು
Team Udayavani, Jul 24, 2017, 6:10 AM IST
ತೆಂಕುತಿಟ್ಟು ಯಕ್ಷಗಾನದ ತವರೂರು ಕಾಸರಗೋಡು. ಯಕ್ಷಗಾನದ ಆಟ-ಕೂಟ ಗಳೆರಡೂ ಖ್ಯಾತಿ ಪಡೆದಿರುವುದು ಈ ಪ್ರದೇಶದ ಕಲಾವಿದರಿಂದಲೇ. ಹಿಂದಿನಿಂತಲೇ ಅದನ್ನು ಉಳಿಸಿಕೊಂಡು ಬಂದವರು ಹೊಟ್ಟೆಗೂ ಬಟ್ಟೆಗೂ ಗತಿಯಿಲ್ಲದಿದ್ದರೂ ಸ್ವತಃ ಭಾಗವತರಾಗಿ, ಕವಿಯಾಗಿ, ಮೃದಂಗ – ಚೆಂಡೆ ವಾದಕರಾಗಿ, ಅರ್ಥಧಾರಿಗಳಾಗಿ, ವೇಷಧಾರಿಗಳಾಗಿ, ಮೇಳದ ಸಂಚಾಲಕರಾಗಿ ಶ್ರಮಿಸಿ ದುಡಿದವರೇ ಎಂಬು ದಂತು ಸತ್ಯವೇ. ಅಂತಹ ಮಹಾನ್ ವ್ಯಕ್ತಿಗಳಲ್ಲಿ “ಚಕ್ಕುಲಿ ಭಾಗವತರು’ ಎಂಬ ಅನ್ವರ್ಥ ನಾಮದಲ್ಲಿ ಪ್ರಸಿದ್ಧರಾದ ದಿ|ತಲೆಂಗಳ ಶಂಭಟ್ಟ ಭಾಗವತರೂ ಓರ್ವರು.
ಬಾಲ್ಯ-ಬದುಕು: ಕಾಸರಗೋಡು ತಾಲೂಕು ಬಾಯಾರು ಗ್ರಾಮದ ತಲೆಂಗಳ ಎಂಬಲ್ಲಿ ಪ್ರತಿಷ್ಠಿತ ಪದ್ಯಾಣ ಕುಟುಂಬದ ಕಿಟ್ಟಜ್ಜ ಎಂದೇ ಪ್ರಖ್ಯಾತರಾದ ಭಾಗವತ ಕೃಷ್ಣ ಭಟ್ ಮತ್ತು ಪರಮೇಶ್ವರಿ ದಂಪತಿಯರ ಪುತ್ರರಾಗಿ ದಿ|ತಲೆಂಗಳ ಶಂಭಟ್ಟರು 1907ನೇ ಇಸವಿ ದಶಂಬರ ತಿಂಗಳ 8ರಂದು ಜನಿಸಿದರು. ಅವರ ದೊಡ್ಡಪ್ಪ-ಚಿಕ್ಕಪ್ಪರೂ ಚೆಂಡೆ -ಮದ್ದಳೆಗಾರರಾಗಿದ್ದರು. ಗೋವಿಂದ ಯಾನೆ ಅಪ್ಪಯ್ಯ ಭಟ್ಟ, ವಿಷ್ಣು ಭಟ್ಟ, ಮದ್ದಳೆಗಾರ ಸುಬ್ರಾಯ ಭಟ್ಟ ಅವರ ಸಹೋದರರು.
ದಿ|ತಲೆಂಗಳ ಶಂಭಟ್ಟರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಗಾಳಿಯಡ್ಕದ ಶಾಲೆಯಲ್ಲಿ ಗಳಿಸಿದರು. ಯಕ್ಷಗಾನದಲ್ಲಿ ಆಸಕ್ತರಾದ ಅವರು ತಮ್ಮ 12ನೇಯ ವಯಸ್ಸಿನಲ್ಲಿ ತಂದೆಯವ ರೊಂದಿಗೆ ವಿಟ್ಲದ ಅರಮನೆಯಲ್ಲಿ ಜರಗುತ್ತಿದ್ದ ತಾಳಮದ್ದಳೆಯಲ್ಲಿ ಭಾಗವತಿಕೆಯನ್ನು ಆರಂಭಿಸಿ ದರು. ಮುಂದೆ ಬರೇ 6 ತಿಂಗಳ ಅವಧಿಯಲ್ಲಿ ಪರಂಪರಾಗತ ಕೋಡಂಗಿ ಕುಣಿತ, ಬಾಲಗೋಪಾಲ ನೃತ್ಯ, ಸ್ತ್ರೀವೇಷಗಳನ್ನು ಕುಣಿಸುವ ಸಭಾಲಕ್ಷಣದ ಪದ್ಯ ಹೇಳುವ ಸಾಮರ್ಥ್ಯ ಪಡೆದರು. ಅವರ ಭಾಗವತಿಕೆಯನ್ನು ಕೇಳಿ ಮೆಚ್ಚಿ ಆಗ ಇಚ್ಲಂಪಾಡಿ ಮೇಳ ನಡೆಸುತ್ತಿದ್ದ ಪಟೇಲ ಕೋಟ್ಯಣ್ಣ ಆಳ್ವರು ತನ್ನ ಮೇಳಕ್ಕೆ ಸಭಾ ಲಕ್ಷಣದ ಹಾಡು ಹೇಳಲು ಸೇರಿಸಿಕೊಂಡರು.
ಇಚ್ಲಂಪಾಡಿ ಮೇಳದಲ್ಲಿ ದಿ| ಬಲಿಪ ನಾರಾಯಣ ಭಾಗವತರಿಂದ ವಿವಿಧ ರಾಗ, ತಾಳ, ಗತಿ, ಲಯ, ರಂಗ ಸ್ಥಳದ ಅನುಭವ ಪಾತ್ರಗಳ ಔಚಿತ್ಯ ಗಳನ್ನು ಪಡೆದುಕೊಂಡರು. ತಮ್ಮ 15ನೇ ವಯಸ್ಸಿನಲ್ಲಿ ಮದ್ದಳೆಗಾರ ಯಚ್ಚಣ್ಣಯ್ಯರು ನಡೆಸುತ್ತಿದ್ದ ಕಟೀಲು ಮೇಳಕ್ಕೆ ಮವ್ವಾರು ಕಿಟ್ಟಣ್ಣ ಭಾಗವತರೊಂದಿಗೆ ಸಹಭಾಗವತರಾಗಿ ಸೇರಿದರು. ಕಟೀಲು ಮೇಳದಲ್ಲಿ ಸುಮಾರು 10 ವರ್ಷಗಳ ಕಾಲ ಭಾಗವತರಾಗಿ ದುಡಿದರು. ಅನಂತರ 3 ವರ್ಷ ಕೂಡ್ಲು ಮೇಳವನ್ನು ಯಜಮಾನನಾಗಿ ನಡೆಸಿದರು. ಅಗಲ್ಪಾಡಿ ಕುಂಞಿಕೃಷ್ಣ ಮಣಿಯಾಣಿ ಅವರ ನೇತೃತ್ವದ ಅಡೂರು ಮೇಳದಲ್ಲಿ ತಿರುಗಾಟ ಮಾಡಿದರು. ಅನಂತರ ಶ್ರೀ ಧರ್ಮಸ್ಥಳ, ಕುಂಡಾವು, ಮೂಲ್ಕಿ, ಇರುವೈಲು, ಮುಚ್ಚಾರು, ನಿಟ್ಟೆ, ಬಳ್ಳಂಬೆಟ್ಟು, ಶ್ರೀ ಆದಿ ಸುಬ್ರಹ್ಮಣ್ಯ ಮೊದಲಾದ ಮೇಳಗಳಲ್ಲಿ ಸುದೀರ್ಘವಾಗಿ ಭಾಗವತರಾಗಿ ಸೇವೆ ಸಲ್ಲಿಸಿದರು. ಅನೇಕ ಜೋಡಾಟಗಳನ್ನು ಆಡಿಸಿದ ಅನುಭವವು ಅವರಿಗಿದೆ. ಮುಂದೆ ಆರ್ಥಿಕ ಅಡಚಣೆಯಿಂದಾಗಿ ತಲೆಂಗಳದ ಆಸ್ತಿಯನ್ನು ಮಾರಿ ಪುತ್ತೂರು ಕುರಿಯ ಗ್ರಾಮದ ಡೆಮ್ಮಲೆ ಎಂಬಲ್ಲಿ ನೆಲಸಿದರು.
ಯಕ್ಷಗಾನ ಪ್ರಸಂಗ ರಚನೆ
ಯಕ್ಷಗಾನದ ಪಿತಾಮಹ ಪಾರ್ತಿಸುಬ್ಬನ ಶಾಸ್ತ್ರೋಕ್ತ ಲಕ್ಷÂ – ಲಕ್ಷಣಗಳನ್ನು ಶ್ರುತಿ, ತಾಳ, ಮದ್ಧಳೆ, ಚೆಂಡೆಗಳ ಮಿಳಿತದಲ್ಲಿ ಸೃಷ್ಟಿಸುವ ಶಕ್ತಿಯನ್ನು ಪಡೆದ ಅವರ ನಾದದ ಏರಿಳಿತ, ಬಿಡ್ತಿಕೆ, ಮುಕ್ತಾಯದ ಗತ್ತುಗಳು, ರಾಗ ವೈವಿಧ್ಯದ ಪ್ರಾರಂಭದ ಆವಿಷ್ಕಾರ, ಕಾಲೋಚಿತ ರಾಗಗಳ ಬಳಕೆ ಕರತಲಾಮಲಕವಾಗಿದ್ದವು.
ದಿ| ಶಂಭಟ್ಟ ಭಾಗವತರು ಸುಮಾರು 15ರಷ್ಟು ಪ್ರಸಂಗಗಳನ್ನು ರಚಿಸಿರುತ್ತಾರೆ. ಚಂದ್ರಕಾಂತಿ ಕಲ್ಯಾಣ, ಬಲಭದ್ರ ಪ್ರತಾಪ, ಗರುಡೋದ್ಭವ, ರತ್ನಾವತಿ ಕಲ್ಯಾಣ, ದುಂದುಬಿ ಆಖ್ಯಾನ, ಕೊಲ್ಲೂರು ಕ್ಷೇತ್ರ ಮಹಾತೆ¾, ಚಿತ್ರಾಕ್ಷಿ ಕಲ್ಯಾಣ, ಕಾರ್ತವೀರ್ಯಾರ್ಜುನ ಕಾಳಗ, ಸಂಪೂರ್ಣ ಕುರುಕ್ಷೇತ್ರ, ಸುಂದೋಪ ಸುಂದರ ಕಾಳಗ, ಮಧು ಮಾನ್ಯ ಕಾಳಗ, ಹಂಸವತೀ ಕಲ್ಯಾಣ, ಅಕ್ಷಯಾಂಬರ ವಿಲಾಸ ಮೊದಲಾದ ಪ್ರಸಂಗಗಳಲ್ಲಿ ಅಕ್ಷಯಾಂಬರ ವಿಲಾಸ ಪ್ರಸಂಗವನ್ನು ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯವರು ಪ್ರಕಟಿಸಿರುತ್ತಾರೆ. ಮಿಕ್ಕುಳಿದವುಗಳೆಲ್ಲವೂ ಅಪ್ರಕಟಿತವಾಗಿಯೇ ಉಳಿದಿವೆ.
ದಿ| ತಲೆಂಗಳ ಶಂಭಟ್ಟ – ಪಾರ್ವತಿ ದಂಪತಿಗಳಿಗೆ 3 ಮಂದಿ ಪುತ್ರರು. ಹಿರಿಯರಾದ ಗೋಪಾಲಕೃಷ್ಣ ಭಟ್ಟರು ಹಿಮ್ಮೇಳವಾದಕರಾಗಿದ್ದರು. ಎರಡನೆಯ ಕೃಷ್ಣ ಭಟ್ಟರು ತಂದೆಯಂತೆಯೇ ಪರಂಪರಾಗತ ಶೈಲಿಯ ಭಾಗವತರಾಗಿದ್ದರು. ಮೂರನೆಯ ಶಿವರಾಮ ಭಟ್ಟರು ಕೃಷಿಕರು.
ತೆಂಕುತಿಟ್ಟು ಯಕ್ಷಗಾನದಲ್ಲಿ ಯಕ್ಷ ಕುಬೇರನಾಗಿ ಮೆರೆದ ದಿ|ತಲೆಂಗಳ ಶಂಭಟ್ಟರಿಗೆ ಧನಲಕ್ಷಿ$¾ ಮಾತ್ರ ಒಲಿಯಲಿಲ್ಲ ಎಂಬುದು ವಿಪರ್ಯಾಸವಾಗಿದೆ. ಈ ಹಿರಿಯ ಜೀವ 1983 ಜುಲೈ ತಿಂಗಳ 22ರಂದು ಅಸ್ತಂಗತವಾಯಿತು. ಅವರ ಅಪ್ರಕಟಿತ ಪ್ರಸಂಗಗಳನ್ನೆಲ್ಲಾ ಸಂಪಾದಿಸಿ ಪ್ರಕಟಿಸಿ ರಂಗ ಪ್ರಯೋಗಕ್ಕೆ ತರಬೇಕಾದುದು ಅತ್ಯವಶ್ಯವಾಗಿದೆ. ಈ ನಿಟ್ಟಿನಲ್ಲಿ ಕೇರಳ ಸರಕಾರ ರಚಿಸಿದ ಪಾರ್ತಿಸುಬ್ಬ ಯಕ್ಷಗಾನ ಕಲಾಕೆಂದ್ರ, ಕರ್ನಾಟಕ ಯಕ್ಷಗಾನ ಅಕಾ ಡೆಮಿ ಹಾಗೂ ನಾಡಿನ ಉದಾರಿಗಳು ಮುತುವರ್ಜಿ ವಹಿಸಿದರೆ ಸುಲಭ ಸಾಧ್ಯವಾದೀತು.
– ಕೇಳು ಮಾಸ್ತರ್, ಅಗಲ್ಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್, ಗಯಾನಾ ಪ್ರವಾಸ ಶುರು
Chhattisgarh: ನೀರಿನ ಬಾವೀಲಿ ಪೆಟ್ರೋಲ್: ಸಂಗ್ರಹಕ್ಕೆ ಮುಗಿಬಿದ್ದ ಜನ
Manipur: ಸಿಎಂ ಬಿರೇನ್ ಸಿಂಗ್ ಮನೆಗೆ ನುಗ್ಗಲು ಯತ್ನಿಸಿದ ಗುಂಪು; ಹೆಚ್ಚಿದ ಹಿಂಸಾಚಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.