ಜಿಎಸ್‌ಟಿ ಜಾರಿಗೊಳಿಸಿದ್ದು ಕೇಂದ್ರದ ಅತ್ಯುತ್ತಮ ಸಾಧನೆ
Team Udayavani, Jul 31, 2017, 12:46 PM IST
ಹುಬ್ಬಳ್ಳಿ: ಕೇಂದ್ರ ಸರಕಾರ ಸರಕು ಮತ್ತು ಸೇವೆ (ಜಿಎಸ್‌ಟಿ) ಜಾರಿಗೊಳಿಸಿದ್ದು ಅತ್ಯುತ್ತಮ ಸಾಧನೆಯಾಗಿದೆ. ಇದು ದೇಶದ ಆರ್ಥಿಕ ಬೆಳವಣಿಗೆಗೆ ಹೆಚ್ಚು ಅಗತ್ಯ ಮತ್ತು ಉತ್ತೇಜನ ನೀಡುತ್ತದೆ. ಜೊತೆಗೆ ದೇಶಾದ್ಯಂತ ಸರಕು ಮತ್ತು ಸೇವೆಗಳ ಮುಕ್ತ ಹರಿವಿಗೆ ಕಾರಣವಾಗಲಿದೆ ಎಂದು ಲೆಕ್ಕ ಪರಿಶೋಧಕ ಡಾ| ಎನ್.ಎ. ಚರಂತಿಮಠ ಹೇಳಿದರು.
ಇಲ್ಲಿನ ನವನಗರದ ಕಾನೂನು ವಿವಿ ಸಭಾಭವನದಲ್ಲಿ ಕರ್ನಾಟಕ ರಾಜ್ಯ ಕಾನೂನು ವಿವಿ, ಕರ್ನಾಟಕ ರಾಜ್ಯ ಕಾನೂನು ಮಹಾವಿದ್ಯಾಲಯ ಶಿಕ್ಷಕರ ಸಹಯೋಗದೊಂದಿಗೆ ಭಾರತೀಯ ಆರ್ಥಿಕತೆಯ ಮೇಲೆ ಜಿಎಸ್‌ಟಿ ಪರಿಣಾಮ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
ಜಿಎಸ್‌ಟಿ ಒಂದು ದೇಶಕ್ಕೆ ಒಂದು ಮಾರುಕಟ್ಟೆ ಮತ್ತು ಒಂದು ತೆರಿಗೆ ವ್ಯವಸ್ಥೆ ಸ್ಥಾಪಿಸುತ್ತದೆ. ತೆರಿಗೆ ವ್ಯವಸ್ಥೆಯು ದೃಢವಾದ, ಸರಳ ಮತ್ತು ಸುಲಭವಾಗಿ ಅನುಸರಿಸಬೇಕಾದ ಮತ್ತು ಅಂತಾರಾಷ್ಟ್ರೀಯ ತೆರಿಗೆ ಸ್ಥಾಪಿಸಲು ಪ್ರಯತ್ನಿಸುತ್ತಿದೆ. ಕೇಂದ್ರವು ಜಿಎಸ್‌ಟಿ ಅನುಷ್ಠಾನಗೊಳಿಸಿದ್ದರಿಂದ ದೇಶಿಯ ಮತ್ತು ವಿದೇಶಿ ಹೂಡಿಕೆದಾರರು ಆರ್ಥಿಕತೆ ಬಯಸುತ್ತಾರೆ ಹಾಗೂ ದೇಶದಲ್ಲಿ ಎಫ್‌ಡಿಐ ಹರಿವು ಹೆಚ್ಚುತ್ತದೆ ಎಂದರು.
ಜಿಎಸ್‌ಟಿ ಆದಾಯದ ಬೆಳವಣಿಗೆಗೆ ಕಾರಣವಾಗಲಿದ್ದು, ಇದು ಸರಳೀಕೃತ ತೆರಿಗೆ ವ್ಯವಸ್ಥೆಯಾಗಿದೆ. ಜಿಎಸ್‌ಟಿ ಅನುಷ್ಠಾನದ ನಂತರ ಆದಾಯ ತೆರಿಗೆ ಮತ್ತು ಜಿಎಸ್‌ಟಿ ಎರಡು ಪ್ರಮುಖ ತೆರಿಗೆಗಳಾಗಿವೆ. ಇನ್ಪುಟ್ ಟ್ಯಾಕ ಕ್ರೆಡಿಟ್ ಜಿಎಸ್‌ಟಿಯ ಮುಖ್ಯ ಅಂಶವಾಗಿದೆ. ಉತ್ಪಾದನೆಯ ವೆಚ್ಚ ಇಳಿಮುಖವಾಗಲಿವೆ ಹಾಗೂ ಸರಕು ಮತ್ತು ಸೇವೆಗಳ ಬೆಲೆಗಳು ಕಡಿಮೆಯಾಗಲಿವೆ.
ತೆರಿಗೆ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಜಿಎಸ್‌ಟಿ ಖಚಿತಪಡಿಸುತ್ತದೆ ಎಂದರು. ವಿವಿಯ ಪ್ರಭಾರ ಕುಲಪತಿ ಡಾ| ಸಿ.ಎಸ್. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ರಿಜಿಸ್ಟ್ರಾರ್ ಡಾ| ಜಿ.ಬಿ. ಪಾಟೀಲ ಮೊದಲಾದವರಿದ್ದರು. ರಿಜಿಸ್ಟ್ರಾರ್ ಡಾ| ರತ್ನಾ ಆರ್. ಭರಮಗೌಡರ ಸ್ವಾಗತಿಸಿದರು. ಸುನಿಲ ಎನ್. ಬಗಾಡೆ ನಿರೂಪಿಸಿದರು. ಡಾ| ಬಸವರಾಜ ಕುಬಕಡ್ಡಿ ವಂದಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.