ಮಕ್ಕಳ ಯಾವ ನೆರವೂ ಬೇಡ, ಮನೆ ಕೊಡಿಸಿ ಸಾಕು : ವೃದ್ಧೆಯ ಅಳಲು
Team Udayavani, Jul 28, 2017, 11:10 AM IST
ಉಡುಪಿ: ನನಗೆ ಮಕ್ಕಳ ಹಣ ಬೇಡ. ಅವರು ಯಾವುದೇ ನೆರವು ನೀಡುವುದೂ ಬೇಡ. ನಾನು ಕಟ್ಟಿಸಿದ ಮನೆ ನನಗೆ ಸಿಕ್ಕರೆ ಅಷ್ಟೇ ಸಾಕು. ಯಾರಿಗೂ ಭಾರವಾಗಿರಲು ನನಗಿಷ್ಟವಿಲ್ಲ. ಇದು ಇಬ್ಬರು ಪುತ್ರರಿಂದ ಹಲ್ಲೆ, ದೌರ್ಜನ್ಯಕ್ಕೊಳಗಾಗಿ ಗಾಯಗೊಂಡು, ಮನೆಯಿಂದ ಹೊರಹಾಕಲ್ಪಟ್ಟ ಸಂತ್ರಸ್ತ ವೃದ್ಧೆಯ ನೋವಿನ ಮಾತಿದು. ಕಾರ್ಕಳ ತಾಲೂಕಿನ ಕಡ್ತಲ ಗ್ರಾಮದ 80 ವರ್ಷದ ಸುಲೋಚನಾ ಪೈ ಕಳೆದ 10 ವರ್ಷಗಳಿಂದ ಇಬ್ಬರು ಪುತ್ರರಾದ ರಮಾಕಾಂತ ಮತ್ತು ಭರತ್ ಪೈ ಅವರಿಂದ ನಿತ್ಯ ಈ ನರಕಯಾತನೆ ಅನುಭವಿಸುತ್ತಿದ್ದಾರೆ. ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ ಈ ವೃದ್ಧೆಯ ನೆರವಿಗೆ ಧಾವಿಸಿದೆ.
ಮಕ್ಕಳ ಮೃಗೀಯ ವರ್ತನೆ
ಇಬ್ಬರು ಪುತ್ರರನ್ನು ಯಾರ್ಯಾರ ಮನೆ ಕೆಲಸ ಮಾಡಿ ಸಲಹಿದೆ. ದೊಡ್ಡವರಾದ ಆನಂತರ ಪ್ರತಿದಿನ ಕುಡಿದು ಬಂದು ವೃದ್ಧೆ, ತಾಯಿ ಎನ್ನುವುದನ್ನು ಲೆಕ್ಕಿಸದೇ ಮನಬಂದಂತೆ ಹೊಡೆಯುತ್ತಿದ್ದು, ಕ್ರೂರ ಮೃಗಗಳಂತೆ ವರ್ತಿಸುತ್ತಿದ್ದರು ಎಂದು ಸುಲೋಚನಾ ಉಡುಪಿಯ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಕಣ್ಣೀರಿಟ್ಟರು.
ಪ್ರತಿಷ್ಠಾನದ ನೆರವು
2016ರಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಲ್ಲಿ ಸುಲೋಚನಾ ಅಳಲು ತೋಡಿಕೊಂಡಿದ್ದರು. ಆಗ ಅಜೆಕಾರು ಠಾಣೆಯಲ್ಲಿ ಪ್ರಕರಣದ ವಿಚಾರಣೆ ನಡೆಯಿತು. ಮನೆಯನ್ನು ತಾಯಿಗೆ ಬಿಟ್ಟುಕೊಡುತ್ತೇನೆಂದು ಪುತ್ರ ರಮಾಕಾಂತ ಪೊಲೀಸರಿಗೆ ಬರೆದು ಕೊಟ್ಟಿದ್ದರು. ಆದರೆ ಆಕೆಗೆ ಮನೆ ಮಾತ್ರ ಸಿಗಲೇ ಇಲ್ಲ. 2016ರ ಮಾರ್ಚ್‌ನಲ್ಲಿ ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನವನ್ನು ಸಂಪರ್ಕಿಸಿ, ಕುಂದಾಪುರದ ಹಿರಿಯ ನಾಗರಿಕರ ನ್ಯಾಯ ಮಂಡಳಿಗೆ ದೂರು ನೀಡಿದರು.
8 ತಿಂಗಳ ಕಾಲ ವಿಚಾರಣೆ ನಡೆಸಿದ ನ್ಯಾಯ ಮಂಡಳಿ ಪ್ರತಿ ತಿಂಗಳು ರಮಾಕಾಂತ ಅವರ ತಾಯಿಗೆ 6,000 ರೂ. ಪೋಷಣೆ ಭತ್ತೆ ನೀಡಬೇಕೆಂದು ತೀರ್ಪು ನೀಡಿತು. ಆದರೆ ಆತ ವಿಚಾರ ಣೆಗೂ ಹಾಜರಾಗಿಲ್ಲ, ಹಣವನ್ನೂ ನೀಡಿಲ್ಲ. ಮಂಡಳಿಯು ಮನೆ ಸ್ವಾಧೀನದ ಕುರಿತು ಸ್ಪಷ್ಟ ಆದೇಶ ನೀಡದ್ದರಿಂದ ಸುಲೋಚನಾ ಪೈ ಜಿಲ್ಲಾಧಿಕಾರಿಗಳ ಮೊರೆ ಹೋದರು. ವಿಚಾರಣೆ ನಡೆಸಿದ ಜಿಲ್ಲಾಧಿಕಾರಿ, ಮನೆಯನ್ನು ತಾಯಿಗೆ ನೀಡುವಂತೆ ಕಾರ್ಕಳ ತಹಶೀಲ್ದಾರ್‌ಗೆ ಸೂಚಿಸಿದ್ದಾರೆ.
ತಾಯಿಯ ರಕ್ಷಣೆಗೆ ಆಗ್ರಹ
ಇದೇ ವೇಳೆ ಪ್ರತಿಷ್ಠಾನವನ್ನು ಸಂಪರ್ಕಿಸಿದ ಪುತ್ರ ರಮಾಕಾಂತ ನಾನು ಯಾವುದೇ ಕಾರಣಕ್ಕೂ ಮನೆ ಬಿಟ್ಟು ಕೊಡಲಾರೆ; ಏನು ಮಾಡಬೇಕೆಂದು ಗೊತ್ತಿದೆ ಎಂದು ಬೆದರಿಕೆ ಹಾಕಿದ್ದ. ಪ್ರತಿಷ್ಠಾನವು ಕಾರ್ಕಳ ತಹಶೀಲ್ದಾರರನ್ನು ಸಂಪರ್ಕಿಸಿ, ಮನೆಯನ್ನು ಸುಲೋಚನಾ ಸ್ವಾಧೀನಕ್ಕೆ ಒಪ್ಪಿಸುವಂತೆ ಹಾಗೂ ಜೀವ ರಕ್ಷಣೆ ನೀಡಬೇಕೆಂದು ಮನವಿ ಮಾಡಿದೆ.
ನಾಗರಿಕರ ಸಹಾಯ ಅಗತ್ಯ
ಕಾನೂನು ಅಥವಾ ಸರಕಾರಿ ಇಲಾಖೆಗಳಿಂದ ಮಾತ್ರ ಹಿರಿಯ ನಾಗರಿಕರ ರಕ್ಷಣೆ ಸಾಧ್ಯವಿಲ್ಲ. ಅಧಿಕಾರಿಗಳೊಂದಿಗೆ ಸ್ಥಳೀಯ ನಾಗರಿಕರು ಕೈ ಜೋಡಿಸಿದಲ್ಲಿ ಮಾತ್ರ ಅಸಹಾಯಕರನ್ನು ರಕ್ಷಿಸಲು ಸಾಧ್ಯ. ಸುಲೋಚನಾ ಪೈ ಪ್ರಕರಣದಲ್ಲಿ ಜಿಲ್ಲಾಧಿಕಾರಿ ಒಳ್ಳೆಯ ತೀರ್ಮಾನ ತೆಗೆದುಕೊಂಡಿದ್ದಾರೆ. ಆದರೆ ಗ್ರಾಮದ ನಾಗರಿಕರ ಸಹಕಾರವಿಲ್ಲದೆ ಆಕೆಗೆ ನ್ಯಾಯ ಮತ್ತು ರಕ್ಷಣೆ ಸಿಗುವುದು ಕಷ್ಟ.
– ಡಾ| ರವೀಂದ್ರನಾಥ ಶಾನುಭಾಗ್, ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ
ಮಕ್ಕಳಿಂದ ರಕ್ಷಣೆ ನೀಡಿ
ಹಿರಿಯ ಪುತ್ರ ರಮಾಕಾಂತ್ ಹಾಗೂ ಅವರ ಪತ್ನಿ ಮನೆಯಲ್ಲಿ ವಾಸ ಮಾಡಲು ಅವಕಾಶ ಮಾಡಿಕೊಡುತ್ತಿಲ್ಲ. ಕಲ್ಲು ಎತ್ತಿಹಾಕಿ ಸಾಯಿಸಿ ಗೋಣಿಗೆ ತುಂಬಿಸಿ ಹೊಳೆಗೆ ಎಸೆಯುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ಕತ್ತಿ ಹಿಡಿದು ಓಡಿಸಿಕೊಂಡು ಬರುತ್ತಾನೆ. ಕಿರಿಯ ಪುತ್ರ ಭರತ ಕೂಡ ಕುಡಿಯಲು ಹಣವಿಲ್ಲದಿದ್ದಾಗ ಬಂದು ಪೀಡಿಸುತ್ತಾನೆ. ನನಗೆ ಮಕ್ಕಳ ಹಣ, ಆಶ್ರಯ ಯಾವುದು ಬೇಡ. ನನ್ನ ಮನೆಯನ್ನು ಕೊಡಿಸಿ, ಅದನ್ನು ಮಾರಿ, ಆ ಹಣವನ್ನು ವೃದ್ಧಾಶ್ರಮಕ್ಕೆ ನೀಡಿ ಅಲ್ಲಿಯೇ ಇರುತ್ತೇನೆ. ನನ್ನ ಮಕ್ಕಳಿಂದ ರಕ್ಷಣೆ ನೀಡಿ.
– ಸುಲೋಚನಾ ಪೈ, ಸಂತ್ರಸ್ತ ವೃದ್ಧೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru; ಫುಟ್‌ಬಾಲ್ ಕ್ವಾರ್ಟರ್ ಫೈನಲ್ :ಕಸಬ ಬ್ರದರ್ ಮೇಲುಗೈ
BBK11: ಡಬಲ್ ಎಲಿಮಿನೇಷನ್: ಮೊದಲು ಆಚೆ ಹೋದ ಸ್ಪರ್ಧಿ ಇವರೇ ನೋಡಿ
Rohingya; ತ್ರಿಪುರಾದಲ್ಲಿ 6 ರೋಹಿಂಗ್ಯಾ ಮಹಿಳೆಯರ ಬಂಧನ
ಗೋಡ್ಸೆ ವಿಚಾರಧಾರೆಗಳ ಹೊಂದಿರುವ ಬಿಜೆಪಿಗರು ಗಾಂಧಿ ವಿಚಾರಗಳ ಒಪ್ಪಲ್ಲ: ಸುರ್ಜೇವಾಲಾ
BCCI 10-point ಆದೇಶ ಸಮಸ್ಯೆ; ಮೀಸಲಾತಿ ಹೊಂದಿದ್ದೇವೆ ಎಂದು ರೋಹಿತ್ ಸುಳಿವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.