ಮೂರು ದಿನಗಳ ಅಂಬೇಡ್ಕರ್ ಸಮಾವೇಶ: ನಾಳೆಯ ನಂಬಿಕೆಗಳಿಗಾಗಿ ಚಿಂತನೆ
Team Udayavani, Jul 27, 2017, 2:06 AM IST
ಅಂಬೇಡ್ಕರ್ ಅವರು ಬೌದ್ಧಿಕ ಜಗತ್ತಿನ ಬಹುದೊಡ್ಡ ಐಕಾನ್. ಅದನ್ನು ಸ್ಥಳೀಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿದ್ವಾಂಸರು, ಚಿಂತಕರು ತಮ್ಮದೇ ದೃಷ್ಟಿಕೋನ ಮತ್ತು ನೆಲೆಗಳಲ್ಲಿ ಅರ್ಥೈಸಿ ಕೊಂಡದ್ದನ್ನು ಅಭಿವ್ಯಕ್ತಿಗೊಳಿಸುವ, ಅನಾವರಣಗೊಳಿಸುವುದಕ್ಕೆ ಮೂರು ದಿನಗಳ ಅಂತಾರಾಷ್ಟ್ರೀಯ ಸಮಾವೇಶವು ಅನುವು ಮಾಡಿಕೊಟ್ಟಿತು.
ಅಂಬೇಡ್ಕರ್ ಅವರನ್ನು ಕೇಂದ್ರವಾಗಿಟ್ಟುಕೊಂಡು ನಡೆದ ಮೂರು ದಿನಗಳ ಅಂತಾರಾಷ್ಟ್ರೀಯ ಸಮಾವೇಶವು ಕೇವಲ
ಸಮಕಾಲೀನ ಮಾತ್ರವಲ್ಲ ಮುಂಬರುವ ದಿನಗಳ ಸವಾಲುಗಳನ್ನು ಕುರಿತೂ ಚರ್ಚೆ ನಡೆಯಲು ಅವಕಾಶ ಕಲ್ಪಿಸಿತು. ಮೇಲ್ನೋಟಕ್ಕೆ ಅಂಬೇಡ್ಕರ್ ಅವರನ್ನು ಹಲವು ನೆಲೆಗಳಲ್ಲಿ, ಆಯಾಮಗಳಲ್ಲಿ ಅರಿಯುವ ಪ್ರಯತ್ನದಂತೆ ಕಂಡರೂ ಅದು ಕೇವಲ ಅಷ್ಟಕ್ಕೇ ಸೀಮಿತವಾಗಿರಲಿಲ್ಲ. ಹೌದು. ಯಾವ ಸಂಗತಿಯೂ ಅದರಷ್ಟಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ. ಸಹಜವಾಗಿಯೇ ಒಂದು ವಿಷಯ- ಸಂಗತಿ ಮತ್ತೂಂದರೊಳಗೆ ಹೆಣೆದುಕೊಂಡಿರುತ್ತದೆ.
ವರ್ತಮಾನದ ಬದುಕನ್ನು ಅರ್ಥೈಸಿಕೊಳ್ಳುವುದಕ್ಕೆ ವಿಚಾರ ಮಂಥನ ನಡೆಸುವುದು ಅತ್ಯಗತ್ಯ. ಕೇವಲ ವರ್ತಮಾನದಲ್ಲಿ ಬದುಕಿದರೆ ಮಾತ್ರ ಸಾಕಾಗುವುದಿಲ್ಲ. ಭವಿಷ್ಯತ್ತಿಗಾಗಿಯೂ ಅಂದರೆ ನಾಳೆಯ ನಂಬಿಕೆಗಳಿಗಾಗಿಯೂ ಆಲೋಚನೆ- ಚಿಂತನೆ ನಡೆಸುವ ಅಗತ್ಯವಾಗಿರುತ್ತದೆ. ಅಂತಹ ಚಿಂತನ-ಮಂಥನಗಳು ಆರೋಗ್ಯಕರ ಸಮಾಜದ ಲಕ್ಷಣ. ನಡೆದು ಬಂದಿರುವ ದಾರಿಯ ಕಡೆಗೆ ಹಿಂತಿರುಗಿ ನೋಡುತ್ತಲೇ ನಿಂತ ನೆಲೆ-ನೆಲವನ್ನೂ ಅರಿಯುವ ಅಗತ್ಯ ಇರುತ್ತದೆ. ಹಾಗೆಯೇ ಮುಂದೆ ಇಡಬೇಕಾದ ಅಡಿಯ ಅರಿವೂ ಇರಬೇಕಾಗುತ್ತದೆ. ಐತಿಹಾಸಿಕ ವ್ಯಕ್ತಿತ್ವವೊಂದು ಸಮಕಾಲೀನ ಸವಾಲುಗಳಿಗೆ ಮುಖಾಮುಖೀ ಆಗುವುದು ಅನಿವಾರ್ಯ. ಹಾಗೆಯೇ ನಿನ್ನೆಯ ದಿನಗಳಲ್ಲಿ ಬದುಕಿದ ಜೀವಕ್ಕೆ ಇಂದು-ನಾಳೆಗಳನ್ನು ಅಡ್ರೆಸ್ ಮಾಡುವ ಚೈತನ್ಯವೂ ಇರಬೇಕಾಗುತ್ತದೆ. ಅಂತಹ ಜೀವದ್ರವ್ಯ ಹೊಂದಿರುವ ಚೇತನ ಬಾಬಾ ಸಾಹೇಬ್ ಅಂಬೇಡ್ಕರ್.
ತನ್ನ ಬುದ್ಧಿಮತ್ತೆ, ಸಾಮಾಜಿಕ ವಿಷಯಗಳಲ್ಲಿ ಕಾಳಜಿ, ಜೀವಪರ ನಿಲುವು, ಜನಪರ ಯೋಚನಕ್ರಮ, ಆರ್ಥಿಕ ವಿಷಯಗಳ ಗುಣಗ್ರಾಹಿತ್ವ, ರಾಜಕೀಯ ತತ್ವಜ್ಞಾನ, ಧಾರ್ಮಿಕ ಸಂಗತಿಗಳ ಬಗ್ಗೆ ಖಚಿತ ನಿಲುವು ಸೇರಿದಂತೆ ಹತ್ತು ಹಲವು ಕಾರಣಗಳಿಗಾಗಿ ಅಂಬೇಡ್ಕರ್ ಪ್ರಿಯರಾಗುತ್ತಾರೆ. ಹಾಗೆಯೇ, ಅವರದು ಕೇವಲ ಬೌದ್ಧಿಕ ಕಸರತ್ತಲ್ಲ. ಕೇವಲ ಥಿಯರಿಗಳನ್ನು ರೂಪಿಸುವುದಕ್ಕಷ್ಟೇ ಅವರ ಪ್ರತಿಭೆ ಸೀಮಿತವಲ್ಲ. ಅಂಬೆಡ್ಕರ್ ಅವರಿಗಿದ್ದ ಮುಂಗಾಣೆ
ಮತ್ತು ಸಮಾಜದ ಬಗೆಗಿನ ಕಾಳಜಿಗಳು ಕೇವಲ ಥಿಯರಿಗಳನ್ನು ರೂಪಿಸಿ ನೀಡುವುದಕ್ಕೆ ಮಾತ್ರ ತಮ್ಮನ್ನು ಸೀಮಿತಗೊಳಿಸಲು ಬಿಡಲಿಲ್ಲ. ಬದಲಿಗೆ ಅವುಗಳನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳಬಲ್ಲ ಸಹಜ, ನೇರ, ಸುಲಭೋಪಾಯಗಳನ್ನ ಕೂಡ ಅಂಬೇಡ್ಕರ್ ಪ್ರಸ್ತಾಪಿಸಿದರು- ನೀಡಿದರು.
ಅಂಬೇಡ್ಕರ್ ಎಂದರೆ ಭಾರತ ಸಂವಿಧಾನದ ಕರಡು ರಚನೆ ಮಾಡಿದ, ಅದರ ಹಿಂದಿನ ಆಶಯಗಳನ್ನು ರೂಪಿಸಿದ
ಸಂವಿಧಾನ ಶಿಲ್ಪಿ ಹಾಗೂ ಶೋಷಿತ, ತುಳಿತಕ್ಕೆ ಒಳಗಾದ ಅಂಚಿನ ಸಮುದಾಯಗಳ ಪರವಾಗಿ ದನಿ ಎತ್ತಿದ ದಲಿತ ನಾಯಕ ಎಂಬ ನಂಬುಗೆ ವ್ಯಾಪಕವಾಗಿದೆ. ಅದು ಸುಳ್ಳೇನಲ್ಲ. ಹೌದು ಅಂಬೇಡ್ಕರ್ ಅವರಿಗೆ ಸಂದಿರುವ ಈ ಗೌರವಗಳು ಕೂಡ ಕಡಿಮೆಯೇನಲ್ಲ. ಆದರೆ, ಸ್ವಲ್ಪ ಗಮನವಿಟ್ಟು ನೋಡಿದರೆ ಅಂಬೇಡ್ಕರ್ ಅವರ ಚಿಂತನೆಗಳು-ವಿಚಾರಗಳ ವ್ಯಾಪಕತೆಯು ಅರಿವಿಗೆ ಬರದೇ ಇರದು. ಅವರು ತಮ್ಮ ಅಧ್ಯಯನ ಹಾಗೂ ಅದರ ಫಲವಾಗಿ ನೀಡಿದ ಕೊಡುಗೆಗಳಿಂದ ಅಂತಾರಾಷ್ಟ್ರೀಯ ಮಟ್ಟದ ಚಿಂತಕ ಆಗಿದ್ದರು-ಆಗಿದ್ದಾರೆ. ಅಂಬೇಡ್ಕರೊತ್ತರ ದಿನಗಳಲ್ಲಿ ಅವರ ಚಿಂತನೆಗಳು ಜಗತ್ತಿನಾದ್ಯಂತ ಹರಡಿ- ಪಸರಿಸಿರುವ ಕ್ರಮವನ್ನು ಅರಿಯುವ ಮತ್ತು ದಾಖಲಿಸುವ ನಿಟ್ಟಿನಲ್ಲಿ ಈ ಸಮಾವೇಶವು ಅತ್ಯಂತ ಯಶಸ್ವಿಯಾಗಿದೆ ಎಂದೇ ಹೇಳಬೇಕು. ಆರ್ಥಿಕ, ಸಾಮಾಜಿಕ, ರಾಜಕೀಯ, ಧಾರ್ಮಿಕ
ಹಾಗೂ ತಾತ್ವಿಕ ವಿಷಯಗಳಲ್ಲಿ ಹಲವು ಬಗೆಯ ಚರ್ಚೆಗಳಿಗೆ ನಾಂದಿ ಹಾಡಿದ್ದ ಅಂಬೇಡ್ಕರ್ ಅವರು ಬೌದ್ಧಿಕ ಜಗತ್ತಿನ
ಬಹುದೊಡ್ಡ ಐಕಾನ್. ಅದನ್ನು ಸ್ಥಳೀಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿದ್ವಾಂಸರು, ಚಿಂತಕರು ತಮ್ಮದೇ ದೃಷ್ಟಿಕೋನ ಮತ್ತು ನೆಲೆಗಳಲ್ಲಿ ಅರ್ಥೈಸಿಕೊಂಡದ್ದನ್ನು ಅಭಿವ್ಯಕ್ತಿಗೊಳಿಸುವ, ಅನಾವರಣಗೊಳಿಸುವುದಕ್ಕೆ ಈ ಸಮಾವೇಶವು ಅನುವು ಮಾಡಿಕೊಟ್ಟಿತು. ಸಮಾವೇಶದ ಫಲಿತ- ಯಶಸ್ಸನ್ನು ಕೂಡ ಹಲವು ನೆಲೆಗಳಿಂದ ಅಳೆಯಬಹುದು. ಅಂಬೇಡ್ಕರ್ ಅವರ ಬಗೆಗಿದ್ದ ಸಾಮಾನ್ಯ ಮಿಥ್‌ಗಳನ್ನು ಡಿಮಿಥಿಫೈ ಮಾಡುವಲ್ಲಿ ಸಮ್ಮೇಳನ ಬಹುತೇಕ ಯಶಸ್ವಿಯಾಗಿದೆ. ಅಂಬೇಡ್ಕರ್ ಚಿಂತನೆಗಳ ಹರಹು ಅದರ ವ್ಯಾಪಕತೆ ಮತ್ತು ಅಗಾಧತೆಗಳನ್ನು ಭಾರತಕ್ಕೆ ಮಾತ್ರವಲ್ಲ, ಜಗತ್ತಿಗೇ ತೋರಿಸಿಕೊಡುವಲ್ಲಿ ಸಮ್ಮೇಳನದ ಪಾತ್ರ ಗಮನಾರ್ಹ ಎಂಬುದರಲ್ಲಿ ಎರಡು ಮಾತಿಲ್ಲ. ಗಾಂಧಿ- ಅಂಬೇಡ್ಕರ್ ಮತ್ತು ಅಂಬೇಡ್ಕರ್- ಮಾರ್ಕ್ಸ್ ನಡುವಿನ ಸಂಬಂಧಗಳನ್ನು, ಅದರ ಸೂಕ್ಷ್ಮ ಎಳೆಗಳನ್ನು ಸಮಾವೇಶವು ವಿಭಿನ್ನ ರೀತಿಯಲ್ಲಿ ತೆರೆದಿಟ್ಟಿತು. ಹಾಗೆಯೇ, ಹೈಪೊಥೀಸಿಸ್ ರೀತಿಯಲ್ಲಿದ್ದ ಕೆಲವು ಸಂಗತಿಗಳಿಗೆ ದೃಢೀಕರಣದ ಮುದ್ರೆಯನ್ನೂ ಸಮಾವೇಶ ಒತ್ತಿತು.
ಸಹಜವಾಗಿಯೇ ಅಂಬೇಡ್ಕರ್ ಅವರ ಆಲೋಚನಾಕ್ರಮದ ಸುತ್ತ ಚರ್ಚೆ ನಡೆಯಿತು. ಅವರು ಎತ್ತಿದ ಅಸಮಾನತೆಯ
ಪ್ರಶ್ನೆ ಮತ್ತು ಸಾಮಾಜಿಕ ನ್ಯಾಯದ ಪ್ರತಿಪಾದನೆಗಳು ಮತ್ತು ಆ ನಿಟ್ಟಿನಲ್ಲಿ ನಡೆದಿರುವ, ನಡೆಯಬೇಕಾಗಿರುವ ದಾರಿಗಳ ಬಗ್ಗೆ ಜಿಜ್ಞಾಸೆ ಪ್ರಮುಖವಾಗಿತ್ತು. ಶೋಷಿತರ ಹಾಗೂ ಅಂಚಿನ ಸಮುದಾಯಗಳ ಬಗೆಗಿನ ಕಾಳಜಿಪೂರಿತ ವಿಚಾರ ವಿಮರ್ಶೆಯ ಜೊತೆಯಲ್ಲಿಯೇ ಸಮಕಾಲೀನ ಬದುಕಿನ ಬಿಕ್ಕಟ್ಟುಗಳನ್ನು ಅರ್ಥೈಸಿಕೊಳ್ಳುವ ಮತ್ತು ಕಂಡುಕೊಳ್ಳಬೇಕಾದ ಪರಿಹಾರಗಳು, ನಡೆಯಬೇಕಾದ, ನಡೆಯಬಹುದಾದ ದಾರಿಗಳ ಕಡೆಗೆ ಮುನ್ನೋಟ ಹರಿಸಿತು. ಸಮಾವೇಶದ ಕೇಂದ್ರ ಕಾಳಜಿ ಅಂಬೇಡ್ಕರ್ ಆಗಿದ್ದರು ಎಂಬುದು ನಿಜವಾದರೂ ಕೇವಲ ಅಂಬೇಡ್ಕರ್ ಅವರಿಗೆ ಸೀಮಿತವಾಗಿರಲಿಲ್ಲ. ಸಮಾವೇಶದ ಆಶಯಗಳು- ವಿಷಯಗಳನ್ನು ರೂಪಿಸಿದ ಚಿಂತಕರ ಸಮೂಹದ ಕಾಳಜಿ ಮತ್ತು ವಿದ್ವತ್ ಬೆರಗುಗೊಳಿಸುವಂತಿತ್ತು. ಸುಖದೇವ ಥೋರಟ…, ವಲೇರಿಯನ್ ರೋಡ್ರಿಗಸ್, ಹರಗೋಪಾಲ್,
ಎಸ್. ಜಾಫೆಟ್ ಅವರುಗಳು ನಡೆಯಬೇಕಾದ ಚರ್ಚೆಯ ವಿಷಯ-ಸ್ವರೂಪವನ್ನು ಸಿದ್ಧಪಡಿಸಿದ್ದರು. ಕನ್ನಡದ ಚಿಂತಕರು
ಕೂಡ ಅದನ್ನು ವಿಸ್ತರಿಸಿದರು.
ಸಮಾವೇಶದ ವಿಷಯಗಳ ಹರಹು ಎಷ್ಟಿತ್ತು ಎಂದರೆ ಇಂದು-ನಾಳೆಗಳನ್ನು ಹಾಗೂ ಪೂರ್ವ-ಪಶ್ಚಿಮದ ದೇಶಗಳನ್ನೂ ಒಳಗೊಳ್ಳುವ ಹಾಗಿತ್ತು. ಕೇವಲ ಅಷ್ಟು ಮಾತ್ರವಲ್ಲದೆ, ಹಲವು ಭಿನ್ನ ಧಾರೆಯ ತಾತ್ವಿಕತೆ- ವಾದಗಳನ್ನು ಒಳಗೊಳ್ಳುವ ಬಹುತ್ವದ ಗುಣದಿಂದಾಗಿ ಅವು ಜನರ ಮೆಚ್ಚುಗೆಗೆ ಪಾತ್ರವಾದವು. ಸಾವಿರಾರು ಜನ ಆಸಕ್ತರು ಮೂರು ದಿನಗಳ ತಾತ್ವಿಕ ಚರ್ಚೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಮುಖ್ಯ ಸಭಾಂಗಣದ ಎಲ್ಲ ಗೋಷ್ಠಿಗಳಿಗೂ ಜನ ಕಿಕ್ಕಿರಿದು ನೆರೆದಿದ್ದರು. ಎರಡು ಸಾವಿರ ಜನರು ಕುಳಿತುಕೊಳ್ಳುವುದಕ್ಕೆ ಅವಕಾಶ ಇದ್ದ ಸಭಾಂಗಣದ ಬಹುತೇಕ ಕುರ್ಚಿಗಳು ತುಂಬಿರುತ್ತಿದ್ದವು. ಬಹುತೇಕ ಇಂಗ್ಲೀಷಿನಲ್ಲಿ ನಡೆದ ಉಪನ್ಯಾಸ- ಚರ್ಚೆಗಳನ್ನು ಜನ ಪ್ರೀತಿ- ಕುತೂಹಲ- ಆಸಕ್ತಿಗಳಿಂದ ಆಲಿಸಿದರು, ಬರೆದಿಟ್ಟುಕೊಂಡರು. ಮುಖ್ಯವೇದಿಕೆಯ ಚರ್ಚೆಯ ಜೊತೆಯಲ್ಲಿ ಏಕಕಾಲಕ್ಕೆ ನಡೆಯುತ್ತಿದ್ದ ಸಮಾನಾಂತರ ಗೊಷ್ಠಿಗಳಲ್ಲಿಯೂ ಜನ ಸ್ವಯಂಪ್ರೇರಣೆಯಿಂದ ಕುಳಿತು ಕೇಳಿದರು. ಊಟ-ಉಪಚಾರದ ಪರಿವೆಯಿಲ್ಲದೇ ಆಸಕ್ತಿ-ಕಾಳಜಿಯಿಂದ ಭಾಗವಹಿಸಿದ್ದರು.
ಸಮಾವೇಶವು ಉಂಟು ಮಾಡಿದ ಅಲೆಗಳು ಇಲ್ಲಿಗೇ ನಿಲ್ಲುವುದಿಲ್ಲ. ಇಲ್ಲಿಂದ ತೆಗೆದುಕೊಂಡ ಹೋದ ಚಿಂತನೆ-ವಿಚಾರಗಳು ದೂರದ ದಡದ ಮೇಲೆ ಪರಿಣಾಮ, ಪ್ರಭಾವ ಬೀರ ತೊಡಗುತ್ತವೆ. ಅದು ಸಮಾಜದ ಆರೋಗ್ಯ
ಕಾಪಾಡುವಲ್ಲಿ ಪೂರಕವಾಗಿರುತ್ತದೆ. ಹೌದು. ಇದು ಪ್ರಭುತ್ವವು ನಡೆಸಿದ ಸಮಾವೇಶ. ಅದಕ್ಕೆ ತನ್ನದೇ ಆದ ರಾಜಕೀಯ, ಸಾಮಾಜಿಕ ಲಾಭ-ನಷ್ಟಗಳ ಲೆಕ್ಕಾಚಾರ ಇದ್ದೇ ಇರುತ್ತದೆ. ಪ್ರಭುತ್ವದ ಪಾಲುದಾರಿಕೆಯ ಕಾರಣದಿಂದ ಅದರದೇ ಮಿತಿಗಳು, ಸಮಸ್ಯೆಗಳು ಇದ್ದೇ ಇರುತ್ತವೆ. ಅಂಬೇಡ್ಕರ್ ಅವರ ಚಿಂತನೆಗಳಿಗೆ ದೊರೆತ ಸೂಕ್ತ-ಸಮಂಜಸ ವೇದಿಕೆಯ ಅದಾಗಿತ್ತು ಎಂಬುದನ್ನು ನಾವು ಮರೆಯಬಾರದು. ಹಾಗೆಯೇ ಸಮಕಾಲೀನ ಸವಾಲುಗಳಿಗೆ ಹಾಗೂ ಮುಂಬರುವ ದಿನಗಳಲ್ಲಿ ಎದುರಿಸಬಹುದಾದ ಸಮಸ್ಯೆಗಳಿಗೆ ಎದುರಾಗಬೇಕಾದ ರೀತಿ, ಮಾನಸಿಕ ಸಿದ್ಧತೆಗಳನ್ನು ರೂಪಿಸುವ ನಿಟ್ಟಿನಲ್ಲಿ ಮಹತ್ವದ ಕೊಡುಗೆ. ಸಮಾವೇಶದಿಂದ ದೂರ- ಹೊರಗಡೆ ಇದ್ದವರಿಗೆ ಕಾಣಿಸಿದ ಸಣ್ಣ ಸಂಗತಿಗಳು ದೊಡ್ಡದಾಗಿ ಕಾಣಿಸಿದಂತೆ, ಭಾಗವಹಿಸಿ ಚರ್ಚೆಗಳಿಗೆ ಸಾಕ್ಷಿಯಾದವರಿಗೆ ಕಾಣಿಸಲಾರವು. ನಾವು ಎಲ್ಲಿ ನಿಲ್ಲುತ್ತೇವೆ ಎನ್ನುವುದು ಏನನ್ನು ನೋಡಬಯಸುತ್ತೇವೆ-ನೋಡುತ್ತೇವೆ ಎನ್ನುವುದನ್ನು ನಿರ್ಧರಿಸುತ್ತದೆ. ಹಾಗೆಯೇ ನಿಂತ ನೆಲ-ನೆಲೆಯೇ ನಮ್ಮ ಆಲೋಚನೆಕ್ರಮ- ಕಾಳಜಿಗಳನ್ನೂ ಸೂಚಿಸುತ್ತಿರುತ್ತದೆ. ಅದನ್ನು ಬೇರೆ ಬೇರೆ ಪದಗಳಿಂದ ವ್ಯಾಖ್ಯಾನಿಸಬಹುದು ಕೂಡ.
ದೇವು ಪತ್ತಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ
Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Gangolli: ಬೈಕ್‌ಗೆ ಕಾರು ಢಿಕ್ಕಿ; ಇಬ್ಬರಿಗೆ ಗಾಯ
Udupi: ಪಿಕಪ್ ವಾಹನ ಢಿಕ್ಕಿ ಹೊಡೆದು ವ್ಯಕ್ತಿ ಗಾಯ
Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.