ಬದ್ಧತೆ ಇಲ್ಲದ ನಗರಸಭೆಯಲ್ಲಿ ಅಸಹಾಯಕ ಆಡಳಿತ
Team Udayavani, Jul 30, 2017, 7:05 AM IST
ಮಡಿಕೇರಿ: ಎಲ್ಲ ಇದ್ದೂ ಏನೂ ಇಲ್ಲ ಎನ್ನುವ ಅಸಡ್ಡೆತನ ದೊಂದಿಗೆ ಆಡಳಿತ ನಡೆಸುತ್ತಿರುವ ಮಡಿಕೇರಿ ನಗರಸಭೆಯಲ್ಲಿ ಬದ್ಧತೆಯ ಕೊರತೆ ಇದೆ. ನಗರದ ಜನತೆಗೆ ಸ್ವರ್ಗವನ್ನೇ ಧರೆಗಿಳಿಸುವ ಅಗತ್ಯವೇನಿಲ್ಲ. ಆದರೆ ಕನಿಷ್ಠ ಓಡಾಡುವ ರಸ್ತೆ ಬದಿಯಲ್ಲಿರುವ ಕಸದ ರಾಶಿಗಾದರೂ ಮುಕ್ತಿ ಕಾಣಿಸುವ ಕೆಲಸವನ್ನು ನಗರಸಭೆಯ ಪ್ರತಿನಿಧಿಗಳು ಮಾಡಬೇಕಾಗಿತ್ತು. ಆದರೆ ಕಲಹವೇ ಕೈಲಾಸ ಎಂದು ತಿಳಿದಿರುವ ಇಲ್ಲಿನ ಮಂದಿ ನಗರಸಭೆಯ ಗೌರವಕ್ಕೆ ದಕ್ಕೆ ತರುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ನಗರಸಭೆಯಲ್ಲಿರುವುದು ಕೇವಲ 23 ವಾರ್ಡ್‌ಗಳು,ಇದನ್ನೇ ನಿಭಾಯಿಸಲಾಗದ ಆಡಳಿತ ವ್ಯವಸ್ಥೆಯ ಅಧೋಗತಿ ಯನ್ನು ಗಮನಿಸಿದರೆ ನಾಗರಿಕರು ಮಾಡಿದ ಜನಪ್ರತಿನಿಧಿಗಳ ಆಯ್ಕೆ ತಪ್ಪೆಂದು ತೋರುತ್ತದೆ. ಕೇವಲ ಕಸವನ್ನೇ ಗುಡಿಸಲಾಗದ ನಗರಸಭೆ ಸ್ವತ್ಛತಾ ಕಾರ್ಯದ ಹೆಸರಿನಲ್ಲಿ ಸುಮಾರು ಒಂದು ಕೋಟಿ ರೂ.ಗಳಷ್ಟು ಹಣವನ್ನು ಖರ್ಚು ಮಾಡುತ್ತಿದೆ. ಈ ಹಣವನ್ನು ಆಯಾ ವಾರ್ಡ್‌ನ ಮಹಿಳಾ ಸಂಘಟನೆಗಳಿಗೆ ವಿನಿಯೋಗ ಮಾಡಿದ್ದರೆ ವಾರ್ಡ್‌ಗಳ ಸ್ವತ್ಛತಾ ಜವಾಬ್ದಾರಿಯನ್ನು ಮಹಿಳೆಯರೇ ನಿಭಾಯಿಸುತ್ತಿದ್ದರು. ಆದರೆ ನಗರಸಭೆ ಎನ್ನುವ ಬಿಳಿಆನೆ ಇಂದು ನಾಗರಿಕರ ನೆಮ್ಮದಿ ಕೆಡಿಸುವಲ್ಲಿ ಯಶಸ್ವಿಯಾಗಿದೆಯೇ ಹೊರತು ನಗರದ ಅಭಿವೃದ್ಧಿಗೆ ಪೂರಕವಾಗಿಲ್ಲ.
ನಾಮಕಾವಸ್ಥೆಗೆ ಟ್ರಾÂಕ್ಟರ್‌ಗಳಲ್ಲಿ ಮನೆ ಮನೆ ಕಸ ಸಂಗ್ರಹಿಸುವ ನಾಟಕವಾಡಲಾಗುತ್ತಿದೆ. ಬಹುತೇಕ ಬಡಾ ವಣೆಗಳಿಗೆ ಕಸದ ಗಾಡಿಗಳೇ ಹೋಗುತ್ತಿಲ್ಲ. ನಗರದ ವಿವಿಧ ಬಡಾವಣೆಗಳಲ್ಲಿ ಕಂಟೈನರ್‌ಗಳನ್ನು ಅಳವಡಿಸಿ ಕಸವಿಲೇವಾರಿ ಮಾಡುತ್ತಿದ್ದ ದಿನಗಳಲ್ಲಿ ಸ್ವಲ್ಪವಾದರೂ ನಗರ ಸ್ವತ್ಛತೆಯಿಂದ ಕೂಡಿತ್ತು. ಆದರೆ ಇತ್ತೀಚೆಗೆ ಪೌರಾಯುಕ್ತರಾಗಿ ಬಂದ ಬಿ. ಶುಭಾ ಅವರು ಲಕ್ಷಾಂತರ ರೂ. ಬೆಲೆ ಬಾಳುವ ಕಂಟೈನರ್‌ಗಳನ್ನು ನಗರದೆಲ್ಲೆಡೆಯಿಂದ ತೆರವುಗೊಳಿಸಿ ಸ್ಟೋನ್‌ಹಿಲ್ ಬಳಿಯ ಕಸ ವಿಲೇವಾರಿ ಪ್ರದೇಶದಲ್ಲಿ ಕಸದಂತೆ ಬಿಸಾಡಿದ್ದಾರೆ.
ಮಡಿಕೇರಿಯನ್ನು ಕಸದ ತೊಟ್ಟಿ ಹಾಗೂ ಕಂಟೈನರ್ ಮುಕ್ತ ನಗರ ಮಾಡುವುದು ಈ ಕ್ರಮದ ಉದ್ದೇಶವೆಂದು ಪೌರಾಯುಕ್ತರು ಅಂದು ಹೇಳಿಕೊಂಡಿದ್ದರು. ಆದರೆ ಕಸದ ತೊಟ್ಟಿ ಮತ್ತು ಕಂಟೈನರ್‌ಗೆ ಮುಕ್ತಿ ನೀಡಿರುವುದರಿಂದ ನಗರದಲ್ಲಿ ಕಸಕ್ಕೆ ಮುಕ್ತಿ ಇಲ್ಲದಂತ್ತಾಗಿದೆ. ಎಲ್ಲೆಂದರಲ್ಲಿ ಕಸದ ರಾಶಿ ಕೊಳೆತು ನಾರುತ್ತಿದೆ. ಇಲ್ಲಿ ಕಸ ಹಾಕಿದರೆ ಕಠಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆಯ ಫಲಕ ಅಳವಡಿಸಿರುವ ಪ್ರದೇಶದಲ್ಲೇ ಕಸದ ರಾಶಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಈ ಹಿಂದೆ ಕಸದ ತೊಟ್ಟಿ ಹಾಗೂ ಕಂಟೈನರ್ ಇದ್ದ ಜಾಗದಲ್ಲೇ ಕಸವನ್ನು ಸುರಿಯಲಾಗುತ್ತಿದೆ. ಹೋಂಸ್ಟೇ, ಹೋಟೆಲ್, ಖಾಸಗಿ ಆಸ್ಪತ್ರೆಗಳು ಇರುವ ಕಡೆ ದೊಡ್ಡ ದೊಡ್ಡ ಪ್ಲಾಸ್ಟಿಕ್‌ಗಳಲ್ಲಿ ಗಂಟು ಕಟ್ಟಿ ತಂದು ಕಸವನ್ನು ತೆರೆದ ಪ್ರದೇಶಗಳಲ್ಲಿ ಹಾಕಲಾಗುತ್ತಿದೆ. ಈ ರೀತಿ ನಿಯಮ ಬಾಹಿರವಾಗಿ ಕಸ ವಿಲೇವಾರಿ ಮಾಡುವವರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಬೇ ಕಾದ ನಗರಸಭೆ ಜಡ್ಡುಗಟ್ಟಿದ ವಾತಾವರಣದಲ್ಲಿ ಜಾಣ ಕುರುಡಿನಂತೆ ವರ್ತಿಸುತ್ತಿದೆ.
ಹಳೆಯ ಸಿಮೆಂಟ್ ತೊಟ್ಟಿಗಳು ಅಸ್ಥಿಪಂಜರದಂತಾಗಿದ್ದು, ಇವುಗಳಿಗೇ ಜನರು ಕಸ ತಂದು ಹಾಕುತ್ತಿದ್ದಾರೆ. ಈ ರೀತಿಯ ಮುರುಕಲು ತೊಟ್ಟಿಗಳನ್ನು ಯಾಕೆ ಉಳಿಸಿಕೊಳ್ಳಲಾಗಿದೆ ಎನ್ನುವ ಪ್ರಶ್ನೆಗೆ ಪೌರಾಯುಕ್ತರೇ ಉತ್ತರಿಸಬೇಕಷ್ಟೆ. ತೊಟ್ಟಿಗಳ ಸುತ್ತ ಕಸದ ರಾಶಿ ಕೊಳೆಯುತ್ತಿದ್ದರೂ ವಿಲೇವಾರಿಯಾಗುವುದು ಮಾತ್ರ ವಾರಕ್ಕೆ ಒಂದೆರಡು ಬಾರಿ. ಈ ಕೊಳೆತ ತ್ಯಾಜ್ಯಗಳನ್ನು ಟ್ರಾÂಕ್ಟರ್‌ಗೆ ತುಂಬುವ ಪೌರಕಾರ್ಮಿಕರ ಸ್ಥಿತಿ ಮಾತ್ರ ಮಾರ್ಮಿಕವಾಗಿದೆ. ಅಗತ್ಯ ಸಮವಸ್ತ್ರ, ಕೈಚೀಲ, ಗಂಬೂಟು ಮತ್ತಿತರ ಸೌಲಭ್ಯಗಳಿಲ್ಲದೆ ದುರ್ವಾಸನೆಯೊಂದಿಗೆ ಕಾರ್ಯ ನಿರ್ವಹಿಸುವ ಅನೇಕ ಮಂದಿ ಪೌರಕಾರ್ಮಿಕರು ಅಲ್ಲಲ್ಲಿ ಕಾಣ ಸಿಗುತ್ತಾರೆ.
ಮಡಿಕೇರಿಯನ್ನು ಸಿಂಗಾಪುರ ಮಾಡುತ್ತೇವೆ ಎಂದು ಹಲವು ರಾಜಕಾರಣಿಗಳು ಹಾಗೂ ಅಧಿಕಾರಿಗಳು ಜನರ ಮೂಗಿಗೆ ತುಪ್ಪ ಸವರುತ್ತಲೇ ಬಂದಿದ್ದಾರೆ. ಆದರೆ ನಗರದ ಜನ ಮಾತ್ರ ಮೂಗು ಮುಚ್ಚಿಕೊಂಡೇ ನಡೆದಾಡಬೇಕಾದ ದುಃಸ್ಥಿತಿಯಿಂದ ಮುಕ್ತಿ ಹೊಂದಿಲ್ಲ. ಮನೆ ಮನೆ ಕಸ ಸಂಗ್ರಹಿಸುವ ಕಾರ್ಯದ ಗುತ್ತಿಗೆಯನ್ನು ಕೆಲವು ಮಹಿಳಾ ಸಂಘಗಳಿಗೆ ನೀಡಲಾಗಿದೆ. ಈ ಸಂಘ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿದ್ದರೂ ಆರ್ಥಿಕ ಅಡಚಣೆ ಹಾಗೂ ತಾಂತ್ರಿಕ ಕಾರಣಗಳಿಂದಾಗಿ ಸಮರ್ಪಕವಾಗಿ ಕಸ ವಿಲೇವಾರಿ ಮಾಡಲು ಸಾಧ್ಯವಾಗುತ್ತಿಲ್ಲ. ಕೆಲವು ಬಡಾವಣೆಗಳಿಗೆ ಕಸದ ಗಾಡಿಯೇ ಹೋಗುತ್ತಿಲ್ಲ.
ಮಳೆಗಾಲದಲ್ಲಿ ಅವೈಜ್ಞಾನಿಕ ಕಾಮಗಾರಿ
ಪ್ರತಿ ಮಳೆಗಾಲದಲ್ಲಿ ಚರಂಡಿಗಳ ಕಾಡು ಹಾಗೂ ಚರಂಡಿಗೆ ಅಡ್ಡಲಾಗಿರುವ ರಸ್ತೆ ಬದಿಯ ಗಿಡಗಂಟೆಗಳನ್ನು ಕಡಿದು ನೀರು ಸರಾಗವಾಗಿ ಹರಿಯಲು ಅನುವು ಮಾಡಿಕೊಡಲಾಗುತ್ತದೆ. ಪಾಚಿ ಹಿಡಿದ ಕಾಲು ದಾರಿಗಳು ಜಾರದಿರಲಿ ಎಂದು ಬ್ಲೀಚಿಂಗ್ ಪೌಡರ್ ಹಾಕಲಾಗುತ್ತದೆ. ಆದರೆ ಪ್ರಸ್ತುತ ವರ್ಷ ಈ ಎರಡೂ ಕಾರ್ಯವನ್ನು ಮಾಡದ ನಗರಸಭೆ ಪಾದಾಚಾರಿಗಳು ಕೆಸರು ನೀರಿನಿಂದ ಸಂಕಷ್ಟವನ್ನು ಎದುರಿಸುವಂತಹ ಪರಿಸ್ಥಿತಿಯನ್ನು ಸೃಷ್ಟಿ ಮಾಡಿದೆ. ಅನೇಕರು ಪಾಚಿ ಕಟ್ಟಿದ ಕಾಲುದಾರಿಯಲ್ಲಿ ಬಿದ್ದು ಆಸ್ಪತ್ರೆ ಸೇರಿದ್ದಾರೆ.
ಮಳೆಗಾಲದಲ್ಲೇ ಅವೈಜ್ಞಾನಿಕ ಕಾಮಗಾರಿಗಳಿಗೆ ಕೈಹಾಕಿ ಪಾದಚಾರಿಗಳು ನಡೆದಾಡದಂತೆ ಮಾಡಲಾಗಿದೆ. ಕೊಹಿ ನೂರ್ ರಸ್ತೆಯಿಂದ ರೇಸ್‌ಕೋರ್ಸ್ ರಸ್ತೆಗೆ ಸಂಪರ್ಕ ಕಲ್ಪಿಸುವ ಕಾಲುದಾರಿಯನ್ನು ಅಗೆದು ಹಾಕಿರುವ ನಗರಸಭೆ ಕಾಮ ಗಾರಿಯನ್ನು ಅರ್ಧದಲ್ಲೇ ಸ್ಥಗಿತಗೊಳಿಸಿ ಅಪಾಯಕಾರಿ ಗುಂಡಿಗಳನ್ನು ಮುಚ್ಚದೆ ಹಾಗೇ ಬಿಟ್ಟು ಕೈತೊಳೆದುಕೊಂಡಿದೆ. ಈ ಅರ್ಥಹೀನ ಕಾಮಗಾರಿಯಿಂದ ಪಾದಚಾರಿಗಳು ಓಡಾ ಡದ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಅನೇಕರು ಕಾಲು ಜಾರಿ ಬಿದ್ದಿದ್ದಾರೆ.
ಅಸಹಾಯಕತೆಯ ಅಧ್ಯಕ್ಷರು
ಈ ಎಲ್ಲ ಅವ್ಯವಸ್ಥೆಗಳ ಬಗ್ಗೆ ಅಧ್ಯಕ್ಷರಾದ ಕಾವೇರಮ್ಮ ಸೋಮಣ್ಣ ಅವರನ್ನು ಪ್ರಶ್ನಿಸಿದರೆ ಕಸ ವಿಲೇವಾರಿ ಸಮರ್ಪ ಕವಾಗಿ ಆಗುತ್ತಿದೆ. ಪ್ರವಾಸಿಗರಿಂದ ಸ್ವಲ್ಪ ಕಸ ಹೆಚ್ಚಾಗಿದೆ ಎಂದಷ್ಟೇ ಹೇಳುತ್ತಾರೆ.
ವಿರೋಧ ಪಕ್ಷಗಳ ಸದಸ್ಯರುಗಳು ಮಾಮೂಲಿನಂತೆ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ ಎಂದು ಟೀಕಿಸುತ್ತಿದ್ದಾರೆ. ಆದರೆ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ನೈಜ ಕಾಳಜಿಯನ್ನು ಆಡಳಿತ ಪಕ್ಷವಾಗಲಿ ಅಥವಾ ವಿರೋಧ ಪಕ್ಷವಾಗಲಿ ತೋರುತ್ತಿಲ್ಲ ಎನ್ನುವ ಅಸಮಾಧಾನ ಜನ ವಲಯದಲ್ಲಿದೆ.
ಬಳಕೆಯಾಗದ ಆಟೋ ಟಿಪ್ಪರ್‌ಗಳು
ನಗರದಲ್ಲಿ ಸಮರ್ಪಕವಾಗಿ ಕಸ ವಿಲೇವಾರಿಯಾಗಬೇಕೆನ್ನುವ ಉದ್ದೇಶ ದಿಂದ ಸರಕಾರ ಎರಡು ತಿಂಗಳ ಹಿಂದೆ ಒಟ್ಟು ಆರು ನೂತನ ಆಟೋ ಟಿಪ್ಪರ್‌ಗಳನ್ನು ನಗರಸಭೆಗೆ ನೀಡಿತ್ತು. ಜಿಲ್ಲಾ ಉಸ್ತುವಾರಿ ಸಚಿವರಾದ ಸೀತಾರಾಮ್ ಹಾಗೂ ಶಾಸಕರಾದ ಅಪ್ಪಚ್ಚು ರಂಜನ್ ಅವರುಗಳೇ ಈ ವಾಹನಗಳಿಗೆ ಚಾಲನೆ ನೀಡಿದ್ದರು. ಆದರೆ ಇಂದಿನ ವರೆಗೂ ಆರು ಆಟೋ ಟಿಪ್ಪರ್‌ಗಳಿಗೆ ಕಸ ವಿಲೇವಾರಿಯ ಭಾಗ್ಯವೇ ಕೂಡಿ ಬಂದಿಲ್ಲ. ಆರೂ ವಾಹನಗಳಿಗೆ ಚಾಲಕರ ಅಗತ್ಯವಿದ್ದು, ಇನ್ನೂ ಕೂಡ ಟೆಂಡರ್ ಪ್ರಕ್ರಿಯೆ ನಡೆದಿಲ್ಲ. ಆಮೆ ನಡಿಗೆಯ ಆಡಳಿತದ ನಗರಸಭೆಯಿಂದಾಗಿ ನಗರದ ಬಹುತೇಕ ಬಡಾವಣೆಗಳು ಗಬ್ಬೆದ್ದು ನಾರುತ್ತಿದ್ದು, ಪ್ರವಾಸಿಗರ ಸ್ವರ್ಗವಾಗಬೇಕಾಗಿದ್ದ ಮಂಜಿನ ನಗರಿ ಮಡಿಕೇರಿ ಇಂದು ಕಸ ತುಂಬಿದ ನರಕದಂತಾಗಿದೆ. ಪ್ರವಾಸಿಗರೂ ಅಸಹ್ಯ ಪಡುವಂತಹ ಸ್ಥಿತಿಯಿದ್ದು, ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದಲೂ ಕಸದ ಸಮಸ್ಯೆ ಉಲ್ಬಣವಾಗಿದೆ ಎನ್ನುವುದು ನಾಗರೀಕರ ಆರೋಪವಾಗಿದೆ.
ಹೊರಗುತ್ತಿಗೆ ಆಧಾರದ ಪೌರ ಕಾರ್ಮಿಕರಿಗಾಗಿ ವಾರ್ಷಿಕ 60 ಲಕ್ಷ ರೂ.ಗಳಿಗಿಂತಲೂ ಅಧಿಕ ಹಾಗೂ ತನ್ನ ಖಾಯಂ ಕಾರ್ಮಿಕರಿಗಾಗಿ ಸುಮಾರು 40 ಲಕ್ಷ ರೂ.ಗಳಷ್ಟನ್ನು ನಗರಸಭೆ ಖರ್ಚು ಮಾಡುತ್ತಿದೆ. ಇಷ್ಟು ಸಾಲದೆಂಬಂತೆ ಲಕ್ಷಾಂತರ ರೂ. ಬೆಲೆ ಬಾಳುವ ವಾಹನಗಳನ್ನು ಕೂಡ ಸರಕಾರ ನೀಡಿದೆ. ಆದರೆ ನಗರಸಭೆಯಲ್ಲಿ ಆಡಳಿತ ನಡೆಸುತ್ತಿರುವವರ ಇಚ್ಛಾಶಕ್ತಿಯ ಕೊರತೆಯಿಂದಾಗಿ ಇಂದು ಮಡಿಯಾಗಿರಬೇಕಾಗಿದ್ದ ಮಡಿಕೇರಿ ದುರ್ನಾತ ಬೀರುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.