ವೀರಶೈವ ಮಹಾಸಭಾ ಲಿಂಗಾಯತರ ಪ್ರತಿನಿಧಿಯಲ್ಲ
Team Udayavani, Jul 27, 2017, 7:45 AM IST
ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಪರ ವಿರೋಧದ ಹೇಳಿಕೆಗಳು ಮುಂದುವರೆದಿದ್ದು, ಲಿಂಗಾಯತ ಧರ್ಮಕ್ಕಾಗಿ ಈಗಾಗಲೇ ರಾಜ್ಯ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿರುವ ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಮಹಾದೇವಿ, ಲಿಂಗಾಯತ ಧರ್ಮದಲ್ಲಿ ವೀರಶೈವ ಪದ ಸೇರಿಸುತ್ತಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.ಹೋರಾಟದ ದಾರಿ ತಪ್ಪಿಸಲು ವೀರಶೈವ ಮಹಾಸಭಾ ಈ ಕುತಂತ್ರ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ. ಪ್ರತ್ಯೇಕ ಲಿಂಗಾಯತ ಧರ್ಮದ ಅಗತ್ಯತೆ ಕುರಿತು ಉದಯವಾಣಿಗೆ ನೀಡಿದ ಸಂದರ್ಶನ ನುಡಿ ಇಲ್ಲಿದೆ.
ನೀವು ಲಿಂಗಾಯತ ಧರ್ಮದ ಹೆಸರಿನಲ್ಲಿ ಸಮಾಜದಲ್ಲಿ ಒಡಕು ಉಂಟು ಮಾಡುತ್ತಿದ್ದೀರಂತಲ್ಲಾ ?
ನಾವು ಸಮಾಜದಲ್ಲಿ ಯಾವುದೇ ಒಡಕು ಉಂಟು ಮಾಡುತ್ತಿಲ್ಲ. ನಮ್ಮದು ಲಿಂಗಾಯತ ಧರ್ಮ ಇಷ್ಟ ಲಿಂಗವನ್ನು ಕಟ್ಟಿಕೊಂಡವರು ಲಿಂಗಾಯತರು. 12 ನೇ ಶತಮಾನದಿಂದಲೂ ಈ ಧರ್ಮ ಅಸ್ತಿತ್ವದಲ್ಲಿದೆ. ಈಗ ಈ ಧರ್ಮದಲ್ಲಿ ಅನೇಕ ಸಮುದಾಯದವರು ಸೇರಿಕೊಂಡಿದ್ದಾರೆ. ವೀರಶೈವ ಅಂತ ಪ್ರತ್ಯೇಕ ಸಮಾಜ ಕೇರಳ, ತಮಿಳುನಾಡು, ಪಾಂಡಿಚೆರಿಯಲ್ಲಿ ಇದೆ. ಅವರ ಆಚಾರ ವಿಚಾರ ಬೇರೆ ಇದೆ. ಕೇರಳದ ವೀರಶೈವರು ಮಾಂಸಾಹಾರಿಗಳು. ವೀರಶೈವರು ಲಿಂಗಾಯತರು ಅಂತ ಹೇಳಿಕೊಳ್ಳುತ್ತಿರುವುದು ಹಾಸ್ಯಾಸ್ಪದ.
ಹಾಗಾದರೆ ವೀರಶೈವರು ಲಿಂಗಾಯತರಲ್ಲವೇ ?
ವೀರಶೈವರು ಹಿಂದೂ ಧರ್ಮದ ಒಂದು ಪಂಥವಾಗಿದ್ದಾರೆ. ವೀರಶೈವ ಮಹಾಸಭಾವನ್ನು 1904 ರಲ್ಲಿ ಹಾನಗಲ್ ಕುಮಾರಸ್ವಾಮಿಗಳು ಬಸವಣ್ಣನ ಹೆಸರು ಹಾಳು ಮಾಡಲು ದುರುದ್ದೇಶದಿಂದ ಸ್ಥಾಪನೆ ಮಾಡಿದರು. ವೀರಶೈವರು ಕರ್ನಾಟಕದಲ್ಲಿ ಬೆಂಗಳೂರು, ಮೈಸೂರು, ತುಮಕೂರಿನಲ್ಲಿ ಮಾತ್ರ ಇದ್ದಾರೆ. ಉತ್ತರ ಕರ್ನಾಟಕದಲ್ಲಿ ಇಲ್ಲ. ವೀರಶೈವ ಧರ್ಮಕ್ಕೆ ಸಂಸ್ಥಾಪಕರಿಲ್ಲ. ಅವರಿಗೆ ಧರ್ಮ ಗ್ರಂಥವಿಲ್ಲ. ಅವರೇ, ಲಿಂಗಾಯತ ಧರ್ಮದ ಸಿದ್ದಾಂತವನ್ನು ಒಪ್ಪಿಕೊಂಡು ಲಿಂಗಾಯತದಲ್ಲಿ ಸೇರಿಕೊಂಡಿದ್ದಾರೆ. ವೀರಶೈವರಿಗೆ ಪತ್ಯೇಕ ಧರ್ಮ ಬೇಕಿದ್ದರೆ, ಅವರು ಲಿಂಗಾಯತದ ಜೊತೆಗೆ ಸೇರಿಸುವುದು ಬೇಡ. ಅವರು ಪ್ರತ್ಯೇಕ ಧರ್ಮಕ್ಕೆ ಬೇಡಿಕೆ ಇಡಲಿ. ಬಸವಣ್ಣನ ಕಾರ್ಯಕ್ಷೇತ್ರದಲ್ಲಿ ಲಿಂಗಾಯತ ಧರ್ಮ ಅಸ್ತಿತ್ವದಲ್ಲಿದೆ.
ವೀರಶೈವ ಮಹಾಸಭಾದವರೇ ಈಗ ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರಲ್ಲಾ ?
ಅವರು ಜನರ ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ವೀರಶೈವ ಮುಖಂಡರಾಗಿರುವ ಈಶ್ವರ್ ಖಂಡ್ರೆ ಹಾಗೂ ಎಸ್.ಎಸ್. ಮಲ್ಲಿಕಾರ್ಜುನ ಅವರು ಮುಖ್ಯಮಂತ್ರಿಯ ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ. ವೀರಶೈವ ಧರ್ಮ ಬೇಡಿಕೆಗೆ ನಮ್ಮ ಬೆಂಬಲವಿಲ್ಲ. ವೀರಶೈವ ಮಹಾಸಭಾ ಲಿಂಗಾಯತ ಸಮಾಜದ ಪ್ರತಿನಿಧಿಯಲ್ಲ. ವೀರಶೈವ ಹಿಂದೂ ಧರ್ಮದ ಒಂದು ಭಾಗವಾಗಿದ್ದರಿಂದ ಅದು ವೇದ ಪುರಾಣದಿಂದ ಬಂದ ಪದ. ಬಸವಣ್ಣನವರು ಆ ಧರ್ಮದಲ್ಲಿನ ಆಚಾರ ವಿಚಾರಗಳನ್ನು ವಿರೋಧಿಸಿಯೇ ಲಿಂಗಾಯತ ಧರ್ಮ ಸ್ಥಾಪಿಸಿದ್ದಾರೆ. ಈ ವಿಷಯದಲ್ಲಿ ಗೊಂದಲ ಸೃಷ್ಠಿಸಿದರೆ, ಲಿಂಗಾಯಿತ ಧರ್ಮಕ್ಕೆ ಸಿಗುವ ಮಾನ್ಯತೆಯೂ ಸಿಗುವುದಿಲ್ಲ.
ರಾಜ್ಯ ಸರ್ಕಾರದ ಐವರು ಸಚಿವರು ವೀರಶೈವ ಲಿಂಗಾಯತ ಧರ್ಮಕ್ಕಾಗಿ ಪಾದಯಾತ್ರೆ ಮಾಡುತ್ತಿದ್ದಾರಲ್ಲಾ ಅವರಿಗೆ ನಿಮ್ಮ ಬೆಂಬಲ ಇದೆಯಾ ?
ವೀರಶೈವ ಲಿಂಗಾಯತರ ಹೆಸರಿನಲ್ಲಿ ನಡೆಯುವ ಪಾದಯಾತ್ರೆಗೆ ನಮ್ಮ ಬೆಂಬಲವಿಲ್ಲ. ನಾವು ಲಿಂಗಾಯತ ಧರ್ಮಕ್ಕಾಗಿ ಹೋರಾಡುತ್ತಿದ್ದೇವೆ. ಸಚಿವರು ಯಾವ ಉದ್ದೇಶಕ್ಕೆ ಪಾದಯಾತ್ರೆ ಮಾಡುತ್ತಿದ್ದಾರೋ ಗೊತ್ತಿಲ್ಲ. ನಾವು ಯಾವುದೇ ರಾಜಕೀಯ ಪಕ್ಷದೊಂದಿಗೆ ಗುರುತಿಸಿಕೊಂಡಿಲ್ಲ. ಯಾವ ರಾಜಕೀಯ ಪಕ್ಷದ ಬೆಂಬಲವೂ ನಮಗಿಲ್ಲ. ನಾವು ಸ್ವತಂತ್ರವಾಗಿ ಸಮಾಜದ ಜನರೊಂದಿಗೆ ಹೋರಾಡುತ್ತಿದ್ದೇವೆ.
ಪಂಚಪೀಠಾಧೀಶರು ಮತ್ತು ಚಿಮೂ ಅವರು ಪ್ರತ್ಯೇಕ ಧರ್ಮವನ್ನು ವಿರೋಧಿಸುತ್ತಿದ್ದಾರಲ್ಲಾ ?
ಪಂಚ ಪೀಠಾಧೀಶರು ವೀರಶೈವ ಪರಂಪರೆಯಿಂದ ಬಂದವರು, ಅವರು ಹಿಂದೂ ಧರ್ಮದ ಎಲ್ಲ ಆಡಂಬರಗಳನ್ನು ಆಚರಿಸುತ್ತಾರೆ. ಅವರು ಲಿಂಗಾಯತ ಧರ್ಮದ ಹೆಸರಿನಲ್ಲಿ ತಪ್ಪು ಆಚರಣೆ ಮಾಡುತ್ತಿದ್ದಾರೆ. ಅವರು ಲಿಂಗಾಯತ ಧರ್ಮ ಸೇರುವ ಅಗತ್ಯವಿಲ್ಲ. ಇನ್ನು ಚಿದಾನಂದ ಮೂರ್ತಿಯವರು ಯಾವುದೋ ಕಾಲದಲ್ಲಿ ಒಂದಷ್ಟು ಸಂಶೋಧನೆ ಮಾಡಿ, ಈಗ ತಪ್ಪು ವಿಷಯಗಳನ್ನು ಹರಡಲು ಪ್ರಯತ್ನಿಸುತ್ತಿದ್ದಾರೆ. ವೀರಶೈವ ಲಿಂಗಾಯತ ಒಂದೇ ಅನ್ನುತ್ತಾರೆ.
ಲಿಂಗಾಯತ ಸಮಾಜದಿಂದ ಯಾವುದೇ ಮನವಿ ಬಂದಿಲ್ಲ ಎಂದು ಸಿಎಂ ಹೇಳಿದ್ದಾರಲ್ಲ ?
ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಕೀಯ ಒತ್ತಡಕ್ಕೆ ಮಣಿದು ಆ ರೀತಿ ಹೇಳಿಕೆ ನೀಡಿರಬೇಕು. ನಾವು ಈಗಾಗಲೇ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದೇವೆ. ಅವರ ಕಚೇರಿಯಿಂದ ನಮಗೆ ಪತ್ರವೂ ಬಂದಿದೆ. ಮನವಿ ಪಡೆಯುವ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಾವೂ ಕೂಡ ಬಸವ ಅನುಯಾಯಿಯಾಗಿದ್ದು, ಲಿಂಗಾಯತ ಧರ್ಮದ ಬಗ್ಗೆ ನನಗೆ ಮನವರಿಕೆಯಾಗಿದೆ ಅಂತ ಹೇಳಿದ್ದರು. ಈಗ ಉಲ್ಟಾ ಹೊಡೆದಿರುವುದು ರಾಜಕೀಯ ಒತ್ತಡಕ್ಕೆ ಮಣಿದಿರಬಹುದು ಅನಿಸುತ್ತದೆ. ಮುಖ್ಯಮಂತ್ರಿಗಳು ಪ್ರತ್ಯೇಕ ಧರ್ಮದ ಮಾನ್ಯತೆ ನೀಡುವ ಅಗತ್ಯತೆ ಕುರಿತು ನಿವೃತ್ತ ನ್ಯಾಯಮೂರ್ತಿಗಳು, ಸಾಹಿತಿಗಳು, ಸಂಶೋಧಕರ ಸಮಿತಿ ಮಾಡುವಂತೆ ಕೇಳಿಕೊಂಡಿದ್ದೆವು. ಆದರೆ, ಅವರು ಸಚಿವರ ಸಮಿತಿ ಮಾಡಿದ್ದಾರೆ. ಅದರ ಉದ್ದೇಶ ಏನು ಅಂತ ಅರ್ಥ ಆಗಲಿಲ್ಲ.
ಕಾಂಗ್ರೆಸ್‌ನವರು ಈ ಹೋರಾಟವನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿದ್ದಾರೆ ಅನಿಸುತ್ತಿದೆಯಾ ?
ನಮಗೆ ಯಾವುದೇ ರಾಜಕೀಯ ಉದ್ದೇಶವಿಲ್ಲ. ಕಾಂಗ್ರೆಸ್ ನವರು ಯಾಕೆ ಇದಕ್ಕೆ ಬೆಂಬಲ ಸೂಚಿಸ್ತಿದಾರೆ ಅಂತ ಗೊತ್ತಿಲ್ಲ. ನಮಗೆ ವೈಯಕ್ತಿಕವಾಗಿ ಯಾವುದೇ ಲಾಭವಿಲ್ಲ. ರಾಜ್ಯ ಸರ್ಕಾರ ನಮ್ಮ ಮನವಿಯನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು ಅನ್ನುವುದಷ್ಟೇ ನಮ್ಮ ಬೇಡಿಕೆ. ಪ್ರತ್ಯೇಕ ಧರ್ಮವಾದರೆ, ಕೇಂದ್ರ ಸರ್ಕಾರ ಅಲ್ಪ ಸಂಖ್ಯಾತ ಧರ್ಮಕ್ಕೆ ಸುಮಾರು 1600 ಕೋಟಿ ರೂಪಾಯಿ ಹಣ ನೀಡುತ್ತದೆ. ಅದನ್ನು ಈ ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ಹಡಪದ, ಮಡಿವಾಳ, ಕುಂಬಾರ, ಕಂಬಾರ ಸಮುದಾಯಗಳ ಜನರ ಅಭಿವೃದ್ಧಿಗೆ ಬಳಕೆಯಾಗುತ್ತದೆ. ಕೆಲವು ಶಿಕ್ಷಣ ಸಂಸ್ಥೆಗಳು ಇದರ ಲಾಭ ಪಡೆಯಬಹುದು.
ಕಾಂಗ್ರೆಸ್ ದಾಳಕ್ಕೆ ಲಿಂಗಾಯತರು ಬಲಿ ಪಶು ಆಗುತ್ತಿದ್ದೀರಿ ಅನಿಸುತ್ತಿಲ್ಲವಾ ?
ನನಗೇನು ಹಾಗೆ ಅನಿಸುತ್ತಿಲ್ಲ. ಇದರಲ್ಲಿ ಕಾಂಗ್ರೆಸ್ ಅಥವಾ ಬಿಜೆಪಿ ಅಂತ ಇಲ್ಲ. ನಮ್ಮ ಧರ್ಮಕ್ಕೆ ಮಾನ್ಯತೆ ನೀಡುವಂತೆ ಬಿಜೆಪಿಯವರನ್ನೂ ಕೇಳಿಕೊಳ್ಳುತ್ತೇವೆ. ಯಡಿಯೂರಪ್ಪ ಅವರೂ ಇದಕ್ಕೆ ಬೆಂಬಲ ನೀಡಬೇಕು. ಆದರೆ, ಅವರು ಆರ್‌ಎಸ್‌ಎಸ್ ಸಿದ್ಧಾಂತದಲ್ಲಿ ಸಿಲುಕಿಕೊಂಡಿದ್ದಾರೆ. ಅವರು ಅದರಿಂದ ಹೊರ ಬರಬೇಕು. ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡಿದರೆ, ಪ್ರಧಾನಿ ಮೋದಿಯನ್ನೂ ಭೇಟಿ ಮಾಡಿ ನಮ್ಮ ಧರ್ಮದ ಬಗ್ಗೆ ಮನವರಿಕೆ ಮಾಡುತ್ತೇವೆ.
ಕೇಂದ್ರ ಸರ್ಕಾರ ಮಾನ್ಯತೆ ನೀಡುವ ಭರವಸೆ ಇದೆಯಾ ?
ನಮ್ಮ ಧರ್ಮಕ್ಕೆ 800 ವರ್ಷಗಳ ಇತಿಹಾಸ ಇದೆ. ಕರ್ನಾಟಕ, ಆಂಧ್ರಪ್ರದೇಶ, ಕೇರಳ, ತೆಲಂಗಾಣ, ಮಹಾರಾಷ್ಟ್ರಗಳಲ್ಲಿ ನಮ್ಮ ಧರ್ಮದ ಜನರಿದ್ದಾರೆ. ಅದೆಲ್ಲ ಮಾಹಿತಿಯನ್ನೂ ಕೇಂದ್ರ ಸರ್ಕಾರಕ್ಕೆ ನೀಡುತ್ತೇವೆ. ಒಂದು ವೇಳೆ ಕೇಂದ್ರ ಸರ್ಕಾರ ಮಾನ್ಯತೆ ನೀಡದಿದ್ದರೆ, ಕಾನೂನು ಹೋರಾಟ ನಡೆಸುತ್ತೇವೆ. ಈಗಾಗಲೇ ಧಾರವಾಡ ಹೈ ಕೋರ್ಟ್‌ನಲ್ಲಿ ಈ ಬಗ್ಗೆ ಒಂದು ತೀರ್ಪು ಬಂದಿದ್ದು, ಲಿಂಗಾಯತರು ಮತ್ತು ವೀರಶೈವರು ಬೇರೆ ಬೇರೆ ಅಂತ ಹೇಳಿದೆ. ಎಂ.ಪಿ. ಪ್ರಕಾಶ ಅವರ ಕುತಂತ್ರದಿಂದ ಎರಡೂ ಒಂದೇ ಎನ್ನುವಂತೆ ಸರ್ಕಾರಿ ದಾಖಲೆಯಲ್ಲಿ ಸೃಷ್ಠಿಸುವ ಪ್ರಯತ್ನ ನಡೆದಿತ್ತು. ಅದನ್ನು ಕೋರ್ಟ್ ಅಲ್ಲಗಳೆದಿದೆ.
ಬಸವಣ್ಣನ ಅಂಕಿತವನ್ನು ಬದಲಾಯಿಸಿದ್ದೀರಿ ಎನ್ನುವ ಆರೋಪ ನಿಮ್ಮ ಮೇಲಿದೆಯಲ್ಲಾ ?
ಹೌದು. ಅದನ್ನು ಬಹಳಷ್ಟು ಜನರು ಮೊದಲು ತಪ್ಪು ತಿಳಿದುಕೊಂಡಿದ್ದರು. ಬಸವಣ್ಣ ಕೂಡಲ ಸಂಗಮಕ್ಕೆ ಬಂದು ಸಂಗಮನಾಥನ ಪೂಜಾರಿಯಾಗಿ ಕೆಲಸ ಮಾಡುತ್ತಿದ್ದರಿಂದ ಅವರು ರಚಿಸಿದ ವಚನಗಳಲ್ಲಿ ಕೂಡಲ ಸಂಗಮ ಎಂದು ನಮೂದಿಸಿದ್ದಾರೆ. ಅವರಿಗೆ ಸಾಕ್ಷಾತ್ಕಾರವಾದ ನಂತರ ಬಸವಣ್ಣ ಬ್ರಹ್ಮ ವಿಷ್ಣು ಮಹೇಶ್ವರ ಅವರನ್ನು ಮೀರಿದ ಶಕ್ತಿಯೇ ಪರಮಾತ್ಮ ಎಂದು ನಂಬುತ್ತಾರೆ. ಹೀಗಾಗಿ ಅವರಿಗೆ ಸಾಕ್ಷಾತ್ಕಾರವಾದ ನಂತರದ ವಚನಗಳಲ್ಲಿ ಅವರ ಅಂಕಿತವನ್ನು ಬದಲಾಯಿಸಿದ್ದೇನೆ. ಇದರಲ್ಲಿ ನಾನು ತಪ್ಪು ಮಾಡಿಲ್ಲ. ಇದನ್ನು ಸಮರ್ಥಿಸಿಕೊಳ್ಳುತ್ತೇನೆ. ನನ್ನ ಕ್ರಮವನ್ನು ಮೊದಲು ವಿರೋಧಿಸಿದವರು ಈಗ ಒಪ್ಪಿಕೊಂಡಿದ್ದಾರೆ.
ಬೀದರ್ ಸಮಾವೇಶ ಕಾಂಗ್ರೆಸ್ ಪ್ರಾಯೋಜಿತ ಅಂತ ಹೇಳ್ತಿದಾರೆ ನಿಜಾನಾ ?
ಬೀದರ್ ಸಮಾವೇಶಕ್ಕೆ ಯಾವುದೇ ಪಕ್ಷದ ಪ್ರಾಯೋಜಕತ್ವವಿಲ್ಲ. ನಮ್ಮ ಸಮಾಜದ ಶರಣರು ತಮ್ಮ ಸ್ವಂತ ಶಕ್ತಿಯಿಂದ ಈ ಸಮಾವೇಶವನ್ನ ಆಯೋಜನೆ ಮಾಡಿದ್ದರು. ಸಮಾವೇಶದ ಉದ್ದೇಶ ನೋಡಿ ಬೆಂಬಲ ಸೂಚಿಸಿಲು ಅನೇಕ ರಾಜಕೀಯ ನಾಯಕರು ಬಂದಿದ್ದರು. ನಾವು ಯಾವುದೇ ಪಕ್ಷದಿಂದ ಹಣ ಪಡೆದು ಕಾರ್ಯಕ್ರಮ ಮಾಡಿಲ್ಲ. ವಿರೋಧಿಗಳು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ.
– ಶಂಕರ ಪಾಗೋಜಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.