ಹುಟ್ಟು-ಸಾವುಗಳ ನಡುವೆ ಬುದ್ಧಿವಂತಿಕೆಯ ಸಮಯ ಪ್ರಜ್ಞೆ
Team Udayavani, Aug 1, 2017, 1:20 PM IST
“ಟೈಮ್ ಕೂಡಿಬಂದಿಲ್ಲ’ ಅಂತ ನಿಮ್ಮ ಜೀವನವನ್ನು, ನಿಮ್ಮ ಸಮಯವನ್ನು ಗೌರವಿಸದೆ ಕಾಲಹರಣ ಮಾಡಬೇಡಿ. ಪ್ರತಿದಿನವೂ ಒಳ್ಳೆಯ ದಿನವೇ. ಆದರೆ ನಮಗೆ ಆ ದಿನದ ವಿಶೇಷತೆಯನ್ನು ತಿಳಿದುಕೊಳ್ಳುವ ಬುದ್ಧಿವಂತಿಕೆ ಇರಬೇಕು ಅಷ್ಟೇ. ಮನುಷ್ಯನಿಗೆ ನಿಜವಾಗಲೂ ಸಮಯ ಪ್ರಜ್ಞೆ ಇದ್ದರೆ, ಒಂದೇ ಜನ್ಮದಲ್ಲಿ ಅವನು ಎಲ್ಲ ಜವಾಬ್ದಾರಿಗಳನ್ನು ಸ್ವಯಂ ಪ್ರಯತ್ನದಿಂದ ಪೂರೈಸಬಹುದು.
ಹುಟ್ಟು ಅನಿರೀಕ್ಷಿತ-ಸಾವು ಖಚಿತ. ಸಮಯ-ನಿಯಮ, ಹುಟ್ಟು ಸಾವಿನ ನಡುವೆ ಇರುವುದು ಸಮಯ ಒಂದೇ. ಮನುಷ್ಯ ಆ ಸಮಯದಲ್ಲಿ ಎಲ್ಲ ಬದಲಾವಣೆಗಳನ್ನೂ ಕಾಣುತ್ತಾ ಹೋಗುತ್ತಾನೆ. ಹುಟ್ಟಿದ ತತ್‌ಕ್ಷಣವೇ ಪರಮಾತ್ಮ ನಮ್ಮನ್ನು ವಾಸ್ತವ ಜೀವನದಲ್ಲಿ ಓಡುವುದಕ್ಕೆ ಬಿಡುತ್ತಾನೆ. ನಾವು ಓಡುತ್ತಾ ಓಡುತ್ತಾ, ಸಮಯವನ್ನು ಖಚಿತಪಡಿಸುತ್ತಾ ಬಾಲ್ಯ, ಯೌವನ, ಕೌಮಾರ್ಯ, ಸಂಸಾರ, ಸನ್ಯಾಸ ಎಲ್ಲ ವ್ಯವಸ್ಥೆಗಳನ್ನೂ ಹಾದು ಹೋಗುತ್ತಿರುತ್ತೇವೆ. ಸಮಯದ ನಿಯಮವನ್ನು ಮುಂದೂಡುವುದಕ್ಕೂ ಸಾಧ್ಯವಿಲ್ಲ, ತಡೆ ಹಿಡಿಯಲೂ ಸಾಧ್ಯವಿಲ್ಲ. ನಮಗೆ ಗೊತ್ತಾಗದ ರೀತಿಯಲ್ಲಿ ನಮ್ಮ ದೇಹ, ಬುದ್ಧಿ, ಮನಸ್ಸು, ಋತುಮಾನ ಎಲ್ಲದರಲ್ಲೂ ಬದಲಾವಣೆಗಳನ್ನು ಕಾಣುತ್ತೇವೆ. ಹಾಗಾದರೆ ಇಷ್ಟೆಲ್ಲ ಬದಲಾವಣೆಗಳನ್ನು ಮಾಡುತ್ತಿರುವ ಸಮಯವು ದೇವರಾ? ಅಲ್ಲ, ಸಮಯ ದೇವರು ಬರೆದಿರುವಷ್ಟು, ಅದೊಂದು ಸೂತ್ರ. ಆ ಸೂತ್ರಕ್ಕೆ ಕಾಲಘಟ್ಟದ ಒಂದು ನಿಯಮವನ್ನು ಸೂಚಿಸಿದ್ದಾನೆ. ಆ ನಿಯಮವನ್ನು ಪ್ರಕೃತಿಯಾಗಲೀ ಮನುಷ್ಯನಾಗಲೀ ಪಾಲಿಸಲೇಬೇಕು. ನಾವು ನಿಯಮ ನುಡಿದಂತೆ ನಡೆಯಬೇಕು.
ನಿಯಮಾನುಸಾರ ಪರಮಾತ್ಮನು ಮನುಷ್ಯನ ಒಂದು ಜನ್ಮದ ದೇಹಕ್ಕೆ 100 ವರ್ಷ ಎಂದು ನಿಗದಿಪಡಿಸಿದ್ದಾನೆ. ಆದರೆ ಕಲಿಯುಗದಲ್ಲಿ ಬಹುತೇಕ ಜನರು 100 ವರ್ಷಗಳ ಒಳಗೆ ತಮ್ಮ ಪ್ರತ್ಯಕ್ಷ ಜನ್ಮವನ್ನು ಕಳೆದುಕೊಳ್ಳುತ್ತಾರೆ, ಬೆರಳೆಣಿಕೆಯಷ್ಟು ಜನ ಮಾತ್ರ 100 ವರ್ಷಗಳ ಪರಿಪೂರ್ಣ ಬದುಕಿಗೆ ಸಾಕ್ಷಿಯಾಗುತ್ತಾರೆ.
ಸಮಯ ನಮಗೆ ಗೊತ್ತಿಧ್ದೋ ಗೊತ್ತಿಲ್ಲದೆಯೋ ಕಳೆದು ಹೋಗುತ್ತಲೇ ಇರುತ್ತದೆ. ಪ್ರತಿನಿತ್ಯ ನಾವು ಸಾವಿಗೆ ಹತ್ತಿರವಾಗುತ್ತೇವೆ. ಸಮಯಕ್ಕೆ ಕೋಟಿ ಕೋಟಿ ಜೀವರಾಶಿಗಳ ಮೇಲೆ ಪ್ರತ್ಯೇಕವಾಗಿ ಪ್ರಜ್ಞೆ ಇಟ್ಟುಕೊಳ್ಳುವುದು ಸಾಧ್ಯವಾಗದ ಮಾತು. ಸಮಯಕ್ಕೆ ನಮ್ಮ ಮೇಲೆ ಪ್ರಜ್ಞೆ ಇದ್ದರೂ ಇಲ್ಲದಿದ್ದರೂ ನಮಗೆ ಸಮಯದ ಮೇಲೆ ಪ್ರಜ್ಞೆ ಇರಲೇಬೇಕು.
ಹುಟ್ಟು -ಸಾವುಗಳ ನಡುವೆ ನಮಗೆ ಸಮಯ ಪ್ರಜ್ಞೆ ಇದ್ದರೆ ಮಾತ್ರ ನಮ್ಮ ಜೀವನಕ್ಕೆ ಅರ್ಥ ಸಿಗುವುದು. ವೇದ-ವೇದಾಂತದ ಮೂಲ ಹೇಳುವಂತೆ ನಮಗೆ ಈ ಜನ್ಮ ಸಿಗಲು ನಮ್ಮ ಹಿಂದಿನ ಜನ್ಮದ ಕರ್ಮ ಫಲಗಳೇ ಕಾರಣ. ಉದಾಹರಣೆಗೆ, ನಾನು ನನ್ನ ತಾಯಿ ತಂದೆಗೆ ಯಾಕೆ ಮಗಳಾಗಿ ಹುಟ್ಟಿದೆ? ನಾನೇಕೆ ಡಾ| ರಾಜಕುಮಾರ್ ಅವರ ಮನೆಯಲ್ಲಿ ಅಥವಾ ಗಾಂಧೀಜಿಯವರ ಮನೆಯಲ್ಲಿ ಹುಟ್ಟಲಿಲ್ಲ? ಯಾಕೆ ಕಾಡು ಮನುಷ್ಯಳಾಗಿ ಹುಟ್ಟಲಿಲ್ಲ? ಇಲ್ಲಿ ಉತ್ತಮ ಜನ್ಮ-ಕೀಳು ಜನ್ಮ ಎಂಬ ಭೇದವಿಲ್ಲ. ಎಲ್ಲ ಜನ್ಮಗಳೂ ಉತ್ತಮ ಜನ್ಮಗಳೇ. ಈ ಜನ್ಮ ನಮ್ಮ ಮುಂದಿನ ಜನ್ಮಕ್ಕೆ ತಳಪಾಯ.
ಈಗ ಜನ್ಮಜನ್ಮದ ಕಥೆಗಳನ್ನು ಬಿಟ್ಟು ವಾಸ್ತವಕ್ಕೆ ಬರೋಣ. ನಮ್ಮ ಸಮಯ ಇಲ್ಲಿ ಶುರುವಾಗುತ್ತದೆ. ಎಷ್ಟೋ ಜನರಿಗೆ ಸಮಯದ ಬೆಲೆಯೇ ಗೊತ್ತಿಲ್ಲ. ಏನನ್ನೇ ಕಳೆದುಕೊಂಡರೂ ವ್ಯಥೆ ಪಡುತ್ತಾರೆ. ಆದರೆ ಎಲ್ಲದರ ಮುಂದೆ ನಿಂತು ಆಡಿಸುತ್ತಿರುವುದೇ ಸಮಯ ಎಂಬುದನ್ನು ಅವರು ಅರಿತುಕೊಳ್ಳುವುದಿಲ್ಲ. ನಮ್ಮಲ್ಲಿ ತಡವಾಗಿ ಬಂದರೆ ಎಲ್ಲರೂ ಹಾಸ್ಯವಾಗಿ “ಇಂಡಿಯನ್ ಸ್ಟ್ಯಾಂಡರ್ಡ್ ಟೈಮ್’ ಅಂತ ಹೇಳಿ ನಗುವುದುಂಟು. ಅಂದರೆ ಭಾರತೀಯರಿಗೆ ಸಮಯ ಪ್ರಜ್ಞೆ ಇಲ್ಲ ಎಂದರ್ಥ. ನೀವು ಇದನ್ನು ಒಪ್ಪುತ್ತೀರಾ? ಸಮಯ ನಮಗೆ ಜೀವನದಲ್ಲಿ ಒಳ್ಳೆಯದನ್ನೂ ಮಾಡುತ್ತದೆ, ಕೆಟ್ಟದ್ದನ್ನೂ ಮಾಡುತ್ತದೆ. ಆದರೆ ನಮ್ಮ ಸೋಂಬೇರಿತನದಿಂದ ಎಲ್ಲ ಭಾರತೀಯರಿಗೂ ಅವಮಾನವಾಗಬಾರದು. ನಾನು ಕಂಡಂತೆ ಬಹಳಷ್ಟು ಮಂದಿ ತಮ್ಮ ಸಮಯಕ್ಕೂ ಬೆಲೆ ಕೊಡುವುದಿಲ್ಲ, ಇನ್ನೊಬ್ಬರ ಸಮಯವನ್ನೂ ಗೌರವಿಸುವುದಿಲ್ಲ. ಸಮಯವನ್ನು ಸರಿಯಾಗಿ ಬಳಸಿಕೊಳ್ಳುವುದಕ್ಕಿಂತ ವ್ಯಯ ಮಾಡುವವರೇ ಅಧಿಕ.
ಇತ್ತೀಚಿನ ಯುವಕ-ಯುವತಿಯರು ತಮ್ಮ ಜೀವನದ ಅಮೂಲ್ಯ ಸಮಯವನ್ನು ಹರಟೆಗೆ ಮೀಸಲಾಗಿಟ್ಟಿದ್ದಾರೆ. ಇಲ್ಲದಿದ್ದರೆ ಜಿಜ್ಞಾಸುಗಳಂತೆ ಪ್ರಶ್ನಿಸುತ್ತಲೇ ಇರುತ್ತಾರೆ. ಉತ್ತರ ಕಂಡುಕೊಳ್ಳುವಷ್ಟರಲ್ಲಿ ಅರ್ಧ ಜೀವನ ಕಳೆದಿರುತ್ತಾರೆ. ಸಕಾರಾತ್ಮಕವಾಗಿ ಜೀವನವನ್ನು ಆಲಂಗಿಸಿಕೊಳ್ಳುವವರು ಬಹಳ ಕಡಿಮೆ. ಎಲ್ಲರೂ ತಮ್ಮ ತಮ್ಮ ಕಷ್ಟಗಳಿಗೆ ತಾವೇ ಪರಿಹಾರ ಹುಡುಕುವುದಕ್ಕಿಂತ ಹೆಚ್ಚಾಗಿ, ಆ ಕಷ್ಟಗಳ ಬಗ್ಗೆ ಚರ್ಚಿಸುತ್ತ, ಅದಕ್ಕೆ ಸಾಂತ್ವನ ಹೇಳುವವರನ್ನು ಹುಡುಕುತ್ತಿರುತ್ತಾರೆ. ಇನ್ನೊಬ್ಬರು ಅವರ ಸಮಯದಿಂದ ನಮಗೇನು ಕೊಟ್ಟಿದ್ದಾರೆ ಎನ್ನುವುದಕ್ಕಿಂತ ನಾವು ಅವರಿಗೆ ಏನನ್ನು ಕೊಟ್ಟಿದ್ದೇವೆ ಎಂದು ಪ್ರಶ್ನಿಸಿಕೊಳ್ಳಬೇಕು.
“ಒಳ್ಳೆಯ ಸಮಯ ಅಥವಾ ಟೈಮ್ ಕೂಡಿಬಂದಿಲ್ಲ’ ಅಂತ ನಿಮ್ಮ ಜೀವನವನ್ನು, ನಿಮ್ಮ ಸಮಯವನ್ನು ಗೌರವಿಸದೆ ಕಾಲಹರಣ ಮಾಡಬೇಡಿ. ಪ್ರತಿದಿನವೂ ಒಳ್ಳೆಯ ದಿನವೇ. ಆದರೆ ನಮಗೆ ಆ ದಿನದ ವಿಶೇಷತೆಯನ್ನು ತಿಳಿದುಕೊಳ್ಳುವ ಬುದ್ಧಿವಂತಿಕೆ ಇರಬೇಕು ಅಷ್ಟೇ. ಮನುಷ್ಯನಿಗೆ ನಿಜವಾಗಲೂ ಸಮಯ ಪ್ರಜ್ಞೆ ಇದ್ದರೆ, ಒಂದೇ ಜನ್ಮದಲ್ಲಿ ಅವನು ಎಲ್ಲ ಜವಾಬ್ದಾರಿಗಳನ್ನು ಸ್ವಯಂ ಪ್ರಯತ್ನದಿಂದ ಪೂರೈಸಬಹುದು. ಅಪ್ಪ, ಅಮ್ಮ, ಸಂಸಾರ, ಸ್ನೇಹಿತರು, ಸಾಮಾಜಿಕ ಜವಾಬ್ದಾರಿ, ಸರಕಾರವನ್ನು ರೂಪಿಸುವ ಜವಾಬ್ದಾರಿ, ಜ್ಞಾನ ಸಂಪಾದನೆ- ಜ್ಞಾನ ಪ್ರಸರಣ, ಉತ್ತಮ ಮಾರ್ಗದಲ್ಲಿ ಹಣ ಸಂಪಾದಿಸುವುದು, ಹಬ್ಬಗಳ ಆಚರಣೆ, ಧಾರ್ಮಿಕ ಕಾರ್ಯಗಳು, ಹವ್ಯಾಸಗಳು, ಸಂಸ್ಕಾರ ಬೆಳೆಸುವುದು, ಮುಂದಿನ ಪೀಳಿಗೆಗಾಗಿ ಶುದ್ಧ ಸಮಾಜವನ್ನು ರೂಪಿಸುವುದು ಇವೆಲ್ಲ ಸಾಧ್ಯವಾಗುವುದು ಒಬ್ಬ ಮನುಷ್ಯನಿಗೆ ಹುಟ್ಟು -ಸಾವುಗಳ ನಡುವೆ ಸಮಯ ಪ್ರಜ್ಞೆ ಇದ್ದಾಗ ಮಾತ್ರ. “ನಾನೊಬ್ಬ ಅಥವಾ ನಾನೊಬ್ಬಳು ಮಾತ್ರ ಬದಲಾದರೆ ಸಮಾಜ ಬದಲಾಗುತ್ತಾ’ ಎಂದು ನೀವು ಕೇಳಬಹುದು. ಹೌದು, ನೀವು ಒಬ್ಬರು ಸಮಯ ಪ್ರಜ್ಞೆಯನ್ನು ಅಳವಡಿಸಿಕೊಂಡರೆ ನಿಮ್ಮನ್ನು ನೋಡಿ ಬಹಳ ಜನ ಬದಲಾಗುತ್ತಾರೆ ಅಥವಾ ಬದಲಾಗಲು ಪ್ರಯತ್ನ ಪಡುತ್ತಾರೆ. ನಿಮ್ಮಿಂದ ಸಮಾಜ ಒಳ್ಳೆಯದಾಗಿ ಬದಲಾಗುತ್ತದೆ. ಅದಕ್ಕೆ ನೀವೇ ನಾಯಕರಾಗಬೇಕು.
ಸಮಯ ಪ್ರಜ್ಞೆ ಇದ್ದರೆ ಜೀವನದಲ್ಲಿ ಬಹಳ ಬೇಗ ಸಾಧಕರಾಗಬಹುದು, ಅಂದುಕೊಂಡದ್ದನ್ನೆಲ್ಲ ಉತ್ತಮ ಮಾರ್ಗದಲ್ಲಿ ಪಡೆದುಕೊಳ್ಳಬಹುದು. ನಮಗೆ ನಾವೇ ಸಾರ್ಥಕತೆಯ ನೆಮ್ಮದಿ ಕಾಣಬಹುದು. ನಮ್ಮ ಜೀವನದ ಅರ್ಧ ಸಮಯವನ್ನು ನಿದ್ದೆಯಲ್ಲೇ ಕಳೆಯುತ್ತೇವೆ. ಉಳಿದರ್ಧ ಜೀವನದಲ್ಲಿ ಸುಖ-ಸಂಪತ್ತನ್ನು ಹುಡುಕಾಡುತ್ತಿರುತ್ತೇವೆ. ಸಾವು ಹತ್ತಿರವಾಗುತ್ತಿದ್ದಂತೆ ನನ್ನ ಇಷ್ಟು ವರ್ಷಗಳ ಜೀವನವನ್ನು ಹೇಗೆ ಕಳೆದೆ ಅಂತ ಹಿಂದಿರುಗಿ ನೋಡಿದರೆ ಕೇವಲ ಪಶ್ಚಾತ್ತಾಪವಾಗಬಾರದು. ಸಮಯದ ಕೈಯಲ್ಲಿ ಬುದ್ಧಿಯಿರುವ ಬೊಂಬೆಗಳು ನಾವು.
ರೂಪಾ ಅಯ್ಯರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Nikhil Kumarswamy: ಸೋತ ನಿಖಿಲ್‌ಗೆ ಜಿಲೆಯ ಪಕ್ಷ ಸಂಘಟನೆ ಹೊಣೆ
ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು, ಇಲ್ಲದಿದ್ದರೆ.. ಸ್ವಪಕ್ಷೀಯರ ವಿರುದ್ಧವೇ ಯತ್ನಾಳ್ ಕಿಡಿ
Karnataka ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿರುದ್ಧ ಲೈಂಗಿ*ಕ ದೌರ್ಜನ್ಯ ಪ್ರಕರಣ
Mandya: ಬಹುಮಾನ ಗೆದ್ದ ಹಳ್ಳಿಕಾರ್ ತಳಿಯ ಎತ್ತು ದಾಖಲೆಯ 13 ಲಕ್ಷ ರೂ.ಗೆ ಮಾರಾಟ!
Ajmer dargah ಶಿವ ದೇವಾಲಯ?; ಕೋಮು ಸೌಹಾರ್ದತೆಗೆ ಭಂಗ ತರುವ ಕುತಂತ್ರ: ಖಾದಿಮರ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.