ದೃಶ್ಯಕಣಕ್ಕೆ ಶಂಕು ಸ್ಥಾಪನೆ
Team Udayavani, Aug 1, 2017, 11:33 AM IST
ಬೆಂಗಳೂರು: ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ನಿರ್ಮಿಸಿರುತ್ತಿರುವ ಗ್ರಾಫಿಕ್ ಕಲಾಕೇಂದ್ರ “ದೃಶ್ಯಕಣ’ವನ್ನು ಹೊಸದಿಲ್ಲಿಯ ಗರಿ ಸ್ಟುಡಿಯೋ ಮಾದರಿಯಲ್ಲಿ ನಿರ್ಮಿಸಲು ಯೋಜನೆ ರೂಪಿಸಲಾಗಿದೆ ಎಂದು ಸಚಿವೆ ಉಮಾಶ್ರೀ ಅಭಿಪ್ರಾಯಪಟ್ಟರು.
ಕರ್ನಾಟಕ ಲಲಿತಕಲಾ ಅಕಾಡೆಮಿಯು ಸೋಮವಾರ ಕಲಾಗ್ರಾಮದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಗ್ರಾಫಿಕ್ ಕಲಾಕೇಂದ್ರದ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, ಗ್ರಾಫಿಕ್ ಕೇಂದ್ರ ನಿರ್ಮಾಣ ಯೋಜನೆಗೆ ಸರ್ಕಾರ 3.66 ಕೋಟಿ ರೂ. ಅನುದಾನ ಘೋಷಿಸಿದ್ದು, ಮೊದಲ ಹಂತದಲ್ಲಿ 3.31 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.
ಗ್ರಾಫಿಕ್ ಕಲಾ ಪ್ರಕಾರವು ಕರ್ನಾಟಕದಲ್ಲಿ ಬೆಳೆಯಲು ‘ಗ್ರಾಫಿಕ್ ಕಲಾಕೇಂದ್ರ’ದ ಅಗತ್ಯವನ್ನು ಮನಗಂಡು ಬೆಂಗಳೂರಿನ ಕಲಾಗ್ರಾಮದಲ್ಲಿರುವ “ದೃಶ್ಯಕಣ’ ಕಲಾವಿದರ ಸಂಕೀರ್ಣದಲ್ಲಿ ಮೊಟ್ಟ ಮೊದಲ ಕಲಾಕೇಂದ್ರವಾಗಿ ಗ್ರಾಫಿಕ್ ಕಲಾಕೇಂದ್ರ ಪ್ರಾರಂಭವಾಗುತ್ತಿದೆ ಎಂದರು.
ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಡಾ. ಎಂ.ಎಸ್. ಮೂರ್ತಿ ಮಾತನಾಡಿ, ಕೋಲ್ಕತ್ತಾದ ಶಾಂತಿ ನಿಕೇತನ, ಬರೋಡ ವಿಶ್ವವಿದ್ಯಾಲಯ, ದಕ್ಷಿಣ ಭಾರತದ ಭಾಗಗಳಲ್ಲಿ ಗ್ರಾಫಿಕ್ ಕಲೆಯು ಹೆಚ್ಚು ಜನಪ್ರಿಯವಾಗಿದೆ. ಇದೀಗ ರಾಜ್ಯದಲ್ಲಿ ಈ ಗ್ರಾಫಿಕ್ ಕಲೆಗೆ ವಿಶೇಷ ಮನ್ನಣೆ ದೊರಕಿಸಿಕೊಡುವ ನಿಟ್ಟಿನಲ್ಲಿ ಸರ್ಕಾರ ಗ್ರಾಫಿಕ್ ಕಲಾಕೇಂದ್ರವನ್ನು ಸ್ಥಾಪಿಸುತ್ತಿರುವುದು ಕಲಾವಿದರಲ್ಲಿ ಸಂತಸ ಮೂಡಿಸಿದೆ ಎಂದು ಹೇಳಿದರು.
ದೃಶ್ಯ ಕಲೆಯ ಪ್ರಕಾರಗಳಲ್ಲಿ ‘ಗ್ರಾಫಿಕ್ ಕಲೆ’ ಒಂದು ಪ್ರಮುಖವಾದ ಮಾಧ್ಯಮ. ಲಿಥೊ (ಕಲ್ಲಚ್ಚು), ಎಚ್ಚಿಂಗ್, ಲಿನೋ, ಸೆರಿಗ್ರಾಫ್(ಸ್ಕ್ರೀನ್ ಪ್ರಿಂಟಿಂಗ್), ವುಡ್‌ಕಟ್ ಇತ್ಯಾದಿ ಪರಿಕ್ರಮಗಳನ್ನು ಒಟ್ಟಾರೆಯಾಗಿ ‘ಗ್ರಾಫಿಕ್ ಕಲೆ’ ಎಂದು ಕಲಾ ಸಮುದಾಯ ಗುರುತಿಸಿದೆ.
ಯೂರೋಪ್ ದೇಶದ ಕಲಾವಲಯದಲ್ಲಿ ಪ್ರಚಲಿತವಾಗಿರುವ ಈ ಪ್ರಾಚೀನ ಕಲಾಪ್ರಕಾರವು 1556ರಲ್ಲಿ ಭಾರತಕ್ಕೆ ಪರಿಚಯವಾದರೂ, ಭಾರತದ ಕಲಾಶಾಲೆಗಳಲ್ಲಿ ಸುಮಾರು 70ರ ದಶಕದಲ್ಲಿ ಶೈಕ್ಷಣಿಕವಾಗಿ ಬೆಳೆಯಿತು ಎಂದರು. ಇದೇ ಸಂದರ್ಭದಲ್ಲಿ ಸಚಿವೆ ಉಮಾಶ್ರೀ ಅವರು ದೃಶ್ಯ ಕಣ ಪ್ರಿಂಟಿಂಗ್ ಯುನಿಟ್‌ಗೆ ಚಾಲನೆ ನೀಡಿದರು.
ದೃಶ್ಯಕಣದಲ್ಲಿ ಏನೆಲ್ಲಾ ಇರಲಿದೆ?
ದೃಶ್ಯಕಣ (ಗ್ರಾಫಿಕ್ ಕಲಾ) ಕೇಂದ್ರದ ಕಟ್ಟಡವು ಒಟ್ಟಾರೆ 9846 ಚ.ಅಡಿ ವಿಸ್ತೀರ್ಣದಲ್ಲಿ ನಿರ್ಮಾಣವಾಗಲಿದೆ. ಕಟ್ಟಡದ ನೆಲಮಹಡಿಯ ವಿಸ್ತೀರ್ಣ 7371ಚ.ಅಡಿ ಇದ್ದು, ಇದರಲ್ಲಿ ನಾಲ್ಕು ಗ್ರಾಫಿಕ್ ಸ್ಟುಡಿಯೋಗಳನ್ನು ನಿರ್ಮಿಸಲಾಗುತ್ತಿದೆ. ಪ್ರತಿಯೊಂದು ಗ್ರಾಫಿಕ್ ಸ್ಟುಡಿಯೋದಲ್ಲಿಯೂ ಪಡಸಾಲೆ, ಉಗ್ರಾಣ, ಶೌಚಾಲಯ ಒಳಗೊಂಡಿರುತ್ತದೆ. ಅದಲ್ಲದೇ ಆಕರ್ಷಕ ಮಹಡಿ ನಿರ್ಮಾಣ ಮಾಡುತ್ತಿದ್ದು, 2475 ಚ.ಅಡಿ ಇರಲಿದೆ. ಟೆರೆಸ್ ರೂಫ್, ನಾಲ್ಕು ಕಾರಿಡಾರ್, ಉಗ್ರಾಣ ನಿರ್ಮಾಣ ಮಾಡಲಾಗುವುದು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.