ಎದೆ ಎದೆಯಲಿ ದಡದಡಿಸಿದೆ ಕಬಡ್ಡಿ, ಕಬಡ್ಡಿ… ಕೇಳಿತೇ ಕೂಗು?
Team Udayavani, Jul 27, 2017, 12:43 PM IST
ಪ್ರೊ ಕಬಡ್ಡಿ ಎಂದ ಕೂಡಲೇ ಭಾರತೀಯರ ಕಿವಿಗಳು ಈಗ ನೆಟ್ಟಗಾಗುತ್ತವೆ. ಈ ನೆಲದ ಪರಂಪರಾಗತ ಕ್ರೀಡೆಯಾದ ಇದಕ್ಕೆ ಇಲ್ಲಿನ ಜನಜೀವನದಲ್ಲಿ ಅವಿಭಾಜ್ಯ ಸ್ಥಾನ. ಜನ ಕ್ರಿಕೆಟನ್ನು ಹಿಂದೆಂದೂ ಇಲ್ಲದ ರೀತಿಯಲ್ಲಿ ಅಪ್ಪಿಕೊಂಡಿದ್ದರೂ ಕಬಡ್ಡಿಯನ್ನು ತಮ್ಮೆದೆ ಗೂಡಲ್ಲಿ ಹಾಗೆಯೇ ಬಚ್ಚಿಟ್ಟುಕೊಂಡಿದ್ದಾರೆ. ಆ ಪ್ರೀತಿಯೆಲ್ಲ ಹೊರ ಹೊಮ್ಮಿದ್ದು ಪ್ರೊ ಕಬಡ್ಡಿ ಮೂಲಕ. ಪ್ರೊ 4 ಆವೃತ್ತಿ ಮುಗಿಸಿ 5ಕ್ಕೆ ಕಾಲಿಟ್ಟಿದೆ. ಜು.28ರಿಂದ ಅ.28ರವರೆಗೆ ಕೂಟ ನಡೆಯಲಿದೆ.
ಐಪಿಎಲ್ ಬೆನ್ನತ್ತಿದೆ ಪಿಕೆಎಲ್
ಕ್ರೀಡೆಗೆ ಬಹುದೊಡ್ಡ ಮಾರುಕಟ್ಟೆ ಇದೆ. ನಷ್ಟದ ಭೀತಿಯಿಲ್ಲದೇ, ಹೂಡಿಕೆಗೆ ಬಹಳ ತಲೆಕೆಡಿಸಿಕೊಳ್ಳದೇ ಹಣ ಮಾಡಬಹುದಾದ ಬಹುದೊಡ್ಡ ಉದ್ಯಮ ಎನ್ನುವುದು ಜಗತ್ತಿನ ಹಲವು ರಾಷ್ಟ್ರಗಳಿಗೆ ಯಾವಾಗಲೋ ಅರ್ಥವಾಗಿದೆ. ಈ ಸತ್ಯ ಭಾರತಕ್ಕೆ ಅರ್ಥವಾಗಿದ್ದು ಮಾತ್ರ ಇತ್ತೀಚೆಗೆ.
ಅಮೆರಿಕದಲ್ಲಿ ಬಾಸ್ಕೆಟ್‌ಬಾಲ್, ಯೂರೋಪ್‌ನಲ್ಲಿ ಫುಟ್‌ಬಾಲ್ ಲಕ್ಷಾಂತರ ಕೋಟಿ ರೂ.ನಲ್ಲಿ ಹಣ ಮಾಡುತ್ತಿವೆ. ಭಾರತದಲ್ಲಿ ಅಕ್ಷರಶಃ ಆ ಸ್ಥಾನ ತುಂಬಿದ್ದು ಕ್ರಿಕೆಟ್. 2008ರವರೆಗೆ ಬರೀ ಅಂತಾರಾಷ್ಟ್ರೀಯ ಪಂದ್ಯಗಳಿಂದ ಹಣ ಮಾಡುತ್ತಿದ್ದ ಬಿಸಿಸಿಐ ದಿಢೀರನೆ ಐಪಿಎಲ್ ಶುರು ಮಾಡಿತು. ಐಪಿಎಲ್ ಹಣ ಮೊಗೆಯುತ್ತಿದ್ದುದ್ದನ್ನು ನೋಡಿದವರು ಆ ರೀತಿ ಜನರನ್ನು ತಲುಪಬಲ್ಲ ಮತ್ತೂಂದು ಕ್ರೀಡೆಗಾಗಿ ಕಾಯುತ್ತಿದ್ದರು. ಆಗ ಕಂಡಿದ್ದು ಕಬಡ್ಡಿ. ಕಬಡ್ಡಿ ಕೋಟ್ಯಂತರ ಜನರ ಅಭಿಮಾನ ಸಂಪಾದಿಸಿದ್ದರೂ ಅದನ್ನು ಹಣವಾಗಿ ಪರಿವರ್ತಿಸಬಹುದು ಎಂಬ ಉಪಾಯ ಹೊಳೆದಿದ್ದು ಸ್ಟಾರ್‌ನ್ಪೋರ್ಟ್ಸ್ ವಾಹಿನಿಗೆ. ಕಬಡ್ಡಿಯನ್ನು ವೃತ್ತಿಪರವಾಗಿಸಿ, ಆಕರ್ಷಕ ಸ್ವರೂಪ ಕೊಟ್ಟು ಸ್ಟಾರ್ 2014ರಲ್ಲಿ ಹೊಸ ಉದ್ಯಮ ಆರಂಭಿಸಿತು. ಅಲ್ಲಿಂದ ಜನಪ್ರಿಯತೆಯಲ್ಲಿ, ಹಣ ಬಾಚುವುದರಲ್ಲಿ ಕ್ರಿಕೆಟ್‌ಗೆ ಪ್ರಬಲ ಸ್ಪರ್ಧಿಯೊಂದು ಹುಟ್ಟಿಕೊಂಡಿದೆ. ಕಬಡ್ಡಿ ಇದೇ ವೇಗದಲ್ಲಿ ಬೆಳೆದರೆ ಕ್ರಿಕೆಟ್‌ನ್ನು 2ನೇ ಸ್ಥಾನಕ್ಕೆ ತಳ್ಳಿ ನಿಂತರೂ ಅಚ್ಚರಿಪಡುವ ಅಗತ್ಯವಿಲ್ಲ. ಕಬಡ್ಡಿ ಭಾರತೀಯರ ನಿಜವಾದ ರಾಷ್ಟ್ರೀಯ ಕ್ರೀಡೆ. ಸದ್ಯ ದೇಶದಲ್ಲಿ ಬಲಪಂಥೀಯ ರಾಷ್ಟ್ರೀಯವಾದ ಭಾರೀ ಜನಪ್ರಿಯವಾಗಿದೆ. ಅದಕ್ಕೆ ಕಬಡ್ಡಿ ಎಂದರೆ ಅತಿ ಪ್ರೀತಿ. ಇದು ಕಬಡ್ಡಿಯನ್ನು ಮತ್ತೂಂದು ಸ್ತರಕ್ಕೆ ಕೊಂಡೊಯ್ಯುವ ಪ್ರಬಲ ಉತ್ಸಾಹ ಹೊಂದಿದೆ.
ಗ್ರಾಮೀಣರಲ್ಲಿ ನವೋತ್ಸಾಹ
ನಗರ ಪ್ರದೇಶಕ್ಕೆ ಹೋಲಿಸಿದರೆ ಗ್ರಾಮೀಣ ಭಾಗದಲ್ಲೇ ಪ್ರೊ ಕಬಡ್ಡಿಗೆ ಹೆಚ್ಚು ವೀಕ್ಷಕರಿದ್ದಾರೆ. ಪ್ರೊ ಕಬಡ್ಡಿ ಆರಂಭವಾಯಿತೆಂದರೆ ಹಳ್ಳಿ ಮಂದಿಯೆಲ್ಲ ಮನೆಯಲ್ಲಿ ಅಥವಾ ಅಂಗಡಿಯ ಮುಂದೆ ಟೀವಿ ನೋಡಲು ಆಸಕ್ತಿ ತೋರಿಸುತ್ತಿದ್ದಾರೆ. 2014ರಲ್ಲಿ ಮೊದಲ ಆವೃತ್ತಿ ನಡೆದಾಗ ಒಟ್ಟಾರೆ 43.5 ಕೋಟಿ ಮಂದಿ ಟೀವಿಯಲ್ಲಿ ವೀಕ್ಷಿಸಿದ್ದರು. ಇದರಲ್ಲಿ ಗ್ರಾಮೀಣ ಪ್ರದೇಶದ ವೀಕ್ಷಕರೇ ಹೆಚ್ಚು ಎನ್ನುತ್ತದೆ ಸಮೀಕ್ಷೆ. ಗ್ರಾಮೀಣ ಭಾಗದ ಜನರು ನಿಧಾನಕ್ಕೆ ಕ್ರಿಕೆಟ್ ಆಡುವುದನ್ನು ನಿಲ್ಲಿಸಿ ಕಬಡ್ಡಿಯತ್ತ ವಾಲುತ್ತಿದ್ದಾರೆ.
ವಿದೇಶಗಳಲ್ಲೂ ಕೇಳಿದೆ ಸದ್ದು
ಕಬಡ್ಡಿ 2016ರಲ್ಲಿ ವಿದೇಶದಲ್ಲೂ ಜನಪ್ರಿಯವಾಗಿದೆ. ಅಮೆರಿಕ, ಕೆನಡಾ, ಯುಕೆ, ಆಸ್ಟ್ರೇಲಿಯಾ, ಇರಾನ್, ಪೋಲೆಂಡ್, ಪಾಕಿಸ್ತಾನ, ಬಾಂಗ್ಲಾದೇಶ, ಕೊರಿಯಾ, ಜಪಾನ್, ಕೀನ್ಯಾದ ನಗರಗಳಲ್ಲೂ ನೇರ ಪ್ರಸಾರ ಕಂಡಿದೆ. ಒಟ್ಟಾರೆ 4 ಆವೃತ್ತಿಗೆ ಹೋಲಿಸಿದಾಗ ಶೇ.51ರಷ್ಟು ಬೆಳವಣಿಗೆ ಆಗಿದೆ.
ಐಪಿಎಲ್‌ಗೆ ನೇರ ಪೈಪೋಟಿ
ಮೊದಲ ಆವೃತ್ತಿ ಪ್ರೊ ಕಬಡ್ಡಿ ಫೈನಲ್ ಪಂದ್ಯವನ್ನು ಒಟ್ಟಾರೆ 8.64 ಕೋಟಿ ವೀಕ್ಷಕರು ವೀಕ್ಷಿಸಿದ್ದರು. ಇದು ಐಪಿಎಲ್ ಬಳಿಕ ದೇಶದಲ್ಲಿ ಅಭಿಮಾನಿಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸಿದ ದೊಡ್ಡ ಕ್ರೀಡೆ. ಇನ್ನೂ ವಿಶೇಷವೆಂದರೆ ಮೊದಲ ಆವೃತ್ತಿ ಕಬಡ್ಡಿ ಪಂದ್ಯಗಳನ್ನು ಟೀವಿಯಲ್ಲಿ ನೋಡಿದವರ ಪ್ರಮಾಣ ಐಪಿಎಲ್‌ಗೆ ಅತಿ ಸನಿಹದಲ್ಲಿದೆ. ಕಬಡ್ಡಿಯನ್ನು 43.5 ಕೋಟಿ ಜನ ನೋಡಿದ್ದರೆ, ಐಪಿಎಲ್‌ನ್ನು 55.2 ಕೋಟಿ ಮಂದಿ ವೀಕ್ಷಕರು ಟೀವಿಯಲ್ಲಿ ವೀಕ್ಷಿಸಿದ್ದರು. 2016ರ ಪ್ರೊ ಕಬಡ್ಡಿ ವೇಳೆ ವೀಕ್ಷಕರ ಸಂಖ್ಯೆ ಶೇ.36ರಷ್ಟು ಹೆಚ್ಚಾಗಿದೆ. ಕಬಡ್ಡಿ ತನ್ನ ಜನಪ್ರಿಯತೆಯಲ್ಲಿ ನೇರವಾಗಿ ಐಪಿಎಲ್‌ಗೆ ಪೈಪೋಟಿ ನೀಡುತ್ತಿದೆ.
ಪ್ರೊ ಹಿಂದಿದೆ ಅದ್ಭುತ ಕನಸು:
ಚಾರು ಎಂಬ ಮಾತುಗಾರನಿಗೆ ಹೊಳೆಯಿತು ಅಸಾಧ್ಯ ಸಾಧ್ಯತೆ
ಕಬಡ್ಡಿ ಭಾರತದ ಉಸಿರು ಉಸಿರಿನಲ್ಲಿ ಬೆರೆತ ಸಹಜ ಕ್ರೀಡೆ. ಅದೊಂದು ಉದ್ಯಮವಾಗಬಲ್ಲದು, ಅದರಿಂದ ಹಣವನ್ನು ಮೊಗೆಯಬಹುದು ಎಂಬೊಂದು ಯೋಚನೆ ಯಾರಿಗೂ ಹೊಳೆದಿರಲಿಲ್ಲ. ಅಂತಹ ಕ್ರೀಡೆಗೆ ಐಪಿಎಲ್ ಮಟ್ಟದ ಮಹತ್ವ ಭಾರತೀಯರು ನೀಡುತ್ತಾರೆ ಎಂದು ಊಹಿಸಿದ್ದು ಒಬ್ಬ ಕ್ರಿಕೆಟ್ ವೀಕ್ಷಕ ವಿವರಣೆಕಾರ! ಮಾತಿನಿಂದಲೇ ಹೆಸರು ಮಾಡಿದ ಚಾರು ಶರ್ಮ ಕಬಡ್ಡಿಗೆ ಹೊಸ ರೂಪ ನೀಡಲು ಅವಿಶ್ರಾಂತ ಶ್ರಮಿಸಿದ್ದರ ಹಿಂದೊಂದು ಸುಂದರ, ರೋಚಕ ಕಥೆಯಿದೆ.
ಚಾರು ಶರ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ ತಂಡದ ಸಿಇಒ ಆಗಿದ್ದರು. ತಂಡದ ಪ್ರದರ್ಶನ ಕಳಪೆ ಎಂಬ ಕಾರಣಕ್ಕೆ ಅವರನ್ನು ಆ ಸ್ಥಾನದಿಂದ ಕಿತ್ತು ಹಾಕಲಾಯಿತು. ಅದಕ್ಕೂ ಕೆಲವು ವರ್ಷಗಳ ಮುನ್ನವೇ 2006ರಿಂದಲೇ ಅವರಲ್ಲಿ ಪ್ರೊ ಕಬಡ್ಡಿಯ ಕನಸು ಮೊಳಕೆಯೊಡೆದಿತ್ತು. ಅದು ಆರಂಭವಾಗಿದ್ದು ಹೀಗೆ…2006ರಲ್ಲಿ ದೋಹಾದಲ್ಲಿ ಏಷ್ಯನ್ ಗೇಮ್ಸ್‌ಗೆ ಚಾರು ಕಬಡ್ಡಿ ಪಂದ್ಯಗಳ ವೀಕ್ಷಕ ವಿವರಣೆ ಮಾಡಲು ತೆರಳಿದ್ದರು. ಆ ಹೊರದೇಶದಲ್ಲಿ ಕಬಡ್ಡಿಗಿದ್ದ ಜನಪ್ರಿಯತೆ ಕಂಡು ದಂಗಾಗಿ ಏಕೆ ಇದನ್ನು ಬೆಳೆಸಬಾರದು ಎಂದು ಚಿಂತಿಸಿದ್ದರು. ಆ ಕುರಿತಂತೆ ಕೆಲವು ವ್ಯಕ್ತಿಗಳನ್ನು ಸಂಪರ್ಕಿಸಿದರು. ಅದಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ಸಿಗಲಿಲ್ಲ. ಸರಿ ಅದು ಅಲ್ಲಿಗೆ ಮುಗಿಯಬಹುದಿತ್ತು, ಇಲ್ಲ ಮುಗಿಯಲಿಲ,.
ಇಲ್ಲಿಂದ ಅವರು ಭಾರತದಲ್ಲಿ ಕಬಡ್ಡಿ ಸಾಧ್ಯತೆಗಳನ್ನು ಹುಡುಕಾಡಲು ಶುರು ಮಾಡಿದರು. ಒಂದು ದಿನ ಭಾರತದ ಗ್ರಾಮೀಣ ಭಾಗದಲ್ಲಿ ಕಬಡ್ಡಿ ಪಂದ್ಯ ನೋಡಿದರು. ಸಾವಿರಾರು ಮಂದಿ ಗುಂಪು ಕಟ್ಟಿಕೊಂಡು ನೋಡುತ್ತಿದ್ದುದನ್ನು ಕಣ್ಣಾರೆ ಕಂಡ ಅವರಿಗೆ ಸುಮ್ಮನಿರಲು ಸಾಧ್ಯವಾಗಲೇ ಇಲ್ಲ. ಕೂಡಲೇ ಅಂತಾರಾಷ್ಟ್ರೀಯ ಕಬಡ್ಡಿ ಒಕ್ಕೂಟ (ಐಕೆಎಫ್)ದ ಬಳಿ ವಿಷಯ ಪ್ರಸ್ತಾಪಿಸಿದರು. ತಮ್ಮ ಸಂಬಂಧಿ, ಉದ್ಯಮಿ ಆನಂದ್ ಮಹಿಂದ್ರಾ ಅವರಲ್ಲಿ ಕಬಡ್ಡಿಗೊಂದು ಔದ್ಯಮಿಕ ಸ್ಪರ್ಶ ನೀಡುವಂತೆ ಕೇಳಿಕೊಂಡರು. ಆಗ ಒಂದು ಹಂತಕ್ಕೆ ರೂಪುರೇಷೆಗಳು ಹೊಳೆದಿದ್ದವು.
2010ರಲ್ಲಿ ಚೀನಾದ ಗುವಾಂಗ್‌ಜೌನಲ್ಲಿ ಏಷ್ಯನ್ ಗೇಮ್ಸ್ ನಡೆದಿದ್ದಾಗ ಚಾರು ಶರ್ಮ ಐಕೆಫ್ನ ಅಂದಿನ ಮುಖ್ಯಸ್ಥ ಜೆ.ಎಸ್.ಗೆಹಲೋಟ್ರಲ್ಲಿ ಮತ್ತೆ ವಿಷಯ ನೆನಪಿಸಿದರು. ಅಲ್ಲಿ ಭಾರತ ಫುಟ್‌ಬಾಲ್ ಒಕ್ಕೂಟದ (ಎಕೆಎಫ್ಐ) ಮುಖ್ಯಸ್ಥ ದೇವರಾಜ್ ಚತುರ್ವೇದಿಯೂ ಇದ್ದರು. ಇಬ್ಬರಿಂದ ಸಕಾರಾತ್ಮಕ ಸ್ಪಂದನೆ ಬಂದಾಗ ಆನಂದ್ ಮಹೀಂದ್ರಾ ಮತ್ತು ಚಾರು ತಮ್ಮದೇ ಆದ ಮಾಶಲ್ ನ್ಪೋರ್ಟ್ಸ್ ಕಂಪನಿ ಆರಂಭಿಸಿದರು. ಕಬಡ್ಡಿಯಲ್ಲಿ ಹೂಡಿಕೆ ಮಾಡುವುದಕ್ಕೆ ಸಿದ್ಧವಾದರು. ಈ ಇಬ್ಬರ ಬದ್ಧತೆ ನೋಡಿ ಎಕೆಎಫ್ಐ ಮಾಶಲ್‌ಗೆ 10 ವರ್ಷಗಳ ಮಟ್ಟಿಗೆ ಪ್ರೊ ಕಬಡ್ಡಿ ಸಂಘಟಿಸಲು ಪೂರ್ಣ ಅನುಮತಿ ನೀಡಿತು.
ಮುಂದೆ ನೇರಪ್ರಸಾರ ಮಾಡುವವರಾರು ಎಂಬ ಪ್ರಶ್ನೆ. ಯಾವುದೇ ಕ್ರೀಡಾವಾಹಿನಿಗಳು ಇದಕ್ಕೆ ಆಸಕ್ತಿ ತೋರಲಿಲ್ಲ. ಆಗ ಬೆಳ್ಳಿ ಬೆಳಕಾಗಿ ಗೋಚರಿಸಿದ್ದು ರೂಪರ್ಟ್ ಮಡೋìಕ್ ಮಾಲಿಕತ್ವದ ಸ್ಟಾರ್ ನ್ಪೋರ್ಟ್ಸ್. ಆಗಷ್ಟೇ ಸ್ಟಾರ್ ನ್ಪೋರ್ಟ್ಸ್, ಇಎಸ್‌ಪಿಎನ್ ವಾಹಿನಿಯ ಶೇ.50 ಷೇರು ಖರೀದಿಸಿತ್ತು. ಅಲ್ಲಿಂದ ಸ್ಟಾರ್ ಇಂಡಿಯಾ ಎಂಬ ವಾಹಿನಿಯನ್ನೇ ಆರಂಭಿಸಿತು. ಮುಂದೆ ಸ್ಟಾರ್‌ನ್ಪೋರ್ಟ್ಸ್, ಮಾಶಲ್‌ನ ಶೇ.74ರಷ್ಟು ಷೇರನ್ನೇ ಖರೀದಿಸಿ ಕೂಟದ ಮೇಲೆ ಪೂರ್ಣ ಅಧಿಕಾರ ಸ್ಥಾಪಿಸಿತು. ಮಾಶಲ್‌ನ ನಿರ್ದೇಶಕರಾಗಿ ಚಾರು ಸಾರಥ್ಯ ಹಿಡಿದರು. ಮುಂದಿನದ್ದೆಲ್ಲ ಟೀವಿ ಪರದೆಯಮೇಲೆ ನಿಮಗೆ ಕಾಣುತ್ತಿದೆ.
ಮೆಚ್ಚಿನ ಅಗ್ರ 10 ಆಟಗಾರರು ನ ಅಗ್ರ 10 ಆಟಗಾರರು
ಜನಪ್ರಿಯತೆಯಲ್ಲಿ ಒಲಿಂಪಿಕ್ಸ್‌ಅನ್ನೇ ಮೀರಿಸಿದ ಪ್ರೊ ಕಬಡ್ಡಿ
ಪ್ರೊ ಕಬಡ್ಡಿ ವೀಕ್ಷಣೆಯ ಪ್ರಮಾಣವನ್ನು ಅಳೆಯುವ ಬಾರ್ಕ್ ಸಂಸ್ಥೆ ಕೆಲವು ಮಾಹಿತಿ ನೀಡಿದೆ. ಅದರ ಅಂಕಿಸಂಖ್ಯೆಗಳು ಅತ್ಯಂತ ಕುತೂಹಲದ ಸಂಗತಿಗಳನ್ನು ಹೊರಹಾಕಿವೆ. 2016ರಲ್ಲಿ ಕ್ರೀಡಾ ನೇರಪ್ರಸಾರದ ವೇಳೆ ಶೇ.80ರಷ್ಟು ವೀಕ್ಷಣೆ ಲಭಿಸಿದ್ದು ಕ್ರಿಕೆಟ್‌ಗೆ. ಇದರಲ್ಲಿ ಐಪಿಎಲ್ ಕೂಡ ಸೇರಿಕೊಂಡಿದೆ ಎನ್ನುವುದು ಸಹಜ ಸಂಗತಿ. ಉಳಿದ ಶೇ.20ರಷ್ಟು ವೀಕ್ಷಣೆಯಲ್ಲಿ ಪ್ರೊ ಕಬಡ್ಡಿ, ಐಎಸ್‌ಎಲ್, ಒಲಿಂಪಿಕ್ಸ್ ತಮ್ಮ ಪಾಲು ಹೊಂದಿವೆ. ಈ ಶೇ.20ರಲ್ಲಿ ಶೇ.61ರಷ್ಟು ಪಾಲನ್ನು ಪ್ರೊ ಕಬಡ್ಡಿಯೇ ಹೊಂದಿರುವುದು ಗಮನಾರ್ಹ. 2016ರಲ್ಲಿ ಒಲಿಂಪಿಕ್ಸ್ ನಡೆದರೂ ಅದನ್ನು ವೀಕ್ಷಿಸಿದ್ದು ಶೇ.12ರಷ್ಟು ಮಂದಿ ಎನ್ನುವುದು ಕಬಡ್ಡಿ ಜನಪ್ರಿಯತೆಯ ನೇರ ಸೂಚಕ.
ಗಾಯ ತಪ್ಪಿಸುವುದೇ ಸಮಸ್ಯೆ
ಇತರೆ ಕ್ರೀಡೆಗಳಿಗೆ ಹೋಲಿಸಿದರೆ ಕಬಡ್ಡಿ ಕ್ರೀಡಾಪಟುಗಳು ಬೇಗ ಗಾಯಕ್ಕೆ ತುತ್ತಾಗುತ್ತಾರೆ. ರೈಡಿಂಗ್ ಮಾಡುವಾಗ ಎದುರಾಳಿಗಳು ಒಮ್ಮೆಲೆ ಬಂದು ಮೈಮೇಲೆ ಬೀಳುತ್ತಾರೆ. ಎದುರಾಳಿಯನ್ನು ಕ್ಯಾಚ್ ಮಾಡುವಾಗ ರೈಡರ್ ಒದೆಯುವ ಸಾಧ್ಯತೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಆಟಗಾರರು ಗಾಯಕ್ಕೆ ತುತ್ತಾಗುತ್ತಾರೆ. ಅಂಕಣದಲ್ಲಿ ಇರುವಷ್ಟು ಹೊತ್ತು ಪ್ರತಿಕ್ಷಣದಲ್ಲಿಯೂ ಜಾಗ್ರತೆಯಿಂದ ಇರಬೇಕು. ಯಾವುದೇ ಕಾರಣಕ್ಕೂ ಮೈಮರೆಯುವ ಹಾಗಿಲ್ಲ.
ಕನ್ನಡಿಗರು ಯಾರ್ಯಾರು?
ಹರೀಶ್ ನಾಯಕ್ (ಬೆಂಗಳೂರು ಬುಲ್ಸ್)
ಪ್ರಶಾಂತ್ ಕುಮಾರ್ ರೈ (ಹರ್ಯಾಣ ಸ್ಟೀಲರ್ಸ್)
ಸುಕೇಶ್ ಹೆಗ್ಡೆ (ಗುಜರಾತ್ ಜೈಂಟ್ಸ್)
ಬಿ.ಎಸ್.ಸಂತೋಷ್ (ಯುಪಿ ಯೋಧಾ)
ವಿ.ಸಚಿನ್ (ತಂಡ ಖಚಿತವಾಗಿಲ್ಲ)
ಎನ್.ಅಭಿಷೇಕ್ (ಜೈಪುರ್ ಪ್ಯಾಂಥರ್ಸ್)
ಎಸ್.ಚೇತನ್ (ದಬಾಂಗ್ ಡೆಲ್ಲಿ)
ಜೆ.ದರ್ಶನ್ (ತಮಿಳ್ ತಲೈವಾಸ್)
ರಾಕೇಶ್ ಗೌಡ (ತಂಡ ಖಚಿತವಾಗಿಲ್ಲ)
ಕೆ.ರಮೇಶ್ (ತಂಡ ಖಚಿತವಾಗಿಲ್ಲ
ನವೋತ್ಸಾಹದಲ್ಲಿ ಬೆಂಗಳೂರು ಬುಲ್ಸ್
ಕಾಸ್ಮಿಕ್ ಮೀಡಿಯಾ ಸಮೂಹ ಬೆಂಗಳೂರು ಬುಲ್ಸ್ ತಂಡದ ಫ್ರಾಂಚೈಸಿ. ಉದಯ್ ತಂಡದ ಮಾಲೀಕ. ಬೆಂಗಳೂರು ಮೊದಲ ಆವೃತ್ತಿಯಲ್ಲಿ 4ನೇ ಸ್ಥಾನ. 2ನೇ ಆವೃತ್ತಿಯಲ್ಲಿ ರನ್ನರ್ ಅಪ್, 3ನೇ ಆವೃತ್ತಿಯಲ್ಲಿ 7ನೇ ಸ್ಥಾನ ಹಾಗೂ 4ನೇ ಆವೃತ್ತಿಯಲ್ಲಿ 6ನೇ ಸ್ಥಾನ ಪಡೆದುಕೊಳ್ಳಲಷ್ಟೇ ಶಕ್ತವಾಗಿದೆ. ಈ ಬಾರಿ ಟ್ರೋಫಿ ಗೆಲ್ಲುವ ವಿಶ್ವಾಸದಲ್ಲಿದೆ.
ರೋಹಿತ್, ಆಶೀಷ್ ತಾರಾ ಆಟಗಾರರು
ರೋಹಿತ್ ಕುಮಾರ್ ಬೆಂಗಳೂರು ಬುಲ್ಸ್ ತಂಡದ ನಾಯಕ. ರೈಡಿಂಗ್‌ನಲ್ಲಿ ಅದ್ಭುತ ಕಲೆಗಾರ. ಇದುವರೆಗೆ ಒಟ್ಟಾರೆ412 ರೈಡಿಂಗ್ ಮಾಡಿದ್ದು 209 ಅಂಕ ಸಂಪಾದಿಸಿದ್ದಾರೆ. ಇನ್ನೋರ್ವ ಆಟಗಾರ ಆಶೀಷ್ ಕುಮಾರ್. ಇವರು ಆಲ್‌ರೌಂಡರ್. 77 ರೈಡಿಂಗ್‌ನಿಂದ 74 ಅಂಕ ಸಂಪಾದಿಸಿದ್ದಾರೆ. ಟ್ಯಾಕಲ್‌ನಲ್ಲಿ 115 ಅಂಕ ಹಾಗೂ ಡಿಫೆನ್ಸ್‌ನಲ್ಲಿ 51 ಅಂಕ ಸಂಪಾದಿಸಿದ್ದಾರೆ.
ತಂಡದಲ್ಲಿ ಏಕೈಕ ಕನ್ನಡಿಗ
ಬೆಂಗಳೂರು ಬುಲ್ಸ್ ತಂಡದಲ್ಲಿ ಇರುವ ಏಕೈಕ ಕನ್ನಡಿಗ ಹರೀಶ್ ನಾಯ್ಕ. ಇವರನ್ನು ಹೊರತು ಪಡಿಸಿದಂತೆ ರಾಜ್ಯದ ಯಾವೊಬ್ಬ ಆಟಗಾರ ತಂಡದಲ್ಲಿಲ್ಲ ಎನ್ನುವುದು ವಿಶೇಷ. ಮೂಲತಃ ಭಟ್ಕಳದವರಾದ ಹರೀಶ್‌ಗೆ ಕಳೆದ ಸಲ ಬುಲ್ಸ್ ತಂಡದಲ್ಲಿದ್ದರೂ ಆಡುವ ಅವಕಾಶ ಸಿಕ್ಕಿರಲಿಲ್ಲ.
ವಿಭಿನ್ನ ರೀತಿಯಲ್ಲಿಕಬಡ್ಡಿ ವೇಳಾಪಟ್ಟಿ
2017ರ ಪ್ರೊ ಕಬಡ್ಡಿ ವೇಳಾಪಟ್ಟಿ ಸ್ವರೂಪ ಬದಲಾಗಿದೆ. ಕಳೆದ ಬಾರಿ 8 ತಂಡಗಳಿರುವ ಒಂದು ಗುಂಪಿತ್ತು. ಅಷ್ಟೂ ತಂಡಗಳ ನಡುವೆ ತಲಾ 2 ಬಾರಿ ಪಂದ್ಯ ನಡೆಯುತ್ತಿತ್ತು. ಒಂದು ತಂಡ ಲೀಗ್ ಹಂತ ಮುಗಿಯುವ ವೇಳೆ 14 ಪಂದ್ಯ ಆಡಿರುತ್ತಿತ್ತು. ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ 4 ತಂಡಗಳು ಸೆಮಿಫೈನಲ್‌ನಲ್ಲಿ ಆಡುತ್ತಿದ್ದವು. ಒಂದು ತಿಂಗಳಲ್ಲಿ ಕೂಟ ಮುಗಿಯುತ್ತಿತ್ತು.
2017ರ ಬದಲಾವಣೆ
ಈ ಬಾರಿ ತಂಡಗಳ ಸಂಖ್ಯೆ 12ಕ್ಕೇರಿದೆ. ಒಟ್ಟು 138 ಪಂದ್ಯಗಳು 3 ತಿಂಗಳ ಕಾಲ ನಡೆಯಲಿವೆ. ತಲಾ 6 ತಂಡಗಳಿರುವ 2 ವಲಯ ರಚಿಸಲಾಗಿದೆ. ಒಂದು ತಂಡ ಲೀಗ್‌ನಲ್ಲಿ ತಲಾ 22 ಪಂದ್ಯ ಆಡಲಿದೆ. ಈ ಹಂತ ಮುಗಿದ ನಂತರ ಲೀಗ್‌ನಲ್ಲಿ ಎರಡೂ ವಲಯಗಳಿಂದ ಅಗ್ರ 3 ತಂಡಗಳನ್ನು ಆರಿಸಲಾಗುತ್ತದೆ. ಇವು ಈ ಬಾರಿ ವಿಭಿನ್ನವಾಗಿ ರೂಪಿಸಿರುವ ಕ್ವಾಲಿಫೈಯರ್ ಸುತ್ತಿನಲ್ಲಿ ಸೆಣಸಲಿವೆ. ಒಟ್ಟು 3 ಕ್ವಾಲಿಫೈಯರ್ ಪಂದ್ಯಗಳು, 2 ಎಲಿಮಿನೇಟರ್ ಪಂದ್ಯಗಳು ನಡೆಯಲಿವೆ.
ಐಪಿಎಲ್ ಮಾದರಿ ಪ್ಲೇಆಫ್ ಪಂದ್ಯ
ಈ ಬಾರಿ ಕೂಟದ ವಿಶೇಷವೆಂದರೆ ಐಪಿಎಲ್ ಮಾದರಿಯಲ್ಲಿ ಪ್ಲೇಆಫ್ ಪಂದ್ಯಗಳನ್ನು (ಅಂತಿಮ ಸುತ್ತಿನ ಪಂದ್ಯಗಳು) ಆಡಿಸುತ್ತಿರುವುದು. ಆದರೆ ಐಪಿಎಲ್‌ಗಿಂತ ಬಹಳ ಭಿನ್ನವಾಗಿ ಪ್ಲೇಆಫ್ ಸುತ್ತನ್ನು ರೂಪಿಸಲಾಗಿದೆ. ಐಪಿಎಲ್‌ನಲ್ಲಿ ಕ್ವಾಲಿಫೈಯರ್-1, ಎಲಿಮಿನೇಟರ್, ಕ್ವಾಲಿಫೈಯರ್-2 ಮತ್ತು ಫೈನಲ್ ಎಂಬ ನಾಲ್ಕು ಹಂತದಲ್ಲಿ ಪ್ಲೇಆಫ್ ಪಂದ್ಯಗಳು ನಡೆಯುತ್ತವೆ. ಕ್ವಾ-1ರಲ್ಲಿ ಅಗ್ರ 2 ತಂಡಗಳು ಸ್ಪರ್ಧಿಸುತ್ತವೆ. ಗೆದ್ದ ತಂಡ ಫೈನಲ್‌ಗೇರುತ್ತದೆ. ಸೋತ ತಂಡ ಕ್ವಾ-2ಕ್ಕೆ ಅರ್ಹತೆ ಪಡೆಯುತ್ತದೆ. ಎಲಿಮಿನೇಟರ್‌ನಲ್ಲಿ 3 ಮತ್ತು 4ನೇ ಸ್ಥಾನಿ ತಂಡಗಳು ಆಡುತ್ತವೆ. ಸೋತ ತಂಡ ಹೊರಹೋಗುತ್ತದೆ. ಗೆದ್ದ ತಂಡ ಕ್ವಾ-2ಕ್ಕೆ ಅರ್ಹತೆ ಪಡೆಯುತ್ತವೆ. ಕ್ವಾ-2ರಲ್ಲಿ ಕ್ವಾ-1ರಲ್ಲಿ ಸೋತ ತಂಡ, ಎಲಿಮಿನೇಟರ್‌ನಲ್ಲಿ ಗೆದ್ದ ತಂಡಗಳ ನಡುವೆ ಪಂದ್ಯ ನಡೆಯುತ್ತದೆ. ಕ್ವಾ-1 ಮತ್ತು ಕ್ವಾ-2ರಲ್ಲಿ ಗೆದ್ದ ತಂಡಗಳ ನಡುವೆ ಫೈನಲ್ ನಡೆಯುತ್ತದೆ. ಪ್ರೊ ಕಬಡ್ಡಿ 3 ಕ್ವಾಲಿಫೈಯರ್ ಪಂದ್ಯಗಳು, 2 ಎಲಿಮಿನೇಟರ್ ಪಂದ್ಯಗಳು ನಡೆಯುತ್ತವೆ. ಹೀಗಿದೆ ನೋಡಿ ಅದರ ವಿವರ.
ಪ್ರೊ ಕಬಡ್ಡಿಗೂ ಮಾಮೂಲಿ ಕಬಡ್ಡಿಗೂ ಏನು ವ್ಯತ್ಯಾಸ?
ಪ್ರೊ ಕಬಡ್ಡಿ ಹಲವು ಕ್ರಾಂತಿಕಾರಕ ಬದಲಾವಣೆ ಮಾಡಿಕೊಂಡಿದ್ದು ಅಭಿಮಾನಿಗಳ ಕುತೂಹಲ ಸೆಳೆಯುವುದಕ್ಕೆ ಕಾರಣವಾಗಿದೆ. ಟಿ20 ಕ್ರಿಕೆಟ್‌ನ ಹಾಗೆ ಕಬಡ್ಡಿಯಲ್ಲೂ ವೇಗ ಹೆಚ್ಚಿಸಲು ಹಲವು ಬದಲಾವಣೆ ಮಾಡಲಾಗಿದೆ. ಅದರ ವಿವರ ಇದು.
ರೈಡ್ ಅವಧಿ 30 ಸೆಕೆಂಡ್
ಮಾಮೂಲಿ ಕಬಡ್ಡಿಯಲ್ಲಿ ರೈಡಿಂಗ್ ಅವಧಿ 45 ಸೆಕೆಂಡ್ ಇರುತ್ತದೆ. ಪ್ರೊ ಕಬಡ್ಡಿಯಲ್ಲಿ ಇದನ್ನು 30 ಸೆಕೆಂಡ್‌ಗೆ ಇಳಿಸಲಾಗಿದೆ.
ಪಂದ್ಯದ ಅವಧಿ 40 ನಿಮಿಷ
ಮಾಮೂಲಿ ಕಬಡ್ಡಿಗೂ ಪ್ರೊ ಕಬಡ್ಡಿಗೂ ಇಲ್ಲಿ ಅಂತಹ ವ್ಯತ್ಯಾಸವೇನಿಲ್ಲ. ಒಟ್ಟಾರೆ ಅವಧಿ 40 ನಿಮಿಷವಿರುತ್ತದೆ. ಆದರೆ ಪ್ರೊ ಕಬಡ್ಡಿಯಲ್ಲಿ ತಂಡವೊಂದಕ್ಕೆ 90 ಸೆಕೆಂಡ್‌ಗಳ ಕಿರು ವಿರಾಮ ತೆಗೆದುಕೊಳ್ಳುವ ಅವಕಾಶ ನೀಡಲಾಗುತ್ತದೆ. 20 ನಿಮಿಷ ಮುಗಿದಾಗ 5 ನಿಮಿಷದ ಅಂತರವಿರುತ್ತದೆ.
ಸೂಪರ್ ರೈಡ್‌ಗೆ ಹೆಚ್ಚುವರಿ ಅಂಕ
ಒಬ್ಬ ರೈಡರ್ ಎದುರಾಳಿ ಅಂಕಣದ ಮೂರು ಅಥವಾ ಹೆಚ್ಚಿನ ಆಟಗಾರರನ್ನು ಔಟ್ ಮಾಡಿದರೆ ಅದನ್ನು ಸೂಪರ್ ರೈಡ್ ಎಂದು ಪರಿಗಣಿಸಲ್ಪಡುತ್ತದೆ. ಹೆಚ್ಚಿನ ಒಂದು ಅಂಕ ಸಿಗುತ್ತದೆ.
ಸೂಪರ್ ಟ್ಯಾಕಲ್‌ಗೆ ಹೆಚ್ಚುವರಿ ಅಂಕ
3 ಮತ್ತು ಅದಕ್ಕಿಂತ ಕಡಿಮೆ ಆಟಗಾರರು ಉಳಿದಿರುವಾಗ ರೈಡರನ್ನು ಔಟ್ ಮಾಡಲು ಯಶಸ್ವಿಯಾದರೆ ಅದನ್ನು ಸೂಪರ್ ಟ್ಯಾಕಲ್ ಎನ್ನಲಾಗುತ್ತದೆ. ಅದಕ್ಕೆ ಹೆಚ್ಚುವರಿ ಅಂಕ ಸಿಗುತ್ತದೆ.
ಮರು ಪರಿಶೀಲನೆ ಮನವಿ
ತಂಡವೊಂದು ಒಮ್ಮೆ ಅಂಪೈರ್ ತೀರ್ಪಿನ ಮರು ಪರಿಶೀಲನೆಗೆ ಮನವಿ ಸಲ್ಲಿಸಬಹುದು. ತೀರ್ಪು ತಪ್ಪು ಎಂದು ಖಚಿತವಾಗಿ ಗೊತ್ತಿದ್ದರೆ ಮಾತ್ರ 10 ಸೆಕೆಂಡ್‌ನೊಳಕ್ಕೆ ಮನವಿ ಸಲ್ಲಿಸಬೇಕು.
ಕಬಡ್ಡಿಯ ಅಚ್ಚರಿಗಳು ನಿಮಗೆ ಗೊತ್ತೇ?
4000 ವರ್ಷದ ಇತಿಹಾಸ
ಭಾರತದಲ್ಲಿ ಕಬಡ್ಡಿಗೆ 4000 ವರ್ಷಗಳ ಇತಿಹಾಸವಿದೆ ಎಂದು ನಂಬಲಾಗುತ್ತದೆ. ಪುರಾತನ ಮಹಾಭಾರತದ ಕಾಲದಲ್ಲೇ ಕಬಡ್ಡಿ ಇತ್ತು ಎನ್ನಲಾಗಿದೆ. ಮಹಾಭಾರತದ ಕಾಲನಿರ್ಣಯ ಮಾಡಿರುವ ವಿದ್ವಾಂಸರು ಅದಕ್ಕೆ 5 ವರ್ಷಗಳ ಇತಿಹಾಸವಿದೆ ಎಂದು ಹೇಳಿದ್ದಾರೆ!
ಕಬಡ್ಡಿ ಜನಕ ಅಭಿಮನ್ಯು!
ಕಬಡ್ಡಿ ಇತಿಹಾಸ ಹುಡುಕಿದರೆ ಸಿಗುವುದು ಮಹಾಭಾರತದ ಅಭಿಮನ್ಯು. ಈತ ಕಬಡ್ಡಿಯ ಜನಕ ಎನ್ನಲಾಗಿದೆ. ಕುರುಕ್ಷೇತ್ರ ಯುದ್ಧದ ವೇಳೆ ಅಭಿಮನ್ಯು ಚಕ್ರವ್ಯೂಹ ಭೇದಿಸುತ್ತಾನೆ. ಕೌರವರು ಸುತ್ತುವರಿದಾಗ ಅರ್ಜುನನ ಪುತ್ರ ಏಕಾಂಗಿಯಾಗಿ ಹೋರಾಡುತ್ತಾನೆ. ಇಲ್ಲಿಂದಲೇ ಕಬಡ್ಡಿ ಸೃಷ್ಟಿಯಾಯಿತು ಎನ್ನಲಾಗಿದೆ.
ಬಾಂಗ್ಲಾದಲ್ಲಿ ರಾಷ್ಟ್ರೀಯ ಕ್ರೀಡೆ
ಕಬಡ್ಡಿ ಭಾರತ, ಪಾಕಿಸ್ತಾನ, ಜಪಾನ್ ರಾಷ್ಟ್ರಗಳಲ್ಲಿ ಭಾರೀ ಜನಪ್ರಿಯ. ವಿಶೇಷ ಎಂದರೆ ಬಾಂಗ್ಲಾದೇಶದಲ್ಲಿ ಕ್ರಿಕೆಟ್, ಫುಟ್ಬಾಲ್ ಜನಪ್ರಿಯ ಕ್ರೀಡೆಯಾದರೂ ಕಬಡ್ಡಿ ರಾಷ್ಟ್ರೀಯ ಕ್ರೀಡೆ. ಬಾಂಗ್ಲಾದ ಗ್ರಾಮೀಣ ಮಟ್ಟದಲ್ಲಿ ಕಬಡ್ಡಿ ಕೂಟಗಳು ನಡೆಯುತ್ತವೆ. ವಿಶ್ವಕಪ್, ಪ್ರೊ ಕಬಡ್ಡಿಯಲ್ಲೂ ಬಾಂಗ್ಲಾ ಆಟಗಾರರು ಪಾಲ್ಗೊಳ್ಳುತ್ತಾರೆ.
ಕಬಡ್ಡಿ ಮೂಲ ತಮಿಳು
ಕಬಡ್ಡಿ ಪದದ ಮೂಲ ತಮಿಳು ಭಾಷೆ. ಕೈ-ಪಿಡಿ ಎಂಬ ಪದದಿಂದ ಕಬಡ್ಡಿ ಎಂಬ ಪದ ಹುಟ್ಟಿಕೊಂಡಿದೆ. ಕೈ ಹಿಡಿ ಎನ್ನುವುದು ಈ ಪದದ ಅರ್ಥ. ತಮಿಳುನಾಡಿನಲ್ಲಿ ಕಬಡ್ಡಿ ಭಾರೀ ಜನಪ್ರಿಯ. ಹಬ್ಬ ಹರಿದಿನಗಳ ಸಂದರ್ಭದಲ್ಲಿ ತಮಿಳಿಗರು ಕಬಡ್ಡಿ ಆಡುತ್ತಾರೆ. ಪ್ರೊ ಕಬಡ್ಡಿಯಲ್ಲಿ ಇದೇ ಮೊದಲ ಬಾರಿ ತಮಿಳುನಾಡು ತಂಡ ಆಡುತ್ತಿದೆ.
ಬರ್ಲಿನ್ ಒಲಿಂಪಿಕ್ಸ್‌ನಲ್ಲಿ ಪ್ರದರ್ಶನ
ಕಬಡ್ಡಿ ಕ್ರೀಡೆಗೆ ಮೊಟ್ಟಮೊದಲ ಬಾರಿಗೆ ಅಂತಾರಾಷ್ಟ್ರೀಯ ಖ್ಯಾತಿ ಸಿಕ್ಕಿದ್ದು ಬರ್ಲಿನ್ ಒಲಿಂಪಿಕ್ಸ್ ಸಂದರ್ಭದಲ್ಲಿ. 1936ರಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಕಬಡ್ಡಿಯನ್ನು ಪ್ರದರ್ಶನ ಮಾಡಲಾಯಿತು. ಆದರೆ ಇದು ಕೇವಲ ಪ್ರದರ್ಶನ ಪಂದ್ಯ ಮಾತ್ರ. ಅಲ್ಲಿಂದ ಇದಕ್ಕೆ ಅಂತಾರಾಷ್ಟ್ರೀಯ ಪ್ರಚಾರ ಸಿಕ್ಕಿತು. ಇಲ್ಲಿಂದ ಪಾನ್, ಇರಾನ್, ಇರಾಕ್… ರಾಷ್ಟ್ರಗಳಲ್ಲಿಯೂ ಕಬಡ್ಡಿ ನೆಲೆ ಕಂಡುಕೊಂಡಿತು.
1995ರಲ್ಲಿ ಮಹಿಳಾ ಕಬಡ್ಡಿ ಶುರು
ಕಬಡ್ಡಿಗೆ ಭಾರತದಲ್ಲಿ ಸಾವಿರಾರು ವರ್ಷಗಳ ಇತಿಹಾಸವಿದ್ದರೂ ಮಹಿಳೆಯರ ಕಬಡ್ಡಿ ಚಾಲ್ತಿಯಲ್ಲಿರಲಿಲ್ಲ. ಮೊಟ್ಟ ಮೊದಲ ಬಾರಿಗೆ ಭಾರತದಲ್ಲಿ ಮಹಿಳೆಯರ ಕಬಡ್ಡಿ ಆರಂಭವಾಗಿದ್ದು 1995ರಲ್ಲಿ. ಆ ನಂತರ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಭಾರತ ತಂಡ ಪಾಲ್ಗೊಳ್ಳುತ್ತಿದೆ. ಇಂದು ಶಾಲಾ, ಕಾಲೇಜು ಮಟ್ಟದಲ್ಲಿಯೂ ಮಹಿಳೆಯರ ಕಬಡ್ಡಿಯನ್ನು ಆಡಿಸಲಾಗುತ್ತಿದೆ.
34 ರಾಷ್ಟ್ರಗಳ ಆಟಗಾರರು
ಪ್ರೊ ಕಬಡ್ಡಿಯಲ್ಲಿ ಇರಾನ್, ಬಾಂಗ್ಲಾ, ಶ್ರೀಲಂಕಾ, ಥಾಯ್ಲೆಂಡ್ ಸೇರಿದಂತೆ ಹಲವು ವಿದೇಶಿ ಆಟಗಾರರು ಪಾಲ್ಗೊಳ್ಳುತ್ತಾರೆ. ಆದರೆ ಎಷ್ಟು ರಾಷ್ಟ್ರಗಳ ಆಟಗಾರರು ಪಾಲ್ಗೊಳ್ಳುತ್ತಾರೆಂಬುದು ನಿಮಗೊ ಗೊತ್ತೇ? 34 ರಾಷ್ಟ್ರ. ಅಚ್ಚರಿಯಾಯಿತೇ? ಇಷ್ಟು ದೇಶಗಳ ಆಟಗಾರರು ಐಪಿಎಲ್‌ನಲ್ಲೂ ಪಾಲ್ಗೊಳ್ಳುವುದಿಲ್ಲ. ಐಪಿಎಲ್ ಅತ್ಯಂತ ಜನಪ್ರಿಯ ಆಟವಾದರೂ ಕೆಲವು ಪ್ರಮುಖ ದೇಶಗಳ ಆಟಗಾರರು ಮಾತ್ರ ಕಾಣಿಸಿಕೊಳ್ಳುತ್ತಾರೆ.
ಪುರುಷ-ಮಹಿಳೆಯರಿಗೂ ವಿಶ್ವಕಪ್
ಭಾರತದಲ್ಲಿ ಪುರುಷ-ಮಹಿಳೆಯರ ಎರಡೂ ತಂಡಗಳು ವಿಶ್ವ ಕಪ್ ಗೆದ್ದ ಏಕೈಕ ಕ್ರೀಡೆಯೆಂದರೆ ಕಬಡ್ಡಿ. ಇದುವರೆಗೆ ನಡೆದ ಎಲ್ಲ ವಿಶ್ವಕಪ್‌ನಲ್ಲೂ ಈ ತಂಡಗಳು ಪ್ರಶಸ್ತಿ ಗೆದ್ದಿವೆ. ಕ್ರಿಕೆಟ್‌ನಲ್ಲಿ ಭಾರತ ಇಷ್ಟು ಮುಂದುವರಿದಿದ್ದರೂ ಮಹಿಳಾ ತಂಡ ಇನ್ನೂ ವಿಶ್ವಕಪ್ ಗೆದ್ದಿಲ್ಲ. ಹಾಕಿ ಭಾರತದ ರಾಷ್ಟ್ರೀಯ ಕ್ರೀಡೆಯಾದರೂ ಮಹಿಳಾ ತಂಡಕ್ಕೆ ಪ್ರಮುಖ ಪ್ರಶಸ್ತಿ ಗೆಲ್ಲುವಷ್ಟು ಸಾಮರ್ಥ್ಯ ಸಿದ್ಧಿಸಿಲ್ಲ.
ಕಳೆದ ಆವೃತ್ತಿಗಳಲ್ಲಿ ಏನಾಯ್ತು?
2014: ಜೈಪುರ್ ಚೊಚ್ಚಲ ಚಾಂಪ್ಸ್
2014ರಲ್ಲಿ ಪ್ರೊ ಕಬಡ್ಡಿಯ ಮೊದಲ ಆವೃತ್ತಿ ಆರಂಭವಾಯಿತು. ಕೂಟದಲ್ಲಿ ಬೆಂಗಳೂರು ಬುಲ್ಸ್ ಸೇರಿದಂತೆ 8 ತಂಡಗಳು ಪಾಲ್ಗೊಂಡಿದ್ದವು. ಭರ್ಜರಿ ಪ್ರದರ್ಶನ ನೀಡಿದ ಜೈಪುರ್ ಪಿಂಕ್ ಪ್ಯಾಂಥರ್ ಮತ್ತು ಯು ಮುಂಬಾ ತಂಡಗಳು ಫೈನಲ್ ಪ್ರವೇಶಿಸಿದ್ದವು. ಫೈನಲ್‌ನಲ್ಲಿ ಬಾಲವುಡ್ ನಟ ಅಭಿಷೇಕ್ ಬಚ್ಚನ್ ಮಾಲಿಕತ್ವದ ಜೈಪುರ್ 35-24 ಅಂಕದಿಂದ ಯು ಮುಂಬಾ ತಂಡವನ್ನು ಸೋಲಿಸಿ ಚಾಂಪಿಯನ್ ಪಟ್ಟಕೇರಿತು.
2015: ಯು ಮುಂಬಾಗೆ ಕಿರೀಟ
ಮೊದಲ ಆವೃತ್ತಿ ಫೈನಲ್‌ನಲ್ಲಿ ಜೈಪುರ್ ವಿರುದ್ಧ ಸೋತು ನಿರಾಶೆಗೊಳಗಾದ್ದ ಯು ಮುಂಬಾ 2ನೇ ಆವೃತ್ತಿಯಲ್ಲಿ ಕಿರೀಟ ಗೆಲ್ಲಲು ಯಶಸ್ವಿಯಾಯಿತು. ಯು ಮುಂಬಾ ಮತ್ತು ಬೆಂಗಳೂರು ಬುಲ್ಸ್ ಫೈನಲ್‌ಗೆ ಲಗ್ಗೆ ಹಾಕಿದ್ದವು. ಫೈನಲ್‌ನಲ್ಲಿ ಮುಂಬೈ 36-30ರಿಂದ ಬೆಂಗಳೂರು ತಂಡವನ್ನು ಸೋಲಿಸಿ ಚಾಂಪಿಯನ್ ಆಯಿತು. ಕೂಟದಲ್ಲಿ ಒಟ್ಟು 8 ತಂಡಗಳು ಪಾಲ್ಗೊಂಡಿದ್ದವು. ಒಟ್ಟು 60 ಪಂದ್ಯಗಳು ನಡೆದವು.
2016: ಪಾಟ್ನಾಗೆ ಪ್ರಶಸ್ತಿ
ಕಳೆದ 2 ಆವೃತ್ತಿಯಲ್ಲಿಯೂ ಫೈನಲ್ ತಲುಪಲು ವಿಫಲವಾಗಿದ್ದ ಪಾಟ್ನಾ ಪೈರೇಟ್ಸ್ 3ನೇ ಆವೃತ್ತಿಯಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ಫೈನಲ್‌ಗೆ ಲಗ್ಗೆ ಹಾಕಿತ್ತು. ಫೈನಲ್‌ನಲ್ಲಿ ಪಾಟ್ನಾ 31-28ರಿಂದ ಯು ಮುಂಬಾ ವಿರುದ್ಧ ಗೆದ್ದು ಪ್ರಶಸ್ತಿ ಪಡೆಯಿತು. ಪಾಟ್ನಾ ತಂಡದ ಸ್ಟಾರ್ ರೈಡರ್ ಪ್ರದೀಪ್ ನರ್ವಾಲ್ ಕೂಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರು. ಮುಂಬೈ ತಂಡ ಸತತವಾಗಿ ಮೂರು ಆವೃತ್ತಿಯಲ್ಲಿಯೂ ಫೈನಲ್ ತಲುಪಿದ ಖ್ಯಾತಿ ಪಡೆಯಿತು.
2016: 2ನೇ ಬಾರಿ ಪಾಟ್ನಾ ಜಯ
2016ರಲ್ಲಿಯೇ ಮತ್ತೂಂದು ಆವೃತ್ತಿ ನಡೆಯಿತು. ಈ ಆವೃತ್ತಿಯಲ್ಲೂ ಪಾಟ್ನಾ ತಂಡದ್ದೇ ಅಬ್ಬರವಾಗಿತ್ತು. ಜೈಪುರ್ ಮತ್ತು ಪಾಟ್ನಾ ತಂಡಗಳು ಫೈನಲ್‌ಗೆ ಪ್ರವೇಶಿಸಿದ್ದವು. ಫೈನಲ್‌ನಲ್ಲಿ ಪಾಟ್ನಾ ತಂಡ ಜೈಪುರ್ ತಂಡವನ್ನು ಸೋಲಿಸಿ 2ನೇ ಬಾರಿಗೆ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಸ್ಟಾರ್ ರೈಡರ್ ಪ್ರದೀಪ್ ನರ್ವಾಲ್ ಭರ್ಜರಿ ಪ್ರದರ್ಶನ ನೀಡಿ ತಂಡದ ಗೆಲುವಿಗೆ ನೆರವಾದರು.
ಸಾರ್ವಕಾಲಿಕ ದಾಖಲೆ ಮೊತ್ತಕ್ಕೆ ತೋಮಾರ್ ಮಾರಾಟ
ಆವೃತ್ತಿಯಿಂದ ಆವೃತ್ತಿಗೆ ಪ್ರೊ ಕಬಡ್ಡಿ ಜನಪ್ರಿಯತೆ ಪಡೆಯುತ್ತಿದೆ. ಹೀಗಾಗಿ ಈ ಬಾರಿ ನಡೆದ ಹರಾಜಿನಲ್ಲಿ ಆಟಗಾರರು ಭರ್ಜರಿ ಮೊತ್ತಕ್ಕೆ ಮಾರಾಟವಾಗಿದ್ದಾರೆ. ಉತ್ತರಪ್ರದೇಶದ ರೈಡರ್ ನಿತಿನ್ ತೋಮಾರ್ ಯುಪಿ ಯೋಧಾ ತಂಡಕ್ಕೆ 93 ಲಕ್ಷ ರೂ.ಗೆ ಮಾರಾಟವಾಗಿದ್ದಾರೆ. ಇದು ಕಬಡ್ಡಿಯಲ್ಲಿಯೇ ಸಾರ್ವಕಾಲಿಕ ದಾಖಲೆಯಾಗಿದೆ. ಉಳಿದಂತೆ ರೋಹಿತ್ ಕುಮಾರ್ ಬೆಂಗಳೂರು ಬುಲ್ಸ್ ತಂಡಕ್ಕೆ 81 ಲಕ್ಷ ರೂ.ಗೆ ಹರಾಜಾಗಿದ್ದಾರೆ. ಮಂಜೀತ್ ಚಿಲ್ಲರ್ ಜೈಪುರ್ ತಂಡಕ್ಕೆ 75.5 ಲಕ್ಷ ರೂ.ಗೆ ಹರಾಜಾಗಿದ್ದಾರೆ.
10 ಆಟಗಾರರು ಗರಿಷ್ಠ ಮೊತ್ತಕ್ಕೆ ಬಿಕರಿ (ಲಕ್ಷ ರೂ.ಗಳಲ್ಲಿ)
₹93,00,000
ನಿತಿನ್ ತೋಮಾರ್
ಯುಪಿ ಯೋಧಾ
₹81,00,000
ರೋಹಿತ್ ಕುಮಾರ್
ಬೆಂಗಳೂರು ಬುಲ್ಸ್
₹75,50,000
ಮಂಜೀತ್ ಚಿಲ್ಲರ್
ಜೈಪುರ್ ಪಿಂಕ್ ಪ್ಯಾಂಥರ್ಸ್
₹73,00,000
ಸುರ್ಜೀತ್ ಸಿಂಗ್
ಬೆಂಗಾಲ್ ವಾರಿಯರ್ಸ್
₹73,00,000
ಕೆ. ಸೆಲ್ವಮಣಿ
ಜೈಪುರ್ ಪಿಂಕ್ ಪ್ಯಾಂಥರ್ಸ್
₹69,00,000
ರಾಜೇಶ್ ನರ್ವಾಲ್
ಯುಪಿ ಯೋಧಾ
₹66,00,000
ಸಂದೀಪ್ ನರ್ವಾಲ್
ಪುನೇರಿ ಪಲ್ಟಾನ…
₹63,00,000
ಅಮಿತ್ ಹೂಡಾ
ತಮಿಳ್ ತಲೈವಾಸ್
₹52,00,000
ಜೀವಾ ಕುಮಾರ…
ಯುಪಿ ಯೋಧ
₹51,50,000
ಕುಲದೀಪ್ ಸಿಂಗ್
ಯು ಮುಂಬಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NZvsENG: ಭರ್ಜರಿ ಕಮ್‌ಬ್ಯಾಕ್ ಮಾಡಿದ ಕೇನ್ ವಿಲಿಯಮ್ಸನ್
IPL 2024: ನನಗೆ ಪ್ರೀತಿ ಗೌರವ ಕೊಡಿ ಸಾಕು..: ಡೆಲ್ಲಿ ಮಾಲಿಕರ ಮುಂದೆ ರಾಹುಲ್ ಬೇಡಿಕೆ
Mumbai Cricket: ಸಚಿನ್ ತೆಂಡೂಲ್ಕರ್ ಸಲಹೆಯನ್ನೂ ನಿರ್ಲಕ್ಷಿಸಿದರಾ ಪೃಥ್ವಿ ಶಾ..
IPL : ಸಿಎಸ್‌ಕೆ ಮಾಲಿಕ ಶ್ರೀನಿವಾಸನ್ ವಿರುದ್ದ ಫಿಕ್ಸಿಂಗ್ ಆರೋಪ ಮಾಡಿದ ಲಲಿತ್ ಮೋದಿ
ICC ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.