ದೇಶದ ಸಾರೋಟಿಗೆ ಕೋವಿಂದ ಸಾರಥಿ
Team Udayavani, Jul 26, 2017, 8:10 AM IST
ಲಿಮೋಸಿನ್ ಕಾರಲ್ಲಿ ಸೆಂಟ್ರಲ್ ಹಾಲ್‌ಗೆ ಜತೆಯಾಗಿ ಆಗಮಿಸಿದ ಹಾಲಿ-ಮಾಜಿ ರಾಷ್ಟ್ರಪತಿಗಳು
ನವದೆಹಲಿ/ಕೋಲ್ಕತಾ: ದೇಶದ 14ನೇ ರಾಷ್ಟ್ರಪತಿಯಾಗಿ ರಾಮನಾಥ್ ಕೋವಿಂದ್ ಅವರು ಪ್ರಮಾಣ ಸ್ವೀಕರಿಸುವ ಮುನ್ನ ಎಂದಿನಂತೆ ಹಲವು ಶಿಷ್ಟಾಚಾರಗಳನ್ನು ಪಾಲಿಸಲಾಯಿತು. ಅದರಂತೆ, ಮಂಗಳವಾರ ಬೆಳಗ್ಗೆ ನವದೆಹಲಿಯ ಅಕºರ್ ರಸ್ತೆಯಲ್ಲಿರುವ ರಾಮನಾಥ್ ಕೋವಿಂದ್‌ರ ನಿವಾಸಕ್ಕೆ ರಾಷ್ಟ್ರಪತಿಗಳ ಮಿಲಿಟರಿ ಸೆಕ್ರೆಟರಿ ಮೇ.ಜ.ಅನಿಲ್ ಖೋಸ್ಲಾ ಆಗಮಿಸಿ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದರು. ಇದೇ ವೇಳೆ, ಕೋವಿಂದ್ ಪತ್ನಿ ಸವಿತಾರನ್ನೂ ಆಹ್ವಾನಿಸಲಾಯಿತು. ಅವರನ್ನು ಕುದುರೆ ಸಾರೋಟಿನಲ್ಲಿ ರಾಷ್ಟ್ರಪತಿ ಭವನಕ್ಕೆ ಕರೆತರಲಾಯಿತು. ಈ ಸಂದರ್ಭದಲ್ಲಿ ಪ್ರಣಬ್ ಮುಖರ್ಜಿ ಅವರು ರಾಷ್ಟ್ರಪತಿಯಾಗಿ ಬೆಂಗಾವಲು ಪಡೆಯಿಂದ ಕೊನೆಯ ಗೌರವ ವಂದನೆ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಕೋವಿಂದ್ ಕೂಡ ಇದ್ದರು. ನಂತರ ಕಪ್ಪು ಲಿಮೋಸಿನ್ ಕಾರಿನಲ್ಲಿ ಇಬ್ಬರೂ ಜತೆಯಾಗಿ ಸಂಸತ್‌ನ ಸೆಂಟ್ರಲ್ ಹಾಲ್‌ಗೆ ಆಗಮಿಸಿದರು.
ಕಾರಿನ ಎಡ ಮತ್ತು ಬಲಭಾಗದಲ್ಲಿ ರಾಷ್ಟ್ರಪತಿಯ ಬೆಂಗಾವಲು ಪಡೆ ಮತ್ತು ಸೇನಾ ಪಡೆಯ ಅಶ್ವಾರೋಹಿ ದಳದ 1 ಸಾವಿರ ಸಿಬ್ಬಂದಿ ಇದ್ದರು. ಸಂಸತ್ ಭವನದ 5ನೇ ಗೇಟ್ ಪ್ರವೇಶಿಸುತ್ತಿದ್ದಂತೆಯೇ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ, ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್ ಮತ್ತು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೆಹರ್ ಹಾಜರಿದ್ದರು. ಅವರೆಲ್ಲರೂ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಬಂದರು.
ಪ್ರಮಾಣ ಬೋಧಿಸಿದ ಸಿಜೆಐ.
ಪ್ರಮಾಣ ಸ್ವೀಕಾರದ ಬಳಿಕ ಕೋವಿಂದ್ ಹಾಗೂ ಮುಖರ್ಜಿ ರಾಷ್ಟ್ರಪತಿ ಭವನಕ್ಕೆ ಆಗಮಿಸಿದರು. ಕೋವಿಂದ್ ಭವನ ರಿಜಿಸ್ಟರ್‌ನಲ್ಲಿ ಸಹಿ ಹಾಕುವ ಮೂಲಕ ಅಧಿಕಾರ ಸ್ವೀಕರಿಸಿದರು. ನಂತರ ಭವನದಿಂದ ಹೊರಗೆ ಬಂದು ಆರು ಕುದುರೆಗಳ ಸಾರೋಟಿನಲ್ಲಿ ಸಂಚರಿಸಿದರು. ಪ್ರಣಬ್ ಮುಖರ್ಜಿ ಈ ಹುದ್ದೆಗೆ ಏರಿದ ಬಳಿಕ ಸಾರೋಟು ಸಂಚಾರ ಪುನಾರಂಭಿಸಿದ್ದರು. ಪ್ರಮಾಣ ಸ್ವೀಕಾರದ ಬಳಿಕ ನೂತನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನಿಕಟಪೂರ್ವ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ರಾಷ್ಟ್ರಪತಿ ಭವನದಿಂದ ಗೌರವ ವಂದನೆ ಮೂಲಕ ಹೊರಕ್ಕೆ ಕರೆದುಕೊಂಡು ಬಂದರು. ರಾಜಾಜಿ ಮಾರ್ಗ್‌ನಲ್ಲಿ ಅವರಿಗಾಗಿ ಮೀಸಲಾಗಿ ಇರಿಸಿದ ನಿವಾಸಕ್ಕೆ ಬೀಳ್ಕೊಟ್ಟರು.
ದೆಹಲಿ ಸಿಎಂ-ಟಿಎಂಸಿ ನಾಯಕ ಡೆರಿಕ್ ಚರ್ಚೆ: ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಮತ್ತು ಟಿಎಂಸಿ ಸಂಸದ ಡೆರಿಕ್ ಒ ಬ್ರಿಯಾನ್ ಪಕ್ಕದಲ್ಲೇ ಕುಳಿತು, ಬಹಳ ಹೊತ್ತಿನವರೆಗೆ ಗಹನವಾಗಿ ಚರ್ಚಿಸುತ್ತಿದ್ದರು. ಇಬ್ಬರು ನಾಯಕರೂ ಪ್ರಧಾನಿ ಮೋದಿಯವರ ಪ್ರಬಲ ಟೀಕಾಕಾರರು ಎನ್ನುವುದು ಗಮನಾರ್ಹ.
ಉ.ಪ್ರ. ಸಿಎಂ ಯೋಗಿ ಆಕರ್ಷಣೆ:
ಗಣ್ಯಾತಿಗಣ್ಯರು ಹಾಜರಿದ್ದರೂ ಬಿಜೆಪಿ ನಾಯಕರ ಆಕರ್ಷಣೆಗೆ ಕಾರಣರಾದದ್ದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್. ಕೋವಿಂದ್ ಅವರ ಪ್ರಮಾಣ ಸ್ವೀಕಾರ ಮುಕ್ತಾಯವಾದ ಬಳಿಕ ಬಿಜೆಪಿ ಸಂಸದರು ಯೋಗಿ ಅವರನ್ನು ಸುತ್ತುವರಿದರು. ಹೆಚ್ಚಿನ ಬಿಜೆಪಿ ಸಂಸದರು ಅವರ ಕಾಲು ಮುಟ್ಟಿ ಆಶೀರ್ವಾದ ಪಡೆದರೆ, ಮತ್ತೆ ಕೆಲವರು ಸಿಎಂ ಕೈ ಕುಲುಕಿದರು. ಹಲವು ಪ್ರಮುಖ ರಾಜ್ಯಗಳ ರಾಜ್ಯಪಾಲರು, ಮುಖ್ಯಮಂತ್ರಿಗಳು, ಮಾಜಿ ಮುಖ್ಯಮಂತ್ರಿಗಳು, ವಿವಿಧ ರಾಜಕೀಯ ಪಕ್ಷಗಳ ನೇತಾರರು ಕೂಡ ಯೋಗಿ ಸುತ್ತ ನೆರೆದಿದ್ದರು.
ಮೊದಲ ಸಾಲಿನಲ್ಲಿ ರಾಹುಲ್ ಗಾಂಧಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮೊದಲ ಸಾಲಿನಲ್ಲಿ ಕುಳಿತಿದ್ದರು. ಅವರ ಜತೆ ಲೋಕಸಭೆಯಿಂದ ಹೊರಹಾಕಲ್ಪಟ್ಟ ಪಕ್ಷದ ಸಂಸದರಾದ ಎಂ.ಕೆ.ರಾಘವನ್, ಗೌರವ್ ಗೊಗೊಯ್, ಸುಷ್ಮಿತಾ ದೇವ್,ರಂಜಿತ್ ರಂಜನ್ ಇದ್ದರು. ಮೊದಲ ಸಾಲಿನಲ್ಲಿ ಮೋದಿ, ದೇವೇಗೌಡ ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್, ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಮೊದಲ ಸಾಲಿನಲ್ಲಿದ್ದರು. ಕೋವಿಂದ್ ಪ್ರಮಾಣ ಸ್ವೀಕರಿಸಿದ ಬಳಿಕ ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಆಗಮಿಸಿ ಅಚ್ಚರಿಗೆ ಕಾರಣರಾದರು. ಮೊದಲ ಸಾಲಿನಲ್ಲಿಯೇ ಕುಳಿತಿದ್ದ ಎನ್‌ಡಿಎ ಉಪರಾಷ್ಟ್ರಪತಿ ಅಭ್ಯರ್ಥಿ ಎಂ.ವೆಂಕಯ್ಯ ನಾಯ್ಡು ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮಾತುಕತೆ ನಡೆಸುತ್ತಿದ್ದರು. ಇಬ್ಬರು ನಾಯಕರೂ ಅಕ್ಕಪಕ್ಕದಲ್ಲಿಯೇ ಕುಳಿತಿದ್ದರು.
ಟ್ವಿಟರ್‌ನಲ್ಲಿ ಹೊಸ ರೂಪ
ಕೋವಿಂದ್ ಪ್ರಮಾಣ ಸ್ವೀಕರಿಸುತ್ತಿದ್ದಂತೆ ರಾಷ್ಟ್ರಪತಿ ಭವನದ ವೆಬ್‌ಸೈಟ್, ಟ್ವಿಟರ್ ಖಾತೆ ಹೊಸ ರೂಪ ಪಡೆದುಕೊಂಡಿದೆ. ನಿಕಟಪೂರ್ವ ರಾಷ್ಟ್ರಪತಿ ಪ್ರಣಬ್ ಅವರ ಟ್ವಿಟರ್ ಖಾತೆ ಇನ್ನು
@CitiznMukherjee ಎಂಬ ಹ್ಯಾಂಡಲ್‌ನಲ್ಲಿ ಸಿಗಲಿದೆ. ಜತೆಗೆ ಮುಖರ್ಜಿ ಅವಧಿಯಲ್ಲಿ ಮಾಡಲಾಗಿರುವ ಟ್ವೀಟ್‌ಗಳನ್ನೆಲ್ಲ @POI13 ಎಂಬ ಹ್ಯಾಂಡಲ್‌ನಲ್ಲಿ ಸಂಗ್ರಹಿಸಿ ಇರಿಸಲಾಗಿದೆ. ನೂತನ ರಾಷ್ಟ್ರಪತಿ ಕೋವಿಂದ್ ತಮ್ಮ ಪ್ರಮಾಣ ಸ್ವೀಕಾರದ ಫೋಟೋ, ಭಾಷಣವನ್ನು ವೈಯಕ್ತಿಕವಾಗಿ ಹಂಚಿಕೊಂಡಿದ್ದಾರೆ. ರಾಷ್ಟ್ರಪತಿ ಭವನದ ವೆಬ್‌ಸೈಟ್ ಕೂಡ ರೂಪಾಂತರಗೊಳ್ಳುತ್ತಿದೆ. ಅದರಲ್ಲಿ ಫೋಟೋಗಳನ್ನು ಅಪ್‌ಲೋಡ್ ಮಾಡಲಾಗಿದ್ದರೂ, ರಾಷ್ಟ್ರಪತಿ ಹೆಸರಿನ ಸ್ಥಾನದಲ್ಲಿ ಪ್ರಣಬ್ ಮುಖರ್ಜಿ ಎಂದೇ ಇದೆ.
ಪ್ರಧಾನಿ ಅಭಿನಂದನೆ
ರಾಷ್ಟ್ರಪತಿಯಾಗಿ ಪ್ರಮಾಣ ಸ್ವೀಕರಿಸಿದ ಕೋವಿಂದ್‌ರನ್ನು ಪ್ರಧಾನಿ ಮೋದಿ ಅಭಿನಂದಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು ’14ನೇ ರಾಷ್ಟ್ರಪತಿಯಾಗಿ ಅವರು ಮಾಡಿದ ಭಾಷಣ ಉತ್ತಮವಾಗಿತ್ತು. ದೇಶದ ಶಕ್ತಿ, ಪ್ರಜಾಸತ್ತಾತ್ಮಕ ವ್ಯವಸ್ಥೆ, ವಿವಿಧತೆಯಲ್ಲಿನ ಏಕತೆಯ ಸಮಗ್ರ ವಿಚಾರ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ’ ಎಂದು ಬರೆದಿದ್ದಾರೆ. ಇದಕ್ಕೂ ಮುನ್ನ ಬಿಜೆಪಿ ಸಂಸದೀಯ ಸಭೆಯಲ್ಲಿ ಮಾತ ನಾಡಿದ್ದ ಮೋದಿ, 2014ರ ಚುನಾವಣೆಯಲ್ಲಿ ಗೆದ್ದ ಬಳಿಕ ದಲಿತ ಸಮುದಾಯಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡಲು ಬಿಜೆಪಿ ಯೋಚಿಸಿತ್ತು. ರಾಷ್ಟ್ರಪತಿ ಚುನಾವಣೆ ಮೂಲಕ ಅದನ್ನು ಪೂರೈಸಲಾಗಿದೆ ಎಂದಿದ್ದರು.
ಮೋದಿ – ದೀದಿ ಫ್ರೆಂಡ್ಸ್?
ಪ್ರಧಾನಿ ಮೋದಿ ವಿರುದ್ಧ ಆಗಾಗ ಆಕ್ರೋಶ ವ್ಯಕ್ತಪಡಿಸುವ ಪಶ್ಚಿಮ ಬಂಗಾಳ ಸಿಎಂ ಮಮತಾ ಕಾರ್ಯಕ್ರಮದಲ್ಲಿ ಪ್ರಧಾನಿಯವರನ್ನು ಕೆಲ ಕ್ಷಣ ಭೇಟಿಯಾಗಿದ್ದರು. ಅವರಿಬ್ಬರೂ ‘ನಮಸ್ತೆ’ ಎಂದು ಗೌರವ ವಿನಿಮಯ ಮಾಡಿಕೊಂಡರು. ಜತೆಗೆ ಕೆಲ ಕ್ಷಣಗಳ ಕಾಲ ಅನೌಪಚಾರಿಕ ಮಾತುಕತೆ ನಡೆಸಿದರು. ಆದರೆ ಮಾಜಿ ಸ್ಪೀಕರ್ ಮೀರಾ ಕುಮಾರ್ ಮತ್ತು ಬಿಹಾರ ಸಿಎಂ ನಿತೀಶ್ ನಡುವೆ ಯಾವುದೇ ಮಾತುಕತೆ ನಡೀಲಿಲ್ಲ. ಹತ್ತಿರವೇ ಕುಳಿತಿದ್ದರೂ ಮೌನವಾಗಿದ್ದರು.
ಶಿಕ್ಷೆ ಕಡಿಮೆ ಮಾಡಿ: ನ್ಯಾ.ಕರ್ಣನ್ ಮನವಿ
ರಾಷ್ಟ್ರಪತಿಯಾಗಿ ರಾಮನಾಥ್ ಕೋವಿಂದ್ ಅಧಿಕಾರ ಸ್ವೀಕರಿಸುತ್ತಿದ್ದಂತೆಯೇ ಮೊದಲ ಮನವಿ ಸಲ್ಲಿಕೆಯಾದದ್ದು ಕಲ್ಕತ್ತಾ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಸಿ.ಎಸ್.ಕರ್ಣನ್‌ರಿಂದ. ಸುಪ್ರೀಂಕೋರ್ಟ್‌ನಿಂದ 6 ತಿಂಗಳ ಶಿಕ್ಷೆಗೆ ಗುರಿಯಾಗಿರುವ ಅವರು ತಮ್ಮ ನ್ಯಾಯವಾದಿ ಮ್ಯಾಥ್ಯೂಸ್ ಜೆ.ನೆಡುಂಪಾರ ಮೂಲಕ ಮನವಿ ಮಾಡಿದ್ದಾರೆ. ನೂತನ ರಾಷ್ಟ್ರಪತಿ ಭೇಟಿಗೆ ಸಾಧ್ಯವಾಗುವ ನಿಟ್ಟಿನಲ್ಲಿಯೂ ಪ್ರಯತ್ನ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಜೂ.20 ರಂದು ನ್ಯಾ.ಕರ್ಣನ್‌ರನ್ನು ಪೊಲೀಸರು ಬಂಧಿಸಿದ್ದರು.
ವಿವಿಧ ರಾಜ್ಯಗಳು, ಪ್ರದೇಶಗಳು, ಭಾಷೆಗಳು, ಸಂಸ್ಕೃತಿಗಳು, ಜೀವನ ಕ್ರಮವೇ ಭಾರತ. ನಮ್ಮದು ವಿವಿಧತೆಯಲ್ಲಿ ಏಕತೆ ಹೊಂದಿರುವ ರಾಷ್ಟ್ರ. ನಾವು ವಸುದೈವ ಕುಟುಂಬಕಂ ಎಂಬ ತತ್ವವನ್ನು ನಂಬಿಕೊಂಡು ಬಂದಿದ್ದೇವೆ. ಭಾರತವು ವಿಶ್ವದ ಇತರ ಭಾಗಗಳಿಗೆ ಶಾಂತಿ ಮತ್ತು ನೆಮ್ಮದಿ, ಸಮಾನತೆ ಪಸರಿಸುವ ಸ್ಥಳವಾಗಬೇಕು.
– ರಾಮನಾಥ್ ಕೋವಿಂದ್, ರಾಷ್ಟ್ರಪತಿ
ಪ್ರಮಾಣ ಸ್ವೀಕಾರದ ಬಳಿಕ ರಾಷ್ಟ್ರಪತಿ ಕೋವಿಂದ್ ಅವರಿಗೆ ಗಣ್ಯರಿಂದ ಅಭಿನಂದನೆ.
ಕೋವಿಂದ್, ಪತ್ನಿ ಸವಿತಾರನ್ನು ಸ್ವಾಗತಿಸುತ್ತಿರುವ ಪ್ರಣಬ್ ಮುಖರ್ಜಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP: ರಾಜ್ಯಗಳಿಂದಲೇ ಮಾಲಿನ್ಯ ಹೆಚ್ಚಳ: ದಿಲ್ಲಿ ಸಿಎಂ ಆತಿಶಿ ಆರೋಪ
Maharashtra Elections: ವಿಪಕ್ಷ ನಾಯಕ ರಾಹುಲ್ ಛೋಟಾ ಪೋಪಟ್: ಬಿಜೆಪಿ ವಕ್ತಾರ ಲೇವಡಿ
Rahul Gandhi: ಮೋದಿ, ಅದಾನಿ, ಅಂಬಾನಿ ಒಟ್ಟಾದರೆ ಸುರಕ್ಷಿತ, ಇದೇ ಅರ್ಥ
Nirmala Sitharaman: ಬ್ಯಾಂಕುಗಳು ಬಡ್ಡಿದರ ಕೈಗೆಟಕುವಂತೆ ಕ್ರಮ ಕೈಗೊಳ್ಳಬೇಕು
Akhilesh Yadav: ಉ.ಪ್ರ.ದಲ್ಲಿ ಬಾಬಾ ಸಾಹೇಬ್ ಮತ್ತು ಬಾಬಾ ನಡುವಿನ ಹೋರಾಟ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.