ಕೌರವರ ಗರ್ವಭಂಗ
Team Udayavani, Aug 3, 2017, 11:07 AM IST
ಪಾಂಡವರು ಕಾಡಿನಲ್ಲಿ ವನವಾಸ ಮಾಡುತ್ತಿದ್ದಾಗ, ಅವರ ಮುಂದೆ ತಮ್ಮ ಹಿರಿಮೆಯನ್ನು ಪ್ರದರ್ಶಿಸಬೇಕೆಂದು ಕೌರವರಿಗೆ ಆಸೆಯಾಯಿತು. “ನಮ್ಮ ಆಸೆ ಫಲಿಸೋದಕ್ಕೆ ಏನು ಮಾಡೋಣ ಶಕುನಿ ಮಾವ’ ಎಂದು ಕೇಳಿದ ದುರ್ಯೋಧನ. “ನಮ್ಮ ಸೈನ್ಯವನ್ನೆಲ್ಲಾ ತೆಗೆದುಕೊಂಡು ಹೋಗಿ ಮೆರವಣಿಗೆ ಮಾಡಿಕೊಂಡು ಬರೋಣ. ಅದನ್ನು ಕಂಡು ಪಾಂಡವರು ಹೊಟ್ಟೆ ಉರಿದುಕೊಳ್ಳಲಿ’ ಎಂದ ಶಕುನಿ. ದುರ್ಯೋಧನನಿಗೆ ಆ ಸಲಹೆ ರುಚಿಸಿತು. ಅವನು ತನ್ನ ತಮ್ಮಂದಿರೊಡಗೂಡಿ ಅಶ್ವ, ಪದಾತಿಗಳ ಸೈನ್ಯವನ್ನೂ ರಥಗಳನ್ನೂ ತೆಗೆದುಕೊಂಡು ಹೊರಟ. ಅವರು ಹಾದುಹೋದ ಊರುಗಳಲ್ಲಿ ಜನರು ಸೈನ್ಯವನ್ನು ನೋಡಲು ಕಾತುರದಿಂದ ನೆರೆದರು. ಕಡೆಗೆ ದುರ್ಯೋಧನನ ಸೈನ್ಯ ಪಾಂಡವರಿದ್ದ ಕಾಡಿಗೆ ಬಂದಿತು. ಪ್ರಯಾಣದಿಂದ ಬಳಲಿ ನದಿ ತೀರದಲ್ಲಿ ಸೈನ್ಯ ಬೀಡುಬಿಟ್ಟಿತು.
ಸುಂದರವಾದ ನದಿಯನ್ನೂ ಹಸಿರು ತುಂಬಿದ ಗಿಡಮರಗಳನ್ನೂ ಕಂಡು ಪಾಂಡವರು ಎಂಥ ಒಳ್ಳೆಯ ಜಾಗದಲ್ಲಿದ್ದಾರೆಂದು ದುರ್ಯೋಧನನಿಗೆ ಅಸೂಯೆಯಾಯಿತು. ಆಗ ಶಕುನಿ ನುಡಿದ: “ದುರ್ಯೋಧನ, ಪಾಂಡವರು ಕುಡಿಯೋ ಈ ನದಿ ನೀರಿಗೆ ವಿಷ ಹಾಕಿಬಿಡೋಣ. ಅವರೆಲ್ಲಾ ನಿರ್ನಾಮವಾಗುತ್ತಾರೆ’. ದುರ್ಯೋಧನ ಅದಕ್ಕೆ ಸಮ್ಮತಿಸಿದ. ನಿರ್ಮಲವಾದ ನೀರಿಗೆ ಇನ್ನೇನು ವಿಷ ಸುರಿಯಬೇಕು ಎನ್ನುವಷ್ಟರಲ್ಲಿ ಚಿತ್ರಸೇನನೆಂಬ ಗಂಧರ್ವ ಅಲ್ಲಿಗೆ ಬಂದ. “ಯಾರದು, ನನ್ನ ಕಾಡಿನಲ್ಲಿ ಬೀಡು ಬಿಟ್ಟು ನನ್ನ ನದೀಲಿ ವಿಷ ಹಾಕುತ್ತಿರುವವರು?’ ಎಂದು ಚಿತ್ರಸೇನ ಅಬ್ಬರಿಸಿದ. ದುಯೊìಧನ ಅಹಂಕಾರದಿಂದ, “ಅದನ್ನು ಕೇಳ್ಳೋದಕ್ಕೆ ನೀನ್ಯಾರು? ನಾನು ಕೌರವರರಾಜ ದುರ್ಯೋಧನ ಅನ್ನೊದು ನಿಂಗೆ ಗೊತ್ತಿದ್ದ ಹಾಗೆ ಕಾಣೋದಿಲ್ಲ. ಸುಮ್ಮನೆ ಇಲ್ಲಿಂದ ಹೋಗು’ ಎಂದ. ಚಿತ್ರಸೇನ ನಕ್ಕು, “ನಾನು ಗಂಧರ್ವರಾಜ ಚಿತ್ರಸೇನ. ನಿನ್ನ ಪರಾಕ್ರಮ ಬಗ್ಗೆ ಅಷ್ಟೊಂದು ವಿಸ್ವಾಸವಿದ್ದರೆ ಬಾ ದುರ್ಯೋಧನ, ಯುದ್ಧ ಮಾಡಿಯೇ ಬಿಡೋಣ’ ಎಂದು ಪ್ರತಿಯಾಗಿ ಸವಾಲು ಹಾಕಿದ.
ಯುದ್ಧ ಆರಂಭವಾಯಿತು. ಘೋರವಾದ, ಭೀಕರವಾದ ಯುದ್ಧ. ಗಂಧರ್ವರ ಕೌರವರ ಸೇನೆಯನ್ನು ದಿಕ್ಕು ಪಾಲಾಗಿ ಓಡಿಸಿಬಿಟ್ಟರು. ಯುದ್ಧದಲ್ಲಿ ವಿಜಯಶಾಲಿಯಾದ ಚಿತ್ರಸೇನ ದುರ್ಯೋಧನ ಮತ್ತು ಅವನ ತಮ್ಮಂದಿರನ್ನು ಹೆಡೆಮುರಿ ಕಟ್ಟಿ ತನ್ನೂರಿಗೆ ಹೊತ್ತುಕೊಂಡು ಹೋದ. ಅವರಿಂದ ಸೇವಕರಂತೆ ಕೆಲಸ ಮಾಡಿಸಿಕೊಳ್ಳುವುದು ಚಿತ್ರಸೇನನ ಇಂಗಿತವಾಗಿತ್ತು. ಹಾಗೆ ಚಿತ್ರಸೇನ ಅವರನ್ನು ಎತ್ತಿಕೊಂಡು ಹೋಗುತ್ತಿದ್ದಾಗ ಕೌರವರು ತಪ್ಪಿಸಿಕೊಳ್ಳಲು ದಾರಿ ತೋರದೆ ಆರ್ತರಾಗಿ, “ಪಾಂಡವರೇ ನಮ್ಮನ್ನು ರಕ್ಷಿಸಿರಿ’ ಎಂದು ಕೂಗಲಾರಂಭಿಸಿದರು.
ಆ ಕೂಗು ಧರ್ಮರಾಯನ ಕಿವಿಗೆ ಬಿತ್ತು. ಅವನು ಭೀಮನನ್ನು ಕರೆದು, “ತಮ್ಮಾ, ಕೌರವರು ಸಹಾಯ ಬೇಡುತ್ತಿರೋ ಹಾಗಿದೆ. ಹೋಗಿ ಅವರಿಗೆ ಸಹಾಯ ಮಾಡು’ ಎಂದು ಆಜ್ಞಾಪಿಸಿದನು. ಭೀಮ ಸಿಟ್ಟಿನಿಂದ “ನಮ್ಮ ಶತ್ರುಗಳಿಗೆ ಸಹಾಯ ಮಾಡಬೇಕೆ? ನಮ್ಮನ್ನು ನಿರ್ನಾಮ ಮಾಡಲೆಂದು ನಾವು ಕುಡಿಯುವ ನೀರಿಗೇ ವಿಷ ಸುರಿಯಹೊರಟಿದ್ದವರನ್ನು ರಕ್ಷಿಸಬೇಕೆ? ಕೌರವರನ್ನು ಹೊತ್ತೂಯ್ದು ಆ ಗಂಧರ್ವ ಸರಿಯಾದ ಕೆಲಸವನ್ನೇ ಮಾಡುತ್ತಿದ್ದಾನೆ’ ಎಂದು ನುಡಿದ.
ಧರ್ಮರಾಯನು ಶಾಂತವಾಗಿ “ಭೀಮ, ಕೌರವರು ನಮ್ಮ ಶತ್ರುಗಳೇ ಇರಬಹುದು. ಆದ್ರೆ ಆರ್ತರನ್ನು ರಕ್ಷಿಸೋದು ಕ್ಷತ್ರಿಯ ಧರ್ಮ. ಹೋಗು ಅರ್ಜುನಾ, ನೀನಾದರೂ ಅವರನ್ನು ಬಿಡಿಸಿಕೊಂಡು ಬಾ’ ಎಂದು ಕೇಳಿಕೊಂಡ. ಅಣ್ಣನ ಆಜ್ಞೆಯನ್ನು ಮೀರಲಾಗದೆ ಅರ್ಜುನ ಹೊರಟ. ಇಷ್ಟವಿಲ್ಲದಿದ್ದರೂ ಭೀಮನೂ ಅವನನ್ನು ಅನುಸರಿಸಿದ. ಚಿತ್ರಸೇನ ಪಾಂಡವರ ಸ್ನೇತನಾದುದರಿಂದ ಧರ್ಮರಾಯನ ಅಪೇಕ್ಷೆಯನ್ನು ಮನ್ನಿಸಿದ. ಕೌರವರನ್ನು ಬಿಟ್ಟುಬಿಟ್ಟ. ಕೌರವರು ನಾಚಿಕೆಯಿಂದ ತಲೆತಗ್ಗಿಸಿ ಊರಿಗೆ ಹೋದರು. ಚಿತ್ರಸೇನ ಪಾಂಡವರ ದೊಡ್ಡತನವನ್ನು ಬಾಯಿತುಂಬಾ ಹೊಗಳಿದ.
ಹನುಮಂತ ಮ. ದೇಶಕುಲಕರ್ಣಿ, ಧಾರವಾಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Infosys ಪ್ರಶಸ್ತಿ 2024ಕ್ಕೆ ಕರ್ನಾಟಕದವರೂ ಸೇರಿ 6 ಸಾಧಕರ ಆಯ್ಕೆ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.