ಮೊಬೈಲ್ ಮಾದಕ ವ್ಯಸನಕ್ಕಿಂತ ಕಡಿಮೆಯೇನಲ್ಲ: ಆಡಾಡುತ್ತಾ ಅಪಾಯ
Team Udayavani, Aug 2, 2017, 7:34 AM IST
ಯುವ ಜನಾಂಗವನ್ನು ಆಕರ್ಷಿಸಲೆಂದೇ ಆನ್‌ಲೈನ್‌ನಲ್ಲಿ ಕೆಲವು ಅಪಾಯಕಾರಿ ಆಟಗಳು ಸೃಷ್ಟಿಯಾಗಿವೆ. ಬ್ಲೂವೇಲ್ ಚಾಲೆಂಜ್ ಆಧುನಿಕ ಆವಿಷ್ಕಾರದ ಅಡ್ಡ ಪರಿಣಾಮಕ್ಕೊಂದು ಉದಾಹರಣೆ.
ಮುಂಬಯಿಯಲ್ಲಿ 14 ವರ್ಷದ ಬಾಲಕನೊಬ್ಬ ಸೋಮವಾರ ಏಳನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ಬ್ಲೂವೇಲ್ ಚಾಲೆಂಜ್ ಅಥವಾ ಬ್ಲೂವೇಲ್ ಗೇಮ್ ಎಂಬ ಮೊಬೈಲ್ ಮೂಲಕ ಆಡುವ ಆನ್‌ಲೈನ್ ಆಟ ಕಾರಣ ಎಂದು ತಿಳಿದು ಬಂದ ಬಳಿಕ ಪೋಷಕರು ಗಾಬರಿಯಾಗಿದ್ದಾರೆ. ಸ್ಮಾರ್ಟ್‌ಫೋನ್‌ಗಳು ಈಗ ಹೆಚ್ಚಿನೆಲ್ಲ ಮಕ್ಕಳ ಕೈಗಳಲ್ಲಿವೆ. ಇಂಟರ್‌ನೆಟ್ ಡಾಟಾ ಬಹಳ ಅಗ್ಗವಾದ ಬಳಿಕ ಸ್ಮಾರ್ಟ್‌ಫೋನ್ ಬಳಕೆದಾರರ ಸಂಖ್ಯೆಯೂ ತೀವ್ರವಾಗಿ ಹೆಚ್ಚುತ್ತಿದೆ. ಈ ಪರಿಸ್ಥಿತಿಯಲ್ಲಿ ಯಕಶ್ಚಿತ್ ಮೊಬೈಲ್ ಆಟವೊಂದು ಮಕ್ಕಳ ಪ್ರಾಣ ತೆಗೆಯಬಲ್ಲುದು ಎಂದರಿವಾದಾಗ ಪೋಷಕರು ಗಾಬರಿ ಆಗುವುದು ಸಹಜ. ಹದಿಹರೆಯದ ಮನಸ್ಸುಗಳು ಕೆಟ್ಟದ್ದರತ್ತ ಹೆಚ್ಚು ಆಕರ್ಷಿತವಾಗುತ್ತವೆ ಮತ್ತು ಕೆಟ್ಟದ್ದನ್ನೇ ಹೆಚ್ಚು ಸ್ವೀಕರಿಸುತ್ತವೆ. ಇಂತಹ ವರನ್ನು ಆಕರ್ಷಿಸಲೆಂದೇ ಆನ್‌ಲೈನ್‌ನಲ್ಲಿ ಕೆಲವು ಅಪಾಯಕಾರಿ ಆಟಗಳು ಸೃಷ್ಟಿಯಾಗಿವೆ. ಬ್ಲೂವೇಲ್ ಚಾಲೆಂಜ್ ಈ ಪೈಕಿ ಒಂದು. ಇದು ಆಧುನಿಕ ಆವಿಷ್ಕಾರದ ಅಡ್ಡ ಪರಿಣಾಮಕ್ಕೊಂದು ಉದಾಹರಣೆ.
ಬ್ಲೂವೇಲ್ ಚಾಲೆಂಜ್ ಮಾದರಿಯಲ್ಲೇ ಕಳೆದ ವರ್ಷ ಪೋಕೆಮೋನ್ ಗೋ ಎಂಬ ಆನ್‌ಲೈನ್ ಆಟ ಭಾರೀ ಸುದ್ದಿ ಮಾಡಿತ್ತು. ಪೋಕೆಮೋನ್ ಗೋ ಆಡುವ ದೇಶಗಳಲ್ಲಿ ಭಾರತ 4ನೇ ಸ್ಥಾನದಲ್ಲಿತ್ತು. ಈ ಆಟ ಮಾಡಿರುವ ಅನಾಹುತಗಳು ಒಂದೆರಡಲ್ಲ. ಅಮೆರಿಕದಲ್ಲಿ ಬರೀ 10 ದಿನದಲ್ಲಿ ಪೋಕೆಮೋನ್ ಗೋ ಆಟದಿಂದಾಗಿ 1.10ಲಕ್ಷಕ್ಕೂ ಅಧಿಕ ಅಪಘಾತಗಳು ಸಂಭವಿಸಿವೆ. ಹಲವು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಕ್ಯಾಲಿಫೋರ್ನಿಯಾದಲ್ಲಿ ಇಬ್ಬರು ಯುವಕರು ಪೋಕೆಮೋನ್ ಗೋ ಆಡುತ್ತಾ ಸಮುದ್ರದೊಳಗೆ ಪ್ರವೇಶಿಸಿದ್ದರು. ಓಹಿಯೊದಲ್ಲಿ ತರುಣರ ಗುಂಪೊಂದು ಪೋಕೆಮೋನ್ ಗೋ ನೀಡಿದ ಚಾಲೆಂಜ್ ಹುಡುಕುತ್ತಾ ಅಣು ಸ್ಥಾವರದೊಳಗೆ ಅಕ್ರಮ ಪ್ರವೇಶ ಮಾಡಿದ್ದರು. ಹಲವು ದೇಶಗಳಲ್ಲಿ ಪೋಕೆಮೋನ್ ಗೋ ವಿರುದ್ಧ ಪ್ರತಿಭಟನೆ ನಡೆದಿತ್ತು. ಮುಂಬಯಿಯಲ್ಲೂ ಆಟ ಸುದ್ದಿ ಮಾಡಿತ್ತು. ವ್ಯಕ್ತಿಯೊಬ್ಬ ಪೋಕೆಮೋನ್ ಗೋ ಆಡುತ್ತಾ ತನ್ನ ದುಬಾರಿ ಕಾರನ್ನು ದಿಢೀರ್ ರಸ್ತೆ ಮಧ್ಯೆ ನಿಲ್ಲಿಸಿದಾಗ ಹಿಂಬದಿಯಿಂದ ರಿಕ್ಷಾ ಢಿಕ್ಕಿ ಹೊಡೆದಿತ್ತು. ಇದು ಭಾರತದಲ್ಲಿ ಪೋಕೆಮೋನ್ ಗೋ ಆಟದಿಂದಾಗಿ ಸಂಭವಿಸಿದ ಮೊದಲ ಅವಘಡ. ಅನಂತರ ಹಲವು ಸಲ ಟ್ರಾಫಿಕ್ ಜಾಮ್‌ನಂತಹ ಸಮಸ್ಯೆಗಳು ಕಾಣಿಸಿಕೊಂಡ ಬಳಿಕ ಪೊಲೀಸರು ಎಚ್ಚರಿಕೆ ನೀಡಬೇಕಾಯಿತು. ಪೋಕೆಮೋನ್ ಗೋ ಕ್ರೇಜ್ ಕಡಿಮೆಯಾಗುತ್ತಾ ಬಂದಂತೆ ಇದೀಗ ಹೋದೆಯಾ ಪಿಶಾಚಿ ಎಂದರೆ ಬಂದೆ ಕಿಟಿಕಿಯಲ್ಲಿ ಎಂಬಂತೆ ಅದಕ್ಕಿಂತಲೂ ಅಪಾಯಕಾರಿಯಾದ ಬ್ಲೂವೇಲ್ ಚಾಲೆಂಜ್ ಕಾಣಿಸಿಕೊಂಡಿದೆ. ಬ್ಲೂವೇಲ್ ಚಾಲೆಂಜ್ ರಶ್ಯಾದಲ್ಲಿ ಹುಟ್ಟಿಕೊಂಡ ಪ್ರಾಣ ತೆಗೆಯುವ ಆಟ. ನಾಲ್ಕು ವರ್ಷಗಳ ಹಿಂದೆಯೇ ಈ ಆಟ ಶುರುವಾಗಿದ್ದರೂ ಜನಪ್ರಿಯವಾಗಿರುವುದು ಇತ್ತೀಚೆಗಿನ ಕೆಲ ತಿಂಗಳುಗಳಲ್ಲಿ. ರಶ್ಯಾವೊಂದರಲ್ಲೇ ನೂರಕ್ಕೂ ಹೆಚ್ಚು ಯುವಕರು ಈ ಆಟಕ್ಕೆ ಬಲಿಯಾಗಿದ್ದಾರೆ. ಜಗತ್ತಿನಾದ್ಯಂತ ಸುಮಾರು 300 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಂಕಿಅಂಶಗಳು ತಿಳಿಸುತ್ತಿವೆ. 50 ದಿನಗಳ ಆಟದಲ್ಲಿ ಕಡೆಯ ದಿನ ಆತ್ಮಹತ್ಯೆ ಮಾಡಿಕೊಳ್ಳುವ ಟಾಸ್ಕ್ ಇರುತ್ತದೆ. ಆಟ ಎಷ್ಟು ಗಾಢವಾಗಿ ಯುವ ಮನಸ್ಸುಗಳನ್ನು ಪ್ರಭಾವಿಸುತ್ತದೆ ಎಂದರೆ ಸಮ್ಮೊಹಿನಿಗೆ ಒಳಗಾದವರಂತೆ ಅವರು ಟಾಸ್ಕ್ಗಳನ್ನು ಮಾಡುತ್ತಾ ಹೋಗುತ್ತಾರೆ. ಆಟ ಶುರು ಮಾಡಿದವನನ್ನು ರಶ್ಯಾ ಪೊಲೀಸರು ಹಿಡಿದು ಜೈಲಿಗಟ್ಟಿದ್ದಾರೆ. ಆದರೆ ಆಟವಿನ್ನೂ ಅಂತರ್ಜಾಲದಲ್ಲಿ ಯುವಕರನ್ನು ಸಾವಿನತ್ತ ಆಹ್ವಾನಿಸುತ್ತಿದೆ.
ಇಂತಹ ಆಟಗಳನ್ನು ಸೃಷ್ಟಿಸುವುದರ ಹಿಂದೆ ವಿಕೃತ ಆನಂದ ಪಡೆಯುವ ವಿಲಕ್ಷಣ ಮನಃಸ್ಥಿತಿಯಲ್ಲದೆ ಬೇರೇನೂ ಇಲ್ಲ. ಇಂದು ಮುಂಬಯಿಗೆ ಬಂದ ಆಟ ನಾಳೆ ನಮ್ಮ ಮನೆಗೂ ಬರಬಹುದು. ಪೋಷಕರು ತಮ್ಮ ಮಕ್ಕಳ ಆನ್‌ಲೈನ್ ಚಟುವಟಿಕೆಗಳ ಮೇಲೆ ಸೂಕ್ಷ್ಮ ಗಮನ ಇರಿಸಿ ಇಂತಹ ಆಟಗಳ ಪ್ರಲೋಭನೆಗೆ ಬಲಿ ಬೀಳದಂತೆ ನೋಡಿಕೊಳ್ಳುವುದೊಂದೇ ದಾರಿ. ಯುವ ಜನತೆ ಹಾದಿ ತಪ್ಪದಂತೆ ನೋಡಿಕೊಳ್ಳುವ ಹೊಣೆ ಸರಕಾರ ಅಥವಾ ಸೈಬರ್ ಕ್ರೈಮ್‌ನಂತಹ ಇಲಾಖೆಗಳ ಮೇಲೂ ಇದೆ.