ಸ್ಪೇನಿನ ಕತೆ: ಮಾಯಾ ಕನ್ನಡಿ
Team Udayavani, Jul 30, 2017, 6:45 AM IST
ದೇಶವನ್ನಾಳುವ ರಾಜನು ಪರಾಕ್ರಮಶಾಲಿಯಾಗಿದ್ದನು. ಅನೇಕ ರಾಜರನ್ನು ತನ್ನ ಬಾಹುಬಲದಿಂದ ಸೋಲಿಸಿ ಸಾಮಂತರನ್ನಾಗಿ ಮಾಡಿಕೊಂಡಿದ್ದನು. ಅವನಷ್ಟು ರೂಪವಂತರು ಆ ದೇಶದಲ್ಲಿ ಇರಲಿಲ್ಲ. ಯೋಗ್ಯವಾದ ಕನ್ಯೆಯನ್ನು ಹುಡುಕಿ ಮದುವೆ ಮಾಡಿಕೊಳ್ಳಬೇಕೆಂದು ಅವನು ಯೋಚಿಸಿದ. ತನ್ನ ಕೈ ಹಿಡಿಯುವವಳು ರಾಜಮನೆತನದವಳಾಗಿರದಿದ್ದರೂ ತೊಂದರೆಯಿಲ್ಲ, ಅವಳಲ್ಲಿ ಯಾವುದೇ ದೋಷಗಳಿರಬಾರದು ಎಂದು ಅವನ ಅಪೇಕ್ಷೆ. ಅವನು ತನ್ನ ಸುಖ-ದುಃಖಗಳನ್ನು ಕೇಶ ಶೃಂಗಾರ ಮಾಡುವ ಕ್ಷೌರಿಕನಲ್ಲಿ ಹೇಳಿಕೊಳ್ಳುತ್ತಿದ್ದ.
ಆ ಸರ್ತಿ ಕ್ಷೌರಿಕನು ಬಂದಾಗ ರಾಜನು, “”ಇದುವರೆಗೆ ರಾಜ್ಯ ವಿಸ್ತರಣೆಯಲ್ಲಿ ನಾನು ಮಗ್ನನಾಗಿದ್ದೆ. ಹೀಗಾಗಿ ಮದುವೆಯ ಬಗೆಗೆ ಯೋಚಿಸಿರಲಿಲ್ಲ. ಆದರೆ ಈಗ ಅನುರೂಪಳಾದ ಹುಡುಗಿಯನ್ನು ಮದುವೆಯಾಗಬೇಕೆಂದು ನಿರ್ಧರಿಸಿದ್ದೇನೆ. ನನ್ನ ರಾಣಿಯಾಗಿ ಬರುವವಳು ಭಾರೀ ಚೆಲುವೆಯಾಗಿರದಿ ದ್ದರೂ ತೊಂದರೆಯಿಲ್ಲ. ಬಡವಳ ಮನೆಯವಳೂ ಆಗಿರಬಹುದು. ಅವಳು ಮೋಸಗಾರಳಾಗಿರಬಾರದು, ಸುಳ್ಳು ಹೇಳಿರಬಾರದು, ಅವಳಲ್ಲಿ ಯಾವ ದೋಷಗಳೂ ಇರಬಾರದು. ನೋಡಿದ ಕೂಡಲೇ ನಮಗೆ ಇಂತಹ ದೋಷಗಳು ತಿಳಿಯುವುದಿಲ್ಲ. ಆದರೂ ನಿಧಾನವಾಗಿ ಅಂತಹ ಗುಣವಿರುವವರಿಂದ ಸಂಸಾರ ಹಾಳಾಗುತ್ತದೆ. ನೀನು ತುಂಬ ಜನರ ಮನೆಗಳಿಗೆ ಕೇಶಶೃಂಗಾರ ಮಾಡಲು ಹೋಗುತ್ತಿರುವೆ. ಅಲ್ಲಿ ಯಾರಾದರೂ ದೋಷರಹಿತ ಹುಡುಗಿ ಇದ್ದರೆ ನನಗೆ ಹುಡುಕಿ ಕೊಡುತ್ತೀಯಾ?” ಎಂದು ಕೇಳಿದ.
ಕ್ಷೌರಿಕನು, “”ಅದೆಷ್ಟರ ಕೆಲಸ! ತುಂಬ ಸುಲಭ. ಬಡವರಿರಲಿ, ಶ್ರೀಮಂತರಿರಲಿ ಅವರು ಎಷ್ಟು ಪರಿಶುದ್ಧರು ಎಂಬುದನ್ನು ತಿಳಿಯುವ ಒಂದು ಉಪಾಯ ನನ್ನಲ್ಲಿದೆ. ಅದು ವಿಶೇಷವಾದ ಮಾಯಾ ಕನ್ನಡಿ. ಯೋಗಿಗಳೊಬ್ಬರಿಗೆ ನಾನು ಮಾಡಿದ ಕೇಶಾಲಂಕಾರದಿಂದ ಸಂತೋಷವಾಯಿತು. ಪ್ರತಿಯಾಗಿ ಕೊಡಲು ಅವರಲ್ಲಿ ಹಣವಿರಲಿಲ್ಲ. ತಮ್ಮ ಜೋಳಿಗೆಯಿಂದ ಈ ಮಾಯಾ ಕನ್ನಡಿಯನ್ನು ತೆಗೆದು ಕೊಟ್ಟುಹೋದರು. ಕೊಡುವಾಗ ಈ ಕನ್ನಡಿಯಲ್ಲಿ ಬೇಕಾದಂತೆ ಮುಖ ನೋಡಬಾರದು. ಯಾರಲ್ಲಿ ಮೋಸ, ಸುಳ್ಳು, ಅಪ್ರಾಮಾಣಿಕ ಬುದ್ಧಿ ಇರುತ್ತದೋ ಯಾವುದೇ ದೋಷವಿರುವವರು ಈ ಕನ್ನಡಿಯಲ್ಲಿ ನೋಡಿದ ತಕ್ಷಣ ಹಂದಿಯ ಮುಖವನ್ನು ಹೊಂದುತ್ತಾರೆ. ಹೀಗಾಗಿ ನಾವು ನಿಷ್ಕಲ್ಮಶರು ಎಂದು ಧೈರ್ಯವಿರುವವರಷ್ಟೇ ಈ ಕನ್ನಡಿಯಲ್ಲಿ ಮುಖ ನೋಡಬೇಕು ಎಂದು ಎಚ್ಚರಿಸಿದ್ದಾರೆ. ನಾನು ಕನ್ನಡಿಯನ್ನು ತೀರ ಜೋಪಾನವಾಗಿ ತೆಗೆದಿಟ್ಟಿದ್ದೇನೆ. ಸುಮ್ಮನೆ ಯಾರಿಗೂ ಅದರಲ್ಲಿ ಮುಖ ನೋಡಲು ಬಿಡುವುದಿಲ್ಲ. ಇದೇ ಕನ್ನಡಿಯೊಂದಿಗೆ ಹುಡುಗಿಯರಿರುವ ಪ್ರತಿ ಮನೆಗೂ ಹೋಗುತ್ತೇನೆ. ಕನ್ನಡಿಯಲ್ಲಿ ಪರೀಕ್ಷಿಸಿಕೊಂಡು ಶುದ್ಧರೆಂದು ತೀರ್ಮಾನಿಸಿಕೊಂಡವರನ್ನೇ ನಿಮ್ಮ ಕೈ ಹಿಡಿಯಲು ಆರಿಸಿ ಕೊಡುತ್ತೇನೆ” ಎಂದು ಹೇಳಿದ.
ರಾಜನಿಗೆ ಖುಷಿಯಾಯಿತು. “”ಒಳ್ಳೆಯದು. ನೀನು ಎಲ್ಲಾ ಕಡೆ ಹೋಗಿ ನನಗೆ ಒಳ್ಳೆಯ ಹುಡುಗಿ ಯಾರೆಂದು ನೋಡಿಕೊಂಡು ಬಾ” ಎಂದು ಹೇಳಿದ. ಕ್ಷೌರಿಕ ಕನ್ನಡಿಯನ್ನು ತೆಗೆದುಕೊಂಡು ಹಲವಾರು ರಾಜರ ಅರಮನೆಗಳಿಗೆ ಹೋದ. ತನ್ನ ರಾಜನ ಕೀರ್ತಿಯನ್ನು ಮನಸಾರೆ ಕೊಂಡಾಡಿದ.
“”ಅಂತಹ ಭಾಗ್ಯಶಾಲಿಯನ್ನು ಕೈ ಹಿಡಿಯಲು ಸಿದ್ಧರಿದ್ದೀರಾ?” ಎಂದು ಕೇಳಿದ. ರಾಜನ ಗುಣಗಾನ ಕೇಳಿ ಎಲ್ಲ ರಾಜಕುಮಾರಿಯರೂ ಅವನ ಕೈ ಹಿಡಿಯಲು ತುದಿಗಾಲಲ್ಲಿ ನಿಂತರು. “”ಇಂತಹ ವೀರನನ್ನು ಕೈ ಹಿಡಿಯುವುದು ನಮ್ಮ ಪುಣ್ಯ” ಎಂದು ಹೇಳಿದರು. ಆದರೆ ಕ್ಷೌರಿಕನು, “”ಅವಸರಿಸಬೇಡಿ. ಅವನ ಕೈ ಹಿಡಿಯುವವರಲ್ಲಿ ಯಾವುದೇ ದೋಷವೂ ಇರಬಾರದು. ನನ್ನ ಬಳಿ ಮಾಯಾಕನ್ನಡಿಯಿದೆ. ಅದರಲ್ಲಿ ಅವರೊಮ್ಮೆ ಮುಖ ನೋಡಬೇಕು. ಏನಾದರೂ ಒಂದು ದೋಷವಿದ್ದರೆ ಸಾಕು, ಅವರಿಗೆ ಹಂದಿಯ ಮುಖ ಬರುತ್ತದೆ. ನಮ್ಮಲ್ಲಿ ದೋಷವಿಲ್ಲ ಎಂಬ ವಿಶ್ವಾಸವಿದ್ದವರು ಮಾತ್ರ ಈ ಕನ್ನಡಿಗೆ ಮುಖ ತೋರಿಸಿ” ಎಂದು ಹೇಳಿದ.
ಕ್ಷೌರಿಕ ಇಷ್ಟು ಹೇಳಿದ್ದೇ ತಡ, ಒಬ್ಬರು ಕೂಡ ಕನ್ನಡಿಯಲ್ಲಿ ಮುಖ ತೋರಿಸಲು ಮುಂದಾಗಲಿಲ್ಲ. ನಾವು ಆ ಕನ್ನಡಿಯನ್ನು ನೋಡುವುದಿಲ್ಲ ಎಂದು ದೂರ ನಿಂತರು. ಎಲ್ಲ ಅರಮನೆಗಳಲ್ಲೂ ಇದೇ ರೀತಿಯಾಯಿತು. ಬಳಿಕ ಶ್ರೀಮಂತರ ಕನ್ಯೆಯರನ್ನು ಹುಡುಕಿಕೊಂಡು ಸುತ್ತಾಡಿದ. ಅವರ ಮನೆಗಳಲ್ಲಿಯೂ ಹೀಗೆಯೇ ನಡೆಯಿತು. ಎಲ್ಲ ಕಡೆ ತಿರುಗಾಟ ಮುಗಿಸಿ ಅವನು ನಿರಾಶೆಯಿಂದ ಅರಮನೆಗೆ ಮರಳಿದ. ರಾಜನ ಬಳಿ, “”ದೊರೆಯೇ, ಒಬ್ಬಳೇ ಒಬ್ಬಳು ರಾಜಕನ್ಯೆಯಾಗಲಿ, ಸಿರಿವಂತರ ಹುಡುಗಿಯಾಗಲಿ ನನ್ನ ಕನ್ನಡಿಯಲ್ಲಿ ಮುಖ ತೋರಿಸಲು ಒಪ್ಪಲಿಲ್ಲ, ತಾವು ದೋಷರಹಿತರೆಂದು ಸಾಬೀತುಪಡಿಸಲಿಲ್ಲ” ಎಂದು ಹೇಳಿದ.
ರಾಜನು, “”ನಮ್ಮ ದೇಶದ ಬಡವರ ಮನೆಗಳಿಗೆ ಹೋಗು. ಅಲ್ಲಿ ನನಗೆ ಯೋಗ್ಯಳಾದ ಹುಡುಗಿ ಸಿಗಬಹುದು” ಎಂದು ಮತ್ತೆ ಅವನನ್ನು ಕಳುಹಿಸಿದ.
ಒಂದು ಕಡೆ ಯುವತಿಯೊಬ್ಬಳು ಕುರಿ ಮೇಯಿಸುತ್ತ ನಿಂತಿದ್ದಳು. ರೂಪವತಿಯಾದ ಅವಳ ಬಳಿಗೆ ಬಂದು ಕ್ಷೌರಿಕನು, “”ರಾಜನ ಮದುವೆಯಾಗುತ್ತೀಯಾ?” ಎಂದು ಕೇಳಿದ. “”ಕುರಿ ಕಾಯುವುದು ಬಿಟ್ಟರೆ ನನಗೆ ಬೇರೆ ಏನೂ ಕೆಲಸ ಗೊತ್ತಿಲ್ಲ. ರಾಜನು ಸ್ವೀಕರಿಸುವುದಾದರೆ ನಾನು ಸಿದ್ಧಳಿದ್ದೇನೆ” ಎಂದು ಒಪ್ಪಿಕೊಂಡಳು.
ಕ್ಷೌರಿಕನು, “”ನಮ್ಮ ರಾಜನ ಕೈ ಹಿಡಿಯುವವಳಿಗೆ ಏನೂ ದೋಷವಿರಬಾರದು. ನನ್ನ ಬಳಿಯಿರುವ ಮಾಯಾ ಕನ್ನಡಿಯಲ್ಲಿ ಮುಖ ನೋಡಿದಾಗ ಅವಳಲ್ಲಿ ದೋಷವಿದ್ದರೆ ಅವಳಿಗೆ ಹಂದಿಯ ಮುಖ ಬರುತ್ತದೆ. ದೋಷವಿಲ್ಲದಿದ್ದರೆ ಏನೂ ತೊಂದರೆಯಿಲ್ಲ. ನಿನಗೆ ಆ ಧೈರ್ಯವಿದೆಯೇ?” ಎಂದು ಕೇಳಿದ. “”ಕುರಿ ಕಾಯುವುದರ ಹೊರತು ನನಗೆ ಯಾವ ಕಪಟವೂ ಗೊತ್ತಿಲ್ಲ. ಕನ್ನಡಿಯಲ್ಲಿ ಮುಖ ನೋಡಲು ನಾನೇಕೆ ಅಂಜಬೇಕು? ತೋರಿಸಿ ಅದನ್ನು” ಎಂದಳು ಯುವತಿ. ಮಾಯೆಯ ಕನ್ನಡಿಯಲ್ಲಿ ನೋಡಿದಾಗಲೂ ಅವಳ ಮುಖ ಬದಲಾಗಲಿಲ್ಲ. ಕ್ಷೌರಿಕ ಅವಳನ್ನು ರಾಜನ ಬಳಿಗೆ ಕರೆತಂದ. ರಾಜನ ವಿವಾಹ ಅವಳೊಂದಿಗೆ ನೆರವೇರಿತು.
ಹಲವು ಕಾಲ ಕಳೆಯಿತು. ರಾಜನು ರಾಣಿಯೊಂದಿಗೆ ಸುಖವಾಗಿಯೇ ಇದ್ದ. ಒಂದು ದಿನ ರಾಜನು ಕ್ಷೌರಿಕನೊಂದಿಗೆ, “”ನಿನ್ನ ಮಾಯಾ ಕನ್ನಡಿಯಿಂದಾಗಿ ನನಗೆ ದೋಷರಹಿತ ಹುಡುಗಿ ಸಿಕ್ಕಿದಳು. ಆ ಅದ್ಭುತವಾದ ಕನ್ನಡಿಯನ್ನು ನಾನೊಂದು ಸಲ ನೋಡಬಹುದೆ? ನನ್ನ ಮುಖವೂ ಹಂದಿಯ ಹಾಗೆ ಆದೀತೇ?” ಎಂದು ಕೇಳಿದ.
ಕ್ಷೌರಿಕನು ಜೋರಾಗಿ ನಕ್ಕುಬಿಟ್ಟ. “”ಅದೊಂದು ಸಾಮಾನ್ಯ ಕನ್ನಡಿ. ಯಾವ ಯೋಗಿಯೂ ನನಗೆ ಕೊಡಲಿಲ್ಲ. ತಾವು ತಪ್ಪು ಮಾಡಿದ್ದೇವೆ ಎಂದು ಮನದಲ್ಲಿ ಅಳುಕಿದ್ದವರಿಗೆ ಅದರಲ್ಲಿ ನೋಡಿದರೆ ಹಂದಿಯ ಮುಖವಾಗುತ್ತದೆಂಬ ಭಯವಿತ್ತು. ಹಾಗಾಗಿ ಯಾರೂ ಮುಂದೆ ಬರಲಿಲ್ಲ. ಕುರಿ ಕಾಯುವ ಯುವತಿಗೆ ತಾನು ತಪ್ಪು ಮಾಡಿಲ್ಲ ಎಂಬ ಆತ್ಮವಿಶ್ವಾಸ ಇತ್ತು. ಆದ್ದರಿಂದ ಧೈರ್ಯದಿಂದ ಕನ್ನಡಿಯಲ್ಲಿ ನೋಡಿದಳು. ಮನುಷ್ಯನ ಮನಸ್ಸಿನಲ್ಲಿ ಪರಿಶುದ್ಧತೆಯ ವಿಶ್ವಾಸವಿರಬೇಕು” ಎಂದು ಹೇಳಿದ.
– ಪರಾಶರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Election Results: ಝಾರ್ಖಂಡ್, ಮಹಾರಾಷ್ಟ್ರದಲ್ಲಿ ಪಟ್ಟ ಯಾರಿಗೆ?
Udupi: ಜಾಗ ಖರೀದಿಗೆ ಕರಾರು ಮಾಡಿಸಿ ವಂಚನೆ: ಪ್ರಕರಣ ದಾಖಲು
Adani ಗ್ರೂಪ್‌ಗೆ ಸಾಲ: ಜಾಗತಿಕ ಬ್ಯಾಂಕ್‌ಗಳಿಂದ ತಾತ್ಕಾಲಿಕ ಬ್ರೇಕ್?
Bangaluru; ವ್ಯಕ್ತಿ ಹೊಟ್ಟೆಯಿಂದ 50 ಟೂತ್‌ಬ್ರೆಷ್ ಹೊರತೆಗೆದ ವೈದ್ಯರು!
Snake; ಕಾಳಿಂಗದ ವೈಜ್ಞಾನಿಕ ಹೆಸರು ‘ಓಫಿಯೋಫೆಗಸ್ ಕಾಳಿಂಗ’:ಅಧಿಕೃತವಾಗಿ ಘೋಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.