ಮೆಟ್ರೋಗೆ ಹಕ್ಕುಚ್ಯುತಿ ಶಿಫಾರಸ್ಸಿನ ಎಚ್ಚರಿಕೆ
Team Udayavani, Jul 26, 2017, 11:53 AM IST
ಬೆಂಗಳೂರು: “ಮೆಟ್ರೋದಲ್ಲಿ ಹಿಂದಿ ಹೇರಿಕೆ ಸಮಸ್ಯೆ ತಕ್ಷಣ ಬಗೆಹರಿಸಬೇಕು. ಇಲ್ಲದಿದ್ದರೆ, ನಿಗಮದ ಅಧಿಕಾರಿಗಳಿಂದ ಹಕ್ಕುಚ್ಯುತಿ ಆಗಿದೆ ಎಂದು ಸರ್ಕಾರಕ್ಕೆ ಪತ್ರ ಬರೆಯಬೇಕಾಗುತ್ತದೆ. ಹಾಗೂ ಇದು ಅನಿವಾರ್ಯವೂ ಆಗಲಿದೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಎಚ್ಚರಿಸಿದೆ.
“ನಮ್ಮ ಮೆಟ್ರೋದಲ್ಲಿ ಹಿಂದಿ ಹೇರಿಕೆ’ ಆರೋಪ ಕೇಳಿಬರುತ್ತಿರುವ ಬೆನ್ನಲ್ಲೇ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಮೆಟ್ರೋದಲ್ಲಿ ಕನ್ನಡ ಅನುಷ್ಠಾನ ಪರಿಶೀಲನೆ ನಡೆಸಿತು. ನಂತರ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿ)ದ ಅಧಿಕಾರಿಗಳಿ ಈ ಸೂಚನೆ ನೀಡಿತು.
ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ. ಸಿದ್ದರಾಮಯ್ಯ, ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ 61 ವಿವಿಧ ನಿಗಮಗಳಲ್ಲಿ ಬಿಎಂಆರ್‌ಸಿ ಕೂಡ ಒಂದು. ಉಳಿದೆಲ್ಲ ನಿಗಮಗಳಿಗೆ ಅನ್ವಯವಾಗುವ ನಿಯಮಗಳು ಬಿಎಂಆರ್‌ಸಿಗೂ ಅನ್ವಯ ಆಗುತ್ತವೆ.
ಹಾಗಾಗಿ, ರಾಜ್ಯ ಸರ್ಕಾರದ ಭಾಷಾ ನೀತಿ “ನಮ್ಮ ಮೆಟ್ರೋ’ಗೂ ಅನ್ವಯಿಸುತ್ತದೆ. ಆ ಭಾಷಾ ನೀತಿಯ ಅನುಷ್ಠಾನಕ್ಕಾಗಿಯೇ ಕನ್ನಡ ಅಭಿವೃದ್ಧಿ ಪ್ರಾಧಿಕಾರವಿದ್ದು, ಅದರ ಸೂಚನೆಯಂತೆ ಹಿಂದಿಯನ್ನು ತೆಗೆಯಬೇಕು. ಇಲ್ಲದಿದ್ದರೆ, ಸರ್ಕಾರದ ಆದೇಶಗಳ ಉಲ್ಲಂಘನೆ ಹಿನ್ನೆಲೆಯಲ್ಲಿ ಬಿಎಂಆರ್‌ಸಿಯಿಂದ ಹಕ್ಕುಚ್ಯುತಿ ಆಗಿದೆ ಎಂದು ಸರ್ಕಾರಕ್ಕೆ ಶಿಫಾರಸ್ಸು ಮಾಡುವುದು ಅನಿವಾರ್ಯ ಆಗಲಿದೆ ಎಂದು ಎಚ್ಚರಿಸಿದರು.
2011ರಿಂದ ಈವರೆಗೆ ಮೆಟ್ರೋದಲ್ಲಿ ಕನ್ನಡ ಅನುಷ್ಠಾನ ವಿಚಾರದಲ್ಲಿ ಯಾರ್ಯಾರಿಂದ ಯಾವ್ಯಾವ ರೀತಿ ತಪ್ಪುಗಳಾದವು ಎನ್ನುವುದರ ಬಗ್ಗೆಯೂ ಸರ್ಕಾರಕ್ಕೆ ಸಲ್ಲಿಸುವ ವರದಿಯಲ್ಲಿ ಹೇಳಲಾಗುವುದು. ಆದರೆ, ಅದಕ್ಕೂ ಮುನ್ನ ಬಿಎಂಆರ್‌ಸಿಯು ತಕ್ಷಣ “ನಮ್ಮ ಮೆಟ್ರೋ’ದಲ್ಲಿ ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕು. ಕರ್ತವ್ಯಲೋಪ ಆದಾಗ, ಅದನ್ನು ಸರ್ಕಾರದ ಗಮನಕ್ಕೆ ತರುವುದು ಪ್ರಾಧಿಕಾರದ ಕರ್ತವ್ಯ. ಇಲ್ಲದಿದ್ದರೆ, ಅದು ಪ್ರಾಧಿಕಾರದ ಕರ್ತವ್ಯಚ್ಯುತಿ ಆಗುತ್ತದೆ ಎಂದು ತೀಕ್ಷ್ಣವಾಗಿ ಹೇಳಿದರು.
ಸರ್ಕಾರಿ ಆದೇಶ ಅವಶ್ಯಕತೆಯೇ ಇಲ್ಲ: ಹಿಂದಿ ವಿಚಾರಕ್ಕೆ ಸಂಬಂಧಿಸಿದಂತೆ ಸ್ವತಃ ಬಿಎಂಆರ್‌ಸಿ ವ್ಯವಸ್ಥಾಪಕ ನಿರ್ದೇಶಕರು ರಾಜ್ಯ ಸರ್ಕಾರಕ್ಕೆ ಬರೆದ ಪತ್ರದಲ್ಲಿ ಹಿಂದಿ ಅಳವಡಿಕೆ ಅವಶ್ಯಕತೆ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಅಷ್ಟೇ ಅಲ್ಲ, ಸರ್ಕಾರದ ಮುಖ್ಯಕಾರ್ಯದರ್ಶಿ ಕೂಡ ಕೇಂದ್ರಕ್ಕೆ ಬರೆದ ಪತ್ರದಲ್ಲಿ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಹೀಗಿರುವಾಗ, ಬಿಎಂಆರ್‌ಸಿಯು ಸರ್ಕಾರದ ಆದೇಶಕ್ಕಾಗಿ ಕಾಯುವ ಅವಶ್ಯಕತೆಯೇ ಇಲ್ಲ ಎಂದ ಪ್ರೊ. ಎಸ್.ಜಿ ಸಿದ್ದರಾಮಯ್ಯ, ಹಿಂದಿನ ಅಧಿಕಾರಿಗಳು ಮಾಡಿದ ತಪ್ಪನ್ನು ನೀವು (ಅಧಿಕಾರಿಗಳು) ಮುಂದುವರಿಸಿಕೊಂಡು ಹೋಗಬೇಡಿ. ತಪ್ಪನ್ನು ತಕ್ಷಣ ಸರಿಪಡಿಸಬೇಕು ಎಂದು ತಿಳಿಸಿದರು.
ಇದಕ್ಕೂ ಮುನ್ನ ಮಾತನಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ “ಮುಖ್ಯಮಂತ್ರಿ’ ಚಂದ್ರು, “2013ರಲ್ಲೇ ನಾನು ಪ್ರಾಧಿಕಾರದ ಅಧ್ಯಕ್ಷನಾಗಿದ್ದಾಗ ಮುಖ್ಯಮಂತ್ರಿಗಳಿಗೆ ಮೆಟ್ರೋದಲ್ಲಿ ಹಿಂದಿ ಅನುಷ್ಠಾನದ ಅವಶ್ಯಕತೆ ಇಲ್ಲ. ಕನ್ನಡ ಮತ್ತು ಇಂಗ್ಲಿಷ್ ಇದ್ದರೆ ಸಾಕು ಎಂದು ವರದಿ ಸಲ್ಲಿಸಿದ್ದೆ. ನಾಲ್ಕು ವರ್ಷ ಕಳೆದರೂ ಆದೇಶ ಅನುಷ್ಠಾನಕ್ಕೆ ಬಂದಿಲ್ಲ. ಈ ಮೂಲಕ ಪ್ರಾಧಿಕಾರದ ಸೂಚನೆ ನಿರ್ಲಕ್ಷಿಸಿರುವುದು ಕೂಡ ಕಾನೂನುಬಾಹಿರ. ಈ ಹಿನ್ನೆಲೆಯಲ್ಲಿ 2011ರಿಂದ ಈವರೆಗೆ ಬಿಎಂಆರ್‌ಸಿ ಅಧಿಕಾರಿಗಳು ಸರ್ಕಾರಿ ಆದೇಶ ಉಲ್ಲಂ ಸಿದ್ದು, ಈ ಮೂಲಕ ಹಕ್ಕುಚ್ಯುತಿ ಆಗಿದೆ ಎಂದು ಸರ್ಕಾರಕ್ಕೆ ಪತ್ರ ಬರೆಯುವಂತೆ ಪ್ರಾಧಿಕಾರಕ್ಕೆ ಮನವಿ ಮಾಡಿದರು.
ಅಗೌರವ ಅಲ್ಲ; ಒಕ್ಕೂಟ ವ್ಯವಸ್ಥೆಗೆ ನೀಡುವ ಗೌರವ: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ಎಲ್. ಹನುಮಂತಯ್ಯ, ಹಿಂದಿ ಬೇಡ ಎನ್ನುವುದು ಆ ಭಾಷೆಗೆ ಮಾಡಿದ ಅವಮಾನ ಅಲ್ಲ. ಒಕ್ಕೂಟ ವ್ಯವಸ್ಥೆಗೆ ನೀಡುವ ಗೌರವ. ಬಲವಂತವಾಗಿ ಒಕ್ಕೂಟ ವ್ಯವಸ್ಥೆಯಲ್ಲಿ ಒಂದು ಭಾಷೆಯನ್ನು ಹೇರುವುದು ಸರಿ ಅಲ್ಲ ಎಂದರು. ನಂತರ ಪ್ರತಿಕ್ರಿಯಿಸಿದ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ಸಿಂಗ್ ಖರೋಲಾ, ಪ್ರಾಧಿಕಾರದ ಮಾರ್ಗದರ್ಶನದಲ್ಲಿ ಕನ್ನಡ ಪರವಾಗಿ ನೀಡಿದ ಎಲ್ಲ ಸಲಹೆಗಳನ್ನು ಅನುಷ್ಠಾನಕ್ಕೆ ತರಲಾಗುವುದು. ಕೆಲವು ಸೂಕ್ಷ್ಮ ವಿಷಯಗಳ ಬಗ್ಗೆ ಪ್ರಾಧಿಕಾರ ಮತ್ತು ಸರ್ಕಾರದೊಂದಿಗೆ ಚರ್ಚಿಸಿ, ಸಮಸ್ಯೆ ಬಗೆಹರಿಸಲಾಗುವುದು ಎಂದಷ್ಟೇ ಹೇಳಿದರು.
ಇದಕ್ಕೂ ಮೊದಲು ಮಾತನಾಡಿದ ಪ್ರದೀಪ್‌ಸಿಂಗ್ ಖರೋಲಾ, “ನಮ್ಮ ಮೆಟ್ರೋ’ ತಾಂತ್ರಿಕ ವಿಭಾಗದಲ್ಲಿ ಕನ್ನಡ ಅನುಷ್ಠಾನ ಸಾಧ್ಯವಾಗುತ್ತಿಲ್ಲ. ಕಾರ್ಯಾಚರಣೆ ಮತ್ತು ನಿರ್ವಹಣೆ, ಕಾನೂನು, ಸಾರ್ವಜನಿಕ ಸಂಪರ್ಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕನ್ನಡ ಅನುಷ್ಠಾನ ಮಾಡಲಾಗಿದೆ. ಭದ್ರತಾ ಸಿಬ್ಬಂದಿ ಶೇ. 83ರಷ್ಟು ಕನ್ನಡಿಗರಿದ್ದಾರೆ ಎಂದು ಪ್ರಾಧಿಕಾರಕ್ಕೆ ಮಾಹಿತಿ ನೀಡಿದರು. ಲೇಖಕಿ ವಸುಂಧರಾ ಭೂಪತಿ, ಕನ್ನಡ ಚಿಂತಕ ರಾ.ನಂ. ಚಂದ್ರಶೇಖರ, ಪ್ರಾಧಿಕಾರದ ಕಾರ್ಯದರ್ಶಿ ಕೆ. ಮುರಳೀಧರ್ ಮತ್ತಿತರರು ಉಪಸ್ಥಿತರಿದ್ದರು.
ಮಾಹಿತಿಯನ್ನು ಇಂಗ್ಲಿಷ್‌ನಲ್ಲಿ ನೀಡಿ ಕ್ಷಮೆ ಕೋರಿದ ಅಧಿಕಾರಿ: “ಮಾಹಿತಿ ಹಕ್ಕು’ ಅಡಿ ಕನ್ನಡದಲ್ಲಿ ಕೇಳಿದ ಮಾಹಿತಿಯನ್ನು ಇಂಗ್ಲಿಷ್‌ನಲ್ಲಿ ನೀಡಿದ ಅಧಿಕಾರಿಯನ್ನು ಪ್ರಾಧಿಕಾರ ತರಾಟೆಗೆ ತೆಗೆದುಕೊಂಡಿತು. ಆಗ, ಅಧಿಕಾರಿ ಕ್ಷಮೆ ಕೇಳಿದ ಪ್ರಸಂಗ ನಡೆಯಿತು. ಮಾಹಿತಿ ಹಕ್ಕು ಕಾಯ್ದೆ ಅಡಿ ವ್ಯಕ್ತಿಯೊಬ್ಬರು ಕೇಳಿದ ಮಾಹಿತಿಯನ್ನು ಬಿಎಂಆರ್‌ಸಿಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯು.ಎ. ವಸಂತರಾವ್ ಇಂಗ್ಲಿಷ್‌ನಲ್ಲಿ ನೀಡಿದ್ದರು. ಈ ಬಗ್ಗೆ ಆ ವ್ಯಕ್ತಿ ಪ್ರಾಧಿಕಾರಕ್ಕೆ ದೂರು ಸಲ್ಲಿಸಿದ್ದರು. ಅದನ್ನು ಪ್ರಾಧಿಕಾರವು ಸಭೆ ಗಮನಸೆಳೆಯಿತು.
“ಕನ್ನಡದಲ್ಲಿ ಕೇಳಿದ್ದರೂ ಇಂಗ್ಲಿಷ್‌ನಲ್ಲೇ ಮಾಹಿತಿ ನೀಡಿರುವುದು ಯಾಕೆ” ಎಂದು ಪ್ರಾಧಿಕಾರದ ಅಧ್ಯಕ್ಷರು ಕೇಳಿದರು. ಆಗ ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿ, “ತಪ್ಪಾಯ್ತು ಸರ್’ ಎಂದರು. ಈ ಸಂದರ್ಭದಲ್ಲಿ ಮತ್ತೂಬ್ಬ ಅಧಿಕಾರಿ, “ಅವರೂ ಕನ್ನಡದವರೇ ಸರ್’ ಎಂದು ಸಮಜಾಯಿಷಿ ನೀಡಲು ಮುಂದಾದರು. ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ಅಧ್ಯಕ್ಷರು, “ಕನ್ನಡದವರು ಹೀಗೆ ಮಾಡಿರವುದು ಘೋರ ತಪ್ಪು’ ಎಂದರು.
ಕನ್ನಡ ಬೇಡ ಎನ್ನುವವರು ಕನ್ನಡಿಗರಿಗೂ ಬೇಡ: ಸಾಹಿತಿ ಪ್ರೊ. ಚಂದ್ರಶೇಖರ ಪಾಟೀಲ (ಚಂಪಾ) ಮಾತನಾಡಿ, “ಹಿಂದಿ ಹೇರಿಕೆ ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ. ಕರ್ನಾಟಕ ಮತ್ತು ಕನ್ನಡ ಬೇಡ ಎನ್ನುವವರು ನಮಗೂ (ಕನ್ನಡಿಗರಿಗೆ) ಬೇಡ. ಬೇಡವಾದ ಹಿಂದಿಗೆ ಕನ್ನಡಪರ ಹೋರಾಟಗಾರರು ಮಸಿ ಬಳಿದಿದ್ದಾರೆ. ಮುಂದೊಂದು ವಾರದಲ್ಲಿ ಮೆಟ್ರೋ ಫಲಕಗಳಲ್ಲಿ ಹಿಂದಿ ಲಿಪಿಗಳೇ ಇಲ್ಲದಂತಾಗಲಿ. ಈ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಇದಕ್ಕೆ ಯಾವುದೇ ಆಕ್ಷೇಪಗಳು ಬಂದರೂ ಅದನ್ನು ನಾವು ನೋಡಿಕೊಳ್ಳುತ್ತೇವೆ’ ಎಂದು ಬಿಎಂಆರ್‌ಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಹೇಳಿದರು.
ಕನ್ನಡ ಅನುಷ್ಠಾನ ಘಟಕ ರಚಿಸಲು ಸೂಚನೆ: ಕನ್ನಡ ಅನುಷ್ಠಾನ ಘಟಕ ರಚಿಸಬೇಕು. ಇದು ಪ್ರತಿ ಮೂರು ತಿಂಗಳಿಗೊಮ್ಮೆ ಪ್ರಾಧಿಕಾರಕ್ಕೆ ವರದಿ ಸಲ್ಲಿಸಬೇಕು. ಮೆಟ್ರೋ ಕನ್ನಡ ನೌಕರರ ಸಂಘಟನೆ ರಚಿಸಬೇಕು. ಇದರಡಿ ವಿವಿಧ ಕನ್ನಡದ ಕೆಲಸಗಳನ್ನು ಹಮ್ಮಿಕೊಳ್ಳಬೇಕು ಎಂದು ಪ್ರಾಧಿಕಾರದ ಅಧ್ಯಕ್ಷರು ಮೆಟ್ರೋ ನಿಗಮಕ್ಕೆ ಸೂಚಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ
IPL 2025 Auction: ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..
IPL Auction: ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್ ರಾಹುಲ್; ಖರೀದಿ ಆರಂಭಿಸಿದ ಆರ್ ಸಿಬಿ
Ex-CJI ಚಂದ್ರಚೂಡ್ ರಾಜಕಾರಣಿಗಳಿಗೆ ಕಾನೂನಿನ ಭಯ ತೆಗೆದುಹಾಕಿದ್ದಾರೆ : ರಾವತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.