ಲೋಕಸಭೆ: ಕೈಅಟಾಟೋಪ, 5 ದಿನಗಳ ಕಾಲ 6 ಸಂಸದರ ಅಮಾನತು
Team Udayavani, Jul 25, 2017, 8:30 AM IST
ಹೊಸದಿಲ್ಲಿ: ಸಂಸತ್ ಕಲಾಪಕ್ಕೆ ಅಡ್ಡಿಪಡಿಸುವುದು ಸಂಸದೀಯ ಮೌಲ್ಯಗಳ ಮೇಲೆ ಹಾನಿ ಮಾಡಿದಂತೆ ಎಂದು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಹೇಳಿ ಒಂದು ದಿನ ಕೂಡ ಕಳೆದಿಲ್ಲ. ಅಷ್ಟರಲ್ಲೇ ಕಾಂಗ್ರೆಸ್ ಸದಸ್ಯರು ಲೋಕಸಭೆಯಲ್ಲಿ ಅಸಭ್ಯ ನಡವಳಿಕೆ ಪ್ರದರ್ಶಿಸಿ ಸ್ಪೀಕರ್ ಆಕ್ರೋಶಕ್ಕೆ ಕಾರಣರಾಗಿದ್ದಾರೆ. ಪರಿಣಾಮ 6 ಮಂದಿ ಕಾಂಗ್ರೆಸ್ ಸಂಸದರನ್ನು ಸ್ಪೀಕರ್ ಸುಮಿತ್ರಾ ಮಹಾಜನ್ ಐದು ದಿನಗಳ ಕಾಲ ಅಮಾನತು ಮಾಡಿದ್ದಾರೆ. ದೇಶಾದ್ಯಂತ ಅಲ್ಪಸಂಖ್ಯಾಕರು, ದಲಿತರ ಮೇಲೆ ವ್ಯಾಪಕ ಹಲ್ಲೆ ನಡೆಯುತ್ತಿದೆ ಎಂದು ಆರೋಪಿಸಿ, ಸೋಮವಾರ ಈ ಬಗ್ಗೆ ಚರ್ಚೆಗೆ ಅವಕಾಶ ನೀಡಿಲ್ಲ ಎಂಬ ನೆವದಲ್ಲಿ ಕಾಂಗ್ರೆಸ್ ಸಂಸದರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೆ ಸಂಸತ್ ಅಧಿಕಾರ ವರ್ಗದ ಟೇಬಲ್ ಮೇಲಿದ್ದ ಕಾಗದ ಪತ್ರಗಳನ್ನು ಸ್ಪೀಕರ್ ಅವರ ಮೇಲೆ ಎಸೆದಿದ್ದು, ಅಮಾನತು ಘಟನೆಗೆ ಕಾರಣವಾಗಿದೆ.
ಸಂಸದರ ಈ ನಡವಳಿಕೆ ‘ತೀರಾ ಅನಪೇಕ್ಷಿತ’ ಎಂದು ಸ್ಪೀಕರ್ ಖಂಡಿಸಿದ್ದು, ಅಪರಾಹ್ನ 2 ಗಂಟೆಗೆ ಲೋಕಸಭೆ ಸೇರಿದಾಗ ತನ್ನ ಆದೇಶವನ್ನು ಪ್ರಕಟಿಸಿದ್ದಾರೆ. ಸಂಸದರಾದ ಗೌರವ್ ಗೊಗೋಯ್, ಕೆ. ಸುರೇಶ್, ಅಧಿರ್ ರಾಜನ್ ಚೌಧರಿ, ರಂಜಿತ್ ರಂಜನ್, ಸುಷ್ಮಿತಾ ದೇವ್ ಮತ್ತು ಎಂ. ಕೆ. ರಾಘವನ್ ಅಮಾನತು ಶಿಕ್ಷೆಗೊಳಗಾದ ಸಂಸದರು. ಇದೇ ವೇಳೆ ಬಿಜೆಪಿ ಸದಸ್ಯರು ಕಾಂಗ್ರೆಸ್ ಸದಸ್ಯರತ್ತ ಶೇಮ್ ಶೇಮ್… ಎಂದು ಕೂಗಿದರು. ಬಳಿಕ 2.30ರ ವರೆಗೆ ಸದನವನ್ನು ಮುಂದೂಡಲಾಗಿದ್ದು, ಈ ವೇಳೆ ಸಂಸದ ಕೆ.ಸಿ. ವೇಣುಗೋಪಾಲ್ ನೇತೃತ್ವದಲ್ಲಿ ಕಾಂಗ್ರೆಸ್ ಸಂಸದರು ಎಲ್ಲ ಕಾಂಗ್ರೆಸಿಗರನ್ನು ಅಮಾನತು ಮಾಡುವಂತೆ ಕೂಗಿದರು. ಬಳಿಕ ದಿನದ ಮಟ್ಟಿಗೆ ಕಲಾಪ ಮುಂದೂಡಲಾಯಿತು.
ಪ್ರಕರಣ ಕುರಿತಂತೆ ತಮ್ಮ ಸದಸ್ಯರ ನಡವಳಿಕೆಯನ್ನು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಬೆಂಬಲಿಸದಿದ್ದರೂ ‘ಸ್ಪೀಕರ್ ಕಠಿನ ಶಿಕ್ಷೆ ನೀಡಿದ್ದು ಸರಿಯಲ್ಲ’ ಎಂದಿದ್ದಾರೆ. ನೂತನ ರಾಷ್ಟ್ರಪತಿಯವರ ಪ್ರಮಾಣ ವಚನ ಇರುವಾಗ ಇದು ಸರಿಯಲ್ಲ ಎಂದಿದ್ದಾರೆ. ಇದೇ ವೇಳೆ ಸಂಸದೀಯ ವ್ಯವಹಾರಗಳ ಸಚಿವ ಅನಂತ್ ಕುಮಾರ್ ಮಾತನಾಡಿ, ‘ಕಾಂಗ್ರೆಸ್ ಸದಸ್ಯರು ಮೊದಲು ನೋಟಿಸ್ ನೀಡಬೇಕಿತ್ತು. ಆದರೆ ಅದನ್ನು ಅವರು ಪಾಲಿಸದೆ ಕೆಟ್ಟದಾಗಿ ನಡೆದುಕೊಂಡಿದ್ದಾರೆ. ಇಡೀ ಸದನ ಇದನ್ನು ಖಂಡಿಸಿದೆ. ಅವರ ಇಂಥ ವರ್ತನೆಯನ್ನು ನಾವು ಒಪ್ಪುವುದಿಲ್ಲ’ ಎಂದು ಹೇಳಿದ್ದಾರೆ. ಇತ್ತ ಸದನ ಮುಂದೂಡಿಕೆ ಬಳಿಕ ವಿಪಕ್ಷಗಳೊಂದಿಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸಭೆ ನಡೆಸಿದ್ದು, ಮಂಗಳವಾರ ಸಂಸತ್ ಎದುರಿನ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸುವುದಾಗಿ ತೀರ್ಮಾನಿಸಿದ್ದಾರೆ.
ಇಡೀ ದೇಶವೇ ನೋಡಲಿ
‘ಲೋಕಸಭೆ ಕಲಾಪ ಕುರಿತ ಅಧಿಕೃತ ಕಾಗದ ಪತ್ರಗಳನ್ನು ಅಧಿಕಾರಿಗಳ ಟೇಬಲ್‌ನಿಂದ ಸಂಸದರು ಎಳೆದಿದ್ದು, ತಮ್ಮತ್ತ ಅವುಗಳನ್ನು ತೂರಿದ್ದಾರೆ. ಈ ಮೂಲಕ ಸ್ಪೀಕರ್ ಹುದ್ದೆಗೆ ಅಗೌರವ ತಂದಿದ್ದಾರೆ. ಅಧಿಕೃತ ಕಾಗದ ಪತ್ರಗಳನ್ನು ಎಸೆಯುವುದು ಅಪರಾಧವಾಗಿದೆ’ ಎಂದು ಆದೇಶದ ವೇಳೆ ಸ್ಪೀಕರ್ ಹೇಳಿದ್ದಾರೆ. ‘ತಾವು ಚರ್ಚೆಗೆ ಅವಕಾಶ ಮಾಡಿಕೊಡುವುದಾಗಿ ಹೇಳಿದ್ದರೂ ಸಂಸದರು ಈ ಕೆಟ್ಟ ನಡವಳಿಕೆ ಪ್ರದರ್ಶಿಸಿರುವುದು ಸ್ವೀಕಾರಾರ್ಹವಲ್ಲ ಎಂದು ಮಹಾಜನ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಜತೆಗೆ, ಸಂಸದರ ಈ ಆಕ್ಷೇಪಾರ್ಹ ನಡೆಯನ್ನು ಇಡೀ ದೇಶವೇ ನೋಡಬೇಕು. ಅವರ ವರ್ತನೆಯನ್ನು ದೇಶಕ್ಕೆ ತೋರಿಸಿ ಎಂದು ಆಕ್ರೋಶಭರಿತರಾಗಿ ನುಡಿದದ್ದೂ ಕಂಡುಬಂತು.
ಲೋಕಸಭೆಯಲ್ಲಿ ಕಾಂಗ್ರೆಸ್ ಸದಸ್ಯರ ನಡವಳಿಕೆಯಿಂದ ತೀವ್ರ ನೋವಾಗಿದೆ. ಯಾವುದೇ ವಿಚಾರ ಎತ್ತದಂತೆ ನಾನು ಅವರನ್ನು ತಡೆದಿಲ್ಲ. ಪ್ರಶ್ನೋತ್ತರ ಅವಧಿಯಲ್ಲಿ ಅವರಿಗೆ ಪ್ರಸ್ತಾವಿಸುವ ಅವಕಾಶ ಇತ್ತು.
– ಸುಮಿತ್ರಾ ಮಹಾಜನ್, ಲೋಕಸಭಾ ಸ್ಪೀಕರ್
– ಸ್ಪೀಕರ್‌ಗೆ ಕಾಗದ ಎಸೆದ ಕಾಂಗ್ರೆಸ್ ಸದಸ್ಯರು
– 5 ದಿನಗಳ ಕಾಲ ಆರು ಸಂಸದರ ಅಮಾನತು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.