ಯೋಗ: ಸತತ ಸಾಧನೆಯಿಂದ ನವಲೋಕ ಸೃಷ್ಟಿ
Team Udayavani, Jul 30, 2017, 7:05 AM IST
ಸತತ ಸಾಧನೆ, ಮನಸ್ಸಿನ ನಿಯಂತ್ರಣ, ಶಾರೀರಿಕ ವ್ಯಾಯಾಮ ಎಲ್ಲವೂ ಸಂಯೋಜಿಸಲ್ಪಟ್ಟಾಗ ಆತ್ಮ ಶಾಂತಿಯನ್ನು ಗಳಿಸಲು ಸಾಧ್ಯ. ಅದಕ್ಕಿರುವ ಸುಲಭ ದಾರಿ ಯೋಗ.
ಆಧ್ಯಾತ್ಮಿಕ ಸಾಧನೆಗೆ ಪಂಚೇಂದ್ರಿಯಗಳ ನಿಯಂತ್ರಣ ಅಗತ್ಯ. ಮನಸ್ಸನ್ನು ಪ್ರಶಾಂತಗೊಳಿಸುವ ಕ್ರಮಬದ್ಧ ದಾರಿಯೇ ಯೋಗ. ದೈಹಿಕ ಮಾನಸಿಕ ಕ್ರಿಯೆಗಳನ್ನು ಸರಿದೂಗಿಸಲು ಯೋಗಾಸನವನ್ನು ನಿಯಮಿತವಾಗಿ ಮಾಡಬೇಕು. ದೇಹದ ಸಿದ್ಧತೆಗೆ ಆಸನಗಳನ್ನೂ ಮನಸಿನ ನಿಯಂತ್ರಣಕ್ಕೆ ಪ್ರಾಣಾಯಾಮ ಹಾಗೂ ಧ್ಯಾನವನ್ನು ಪ್ರತಿದಿನ ಮಾಡಬೇಕು.
ಯೋಗ ಸಾಧನೆಯು ವ್ಯಕ್ತಿಯ ದೈಹಿಕ ಹಾಗೂ ಮಾನಸಿಕ ಕಾರ್ಯನಿರ್ವಾಹಣೆಯನ್ನು ವೃದ್ಧಿಸುತ್ತದೆ. ಅಂತೆಯೇ ಯೋಗವು ಸಮಗ್ರ ಹಾಗೂ ಆಧ್ಯಾತ್ಮಿಕ ಜೀವನ ಕ್ರಮಕ್ಕೆ ಸೂಕ್ತ ಮತ್ತು ಅಗತ್ಯ ಎಂದು ಶಿವಾನಂದ ಇಂಟರ್‌ನಾಷನಲ್ ಸ್ಕೂಲ್ ಆಫ್ ಯೋಗ ಮತ್ತು ಶ್ರೀ ಶಾರದಾಂಭಾ ಭಜನಾ ಸೇವಾ ಸಂಘ ಇವರ ಜಂಟಿ ಸಹಯೋಗದೊಂದಿಗೆ ಉಚಿತ ಯೋಗಾಸನ-ಪ್ರಾಣಾಯಾಮ ಶಿಬಿರದಲ್ಲಿ ಶಿವಾನಂದ ಇಂಟರ್‌ನ್ಯಾಷನಲ್ ಸ್ಕೂಲ್ ಆಫ್ ಯೋಗ ಇದರ ನಿರ್ದೇಶಕರಾದ ಯೋಗಗುರು ಶ್ರೀ ಎಂ. ಸುರೇಂದ್ರನಾಥ್ ಶಿಬಿರಾರ್ಥಿಗಳಿಗೆ ಮಾಹಿತಿಯನ್ನಿತ್ತರು.
ಎಂಟು ದಿನಗಳ ಕಾಲ ಮುಂಜಾನೆ ಹಾಗೂ ಮುಸ್ಸಂಜೆ ನಡೆದ ಶಿಬಿರದಲ್ಲಿ ಸುಮಾರು ನೂರಕ್ಕಿಂತಲೂ ಹೆಚ್ಚು ಮಂದಿ ಭಾಗವಹಿಸಿದರು. ಯೋಗಾಚಾರ್ಯ ವಿಜಯನ್ ಪರವನಡ್ಕ ಅವರು ಯೋಗ ತರಬೇತಿಯನ್ನು ನಡೆಸಿಕೊಟ್ಟರು. ಪ್ರತಿದಿನ ಯೋಗ ತರಗತಿಯ ಬಳಿಕ ಅನುಭವಸ್ಥರು ನೀಡುತ್ತಿದ್ದ ಯೋಗ ಹಾಗೂ ಜೀವನದ ಬಗೆಗಿನ ಮಾಹಿತಿ ಹಾಗೂ ಸಲಹೆಗಳು ಸರಳವಾದ ರೀತಿಯಲ್ಲಿ ಬದುಕನ್ನು ಮುನ್ನಡೆಸಲು ಬೇಕಾದ ಸೂತ್ರಗಳನ್ನು ಒಳಗೊಂಡ ಅತ್ಯುನ್ನತ ಮಾಹಿತಿಗಳ ಕಣಜವಾಗಿ ಹರಿದು ಬಂತು.
ಅದಮ್ಯ ಉತ್ಸಾಹ, ಅಸೀಮ ಶ್ರದ್ಧೆ, ಗುರುವಿನ ಮಾರ್ಗದರ್ಶನವಿದ್ದರೆ ಯೋಗವನ್ನು ಅಭ್ಯಸಿಸಬಹುದು. ಯೋಗ ಎನ್ನುವುದು ಜೀವನದಲ್ಲಿ ಸಾಯುಜ್ಯವನ್ನು ಪಡೆಯಲಿರುವ ಸುಲಭ ಮಾರ್ಗ. ಧಾವಂತದ ಬದುಕಿನಲ್ಲಿ ಒತ್ತಡ ನಿಭಾಯಿಸಿ ಆರೋಗ್ಯವನ್ನು ಕಾಪಾಡುವುದರ ಮೂಲಕ ದೈಹಿಕ ಮಾನಸಿಕ ಸ್ಥಿತಿಯನ್ನು ಕಾಯ್ದುಕೊಳ್ಳುವ ತಂತ್ರ. ಸದಾ ಚಟುವಟಿಕೆಗಳಿಂದ ಬೇಸತ್ತ ಮಂದಿಗೆ ನೆಮ್ಮದಿಯ ಹಾದಿಯನ್ನು ತೋರುವ ಪ್ರಾಣಾಯಾಮ ಹಾಗೂ ಧ್ಯಾನ ಬದುಕಿನಲ್ಲಿ ಪರಿಣಾಮಕಾರಿ ಫಲಿತಾಂಶವನ್ನು ನೀಡುತ್ತದೆ. ಆದುದ ರಿಂದ ಮನಸ್ಸು ಮತ್ತು ಅದರ ನಿಯಂತ್ರಣದ ಬಗ್ಗೆ ತರಗತಿಯನ್ನು ನಡೆಸಲಾಯಿತು.
ಯೋಗ: ಚಿತ್ತ ವೃತ್ತಿ ನಿರೋಧ
ಯೋಗವೆಂದರೆ ಸಂಚರಿಸುವ ಮನಸನ್ನು ನಿಯಂತ್ರಿಸುವುದು. ಚಿತ್ತ ಎಂದರೆ ಮನಸ್ಸು, ಬುದ್ಧಿ, ಅಹಂಕಾರ. ಯೋಗವು ಮನಸ್ಸಿನ ಚಾಂಚಲ್ಯವನ್ನು ನಿಗ್ರಹಿಸುವಂತದ್ದಾಗಿದೆ ಅಂತೆಯೇ ಮಾನಸಿಕ ತೊಳಲಾಟವನ್ನೂ ನಿಯಂತ್ರಿ ಸಲು ಸಹಾಯಕವಾಗಿದೆ.
ಶಿಬಿರದಲ್ಲಿ ಅಷ್ಟಾಂಗ ಯೋಗದ ಬಗ್ಗೆಯೂ ಮಾಹಿತಿ ನೀಡಲಾಯಿತು. ಯಮ, ನಿಯಮ, ಆಸನ, ಪ್ರಾಣಾ ಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾಧಿ ಇವು ಅಷ್ಟಾಂಗ ಯೋಗದ ಸಾಧನಾ ಪಥದ ಅಂಗಗಳು. ಯೋಗಾ ಚರಣೆಯು ಆಧ್ಯಾತ್ಮಿಕ ಆಚರಣೆ ಯಾಗಿದ್ದು ಶಿಸ್ತುಬದ್ಧ ಜೀವನವನ್ನು ಅಳವಡಿಸುವಲ್ಲಿ ಮಹತ್ತರವಾದ ಪಾತ್ರವನ್ನು ವಹಿಸುತ್ತದೆ. ಆಧುನಿಕ ಆಹಾರ ಪದ್ಧತಿ ಹಾಗೂ ಜೀವನ ಶೈಲಿ ನಮ್ಮನ್ನು ರೋಗಿಗಳನ್ನಾಗಿ ಮಾಡಿದ್ದು ಅದರಿಂದ ಹೊರಬಂದು ಆರೋಗ್ಯವಂತ ಜೀವನ ನಡೆಸಲು ಯೋಗ ನೆರವಾಗುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಮರಣ ಹಾಗೂ ನಮ್ಮ ಮರಣದ ಬಗೆಗಿನ ಸಂಕಲ್ಪಗಳ ಬಗ್ಗೆ ನೀಡಿದ ಮಾಹಿತಿಯು ಶಿಬಿರಾರ್ಥಿಗಳನ್ನು ಹೊಸ ಆಲೋಚನೆಯತ್ತ ಕೊಂಡೊಯ್ದು ಜನನ ಮರಣಗಳ ಬಗ್ಗೆ ಇರುವ ತಪ್ಪು ಕಲ್ಪನೆಯಿಂದ ಹೊರಬಂದು ಜೀವಾತ್ಮದ ಕುರಿತಾದ ಸತ್ಯವನ್ನು ವಿಶ್ಲೇಷಿಸುವಂತೆ ಪ್ರೇರೇಪಿಸಿತು. ಯೋಗವೆಂಬುದು ಸ್ವತಃ ತನ್ನತನದೊಂದಿಗೆ ಮತ್ತು ಅದರ ಚಹರೆಯೊಂದಿಗೆ ಮೌನಸಂವಾದ ನಡೆಸುವ ಪ್ರಕ್ರಿಯೆ ಎನ್ನುತ್ತಾರೆ ಆಚಾರ್ಯ ವಿನೋಬಾ ಭಾವೆ. ಯೋಗ ಯಾವುದೇ ಜಾತಿ, ಮತ, ಧರ್ಮಕ್ಕಷ್ಟೇ ಸೀಮಿತವಾದುದಲ್ಲಾ. ಇದು ಅದೆಲ್ಲವನ್ನೂ ಮೀರಿದ್ದು. ಇದು ನಮ್ಮಲ್ಲಿ ಆತ್ಮದ ಅರಿವನ್ನು ಮೂಡಿಸುತ್ತದೆ. ಯೋಗ ಶರೀರ, ಮನಸ್ಸು ಮತ್ತು ಆತ್ಮಗಳನ್ನು ಬಂಧಿಸುವ ಒಂದು ಕೊಂಡಿಯಾಗಿದ್ದು ಜೀವನದಲ್ಲಿ ಉನ್ನತಿಗೇರಲು ಸರಿ ಯಾದ ಮನೋಭಾವವನ್ನು ವಿಕಸಿತಗೊಳಿಸುತ್ತದೆ.
ಸಾಧಿಸುವುದು ಸುಲಭವಲ್ಲ. ಕಠಿನ ಪರಿಶ್ರಮ, ಗುರುಕೃಪೆ, ಧೈರ್ಯ, ತ್ಯಾಗ ಮತ್ತು ಏಕಾಗ್ರತೆಯ ಅಗತ್ಯವಿದೆ. ಯೋಗ್ಯ ಗುರುವಿನ ಮಾರ್ಗದರ್ಶನದಲ್ಲಿ ಯೋಗವನ್ನು ಕಲಿಯುವುದರಿಂದ ಹಾಗೂ ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ನೆಮ್ಮದಿಯ ಜೀವನವನ್ನು ನಮ್ಮದಾಗಿಸಲು ಸಾಧ್ಯ.
ಯೋಗವೆಂದರೆ ಮನಸ್ಸಿನ ಅಂತರಾಳವನ್ನು ವಿವಿಧ ರೂಪಗಳನ್ನು ತಾಳದಂತೆ ನಿಗ್ರಹಿಸುವುದು ಎಂದು ಸ್ವಾಮಿ ವಿವೇಕಾನಂದರು ವ್ಯಾಖ್ಯಾನಿಸಿದ್ದಾರೆ. ಕರ್ಮ ಯೋಗ, ಭಕ್ತಿ ಯೋಗ, ಜ್ಞಾನ ಯೋಗ ಮೂರು ಪ್ರಧಾನ ವಿಧಗಳ ಕುರಿತಾದ ಮಾಹಿತಿಯನ್ನೂ ಶಿಬಿರದಲ್ಲಿ ನೀಡಲಾಯಿತು. ಯೋಗ ನವಲೋಕದ ಸೃಷ್ಟಿಗೆ ಇರುವ ಮಾರ್ಗಸೂಚಿ. ಆದುದ ರಿಂದ ಯೋಗವನ್ನು ಕಲಿತು ಯೋಗದ ಮೂಲಕ ಬದುಕಿನ ನೆಮ್ಮದಿಯನ್ನು ಕಂಡುಕೊಳ್ಳಲು ಪ್ರಯತ್ನಿಸೋಣ.
– ವಿದ್ಯಾಗಣೇಶ್ ಅಣಂಗೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ullala: ಉಚ್ಚಿಲದ ರೆಸಾರ್ಟ್ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!
BBK11: ನೇರ ನಡೆ, ನುಡಿಯಿಂದ ಗಮನ ಸೆಳೆದಿದ್ದ ಈ ಸ್ಪರ್ಧಿ; ಮನೆಯಿಂದ ಹೊರಕ್ಕೆ?
Mike Tyson: ವಿದಾಯದ ಸುಳಿವು ನೀಡಿದ ಬಾಕ್ಸಿಂಗ್ ದಿಗ್ಗಜ ಮೈಕ್ ಟೈಸನ್
Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು
Team India: ವಿರಾಟ್ ಕೊಹ್ಲಿ ದಾಖಲೆ ಮುರಿದ ತಿಲಕ್ ವರ್ಮಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.