ಕಾದುನೋಡಬೇಕಿದೆ ಪರಿಣಾಮ ಐಟಿಯ ಭಾರೀ ಬೇಟೆ
Team Udayavani, Aug 3, 2017, 7:42 AM IST
ಅಪನಗದೀಕರಣದ ಬಳಿಕ ಐಟಿ ಇಲಾಖೆ ಅತಿ ಹೆಚ್ಚು ಕ್ರಿಯಾಶೀಲವಾಗಿದೆ. ಕರ್ನಾಟಕದಲ್ಲೇ ಹಲವು ದಾಳಿಗಳಾಗಿವೆ. ವಿಪಕ್ಷ ಸರಕಾರಗಳು ಇರುವ ರಾಜ್ಯಗಳಲ್ಲಿ ಐಟಿ ದಾಳಿಗಳು ಹೆಚ್ಚಿಗೆ ನಡೆಯುತ್ತಿವೆ ಎನ್ನುವ ಆರೋಪದಲ್ಲಿ ಮಾತ್ರ ಹುರುಳಿದೆ.
ದೇಶದ ಸಿರಿವಂತ ರಾಜಕೀಯ ಮುಖಂಡರಲ್ಲಿ ಒಬ್ಬರಾಗಿರುವ ಕಾಂಗ್ರೆಸಿಗ, ರಾಜ್ಯ ವಿದ್ಯುತ್ ಸಚಿವ ಡಿ.ಕೆ. ಶಿವಕುಮಾರ್ ಮೇಲೆ ನಡೆದಿರುವ ಐಟಿ ದಾಳಿ ಇಡೀ ದೇಶದಲ್ಲಿ ಸಂಚಲನವುಂಟು ಮಾಡಿದೆ. ಅದರಲ್ಲೂ ಕಾಂಗ್ರೆಸ್ ಪಕ್ಷವನ್ನು ಸಂಪೂರ್ಣ ವಿಹ್ವಲಗೊಳಿಸಿದೆ. ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿಯಿರುವಾಗ ಐಟಿ ಇಲಾಖೆಯಿಂದ ನಡೆದಿರುವ ಭಾರೀ ದಾಳಿ ಇದು. ಹೀಗಾಗಿ ಕಾಂಗ್ರೆಸ್ ನಾಯಕರೆಲ್ಲ ಆಘಾತಗೊಂಡಿದ್ದಾರೆ. ದಿಲ್ಲಿಯೂ ಸೇರಿದಂತೆ ಡಿಕೆಶಿಗೆ ಸಂಬಂಧಪಟ್ಟ 39 ಸ್ಥಳಗಳ ಮೇಲೆ ದಾಳಿಯಾಗಿದೆ. ಸಹೋದರ, ಆಪ್ತರು, ಜ್ಯೋತಿಷಿ ಹೀಗೆ ಯಾರನ್ನೂ ಬಿಟ್ಟಿಲ್ಲ. ಮೂಟೆಗಟ್ಟಲೆ ದಾಖಲೆಪತ್ರಗಳನ್ನು ಐಟಿ ಅಧಿಕಾರಿಗಳು ಹೊತ್ತುಕೊಂಡು ಹೋಗಿದ್ದಾರೆ. ಕೋಟಿಗಟ್ಟಲೆ ನಗದು ಹಣವೂ ಸಿಕ್ಕಿದೆ. ಎಲ್ಲ ಸಂದರ್ಭಗಳಂತೆ ಈಗಲೂ ಕಾಂಗ್ರೆಸ್ ಸೇರಿದಂತೆ ವಿಪಕ್ಷ ನಾಯಕರೆಲ್ಲ ಇದು ಸೇಡಿನ ದಾಳಿ ಎಂದು ಆರೋಪಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯನ್ನು ಭಸ್ಮಾಸುರ, ಹಿಟ್ಲರ್ ಎಂಬಿತ್ಯಾದಿ ವಿಶೇಷಣಗಳಿಂದ ದೂಷಿಸಿದ್ದಾರೆ. ಸಂಸತ್ತಿನಲ್ಲೂ ಐಟಿ ದಾಳಿ ಪ್ರತಿಧ್ವನಿಸಿ ವಿಪಕ್ಷ ಸದಸ್ಯರು ಪ್ರತಿಭಟಿಸಿದ್ದಾರೆ. ಸರಕಾರ ಐಟಿ, ಸಿಬಿಐ ಮತ್ತಿತರ ಸಂಸ್ಥೆಗಳನ್ನು ವಿರೋಧಿಗಳನ್ನು ಹಣಿಯಲು ದುರುಪಯೋಗಪಡಿಸಿಕೊಳ್ಳುತ್ತಿದೆ, ವಿರೋಧಿ
ಧ್ವನಿಯನ್ನು ದಮನಿಸುವ ಸಲುವಾಗಿ ಸರಕಾರಿ ಯಂತ್ರಗಳು ದುರ್ಬಳಕೆಯಾಗುತ್ತಿವೆ ಎಂಬ ಸಾಮಾನ್ಯ ಆರೋಪವನ್ನು ಮಾಡಿವೆ.
ಕರ್ನಾಟಕ ಕಾಂಗ್ರೆಸ್‌ನಲ್ಲಿ ಉಳಿದೆಲ್ಲ ನಾಯಕರದ್ದು ಒಂದು ತೂಕವಾದರೆ ವಿದ್ಯುತ್ ಸಚಿವ ಡಿ.ಕೆ. ಶಿವಕುಮಾರ್ ಅವರದ್ದು ಇನ್ನೊಂದು ತೂಕ. ಅವರು ಮುಖ್ಯಮಂತ್ರಿಯಲ್ಲದಿದ್ದರೂ ಮುಖ್ಯಮಂತ್ರಿಗಳಿಗಿಂತಲೂ ಪವರ್‌ಫುಲ್, ಕೆಪಿಸಿಸಿ ಅಧ್ಯಕ್ಷರಲ್ಲದಿದ್ದರೂ ಅವರಿಗಿಂತಲೂ ಪ್ರಬಲ ಅನ್ನಿಸಿಕೊಂಡಿದ್ದಾರೆ. ತನಗಿರುವ ಹೈಕಮಾಂಡ್ ಸಂಪರ್ಕದ ಮೂಲಕವೇ ತನ್ನ ಕೆಲಸ ಮಾಡಿಕೊಳ್ಳುವಷ್ಟು ಪ್ರಭಾವಿ ಎನಿಸಿಕೊಂಡಿರುವವರು. ಪ್ರಭಾವ, ಶ್ರೀಮಂತಿಕೆ, ಜಾತಿ ಬಲ, ರಾಜಕೀಯ ತಂತ್ರಗಾರಿಕೆ ಹೀಗೆ ಯಾವ ವಿಷಯದಲ್ಲೂ ಡಿಕೆಶಿಯನ್ನು ಸರಿಗಟ್ಟುವ ಇನ್ನೊಬ್ಬ ನಾಯಕ ಕಾಂಗ್ರೆಸ್‌ನಲ್ಲಿಲ್ಲ.
ಡಿಕೆಶಿ ಮೇಲಾಗಿರುವ ದಾಳಿ ನ್ಯಾಯಬದ್ಧವಾಗಿದೆಯೇ ಅಥವಾ ವಿಪಕ್ಷಗಳು ಆರೋಪಿಸಿರುವಂತೆ ಸೇಡಿನ ಕ್ರಮವೇ ಎನ್ನುವುದು ಮುಂದಿನ ತನಿಖೆಯಿಂದ ಸ್ಪಷ್ಟವಾಗಲಿದೆ. ಡಿಕೆಶಿ ಎಂದಲ್ಲ, ಮೋದಿ ಸರಕಾರ ಬಂದ ಬಳಿಕ ಐಟಿ ಇಲಾಖೆ ನೂರಾರು ದಾಳಿಗಳನ್ನು ಮಾಡಿದೆ. ಇದರಲ್ಲಿ ರಾಜಕಾರಣಿಗಳು, ಉದ್ಯಮಿಗಳು, ಸರಕಾರಿ ಅಧಿಕಾರಿಗಳು ಸೇರಿದ್ದಾರೆ. ಕಳೆದ ಮೂರು ವರ್ಷದಲ್ಲಿ 1000ಕ್ಕೂ ಹೆಚ್ಚು ದಾಳಿಗಳನ್ನು ಐಟಿ ಇಲಾಖೆ ನಡೆಸಿದೆ. ಅದರಲ್ಲೂ ನೋಟು ಅಪನಗದೀಕರಣದ ಬಳಿಕ ಐಟಿ ಇಲಾಖೆ ಅತಿ ಹೆಚ್ಚು ಕ್ರಿಯಾಶೀಲವಾಗಿದೆ. ಕರ್ನಾಟಕದಲ್ಲೇ ಹಲವು ದಾಳಿಗಳಾಗಿವೆ. ವಿಪಕ್ಷ ಸರಕಾರಗಳು ಇರುವ ರಾಜ್ಯಗಳಲ್ಲಿ ಐಟಿ ದಾಳಿಗಳು ಹೆಚ್ಚಿಗೆ ನಡೆಯುತ್ತಿವೆ ಎನ್ನುವ ಆರೋಪದಲ್ಲಿ ಮಾತ್ರ ಹುರುಳಿದೆ.
ಪ್ರಸ್ತುತ ನಡೆದಿರುವ ದಾಳಿ ಇಷ್ಟೊಂದು ಸುದ್ದಿಯಾಗಲು ಮುಖ್ಯ ಕಾರಣ ಅದು ನಡೆದಿರುವ ಸಂದರ್ಭ. ಗುಜರಾತ್ ಶಾಸಕರಿಗೆ ಡಿಕೆಶಿ ಆಶ್ರಯ ನೀಡಿದ ಸಂದರ್ಭದಲ್ಲೇ ದಾಳಿ ನಡೆದಿರುವುದರಿಂದ ಇದರಲ್ಲಿ ಭ್ರಷ್ಟಾಚಾರ ನಿಗ್ರಹದ ಆಶಯಕ್ಕಿಂತಲೂ ರಾಜಕೀಯ ಸೇಡಿನ ಕ್ರಮವೇ ಢಾಳಾಗಿ ಕಾಣಿಸುತ್ತಿದೆ. ಒಂದು ವೇಳೆ ಇದುವೇ ಕೇಂದ್ರದ ಉದ್ದೇಶವಾಗಿದ್ದರೆ ಖಂಡಿತ ಇದು ಸಮ್ಮತವಲ್ಲ. ಆದರೆ ದಾಳಿಯ ವೇಳೆ ಸಿಕ್ಕಿರುವ ಹಣ ಮತ್ತು ದಾಖಲೆಗಳು ಹಾಗೂ ಐಟಿ ಅಧಿಕಾರಿಗಳ ಮುಂದೆಯೇ ಡಿಕೆಶಿ ದಾಖಲೆಗಳನ್ನು ನಾಶ ಮಾಡಲು ಮುಂದಾಗಿರುವುದನ್ನು ನೋಡಿದಾಗ ಅಕ್ರಮದ ವಾಸನೆ ಹೊಡೆಯುತ್ತದೆ. ಏನೇ ಆದರೂ ಕಾಂಗ್ರೆಸ್‌ನ ಹಣದ ಥೈಲಿ ಎಂದೇ ಭಾವಿಸಲ್ಪಡುತ್ತಿದ್ದ ದೊಡ್ಡ ಕುಳವೊಂದನ್ನು ಮುಟ್ಟುವ ದಿಟ್ಟತನವನ್ನು ಐಟಿ ಇಲಾಖೆ ತೋರಿಸಿದೆ. ಭ್ರಷ್ಟಾಚಾರ ನಿಗ್ರಹದ ಉದ್ದೇಶ ಇದರ ಹಿಂದಿದ್ದರೆ ಅದು ಸ್ವಾಗತಾರ್ಹ. ರಾಜಕೀಯವಾಗಿ ವಿಪಕ್ಷ ನಾಯಕರನ್ನು ಹಣಿಯುವುದಕ್ಕೆ ಸರಕಾರಿ ಯಂತ್ರವನ್ನು ಬಳಕೆ ಮಾಡಿಕೊಳ್ಳುವುದು ಮಾತ್ರ ಸಮ್ಮತವಲ್ಲ. ಈ ಭಾರೀ ದಾಳಿಯ ಪರಿಣಾಮವೇನಾಗುತ್ತದೆ ಎನ್ನುವುದನ್ನು ಕಾದುನೋಡಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.