ಆಷಾಢದ ಮಳೆ ಎಂದರೆ ಮಳೆ!
Team Udayavani, Jul 30, 2017, 6:15 AM IST
ಮಳೆಗಾಲ ಸಾಮಾನ್ಯವಾಗಿ ಆರಂಭವಾಗುತ್ತಿದ್ದುದು ದೇವರ ಉತ್ಸವದ ದಿನ. ಆ ದಿನ ಹರಕೆ ಆಟ. ಪಕ್ಕದ ಗಣಪ ಹೆಗಡೆಯವರ ಮನೆಯಲ್ಲಿ ಊಟ. ಆಟದ ಆರಂಭದಲ್ಲಿ ನಕ್ಷತ್ರಗಳ ರಾಶಿ. ಆದರೆ ಆಟ ಕಾವೇರುತ್ತ ದೊಡ್ಡಪ್ಪ ದೇವರು ಹೆಗಡೆಯವರ ವೇಷ ಉತ್ತುಂಗದಲ್ಲಿದ್ದಂತೆ ಢಂ ಢಂ ಎಂದು ಗುಡುಗು, ಮಿಂಚು. ಕರೆಂಟು ಹೋಗಿ ಎಲ್ಲವೂ ಅಸ್ತವ್ಯಸ್ತ. ಕೆಲವೇ ಕ್ಷಣಗಳಲ್ಲಿ ಹನಿಕುಟ್ಲೆ ಆರಂಭವಾಗಿ ಆಮೇಲೆ ವರ್ಷಧಾರೆ. ಎಲ್ಲರೂ ಓಡೋಡಿ ಹೋಗಿ ದೇವಸ್ಥಾನದ ಒಳಗೆ ಸೇರಿ ವೇಷಧಾರಿಗಳು ಮತ್ತೂಂದು ನಾಲ್ಕು ಹೆಜ್ಜೆ ಹಾಕಿದಂತೆ ಹೊರಗಡೆ ವರ್ಷಧಾರೆ. ಆ ಬೆಳಗಿನ ಜಾವ ಪೂರ್ತಿ ಮೈ ಅದ್ದಿಕೊಂಡೇ ಮನೆ ಸೇರುವುದು.
ಹಾಗೆ ಮಳೆಗಾಲದ ಮುನ್ಸೂಚನೆ ಇದ್ದೇ ಇರುತ್ತಿತ್ತು. ಕರಾವಳಿಯಲ್ಲಿ ಮಳೆಗಾಲದ ಮುನ್ಸೂಚನೆ ನೀಡುವ ಹಲವು ಪ್ರಾಕೃತಿಕ ವೈಚಿತ್ರ್ಯಗಳಿವೆ: ಮೊದಲನೆಯದೆಂದರೆ ಕೊಟ್ಟೆ ಜೊಳಕನ ತಲೆ ಕೆಂಪಾಗುವುದು. ಕೆಂಪು ತಲೆಯ ಕೊಟ್ಟೆ ಜೊಳಕ ಕಂಡ ಕೂಡಲೆ ನಮಗೆ ಗೊತ್ತಾಗುತ್ತದೆ- ಮಳೆ ದೂರವಿಲ್ಲ ಎಂದು. ಇನ್ನೊಂದು ಮಹತ್ವದ ಸೂಚನೆ ಕೇನೆಯ ವಾಸನೆ. ಕೇನೆ ಒಂದು ತರಹದ ಹೂವು. ಅದು ಅರಳಿಕೊಂಡು ನಿಂತಿತೆಂದರೆ ತಡೆಯಲಾರದ ದುರ್ಗಂಧ. ಎಂಥ ವಾಸನೆಯೆಂದರೆ ಗೋಪಿ ಅಪಾನವಾಯು ಕೊಟ್ಟನಾ ಎಂದು ಕೇಳುವುದಿತ್ತು ! ಹಾಗೆಂದು ಸುಮ್ಮನೆ ನಮ್ಮ ಪ್ರೀತಿಯ ಗೋಪಿಯನ್ನು ಹಾಸ್ಯ ಮಾಡುವುದಷ್ಟೆ. ಅವನೂ ವಾರಗಟ್ಟಲೆ ತಂಬಿಗೆ ತೆಗೆದುಕೊಂಡು ಹೋಗದೇ ಇರುವುದಿತ್ತು. ಅದಿರಲಿ. ಪ್ರಕೃತಿ ನಮಗೆ ಕೊಡುವ ಇನ್ನಷ್ಟು ಸೂಚನೆಗಳೆಂದರೆ, ಕಡಲಬ್ಬರದ ಆರಂಭ ಮತ್ತು ಮತ್ತಿ ಮರದ ಮೇಲೆ ರಾತ್ರಿ ಹೊತ್ತು ಮಿಂಚು ಹುಳಗಳ ಜಾತ್ರೆ.
ಅದು ಲಕ್ಷ ದೀಪೋತ್ಸವದ ಹಾಗೆ. ಹೀಗೆಲ್ಲ ಆದರೆ, ಕರಾವಳಿಯಲ್ಲಿ ಒಂದು ರೀತಿಯ “ದಿಗಿಲು’ ಆರಂಭವಾಗುತ್ತದೆ. ಉಪ್ಪಿನ ಮೊಟ್ಟೆ ತರಬೇಕು, ಅಕ್ಕಿ ಮುಡಿ ಕಟ್ಟುವ ಇಡಕು ಗೌಡ ಇನ್ನೂ ಬಂದಿಲ್ಲ, ತಟ್ಟಿ ಕಟ್ಟಬೇಕು, ಕೊಟ್ಟಿಗೆ ಹೊದೆಸಬೇಕು, ಅಂಗಳಕ್ಕೆ ಸಂಕ ಹಾಕಬೇಕು. ಸೌದಿ ಕುಂಟೆ ಸರಿಯಬೇಕು, ಸೂಡಿ ಪಿಂಡಿ ಕಟ್ಟಬೇಕು, ಹಂಚಿನ ಮಾಡಿಗೆ ಮಡ್ಲು ಸಿಕ್ಕಿಸಬೇಕು, ಮಾವಿನ ಕಾಯಿ- ಹಲಸಿನ ತೊಳೆ ಉಪ್ಪಿನಲ್ಲಿ ಮಡಗಬೇಕು ಇತ್ಯಾದಿ ಚಟುವಟಿಕೆಗಳು ಆರಂಭವಾಗುತ್ತವೆ. ಗಡಿಗಾಲ ಬಂತೆಂದರೆ ಒಂದು ರೀತಿಯ ಯುದ್ಧ. ಇವೆಲ್ಲ ಗದ್ದಲದ ನಡುವೆಯೇ ದೇವರ ಉತ್ಸವ ಬಂದು ದೇವರ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಹಾಕಿಕೊಂಡು ಪೂಜೆಗಾಗಿ ಮನೆ ಮನೆಗೂ ಒಯ್ಯುತ್ತದೆ. ರಾತ್ರಿ ಆಟಕ್ಕೆ ಕಳೆ ಕಟ್ಟುವುದು
ಎಲ್ಲರಿಗೂ ಗೊತ್ತು- ದೇವರ ಉತ್ಸವದ ದಿನ ಬಂದ ಮಳೆ ಹಾಗೇ ಹೊಡೆದು ಬಿಡಬಹುದು ಅಥವಾ ನಾಲ್ಕಾರು ದಿನ ಗ್ಯಾಪ್ ಕೊಡಲೂಬಹುದು. ಯಾವುದನ್ನೂ ನಂಬುವ ಹಾಗಿಲ್ಲ. ಗಡಿಗಾಲದ ಕೆಲಸ ಸಾಗಲೇಬೇಕು.
ಬಿದ್ದ ಮಳೆ ವಾತಾವರಣವನ್ನೇ ಬದಲಿಸಿ ಬಿಡುತ್ತದೆ. ಇಷ್ಟು ದಿನ ಚಕಚಕನೆ ಹೊಳೆದು ಸುಟ್ಟುಬಿಡುವಂತೆ ಬೆಳಕಾಗುತ್ತಿದ್ದ ಆಕಾಶ ಡಿಮ್ಮಾಗಿ ಹೋಗುತ್ತದೆ. ರಸ್ತೆಯಲ್ಲೆಲ್ಲ ಅರಲು. ಸೈಕಲ್ಲು ಕೂಡ ಒತ್ತಿಕೊಂಡು ಹೋಗಬೇಕು. ರಸ್ತೆಗಳಲ್ಲಿ ಚಪ್ಪಲಿ ಹಾಕಿಕೊಂಡು ಹೋಗುವ ಹಾಗಿಲ್ಲ. ಹುಗಿದುಹೋಗಿ ಮೇಲೆಳೆಯಲು ಕಷ್ಟಪಟ್ಟರೆ ಚಪ್ಪಲಿಯ ಬಾರು ಕಿತ್ತು ಬರುತ್ತದೆ, ಕರ್ಣನ ರಥದಂತೆ. ನನ್ನ ಮತ್ತು ಗೆಳೆಯರ ಹಲವು ಚಪ್ಪಲಿಗಳು ಹೀಗೇ ಹೂತುಹೋಗಿವೆ. ಕೆಲವೊಮ್ಮೆ ಒಂದು ಚಪ್ಪಲಿ ಎದ್ದು ಬಂದರೂ ಇನ್ನೊಂದು ಹೂತು ಹೋಗಿ ಫಜೀತಿ ಎದುರಿಸಬೇಕಾಗುತ್ತಿತ್ತು. ಎರಡೂ ಹೋದರೆ ಕತೆ ಬೇರೆ. ಮರದ ಮೇಲೆಲ್ಲ ಹಲಸಿನ ಹಣ್ಣು ಹೇರಿಕೊಂಡಿದ್ದರೂ ಈಗ ತಿನ್ನುವ ಹಾಗಿಲ್ಲ. ಏಕೆಂದರೆ, ಬೀಜದೊಳಗೆ ಸಸಿ ಮೊಳೆತು ಬಿಡುತ್ತದೆ. ಮಾವಿನ ಹಣ್ಣಂತೂ ತಿಂದರೆ ಗತಿ ಮುಗಿಯಿತು. ನಿಲ್ಲಿಸಲಾರದ ಅಸಾಧ್ಯ ಜುಲಾಬು ಆರಂಭವಾದೀತು.
ಮೊದಲ ದಿನಗಳ ಮಳೆ ಬರುವುದು ವಿಪರೀತ ಗಾಳಿಯ ಜತೆ. ನಮ್ಮ ಮನೆಯ ಮುಂದೆ ಆಕಾಶಕ್ಕೆ ಹೋದ ಅಡಿಕೆ ಮರವಿತ್ತು. ಅದು ಯಾವ ರೀತಿ ಬಗ್ಗಿಕೊಳ್ಳುತ್ತಿತೆಂದರೆೆ ಸುಮಾರು ನೆಲವನ್ನೇ ಕಚ್ಚಿಬಿಡುತ್ತಿತ್ತು. ಇನ್ನೇನು ಮರ ಬಿತ್ತು ಎಂದು ನಾವೆಂದುಕೊಳ್ಳುವಷ್ಟರಲ್ಲಿ ಸ್ಪ್ರಿಂಗ್ ಹಾಗೆ ಮತ್ತೆ ಪುಟಿದು ಮೂಲಸ್ಥಾನಕ್ಕೆ ಬಂದೇ ಬಿಡುತ್ತಿತ್ತು. ಬಹಳ ವರ್ಷ ಹೀಗೇ ಉಯ್ನಾಲೆಯಾಡಿದ ಮರ ಕೊನೆಗೆ ಬಿದ್ದು ಹೋಗಿದ್ದು ದೊಡ್ಡಪ್ಪಯ್ಯ ತೀರಿಕೊಳ್ಳುವ ಕೆಲವೇ ದಿನ ಮೊದಲು. ಅಂಟು ಜರಿಯುವುದು, ಪಾಗಾರ ಕುಸಿಯುವುದು ಕೂಡ ಹೆಚ್ಚಾಗಿ ಮೊದಲ ಮಳೆಗೇ. ಬೇಸಿಗೆಯಲ್ಲಿ ರಾಮನ ಗುತ್ತಿಗೆಯಲ್ಲಿ ಕಟ್ಟಿಸಿದ್ದ ಪಾಗಾರ ಈಗ ಪೂರ್ತಿ ನೆಲಸಮ. ಹಾಗೆಯೇ ಗುಡ್ಡ-ಪ್ರದೇಶವಾಗಿದ್ದರಿಂದ ಹಂತ ಹಂತಗಳ ಏರುಗಳಲ್ಲಿದ್ದ ಅಂಟುಗಳು ಕುಸಿದು ತೋಟದಲ್ಲೆಲ್ಲ ರಾಶಿ ರಾಶಿ ಕಲ್ಲು. ಕೆಲವೊಮ್ಮೆ ಅಂಟು ನೀರು ಹರಿಯುವ ಕೊಡ್ಲಿನೊಳಗೆ ಕುಸಿದು ಬಿದ್ದು ನೀರು ಕಟ್ಟಿ ಹೋಗಿ ತೋಟವೆಲ್ಲ ಜಲಪ್ರಳಯವಾಗಿದ್ದೂ ಇದೆ. ಅದು ಜರಿದು ಬಿದ್ದದ್ದು ನೋಡಲು ನಮಗೆ ಮಜಾ ಇತ್ತು. ಆದರೆ ಅಪ್ಪಯ್ಯ, ದೊಡ್ಡಪ್ಪ ಈ ಸಲ ತೋಟವೇ ಹೋಯಿತು ಎಂದು ತುಂಬ ಬೇಸರ ಪಟ್ಟುಕೊಂಡ ಮೇಲೆ, ನಮಗೂ ಹಾಗೇ ಅನಿಸಲು ಆರಂಭವಾಗುತ್ತಿತ್ತು. ಗೊಂಚಲು ಗೊಂಚಲು ಕಾಯಿ ಬಿಡುತ್ತಿದ್ದ ಬೆಟ್ಟಾಣೆ ತೋಟದ ತೆಂಗಿನ ಮರಬಿದ್ದು ಹೋಗಿದ್ದೂ ಇಂತಹುದೇ ಮಳೆಯಲ್ಲಿ.
ತೆಂಗಿನ ಮರ ಬಿದ್ದಾಗ ಕೂಡ ನಮಗೆಲ್ಲ ಕೆಲವು ರೀತಿಯಿಂದ ಮಜಾ ಅನಿಸಿದ್ದು ಹೌದು. ಏಕೆಂದರೆ, ಈಗ ತಿನ್ನಲು ಹೇರಳವಾಗಿ ಬೊಂಡಗಾಯಿ ಸಿಗುತ್ತಿತ್ತು. ಅಲ್ಲದೆ, ನಾವೆಲ್ಲ ಬಿದ್ದ ಮರದ ಮೇಲೆ ಮುಟ್ಟುವ ಆಟವಾಡುತ್ತಿದ್ದೆವು. ಅದು ತುಂಬಾ ಅಪಾಯಕಾರಿ ಆಟ. ಆದರೆ, ಎಷ್ಟು ಬೈದರೂ ನಾವು ಆ ಆಟ ಬಿಡುತ್ತಿರಲಿಲ್ಲ. ಮರ ಬಿದ್ದ ಜಾಗ ಈಗ ಬಯಲಾಗಿ ದುರ್ಯೋಧನ ಮಡಿದ ಕುರುಕ್ಷೇತ್ರದ ರಣರಂಗದ ಹಾಗೆ ಒಂದು ರೀತಿಯ ವಿಷಾದದ ಭಾವವನ್ನು ನಮ್ಮೊಳಗೆ ಮೂಡಿಸುತ್ತಿತ್ತು. ಅದೇ ಬಿದ್ದ ಮರ ನಮಗೆ ಒಂದು ತೋಟದಿಂದ ಇನ್ನೊಂದು ತೋಟಕ್ಕೆ ದಾಟಾಡಲು ಹೈವೇಯ ಹಾಗೆ. ಬೇರೆಯವರ ಮನೆಯ ತೋಟದಲ್ಲಿದ್ದ ಹಲಸಿನ ಹಣ್ಣು ಕಳವು ಮಾಡಲು ಅದು ಸಹಾಯ ಮಾಡುತ್ತಿದ್ದುದು ನಂತರದ ಬೆಳವಣಿಗೆ.
ಕರಾವಳಿಯ ಆಷಾಢಮಾಸ ಎದುರಿಸಲು ಗಂಡೆದೆ ಬೇಕು. ಬಯಲುಸೀಮೆಯ “ಆಷಾಢ ಮಾಸ ಬಂದಿತವ್ವ’ ಎಂದು ಹಾಡುವಂತಹುದಲ್ಲ. ಧಾರಾಕಾರ ಬಾನಿಗೆ ತೂತು ಬಿದ್ದಂತೆ, ಯಾರೋ ಬಕೆಟ್‌ನಲ್ಲಿ ನಿರಂತರ ಸುರಿದಂತೆ, ವಾರಗಟ್ಟಲೆ ಮಳೆ. ಮನೆಯ ಪಕ್ಕದ ಧರೆ ಕುಸಿದರೆ ಏನು ಕತೆ? ಎಂಬ ಅಪ್ಪಯ್ಯನ ಚಿಂತೆ ನಿಜವಿತ್ತು. ಕೆಲವೊಮ್ಮೆ ಮನೆಯ ಸುತ್ತ ಎಂತಹ ಪ್ರಮಾಣದಲ್ಲಿ ನೀರು ತುಂಬುತ್ತಿತ್ತೆಂದರೆ, ಮನೆಯ ಮಣ್ಣಿನ ಗೋಡೆ ಕುಸಿಯಬಹುದಿತ್ತು.
ಮನೆಯೊಳಗೆ, ಹಂಚಿನ ಮನೆಯಿರಲಿ, ಸೋಗೆಯ ಮನೆಯಿರಲಿ ನೀರು ಸೋರುವುದು ನಿಲ್ಲಿಸುವುದು ಅಸಾಧ್ಯ. ಏನು ಮಾಡುವುದು? ಸೋರುವಲ್ಲಿ ತಪ್ಪಲೆ ಇಟ್ಟು ನೀರು ಹೊರ ಚೆಲ್ಲುವುದು, ಅಷ್ಟೆ. ಇನ್ನೂ ದೊಡ್ಡ ಸಮಸ್ಯೆಯೆಂದರೆ ಮನೆಯ ಒಳಗೆ ಸಿಮೆಂಟಿನ ನೆಲದ ಮೇಲೆ ನೀರು ಏಳುವುದು. ಏನು ಕಾರಣವೋ, ಏನೋ? ಮಳೆ ನಿಂತು ತುಸು ಬಿಸಿಲು ಇಣುಕಿ ಹಾಕಿದರೆ ಸಾಕು, ಮನೆಯ ನೆಲವೆಲ್ಲ ನೀರು ನೀರಾಗಿ ಹೋಗುತ್ತಿತ್ತು. ಅದಕ್ಕೆ ಒಂದು ಉಪಾಯವೆಂದರೆ ಇನ್ನೊಮ್ಮೆ ನೆಲ ಸ್ವತ್ಛವಾಗಿ ನೀರು ಹಾಕಿ ತೊಳೆದು ಒಣಗಿಸುವುದು. ಈಗ ನೆಲ ಒಣಗುತ್ತಿತ್ತು. ಇಲ್ಲವಾದರೆ ರೆಡ್‌ಆಕ್ಸೆ„ಡ್ ನೆಲ ಕೂಡ ಅಂಗಳದ ಹಾಗೆ ಜಾರೆ. ಮನೆಯ ಒಳಗೇ ಜಾರಿ ಬಿದ್ದು ಕೆಲವರು ಸೊಂಟ ಮುರಿದುಕೊಂಡಿದ್ದು ಇದೆ. ಮತ್ತೆ ಹೊರಗಡೆ ಕಪ್ಪೆಗೋಲೆಯ ವಟ ವಟ, ಹಗಲು-ರಾತ್ರಿ. ಅವು ಎಂತಹ ಗದ್ದಲವೆಬ್ಬಿಸುತ್ತವೆಯೆನ್ನುವುದನ್ನು ಆಲಿಸಿಯೇ ಅನುಭವಿಸಬೇಕು.
ಆ ಕಪ್ಪೆಗಳನ್ನು ಎಲ್ಲಿಂದ ಹುಡುಕಿ ಅವುಗಳ ಬಾಯಿ ಬಂದು ಮಾಡುವುದು? ಅನುಭವಿಸಲೇಬೇಕು. ಆಮೇಲೆ ವಿಪರೀತ ನೊರಜು. ಇಡೀ ಮೈಕೈಯೆಲ್ಲ ತುರಿಸಿಕೊಳ್ಳಬೇಕು. ಮನೆಯೊಳಗೆ ಕಾಯಿಸಿಪ್ಪೆಯ ಹೊಗೆ ಹಾಕಿದರೆ ಮಾತ್ರ ಅದು ತುಸು ಕಡಿಮೆ.
ಕೆಲವೊಮ್ಮೆ ಜೋರು ಮಳೆಯಲ್ಲಿ ಮನೆಯೊಳಗೆ ಇಲಿ ಹುಡುಕಲು ಕೆರೆಮುಂಡೆ ಹಾವು ಬಂದು ಸೇರಿಬಿಡುತ್ತಿತ್ತು. ಅದು ವೇಗವಾಗಿ ಸರಿಯುವ ಕಪ್ಪು ಬಣ್ಣದ ಹಾವು. ಆ ಹಾವು ಕಚ್ಚುತ್ತಿರಲಿಲ್ಲ, ವಿಷಕಾರಿಯಲ್ಲ.
ಆದರೆ, ಅದು ಒಂದು ಚೂರೂ ಅಪಾಯಕಾರಿಯಲ್ಲದಿದ್ದರೂ ಕೆಲವೊಮ್ಮೆ ನಾಗರ ಹಾವೇನೋ ಎಂಬ ಭ್ರಮೆ ಹುಟ್ಟಿಸುತ್ತಿತ್ತು. ಏಕೆಂದರೆ ಬಣ್ಣವೊಂದನ್ನು ಬಿಟ್ಟರೆ ಅದು ಕಾಣುವುದು ಥೇಟ್ ನಾಗರ ಹಾವಿನ ಹಾಗೆ! ನಾಗರಹಾವು ಗಂಡು ಮತ್ತು ಕೆರೆಮುಂಡೆ ಹಾವು ಹೆಣ್ಣು ಎಂದು ಆಗ ನಂಬಿದ್ದೆವು. ಕೆಲವು ಕಡೆ ಸರ್ಪಗಳ ಮಿಲನದ ಕಾರ್ಯಕ್ರಮದಲ್ಲಿ ಒಂದು ಹಾವು ಕಪ್ಪು ಇರುತ್ತಿದ್ದುದು ನಮ್ಮ ಲಕ್ಷ್ಯಕ್ಕೆ ಇತ್ತು. ಕೆರೆಮುಂಡೆ ಹಾವು ಹಲವು ಮನೆಗಳಲ್ಲಿ ಸೋಗೆ ಹಂಚಿನ ಮಾಡಿನಿಂದ ನೇತಾಡಿ ಕೆಲವೊಮ್ಮೆ ನೆಲಕ್ಕೆ ಬಿದ್ದು ಅಲ್ಲೇ ಎಲ್ಲೋ ಒಳಸೇರಿ ನಾಪತ್ತೆಯಾದದ್ದಿದೆ. ಇದಕ್ಕಿಂತಲೂ ನಿಜಕ್ಕೂ ಅಪಾಯಕಾರಿ ಹಣ್ಣಡೆR ಪಡಚುಳ. ಕೆಂಪಗೆ, ಚೋರಟೆಯಂತೆ ಉದ್ದವಾಗಿ ಚೇಳಿನಂತೆ ವಿಷ ಹೊಂದಿರುವ ಅದು ಕಚ್ಚಿತೆಂದರೆ ವಿಪರೀತ ನೋವು ಅನುಭವಿಸಬೇಕು. ಅದು ಕೆಂಪನೆಯ ಹಣ್ಣಡಕೆಯ ಬಣ್ಣದಲ್ಲಿದ್ದುದರಿಂದ ಅದಕ್ಕೆ ಆ ಹೆಸರು ಬಂದಿರಬೇಕು. ಮತ್ತೆ ಕುಟ್ಟು ಹೆಂಡತಿಗೆ ಚೇಳು ಕಚ್ಚಿದ್ದೂ ಮಳೆಗಾಲದಲ್ಲೇ. ಆಷಾಢದ ಮಳೆಯೆಂದರೆ ಮಳೆ. ಯಾವುದೋ ದ್ವೇಷ ತೀರಿಸಿಕೊಳ್ಳಲು ಬಂದ ಹಾಗೆ. ಕೊಡೆ ಹಿಡಿದರೆ ಗಾಳಿಗೆ ಕಡ್ಡಿ ಮೇಲಾಗಿ ಹಾರಿಹೋಗುತ್ತಿತ್ತು.
ಮನೆಯಿಂದ ಹೊರಗಡೆ ಬೀಳುವುದಿದ್ದರೆ ಸಪ್ಪುಗಂಬಳಿಯ ಸುಖ ಬೇರೆ ಯಾವುದಕ್ಕೂ ಇಲ್ಲ. ಅಬ್ಬರದ ಆಷಾಢದ ತುರೀಯದಲ್ಲಿ ಎಲ್ಲಿ ಒರತೆ ಏಳುತ್ತದೆ ಹೇಳಲಾಗದು. ನಿಂತ ಹೆಜ್ಜೆಯಡಿಯೇ ಗುಳುಗುಳುಗುಟ್ಟು ಒರತೆ ಏಳಬಹುದು. ಇಂತಹ ಒಂದು ಗುಂಬಳೆಹಳ್ಳ ಹಟ್ಟಿàಕೇರಿ ಶಾಲೆಯ ಹತ್ತಿರ ಏಳುತ್ತಿತ್ತು. ಗುಂಬಳೇ ಹಳ್ಳ ಭಾರಿ ಪ್ರಮಾಣದಲ್ಲಿ ಎದ್ದಿತೆಂದರೆ ಅಘನಾಶಿನಿ ನದಿಗೆ ದೊಡ್ಡ ನೆರೆಹಾವಳಿ ಬಂದಿದೆಯೆಂದೇ ಅರ್ಥ. ಹಾಗೆಂದು, ಆ ಮಳೆಗಾಲ ನೀಡಿದ ಥ್ರಿಲ್ ಕೂಡ ಬೇರೆಯೇ. ಹೊರಗಡೆ ಜರ್ರೆಂದು ಮಳೆ ಸುರಿಯುವಾಗ ಒಳಗಡೆ ಹಲಸಿನ ಬೇಳೆ ಸುಟ್ಟುಕೊಂಡು ತಿಂದು, ಈರುಳ್ಳಿಯ ಹುಳಿ ಊಟ ಮಾಡಿ, ಹಂಡಗಂಬಳಿ ಹೊದ್ದು ಮಲಗಿದರೆ ಸ್ವರ್ಗಕ್ಕೆ ಕಿಚ್ಚು ಹಚ್ಚಬೇಕು.
ಹಾಗೆಯೇ ತುಂಬಿ ನಿಂತ ಗಣಪ ಹೆಗಡೆ ಮನೆಯ ಕೆರೆಯಲ್ಲಿ ಮೇಲಿನ ಗುಡ್ಡದಿಂದ ಹಾರಿದರೆ ಸಿಗುವ ಥ್ರಿಲ್ ಬೇರೆಲ್ಲೂ ಇಲ್ಲ. ಮತ್ತೆ ಚಿಮಣಿ ಬುರುಡೆ ಹಚ್ಚಿcಕೊಂಡು ಅದರ ಸುತ್ತ ಎಲ್ಲರೂ ನೆಲದ ಮೇಲೆ ಕುಳಿತು ಹಲಸಿನ ಹಣ್ಣಿನ ಇಡ್ಲಿ ತಿನ್ನಲು ಕುಳಿತರೆ ಸ್ವರ್ಗ ಧರೆಗಿಳಿಯುತ್ತಿತ್ತು. ನಿಜವಾಗಿ ಕುಟುಂಬದ ಸದಸ್ಯರೆಲ್ಲರ ನಡುವೆ ಆತ್ಮೀಯತೆಯ ಬೆಸುಗೆ ಮಡುಗಟ್ಟುವುದು ತಿಳಿವು ಮೂಡುವುದು, ಸಂಬಂಧದಲ್ಲಿ ಮಾರ್ದವತೆ ಮಡುಗಟ್ಟುವದು ಕೂಡ ಆಗಲೇ. ಆಷಾಢವೆಂದರೆ ವಿಪರೀತ ಹಸಿವು. ಸಾಧಾರಣಾ ಅಂದಾಜಿಗಿಂತ ದೊಡ್ಡ ಚರಿಗೆಯಲ್ಲಿ ಅಥವಾ ಮಣ್ಣಿನ ಬೊಡ್ಡೆಯಲ್ಲಿ ಅನ್ನ ಮಾಡಲೇಬೇಕು. ಕುಚ್ಚಿಗೆ ಅಕ್ಕಿ ಅನ್ನ, ಕೆಸುವಿನ ಸೊಪ್ಪಿನ ಗೊಜ್ಜು , ಮೊಗೆಕಾಯಿ ಪಳದ್ಯ ಎಂದರೆ ಅಮೃತ.
ಆಷಾಢ ಮಾಸ ಮುಗಿದು ಶ್ರಾವಣ ಬಂತೆಂದರೆ ಮಳೆಯ ಲಯ ಬದಲಾಗುತ್ತಿದೆ. ಭಾದ್ರಪದದಲ್ಲಿ ಅಂತೂ ಬಿಟ್ಟು ಬಿಟ್ಟು ಜೊರ್ರನೆ ಬೀಳುವ ಮಳೆಯ ಕಡ್ಡಿ. ಚೌತಿಯಲ್ಲಿ ಗಣಪತಿ ಮುಳುಗಿಸಲು ಹೋದರೆ ಸಿಗುವುದು ಇದೇ ಮಳೆ. ಈಗ ಕೆರೆ-ಬಾವಿಗಳೆಲ್ಲ ತುಂಬಿ ಜಗತ್ತೇ ಊಟ ಮಾಡಿ ಸಂತೃಪ್ತಿಯಲ್ಲಿ ಇರುವ ಹಾಗೆ ಅನಿಸುತ್ತಿತ್ತು.
ನವರಾತ್ರಿ ಬಂತೆಂದರೆ ಮಳೆ ಸಾವಕಾಶವಾಗಿ ಹಿಂದಾಗುವುದು. ಈಗ ಆಕಾಶದಿಂದ ಸ್ವತ್ಛ ನೀಲಿ ಬಿಸಿಲು. ಮಳೆ ಹೋಯಿತೆಂದು ಹೇಳುವ ಹಾಗೆ ಇಲ್ಲ ಮತ್ತು ಮಳೆ ಇಷ್ಟು ಬೇಗ ಹೋಗಬಾರದು ಕೂಡ. ಈಗ ದೊಡ್ಡಪ್ಪಯ್ಯ ಮಳೆಗಾಲದಲ್ಲಿ ಸಂಗ್ರಹಿಸಿಟ್ಟ ಕೊಳೆ ಅಡಿಕೆಯನ್ನೆಲ್ಲ ರಸ್ತೆಯಲ್ಲಿ, ಏರು ಬಿಸಿಲು ಬರುವಲ್ಲಿ ಹಾಕಿಕೊಂಡು ಕಾಯುವುದು.
– ರಾಮಚಂದ್ರ ಹೆಗಡೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಕ್ಯಾಪ್ಟನ್ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.